ಫೇಸ್ಬುಕ್ & ಮೆಟಾವರ್ಸ್ . Facebook & Metaverse
ಈಗಿನ ಎಲ್ಲಾ ವಯೋಮಾನದವರು ಬಳಸುವಂತಹ ಸಾಮಾಜಿಕ ಜಾಲ ತಾಣ. ನಿಮ್ಮ ಭಾವಚಿತ್ರಗಳನ್ನು ಹಿಡಿದು, ನಿಮ್ಮ ಇತ್ತೀಚಿನ ಸುದ್ದಿಗಳನ್ನು ಪ್ರಕಟಿಸುವವರೆಗೆ ಇದರ ಬಳಕೆಯನ್ನು ನಾವು ಕಾಣಬಹುದು.
ಕಳೆದ ಎರಡು ತಿಂಗಳಿನಿಂದ, ಈ ಕಂಪನಿ ತುಂಬಾ ಸುದ್ದಿಯಲ್ಲಿದೆ. ಕಾರಣ : ಕಂಪನಿ ತನ್ನ ಹೆಸರನ್ನು ಬದಲಾಯಿಸಿದ್ದು. ಫೇಸ್ಬುಕ್ ಈಗ "ಮೆಟಾ". ಈ ಹೊಸ ಘೋಷಣೆ ಆದಾಗಿನಿಂದ ಇದಕ್ಕೆ ಪರ ವಿರೋಧಗಳು ತುಂಬಾ ಕೇಳಿ ಬರುತ್ತಿವೆ. ಹಾಗಿದ್ರೆ ಮೆಟಾವರ್ಸ್ ಅಥವಾ ಮೆಟಾ ಅಂದರೆ ಏನು? ಫೇಸ್ಬುಕ್ ಗೂ ಮೆಟಾವರ್ಸ್ ಗೂ ಏನು ಅಂತರವಿದೆ ?? ಅದರ ಕಾರ್ಯ ವೈಖರಿ ಹೇಗೆ ಇರಬಹುದು ? ಎಂಬುದನ್ನ ಮುಂದೆ ವಿವರಿಸಲಾಗಿದೆ.
ಫೇಸ್ಬುಕ್ ಹೆಸರನ್ನು ಚಿಕ್ಕದಾಗಿ "ಮೆಟಾ" ಎಂದು ಕರೆದಿದ್ದಾರೆ. ಆದರೆ ಅದರ ಅಸಲಿ ಹೆಸರು "ಮೆಟಾವರ್ಸ್". ಮೆಟಾ ಅನ್ನುವುದು ವಿಕಸನದ ರೂಪ ಆದರೆ, ವರ್ಸ್ ಎಂಬುದು ಯೂನಿವರ್ಸ್ ಅಂದರೆ ಜಗತ್ತಿನ ಒಂದು ಸಂಕ್ಷಿಪ್ತ ರೂಪ. ಒಟ್ಟಾಗಿ ನವ ಯುಗದ ಹೊಸ ಅಧ್ಯಾಯ ಎಂದು ಬಿಂಬಿಸುವ ಹೆಸರು. ಈ ಮೆಟಾವರ್ಸ್ ಫೇಸ್ಬುಕ್ ನ ಎಲ್ಲಾ ತಂತ್ರಾಂಶಗಳನ್ನು ಒಳಗೂಡಲಿದೆ.
ಅಂದ ಹಾಗೆ ಇದೇನು ಮಾರ್ಕ್ ಜುಕರ್‌ಬರ್ಗ್ ಹೊಸದಾಗಿ ಕಂಡು ಹಿಡಿದ ಹೆಸರಲ್ಲ. ನೀಲ್ ಸ್ಟೀಫೆನ್ ಸನ್ ಎಂಬ ಸಾಹಿತಿಯ "ಸ್ನೋ ಕ್ರ್ಯಾಶ್ ( Snow Crash )" ಎಂಬ ೧೯೯೦ರ ಕೃತಿಯಲ್ಲಿ ಇದನ್ನು ಬಳಸಲಾಗಿದೆ.
![]() |
ಮೆಟಾವರ್ಸ್ ಮತ್ತು ಫೇಸ್ಬುಕ್ ನ ಎಲ್ಲಾ ತಂತ್ರಾಂಶಗಳು |
ಮೆಟಾವರ್ಸ್ ಸಿದ್ಧಾಂತ :
ಇವತ್ತಿಗೆ ಅಂತರ್ಜಾಲ ಹೇಗಿದೆಯೋ, ಅದೇ ತೆರನಾದ ಒಂದು ಭವಿಷ್ಯದ ಮುಖ್ಯ ವೇದಿಕೆಯೇ ಮೆಟಾವರ್ಸ್. ಅಂತರ್ಜಾಲ ಹೇಗೆ ಸೇವೆಯನ್ನು ಒದಗಿಸುತ್ತದೆಯೋ, ಅದೇ ರೀತಿ ಮೆಟಾ ಕೂಡ ಸೇವೆಯನ್ನು ನೀಡುತ್ತದೆ, ಅದೂ 3D ಯಲ್ಲಿ. ಮೆಟಾದಲ್ಲಿ ತಂತ್ರಜ್ಞಾನಗಳ ಸಮ್ಮಿಲನವೇ ಇದೆ. ವರ್ಚುವಲ್ ವಾಸ್ತವತೆ VR (virtual reality), ಮಿಶ್ರ ವಾಸ್ತವತೆ MR (mixed reality), ವರ್ಧಿತ ವಾಸ್ತವತೆ VR (augmented reality), ಬ್ಲಾಕ್‌ಚೈನ್ (Blockchain) ಮತ್ತು ಕ್ರಿಪ್ಟೋಕರೆನ್ಸಿ(cryptocurrency) ಎಂಬ ತಂತ್ರಜ್ಞಾನಗಳನ್ನು ಒಟ್ಟಿಗೆ ಸೇರಿಸಿ ಹೆಣೆದ ವೇದಿಕೆ ಇದಾಗಿದೆ.
ವರ್ಧಿತ ವಾಸ್ತವತೆ (AR):
ವರ್ಧಿತ ವಾಸ್ತವತೆ ಎಂದರೆ ಇರುವ ವಾಸ್ತವಕ್ಕೆ, ಇನ್ನಷ್ಟು ವಿಷಯಗಳನ್ನೂ ಅಥವಾ ಮಾಹಿತಿಗಳನ್ನು ಸೇರಿಸುವುದು. ಉದಾಹರೆಗೆ, ಮೊಬೈಲ್ ಗೇಮ್ ಆದಂತಹ ಪೋಕೆಮೊನ್ ಗೋ. ಇರುವ ವಾಸ್ತವ ಜಾಗದಲ್ಲಿ ಚಿತ್ರಗಳನ್ನು ಸೇರಿಸಿ ತೋರಿಸುವಿಕೆ.
ಮಿಶ್ರ ವಾಸ್ತವತೆ (MR):
ಮಿಶ್ರ ವಾಸ್ತವತೆ ಎಂದರೆ ಇರುವ ವಾಸ್ತವಕ್ಕೆ ಇನ್ನಷ್ಟು ವಿಷಯಗಳನ್ನು ಸೇರಿಸಿ, ಅದರೊಂದಿಗೆ ಸಂವಹಿಸಲು ಅವಕಾಶ ಕಲ್ಪಿಸುವುದು. ಉದಾಹರಣೆಗೆ, ಲೇಸರ್ ವಯರ್ಲೆಸ್ ಕೀಬೋರ್ಡ್ಸ. ವರ್ಚುವಲ್ ಕೀಬೋರ್ಡ್ ಅನ್ನು ಬಳಸಿ, ನೀವು ಅಕ್ಷರಗಳನ್ನು ಟೈಪಿಸಬಹುದು.
ವರ್ಚುವಲ್ ವಾಸ್ತವತೆ (VR):
ವರ್ಚುವಲ್ ವಾಸ್ತವತೆ ಎಂದರೆ ನಿಮ್ಮನ್ನು ನೀವೇ ಒಂದು ಕೃತಕ ವಾಸ್ತವತೆಯಲ್ಲಿ ಇದ್ದಂತೆ ಭಾಸ ಮಾಡುವುದು. ಮೊಬೈಲ್ ಅಥವಾ ಅಂತರ್ಜಾಲ ವ್ಯವಸ್ಥೆ ಹೊಂದಿದ ಯಾವುದೇ ಸಾಧನ ಬಳಸಿ, ಈ ವಾಸ್ತವತೆಯೊಂದಿಂಗೆ ಸಂವಹಿಸುವುದು.
![]() |
ವರ್ಚುವಲ್ ವಾಸ್ತವತೆಗೆ ಉದಾಹರಣೆ |
ಈಗಿನ ಸುದ್ದಿಯ ಪ್ರಕಾರ ಮೆಟಾದ ಆದ್ಯತೆ ಪ್ರಮುಖವಾಗಿ ವರ್ಚುವಲ್ ವಾಸ್ತವತೆ ಮೇಲಿದೆ. ಆದರೆ ಉಳಿದ ಎರಡನ್ನು ಸಹ ಕಡೆಗಣಿಸುವುದಿಲ್ಲ ಎನ್ನುವುದು ನನ್ನ ಅನಿಸಿಕೆ.
ಜುಕರ್‌ಬರ್ಗ್ ಇದರ ಬಗ್ಗೆ ದೊಡ್ಡ ಯೋಜನೆಗಳನ್ನೇ ರೂಪಿಸಿದ್ದಾರೆ. ಮುಂಬರುವ ಐದರಿಂದ ಹತ್ತು ವರ್ಷಗಳಲ್ಲಿ "ವರ್ಷಕ್ಕೆ ಹತ್ತಾರು ಶತಕೋಟಿ ಡಾಲರ್" ಹೂಡಿಕೆಯನ್ನು ಇದರಲ್ಲಿ ಹಾಕಲು ತಯಾರಾಗಿದ್ದಾರೆ. ಈ ಒಂದು ಯೋಜನೆಯಿಂದ, ಯುರೋಪ್‌ನಲ್ಲಿ 10,000 ಹೊಸ ಉದ್ಯೋಗಗಳನ್ನು ರಚಿಸುವುದಾಗಿ ಘೋಷಿಸಿದ್ದಾರೆ.
ಮುಂದಿನ ಹಂತಗಳು :
ಹಿಂದೆ ಬಂದಿರುವ ತಾಂತ್ರಿಕ ಬದಲಾವಣೆಗಳು ಹಂತಹಂತವಾಗಿ ಬಂದಿವೆ. 1980 ರ ದಶಕದಲ್ಲಿ 'ಪಿಸಿ'ಗಳ ದರ್ಬಾರ ಇದ್ದರೆ, 1990 ರಲ್ಲಿ ಇಂಟರ್ನೆಟ್ ದಾಗಿತ್ತು ಮತ್ತು 2000 ರಲ್ಲಿ ಮೊಬೈಲ್ ಗಳದಾಗಿತ್ತು. ಮುಂದಿನ ದಿನಗಳಲ್ಲಿ ಮೆಟಾವರ್ಸ್ ನ ದರ್ಬಾರು ಇರುತ್ತದೆ. ಹಾಗೆ ನೋಡಿದರೆ ಇವೆಲ್ಲ ಪರಸ್ಪರ ಸಹಕಾರದಿಂದಲೇ ಬೆಳೆದಿವೆ. ಇಂಟರ್ನೆಟ್‌ಗೆ PC ಗಳ ಅಗತ್ಯವಿತ್ತು ; ಈಗ ಮೊಬೈಲ್‌ಗೆ ಇಂಟರ್ನೆಟ್ ಅವಶ್ಯಕತೆ ಇದೆ ; ಮುಂದೆ ಮೆಟಾವರ್ಸ್‌ಗೆ ಇಂಟರ್ನೆಟ್ ಮತ್ತು ಮೊಬೈಲ್, ಎರಡರ ಅಗತ್ಯವಿರುತ್ತದೆ.
ವೆಬ್ 3.0 :
ವೆಬ್ 1.0 ಅನ್ನುವುದು ಜಗತ್ತಿನ ಪ್ರಥಮ ಅಂತರ್ಜಾಲದ ವ್ಯವಸ್ಥೆ. ಡೆಸ್ಕ್ ಟಾಪ್ ಪಿಸಿ, ಡಯಲ್-ಅಪ್ ಮೋಡೆಮ್ಗಳ ಕಾಲದ ಅಂತರ್ಜಾಲದ ವ್ಯವಸ್ಥೆಯೇ ವೆಬ್ 1.0.
ವೆಬ್ 2.0 ಎನ್ನುವುದು ಈಗಿನ ಕಾಲದ ಅಂತರ್ಜಾಲದ ವ್ಯವಸ್ಥೆ. ಫೇಸ್ಬುಕ್, ನೆಟ್ ಫ್ಲಿಕ್ಸ್, ವೈ-ಫೈ, 4 ಜಿ, ಮಲ್ಟಿಮೀಡಿಯಾ ಮತ್ತು ಬಳಕೆದಾರರು ರಚಿಸಿದ ವಿಷಯಗಳುಳ್ಳ ಯೌಟ್ಯೂಬ್ ನ ಜಮಾನವೇ ವೆಬ್ 2.0.
ವೆಬ್ 3.0 :
ಭವಿಷ್ಯ ನಿರ್ಧರಿತವಲ್ಲದ ಕಾರಣ ಇದನ್ನು ಸಧ್ಯಕ್ಕೆ ಮೆಟಾವರ್ಸ್ ಕಾಲ ಎನ್ನಬಹುದು. ಅದಕ್ಕೆ ಬೇಕಾದ ಸವಲತ್ತುಗಳು ಈಗಾಗಲೇ ಜನರ ಮನೆ ಬಾಗಿಲಿಗೆ 5G ಮತ್ತು ಫೈಬರ್ ಆಪ್ಟಿಕ್ ಬ್ರಾಡ್‌ಬ್ಯಾಂಡ್ ನ ಮೂಲಕ ತಲುಪುತ್ತಿದೆ. ಇದು ಕೇವಲ ಶುರುವಾತು ಅಷ್ಟೇ. ಇನ್ನು ತುಂಬಾ ಕೆಲಸ ಮಾಡಬೇಕಿದೆ. ವರ್ಚುವಲ್ ವಾಸ್ತವತೆ ಹಾರ್ಡ್ವೇರ್ ಅಷ್ಟು ಉತ್ತಮ ಪರಿಸ್ಥಿತಿಯಲ್ಲಿ ಇಲ್ಲ. ಸಧ್ಯಕ್ಕೆ ಇದು ತುಂಬಾ ನಿಧಾನ ಮತ್ತು ದುಬಾರಿ ವಸ್ತು ಆಗಿದೆ. ಕಂಪ್ಯೂಟಿಂಗ್ ವಲಯ, ಇಂತಹ ಸಮಸ್ಯೆಯನ್ನು ಪರಿಹರಿಸಲು, ವೇಗವಾಗಿ, ಉತ್ತಮವಾಗಿ ಮತ್ತು ಅಗ್ಗವಾಗಿ ಮಾಡುವ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಅತೀ ದೊಡ್ಡ ಸಮಸ್ಯೆ ಎಂದರೆ ಸಾಫ್ಟ್ವೆರ್. ಮೆಟಾವರ್ಸ್ ರಚನೆಗಾಗಿ ಬರೆದಂತಹ ಸಾವಿರಾರು ಕೋಡಿಂಗ್ ಗಳು ಒಟ್ಟಾಗಿ ಅಗತ್ಯವಿರುವ ಮಾನದಂಡಗಳಿಗೆ ಮತ್ತು ಪ್ರೋಟೋಕಾಲ್‌ಗಳಿಗೆ ಹೊಂದುವಂತೆ ಮಾಡುವುದೇ ದೊಡ್ಡ ಸವಾಲು. ಪ್ರತಿಯೊಬ್ಬರ ಮಾಹಿತಿಯನ್ನು ಬ್ಲಾಕ್ ಚೈನ್ ಮೂಲಕ ಸಂಗ್ರಹಿಸಿ ಇಡುವ ಮತ್ತು ವ್ಯಾಪಾರಕ್ಕಾಗಿ ಕ್ರಿಪ್ಟೋಗಳನ್ನ ಬಳಸುವ ತಂತ್ರಜ್ಞಾನವೂ ಅತ್ಯವಶ್ಯಕ.
![]() |
ವೆಬ್ ನ ವಿಕಾಸದ ಪರಿಚಯ |
ಮೆಟಾವರ್ಸ್ ಅನ್ನು ಘೋಷಿಸಿದಾಗ ಅದರಲ್ಲಿ ಹಲವು ಉದಾಹರಣೆಗಳನ್ನ ನೀವು ನೋಡಿರಬಹುದು. ಆದರೆ, ವಾಸ್ತವತೆ ಅದಕ್ಕಿಂತ ಭಿನ್ನವಾಗಿರುತ್ತದೆ. ಇದರಲ್ಲಿ ನೀವು ನಿಮ್ಮ ವರ್ಚುಯಲ್ ಮಾಹಿತಿಯನ್ನ ಒಬ್ಬ ಮಧ್ಯವರ್ತಿಗೆ ಕೊಟ್ಟಂತೆ ಆಗುತ್ತದೆ. ನೈಜ ಜಗತ್ತಿನ ದೃಷ್ಟಿಯಲ್ಲಿ ಹೇಳಬೇಕೆಂದರೆ, ನೀವು ಇನ್ನೊಬರ ಆಳಾಗಿ ಇರುತ್ತೀರಿ. ನಿಮ್ಮ ಮಾಹಿತಿಗಳು ಎಲ್ಲ ಟೆಕ್- ಜಯಂಟ್ ಗಳ ಬಳಿ ಇದ್ದೆ ಇರುತ್ತದೆ. ಆದರೆ ಎಲ್ಲರೂ ಒಳ್ಳೆಯವರು ಅಂತ ತೀರ್ಮಾನಕ್ಕೆ ಬರುವುದು ಮೂರ್ಖತನ.
ಇದರ ಒಳ್ಳೆಯ ಮುಖದ ಕಡೆ ಗಮನ ಹರಿಸಿದರೆ, ಮೆಟಾವರ್ಸ್ ಒಂದು ಒಳ್ಳೆಯ ಮಾಧ್ಯಮ ಕೂಡ ಆಗಬಹುದು. ದೈಹಿಕವಾಗಿ ಪ್ರಯಾಣ ಮಾಡುವ ಬದಲಿಗೆ, ವರ್ಚುವಲಿ ಕೆಲಸದ ಮೇರೆಗೆ ಹೋಗಬಹುದು. ಶಿಕ್ಷಣವನ್ನ ಇನ್ನೂ ಒಂದು ಮಟ್ಟಕೆ ಮೇಲೆ ತಗೆದುಕೊಂಡು ಹೋಗಬಹುದು. ಇನ್ನೂ ಹತ್ತು ಹಲವು ಪ್ರಯೋಜನಗಳು ಇವೆ.
ಮೆಟಾವರ್ಸ್ ನ ಬರುವಿಕೆ ? ಮತ್ತು ಏನೆಲ್ಲಾ ಬದಲಾವಣೆಗಳನ್ನ ನಾವು ಕಾಣಬಹುದು ?
ಜುಕರ್‌ಬರ್ಗ್ ಅವರ ಯೋಜನೆ ಪ್ರಕಾರ , 2030ರ ಆಸುಪಾಸು ನಾವು ಇದನ್ನ ನೀರಿಕ್ಷಿಸಬಹುದು. ಆದರೆ ಇದಕ್ಕೆ ಪೂರಕವಾಗಿ ಬೇಕಾಗಿರುವ ಸವಲತ್ತುಗಳು ಆಗಲೇ ಲಭ್ಯವಿರಬೇಕು.
ನನ್ನ ಪ್ರಕಾರ, ಈ ಕೆಲಸ ಪೂರ್ಣಗೊಂಡರೆ, ಪಿಸಿಗಳು ಗುಜುರಿ ಸೇರುವುದಂತೂ ಪಕ್ಕಾ. ಯಾಕೆಂದರೆ, ಮೊದಲೇ ಹೇಳಿದಂತೆ ಈ ವೆಬ್ 3.0 ದಲ್ಲಿ ಹೆಚ್ಚು ಪ್ರಾಶಸ್ತತೆ ಮೊಬೈಲ್ ಗಳಂತಹ ಸಾಧನಗಳಿಗೆ ಸಿಗುತ್ತದೆ. ಇದನ್ನು ಹೇಳಲು ಬಲವಾದ ಕಾರಣ ಇದೆ. ನೀವು ಈಗಿನ ಮಾರುಕಟ್ಟೆಯನ್ನ ಗಮನಿಸಿದರೆ, ಅದರಲ್ಲಿ ಮೊಬೈಲ್ ಗಳ ಅಭಿವ್ರದ್ಧಿಯಲ್ಲಿ ಸಾಕಷ್ಟು ಬೆಳವಣಿಗೆಯನ್ನ ಕಾಣಬಹುದು. ಮುಂದೆ ಸಹ ಇದೆ ಪ್ರಾಬಲ್ಯ ತೋರಲಿದೆ.
ನಿಮಗೆ ನೆನಪಿರಬಹುದು. ಯಾವಾಗ ಜಿಯೋ ಅವರು ಉಚಿತ ಸಿಮ್ ಮತ್ತು ಅಂತರ್ಜಾಲ ಸೇವೆಯನ್ನು ಘೋಷಿಸಿದರೋ ಆಗ ಜನ ಹೇಗೆ ಸರದಿಯಲ್ಲಿ ನಿಂತು, ಅದನ್ನು ಕೊಂಡರು. ಈ ಕೇಸ್ ಅಲ್ಲೂ ಸಹ ಅದೇ ಆಗಬಹುದು. ಕೈಗೆಟಕುವ ಬೆಲೆಗೆ ಸಾಮಗ್ರಿಗಳು ದೊರೆಯಲು ಶುರು ಮಾಡಿದಾಗ, ಟ್ರೆಂಡ್ ಅಂದುಕೊಂಡು ಅದರ ದಂಬಾಲು ಬಿದ್ದರೆ, ಇದನ್ನು ಯಶಸ್ವಿ ಮಾಡಲು ಬೇರೆ ಯಾವ ತಂತ್ರಗಳೇ ಬೇಕಾಗುವುದಿಲ್ಲ.
ಈ ಮೆಟಾವರ್ಸ್ ಎಲ್ಲಾವನ್ನೂ ಬದಲಿಸುವುದಿಲ್ಲ. ಕಡೆಗೆ ಮನೆ ಕಟ್ಟಲು ಕಾರ್ಮಿಕರು ಭೌತಿಕವಾಗಿ ಬೇಕೇ ಬೇಕು ಅಲ್ಲವೇ? ಶುಶ್ರುಷೆ ಮಾಡಲು ದಾದಿಯರು ಸಹ ಬೇಕಲ್ಲವೇ? ಕೆಲವೊಂದು ಆಯ್ದ ಜೀವನದ ಭಾಗಗಳನ್ನು ಮಾತ್ರ ಈ ಮೆಟಾವರ್ಸ ಆವರಿಸಿಕೊಳ್ಳಬಹುದು.
ಏನೇ ಇರಲಿ, ತಂತ್ರಜ್ಞಾನದ ಬೆಳವಣಿಗೆ ಮುಖ್ಯವಾದ ವಿಷಯ. ಹಾಗೆಯೇ ಅದರ ದುರ್ಭಿಕ್ಷಕ್ಕೆ ಬಲಿಯಾಗದಂತೆ ಬಾಳುವುದು ಸಹ ಅತ್ಯಂತ ಮುಖ್ಯ ವಿಷಯ.
ನನ್ನ ಲೇಖನ ನಿಮಗೆ ಉಪಯುಕ್ತ ಎನಿಸಿದಲ್ಲಿ, ಫೀಡ್ಬ್ಯಾಕ್ ನೀಡಿ. ಹಾಗೆ ಎಲ್ಲರ ಜತೆ ಶೇರ್ ಮಾಡಿ.
4ಕಾಮೆಂಟ್‌ಗಳು
ಭವಿಷ್ಯದ ತಂತ್ರಜ್ಞಾನದ ಕುರಿತಾದ ಈ ನಿಮ್ಮ ಲೇಖನ ಮಾಹಿತಿ ಪೂರಕವಾಗಿದೆ.
ಪ್ರತ್ಯುತ್ತರಅಳಿಸಿಆಂಗ್ಲ ಭಾಷೆಯ ಪದಗಳ ಅನುವಾದವೂ ಚೆನ್ನಾಗಿದೆ.
ಧನ್ಯವಾದಗಳು.
ಅಳಿಸಿVery nice
ಪ್ರತ್ಯುತ್ತರಅಳಿಸಿಧನ್ಯವಾದಗಳು.
ಅಳಿಸಿ