ಜಾಹಿರಾತು

ಮೂಲಸೌಕರ್ಯಗಳ (Infrastructure) ವಿಷಯದಲ್ಲಿ ಭಾರತ ಏಕೆ ಚೀನಾಕ್ಕಿಂತ ಹಿಂದುಳಿದಿದೆ? ಹಾಗಾದರೆ ಮುಂದೇನು?


ಹಿನ್ನೆಲೆ :

India-China-Fight

ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿದ ವರ್ಷದಲ್ಲಿ, ಚೀನಾ ಕಮ್ಯುನಿಸ್ಟ್ (Communist) ಗಣರಾಜ್ಯ ರಾಷ್ಟ್ರವಾಯಿತು.  ಚೀನಾ(China) ಮತ್ತು ಭಾರತ(India) ಎರಡೂ ದೇಶ ಪುನರ್ನಿರ್ಮಾಣವನ್ನು 1950 ರಲ್ಲಿ ಪ್ರಾರಂಭಿಸಿದವು, ಚೀನಾದ ಸಾರಥ್ಯವನ್ನು ಮಾವೋ ಜೆಡಾಂಗ್ (Mao Zedong) ವಹಿಸಿದರೆ, ಭಾರತದ ಸಾರಥ್ಯ ಪಂಡಿತ ಜವಹರಲಾಲ್ ನೆಹರು (Nehru) ವಹಿಸಿದರು.
Jawaharlal Nehru-1947-India
ಪಂಡಿತ ಜವಹರಲಾಲ್ ನೆಹರು

Mao Zedong-1949-China
ಮಾವೋ ಜೆಡಾಂಗ್

200 ವರ್ಷಗಳ ಆಂಗ್ಲರ ಶೋಷಣೆಯ ಹೊರತಾಗಿಯೂ, ಆ ಸಮಯದಲ್ಲಿ ಭಾರತವು ಏಷ್ಯಾದಲ್ಲಿ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿತ್ತು.  ಆಗ ಇನ್ನೂ ಚೀನಾ ವಿಶ್ವದಲ್ಲಿ ಪುಟಿದೇಳುವ ಪ್ರಯತ್ನ ಮಾಡುತ್ತಿತ್ತು. ಮಾವೋ ಜೆಡಾಂಗ್ ಮತ್ತು  ಪಂಡಿತ್ ನೆಹರೂ ನಡುವೆ ಈ ಬಗ್ಗೆ ಸ್ಪರ್ಧೆ ಏರ್ಪಟ್ಟಿತ್ತು. ನೆಹರೂ ಅವರನ್ನು ವಿದೇಶಿ ನಾಯಕರು ಬಲವಾದ ಪ್ರಜಾಪ್ರಭುತ್ವ ದಾರ್ಶನಿಕರೆಂದು (Democratic Visionary) ಪರಿಗಣಿಸಿದ್ದರು.
ಈಗಿನ ಸನ್ನಿವೇಶದಲ್ಲಿ, ಆರ್ಥಿಕತೆ, ಮಿಲಿಟರಿ ಶಕ್ತಿ, ತಾಂತ್ರಿಕ ಬೆಳವಣಿಗೆ ಮತ್ತು ಮಾಲಿನ್ಯ ನಿಯಂತ್ರಣಗಳ ವಿಷಯದಲ್ಲಿ ಚೀನಾ ಭಾರತಕ್ಕಿಂತಲೂ ಮುಂದಿದೆ.  ಚೀನಾ ಜಾಗತಿಕ ಮಹಾಶಕ್ತಿಯಾಗಲು ಶರವೇಗದಲ್ಲಿ ಮುನ್ನಡೆದಿದೆ, ಆದರೆ ಭಾರತವನ್ನು ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವೆಂದು ಪರಿಗಣಿಸಲಾಗುತ್ತಿದೆ.

ಚೀನಾದ ಆಟ:

ಸಿಲ್ಕ್ ರೂಟ್(Silk Route). ಆದಿ ಕಾಲದಲ್ಲಿ ಇದರಿಂದ ಮೇಲೆ ಬಂದಿದ್ದ ಚೀನಾ, ಅದನ್ನೇ ಬಂಡವಾಳ ಮಾಡಿಕೊಂಡು ಬೆಳೆಯಲು ನಿಂತಿತು. ಅದಕ್ಕಾಗಿ ಅದು ಮೊದಲು ಕಂಡುಕೊಂಡಂತಹ ಮಾರ್ಗ, ಮೂಲಸೌಕರ್ಯಗಳ ಬೆಳೆವಣಿಗೆ (Infrastructure Development).

ಎಲ್ಲಕ್ಕಿಂತ ಮುಖ್ಯವಾಗಿ, ಚೀನಾ ಬೃಹತ್  ಹೂಡಿಕೆಯನ್ನು ಮೂಲಸೌಕರ್ಯಗಳಲ್ಲಿ ಮಾಡಲು ಪ್ರಾರಂಭಿಸಿತು.  ಇದು ಒಂದು ನಿರ್ಣಾಯಕ ನೀತಿ ಕ್ರಮವಾಗಿದ್ದು, ಇದರಿಂದದಾಗಿ ಚೀನಾದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಆಯಿತು. ಚೀನಾದ ಆರ್ಥಿಕ ಸ್ಥಿತಿ ಮತ್ತು ಖರೀದಿ ಶಕ್ತಿಯನ್ನು ಹೆಚ್ಚಿಸಿತು. ಇದು ಕೈಗಾರಿಕಾ ಪ್ರಗತಿಯ ಅಗತ್ಯ ಅಂಶವಾಗಿತ್ತು. ಮತ್ತು ಕ್ರಾಂತಿಯ ಆಳವಾದ ಹೆಜ್ಜೆ ಆಗಿತ್ತು.

ಚೀನಾ ಮಹತ್ವದ ಮೂಲಸೌಕರ್ಯಗಳಲ್ಲಿ ಹೂಡಿಕೆಯನ್ನು ಈಗಲೂ ಮುಂದುವರಿಸಿದೆ.  ಅದರ ಒನ್ ಬೆಲ್ಟ್, ಒನ್ ರೋಡ್ (ಒಬಿಒಆರ್) ಎಂಬ ಯೋಜನೆ ಇದಕ್ಕೆ ಈಗಿನ ಜೀವಂತ ಸಾಕ್ಷಿ.

Chinas-One-Road-One-Belt-OBOR-Initiative
ಒನ್ ಬೆಲ್ಟ್, ಒನ್ ರೋಡ್ (ಒಬಿಒಆರ್) ಯೋಜನೆ

ಭಾರತೀಯರು ಅಥವಾ ಅಮೆರಿಕನ್ನರು ಹೂಡಿಕೆ ಮಾಡಲು, ಸಾಮಾನ್ಯವಾಗಿ ಖಾಸಗಿ ಕಂಪನಿಗಳ ಅಥವಾ ಖಾಸಗಿ ನಿಧಿಗಳ ಬಳಕೆ ಮಾಡುತ್ತಾರೆ. ಇದರಲ್ಲಿ ಸರ್ಕಾರಗಳ ಸೀಮಿತ ಪಾತ್ರವಿರುತ್ತದೆ. ಆದರೆ ಚೀನಾದಲ್ಲಿ ಹಾಗಲ್ಲ. ಏನೇ ಇದ್ದರೂ ಸರ್ಕಾರ ನಡೆಸುತ್ತದೆ.

 ಚೀನಾದ ಆರ್ಥಿಕತೆಯು ಮೂಲಸೌಕರ್ಯಗಳಲ್ಲಿ, ಹೂಡಿಕೆಯಲ್ಲಿ ಮತ್ತು ಉತ್ಪಾದನೆಯ ಮೇಲೆ ಆಧರಿಸಿದೆ, ಆದರೆ ಭಾರತವು ಈ ಮೂರು ಕ್ಷೇತ್ರಗಳಲ್ಲಿ  ಈಗಿನ್ನು ಅಂಬೆಗಾಲು ಇಟ್ಟಿದೆ.(ಚೀನಾಗೆ ಹೋಲಿಸಿದಾಗ).

ಚೀನಾ ವಿಶ್ವದ ಅತಿ ಹೆಚ್ಚು ಹೂಡಿಕೆಗೆ(Invested) ಒಳಪಟ್ಟ ರಾಷ್ಟ್ರಗಳಲ್ಲಿ ಒಂದಾಗಿದೆ. ಅದರ ಸರ್ಕಾರ ನೀಡುವ ಉತ್ತೇಜನವೇ ಇದಕ್ಕೆ ಪ್ಲಸ್ ಪಾಯಿಂಟ್.  ಇದರ ಪರಿಣಾಮವಾಗಿ, ಹೊಸ ನಗರಗಳು, ಹೈಸ್ಪೀಡ್ ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ನಿರ್ಮಾಣಗೊಂಡವು. ಜೊತೆಗೆ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುವಂತಹ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ಕಳೆದ ಎರಡು ದಶಕಗಳಿಂದ ಚೀನಾ ಜಾಗತಿಕ ಉತ್ಪಾದನೆಯಾಗಿ ಕಾರ್ಯನಿರ್ವಹಿಸುತ್ತಿದೆ.  ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಉತ್ಪಾದನೆಯು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳೆಯುತ್ತಿರುವ ಅದರ ಸಾಮರ್ಥ್ಯವು, ಪವಾಡದಂತೆ ಹುಟ್ಟಿದ ಪ್ರಮುಖ ಅಂಶವನ್ನು ಎತ್ತಿ ಹಿಡಿಯುತ್ತದೆ.

ಭಾರತ ಸಾಕಷ್ಟು ಬೆಳವಣಿಗೆ ಕಂಡಿದ್ದು ಐಟಿಯಲ್ಲಿ. ದೈತ್ಯ ರಾಷ್ಟಗಳ ದೈತ್ಯ ಡೇಟಾಗಳನ್ನು ಭಾರತ ಚಿಟಿಕೆಯಲ್ಲಿ ವ್ಯವಹರಿಸಿ ಕೊಡುತ್ತಿತ್ತು. ಇದಕ್ಕೆ ಬೇಕಾದ ತಂತ್ರಜ್ಞಾನ ಕೇವಲ ಭಾರತದ ಬಳಿ ಇತ್ತು. " ಕ್ಲೌಡ್ (Cloud) " ಎಂಬ ತಂತ್ರಜ್ಞಾನ ಬರುವ ಮುಂಚೆ , ಅದರ ಕೆಲಸವನ್ನು ಭಾರತ ಮಾಡಿ ಕೊಡುತ್ತಿತ್ತು. ಇದರಿಂದಾಗಿ ಕೇವಲ ಈ ವಲಯವನ್ನು ಸರ್ಕಾರ ಹೆಚ್ಚು ಬೆಳೆಸಿತು. ಇದಕ್ಕೆ ಬೇಕಾದ ಸೌಕರ್ಯಗಳು ಕಡಿಮೆ ಇದ್ದಿದ್ದರಿಂದ, ಕೇವಲ ಅದನ್ನಷ್ಟೇ ಬೆಳೆಸಿ ಸುಮ್ಮನಾಯಿತು. ಇದು ಮೊದಲ ಪೆಟ್ಟು.

ಇದರಿಂದಾಗಿ ಮೂಲಸೌಕರ್ಯಗಳಲ್ಲಿ, ಹೂಡಿಕೆಯಲ್ಲಿ  ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಚೀನಾಗಿಂತ ಹಿಂದೆ ಉಳಿಯಿತು.
ಪಾಶ್ಚಿಮಾತ್ಯ ಪ್ರಪಂಚದಲ್ಲಿ, ಚೀನಾ ಅತ್ಯುತ್ತಮ ಭೌತಿಕ ಮೂಲಸೌಕರ್ಯವನ್ನು ಹೊಂದಿದೆ. ಇದರಿಂದ ಭಾರತವು ಬಡ ದೇಶವೆಂದು ತೋರಲು ಪ್ರಾರಂಭವಾಯ್ತು.
GDP-Ranking-2020-21
ಜಿಡಿಪಿ ಶ್ರೇಯಾಂಕ-2020-21

ಹಾಗೆ ನೋಡಿದರೆ ಭಾರತವೇನೂ ಕಮ್ಮಿ ಇಲ್ಲ. ಆದರೆ ಕೆಲವೊಂದು ನ್ಯೂನತೆಗಳು ಅಡ್ಡಗೋಡೆಗಳಾಗಿ ನಿಂತಿವೆ. ಭಾರತೀಯ ಮೂಲಸೌಕರ್ಯವು ಚೀನಿಯರಂತೆ ಉತ್ತಮವಾಗಿರದಕ್ಕೆ ಕೆಲವು ಕಾರಣಗಳು:

ಭ್ರಷ್ಟಾಚಾರ :

ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವು ಮೂಲಸೌಕರ್ಯಗಳ ಅಭಿವೃದ್ಧಿಗೆ ಮತ್ತು ಸಣ್ಣ-ಪ್ರಮಾಣದ ಉದ್ಯಮಗಳ ಉತ್ತೇಜನಕ್ಕೆ ಬಹು ದೊಡ್ಡ ಅಡ್ಡಗಲ್ಲಾಗಿದೆ.ಇದು ಯೋಜನೆಗಳ ಎಲ್ಲಾ ಹಂತಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದೆ, ದೇಶದ ಅರ್ಥ ವ್ಯವಸ್ಥೆಯಲ್ಲಿ ಬಹಳ ಘಾಡವಾಗಿ ಬೇರೂರಿದೆ.ಯೋಜನೆಗಳು ದೊಡ್ಡದಾದಷ್ಟೂ ಲಂಚತನ ಹೆಚ್ಚಾಗತೊಡಗಿದೆ. ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 94 ನೇ ಸ್ಥಾನದಲ್ಲಿದ್ದರೆ, ಚೀನಾ 80 ನೇ ಸ್ಥಾನದಲ್ಲಿದೆ. ಆದರೆ, ಈಗೀಗ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ, ಭಾರತದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ.

ಆಡಳಿತದ ದೂರ ದೃಷ್ಟಿ ಕೋನ :

ಚೀನಾದ ಆರ್ಥಿಕತೆಯು ಬೆಳೆಯಲು ಪ್ರಾರಂಭವಾಗಿದ್ದು 1978 ರ ಸುಧಾರಣೆಗಳ ಮೂಲಕ. ಆದರೆ ಭಾರತೀಯ ಆರ್ಥಿಕ ಸುಧಾರಣೆಗಳು ಪ್ರಾರಂಭವಾಗಿದ್ದು 1991 ರಲ್ಲಿ.  ಇದರ ಪರಿಣಾಮವಾಗಿ, ಚೀನಾವು ಭಾರತದ ಆರ್ಥಿಕತೆಗಿಂತ 13 ವರ್ಷಗಳ ಪ್ರಾಬಲ್ಯವನ್ನು ಹೊಂದಿದೆ.

ಮಂದಗತಿಯ ಮನಸ್ಥಿತಿ:

ಭಾರತೀಯ ಆಡಳಿತದಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ, ಕಾಗದ ಪತ್ರಗಳ ಮೇಲೆ ಅತಿರೇಕದ ಅವಲಂಬನೆ ಇದೆ. ಅಧಿಕಾರಶಾಹಿಗಳು ನುರಿತವರಾಗಿದ್ದರೂ, ಇಂಥತಹ ವ್ಯವಸ್ಥೆಯಿಂದಾಗಿ ನಿಧಾನವಾಗಿ ಕಾರ್ಯನಿರ್ವಹಿಸುವಂತೆ ಆಗಿದೆ. ಅದೇ ತೆರನಾಗಿ ಅಧಿಕಾರವನ್ನು ಅನೇಕ ಹಂತಗಳಲ್ಲಿ ದುರುಪಯೋಗಪಡಿಸಿಕೊಳ್ಳಲು ವೇದಿಕೆ ಸೃಷ್ಟಿಯಾಗಿದೆ. ಪ್ರಸ್ತುತ ಭಾರತ ಸರ್ಕಾರವು ಅನಗತ್ಯ ಕಾಗದದ ಕೆಲಸವನ್ನು ತಗೆದು ಹಾಕಲು ಪಣ ತೊಟ್ಟಿದೆ. ಇಂತಹ ಒಂದು ನಿಟ್ಟಿನಿಂದ ಹಲವು ಕಡೆ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ.

ಪ್ರಜಾಪ್ರಭುತ್ವವೂ ಕಾರಣವಾದೀತೇ ?

ಚೀನಾ ಭಾರತದಂತಹ ಪ್ರಜಾಪ್ರಭುತ್ವವಲ್ಲದ ದೇಶ. ಅದು ತನ್ನಿಷ್ಟ ಬಂದಂತೆ ಕಾನೂನು ರಚಿಸಬಹುದು. ಆದರೆ ಭಾರತ ಹಾಗಲ್ಲ. ಭಾರತ ಸರ್ಕಾರವು ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಮೂಲಸೌಕರ್ಯಗಳ ನಿರ್ಮಾಣದ ಆರಂಭಿಕ ಹೆಜ್ಜೆಯಾಗಿರುವ ಭೂಸ್ವಾಧೀನವು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಸಾಧ್ಯವಾದ ಕೆಲಸವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತವೆ, ಇದನ್ನೇ ಬಂಡವಾಳ ಮಾಡಿಕೊಂಡು, ಮತದಾರರ ಮನ ಗೆಲ್ಲಲು, ಲಾಭವನ್ನು ಪಡೆಯಲು ರಾಜಕಾರಣಿಗಳು ಬೆಂಬಲ ಸಹ ನೀಡುತ್ತಾರೆ. ಇಂತಹ ಅನೇಕ ಕಾರಣಗಳಿಂದ, ಅನಿಶ್ಚಿತತೆಯಿಂದಾಗಿ, ಬಹುಕೋಟಿ ಡಾಲರ್ ಯೋಜನೆಗಳು ಅಪಾಯದಲ್ಲಿದೆ.

ಒಗ್ಗಟ್ಟಿನ ಕೊರತೆ : 

ಸರ್ಕಾರಿ ಸಂಸ್ಥೆಗಳಲ್ಲಿ ಸಮನ್ವಯದ ಕೊರತೆ ಇದೆ. ಹಲವು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದಂತೆಯೇ, ಪರಿಸರ ಸಚಿವಾಲಯವು ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತದೆ. ನಿರ್ಮಾಣಕ್ಕೆ ಬೇಕಾದ ಅಗತ್ಯ ಅನುಮತಿಗಳನ್ನು ಪಡೆಯಲಾಗಿಲ್ಲ ಎಂದು ಕುಂಟು ನೆಪ ಹೇಳುತ್ತದೆ. 
ದೊಡ್ಡ ಪ್ರಶ್ನೆ ಏನೆಂದರೆ, ಈ ಸೌಕರ್ಯಗಳು ನಿರ್ಮಾಣವಾಗುವ ಮುಂಚೆಯೇ ಯಾಕೆ ನಿರ್ಣಯವನ್ನು ಹೇಳಿ, ಆಕ್ಷೇಪಣೆ ವ್ಯಕ್ತ ಪಡಿಸಲ್ಲ? ಎಂಬುದು. ಸರ್ಕಾರದ ಸಚಿವಾಲಯಗಳ ನಡುವೆಯೇ ಸಮನ್ವಯ ಇಲ್ಲದಿದ್ದಾಗ, ಪ್ರಗತಿಯ ನಿರೀಕ್ಷೆ ಮಾಡುವುದು ಹುಚ್ಚರಾಟವೇ ಸರಿ. ಇಂತಹ ಕ್ಷುಲ್ಲಕ ಕಾರಣಗಳಿಂದ ಯೋಜನೆಯ ವಿಳಂಬಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಸಮಯ, ಇದರ ಹಿಂದೆ ಭ್ರಷ್ಟಾಚಾರವೇ ಕಾರಣವಾಗಿರುವುದು ಸಹ ಕಟು ಸತ್ಯ. 

ಯೋಜನಾ ಶೀಲತೆಯ ಅಗತ್ಯತೆ :

ನೋಯ್ಡಾ, ಗ್ರೇಟರ್ ನೋಯ್ಡಾ, ಗಾಂಧಿನಗರ, ಚಂಡೀಗಢ, ನವೀ ಮುಂಬೈ ಮತ್ತು ಇತರ ಕೆಲವು ಭಾರತೀಯ ಪಟ್ಟಣಗಳನ್ನು ಯೋಜಿಸಲಾಗಿದ್ದರೂ, ಹೆಚ್ಚಿನ ಭಾರತೀಯ ನಗರಗಳು ಯೋಜಿತವಲ್ಲದಾಗಿದ್ದು, ಜನನಿಬಿಡ ಮತ್ತು ಜನದಟ್ಟಣೆಯಿಂದ ಕೂಡಿವೆ. ಕೆಲವು ನಗರಗಳು ಬಹಳ ಹಳೆಯದ್ದಾಗಿವೆ ಮತ್ತು ಸರಿಯಾದ ಯೋಜನೆಗಳಿಲ್ಲದೆ ನಿರ್ಮಿಸಲ್ಪಟ್ಟಿವೆ. ಇದರಿಂದಾಗಿ ಯಾವುದೇ ರೀತಿಯ ಮೂಲಸೌಕರ್ಯ ನವೀಕರಣವನ್ನು ಕೈಗೊಳ್ಳಲು ಅಸಾಧ್ಯವಾಗುತ್ತದೆ.

ಮೆಟ್ರೋ ನಗರಗಳ  ಮೇಲಿನ ಏಕಚಿತ್ತ :

ಭಾರತದಲ್ಲಿರುವ ಆರ್ಥಿಕ ಕೇಂದ್ರಗಳೆಂದರೆ  ದೆಹಲಿ ಮತ್ತು ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ), ಮುಂಬೈ, ಬೆಂಗಳೂರು, ಕೋಲ್ಕತಾ, ಚೆನ್ನೈ, ಮತ್ತು ಹೈದರಾಬಾದ್‌ನಂತಹ ಕೆಲವು ನಗರಗಳು. ಇದು ನಿಜವೆಂಬಂತೆ ಹಲವಾರು ಯೋಜನೆಗಳು ಇಂತಹ ನಗರಗಳಿಗಷ್ಟೇ ಸೀಮಿತವಾಗಿವೆ. ಇದರಿಂದಾಗಿ ಕೆಲಸದ ಅನ್ವೇಷಣೆಯಲ್ಲಿ ಭಾರಿ ಜನಸಂಖ್ಯೆಯು ಈ ನಗರಗಳಿಗೆ ವಲಸೆ ಹೋಗುತ್ತಿದೆ. ಈ ನಗರಗಳು ಈಗಾಗಲೇ ಕಿಕ್ಕಿರಿದು ತುಂಬಿವೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಕಾಯ್ದುಕೊಳ್ಳಲು ಬೇಕಾದ ಮೂಲಸೌಕರ್ಯಗಳ ಕೊರತೆ ಕೂಡ ಇಲ್ಲಿ ನಾವು ಕಾಣಬಹುದು. 

ಇದು ಮೆಟ್ರೋಪಾಲಿಟನ್ ನಗರಗಳಲ್ಲಿ ಮೂಲಸೌಕರ್ಯಗಳ ಕೊರತೆಯನ್ನಷ್ಟೇ ಉಂಟುಮಾಡುವುದಲ್ಲದೆ, ಇತರ ಸಣ್ಣ ನಗರಗಳಲ್ಲಿನ ಮೂಲಸೌಕರ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಏಕೆಂದರೆ ಈ ಆರ್ಥಿಕ ಕೇಂದ್ರಗಳ ಪಾಲನೆಗಾಗಿ, ಸಣ್ಣ ನಗರಗಳಿಗೆ ಬರಬೇಕಾದ   ಹಣವನ್ನು ಇವುಗಳಿಗೆ ನೀಡಲಾಗುತ್ತಿದೆ.  ಗಂಭೀರ ಸಮಸ್ಯೆಯಿಂದ ಹೊರಬರಬೇಕೆಂದರೆ, ಹೊಸ ನಗರಗಳನ್ನು  ಮತ್ತು ಆರ್ಥಿಕ ಕೇಂದ್ರಗಳನ್ನು ರಚಿಸುವ ಅವಶ್ಯಕತೆ ಇದೆ. ಆದರೆ ಇದು ಬಹಳ ಕಠಿಣ ಪ್ರಯತ್ನವಾಗಬಹುದು. 

ರಾಜಕೀಯದ ಆಟ:

ಪ್ರಾದೇಶಿಕ ರಾಜಕಾರಣವು ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ  ವಹಿಸುತ್ತದೆ.ರಾಜಕಾರಣಿಗಳು ಮಾಡುವ ಇನ್ನೊಂದು ಘನಂಧಾರಿ ಕೆಲಸ ಎಂದರೆ,  ಮೂಲಸೌಕರ್ಯಗಳ "ಅಗತ್ಯತೆ" ಇರುವ ಪ್ರದೇಶಗಳಿಗಿಂತ ತಮ್ಮ ಕ್ಷೇತ್ರದ ಬಗ್ಗೆ ಅಷ್ಟೇ ಒಲವು ತೋರುತ್ತಾರೆ. ಕೆಲವು ವರ್ಷದವರೆಗೆ, ರೈಲ್ವೆ ಬಜೆಟ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಿಂತ ನಿರ್ದಿಷ್ಟ ಪ್ರದೇಶವನ್ನು ಬೆಂಬಲಿಸುತ್ತಾ ಬಂದಿರುವುದು ಒಂದೊಳ್ಳೆ ನಿದರ್ಶನ. 
ಎರಡು ರಾಜಕೀಯ ಪಕ್ಷಗಳ ನಡುವಿನ ರಾಜಕೀಯ ಘರ್ಷಣೆಯಿಂದಾಗಿ ಮುಂಬರುವ ಕೆಲವು ವಿಮಾನ ನಿಲ್ದಾಣಗಳ ಕಾಮಗಾರಿಯನ್ನು ರದ್ದುಪಡಿಸಲಾಗಿದೆ. ಈ ಸಿಲ್ಲಿ ಪೈಪೋಟಿಯಿಂದಾಗಿ, ಹಿಂದಿನ ಸರ್ಕಾರಗಳು ಕೈಗೊಂಡ ಮೂಲಸೌಕರ್ಯಗಳ ಯೋಜನೆಗಳನ್ನು ಪ್ರಸ್ತುತ ಸರ್ಕಾರವು ತಡೆಹಿಡಿಯುತ್ತದೆ ಮತ್ತು ಇಡೀ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ . ರಾಜಕೀಯ ಅಶಾಂತಿಯ ಪರಿಣಾಮವಾಗಿ, ವ್ಯವಹಾರಗಳು ಮತ್ತು ಹೂಡಿಕೆಗಳು ನಷ್ಟವನ್ನು ಅನುಭವಿಸಿವೆ.

ಮುಂದೆ ಏನು? 

ಒಂದು ಅಂದಾಜಿನ ಪ್ರಕಾರ, ಸ್ವಾತಂತ್ರ್ಯದ ನಂತರದ ಮೊದಲ 50 ವರ್ಷಗಳಲ್ಲಿ ಭಾರತದ ಸರಾಸರಿ ಮೂಲಸೌಕರ್ಯಗಳ ಮೇಲಿನ ಹೂಡಿಕೆಯು ಜಿಡಿಪಿಯ 3% ರಷ್ಟಿತ್ತು, ಆದರೆ ಅಗತ್ಯವಿದ್ದಂತಹ ಹೂಡಿಕೆ ಶೇಕಡಾ 6.5 ರಷ್ಟಿತ್ತು. ಅಂದರೆ ಸರ್ಕಾರ ಇದರ ಬಗ್ಗೆ ನಿರ್ಲಕ್ಷೆ ತೋರಿತ್ತು.  ಮತ್ತೊಂದೆಡೆ, ಚೀನಾ ತನ್ನ ಒಟ್ಟು ಜಿಡಿಪಿಯ ಸುಮಾರು 9% ನಷ್ಟು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಿತ್ತು. ಅದಕ್ಕೆ ಅಗತ್ಯವಿದ್ದುದ್ದು ಕೇವಲ 6.5 ಪ್ರತಿಶತದಷ್ಟು.

India-China-GDP-Data
ಭಾರತ-ಚೀನಾ ಜಿಡಿಪಿವಾರು ಡೇಟಾ

2019 ರ ಆರ್ಥಿಕ ಸಮೀಕ್ಷೆಯ ಹೇಳಿಕೆ ಪ್ರಕಾರ, 2025 ರ ವೇಳೆಗೆ ಭಾರತವು  5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಬೇಕೆಂದರೆ, ಅದರ ಒಟ್ಟು  ಜಿಡಿಪಿಯ 7-8 ಪ್ರತಿಶತದಷ್ಟು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಆದರೆ ವರದಿಯ ಪ್ರಕಾರ, ಭಾರತದ ಹೂಡಿಕೆಯು ಅಗತ್ಯಕ್ಕಿಂತ 27% ಕಡಿಮೆಯಾಗಿದೆ. 


India-outnumbers-China-in-Real-GDP-Comparison-2021
"ರಿಯಲ್ ಜಿಡಿಪಿ ಹೋಲಿಕೆ 2021 ಮಾದರಿ"ಯಂತೆ ಭಾರತವು 2021ರಲ್ಲಿ ಚೀನಾವನ್ನು ಮೀರಿಸಲಿದೆ
 
ಭಾರತಕ್ಕೆ ನಿಜವಾಗಿಯೂ ಬಹು ದೊಡ್ಡ ಅವಕಾಶವಿದೆ. ಹೂಡಿಕೆ ಹಣವನ್ನು ಹೆಚ್ಚಿಸಿ, ಮೂಲಸೌಕರ್ಯಗಳನ್ನು ಸುಧಾರಿಸಬೇಕು. ಆರ್ಥಿಕತೆಯ ಔಟ್-ಪುಟ್ (ಉತ್ಪಾದನೆ) ಅನ್ನು ಹೆಚ್ಚಿಸಬೇಕು. ಇದು ಅಭಿವೃದ್ಧಿ ಪಥದ ನಿಜವಾದ ಹಾದಿಯಾಗಿದೆ. ಭಾರತವು ಈಗಾಗಲೇ ಆ ಹಾದಿಯನ್ನು ಅನುಸರಿಸುತ್ತಿದೆ. ಮೇಕ್ ಇನ್ ಇಂಡಿಯಾ ಇದಕ್ಕೆ ಸ್ಪಷ್ಟ ನಿದರ್ಶನ.

ಭಾರತಕ್ಕೆ ಒಳ್ಳೆಯ ಸುದ್ದಿ ಏನೆಂದರೆ, ಖಾಸಗಿ ವಲಯವು ಸಹಾಯ ಮಾಡಲು ಸದಾ ಸಿದ್ಧವಾಗಿದೆ ಮತ್ತು ಸಹಾಯವನ್ನು ಮಾಡೇ ಮಾಡುತ್ತದೆ. ಆದರೆ ದೇಶದ ರಾಜಕಾರಣದ ಬಗ್ಗೆ ಅವರಿಗೆ ಹೆದರಿಕೆಯಿದೆ. ರಾಜಕೀಯ ಕ್ಷೇತ್ರದಲ್ಲಿ, ಸರ್ಕಾರದ ನೀತಿಗಳಲ್ಲಿ ಹೆಚ್ಚಿನ ವಿಶ್ವಾಸ ಹೊಂದುವವರೆಗೆ ಈ ವ್ಯಾಪಾರ ವಲಯವು ಮುಂದಿನ ಹೆಜ್ಜೆ ಇಡಲು ಸ್ವಲ್ಪ ಹಿಂದೆ ಮುಂದೆ ನೋಡುವುದಂತೂ ಖಂಡಿತ.


ಭಾರತದ ಐಟಿ ಉದ್ಯಮವು ಅದ್ಭುತವಾಗಿ ಬೆಳೆದು ನಿಂತಿದೆ ಮತ್ತು ಅಭಿವೃದ್ಧಿಯನ್ನು ಕೂಡ ಹೊಂದುತ್ತಿದೆ. ದೇಶವು ಕೇವಲ ಐಟಿ ಜಪ ಮಾಡುವುದು ಬಿಟ್ಟು, ಬೇರೆ ಕ್ಷೇತ್ರಗಳ ಸೌಕರ್ಯಗಳ ಬಗ್ಗೆ ಚಿತ್ತ ಕೊಡುವುದು ಬಹಳ ಅವಶ್ಯವಾಗಿದೆ.  ಇದಕ್ಕಾಗಿ ಹಳೆಯ-ಶೈಲಿಯ ವಿಧಾನವನ್ನು ಅಭಿವೃದ್ಧಿಪಡಿಸಿ, ಬೇಕಿದ್ದರೆ ಬೇರೆ ಒಳ್ಳೆಯ ವಿಧಾನಗಳನ್ನು ಅಳವಡಿಸಿಕೊಂಡು, ಕೈಗಾರಿಕೆಗೂ ಮತ್ತು ಅದಕ್ಕೆ ಬೇಕಾದ ಮೂಲಸೌಕರ್ಯಗಳಿಗೂ ಹೆಚ್ಚಿನ ಗಮನ ಕೊಡಬೇಕೆನ್ನುವುದು ಈ ಲೇಖನದ ಆಶಯವಾಗಿದೆ.

ಭಾರತವು ತನ್ನ ಒಡಲಲ್ಲಿ ಅಗಾಧವಾದ ಸಂಪತ್ತನ್ನು ಹೊಂದಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆಯನ್ನು ತನ್ನದಾಗಿಸಿಕೊಂಡರೆ, ಇಡೀ ಪ್ರಪಂಚವೇ ಭಾರತದ ಕಡೆಗೆ ತಿರುಗಿ ನೋಡುವ ಕಾಲ ದೂರ ಏನಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು