ಜಾಹಿರಾತು

ದಿ ಎಲಿಫೆಂಟ್ ವಿಸ್ಪರರ್ಸ್ : ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷಚಿತ್ರದ ಹಿಂದಿನ ಕಥೆ

2023 ಸಾಲಿನ 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಎರಡು ದೇಶೀ ಚಿತ್ರಗಳು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದರಿಂದ ಭಾರತವು ಈಗ ಸಂಭ್ರಮಾಚರಣೆಯ ಮೂಡ್‌ನಲ್ಲಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದರೆ, ತೆಲುಗು ಆಕ್ಷನ್ ಫ್ಲಿಕ್ RRR ನ ಆಕರ್ಷಕ  'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ತನ್ನ ಸ್ವೀಕಾರ ಭಾಷಣದ ಸಮಯದಲ್ಲಿ, ಚಲನಚಿತ್ರ ನಿರ್ಮಾಪಕಿ ಗೊನ್ಸಾಲ್ವೆಸ್ ಡಾಲ್ಬಿ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಮತ್ತು ಪ್ರಪಂಚದಾದ್ಯಂತದ ಇರುವ ಎಲ್ಲಾ ವೀಕ್ಷಕರಿಗೆ ಹೀಗೆ ಹೇಳಿದರು: “ನಮ್ಮ ಮತ್ತು ನಮ್ಮ ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಂಧಕ್ಕಾಗಿ, ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ ಮತ್ತು ಇತರ ಜೀವಿಗಳ ಬಗ್ಗೆ ಸಹಾನುಭೂತಿಗೋಸ್ಕರ ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ. ನಾವು ಜಾಗವನ್ನು ಹಂಚಿಕೊಳ್ಳುತ್ತೇವೆ ಮತ್ತು ಸಹಬಾಳ್ವೆಯಿಂದ ನಾವು ಬದುಕುವುದು ಅತೀ ಮುಖ್ಯ”. ಆಸ್ಕರ್‌ನಲ್ಲಿ ಭಾರತವನ್ನು ಮಿಂಚುವಂತೆ ಮಾಡಿದ ಈ ಸಾಕ್ಷ್ಯಚಿತ್ರದ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು.

ದಿ+ಎಲಿಫೆಂಟ್+ವಿಸ್ಪರರ್ಸ್+the+elephant+whisperer
"ದಿ ಎಲಿಫೆಂಟ್ ವಿಸ್ಪರರ್ಸ್" ಚಿತ್ರ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್

ದಿ ಎಲಿಫೆಂಟ್ ವಿಸ್ಪರರ್ಸ್ ಎಂದರೇನು? 

ತಮಿಳುನಾಡು ರಾಜ್ಯದ ರಾಷ್ಟ್ರೀಯ ಉದ್ಯಾನವನವಾದ ಮುದುಮಲೈ ವನ್ಯಜೀವಿ ಅಭಯಾರಣ್ಯದ ಕಾಡುಗಳಲ್ಲಿ ಚಿತ್ರಣಗೊಂಡ, 39 ನಿಮಿಷಗಳ ಅವಧಿಯ ಈ ಚಲನಚಿತ್ರವನ್ನು ಗುನೀತ್ ಮೊಂಗಾ ಮತ್ತು ಸಿಖ್ಯ ಎಂಟರ್‌ಟೈನ್‌ಮೆಂಟ್‌ನ ಅಚಿನ್ ಜೈನ್ ಜೊತೆಯಾಗಿ ನಿರ್ಮಿಸಿದ್ದಾರೆ. ಇದರಲ್ಲಿ ಇಬ್ಬರು ಪಾತ್ರಧಾರಿ ಇದ್ದರೆ, ಎರಡು ಆನೆಗಳು ಸಹ ತೆರೆ ಹಂಚಿಕೊಂಡಿದ್ದಾವೆ. ಬೊಮ್ಮನ್ ಮತ್ತು ಬೆಲ್ಲಿ ಮಾನವ ಪಾತ್ರಧಾರಿಗಳಾಗಿದ್ದರೆ, ರಘು ಮತ್ತು ಅಮ್ಮು ಆನೆ ಮರಿಗಳ ಹೆಸರಾಗಿವೆ. ಈ ನಾಲ್ವರ ಸುತ್ತ ಕಥಾಹಂದರವಿದೆ. ಕಟ್ಟುನಾಯಕ ಸಮುದಾಯಕ್ಕೆ ಸೇರಿದ ಈ ಬುಡಕಟ್ಟು ದಂಪತಿಗಳು, ಹಿಂಡಿನಿಂದ ದೂರಾದ ಅನಾಥ ಆನೆಮರಿಯ ರಘುವನ್ನು ಹಳ್ಳಿಯಲ್ಲಿ ಹೇಗೆ ನೋಡ್ಕೊಂಡಿದ್ದಾರೆ ಎಂಬುದನ್ನ ಸಾಕ್ಷ್ಯಚಿತ್ರ ತೋರಿಸುತ್ತದೆ. ನಂತರ ಬೆಲ್ಲಿ ಮತ್ತು ಬೊಮ್ಮನ್ ಮೂರು ತಿಂಗಳ ಅನಾಥ ಆನೆ ಅಮ್ಮುವನ್ನು ಸಹ ದತ್ತು ಪಡೆದರು. ಚಿತ್ರದಲ್ಲಿ ಮನುಷ್ಯರು ಪ್ರಕೃತಿಯೊಂದಿಗೆ ಹೇಗೆ ಸಹಬಾಳ್ವೆ ನಡೆಸುತ್ತಾರೆ ಎಂಬುದನ್ನು ಚಿತ್ರವು ಚಿತ್ರಿಸುತ್ತದೆ. ಚಿತ್ರದಲ್ಲಿ ಬೆಲ್ಲಿ ಆನೆ ಮರಿಗಳನ್ನು ತನ್ನ ಮಕ್ಕಳು ಎಂದು ವಿವರಿಸಿದ್ದಾರೆ.

ಮಾನವರಂತೆಯೇ, ಆನೆಗಳು ಹದಿಹರೆಯವನ್ನು ತಲುಪುತ್ತಿದ್ದಂತೆ, ಅವು ಮೊಂಡುತನವನ್ನು ತೋರುತ್ತಾ ಇತರರ ಮಾತುಗಳನ್ನು ಕೇಳುವುದನ್ನು ನಿಲ್ಲಿಸುತ್ತವೆ. ಈ ನಡುವಳಿಕೆಯನ್ನು ನಿಯಂತ್ರಣ ಮಾಡುವ ಶಕ್ತಿ ಮಾನವ ಪಾತ್ರಗಳ ಬಳಿ ಆ ಸಮಯದಲ್ಲಿ ಇರುವುದಿಲ್ಲ. ಅದಕ್ಕಾಗಿಯೇ ರಘುವನ್ನು ನಂತರ ಅರಣ್ಯ ಇಲಾಖೆಯು ಹೆಚ್ಚು ಅನುಭವ ಹೊಂದಿರುವ ಮಾವುತನ ನಿಗರಾಣೆಗೆ ವರ್ಗಾಯಿಸುತ್ತದೆ. ಇದರಿಂದಾಗಿ ಬೊಮ್ಮನ್ ಮತ್ತು ಬೆಲ್ಲಿ ಬೇಸರ ಮತ್ತು ದುಃಖಿತರಾಗುತ್ತಾರೆ. ಅವರು ರಘುವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಚಿತ್ರದ ಒಂದು ದೃಶ್ಯದಲ್ಲಿ, ಈ ವಿರಹದಿಂದ ಬೆಲ್ಲಿಯ ಕಣ್ಣೀರು ಹಾಕಬೇಕಾದರೆ ಅಮ್ಮು ಅವರ ಭಾವನೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವರ ಕಣ್ಣೀರನ್ನು ತನ್ನ ಸೊಂಡಲಿನಿಂದ ಒರೆಸುತ್ತದೆ. ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರದ ಮೂಲಕ ನಿರ್ದೇಶನಕ್ಕೆ ಚೊಚ್ಚಲ ಪ್ರವೇಶ ಮಾಡಿದ ಗೊನ್ಸಾಲ್ವೆಸ್, ಸಾಕ್ಷ್ಯಚಿತ್ರದಿಂದ ಇದು ತನ್ನ ನೆಚ್ಚಿನ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಸಾಕ್ಷ್ಯಚಿತ್ರ ಹೇಗೆ ಹೊರಬಂತು? 

ನೀಲಗಿರಿ ಜಿಲ್ಲೆಯ ತೆಪ್ಪಕಾಡು ಆನೆ ಶಿಬಿರದ ಬಳಿ ಇರುವ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಿಂದ ಒಮ್ಮೆ ಮನೆಗೆ ಹಿಂದಿರುಗುತ್ತಿದ್ದಾಗ ಗೊನ್ಸಾಲ್ವೆಸ್ ದಾರಿಯಲ್ಲಿ ರಘು (ಆನೆ)ಯನ್ನ ಭೇಟಿಯಾಗ್ತಾರೆ. ಆಗಿನ್ನೂ ರಘು ಮೂರು ತಿಂಗಳು ಎಳೆಯವನಾಗಿದ್ದ. ರಘುವಿನ ಲವಲವಿಕೆ ನೋಡಿ ನಿರ್ದೇಶಕಿ ಮೂಕವಿಸ್ಮಿತರಾಗುತ್ತಾರೆ. ರಘುವಿನ ಪಾಲಕರಾದ ಬೊಮ್ಮನ್ ಮತ್ತು ಬೆಲ್ಲಿಯನ್ನು ಭೇಟಿ ಮಾಡುವ ಸಂದರ್ಭ ಸಹ ಅವರಿಗೆ ಒದಗಿ ಬರುತ್ತದೆ. ಗೊನ್ಸಾಲ್ವೆಸ್ ಅವರ ಮೇಲೆ ಆ ಆನೆ ಎಷ್ಟು ಪ್ರಭಾವ ಬೀರಿತ್ತು ಎಂದರೆ, ಅದಕ್ಕಾಗಿಯೇ ಅವರು ಈ ಸಿನಿಮಾ ಮಾಡಬೇಕೆಂದು ಕೈ ಹಾಕುತ್ತಾರೆ.

"ನಾನು ಐದು ವರ್ಷಗಳ ಕಾಲ ರಘುನನ್ನ ನೋಡಿಕೊಳ್ಳುತ್ತಾ ಬಂದೆ. ಆ ಸಮಯದಲ್ಲಿ  ಸುಮಾರು 450 ಗಂಟೆಗಳ ತುಣುಕಗಳನ್ನು ಚಿತ್ರೀಕರಿಸಿದೆ. ಅದರಲ್ಲಿ ಸಾವಿರಾರು ತುಣುಕುಗಳಲ್ಲಿ ರಘುವಿನ ಸ್ನಾನ ಹಿಡಿದು, ಅವನು ಊಟ ಅಥವಾ ಆಟವಾಡುವ ಎಷ್ಟೋ ಗಂಟೆಗಳ ಚಿತ್ರೀಕರಣಗಳಿವೆ. ನಾವು ತಾಳ್ಮೆಯಿಂದಿರಬೇಕು. ಇದರಲ್ಲಿ ಬೆಲ್ಲಿ ಅಮ್ಮುವನ್ನು ಅವಳ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳುವ ದೃಶ್ಯಗಳು ಸಹ ಕಾಣಸಿಗುತ್ತವೆ. ಇವು ಆಪ್ತ ಕ್ಷಣಗಳು. ಇವುಗಳನ್ನು ಪೂರ್ವಯೋಜಿಸಲು ಸಾಧ್ಯವಿಲ್ಲ. ಪ್ರೇಕ್ಷಕರು ಪ್ರಾಣಿಗಳನ್ನು 'ಇತರೆ ವಸ್ತುಗಳು' ಎಂದು ನೋಡುವುದನ್ನು ಬಿಟ್ಟು, ಅವುಗಳನ್ನು ನಮ್ಮಲ್ಲಿ ಒಬ್ಬರಂತೆ ನೋಡಲು ಪ್ರಾರಂಭಿಸುತ್ತಾರೆ" ಎಂದು ಗೊನ್ಸಾಲ್ವೆಸ್ ಹೇಳುತ್ತಾರೆ.

“ಆನೆಗಳು ಮತ್ತು ಅವುಗಳ ಮಾನವ ಪಾಲಕರು, ಹೇಗೆ ಪರಸ್ಪರ ಪ್ರೀತಿಸುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ, ಅವರು ಹೇಗೆ ಹೊಂದಿಕೊಳ್ಳಲು ಮತ್ತು ಸಹ-ಅಸ್ತಿತ್ವದಲ್ಲಿ ಇರಲು ಕಲಿತಿದ್ದಾರೆ ಎಂಬುದರ ಕುರಿತು ಜನರು ಹೆಚ್ಚು ಅರ್ಥಮಾಡಿಕೊಳ್ಳಲು "ದಿ ಎಲಿಫೆಂಟ್ ವಿಸ್ಪರರ್ಸ್" ಸಹಾಯ ಮಾಡುತ್ತದೆ. ಮನುಷ್ಯ-ಪ್ರಾಣಿ ಸಂಘರ್ಷದ ಋಣಾತ್ಮಕ ಅಂಶಕ್ಕಿಂತ ಹೆಚ್ಚಾಗಿ, ಅವರುಗಳ ಸಹ-ಅಸ್ತಿತ್ವದ ಸಕಾರಾತ್ಮಕತೆಯ ಮೇಲೆ ಕೇಂದ್ರೀಕರಿಸಲು ನಾನು ನಿರ್ಧರಿಸಿದ್ದೆ. ಎಲಿಫೆಂಟ್ ವಿಸ್ಪರರ್ಸ್ ಆ ನಿಸ್ವಾರ್ಥ ಸಹಕಾರವನ್ನು ಪ್ರತಿಬಿಂಬಿಸಬೇಕೆಂದು ನಾನು ಬಯಸುತ್ತೇನೆ. ಅದು ಭರವಸೆಯ ಕಿರಣವಾಗಿದೆ. ”ಎಂದು ಚಲನಚಿತ್ರ ನಿರ್ಮಾಪಕರು ಹೇಳಿದರು.

ಬೊಮ್ಮನ್ ಮತ್ತು ಬೆಲ್ಲಿ ಈಗ ಎಲ್ಲಿದ್ದಾರೆ?

ಬೊಮ್ಮನ್ ಮತ್ತು ಬೆಲ್ಲಿ ತೆಪ್ಪಕಾಡು ಅಭಯಾರಣ್ಯದಿಂದ ಸಧ್ಯಕ್ಕೆ ಹೊರಬಂದಿದ್ದಾರೆ. ಪಶ್ಚಿಮ ತಮಿಳುನಾಡಿನ ಧರ್ಮಪುರಿಯಲ್ಲಿ ಬೊಮ್ಮನ್ ಅವರು ಎರಡು ಆನೆ ಮರಿಗಳ ಆರೈಕೆ ಮಾಡುತ್ತಿದ್ದಾರೆ. ಅಲ್ಲಿನ ಅಕ್ರಮ ವಿದ್ಯುತ್ ಬೇಲಿ ಸಂಪರ್ಕಕ್ಕೆ ಅವುಗಳ ತಾಯಿ ತುತ್ತಾಗಿದ್ದರಿಂದ ಅವು ಅನಾಥವಾಗಿದ್ದವು. ಈ ಎರಡು ಆನೆ ಮರಿಗಳನ್ನು ಪತ್ತೆಹಚ್ಚಿ ಹಿಂಡಿನೊಂದಿಗೆ ಒಂದುಗೂಡಿಸಲು ಅಥವಾ ಮುದುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಅವರು ಸಧ್ಯಕ್ಕೆ ಧರ್ಮಪುರಿಯ ಪಾಲಕೋಡ್ಡೆ ಅರಣ್ಯದಲ್ಲಿದ್ದಾರೆ. ತಮಿಳುನಾಡು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬೊಮ್ಮನ್ ಅವರು ಆನೆಗಳನ್ನು ನೋಡಿಕೊಳ್ಳುವುದರ ಎಷ್ಟು ಬ್ಯುಸಿ ಆಗಿದ್ದಾರೆ ಎಂದರೆ ಅವರಿಗೆ ಇನ್ನೂ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. "ಈ [ಆಸ್ಕರ್] ಬಗ್ಗೆ ನನಗೆ ಇನ್ನೂ ಏನೂ ತಿಳಿದಿಲ್ಲ". ಅಷ್ಟೇ ಅಲ್ಲಾ, ಅವರಿಗೆ ಈ ಚಿತ್ರದಿಂದ ಭಾರತಕ್ಕೆ ಹೆಚ್ಚು ಕೀರ್ತಿ ಬಂದಿದೆ ಎಂದು ತಿಳಿದು ತುಂಬಾ ಸಂತೋಷವಾಯ್ತು ಎಂದು ಮಾಧ್ಯಮ ಮಿತ್ರರ ಮುಂದೆ ಸಹ ಹೇಳಿದ್ದಾರೆ.

ತೆಪ್ಪಕಾಡು ಆನೆ ಶಿಬಿರದಲ್ಲಿ ತೀವ್ರವಾಗಿ ಘಾಸಿಗೊಂಡಿದ್ದ ರಘುವನ್ನು ಈ ದಂಪತಿಗೆ ತಂದು ಒಪ್ಪಿಸಿದಾಗ, ಅವನ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಪ್ರತಿ ಸಲ ಆತ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ಬೆಲ್ಲಿ ದೇವಸ್ಥಾನದಲ್ಲಿ ಅವನಿಗೋಸ್ಕರ ಮಾಡಿಸುತ್ತಿದ್ದದ್ದನ್ನು ಬೆಲ್ಲಿ ಈಗಲೂ ನೆನಪಿಸಿಕೊಳ್ಳುತ್ತಾರೆ.

ಬೆಲ್ಲಿ ಆನೆಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡುತ್ತಾರೆ.  "ತಾಯಿಯನ್ನು ಕಳೆದುಕೊಂಡ ಮಗುವಿಗೆ ನಾವು ಇದನ್ನು ಒಂದು ದೊಡ್ಡ ಸೇವೆಯಾಗಿ ನೋಡುತ್ತೇವೆ" ಎಂದು ಅವರು ಹೇಳಿದರು. ಸಾಕ್ಷ್ಯಚಿತ್ರದ ಆಸ್ಕರ್ ಪ್ರಶಸ್ತಿಯ ಬಗ್ಗೆ ಬೆಲ್ಲಿ, “ನನಗೆ ಪ್ರಶಸ್ತಿಯ ಬಗ್ಗೆ ತಿಳಿದಿಲ್ಲ. ಆದರೆ ಅಭಿನಂದನೆಗಳು ಹರಿದುಬರುತ್ತಿರುವುದರಿಂದ ನಾನು ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ." ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಇದಾಗಿತ್ತು ದಿ ಎಲಿಫೆಂಟ್ ವಿಸ್ಪರರ್ಸ್ : ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ ಚಿತ್ರದ ಹಿಂದಿನ ಕಥೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು