ಜಾಹಿರಾತು

ಭಗತ್ ಸಿಂಗ್ ( Bhagat Singh) ಜೀವನ ಚರಿತ್ರೆ - ಯಾರೂ ಕಾಣದ ಹಾದಿ

ಭಗತ್ ಸಿಂಗ್ ಜೀವನ ಚರಿತ್ರೆ - ಯಾರೂ ಕಾಣದ ಹಾದಿ

23 ಮಾರ್ಚ್ 1930.

ಭಗತ್ ಸಿಂಗ್ ನಮ್ಮನ್ನು ಅಗಲಿ 90 ವರ್ಷ ಕಳೆದು ಹೋದವು. ಭಗತ್ ಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ನನ್ನ ಪ್ರಕಾರ, ಈಗಿನ ಸಮಾಜದಲ್ಲಿ ಜನ ಅವರನ್ನು ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಮತ್ತು ತಪ್ಪಾಗಿ ಪ್ರತಿನಿಧಿಸಿಕೊಂಡಿದ್ದಾರೆ. ಈ ಬ್ಲಾಗ್ ಪೋಸ್ಟ್ ಬರೆಯುವ ಮುಂಚೆ, ನಾನು ಅಂದುಕೊಂಡ ಭಗತ್ ಸಿಂಗ್ ಗೂ, ಅವರ ಬಗ್ಗೆ ಅಧ್ಯಯನ ಮಾಡಿದ ಬಳಿಕ ಮುಂದೆ ಬರುವ ಭಗತ್ ಸಿಂಗ್ ಗೂ, ತುಂಬಾ ವ್ಯತ್ಯಾಸವಿದೆ. ಈ ಲೇಖನ ಓದಿದ ಬಳಿಕ, ನಿಮಗೂ ಸಹ ಅದರ ಭಾಸವಾಗಬಹುದು ಎಂಬುದು ನನ್ನ ಹಾರೈಕೆ.
Bhagat-Singh-ಭಗತ್-ಸಿಂಗ್
ಭಗತ್ ಸಿಂಗ್
ಈಗಿನ ಕಾಲದಲ್ಲಿ, ಜನ ತಮ್ಮ ತಮ್ಮ ಪ್ರೊಫೈಲ್ ಫೋಟೋ ಅಲ್ಲೋ, ಅಥವಾ ಕಾರಿನ ಮೇಲೆ ಅವರ ಚಿತ್ರ ಅಂಟಿಸಿಕೊಂಡಿರುತ್ತಾರೆ. ಆದರೆ ಅದರಲ್ಲಿ ಬರೀ ಬೆರಳಣಿಕೆಯಷ್ಟು ಜನ ಮಾತ್ರ ಅವರ ಆದರ್ಶಗಳ ಬಗ್ಗೆ, ಆಲೋಚನೆಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಚಿಕ್ಕಂದಿನಿಂದ ಆದರ್ಶ ವ್ಯಕ್ತಿ ಎಂದು ಪರಿಗಣಿಸಿದ್ದ ನಾನು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಜನರಿಗೆ ತಲುಪಿಸಬೇಕು ಎಂದು ಈ ಲೇಖನ ಬರೆಯುತ್ತಿದ್ದೇನೆ. ಇದನ್ನು ಓದಿದ ಮೇಲೆ ಭಗತ್ ಬಗ್ಗೆ ಎಲ್ಲರಿಗೂ ಕನಿಷ್ಠ ತಿಳುವಳಿಕೆ ಬಂದರೆ ನನಗೆ ಸಾರ್ಥಕ ಭಾವನೆ ಬರುವುದು ಖಚಿತ.
Click here to read in English

ಕೇವಲ ಕ್ರಾಂತಿಕಾರಿಯಲ್ಲ

ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಾಗಿರಲಿಲ್ಲ. ಆಗಿನ ಕಾಲದ ಬುದ್ಧಿ ಜೀವಿ ಆಗಿದ್ದರು. ಅವರ ಆತ್ಮಕಥನದಲ್ಲಿ, ಅವರ ಗೆಳೆಯರು ಹೇಳುವಂತೆ, ಅವರು ಭಗತ್ ಸಿಂಗ್ ಅವರನ್ನು ಕಂಡಾಗಲೆಲ್ಲಾ, ಅವರ ಬಳಿ ಪುಸ್ತಕ ಒಂದು ಇದ್ದೆ ಇರುತ್ತಿತ್ತು. ಬ್ರಿಟಿಷ್,ಯೂರೋಪಿಯನ್,ಅಮೆರಿಕನ್,ರಷ್ಯನ್ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವಿತ್ತು. ಅವರ ಕಥನದ ಪ್ರಕಾರ, ಅವರನ್ನು ಬಂಧಿ ಮಾಡುವ ಮೊದಲು ಅವರು 250ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದರು. ಎರಡು ವರ್ಷ ಜೈಲುವಾಸದಲ್ಲಿ ಸುಮಾರು 300ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದರು. ಇದು ಎಷ್ಟು ಪುಸ್ತಕ ಓದಿದರು ಎಂದು ತಿಳಿಸುವ ಪ್ರಯಾಸವಲ್ಲ. ಅಷ್ಟು ಪುಸ್ತಕಗಳನ್ನು ಓದಿ ಅವರು ತಮ್ಮ ಆಚಾರ, ವಿಚಾರ ಮತ್ತು ಆದರ್ಶಗಳನ್ನು ಹೇಗೆ ಹರಿತ ಮಾಡಿಕೊಂಡರು ಎಂಬುದು ಮುಖ್ಯ ವಿಷಯ. ಬರೀ ಪುಸ್ತಕಗಳನ್ನಷ್ಟೇ ಒದಲಿಲ್ಲ. ತಮ್ಮ ಕುಂಚದಿಂದ ಅನೇಕ ಲೇಖನಗಳನ್ನು ಬರೆದರು. ಕವಿಯಾಗಿ ಅನೇಕ ಗೀತೆಗಳನ್ನು ಸಹ ಬರೆದರು. ಅವರು ಬರೆದ ಲೇಖನಗಳು ಆಗಿನ ಕಾಲದ ಪತ್ರಿಕೆಗಳಾದ "ಕೀರ್ತಿ, ಅಕಾಲಿ, ವೀರ್ ಅರ್ಜುನ್, ಪ್ರತಾಪ್"ಹೀಗೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 
ನಾನು ಏಕೆ ಇಷ್ಟು ಒತ್ತು ಕೊಟ್ಟು ಹೇಳುತ್ತಿದ್ದೇನೆ ಎಂದರೆ, ಭಗತ್ ಸಿಂಗ್ ಕೇವಲ ಕ್ರಾಂತಿಕಾರಿ ಆಗಿರಲಿಲ್ಲ, ಬದಲಿಗೆ ಆಗಿನ ಕಾಲದ ಶ್ರೇಷ್ಠ ಚಿಂತಕನೂ, ಅದರ್ಶವಾದಿ ಆಗಿದ್ದರು ಎಂಬುದು. ಈಗ ಯಾವುದೇ ಮಾರುವೇಷ ಸ್ಪರ್ಧೆಗೆ ಯಾರಾದ್ರೂ ಭಗತ್ ಸಿಂಗ್ ಪಾತ್ರ ಮಾಡಿದರೆ ಅವರು ಮೀಸೆಯೊಂದನ್ನು ತಿರುವುತ್ತಾ ಬಂದು ಪಿಸ್ಟಾಲ್ ಅನ್ನು ತೋರಿಸಿ ಹೋಗುತ್ತಾರೆ. ಅದು ಅವರ ತಪ್ಪು ಅಲ್ಲ ಬಿಡಿ. ಇದು ಸಮಾಜದ ಒಂದು ಸಮರ್ಥನೆ. ಜನರಿಗೆ ಭಗತ್ ಬಗೆಗಿನ ಕಲ್ಪನೆ ಇದಕ್ಕಷ್ಟೇ ಸೀಮಿತವಾಗಿದೆ. ಅವೆರಡನ್ನೂ ಮಾಡಲಿಲ್ಲ ಎಂದರೆ ಭಗತ್ ಸಿಂಗ್ ನೇ ಅಲ್ಲ ಎಂಬ ಮನೋಭಾವ ಜನರಲ್ಲಿ ಮನೆ ಮಾಡಿದೆ. ಆದರೆ ಅಸಲಿಗೆ ಭಗತ್ ಈ ಕ್ರಾಂತಿಗಳ ಬಗ್ಗೆ ಏನು ಹೇಳಿದ್ದಾರೆ ಗೊತ್ತೇನು ? 
" ಬಾಂಬ್ ಮತ್ತು ಪಿಸ್ಟಾಲ್ ಗಳು ಕ್ರಾಂತಿಯನ್ನು ತರಲಾರವು. ಕ್ರಾಂತಿಯ ಕತ್ತಿಯನ್ನು ನಮ್ಮ ಆಲೋಚನೆಗಳ ಮೂಲಕ ಹರಿತಗೊಳಿಸಬೇಕು" ಎಂದು. 
ಆದರೆ ಈಗಿನ ಜನ ಅವರ ಅಂತಹ ಆಲೋಚನೆಗಳ ಮೇಲೆ ಅವರನ್ನ ಪ್ರೀತಿಸುವುದು ಕಮ್ಮಿ. ಜನರಿಗೆ ಅವರನ್ನು ಕ್ರಾಂತಿಕಾರಿ ಚಿಂತಕ ಅನ್ನುವುದಕ್ಕಿಂತ, ಬಂಡಾಯ ನಾಯಕ ಎಂದು ಬಿಂಬಿಸುವುದರಲ್ಲೇ ಖುಷಿ ಕಾಣುತ್ತಾರೆ. ಅವರ ಅಸಲಿ ಅಸ್ತಿತ್ವವನ್ನೇ ಹೊರಗೆ ಹಾಕಿ, ಖುಷಿ ಖುಷಿಯಾಗಿ ನೇಣಿಗೆ ಏರಿದ ಹೋರಾಟಗಾರ ಎಂದು ಕಾಣುತ್ತಾರೆ. ಹಾಗಾದರೇ, ಯುವಕನೊಬ್ಬ ತನ್ನ ಯೌವನದಲ್ಲಿ ಇಂತಹ ಸಾಧನೆ ಮಾಡಿದರೂ ಸಹ, ಅವನನ್ನ ಈ ದೃಷ್ಟಿಯಲ್ಲಿ ನೋಡುವುದು ಸರಿಯೇ ? ಅವನು ಚಿಕ್ಕ ವಯಸ್ಸಿನಲ್ಲೇ ಹಾಕಿ ಕೊಟ್ಟ ಮೌಲ್ಯಗಳು , ಆದರ್ಶಗಳನ್ನು ಕಡೆಗಣಿಸುವುದು ತಪ್ಪಲ್ಲವೇ? ಕಣ್ಣಿಗೆ ಸುಣ್ಣ ಹಾಕಿಕೊಂಡು ಕುರುಡಾಗಿ, ಜಗತ್ತು ಹೇಳಿದ್ದೆ ಸರಿ, ಎಂದು ಹಿಂಬಾಲಿಸುತ್ತ ಹೋದರೆ, ನಮಗಾಗಿ ಮಡಿದ ಆ ಜೀವದ ಬೆಲೆ ವ್ಯರ್ಥವಾದ ಹಾಗಲ್ಲವೇ? ಇದನ್ನೆಲ್ಲಾ ತಿದ್ದಿಕೊಂಡು, ಯಾರು ತಿಳಿಯದ ಇನ್ನೊಂದು ಕೋನವನ್ನು ನಿಮ್ಮ ಮುಂದೆ ಇಡುವುದೇ ಈ ಲೇಖನದ ಉದ್ದೇಶ.
Click here to read in English

ಭಗತ್ ಸಿಂಗ್ ರವರ ಮೂರು ಮುಖ್ಯ ಸಿದ್ಧಾಂತ/ಚಿಂತನೆಗಳು ಹೀಗಿವೆ: 
ಸಮಾಜವಾದ, ನಾಸ್ತಿಕತೆ ಮತ್ತು ಅಂತರಾಷ್ಟ್ರೀಯತೆ (ವಸುದೈವ ಕುಟುಂಬ). 
ಜಗತ್ತಿನ ಅನೇಕ ನೇತಾರರನ್ನು ಪ್ರಭಾವಿತಗೊಳಿಸಿದ ಕಾರ್ಲ್ ಮಾರ್ಕ್ಸ್, ಲೆನಿನ್, ಮತ್ತು ಸಮಾಜವಾದ ವಿಚಾರಗಳು, ಭಗತ್ ಅವರನ್ನು ಸಹ ಪ್ರಭಾವಿತಗೊಳಿಸಿದವು. ಆಗಿನ ಸಮಾಜದಲ್ಲಿ ರೈತರಿಗೆ, ಕಾರ್ಮಿಕರಿಗೆ ಮತ್ತು ದೀನರಿಗೆ ಆಗುತ್ತಿದ್ದ ಶೋಷಣೆ ನೋಡಲು ಭಗತ್ ಕೈಯಲ್ಲಿ ಆಗುತ್ತಿರಲಿಲ್ಲ. ತಮ್ಮ ಬದುಕಿನುದ್ದಕ್ಕೂ ದೀನದಲಿತ ಜನರಿಗಾಗಿ ಅವರು ಹೋರಾಡಲು ಬಯಸಿದ್ದರು.
ಭಗತ್ ಸಿಂಗ್, ಅವರ ತತ್ವಗಳು, ಗಾಂಧೀಜಿ ಮತ್ತು ಇತಿಹಾಸ ವಿಷಯದ ಕುರಿತು ಓದಲು ಇಲ್ಲಿ ಒತ್ತಿ.
1923ರಲ್ಲಿ ಪ್ರಕಟಿತವಾದ ಅವರ ಒಂದು ಪ್ರಶಸ್ತಿ ವಿಜೇತ ಲೇಖನದಲ್ಲಿ ಇದರ ಬಗ್ಗೆ ಇದ್ದ ಅವರ ಕಾಳಜಿ ಎದ್ದು ಕಾಣುತ್ತದೆ. ಅದರಲ್ಲಿ  ಗುರು ಗೋಬಿಂದ್ ಸಿಂಗ್ ಅವರ ನುಡಿಯೊಂದನ್ನು ಉಲ್ಲೇಖಿಸಿ, ಭಗತ್ ಸಿಂಗ್ ಈ ರೀತಿ ಬರೆಯುತ್ತಾರೆ, " ದೀನರಿಗಾಗಿ ಹೋರಾಡುವವನೇ ನಿಜವಾದ ಧೈರ್ಯವಂತ. ಬೇಕಾದರೆ ಅವನ ಕೈ ಕಾಲುಗಳೇ ತುಂಡಾಗಲಿ, ಆದರೆ ಆತ ಅವನ ಈ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ, ಶರಣಾಗುವುದಿಲ್ಲ." ಎಂದು.

1. ಸಮಾಜವಾದ

ಭಗತ್ ಅವರ ಕಾಲದಲ್ಲಿದ್ದ ನಾಯಕರಿಗೆ ಸ್ವಾತಂತ್ರ್ಯ ಪಡೆಯುವುದು ಮೊದಲ ಆದ್ಯತೆ ಆಗಿತ್ತು. ಮೊದಲು ಸ್ವತಂತ್ರರಾಗೋಣ, ಆಮೇಲೆ ಮುಂದಿದ್ದು ನೋಡೋಣ ಎಂಬ ವಿಚಾರಕ್ಕೆ ಗಟ್ಟಿಯಾಗಿ ನೆಲೆಯೂರಿದ್ದರು. ಸಾಮಾಜಿಕ ನ್ಯಾಯದ ಬಗ್ಗೆ ಯಾರು ಆ ಸಮಯದಲ್ಲಿ ತಲೆ ಕೆಡಿಸಿಕೊಳ್ಳಲಿಲ್ಲ.  ಆದರೆ ಭಗತ್ ಅವರಿಗೆ ಇದು ಅತೀ  ಮುಖ್ಯ ವಿಷಯವಾಗಿತ್ತು. ರೈತನೇ ಇರಲಿ, ಕಾರ್ಮಿಕನೇ ಇರಲಿ, ಯಾರೇ ಇದ್ದರು ಅವರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಅವರಿಗೆ ಸಿಗುವಂತೆ ಮಾಡಲೇ ಬೇಕು ಎಂಬುದು ಅವರ ವಾದವಾಗಿತ್ತು. ಅವರ ವಿರುದ್ಧ ನಡೆಯುತ್ತಿರುವ ಶೋಷಣೆ ನಿಲ್ಲಬೇಕು. ಶೋಷಣೆಯನ್ನು ಯಾರೇ ಮಾಡಲಿ, ಅಧಿಕಾರದಲ್ಲಿ ಇರುವವರೇ ಆಗಿರಲಿ ಅಥವಾ ಸಾಮಾನ್ಯ ಜನ ಆಗಿರಲಿ, ಅವರನ್ನು ಶಿಕ್ಷಿಸಬೇಕು ಎಂಬುದು ಭಗತ್ ಅವರ ಹೋರಾಟ ಆಗಿತ್ತು. ಹೀಗೆ ಶೋಷಣೆ ಮುಂದುವರೆದರೆ, ದೀನರ ಬಾಳು ಕಠಿಣ ಆಗುತ್ತದೆ ಎಂದು ಬಲವಾಗಿ ನಂಬಿದ್ದರು.
ಫೆಬ್ರವರಿ 1931 ರ ತನ್ನ ಸಂದೇಶದಲ್ಲಿ ಭಗತ್ ಸಿಂಗ್ ಹೇಳುತ್ತಾರೆ , " ರಾಜಕೀಯ ಕ್ರಾಂತಿಯು ಅನಿವಾರ್ಯದ  ವಿಷಯವಾಗಿದೆ. ಆದರೆ ಅದರ ಮುಖ್ಯ ಗುರಿ ಸಮಾಜವಾದಿ ಕ್ರಾಂತಿಯಾಗಿದೆ. " ಎಂದು. ಮೊದಲಿಗೆ ಅವರು ಹುಟ್ಟು ಹಾಕಿದ್ದ ಕ್ರಾಂತಿಕಾರಿ ಪಕ್ಷವನ್ನು "ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್" ಎಂದು ಕರೆಯಲಾಗುತಿತ್ತು. ಆದರೆ ನಂತರ ಚಂದ್ರಶೇಖರ್ ಅಜಾದ್ ಅವರ ಒಡನಾಟದಲ್ಲಿ ಬಂದ್ ಮೇಲೆ ಆ ಪಕ್ಷದ  ಹೆಸರಿಗೆ " ಸಮಾಜವಾದಿ ( ಸೋಷಿಯಲಿಸ್ಟ್ )" ಎಂಬ ಪದವನ್ನು ಸೇರಿಸಿ " ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ " ಎಂದು ಮರು ನಾಮಕರಣ ಮಾಡಲಾಯಿತು.

ಭಗತ್ ಸಿಂಗ್ ಅವರು, ತಮ್ಮ ಸಿದ್ಧಾಂತಗಳಿಗೆ ಎಷ್ಟು ಗಟ್ಟಿಯಾಗಿ ಅಂಟಿಕೊಂಡಿದ್ದರು ಎಂಬುದನ್ನು ನಾವು ಅವರ ಘೋಷಣೆಗಳಲ್ಲಿ ಕಾಣಬಹುದು. ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದಾಗ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಮೂರು ಘೋಷಣೆಗಳನ್ನು ಕೂಗಿದ್ದರು. " ಕ್ರಾಂತಿಯು ಸದಾ ಕಾಲ ಬಾಳಲಿ. ( ಲಾಂಗ್ ಲಿವ್ ದಿ ರೆವೊಲ್ಯೂಷನ್)" "ವಿಶ್ವದ ಕಾರ್ಮಿಕರೆಲ್ಲ ಒಂದಾಗಿರಿ. ( ವರ್ಕರ್ಸ್ ಆಫ್ ದಿ ವರ್ಲ್ಡ್ ಯುನೈಟ)" ಮತ್ತು " ಸಾಮ್ರಾಜ್ಯಶಾಹಿ ಆಡಳಿತಕ್ಕೆ ಧಿಕ್ಕಾರ ( ಡೌನ್ ವಿಥ್ ಇಂಪೀರಿಯಲಿಸಮ್ )". ಅವರು ಸಾವಿಗೆ ಕೊರಳು ಒಡ್ಡಬೇಕಾದರು ಸಹ ಅವರ ಬಾಯಲ್ಲಿ ಬಂದಿದ್ದು "ಸಮಾಜವಾದಿ ಕ್ರಾಂತಿ ಸದಾ ಕಾಲ ಬಾಳಲಿ ( ಲಾಂಗ್ ಲಿವ್ ಸೋಷಿಯಲಿಸ್ಟ್ ರೆವೊಲ್ಯೂಷನ್ )". ಎಂಬ ಘೋಷವಾಕ್ಯ.

2. ಅಂತರಾಷ್ಟ್ರೀಯತೆ (ವಸುದೈವ ಕುಟುಂಬ).

" ವಸುದೈವ ಕುಟುಂಬಕಂ". ಮಹಾಉಪನಿಷದ್ ಮತ್ತು ರಿಗ್ವೇದದಲ್ಲಿ ಬರುವ ಒಂದು ಅತ್ಯಂತ ಪರಿಚಿತ ಶ್ಲೋಕ. ಇದರ ಅರ್ಥ ' ಇಡೀ ಜಗತ್ತೇ ಒಂದು ಕುಟುಂಬದಂತೆ ' ಎಂದು. ಅಂತರಾಷ್ಟ್ರೀಯತೆ ಎನ್ನುವುದು ಭಗತ್ ಅವರ ಇನ್ನೊಂದು ಸಿದ್ಧಾಂತವಾಗಿತ್ತು. ಇದರ ಕುರಿತು ಭಗತ್ "ವಿಶ್ವ ಪ್ರೇಮ" ಎಂಬ ಒಂದು ಲೇಖನವನ್ನು ಸಹ ಬರೆದಿದ್ದರು. 1924ರಲ್ಲಿ ಕೋಲ್ಕತ್ತಾದ  "ಮಾಟ್ವಾಳ" ಎಂಬ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿತ್ತು. ಅವರ ಲೇಖನದ ತುಣುಕು ಇಂತಿದೆ, 'ಎಲ್ಲರೂ ನಿಮ್ಮವರಾಗಲಿ ಮತ್ತು ಯಾರೂ ಅಪರಿಚಿತರಾಗದಿರಲಿ' ಎಂಬ ಕಲ್ಪನೆ ಎಷ್ಟು ಅದ್ಭುತವಾಗಿದೆಯಲ್ಲವೇ? ಜಗತ್ತಿನಲ್ಲಿ ಅಪರಿಚಿತತೆ ಇರದಿದ್ದರೆ ಆ  ಗಳಿಗೆ ಎಷ್ಟು ಸುಂದರವಾಗಿರುತ್ತದೆ? ಈ ಕಲ್ಪನೆಯನ್ನು ನಿಜ ರೂಪಕ್ಕೆ ಬಂದರೆ ಆ ದಿನವೇ, ಪ್ರಪಂಚವು ಪ್ರಗತಿ ಸಾಧಿಸಿದೆ ಎಂದು ಹೆಮ್ಮೆ ಪಡಬಹುದು." ಅಷ್ಟೇ ಅಲ್ಲ, ಭಗತ್ ಸಿಂಗ್ ಈ ಲೇಖನದಲ್ಲಿ ಈ ಸಿದ್ಧಾಂತವನ್ನು ಕಲ್ಪಿಸಿಕೊಂಡು ಬರೆದ ಆ ವ್ಯಕ್ತಿಯನ್ನು ಸಹ ಪ್ರಶಂಶಿಸಿದ್ದಾರೆ.
ಈಗಿನ ಜಗತ್ತಿನಲ್ಲಿ  ಜನ ಕೇವಲ ದೇಶ ಪ್ರೇಮವನ್ನು ಇಟ್ಟುಕೊಂಡಿಲ್ಲ. ಅವರ ಪ್ರಕಾರ ದೇಶ ಪ್ರೇಮ ಎಂದರೆ " ನನ್ನ ದೇಶ ಮಹಾನ್. ಉಳಿದೆಲ್ಲವೂ ಕೀಳು" ಎಂದು. ತಮ್ಮ ದೇಶದ ಪ್ರಗತಿಯನ್ನು ಉದ್ಧರಿಸುವ ಬದಲು, ಬೇರೆ ದೇಶಗಳನ್ನು ದೂಷಿಸುತ್ತಾ ಕುಳಿತುಕೊಳ್ಳುತ್ತಾರೆ. ನೈಜ ನಿದರ್ಶನ ಎಂದರೆ "ಭಾರತ ಮತ್ತು ಪಾಕಿಸ್ತಾನ." ಆದರೆ ಇವೆರಡು ದೇಶಗಳ ಮಧ್ಯೆ ಇರುವ ಈ ದ್ವೇಷದ ಕಾಳಗ " ಫ್ರಾನ್ಸ್ ಮತ್ತು ಜರ್ಮನಿ" ನಡುವೆ ಇದ್ದ ದ್ವೇಷದ ಮುಂದೆ ಏನೂ ಇಲ್ಲ. ಅಂತೆಯೇ ಅಮೇರಿಕಾ ಮತ್ತು ಜಪಾನ್ ನಡುವೆ ಹಗೆತನ ಇತ್ತು. ಇದೆಲ್ಲಾ ಭಗತ್ ಸಿಂಗ್ ಅವರ ಕಾಲದಲ್ಲಿತ್ತು. 
ಭಗತ್ ಸಿಂಗ್ ಅವರು ಫ್ರಾನ್ಸ್ ಮತ್ತು ಜರ್ಮನಿಗಳು ಪರಸ್ಪರ ಹೋರಾಡದೇ ಇರಬೇಕು ಎಂದು ಕನಸು ಕಂಡರು. ಹೊರಡುವ ಬದಲು ಪರಸ್ಪರ ವ್ಯಾಪಾರ ಮಾಡಬೇಕೆಂದು ಆಶಿಸಿದರು. ಅದೇ ಪ್ರಗತಿಯ ಉತ್ತುಂಗತೆ ಎಂದು ಕರೆದರು. ಅಮೇರಿಕಾ ಮತ್ತು ಜಪಾನ್ ಹೊಡೆದಾಡದೆ ಒಟ್ಟಿಗೆ ಸಹಕಾರದಿಂದ ಬದುಕಬೇಕೆಂದು ಬಯಸಿದರು. ಅದೇ ರೀತಿ ಬ್ರಿಟಿಷರು ಮತ್ತು ಭಾರತೀಯರು ಒಟ್ಟಿಗೆ ಬಾಳಬೇಕು, ಆದರೆ ಒಬ್ಬರೊಬ್ಬರನ್ನು ಆಳಿಕೊಂಡು ಬಾಳುವಂತೆ ಆಗಬಾರದು ಎಂದು ಕನಸು ಕಂಡರು. 
Click here to read in English

1928ರಲ್ಲಿ ಭಗತ್ ಸಿಂಗ್ 'ಕೀರ್ತಿ' ಎಂಬ ಪತ್ರಿಕೆಗೆ ಒಂದು ಲೇಖನವನ್ನು ಬರೆದರು - "ಹೊಸ ರಾಜಕಾರಣಿಗಳ ವಿಭಿನ್ನ ಸಿದ್ಧಾಂತಗಳು" ಎಂಬ ಹೆಸರಿನಲ್ಲಿ. ಅದರಲ್ಲಿ ಆಗಿನ ಅತ್ಯಂತ ಪ್ರಮುಖ ಇಬ್ಬರು ರಾಜಕಾರಣಿಗಳಾದ " ಬೋಸ್ ಮತ್ತು ನೆಹರು" ಬಗ್ಗೆ ಬರೆದರು. ಬಾಂಬೆನಲ್ಲಿ ಅವರಿಬ್ಬರೂ ನೀಡಿದ ಭಾಷಣದ ಬಗ್ಗೆ ಅವರು ತಮ್ಮ ವಿಮರ್ಶೆಯನ್ನು ಈ ಲೇಖನದಲ್ಲಿ ಉಲ್ಲೇಖಿಸಿದರು. ಸುಭಾಷ್ ಅವರನ್ನು " ಎಮೋಷನಲ್ ಬೆಂಗಾಳಿ ( ಭಾವನಾತ್ಮಕ ಬೆಂಗಾಳಿ ) " ಎಂದು ಕರೆದರು. ಭಗತ್ ಪ್ರಕಾರ ಬೋಸ್ ಅವರು  ದೇಶವನ್ನು ಬರೀ ಸುಂದರತೆಯಲ್ಲಿ ಅಳೆಯುತ್ತಿದ್ದರು. ಹಿಂದಿನ ದಿನಗಳಲ್ಲಿ ಭಾರತ ಹೇಗಿತ್ತು ಎಂಬುದರ ಮೇಲೆ ಬಹಳ ಒಟ್ಟು ಕೊಟ್ಟು ಭಾಷಣದಲ್ಲಿ ಬೋಸ್ ಅವರು ಮಾತನಾಡಿದ್ದರಿಂದ, ಈ ರೀತಿಯಾಗಿ ಭಗತ್ ಬೋಸ್ ರನ್ನು ಟೀಕಿಸಿದ್ದರು. ಭಗತ್ ಸಿಂಗ್ ಇದನ್ನು ಭಾವನಾತ್ಮಕತೆ ಎಂದು ತಳ್ಳಿಹಾಕಿದರು. 
ಮತ್ತು ನೆಹರೂರ ವಿಚಾರದಲ್ಲಿ,  ಅವರ ತಾರ್ಕಿಕ ದೃಷ್ಟಿಕೋನಕ್ಕೆ ಭಗತ್ ವಿರುದ್ಧವಾಗಿದ್ದರು. ಪಂಡಿತ್ ಜವಾಹರಲಾಲ್ ಅವರು ತಮ್ಮ ಭಾಷಣದಲ್ಲಿ ಈ ರೀತಿ ಹೇಳುತ್ತಾರೆ, "ನೀವು ಯಾವ ದೇಶಕ್ಕೆ ಹೋದರೂ ಅವರು ಜಗತ್ತಿಗೆ ವಿಶೇಷ ಸಂದೇಶವನ್ನು ಕೊಡಲು ಬಂದಿದ್ದಾರೆ ಎಂದು ನಂಬಿದ್ದಾರೆ. ಇಂಗ್ಲೆಂಡ್ ವಿಶ್ವಕ್ಕೆ 'ನಾಗರೀಕತೆಯನ್ನು' ಕಲಿಸುವ ಸ್ವಯಂ ಘೋಷಿತ ಶಿಕ್ಷಕನಂತೆ ಆಗಲು ಪ್ರಯತ್ನಿಸುತ್ತಿದೆ." ಎಂದು. ನಮ್ಮ ತಾರ್ಕಿಕ ತಿಳುವಳಿಕೆಯು ಏನನ್ನಾದರೂ ಒಪ್ಪಿಕೊಳ್ಳದಿದ್ದರೆ, ಮತ್ತು ಅವುಗಳನ್ನು  ವೇದಗಳಲ್ಲಿ ಅಥವಾ ಕುರಾನ್‌ನಲ್ಲಿ ಬರೆಯಲಾಗಿದ್ದರೂ ಸಹ, ನಾವು ಅದನ್ನು ಅನುಸರಿಸಬಾರದು ಎಂದು ಭಗತ್ ಸಿಂಗ್, ನೆಹರೂ ಭಾಷಣದಲ್ಲಿನ ಮಾತನ್ನು ಒಪ್ಪಿಕೊಂಡರು. 

ಅವರ 1927 ರ ಲೇಖನದಲ್ಲಿ ಧಾರ್ಮಿಕ ಗಲಭೆಗಳು ಮತ್ತು ಅವುಗಳ ಪರಿಹಾರಗಳು, ಮತ್ತು ಸಮಾನತೆಯ ಬಗ್ಗೆ  ಭಗತ್ ಸಿಂಗ್  ಮಾತನಾಡುತ್ತಾರೆ. ಜಗತ್ತಿನಲ್ಲಿರುವ ಬಡವರು, ಯಾವುದೇ ಜಾತಿ, ಮತ, ಪಂಥ, ಜನಾಂಗ ಅಥವಾ ಯಾವುದೇ ದೇಶದವರಾಗಿರಲಿ, ಅವರೆಲ್ಲರಿಗೂ ಸಮಾನ ಹಕ್ಕು ಇರಬೇಕು ಎಂದು ಆಶಿಸಿದರು. ಅಂಥವರ ಅನುಕೂಲಕ್ಕಾಗಿ ಧರ್ಮ, ಬಣ್ಣ, ಜನಾಂಗ ಮೂಲಗಳ ಆಧಾರದ ಮೇಲೆ ನಡೆಯುತ್ತಿರುವ ತಾರತಮ್ಯ ನಿಲ್ಲಬೇಕು ಮತ್ತು ಸರ್ಕಾರದ ಅಧಿಕಾರವು ಸಹ ಅವರ ಕೈಯಲ್ಲಿ ಬರುವಂತೆ ಮಾಡಬೇಕು." ಎಂದು ವಾದಿಸಿದರು. ಇದು ಭಗತ್ ಸಿಂಗ್ ಅವರ ಮತ್ತೊಂದು ಬಲವಾದ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತದೆ. ಅದೇ "ಜಾತ್ಯತೀತತೆ ಮತ್ತು ನಾಸ್ತಿಕತೆ." 

3. ಜಾತ್ಯತೀತತೆ ಮತ್ತು ನಾಸ್ತಿಕತೆ

ಒಂದು ಕಡೆ ಮಹಾತ್ಮ ಗಾಂಧಿಯವರು ಭಾರತಕ್ಕೆಂದೇ ಹೊಸ ರೀತಿಯ ಜಾತ್ಯತೀತತೆಯ ಪ್ರಚಾರ ಮಾಡುತ್ತಿದ್ದರು. ಅವರ ಪ್ರಕಾರ ಸರ್ಕಾರವು ಧರ್ಮವನ್ನು ಉತ್ತೇಜಿಸಬೇಕು, ಆದರೆ ಅದು ನಿಷ್ಪಕ್ಷಪಾತವಾಗಿರಬೇಕು. ಸರ್ಕಾರವು ಎಲ್ಲ ಧರ್ಮಗಳಿಗೂ ನಿಷ್ಪಕ್ಷಪಾತವಾಗಿ ಉಳಿಯಬೇಕು ಎಂದು ಬಯಸಿದರು. ಮತ್ತೊಂದೆಡೆ, ಭಗತ್ ಸಿಂಗ್ ಅವರು ಫ್ರೆಂಚ್ ಜಾತ್ಯತೀತತೆಯನ್ನು ನಂಬಿದ್ದರು. ಸರ್ಕಾರ ಮತ್ತು ಧರ್ಮದ ನಡುವೆ ಯಾವಾಗಲೂ ಅಂತರವಿರಬೇಕು. ಧರ್ಮ ಎನ್ನುವುದು ಒಬ್ಬ ವ್ಯಕ್ತಿಯ ವೈಯುಕ್ತಿಕ ವಿಚಾರವಾದ ಕಾರಣ, ಸರ್ಕಾರ ಧರ್ಮದ ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದು ಅದರ ಸಿದ್ಧಾಂತವಾಗಿತ್ತು.
ವಾಸ್ತವವಾಗಿ ಇದೇ ಜಾತ್ಯತೀತತೆಯ ಮೂಲ ವ್ಯಾಖ್ಯಾನವಾಗಿದೆ. 
ಭಗತ್ ಸಿಂಗ್ ಮತ್ತು ಭಗವತಿ ಚರಣ್ ಬೋಹ್ರಾ ಅವರು "ನೌಜವಾನ್ ಭಾರತ್ ಸಭಾ (ಯುವ ಭಾರತ ಸಂಘ)" ಪ್ರಣಾಳಿಕೆಯನ್ನು ಬರೆಯುವಾಗ ಈ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಬರೆದರು.

"ನಾವು ಭಾರತೀಯರು. ನಾವು ಏನು ಮಾಡುತ್ತಿದ್ದೇವೆ? 
ಮರದ ಕೊಂಬೆಯನ್ನು ಕತ್ತರಿಸಿದಾಗ ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆಯೇ? 
ತಾಜಿಯಾದ ಮೂಲೆಯೊಂದು ಮುರಿದರೆ, ಅಲ್ಲಾಹನು ಕೋಪಗೊಳ್ಳುತ್ತಾನೆಯೇ? 
ಪ್ರಾಣಿಗಳಿಗಿಂತ ಮನುಷ್ಯರ ಜೀವ ಹೆಚ್ಚು ಮೌಲ್ಯವುಳ್ಳದ್ದಲ್ಲವೇ? 
ಆದರೆ ಇನ್ನೂ, ಭಾರತದಲ್ಲಿ, ಜನರು 'ಪವಿತ್ರ ಪ್ರಾಣಿಗಳ' ಹೆಸರಿನಲ್ಲಿ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ." ಎಂದು ಜೂನ್ 1927 ರಲ್ಲಿ ಕೀರ್ತಿ ಪತ್ರಿಕೆಯಲ್ಲಿ " ಧಾರ್ಮಿಕ ಗಲಭೆಗಳು ಮತ್ತು ಅವುಗಳ ಪರಿಹಾರಗಳು' ಎಂಬ ಶೀರ್ಷಿಕೆ ಅಡಿ ಬರೆಯುತ್ತಾರೆ.  

ಜನರು ತಮ್ಮ ನಡುವೆ ಹೋರಾಡುವುದನ್ನು ನಿಲ್ಲಿಸಬೇಕೆಂದು ನೀವು ಬಯಸಿದರೆ, ನೀವು ಅವರಿಗೆ ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಅಸಮತೋಲನವನ್ನು ತೋರಿಸಬೇಕು.ಬಡ ರೈತರು ಮತ್ತು ಕಾರ್ಮಿಕರಿಗೆ ಅವರ ನಿಜವಾದ ಶತ್ರುಗಳು ಬಂಡವಾಳಶಾಹಿಗಳೆಂದು ವಿವರಿಸಿ ಹೇಳಬೇಕು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಲಾಲಾ ಲಜಪತ್ ರಾಯ್ ಕೋಮುವಾದಿ ರಾಜಕೀಯದತ್ತ ಮುಖ ಮಾಡಿದಾಗ, ಭಗತ್ ಸಿಂಗ್ ಒಂದು ಕರಪತ್ರವನ್ನು ಪ್ರಕಟಿಸಿದರು. ಅದರಲ್ಲಿ ಒಂದು ಕಡೆ "ದಿ ಲೊಸ್ಟ್ ಲೀಡರ್" ಕವಿತೆಯನ್ನು ಮತ್ತು ಇನ್ನೊಂದು ಕಡೆ ಲಾಲಾ ಲಜಪತ್ ರಾಯ್ ಅವರ ಫೋಟೋ ಮುದ್ರಿಸಲಾಗಿತ್ತು. 

ಧರ್ಮದ ಬಗ್ಗೆ ಭಗತ್ ಸಿಂಗ್ ಅವರ ವೈಯಕ್ತಿಕ ದೃಷ್ಟಿಕೋನಗಳನ್ನು ಅವರ ಅತ್ಯಂತ ಪ್ರಸಿದ್ಧವಾದ "ನಾನು ಯಾಕೆ ನಾಸ್ತಿಕ ( ವೈ ಐ  ಆಮ್ ಎನ್ ಅಥೀಷ್ಟ್ )" ಲೇಖನದಲ್ಲಿ ವಿವರವಾಗಿ ವಿವರಿಸಲಾಗಿದೆ.ದೇವರು ಈ ಜಗತ್ತನ್ನು ಸೃಷ್ಟಿ ಮಾಡಿದ್ದರೆ, ಅದರಲ್ಲಿ ಇಷ್ಟೇಕೆ ಅನ್ಯಾಯವಿದೆ. ಜಗತ್ತಿನಲ್ಲಿ ನೋವು ಮತ್ತು ಸಂಕಟಗಳು ಏಕಿವೆ? ಎಂದು ಬಲವಾಗಿ ಕೇಳುತ್ತಾರೆ. ಇದು ದೇವರ ಆಟ  ಲೀಲೆ ಅಂತ ಮತ್ತೆ ದೇವರ ಮೇಲೆ ಹಾಕುವ ಭಕ್ತರಿಗೆ ಆ ರೀತಿ ಹೇಳದಂತೆ ಎಚ್ಚರಿಕೆ ಸಹ ನೀಡಿದ್ದಾರೆ.

ಜನರು ತಮ್ಮ ಹಿಂದಿನ ಜೀವನದ ಅಪರಾಧಗಳಿಗೆ ಈಗಿನ ಜನ್ಮದಲ್ಲಿ ಶಿಕ್ಷೆ ಅನುಭವಿಸುವುದರ ಬಗೆಗಿನ ನ್ಯಾಯದ  ಬಗ್ಗೆ ಅವರು ಪ್ರಶ್ನಿಸುತ್ತಾರೆ. ಇಲ್ಲಿ ಭಗತ್ ಸಿಂಗ್ ನ್ಯಾಯಶಾಸ್ತ್ರದ ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ.ನ್ಯಾಯವನ್ನು ಸೇಡು ತೀರಿಸಿಕೊಳ್ಳುವುದರ ಮೂಲಕ ಪಡೆಯುವುದು  ಬಹಳ ಹಳತಾದ ಕಲ್ಪನೆ ಎಂದು ಅವರು ವಾದಿಸುತ್ತಾರೆ.
ಮತ್ತೊಂದೆಡೆ, ಶಿಕ್ಷೆಯ ಸಿದ್ಧಾಂತದ  ಬಗ್ಗೆಯೂ ಮಾತನಾಡಿದ್ದಾರೆ. ತಾವು ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸಬೇಕೆಂಬ ಸಿದ್ಧಾಂತ ಕೂಡ ಈಗ ಪ್ರಪಂಚದಿಂದ ನಿಧಾನವಾಗಿ ನಿರ್ಮೂಲನೆಯಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. 
ಮೂರನೆಯದಾಗಿ, ಸುಧಾರಣಾತ್ಮಕ ಸಿದ್ಧಾಂತವನ್ನು ಜಗತ್ತು ನಿಧಾನವಾಗಿ ಸ್ವೀಕರಿಸಲಾಗುತ್ತಿರುವುದನ್ನು ಪ್ರಶಂಶಿಸಿದ್ದಾರೆ. ಈ ಸಿದ್ಧಾಂತ ಮಾನವನ ಪ್ರಗತಿಗೆ ಇದು ಅಗತ್ಯ ಎಂದು ಹೇಳಿದ್ದಾರೆ.ಸುಧಾರಣಾತ್ಮಕ ಸಿದ್ಧಾಂತದ  ಪ್ರಕಾರ, "ಯಾರಾದರೂ ತಪ್ಪು ಮಾಡಿದರೆ, ಆತನನ್ನು ಸುಧಾರಿಸಬೇಕು ಮತ್ತು ಶಾಂತಿಯನ್ನು ಬಯಸುವ ಮತ್ತು  ಪ್ರೀತಿಸುವ ಪ್ರಜೆಯಾಗಿ ಪರಿವರ್ತಿಸಬೇಕು" ಎಂದು. 
ಭಗತ್ ಅವರು ದೇವರನ್ನು ಪ್ರಶ್ನಿಸುವಂತೆ ಕೆಲ ಅಂಶಗಳನ್ನು ಬರೆಯುತ್ತಾರೆ. ಮುಂದಿನ ಜನ್ಮದಲ್ಲಿ ತಪ್ಪು ಮಾಡಿದವರನ್ನು ಹಸು, ಬೆಕ್ಕು, ನಾಯಿಯಾಗಿ ಹುಟ್ಟಿಸಿದರೆ, ಅವರು ಹೇಗೆ ಪರಿವರ್ತನೆಗೊಳ್ಳಲು ಸಾಧ್ಯ? ಆತ ತನ್ನನ್ನು ತಾನು ಹೇಗೆ ಸುಧಾರಿಸಕೊಳ್ಳಲು ಆಗುತ್ತದೆ? ಎಂದು ಕೇಳಿದ್ದಾರೆ. 
ಅಕಸ್ಮಾತ ಮುಂದಿನ ಜನ್ಮದಲ್ಲಿ ಬಡ ಕುಟುಂಬದಲ್ಲಿ ಹುಟ್ಟುವಂತೆ ದೇವರು ಮಾಡಿದರೆ, ಆತ ತನ್ನ ಮೇಲೆ ಆಗುತ್ತಿರುವ ಶೋಷಣೆ/ ದಬ್ಬಾಳಿಕೆಯನ್ನು ಹೇಗೆ ತಾನೇ ನಿಲ್ಲಿಸಲು ಶಕ್ತನಾಗುತ್ತಾನೆ? ಬಡ ಕುಟುಂಬದಲ್ಲಿ ಹುಟ್ಟಿದೆನೆಂದು ಆತ ನಿರ್ದಯಿಯಾಗಿ ಮುಂದೆ ಘೋರ ಅಪರಾಧಗಳನ್ನು ಎಸಗಲು ಶುರು ಮಾಡಿದರೆ, ಆಗ ನಾವು ದೇವರನ್ನೇ ದೂಷಿಸಬೇಕು ಅಲ್ಲವೇ? ಎಂದು ಅತೀ  ಆಳದಲ್ಲಿ ಪ್ರಶ್ನೆ ಮಾಡಿದ್ದಾರೆ.
Click here to read in English

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಭಗತ್ ಸಿಂಗ್ ಅವರ ಫೋಟೋವನ್ನು ತಮ್ಮ ವಾಹನಗಳಿಗೆ ಅಂಟಿಸುತ್ತಾರೆ. "ನಾನು ವಾಪಸ್ ಬರಬೇಕಾದಿತೇನೋ " ಎಂಬ ಶೀರ್ಷಿಕೆ ಹೊಂದಿರುವಂತಹ ಫೋಟೋಗಳನ್ನು ಸಹ ನೀವು ನೋಡಿರಬಹುದು. ಆದರೆ ಸ್ನೇಹಿತರೇ ನೆನಪಿಡಿ, ಭಗತ್ ಸಿಂಗ್ ಸ್ವತಃ ಒಬ್ಬ ನಾಸ್ತಿಕರಾಗಿದ್ದರು. ಅವನರಿಗೆ ಪುನರ್ಜನ್ಮ, ಸ್ವರ್ಗ ಅಥವಾ ನರಕಗಳಲ್ಲಿ ನಂಬಿಕೆ ಇರಲಿಲ್ಲ. ತಮ್ಮ ಜೀವವನ್ನು ಬಲಿದಾನ ಮಾಡಲು ಹೊರಟಾಗ ಅದರ ಸತ್ಯ ಅವರಿಗೆ ಗೊತ್ತಿತ್ತು. ಇದೇ  ನನ್ನ ಅಂತ್ಯ ಎಂದೂ, ಇದಾದ ಮೇಲೆ ಮತ್ತೆ ಏನೇನು ಇರುವುದಿಲ್ಲ ಎಂಬ ನಗ್ನ ಸತ್ಯವನ್ನು ಅವರು ಅರಿತಿದ್ದರು. ಆ ಸಮಯದಲ್ಲಿ ಅವರು ಹೇಳಿದ್ದು ಒಂದೇ ಮಾತು " ನೀವು ಒಬ್ಬ ಮನುಷ್ಯನನ್ನು ಕೊಲ್ಲಬಹುದು , ಆದರೆ ಆತನ ಆಲೋಚನೆಗಳನ್ನಲ್ಲ" ಎಂದು. 
Bhagat-Singh-Sticker-Car
Bhagat Singh Sticker on Car


ನೀವು ಭಗತ್ ಅವರನ್ನು ಆರಾಧಿಸುತ್ತಿದ್ದಾರೆ, ಅವರ ಚಿತ್ರಗಳನ್ನು ಅಂಟಿಸಿ ಸಂಭ್ರಮಿಸಿ ಕೈ ಬಿಡಬೇಡಿ. ಇದರಿಂದ ಏನು ಅರ್ಥ ದೊರೆಯುವುದಿಲ್ಲ. ಬದಲಿಗೆ ಅವರ ಆದರ್ಶಗಳನ್ನು, ಮೌಲ್ಯಗಳನ್ನು, ಆಲೋಚನೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಅವರ ಬಗ್ಗೆ ಓದಿರಿ. ಅವರ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಿ. ಆಗಲೇ ಒಬ್ಬ ಅಭಿಮಾನಿಯಾಗಿ, ದೇಶವಾಸಿಯಾಗಿ ಅವರ ಬಲಿದಾನಕ್ಕೆ ಶೋಭೆಯನ್ನು ತರುತ್ತೀರಿ.
ಈ ಲೇಖನ ನಿಮಗೆ ಇಷ್ಟವಾಯ್ತು ಅಂತ ಭಾವಿಸುತ್ತೇನೆ. 
ದಯವಿಟ್ಟು ಇದನ್ನು ನಿಮ್ಮ ಗೆಳೆಯರಿಗೂ ತಲುಪಿಸಿ. 
ಧನ್ಯವಾದಗಳು.


Sources,

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು