ಜಾಹಿರಾತು

ಬಿಟ್-ಕಾಯಿನ್ ಪ್ರಪಂಚದ ಮುಂದಿನ ಏಕ ರೂಪದ ಕರೆನ್ಸಿ ಆಗಬಹುದೇ? ಎಲ್- ಸಾಲ್ವಡಾರ ಮಾದರಿಯಾಗುತ್ತದೆಯೇ?

ಜಗತ್ತಿನಲ್ಲಿ ಏಕ ರೂಪದ ಕರೆನ್ಸಿಗಳು ಸಿಗುವುದು ಅಪರೂಪ. ಅಂಥದರಲ್ಲಿ ಡಿಜಿಟಲ್ ರೂಪದ ಕರೆನ್ಸಿಯಾದ ಬಿಟ್-ಕಾಯಿನ್ ಈಗ ಸದ್ದು ಮಾಡುತ್ತಿದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಇದರ ಕುರಿತು ಆಶ್ಚರ್ಯ ಪಡುವಂತಹ ಕೆಲಸಗಳು ಸಹ ಆಗುತ್ತಿವೆ. ಇದಕ್ಕೆ ಮಧ್ಯ ಅಮೆರಿಕಾದ ಎಲ್- ಸಾಲ್ವಡಾರ ಒಂದು ಅತ್ಯುತ್ತಮ ಉದಾಹರಣೆ. ಈ ಪುಟ್ಟ ಬಡ ದೇಶವನ್ನೇ ಆಧಾರವಾಗಿ ಇಟ್ಟುಕೊಂಡು, ಬಿಟ್-ಕಾಯಿನ್ ಅನ್ನು ತಕ್ಕಡಿಯಲ್ಲಿ ತೂಗುವ ಕೆಲಸವೇ ಈ ಲೇಖನದ ಸಾರ.

Bitcoin and Share Market
Source: Andre McKenzie

ಬಿಟ್-ಕಾಯಿನ್.ಹೇಳಲಿಕ್ಕೆ ಇದೊಂದು ಕ್ರಿಪ್ಟೋ- ಕರೆನ್ಸಿ. ಡಿಜಿಟಲ್ ರೂಪದ ನಾಣ್ಯಇದಾಗಿದೆ. ಎಲ್ಲರಿಗು ಗೊತ್ತಿರುವಂತೆ, ಇದನ್ನು ತಮ್ಮ ತಮ್ಮ ಜೇಬಿನಲ್ಲಿ ಇಡುವ ಬದಲು ಅಂತರ್ಜಾಲದಲ್ಲಿ ಖರೀದಿಸಿ/ಗಳಿಸಿ, ಶೇಖರಿಸಿ ಇಡಬಹುದು. ಇದನ್ನು ಉಪಯೋಗಿಸಿ ಈಗೀಗ ಕೊಳ್ಳುವ, ಮಾರುವ ಪ್ರಕ್ರಿಯೆಗಳು ನಡೆಯುತ್ತಿವೆ. ಇತ್ತೀಚಿಗೆ ಟೆಸ್ಲಾ ಸಿಇಓ "ಎಲಾನ್  ಮಸ್ಕ್" ಸಹ ಜಾಲತಾಣದಲ್ಲಿ, ತಮ್ಮ ಕಂಪನಿಯ ಕಾರುಗಳನ್ನು ಬಿಟ್-ಕಾಯಿನ್ ಮುಖಾಂತರ ಖರೀದಿಸಿಬಹುದು ಎಂದು ಘೋಷಿಸಿದರು. ಯಾವುದೋ ಒಂದು ಜಾಗಕ್ಕೆ ಅಷ್ಟೇ ಸೀಮಿತವಾಗಿದ್ದ ಈ ನಾಣ್ಯ, ದಿನ ಕಳೆಯುವುದರಲ್ಲೇ ಇಡೀ ಪ್ರಪಂಚದಲ್ಲಿ ಪ್ರಚಲಿತವಾಯ್ತು. ಆಗ ಎಲ್ಲಿ ನೋಡಿದರಲ್ಲಿ  ಇವುಗಳ ಬಗ್ಗೆಯೇ ಸುದ್ದಿ ಶುರುವಾಯ್ತು, ಆಡ್ಸ್, ಯೂಟ್ಯೂಬ್, ಆಪ್ ಸ್ಟೋರ್ಗಳಲ್ಲಿ ಇವುಗಳದೇ ದರ್ಬಾರು ಶುರು. ಯಾರನ್ನೇ ಕೇಳಿದರು, ಬಿಟ್ -ಕಾಯಿನ್ ಖರೀದಿ ಮಾಡು ಎಂದು ಪುಕ್ಕಟೆ ಪ್ರವಚನ ಸಹ ಕೊಡಲು ಶುರು ಮಾಡಿದರು. ಈಗ ಕೊಂಡರೆ ಮುಂದೆ ಬೆಲೆ ಹೆಚ್ಚಾದ ಮೇಲೆ ಮಾರಬಹುದು ಎನ್ನುವ ಒಂದೇ ಒಂದು ಆಸೆಗೆ ಎಷ್ಟೋ ಜನ ಖರೀದಿ ಕೂಡ ಮಾಡಿದರು. ಹಾಗಾದರೆ ಈ ಬಿಟ್-ಕಾಯಿನ್ ಅಂದರೆ ಏನು? ಬನ್ನಿ ತಿಳಿಯೋಣ. 

ಬಿಟ್-ಕಾಯಿನ್

ಬಿಟ್-ಕಾಯಿನ್ ಒಂದು ಕರೆನ್ಸಿ ಆದರೂ ಸಹ ಅದನ್ನು ವಹಿವಾಟಿಗಿಂತ ಹೆಚ್ಚಾಗಿ ಬಂಡವಾಳಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನಸೀಬು ಚೆನ್ನಾಗಿದ್ದರೆ ಲಾಭ, ಇಲ್ಲವಾದಲ್ಲಿ ನಷ್ಟ. ಕ್ರಿಪ್ಟೋ ಕರೆನ್ಸಿ ಎಂದು ಹೆಸರು ಇಟ್ಟುಕೊಂಡ ಮೇಲೆ, ಇದನ್ನು ವಹಿವಾಟುಗಳಲ್ಲಿ ಏಕೆ ಉಪಯೋಗಿಸಿಕೊಳ್ಳಲು ಆಗುತ್ತಿಲ್ಲ? ಎಂಬ ಪ್ರಶ್ನೆ ಮೂಡಿರಬಹುದು. ಅಸಲಿಗೆ ವಹಿವಾಟಿನ ಸರಳೀಕರಣಕ್ಕಾಗಿ ರೂಪುಗೊಂಡ ಈ ಕರೆನ್ಸಿಯ ಬಗ್ಗೆ ಕೆಲವೊಂದು ರಾಷ್ಟ್ರಗಳಲ್ಲಿ ಪೂರ್ಣ ವಿಶ್ವಾಸವಿಲ್ಲಾ. ಬರೀ  ಒಂದು ಕ್ಯೂಆರ್ ಕೋಡ್ ಇಟ್ಟುಕೊಂಡು, ಖರೀದಿ ಅಥವಾ ಆದಾಯವನ್ನು ಹೊಂದಬಹುದು. ಈ ಒಂದು ಕರೆನ್ಸಿಯನ್ನು , ಕಡೆಗೂ ಅಧಿಕೃತವಾಗಿ ಜಗತ್ತಿನ ಒಂದು ರಾಷ್ಟ್ರ ಒಪ್ಪಿಕೊಂಡಿದೆ. ಅದುವೇ "ಎಲ್- ಸಾಲ್ವಡಾರ (El Salvador) ". ಜಗತ್ತಿನ ಪ್ರಪ್ರಥಮ ಬಿಟ್-ಕಾಯಿನ್ ಕರೆನ್ಸಿಯನ್ನು ವಹಿವಾಟಿಗೆ ಬಳಸಲು ಸಮ್ಮತಿಸಿದ ದೇಶವಾಗಿದೆ.

ಎಲ್- ಸಾಲ್ವಡಾರ (El Salvador), ಮಧ್ಯ ಅಮೆರಿಕಾದ ಒಂದು ದೇಶ. ಒಂದು ಪುಟ್ಟ ದೇಶವಾಗಿದ್ದರು ಸಹ, ಈ ರಾಷ್ಟ್ರ, ಬಿಟ್-ಕಾಯಿನ್ ಅನ್ನು ಏಕೆ ಒಪ್ಪಿಕೊಂಡಿತು? ಹೇಗೆ ಒಪ್ಪಿಕೊಂಡಿತು? ಇದರ ವರ್ಗೀಕರಣ ಯಾವ ಥರ ಇದೆ? ಎಂದು ತಿಳಿಯುವುದೇ ಈ ಲೇಖನದ ಉದ್ದೇಶ.

ಎಲ್- ಸಾಲ್ವಡಾರ

ಎಲ್- ಸಾಲ್ವಡಾರ (El Salvador), ಹವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ. ಇಲ್ಲಿರುವ ಜನಸಂಖ್ಯೆಯ ಶೇ.70% ಜನರ ಬಳಿ ಯಾವುದೇ ರೀತಿಯ ಬ್ಯಾಂಕ್ ಖಾತೆಗಳಿಲ್ಲ. ಇದರಿಂದಾಗಿ ಇವರ ಬಳಿ ಉಳಿತಾಯವನ್ನು ಕೂಡಿಡಲು ಯಾವುದೇ ರೀತಿಯ ಒಂದು ಮಾಧ್ಯಮ ಉಪಸ್ಥಿತವಿರಲಿಲ್ಲ. ಬಿಟ್-ಕಾಯಿನ್ ಅನ್ನು ಅಧಿಕೃತ ಮಾಡಲು ಇದು ಒಂದು ಪ್ರಮುಖ ಕಾರಣವಾಯ್ತು.

ಕೋವಿಡ್-೧೯ರ ಕಾಲದಲ್ಲಿ ಈ ದೇಶ ಅತಿಯಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಅಲ್ಲಿನ ಸರಕಾರ ಆರೋಗ್ಯ ಇಲಾಖೆಯಲ್ಲಿ ಅಥವಾ ಸಾರ್ವಜನಿಕ ಸ್ವತ್ತಿನಲ್ಲಿ, ಯಾವುದೇ ರೀತಿಯ ಸರಿಯಾದ ಬಂಡವಾಳ ಹೂಡಿರಲಿಲ್ಲ. ಈ ಸಾಂಕ್ರಾಮಿಕ ರೋಗ ಬಂದಮೇಲೆ, ಅದರ ಪೆಟ್ಟು ಆರ್ಥಿಕತೆಯ ಮೇಲೆ ಜೋರಾಗಿ ಬಿತ್ತು. ಈ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರ ಯಾವುದಾದರು ಪರ್ಯಾಯ ಮಾರ್ಗ ಸಿಗಬಹುದೇ ಎಂದು ಪರಿಶೀಲಿಸುತ್ತಿರಬೇಕಾದರೆ, ಅವರಿಗೆ ಬಿಟ್-ಕಾಯಿನ್ ಆಶಾದಾತನಂತೆ ಕಂಡಿತು. ಅಲ್ಲಿ ಬಿಟ್-ಕಾಯಿನ್ ಬರಲು, ಇದು ಮತ್ತೊಂದು ಮುಖ್ಯ ಕಾರಣವಾಯ್ತು.

ಇಲ್ಲಿನ ನಾಗರಿಕರಲ್ಲಿ , ಹೆಚ್ಚಿನವರು ಹೊರದೇಶಗಳಲ್ಲಿ ಕೆಲಸ ಮಾಡುತ್ತಾರೆ. ಆಯಾ ದೇಶಗಳಿಂದ ತಮ್ಮ ದೇಶದಲ್ಲಿರುವ ಕುಟುಂಬಕ್ಕೆ ಹಣವನ್ನು ವರ್ಗಾಯಿಸುವಾಗ, ಬ್ಯಾಂಕ್ ಗಳು ತಮ್ಮ ಸೇವಾ ಶುಲ್ಕವನ್ನು ವಿಧಿಸುತ್ತಿದ್ದವು. ಇದರಿಂದಾಗಿ ಕುಟುಂಬಗಳಿಗೆ ನಷ್ಟ ಉಂಟಾಗುತ್ತಿತ್ತು. ಇದನ್ನು ಅರಿತ ಅಲ್ಲಿನ ಸರ್ಕಾರ, ಇಂತಹ ಸನ್ನಿವೇಶಗಳಲ್ಲಿ ಹಣವನ್ನು ಉಳಿಸುವಂತೆ ಮಾಡಲು ತೀರ್ಮಾನಿಸಿತು. ಬಿಟ್-ಕಾಯಿನ್ ಈ ಎಲ್ಲ ವೈಶಿಷ್ಟತೆಯನ್ನ ಹೊಂದಿತ್ತು. ಇದು ಮೂರನೇ ಕಾರಣ.

ಈ ಮೇಲಿನ ಎಲ್ಲಾ ಕಾರಣಗಳಿಂದ ಬಿಟ್-ಕಾಯಿನ್ ಗೆ ಅಧಿಕೃತ ವಹಿವಾಟಿನ ದರ್ಜೆ ಕೊಡಲಾಯಿತು.

ಆದರೆ ಇದೆಲ್ಲಾ ಒಂದೇ ದಿನದಲ್ಲಿ ಆದ ತೀರ್ಮಾನಗಳಲ್ಲ. ಇದರ ಮಿತಿ, ಆಳ ಮತ್ತು ಅವಲಂಬನೆಯನ್ನು ಪರೀಕ್ಷಿಸಲು ಸರ್ಕಾರ ಪ್ರಯೋಗ ಮಾಡಲು ನಿರ್ಧರಿಸಿತ್ತು. 

ಎಲ್- ಸಾಲ್ವಡಾರ ಪ್ರಯೋಗ: 

ಇಡೀ ದೇಶದ ಬದಲು, ದೇಶದ ಸಾಗರ ತೀರದಲ್ಲಿರುವ ಒಂದು ಸಣ್ಣ ನಗರವಾದ 'ಎಲ್- ಝೋನ್ ಟೇ' (El Zonte)ಯನ್ನು ಆರಿಸಲಾಯಿತು. ಈ ಊರು ಎಷ್ಟು ಸಣ್ಣದು ಎಂದರೆ ಇಲ್ಲಿ, ಕೇವಲ 3000 ಜನಸಂಖ್ಯೆ ಇದೆ. ಇಡೀ ಊರಿಗೆ ಇರುವುದು ಒಂದೇ ಏಟಿಎಂ, ಅದೂ ಸಹ ಬಿಟ್-ಕಾಯಿನ್ ಏಟಿಎಂ.ಇಲ್ಲಿಗೆ ಬಂಡ ಒಬ್ಬ ಅನಾಮಧೇಯ ವ್ಯಕ್ತಿಯೊಬ್ಬ ತನ್ನ ಬಳಿ ಇದ್ದ ಬಿಟ್-ಕಾಯಿನ್ ಅನ್ನು, ಎಲ್ಲರ ಡಿಜಿಟಲ್- ವಾಲೆಟ್ ನಲ್ಲಿ ದಾನ/ವರ್ಗಾವಣೆ ಮಾಡಿದ. ಇಲ್ಲಿಂದ ಶುರುವಾಯ್ತು ಬಿಟ್-ಕಾಯಿನ್ ನ ಕಥೆ. ಅದರ ಜತೆ ಜತೆಗೆ, ಆ ದೇಶದಲ್ಲಿ ಬಿಟ್-ಕಾಯಿನ್ ಆಧಾರಿತ ವಾಲ್ಲೆಟ್ಗಳಾದಂತಹ "ಸ್ಟ್ರೈಕ್" ಜನಜನಿತ ಆಗಿದ್ದರಿಂದ, ಈ ಊರಿನಲ್ಲಿ ಒಂದು ಪ್ರಯೋಗ ಮಾಡಿ ನೋಡೋಣ ಎಂದು, ಸರ್ಕಾರ ಬಿಟ್-ಕಾಯಿನ್ ಗೆ ಅಧಿಕೃತ ಸಮ್ಮತಿ ನೀಡಿದರು. ಇದರಿಂದಾಗಿ, ಅಲ್ಲಿನ ವಹಿವಾಟುಗಳಲ್ಲಿ ಬಿಟ್-ಕಾಯಿನ್ ಬಳಕೆ ಆಗಲು ಶುರುವಾಯ್ತು. ಸರ್ಫಿಂಗ್ ನಂತಹ ಮೋಜಿನ ಕ್ರೀಡೆಗಳಿಂದ ಹಿಡಿದು, ದಿನಸಿ ಕೊಳ್ಳುವವರೆಗೆ ಇದರ ಬಳಕೆ ಶುರುವಾಯ್ತು. ನೋಟುಗಳ ಅವಶ್ಯಕತೆ ಬಿದ್ದಲ್ಲಿ, ಜನ ಬಿಟ್-ಕಾಯಿನ್ ಏಟಿಎಂ ಗಳಿಗೆ ಹೋಗಿ, ಬಿಟ್-ಕಾಯಿನ್ ಬದಲಿಗೆ ಡಾಲರ್ಸ್ ಅನ್ನು ಪಡೆಯುತ್ತಿದ್ದರು.

ಈ ಪ್ರಯೋಗದ ಬಗ್ಗೆ ಕೇಳಿಪಟ್ಟ ಪತ್ರಕರ್ತರು ಅಲ್ಲಿಗೆ ಹೋಗಿ ಸಂಶೋಧನೆ ಮಾಡಿದರು. ಜನ ಬಿಟ್-ಕಾಯಿನ್ ಬಳಕೆ ಮಾಡುವುದರಿಂದ ಉಳಿತಾಯ ಮಾಡಲು ಆರಂಭಿಸಿದ್ದಾರೆ ಎಂದು ಉಲ್ಲೇಖಿಸಿದರು. ಬಿಟ್-ಕಾಯಿನ್ ಮಾರ್ಕೆಟ್ ಪ್ರಕಾರ ಏರಿಳಿತವಿದ್ದರೂ ಸಹ, ಅವರು ಇದನ್ನು ಉಳಿತಾಯದ ಮಾರ್ಗವೆಂದೇ ಒಪ್ಪಿಕೊಂಡು ಬಿಟ್ಟಿದ್ದರು. ಬಿಟ್-ಕಾಯಿನ್ ವರ್ಗಾವಣೆ ಸಹ ಬಹಳ ಸುಲಭವಾಗಿ ಇರುವುದರಿಂದ ಅವರಿಗೆ ಇದರ ಬಳಕೆ ಲಾಭವನ್ನೇ ನೀಡಿತ್ತು.

ಬಿಟ್-ಕಾಯಿನ್ ಮಸೂದೆ  ಮತ್ತು ಸರ್ಕಾರದ ನೀರಿಕ್ಷೆಗಳು:

ಈ ಒಂದು ಪ್ರಯೋಗದ ಯಶಸ್ಸನ್ನು ಕಂಡ ಅಲ್ಲಿನ ಸರ್ಕಾರ, ಇದರ ಸಫಲತೆಯನ್ನು ದೇಶದಲ್ಲೆಲ್ಲಾ ಹರಡುವಂತೆ ಮಾಡಲು, ಜೂನ್ 2021 ರಲ್ಲಿ "ಬಿಟ್-ಕಾಯಿನ್ ಮಸೂದೆಯನ್ನು" ಜಾರಿಗೆ ತಂದರು. ಇದರ ಅಂಗವಾಗಿ ದೇಶದಲ್ಲಿ 200 ಬಿಟ್ -ಕಾಯಿನ್ ಏಟಿಎಂ ಗಳನ್ನ ಸ್ಥಾಪಿಸಲಾಯ್ತು.

ಅಲ್ಲಿನ ಸರ್ಕಾರ ಇದರ ಮೇಲೆ ತುಂಬಾ ನೀರಿಕ್ಷೆಗಳನ್ನುಇಟ್ಟುಕೊಂಡಿದೆ. ಕೋವಿಡ್-೧೯ ನಿಂದ ಆಗಿರುವ ಆರ್ಥಿಕ ಸಂಕಷ್ಟ ಇದರಿಂದ ಕಡಿಮೆಯಾಗಬಹುದು. ಮತ್ತು ಸಂಕಷ್ಟದಿಂದ ಹೊರಬರಲು ಇದು ತುಂಬಾ ಸಹಾಯಕವಾಗಲಿದೆ ಎಂದು ಬಲವಾಗಿ ನಂಬಿದೆ. ಇದರಿಂದಾಗಿ ಬಿಟ್-ಕಾಯಿನ್ ಮುಖಾಂತರ ದೇಶದೊಳಗೆ ಬಂಡವಾಳಗಳು ಹರಿದು ಬರಲಿ ಎಂಬುದು ಇವರ ಆಶಯ. 

ಸರ್ಕಾರದ ಮತ್ತೊಂದು ನೀರೀಕ್ಷೆ ಏನೆಂದರೆ, ಬ್ಯಾಂಕಿಂಗ್ ವಲಯದಿಂದ ದೂರ ಉಳಿದಿದ್ದ ಅಲ್ಲಿನ ಜನರು, ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲಿ ಎಂದು. ಮೂರನೆಯದಾಗಿ, ಬಿಟ್-ಕಾಯಿನ್ ಒಂದು ಭವಿಷ್ಯತ್ ತಂತ್ರಜ್ಞಾನ ಆಗಿರುವುದರಿಂದ, ಇದನ್ನು ಅಳವಡಿಸಿಕೊಂಡ ಮಾಡಲ್ ರಾಷ್ಟ್ರ ಎಂಬ ಹೆಗ್ಗಳಿಕೆ ಮುಖಾಂತರ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳುವ ನೀರಿಕ್ಷೆ ಸಹ ಇದೆ.

ಮೇಲಿನ ಈ ಎಲ್ಲ ಕಾರಣಗಳಿಂದ ಅಲ್ಲಿ ಣೀಟ್-ಕಾಯಿನ್ ಅನ್ನು ಅಧಿಕೃತ ಮಾಡಲಾಯಿತು. 

ಮೇಲಿನ ಎಲ್ಲವು ಬಿಟ್-ಕಾಯಿನ್ ನ ಒಳ್ಳೆಯ ಮುಖ ಅಷ್ಟೇ ತೋರಿಸುತ್ತದೆ. ಆದರೆ ಇದರಲ್ಲೂ ಸಹ ಹಲವಾರು ನಕಾರಾತ್ಮಕ ಅಂಶಗಳಿವೆ. ಇವುಗಳು ಈ ದೇಶದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವಷ್ಟು ದೊಡ್ಡದಾಗಿವೆ. 

ಬಿಟ್-ಕಾಯಿನ್ ನ ಪರಿಣಾಮಗಳು:

ಮೊದಲನೆಯದಾಗಿ, ಬಿಟ್-ಕಾಯಿನ್ ಬೆಲೆ ಏರಿಳಿತಗಳು. ಬಿಟ್-ಕಾಯಿನ್ ಅನ್ನು ನಂಬಿ ಅಲ್ಲಿನ ಜನ ಉಳಿತಾಯ ಮಾಡಲು ಜಾಸ್ತಿ ಬಿಟ್-ಕಾಯಿನ್ ಕುಡಿ ಇಡುವುದು ಸಹಜ. ಒಂದು ವೇಳೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದ್ದರೆ ಒಳ್ಳೆಯದು. ಜನ ತಮ್ಮ ಹಣ ದುಪ್ಪಟ್ಟು ಆಗಿದ್ದನ್ನು ನೋಡಿ ಖುಷಿ ಪಡುತ್ತಾರೆ. ಆದರೆ ಅದೇ ಎಲ್ಲಾದ್ರೂ ಕಡಿಮೆ ಆದರೆ, ಕೂಡಿಟ್ಟ ಬೆಳೆಯ ಅರ್ಧಕ್ಕೆ ಬಂದು ನಿಂತರೆ, ಅವರಿಗೆ ನಷ್ಟ ಉಂಟಾಗುತ್ತದೆ. ಮೊದಲೇ ಬಡ ರಾಷ್ಟ್ರಗಳಲ್ಲಿ ಒಂದಾದ ಎಲ್- ಸಾಲ್ವಡಾರನ ಸ್ಥಿತಿ ಗಂಭೀರವಾಗುತ್ತದೆ.

ಎರಡನೇಯದಾಗಿ, ಅನಾಮಧೇಯತೆ. ಬಿಟ್-ಕಾಯಿನ್ ನ ವೈಶಿಷ್ಟತೆಯೇ ಅದರ ಅನಾಮಧೇಯ ಕಾರ್ಯಸೂತ್ರ. ಒಬ್ಬರ ವಾಲೆಟ್ ಗೆ ಯಾರು ಕಾಯಿನ್ ವರ್ಗಾವಣೆ ಮಾಡಿದರು? ಎಷ್ಟು ವರ್ಗಾವಣೆ ಮಾಡಿದರು? ಎಲ್ಲಿಂದ ವರ್ಗಾವಣೆ ಮಾಡಿದರು? ಯಾವುದಕ್ಕಾಗಿ ವರ್ಗಾವಣೆ ಮಾಡಿದರು? ಎಂಬುದನ್ನ ಕಂಡು ಹಿಡಿವುದು ಸ್ವಲ್ಪ ಕಷ್ಟ. ಸರ್ಕಾರ ಮುಂದಿನ ದಿನಗಳಲ್ಲಿ ಇದರ ಬಗ್ಗೆ ವಿಚಾರಣೆ ಮಾಡಲು ನಿಂತಾಗ, ಇದರ ವೈಶಿಷ್ಟತೆಯೇ ವಿಘ್ನವಾಗಿ ನಿಲ್ಲುವುದಂತೂ ಶತಸಿದ್ಧ.

ಮೂರನೆಯದಾಗಿ, ತೆರಿಗೆಯಿಂದ ತಪ್ಪಿಸಿಕೊಳ್ಳುವುದು. ಮೊದಲೇ ಹೇಳಿದಂತೆ, ಬಿಟ್-ಕಾಯಿನಬಳ್ಳಿ ಅನಾಮಧೇಯತೆ ತುಂಬಾ ಇದೆ. ಎಲ್- ಸಾಲ್ವಡಾರ ಇದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸದಿದ್ದರೆ, ಮತ್ತು ಸರಿಯಾದ ತೆರಿಗೆ ರಚನೆಯನ್ನು ಮಾಡದಿದ್ದರೆ, ಈ ಸೌಲಭ್ಯ ತೆರಿಗೆ ವಂಚಕರಿಗೆ ವರದಾನವಾಗಲಿದೆ. 

ಸರ್ಕಾರದ ಈ ನಿರ್ಧಾರ ಮತ್ತು ಜನರ ಪ್ರತಿಕ್ರಿಯೆ:

ಹಾಗೆ ನೋಡಿದರೆ, ಎಲ್- ಸಾಲ್ವಡಾರನಲ್ಲಿ ಎಲ್ಲರೂ ಸರ್ಕಾರದ ಈ ನಿರ್ಧಾರದೊಂದಿಗೆ ಸಹಮತಿಯನ್ನು ಹೊಂದಿಲ್ಲ. ಕೆಲವು ಜನ ಈ ಮಸೂದೆಯನ್ನು ವಿರೋಧಿಸಿ, ಬೀದಿಗೆ ಇಳಿದು ಚಳುವಳಿಯನ್ನು ಸಹ ಮಾಡಿದ್ದಾರೆ. ಬೆಲೆ ಏರಿಳಿತವಿರುವ ಈ ಕರೆನ್ಸಿ ನಮಗೆ ಬೇಡ ಎಂದು ತಿರಸ್ಕರಿಸಿದ್ದಾರೆ. ಮತ್ತೊಂದೆಡೆ, ಎಷ್ಟೋ ಜನರ ಬಳಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಸಹ ಇಲ್ಲ. ಬಿಟ್-ಕಾಯಿನ್ ಗೆ ಬೇಕಾದ ಪ್ರಮುಖ ಪರಿಕರೇ ಇಲ್ಲದೆ ಮೇಲೆ ಈ ಮಸೂದೆಯನ್ನು ಇಟ್ಟುಕೊಂಡು ಹೇಗೆ ವ್ಯವಹಾರ ಮಾಡಬೇಕು ಎಂದು ವಾದಿಸುತ್ತಿದ್ದಾರೆ. ಇದರಿಂದಾಗಿ  ವಾಣಿಜ್ಯ ವ್ಯವಹಾರ  ಸರ್ಕಾರದ ನಿಲುವು, ಅಮೂಲ್ಯವಾಗಿಬಿಡುತ್ತದೆ.

ಆದರೆ ಅಲ್ಲಿನ ಸರ್ಕಾರ, ಈ ಒಂದು ಮಸೂದೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂದರೆ, 20 ಬಿಲಿಯನ್ ಡಾಲರ್ಸ್ ಮೌಲ್ಯದ 400 ಬಿಟ್-ಕಾಯಿನ್ ಗಳನ್ನ ಅದು ಈಗಾಗಲೇ ಖರೀದಿ ಮಾಡಿದೆ. ಸರ್ಕಾರದ ಈ ಯೋಜನೆಗೆ ಸಾಥ್ ಕೊಡುವವರಿಗೆ, 20 ಡಾಲರ್ ಮೌಲ್ಯದ ಬಿಟ್-ಕಾಯಿನ್ ಗಳನ್ನೂ ಉಚಿತವಾಗಿ ನೀಡುತ್ತಿದೆ. ಸರ್ಕಾರ ಪೂರ್ಣ ಪ್ರಮಾಣದ ಉತ್ಸಾಹ ತೋರಿಸಿದರೂ, ಅಲ್ಲಿನ ಜನರಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ಇಷ್ಟೆಲ್ಲಾ ತಿಳಿದ ಮೇಲೆ ನಮಗೆ ಅಂತ್ಯದಲ್ಲಿ ಒಂದು ಪ್ರಶ್ನೆ ಕಾಡುತ್ತದೆ. ಎಲ್- ಸಾಲ್ವಡಾರನ ಈ ಯೋಜನೆ ಕಾರ್ಯಸಾಧ್ಯವಾಗುವುದೇ? ಎಂದು. ಭವಿಷ್ಯಾತ್ಮಕ ಕರೆನ್ಸಿಯನ್ನು ಜಾರಿಗೆ ತರುವುದು ಸಣ್ಣ ಮಾತಲ್ಲ. ಅದಕ್ಕೆ  ಎಲ್- ಸಾಲ್ವಡಾರ ಅನ್ನು ಪ್ರಶಂಸಿಸಲೇ ಬೇಕು. ಸರ್ಕಾರ ಉತ್ಸಾಹದಿಂದ್ದಿದ್ದರೂ ಸಹ, ಜನರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಆದರೂ, ಈ ದೇಶದ ದಹಿರ್ಯವನ್ನು ಮೆಚ್ಚಲೇ ಬೇಕು. ಇದು ಒಂದು ಶುರುವಾತಿನ ಹೆಜ್ಜೆ. ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯಿಂದ, ಈ ದೇಶ ಬೇರೆ ದೇಶಗಳಿಗೂ ಮಾದರಿಯಾಗಿದೆ. 

ಈ ಆಗುಹೋಗುಗಳನ್ನು ಕಂಡಂತಹ "ಪನಾಮಾ ದ್ವೀಪ" ಸಹ, ಪ್ರೇರಿತಗೊಂಡು, ಬಿಟ್-ಕಾಯಿನ್ ಬಳಕೆಯ ಪರವಾಗಿ, ಮಸೂದೆಯೊಂದನ್ನು ಹೊರತರುವುದರಲ್ಲಿದೆ. ಇದರಿಂದಾಗಿ,  ಎಲ್- ಸಾಲ್ವಡಾರ ಅನ್ನು ಹಿಂಬಾಲಿಸುವವರ ಪಟ್ಟಿಯು ಸಹ ಬೆಳೆಯುತ್ತ ಹೋಗುತ್ತಿದೆ. ಆದರೆ  ಎಲ್- ಸಾಲ್ವಡಾರನ ಮೂರರಿಂದ- ನಾಲ್ಕು ವರ್ಷಗಳ ಪ್ರಯೋಗದ ನೈಜ ಫಲಿತಾಂಶಗಳೇ, ಇದರ ನೈಜ ಸ್ವರೂಪ ತಿಳಿಸುತ್ತದೆ. 

ಪ್ರತಿಯೊಂದು ದೇಶದ ಆಚಾರ-ವಿಚಾರ ಭಿನ್ನವಾಗಿರುತ್ತದೆ. ಅವುಗಳಲ್ಲಿನ ಆರ್ಥಿಕ ಸ್ಥಿತಿ ಬೇರೆಯಾಗಿರುತ್ತದೆ. ಹಾಗಾಗಿ, ಬಿಟ್-ಕಾಯಿನ್ ಬಳಕೆಯ ನೈಜ ಪ್ರವೃತ್ತಿಯನ್ನು ಅರಿಯುವುದು ಇಲ್ಲಿಯವರೆಗೆ ಸಾಧ್ಯವಿಲ್ಲ.

ಮೂಲಗಳು :

Wall Street Journal

Mint

India Today

NDTV

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು