ಚೀನಾ ನಿಜವಾಗಲೂ ಇಡೀ ಜಗತ್ತಿಗೆ ಖಳನಾಯಕನೇ? ಅದು ಬೇಕಂತಲೇ ಆಟ ಆಡುತ್ತಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಆಶಯ, ಈ ಲೇಖನದ್ದು. ಮುಂದೆ ಓದಿರಿ.
ಶಾಪಿಂಗ್ ಅಂತ ಹೋದಾಗ, ಕೆಲವೊಂದು ವಸ್ತುಗಳು ಇಲ್ಲದೆ ಇರುವುದನ್ನ ನೀವು ಗಮನಿಸಿರಬಹುದು. ಆನ್ಲೈನ್ ಅಲ್ಲಿ ಎಲೆಕ್ಟ್ರಾನಿಕ್ಸ್ ಸಾಮಾನುಗಳನ್ನ ಖರೀದಿ ಮಾಡಲು ಹೋದಾಗ, ಅವುಗಳ ಡೆಲಿವರಿ ತಡವಾಗಿ ಇರುವುದನ್ನ ಗಮನಿಸಿರಬಹುದು. ಇದೆಲ್ಲಾ ನೋಡಿದಾಗ ನಿಮಗೆ ಬರುವ ಪ್ರಶ್ನೆ ಎಂದರೆ, ಇತ್ತೀಚಿನ ದಿನಗಳಲ್ಲಿ ಈ ಥರದ ಸನ್ನಿವೇಶಗಳುನಾವು ಏಕೆ ಎದುರಿಸುತ್ತಿದ್ದೇವೆ? ಎಂದು. ಅದರ ಉತ್ತರ "ಚೀನಾ".
ಇದು ಚೀನಾ ವಿರುದ್ಧದ ಪಿತೂರಿಯ ಮಾತಲ್ಲ. ಇದು ಸರಕು ವಿತರಣಾ/ ಪೂರೈಕೆ ಜಾಲದ ಬಿಕ್ಕಟ್ಟಿನ ವಿಷಯವಾಗಿದೆ.
| ಚೀನಾ ವ್ಯಾಪಾರಗಳಿಗೆ ವರವೋ ಶಾಪವೋ |
ಸಮಸ್ಯೆಯ ಮೂಲ:
ಈ ಸಮಸ್ಯೆಯ ಮೂಲ ಶುರುವಾಗಿದ್ದು, 2020ರಲ್ಲಿ. ಚೀನಾದಲ್ಲಿ ಮೊದಲ ಕರೋನ ಸ್ಫೋಟಗೊಂಡ ಕಾರಣ, ಇಡೀ ದೇಶವೇ ಬೀಗ ಹಾಕಿಕೊಂಡು ಕುಳಿತುಕೊಂಡಿತು. ಹಾರ್ವರ್ಡ್ ಬಿಸಿನೆಸ್ ರಿವ್ಯೂ ಅವರ ವರದಿ ಪ್ರಕಾರ, "ಜಗತ್ತಿನ ಅತೀ ಚಿಕ್ಕ ಕಂಪನಿಗಳಿಂದ ಹಿಡಿದು ದೊಡ್ಡ ಕಂಪನಿಗಳವರೆಗೂ, ಎಲ್ಲವೂ ಸಹ ಚೀನಾ ಮೇಲೆ ವಿಪರೀತ ಅವಲಂಬಿತವಾಗಿವೆ. ಚೀನಾವನ್ನು ನಂಬಿದ್ದ ಈ ಕಂಪನಿಗಳು ಈಗ ತುಂಬಾ ಇಕ್ಕಟ್ಟಿನ ಪರಿಸ್ಥಿತಿಯಲ್ಲಿವೆ" ಎಂದು ವರದಿ ಮಾಡಿತು.
ಚೀನಾ ಜಗತ್ತಿನ 28.7% ಸರಕುಗಳನ್ನು ಉತ್ಪಾದನೆ ಮಾಡುತ್ತದೆ. ಪ್ರತಿ ವರ್ಷ ಸುಮಾರು 2.6 ಟ್ರಿಲಿಯನ್ ಡಾಲರ್ ಮೌಲ್ಯದ ರಫ್ತುಗಳನ್ನು ಸಹ ಮಾಡುತ್ತದೆ. ಆಟಿಕೆ, ಮೊಬೈಲ್ ಗಳು, ಲ್ಯಾಪ್ಟಾಪ್ , ಮೇಕ್ಅಪ್, ಉಡುಪುಗಳು ಹೀಗೆ ಅನೇಕಾನೇಕ ರೀತಿಯ ಸರಕುಗಳನ್ನು ತಯಾರಿಸಿ ಬೇರೆ ಬೇರೆ ದೇಶಗಳಿಗೆ ಮಾರಾಟ/ರಫ್ತು ಮಾಡುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ, ಎಂದು ಹೇಳುವಂತೆ, ಚೀನಾ ಕೈ ತೂರದ ವಿಭಾಗಗಳೇ ಇಲ್ಲ.
ಕೇವಲ ಚೀನಾ ಏಕೆ?
ಚೀನಾದಲ್ಲಿ ಅಗ್ಗವಾದ ಮಾನವ ಸಂಪನ್ಮೂಲವಿದೆ. ಅತೀ ಕಡಿಮೆ ತೆರಿಗೆ ಇದೆ. ಈ ಎಲ್ಲ ಸದಾವಕಾಶಗಳನ್ನು ನೋಡಿಕೊಂಡು, ಜಗತ್ತಿನ ಸುಮಾರು ಕಂಪನಿಗಳು ಕಣ್ಣು ಮುಚ್ಚಿ ಇಲ್ಲಿ ಹೂಡಿಕೆ ಮಾಡಲು ಶುರು ಮಾಡಿದವು. ಇನ್ನು ಕೆಲವು ಅಲ್ಲಿರುವ ಕಂಪನಿಗಳ ಜತೆ ಕೈ ಜೋಡಿಸಿದವು. ಈ ಒಂದು ಅಂಶದಿಂದ, ಚೀನಾ ಜಗತ್ತಿನ ಫ್ಯಾಕ್ಟರಿಯಾಗಿ ಪರಿವರ್ತನೆಗೊಂಡಿತು. 2020ರಲ್ಲಿ, ಚೀನಾದ ಎಲ್ಲ ಕಂಪನಿಗಳು ಮುಚ್ಚಿಕೊಂಡ ಕಾರಣ, ಗ್ರಾಹಕರಿಗೆ ಉತ್ಪನ್ನಗಳನ್ನು ರಫ್ತು ಮಾಡಲು ಚೀನಾದ ಕಂಪನಿಗಳ ಕೈಯಲ್ಲಿ ಆಗಲಿಲ್ಲ.
14th ಫೆಬ್ರವರಿ 2020 ರಂದು, ಫಿಯಟ್ ಕ್ರಿಸ್ಲರ್ ಆಟೋಮೊಬೈಲ್ ಅಧಿಕೃತ ಘೋಷಣೆಯೊಂದನ್ನು ಮಾಡಿತು. ಸೆರ್ಬಿಯಾದಲ್ಲಿ ಇರುವ ತನ್ನ ಘಟಕವನ್ನು, ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡಿತ್ತು. ಚೀನಾದಿಂದ ಬರಬೇಕಿದ್ದ ಸರಕುಗಳು, ಬರದೇ ಇರುವ ಕಾರಣ ಅವರ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕಾಯ್ತು. ಇದೆ ಕಾರಣಕ್ಕಾಗಿ, ಅದೇ ತಿಂಗಳಲ್ಲಿ ಹುಂಡೈ ಸಹ ಕೊರಿಯಾದಲ್ಲಿರುವ ತನ್ನ ಘಟಕಗಳನ್ನು ಸ್ಥಗಿತಗೊಳಿಸಿತು.
ಕರೋನ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಡಲು ಸಹ ಶುರುವಾಯ್ತು. ಫ್ಯಾಕ್ಟರಿಯ ಕಾರ್ಮಿಕರು ಕೊರೊನದಿಂದಲೋ, ಅಥವಾ ಕ್ವಾರಂಟೈನ್ ಅಂತಹ ನಿಯಮಗಳಿಂದಲೋ, ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಫ್ಯಾಕ್ಟರಿಗಳು ಸಹ ಉತ್ಪಾದನೆಯನ್ನು ಮಾಡಲಿಲ್ಲ. ಇದೆಲ್ಲದರಿಂದ, ಸರಕು ಪೂರೈಕೆಯ ಜಾಲ ದೊಡ್ಡ ಹೊಡೆತ ತಿಂದಿತು.
ಸರಕು ಮಾರಾಟ ಜಾಲ:
ಸರಕು ಮಾರಾಟ ಜಾಲವೇ ಹೀಗೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ವಸ್ತುಗಳನ್ನು ಕೊಡುವುದಕ್ಕಾಗಿ ಮತ್ತು ಹಣ ಹಾಗೂ ಸಮಯವನ್ನು ಉಳಿಸುವುದಕ್ಕಾಗಿ, ಹಲವಾರು ಕಂಪನಿಗಳು ಬಿಡಿ ಭಾಗಗಳನ್ನು ಒಂದೇ ಕಡೆ ತಯಾರಿಸದೆ, ಉಪ ತಯಾರಕರ ಮೊರೆ ಹೋಗುತ್ತಾರೆ. ಇಂತಹ ಉಪ ತಯಾರಕರಿಂದ ಬಂದಂತಹ ಬಿಡಿ ಭಾಗಗಳನ್ನು ಜೋಡಿಸಿ, ಕೊನೆಗೆ ಸರಕುಗಳನ್ನಾಗಿ ಮಾರುತ್ತಾರೆ. ಉದಾಹರಣೆಗೆ, ರಾಮನಗರ ರೇಷ್ಮೆ ಹುಳುವಿನ ಸಾಕಣೆಗೆ ಪ್ರಸಿದ್ಧ. ಅಲ್ಲಿ ಹೆಚ್ಚು ಬೆಳೆಗಾರರು ಇರುವುದರಿಂದ,ಅದು ಉಪ ತಯಾರಿಕಾ ಕೇಂದ್ರ ಆಗುತ್ತದೆ. ಆದ್ರೆ ಅದರಿಂದ ರೇಷ್ಮೆ ಸೀರೆ ಬರುವುದಿಲ್ಲ. ಅದನ್ನು ಮತ್ತೊಂದೆಡೆ ಮಾರುತ್ತಾರೆ. ಅದು ರೇಷ್ಮೆ ನೂಲನ್ನು ತಯಾರಿಸುವವ ಘಟಕಕ್ಕೆ ತಗೆದುಕೊಂಡು ಹೋಗಿ, ನೂಲನ್ನು ತಯಾರು ಮಾಡುತ್ತಾರೆ. ಅವರು ಅದನ್ನು ಮತ್ತೆ ನೇಯ್ಗೆಗೆ ಮಾರುತ್ತಾರೆ. ಉದಾಹರೆಣೆಗೆ, ಮಗ್ಗಗಳು ಬರೀ ಇಳಕಲ್ ನಲ್ಲಿ ಇವೆ ಅಂದುಕೊಳ್ಳಿ. ಆಗ ಆ ನೂಲು ಇಳಕಲ್ ಗೆ ಬಂದು, ಮಗ್ಗದಲ್ಲಿ ನೇಯ್ದು, ನಂತರ ಸೀರೆಯಾಗಿ ಪರಿವರ್ತನಗೊಳ್ಳುತ್ತದೆ. ಆದರೆ, ರಾಮನಗರದ ವ್ಯವಸಾಯದವರು, ಧರಣಿ ಕೂತರೆ, ಅಥವಾ ಅದನ್ನು ಸಾಗಿಸುವ ಟ್ರಕ್ ಚಾಲಕರು,ಗಾಡಿ ಬಿಟ್ಟು ಹೋರಾಟಕ್ಕೆ ಇಳಿದರೆ, ಅಥವಾ ಮಗ್ಗದವರು ಕೈ ಚೆಲ್ಲಿ ಕುಳಿತರೆ, ಕೊನೆಯ ಉತ್ಪನ್ನವಾದ ಸೀರೆಯ ಉತ್ಪಾದನೆ ನಿಲ್ಲುತ್ತದೆ. ಚೀನಾದ ವಿಷಯದಲ್ಲೂ ಸಹ ಇದೆ ಆಗಿದ್ದು. ಚೀನಾ ಉಪ ತಯಾರಕ ಆಗಿದ್ದುದರಿಂದ, ಅಲ್ಲಿ ನಡೆಯುತ್ತಿದ್ದ ಕೆಲಸ ನಿಂತ ಪರಿಣಾಮ, ಜಾಗತಿಕವಾಗಿ ಎಲ್ಲೆಡೆ ಬಿಕ್ಕಟ್ಟು ಉಂಟಾಯ್ತು.ಸಮಸ್ಯೆಯ ಮೊದಲನೇ ಅರಿವು:
ಕರೋನ ಮಹಾಮಾರಿಯ ಕಾರಣ ಜನ ಮನೆಯಿಂದ ಕೆಲಸ ಮಾಡುವಂತೆ ಆಯ್ತು. ಮನೆಯಲ್ಲೇ ಕೆಲಸ ಶುರುವಾದ ನಂತರ, ಜನ ಕೆಲಸ ಮಾಡಲು ಅಗತ್ಯವಿರುವ ಸಾಮಾನುಗಳಿಗಾಗಿ ಮುಗಿಬಿದ್ದರು. ಲ್ಯಾಪ್ಟಾಪ್, ಮೇಜು, ಮೊಬೈಲ್ ಫೋನ್, ಆಸನಗಳು ಹೀಗೆ ಅನೇಕ ರೀತಿಯ ಸರಕುಗಳನ್ನು ಖರೀದಿಸಲು ಮುಂದೆ ಬಂದರು. ಇಲ್ಲಿ ಬೇಡಿಕೆ ಹೆಚ್ಚಾಯ್ತು. ಆದರೆ ಅದಕ್ಕೆ ತಕ್ಕಂತೆ ಸರಬರಾಜು ಉತ್ಪಾದನಾಕಾರರಿಗೆ ಇರಲಿಲ್ಲ. ಅಂಗಡಿಗಳಲ್ಲಿ ಇದ್ದ ಮುಂಗಡ ಸರಕುಗಳು ಬಿಕಾರಿಯಾದವು. ಕೊನೆಗೆ, ಸರಬರಾಜು ಇಲ್ಲದ ಕಾರಣ, ಅಂಗಡಿಗಳು ಸರಕುಗಳನ್ನು ಮಾರಲು ಆಗಲಿಲ್ಲ. ಇದರಿಂದಾಗಿ ಎಲ್ಲೆಡೆಯಲ್ಲೂ "ಸರಕುಗಳು ಖಾಲಿಯಾಗಿವೆ" ಎಂಬ ಫಲಕಗಳು ತೆಲೆಯೆತ್ತಲು ಶುರುವಾದವು. ಮಾರುಕಟ್ಟೆಯು ಗ್ರಾಹಕರ ಈ ಹೆಚ್ಚಿನ ಬೇಡಿಕೆಯನ್ನು ಸರಿದೂಗಳು ಇನ್ನು ತಯಾರಾಗಿರಲಿಲ್ಲ.ಚೀನಾದೆಡೆಗೆ ಬೊಟ್ಟು ತೋರಿಸಲು ಕಾರಣಗಳು:
ಜಗತ್ತಿನಲ್ಲಿ ಆಗುವ ರಫ್ತಿನಲ್ಲಿ 90%ರಷ್ಟು ಸಮುದ್ರದ ಕಾರ್ಗೋದಿಂದ ಆಗುತ್ತದೆ. ಅರ್ಥಶಾಸ್ತ್ರದ ಪ್ರಕಾರ, ಬೇಡಿಕೆ ಹೆಚ್ಚಾದಂತೆ, ಆ ಸರಕಿಗೆ ಸಂಬಂಧಪಟ್ಟ ಎಲ್ಲ ಸೇವೆಗಳ ಬೆಲೆ ಸಹ ಹೆಚ್ಚಾಗುತ್ತದೆ. ಇಂತಹ ಬೇಡಿಕೆಯ ಸಮಯದಲ್ಲಿ, ಹಡಗಿನ ಮೂಲಕ ಆಗುವ ಸರಬರಾಜಿನ ಬೆಲೆಗಳು 85.5%ರಷ್ಟು ಹೆಚ್ಚಾದವು. ಕಾರ್ಗೋದಿಂದ ಆಗುವ ಡೆಲಿವರಿ, 70ದಿನಗಳಷ್ಟು ಹೆಚ್ಚಾದವು. ಈ ತರಹ ಒಮ್ಮೆಲೇ ಬೇಡಿಕೆ ಹೆಚ್ಚಾದಂತೆ, ಕಾರ್ಗೋ ಕಂಟೈನರ್ಸ್ ಗಳು ಬಂದರಿನಲ್ಲಿ ತುಂಬತೊಡಗಿದವು, ಪ್ರಮುಖವಾಗಿ ಅಮೆರಿಕಾದ ಪಶ್ಚಿಮ ಬಂದರುಗಳಲ್ಲಿ. ಆದರೆ, ಈ ಭಾರಿ ಬೇಡಿಕೆಯನ್ನು ಸರಿದೂಗಲು ಅಮೆರಿಕಾದ ಬಂದರಿನಲ್ಲಿ ಅವಶ್ಯವಿರುವ ಕಾರ್ಮಿಕರು ಇರಲಿಲ್ಲ. ಇದರಿಂದಾಗಿ ಸಮುದ್ರದಲ್ಲೇ ಎಷ್ಟೋ ನೌಕೆಗಳು ಲಂಗರು ಹಾಕಿ ಕಾಯಬೇಕಾಯ್ತು. ತುಂಬಿದ ಕಂಟೈನರ್ಗಳು ಇನ್ನೂ ಖಾಲಿಯಾಗದ ಕಾರಣ, ಮತ್ತು ರಫ್ತಿನ ಪ್ರಮಾಣ ಜಾಸ್ತಿ ಇರುವ ಕಾರಣ, ಎಲ್ಲೆಡೆ ಕಂಟೇನರ್ಗಳಿಗೆ ಭಾರಿ ಬೇಡಿಕೆ ಬಂತು. ಆದರೆ ಈಗ ಕಂಟೇನರ್ಗಳ ಆಭಾವ ಕಾಡುತಿತ್ತು. ಏಕೆಂದರೆ, ವಿಶ್ವದಲ್ಲೇ ಅತಿ ಹೆಚ್ಚು ಕಂಟೇನರ್ ಉತ್ಪಾದಿಸುವ ಚೀನಾ. ಈಗ ಅದು ತನ್ನನ್ನು ತಾನು ಬೀಗ ಹಾಕಿಕೊಂಡು ಕುಳಿತಿತ್ತು.
2020ರಲ್ಲಿ ಕರೋನ ಕಾರಣದಿಂದ ಪಿಪಿಇ ಕಿಟ್ ಗಳ ಅಭಾವ ಎಲ್ಲೆಡೆ ಕಾಡಿತು. ಇಡೀ ಜಗತ್ತಿನಲ್ಲಿ ಈ ಕಿಟ್ ಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುವ ದೇಶ ಅಂದರೆ ಚೀನಾ. ವೈರಸ್ ನಿಂದ ಬಾಗಿಲು ಹಾಕಿಕೊಂಡಿದ್ದ ಚೀನಾ, ಜಗತ್ತಿಗೆ ಬೇಕಾದ ಕಿಟ್ ಗಳನ್ನೂ ವಿತರಿಸಲು ಸಾಧ್ಯವಾಗಲಿಲ್ಲ. ಪುಣ್ಯಕ್ಕೆ ಭಾರತ ಆತ್ಮ ನಿರ್ಭರ ಹೆಸರಿನಲ್ಲಿ ಇಂತಹ ಉತ್ಪಾದನೆಗೆ ಉತ್ತೇಜನ ಕೊಟ್ಟಿದ್ದಕ್ಕೆ, ಆ ಕಷ್ಟ ಕಾಲವನ್ನು ಸರಿಯಾಗಿ ಎದುರಿಸಲು ಸಾಧ್ಯವಾಯಿತು.
ಇದೆಲ್ಲಾ ಹಳೆಯ ಸಂಗತಿಗಳು. ಆದರೆ ಈಗ ಅಂಥದ್ದೇ ಮತ್ತೊಂದು ಪರಿಸ್ಥಿತಿ ನಮ್ಮ ಮುಂದೆ ಎದುರಾಗಿದೆ. ಚೀನಾ ಈಗ ಮತ್ತೆ ಬೀಗ ಜಡಿಯಲು ಹೊರಟಿದೆ. ತನ್ನ ದೇಶದಲ್ಲಿ ಅನೇಕ ಉತ್ಪಾದನೆಯನ್ನು ನಿಲ್ಲಿಸುವ ಮಟ್ಟಿಗೆ, ಗಂಭೀರ ಕ್ರಮಗಳನ್ನು ತಗೆದುಕೊಂಡಿದೆ. ಕಾರಣ- ವಿದ್ಯುತ್ತಿನ ಅಭಾವತೆ.
ಎರಡನೇ ಅಧ್ಯಾಯವೇ?
ಕಲ್ಲಿದ್ದಲಿನ ಬೆಲೆ ಈಗ ಬಂಗಾರಕ್ಕೆ ಸಮವಾಗಿದೆ. ಕಲ್ಲಿದ್ದಲು ಇರದ ಕಾರಣ ಚೀನಾದಲ್ಲಿ ಕಲ್ಲಿದ್ದಲಿನ ವಿದ್ಯುತ್ತ ಸ್ಥಾವರಗಳು ಈಗ ಉತ್ಪಾದನೆಯನ್ನು ನಿಲ್ಲಿಸುತ್ತಿವೆ. ದುಬಾರಿ ಆಗಿರುವ ಕಲ್ಲಿದ್ದಲನ್ನು ತಂದು, ವಿದ್ಯುತ್ತ ಉತ್ಪಾದಿಸುವ ಕಡೆಗೆ ಅದಕ್ಕೆ ಒಂಚೂರು ಆಸಕ್ತಿ ಇಲ್ಲ. ಇದರಿಂದಾಗಿ, ಚೀನಾದಲ್ಲಿ ವಿದ್ಯುತ್ತ ಅಭಾವತೆ ಎದ್ದು ನಿಂತಿದೆ. ವಿದ್ಯುತ ಇಲ್ಲದಿರುವ ಕಾರಣ, ಫ್ಯಾಕ್ಟರಿಗಳು ಬಾಗಿಲು ಹಾಕಿಕೊಂಡಿವೆ. ಮೊದಲಿನ ಉತ್ಪಾದನೆಗಿಂತ ಈಗ ಉತ್ಪಾದನೆಯಲ್ಲಿ 44%ರಷ್ಟು ಕಡಿಮೆಯಾಯಾಗಿದೆ. ಇರುವ ವಿದ್ಯುತ್ತನ್ನೇ ಸದುಪಯೋಗ ಪಡಿಸಲು ಚೀನಾ ಅಲ್ಲಲ್ಲಿ ವಿದ್ಯುತ್ ಕಡಿತ ಮಾಡುತ್ತಿದೆ. ಈ ಎಲ್ಲ ಕಾರಣಗಳಿಂದ, ಚೀನಾ ಈಗ ಅಂಧಕಾರದಲ್ಲಿ ಮುಳುಗಿದೆ.
ಜಗತ್ತಿನ ಉತ್ಪಾದನಾ ಘಟಕವೇ ಈಗ ಬಂದ್ ಆಗಿ ಕುಳಿತಿದೆ. ಅದೂ, ಎರಡು ವರ್ಷಗಳಲ್ಲಿ, ಎರಡನೇ ಸಲ.
ವಿಶ್ವಾಸ ಘಾತಕ ಆಗುವುದು ಒಳಿತೇ?
ಅಗ್ಗದ ಕಾರ್ಮಿಕರನ್ನು ಮತ್ತು ಜಗತ್ತಿನ ಅಗ್ಗದ ತೆರಿಗೆ ಇಟ್ಟುಕೊಂಡಿರುವ ಚೀನಾ, ಹೂಡಿಕೆದಾರರನ್ನು ಸೆಳೆದಿದೆ ಅನ್ನುವುದು ನಗ್ನ ಸತ್ಯ. ಆದರೆ ಬರಿ ಇಷ್ಟು ಇದ್ದಾರೆ ಸಾಕೆ? ಎಂಬುವ ಪ್ರಶ್ನೆ ನಮ್ಮೆಲ್ಲರಲ್ಲೂ ಮೂಡುತ್ತದೆ. ನಂಬಿಕೆ ಇಟ್ಟು ಹೂಡಿಕೆ ಮಾಡಿರುವವರ ವಿಶ್ವಾಸವನ್ನು ಗಳಿಸುವಲ್ಲಿ ಚೀನಾ ಸಮರ್ಥವಾಗಿದೆಯೇ? ಇಲ್ಲ. ಜಾಗತೀಕರಣದ ಈ ಸಮಯದಲ್ಲಿ, ಸರಕು ವಿತರಣಾ ಜಾಲ ಬಯಸುವುದು ಒಂದೇ, " ವಿಶ್ವಾಸಾರ್ಹತೆ. ಹೂಡಿಕೆ ಮಾಡಿದ ದೇಶ / ಕಂಪನಿ ನಂಬಿ, ಕಂಪನಿಗಳು ತಮ್ಮ ಮುಂದಿನ ಯೋಜನೆಗಳ ರೂಪು ರೇಷೆಗಳನ್ನು ಹಾಕಿಕೊಂಡಿರುತ್ತವೆ. ಈಗ ಅದೇ ನಂಬಿಕೆ ಮುರಿದರೆ, ಇಡೀ ಕಂಪನಿಯ ಬೆನ್ನು ಮೂಲೆಯನ್ನೇ ಮುರಿದ ಹಾಗೆ ಆಗುತ್ತದೆ.
2002ರಲ್ಲಿ ಸಾರ್ಸ್ ರೋಗ ಚೀನಾದಲ್ಲಿ ಹರಡಿತ್ತು. ಆಗ ಚೀನಾ ಜಗತ್ತಿನ ಜಿಡಿಪಿಯಲ್ಲಿ 4.3%ರಷ್ಟು ಪಾಲನ್ನು ಹೊಂದಿತ್ತು. 2020ರ ಕೋವಿಡ್ ಸಮಯದ ಹೊತ್ತಿಗೆ, ಜಿಡಿಪಿಯ ಅದು 16%ರಷ್ಟು ಬದಲಾಗಿ ಹೋಗಿತ್ತು. ಚೀನಾ ಸುಮಾರು ನಾಲ್ಕು ಪಟ್ಟು ಹೆಚ್ಚು ಬೆಳೆದು ನಿಂತಿತ್ತು. ಜಗತ್ತಿನ ಸರಕು ಜಾಲದಲ್ಲೇ ತನ್ನನ್ನು ತಾನು ಮುಖ್ಯ ಕೇಂದ್ರ ಮಾಡಿಕೊಂಡ ಅದೇ ಚೀನಾ, ಈಗ ಅದೇ ಜಾಲದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿ ನಿಂತಿದೆ.
ಕೇವಲ ಚೀನಾ ಅಷ್ಟೇ ಅಲ್ಲಾ
ಆದರೆ ಎಲ್ಲದಕ್ಕೂ ಚೀನಾ ಕಡೆಗೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಈ ವೈಫಲ್ಯ ಕೇವಲ ಚೀನಾದಲ್ಲ. ಈ ವೈಫಲ್ಯಕ್ಕೆ ಅತೀ ಮುಖ್ಯ ಮೂರೂ ಕಾರಣಗಳಿವೆ,
- ಪರ್ಯಾಯ ವ್ಯವಸ್ಥೆಯನ್ನು ಹೊಂದದೆ ಇರುವುದು
- ದೂರಾಲೋಚನೆಯ ಅನುಪಸ್ಥಿತಿ
- ಸನ್ನದ್ಧತೆ
ಕೊರೋನಾಗೆ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಚೀನಾ ಅಂತೂ ಮೊದಲೇ ಬಾಗಿಲುಗಳನ್ನು ಹಾಕಿಕೊಂಡಿತು. ಆದರೆ ಈ ಬಾಗಿಲು ಮುಚ್ಚಿದಾಗ, ಮತ್ತೊಂದು ಮನೆಗೆ ಉತ್ಪನ್ನಗಳಿಗಾಗಿ ಹೋಗುವ ಅವಕಾಶ ಅನ್ಯ ದೇಶಗಳಿಗೆ ಇರಲಿಲ್ಲ. ಹೂಡಿಕೆದಾರರು ಬರೀ ಚೀನಾವನ್ನು ಅಷ್ಟೇ ನಂಬಿ ಅಲ್ಲಿಯೇ ಜಾಸ್ತಿ ಹೂಡಿಕೆಗಳನ್ನು ಮಾಡಿದರು. ಬೇರೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಗೋಜಿಗೂ ಸಹ ಹೋಗಲಿಲ್ಲ. ದೂರದೃಷ್ಟಿ ಇಟ್ಟುಕೊಂಡು ಮುಂದೆ ಆಗುವ ಸಂಭಾವ್ಯಗಳನ್ನೂ ಯಾರು ಗಣನೆಗೆ ತಗೆದುಕೊಳ್ಳಲಿಲ್ಲ. ಅಷ್ಟೇ ಯಾಕೆ ಇದರಿಂದ ಉಂಟಾದ ಬಿಕ್ಕಟ್ಟನ್ನು ಯಾವ ರೀತಿ ಬಗೆ ಹರಿಸಿಕೊಳ್ಳಬೇಕು ಎನ್ನುವ ಕಾರ್ಯಕ್ಕೂ ಅವರು ತಯಾರಾಗಿರಲಿಲ್ಲ.
ಮೇಲ್ನೋಟದಲ್ಲಿ ಚೀನಾ ಇಡೀ ಜಗತ್ತಿಗೆ ಖಳನಾಯಕನಂತೆ ಕಾಣಬಹುದು. ಆದರೆ ಕೇವಲ ಚೀನಾ ಒಂದೇ ಖಳನಾಯಕನಲ್ಲ. ಯುಕೆಯಲ್ಲಿ ಇಂಧನ ಖಾಲಿ ಆಗಿರುವುದನ್ನು ನೋಡಿ ರಷ್ಯಾ ಒಳಗೊಳಗೇ ಖುಷಿ ಪಡುತ್ತಿದೆ. ಒಂದೇ ದೇಶದ ಮೇಲೆ ಅತಿಯಾಗಿ ಅವಲಂಬಿತವಾಗಿರುವುದು ಪ್ರಗತಿಗೆ ಮುಳ್ಳಾಗುತ್ತದೆ. ಇದರಿಂದಾಗಿ ಸರಕು ಜಾಲವನ್ನು ಒಂದು ಅಸ್ತ್ರದ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶ ಹುಟ್ಟಿಕೊಳ್ಳುತ್ತದೆ.
ಪಾಠವೇನು?
ಈ ಒಂದು ಬಿಕ್ಕಟ್ಟು ನಮಗೆ ಬಹಳಷ್ಟನ್ನು ಹೇಳಿಕೊಡುತ್ತದೆ. ಜಾಗತಿಕ ಸಂಬಂಧಗಳನ್ನು ಲಘುವಾಗಿ ತಗೆದುಕೊಳ್ಳಬಾರದು ಎಂದು ಒತ್ತಿ ಒತ್ತಿ ಹೇಳುತ್ತದೆ. ಯಾವುದೇ ಸಂಬಂಧಗಳನ್ನು ಬೆಳೆಸುವಾಗ, ಅದರ ಬಗ್ಗೆ ಆಳವಾದ ಅಧ್ಯಯನ ಅತ್ಯವಶ್ಯಕ. ಅದರ ಸಾಧಕ ಬಾಧಕಗಳನ್ನು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ, ಅದರ ಜತೆಗೆ ಪರ್ಯಾಯ ವ್ಯವಸ್ಥೆಯನ್ನು ಸಹ ಹೊಂದಿರಬೇಕು ಎಂದು ಹೇಳಿಕೊಡುತ್ತದೆ. ಉದಾಹರಣೆಗೆ, ಕ್ವಾಡ್- ಅಲಯನ್ಸ್ (ಚತುರ್ದೇಶಗಳ ಒಪ್ಪಂದ).
ಹಿಂದಿನ ಅಮೆರಿಕನ್ ಅಧ್ಯಕ್ಷ , ಟ್ರಂಪ್, ಇದೆ ಕಾರಣದಿಂದ ಇಂತಹ ಒಪ್ಪಂದಗಳನ್ನು ಕೇವಲ ಒಂದೇ ದೇಶಕ್ಕೆ ಸೀಮಿತವಾಗಿಡದೇ, ಮುಂದೆ ಇರುವ ಎಲ್ಲ ಆಯ್ಕೆಗಳನ್ನು ಪರಿಗಣನೆಗೆ ತಗೆದುಕೊಳ್ಳಬೇಕು ಎಂದು ಹೇಳಿದ್ದರು. ಚೀನಾದಿಂದ ತಮ್ಮ ತಮ್ಮ ಕಂಪನಿಗಳನ್ನು ಜಪಾನಗೆ ಸ್ಥಳಾಂತರಿಸುವ ಕಂಪನಿಗಳಿಗೆ ಪ್ರೋತ್ಸಾಹವನ್ನು ನೀಡುವುದರ ಬಗ್ಗೆ ಸಹ ಜಪಾನ ಸರ್ಕಾರ ಘೋಷಣೆ ಮಾಡಿತ್ತು.
ಇದು ನಮ್ಮೆಲ್ಲರಿಗೂ ಒಂದು ಸುಸಂದರ್ಭ. ಪಾಠ ಕಲಿತ ಮೇಲೆ ಮತ್ತೆ ಅದೇ ತಪ್ಪನ್ನು ಮಾಡುವುದು ಮೂರ್ಖತನ. ಮೇಲೆ ಹೇಳಿದಂತೆ ಅನ್ಯ ದೇಶಗಳು ಸಹ ತಮ್ಮ ಯೋಜನಾ ತಂತ್ರಗಳನ್ನು ಅವಲೋಕಿಸಲು ಇದು ಒಳ್ಳೆಯ ಸಮಯ.
ಮುಂದೊಮ್ಮೆ ಇಂತಹ ಮಹಾಮಾರಿಯೊಂದು ವಕ್ಕರಿಸಿದರೆ, ಆತ್ಮ ನಿರ್ಭರದಂತಹ ಯೋಜನೆಗಳನ್ನು ಹೊರತಂದ ಭಾರತದಂತೆ ಸಧೃಢವಾಗಿರಿ. ಕೆಚಪ್ ಸಹ ಸಿಗದೇ ಒದ್ದಾಡಿದ ಯೂಸ್ ನಂತೆ ಆಗಬೇಡಿ


0ಕಾಮೆಂಟ್‌ಗಳು