ಜಾಹಿರಾತು

ಭಗತ್ ಸಿಂಗ್, ಅವರ ತತ್ವಗಳು, ಗಾಂಧೀಜಿ ಮತ್ತು ಇತಿಹಾಸ

ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಭಗತ್ ಸಿಂಗ್ ಅವರನ್ನು, 1931 ರಲ್ಲಿ 23 ನೇ ವಯಸ್ಸಿನಲ್ಲಿ ಗಲ್ಲಿಗೇರಿಸಲಾಯಿತು. ಇಂದಿಗೂ ಅವರ ಇತಿಹಾಸಕ್ಕೆ ಯಾರು ಸರಿ ಸಾಟಿಯಿಲ್ಲ. ಕೆಲವು ಪಾಕಿಸ್ತಾನಿ ಸಂಸ್ಥೆಗಳು ಸಹ ಅವರನ್ನು ಹೀರೋ ಎಂದು ಶ್ಲಾಘಿಸುತ್ತವೆ. ಅಷ್ಟು ಸಣ್ಣ ವಯಸ್ಸಿನ ಮೇಲೆ ಪ್ರಭಾವ ಬೀರಿದ ಅವರ ವ್ಯಕ್ತಿತ್ವ ಎಷ್ಟು ದೊಡ್ಡದು ಇರಬೇಕು ಎಂದು ಯೋಚಿಸಿ. ಸಾಮಾನ್ಯ ಪ್ರಶ್ನೆ ಎಂದರೆ, ಗಾಂಧೀಜಿ ಗಲ್ಲು ಶಿಕ್ಷೆಯನ್ನು ಏಕೆ ತಡೆಯಲಿಲ್ಲ? ಎಂದು. ಕೆಳಗಿನ ಲೇಖನದಲ್ಲಿ, ಈ ಪ್ರಶ್ನೆಗೆ ಉತ್ತರದ ಜತೆ, ಇನ್ನೂ ಕೆಲವು ಪ್ರಶ್ನೆಗಳ ಉತ್ತರಗಳನ್ನು ವಿಶ್ಲೇಷಿಸಲಾಗಿದೆ.

ಭಗತ್ ಸಿಂಗ್ ಅವರನ್ನು ಮರಣದಂಡನೆಯಿಂದ ಮುಕ್ತಿ ಆಗದಿರಲು ಗಾಂಧೀಜಿಯ ವೈಫಲ್ಯವೇ ಕಾರಣ ಎಂದು ಟೀಕಾಕಾರರು ಅವರ ಮೇಲೆ ಹೊಣೆ ಹೊರೆಸಿದರು. ಗಾಂಧೀಜಿ ತಮ್ಮ ಅರೆಮನಸ್ಸಿನ ಪ್ರಯತ್ನ ಮಾಡುವ ಮೂಲಕ, ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಯ್ತು. ಇದರಲ್ಲಿದ್ದ ಗಾಂಧೀಜಿ ಅವರ ನಿಜವಾದ ಪಾತ್ರ ಮತ್ತು ಅದೇ ಸಮಯದಲ್ಲಿ ಕೇಳಿ ಬಂದ ಸಾರ್ವಜನಿಕ ಹೇಳಿಕೆಗಳ ನಡುವೆ ವ್ಯತ್ಯಾಸವಿದೆ.  ಈ ಲೇಖನವು ಕ್ರಾಂತಿಕಾರಿಗಳ ಮಹತ್ವವನ್ನೂ, ಮತ್ತು ಕೊನೆಯ ಕ್ಷಣದವರೆಗೂ ಭಗತ್ ಸಿಂಗ್ ಮತ್ತು ಅವರ ಸಹೋದ್ಯೋಗಿಗಳ ಜೀವಗಳನ್ನು ಉಳಿಸಲು ಗಾಂಧೀಜಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದನ್ನೂ ಸಹ ಹೇಳುತ್ತದೆ.

Disclaimer:

ಈ ಲೇಖನ ನನ್ನ ಸಂಶೋಧನೆಯ (research)ನ ಒಂದು ಭಾಗವಾಗಿದೆ. ಇಂತಹ ಕ್ಲಿಷ್ಟ ಹಾಗೂ ವಿವಾದಿತ ವಿಷಯದ ಬಗ್ಗೆ ಬರೆಯುವಾಗ, ತುಂಬಾ ಜಾಗರೂಕತೆಯಿಂದ ಹಾಗೂ ಮುತುವರ್ಜಿಯಿಂದ ಮತ್ತು ಹಲವಾರು ಲೇಖನಗಳ ಅಧ್ಯಯನದ ನಂತರ ಬರೆಯಲಾಗಿದೆ. ಇದು ಕೇವಲ ಮಾಹಿತಿ ನೀಡುವ ಲೇಖನವಾಗಿದ್ದು, ಯಾವುದೇ ರೀತಿಯ ವಿವಾದ/ವೈಮನಸ್ಸು ಉಂಟು ಮಾಡುವ ಉದ್ದೇಶ ಹೊಂದಿಲ್ಲ. ನಾನು ಓದಿದ ಲೇಖನಗಳ ಪಟ್ಟಿಯನ್ನು ಬ್ಲಾಗ್ ನ ಕೊನೆಯಲ್ಲಿ ಕೊಡಲಾಗಿದೆ. ಲೇಖನವನ್ನು ವೀಕ್ಷಕರ ವಿವೇಚನೆಗೆ ಬಿಡಲಾಗಿದೆ.

Bhagat Singh+Gandhi+history+story
ಭಗತ್ ಸಿಂಗ್ ಮತ್ತು ಗಾಂಧೀಜಿ

ಭಗತ್ ಸಿಂಗ್ ಓರ್ವ ಮಾರ್ಕ್ಸ್‌ವಾದಿ ಕ್ರಾಂತಿಕಾರಿ.  ನಾವು ಅವರ ರಾಷ್ಟ್ರೀಯತೆ ನೀತಿಯನ್ನು, ಅಂತರಾಷ್ಟ್ರೀಯ ಮಾರ್ಕ್ಸ್‌ವಾದದೊಂದಿಗೆ ಹೇಗೆ ತುಲನೆ ಮಾಡಿ ನೋಡಬೇಕು?

ಭಗತ್ ಸಿಂಗ್ ಅವರು ಮಾರ್ಕ್ಸ್‌ವಾದಿ ಕ್ರಾಂತಿಕಾರಿಯಾಗುವ ಲಕ್ಷಣವನ್ನು, ನಾವು ಅವರು ಹುಟ್ಟು ಹಾಕಿದ ನೌಜವಾನ್ ಭಾರತ್ ಸಭಾದಿಂದ ಗುರುತಿಸಬಹುದು. ಇದಾದ ನಂತರ HRA (ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿ) ಅನ್ನು ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಆರ್ಮಿ/ಅಸೋಸಿಯೇಷನ್ ​​ಎಂದು ಮರುನಾಮಕರಣ ಕೂಡ ಮಾಡಲಾಯಿತು.  ಅಸ್ತಿತ್ವದಲ್ಲಿರುವ ಸಂಘಟನೆ ಹೆಸರಿಗೆ 'ಸಮಾಜವಾದಿ' ಪದವನ್ನು ಸೇರಿಸುವುದರ ಮೂಲಕ ಕ್ರಾಂತಿಕಾರಿಗಳ ಚಿಂತನಾ ಕ್ರಮದಲ್ಲಿ ಗುಣಾತ್ಮಕ ಪ್ರಗತಿಯನ್ನು ನಾವು ಕಾಣಬಹುದು.
1924 ರಲ್ಲಿ ಎಚ್‌ಆರ್‌ಎ(HRA) ರಚನೆಯಿಂದ,
ಅವರ ಕ್ರಾಂತಿಕಾರಿ ಹೋರಾಟವು ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಹೋರಾಟದಿಂದ ಪ್ರಾರಂಭವಾಯಿತು. ಈ ಹೋರಾಟದಲ್ಲಿ ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಮತ್ತು ಭಗತ್ ಸಿಂಗ್ ಭಾಗವಾಗಿದ್ದರು.
ವಿಶ್ವದಲ್ಲಿ ನಡೆದ ಮತ್ತು ನಡೆಯುತ್ತಿದ್ದ ಕ್ರಾಂತಿಕಾರಿ ಚಳುವಳಿಗಳಿಂದ, ವಿಶೇಷವಾಗಿ ಐರಿಶ್ ಕ್ರಾಂತಿಕಾರಿ ಮತ್ತು ಬೋಲ್ಶೆವಿಕ್ ಚಳುವಳಿಗಳ ನಿರಂತರ ಅಧ್ಯಯನದಿಂದಾಗಿ, ಭಗತ್ ಸಿಂಗ್ ಅವರ ಆಲೋಚನೆಗಳು ಮತ್ತಷ್ಟು ಅಭಿವೃದ್ಧಿಗೊಂಡವು.  ಅವರು ನಿಷ್ಠಾವಂತ ರಾಷ್ಟ್ರೀಯತಾವಾದಿಯಾಗಿದ್ದರೂ ಸಹ, ಅವರ ರಾಷ್ಟ್ರೀಯತೆ ವಾದ ರೈತರ ಮತ್ತು ಕಾರ್ಮಿಕರ ಸಮಾಜವಾದಿ ಕ್ರಾಂತಿಯ ಬೀಜಗಳನ್ನು ಒಳಗೊಂಡ ಗುಣಾತ್ಮಕ ವ್ಯತ್ಯಾಸವನ್ನು ಕಾಣಬಹುದು. ಇದು ಯಾವುದೇ ಅಂತರರಾಷ್ಟ್ರೀಯ ಕ್ರಾಂತಿಕಾರಿ ಚಳುವಳಿಗಳ ಧ್ಯೇಯದೊಂದಿಗೆ ಭಿನ್ನಾಭಿಪ್ರಾಯ ಹೊಂದಿರಲಿಲ್ಲ. ವಾಸ್ತವವಾಗಿ, 1924ರಲ್ಲಿ ಅವರು ಬರೆದ ಪ್ರಬಂಧದಲ್ಲಿ, ಭಗತ್ ಸಿಂಗ್ ಅವರು ವಸುಧೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ಎಂಬ ಭಾರತೀಯ ಕಲ್ಪನೆಯನ್ನು ತೆಗೆದುಕೊಂಡು, ಭವಿಷ್ಯದಲ್ಲಿ ಅದೇ ರೀತಿಯ ವಿಶ್ವ ಒಂದು ಒಕ್ಕೂಟವಾಗಿ ಬದುಕಬೇಕು ಎಂದು ಕನಸು ಕಂಡಿದ್ದರು.

"ಭಗತ್ ಸಿಂಗ್ ಅವರ ಜೀವನ ಚರಿತ್ರೆ ಓದಲು ಇಲ್ಲಿ ಒತ್ತಿ."

ಗಾಂಧೀ ಚಳವಳಿಯ ಬಗ್ಗೆ ಭಗತ್ ಸಿಂಗ್ ಅವರ ಅಭಿಪ್ರಾಯ ಏನಿತ್ತು?

ಭಗತ್ ಸಿಂಗ್ ಮತ್ತು ಅವರ ಸಂಗಡಿಗರು ಗಾಂಧಿ ಚಳವಳಿಯು ಹೆಚ್ಚಿನದನ್ನು ಸಾಧಿಸದೆ ರಾಜಿಯಲ್ಲಿ ಕೊನೆಗೊಳ್ಳುತ್ತದೆ ಎಂದೇ ಭಾವಿಸಿದ್ದರು.  ‘ಸಬರಮತಿಯ ಸಂತ’ನ ಯಾವ ಶಿಷ್ಯರೂ ಸ್ಥಿರವಾಗಿ ಉಳಿಯುವುದಿಲ್ಲ ಎಂದು ಅವರು ಆಗಲೇ ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಗಾಂಧೀಜಿ ಅವರು ಜನ ಸಾಗರದ ಮೇಲೆ ಬೀರಿದ್ದ ಪ್ರಭಾವದಿಂದಾಗಿ, ಭಗತ್ ಅವರು ಗಾಂಧೀಜಿ ಅವರನ್ನು ಗೌರವಿಸುತ್ತಿದ್ದರು. ಅವರ ಈ ನಡೆಯನ್ನು ತನ್ನ ಸಹಚರರಿಗೂ ಕಲಿಯುವಂತೆ ಭಗತ್ ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಗಾಂಧಿಯವರ ವಿಚಾರಗಳು ಕೇವಲ ಭ್ರಮೆಗಳಿಂದ ಕೂಡಿದ್ದು, ಸಮಾನತೆಗಾಗಿ, ವಿಶೇಷವಾಗಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಾಗಿ, ಸಾಮಾಜಿಕ ಬದಲಾವಣೆಯನ್ನು ತರಲು ಅವರ ವಿಚಾರ ಧಾರೆಯಿಂದ ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು.

ಭಗತ್ ಸಿಂಗ್ ಮತ್ತು ಅವರ ಸಹಚರರನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸಲು ಗಾಂಧಿ ಪ್ರಯತ್ನಿಸಲಿಲ್ಲ ಎಂಬ ಪ್ರತಿಪಾದನೆಯ ಬಗ್ಗೆ ಜನರ ಅಭಿಪ್ರಾಯವೇನು?

ಮೊದಲಿಗೆ, ಗಾಂಧಿ ಇರ್ವಿನ್ ಜತೆ ಒಪ್ಪಂದ ಮಾಡುವಾಗ ಶಿಕ್ಷೆಯಿಂದ ಇವರನ್ನು ಪಾರು ಮಾಡುವ ಮಾತುಕತೆ ಆಡಿಕೊಂಡಿದ್ದರೂ, ಭಗತ್ ಸಿಂಗ್ ಮತ್ತು ಅವರ ಸಹಚರರು ಇದನ್ನು ಒಪ್ಪುತ್ತಿರಲಿಲ್ಲ ಅನಿಸುತ್ತೆ. ಕ್ರಾಂತಿಕಾರಿಗಳು ತಮ್ಮ ಜೀವನದ ಅಂತ್ಯದಲ್ಲಿ ಯಾವುದೇ ರಾಜಿಗೆ ಒಪ್ಪಿಕೊಳ್ಳುವ ಜೀವಿಗಳಾಗಿ ಇರಲಿಲ್ಲ.  ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುವಂತೆ ಭಾರತೀಯ ಜನಸಮೂಹವನ್ನು ಪ್ರಚೋದಿಸಲು, ಅವರು ತಮ್ಮ ಜೀವನವನ್ನು ತ್ಯಾಗ ಮಾಡಬೇಕೆಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಆದರೂ ಗಾಂಧಿಯವರು ಪ್ರಯತ್ನಗಳನ್ನು ಮಾಡಿದರು, ಆದರೆ ನೆಹರೂ ಮತ್ತು ಬೋಸ್ ಅವರ ಸಲುವಾಗಿ ಮಾಡಿದ ಪ್ರಯತ್ನದಂತೆ ಇದಾಗಿರಲಿಲ್ಲ ಎಂದು ಹೇಳಬಹುದು. ಅಪರಾಧ ಏನೇ ಇರಲಿ, ತಾನು 'ಮರಣದಂಡನೆಗೆ ವಿರುದ್ಧ' ಎಂದು ಗಾಂಧಿಯವರು ತಮ್ಮ ನೈತಿಕ ನಿಲುವನ್ನು ಪ್ರತಿಪಾದಿಸಲಿಲ್ಲ.  ಕ್ರಾಂತಿಕಾರಿಗಳ ಪ್ರಕರಣದಲ್ಲಿ, ಮರಣದಂಡನೆ ಬಗೆಗಿನ ತನ್ನ ವಿರೋಧದ ತಾತ್ವಿಕ ನಿಲುವಿನ ಜತೆ ಗಾಂಧೀಜಿ ರಾಜಿ ಮಾಡಿಕೊಳ್ಳಬಾರದಾಗಿತ್ತು.

ಹೇಳಿಕೆಗಳು :

ಭಗತ್ ಸಿಂಗ್ ಅವರ ಕ್ರಾಂತಿಕಾರಿ ಸಹೋದ್ಯೋಗಿ ಮತ್ತು ಗಾಂಧಿಯ ಕಟು ವಿಮರ್ಶಕ  ಯಶ್ಪಾಲ ಈ ರೀತಿ ಬರೆದಿದ್ದಾರೆ (1): “ ಜನರ ಮೇಲೆ ಸರ್ಕಾರ ತನ್ನ ಒತ್ತಡವನ್ನು ಹಾಕುವುದು ನೈತಿಕವೆಂದು ಗಾಂಧಿ ಪರಿಗಣಿಸಿದ್ದರು. ಆದರೆ ಭಗತ್ ಸಿಂಗ್ ಶಿಕ್ಷೆಯನ್ನು ಕಡಿಮೆ ಮಾಡಲು, ವಿದೇಶಿ ಸರ್ಕಾರದ ಮೇಲೆ ನಮ್ಮ ಜನರ ಒತ್ತಡವನ್ನು ಹಾಕುವುದು ಅನೈತಿಕವೆಂದು ಅವರು ಪರಿಗಣಿಸಿದರು.” ಎಂದು. ಎಡಪಂಥೀಯ ವಿದ್ವಾಂಸ ಕ್ರಾಂತಿಕಾರಿ, ಮನ್ಮಥನಾಥ ಗುಪ್ತ ಕೂಡ ಭಗತ್ ಸಿಂಗ್ ವಿಷಯದ ಬಗ್ಗೆ ಮಹಾತ್ಮ ಗಾಂಧೀಜಿಯವರ ಮೇಲೆ ಕಟುವಾಗಿ ದಾಳಿ ಮಾಡಿದರು.

ಭಗತ್ ಸಿಂಗ್ ಅವರ ಇನ್ನೊಬ್ಬ ಜೀವನಚರಿತ್ರೆಕಾರ ಜಿ.ಎಸ್. ಡಿಯೋಲ್ (1969), ಭಗತ್ ಸಿಂಗ್ ಅವರ ಮರಣದಂಡನೆಗೆ ಮಹಾತ್ಮ ಗಾಂಧಿಯವರನ್ನೂ ಹೊಣೆಗಾರರನ್ನಾಗಿ ಮಾಡಿದರು.

ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುವನ್ನು ಗಲ್ಲಿಗೇರಿಸಿದ ಮೂರು ದಿನಗಳ ನಂತರ, ಕರಾಚಿಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರು ಭಗತ್ ಸಿಂಗ್ ಮತ್ತು ಕ್ರಾಂತಿಕಾರಿ ಹಿಂಸಾಚಾರದ ಬಗ್ಗೆ ತಮ್ಮ ನಿಲುವನ್ನು ವಿವರಿಸಿದರು:
" ಕೊಲೆಗಾರ, ಕಳ್ಳ ಅಥವಾ ಡಕಾಯಿತನನ್ನು ಶಿಕ್ಷಿಸುವುದು ನನ್ನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ನಿಮಗೆ ತಿಳಿದೇ ಇದೆ. ನಾನು ಭಗತ್ ಸಿಂಗ್‌ನನ್ನು ಉಳಿಸಲು ಬಯಸಲಿಲ್ಲ ಎಂಬ ವಾದಕ್ಕೆ ಯಾವುದೇ ಹುರುಳಿಲ್ಲ. ಆದರೆ ಭಗತ್ ಸಿಂಗ್ ಅವರ ತಪ್ಪನ್ನು ನೀವು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರು ಅನುಸರಿಸಿದ ಮಾರ್ಗವು ತಪ್ಪು ಮತ್ತು ನಿರರ್ಥಕವಾಗಿತ್ತು.  ಹಿಂಸಾಚಾರದ ಮಾರ್ಗವು ವಿನಾಶಕ್ಕೆ ಮಾತ್ರ ಕಾರಣವಾಗಬಹುದು ಎಂದು ಯುವಕರಿಗೆ ನಾನು ಹೇಳಲು ಬಯಸುತ್ತೇನೆ.(2)".
ಲಾರ್ಡ್ ಇರ್ವಿನ್, ರಾಜ್ಯ ಕಾರ್ಯದರ್ಶಿಗೆ ಬರೆದ ವರದಿಯಲ್ಲಿ, ಪರಿವರ್ತನೆಯ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಬರೆದಿದ್ದಾರೆ:
"ಅವರು (ಮಹಾತ್ಮಾ ಗಾಂಧಿ) ಪರಿವರ್ತನೆಗಾಗಿ ಮನವಿ ಮಾಡಲಿಲ್ಲ. ಆದರೂ ಅವರು ಯಾವುದೇ ರೀತಿಯಲ್ಲಿ ಪ್ರಾಣ ಹರಣ ಮಾಡುವುದನ್ನು ವಿರೋಧಿಸಿದರು. ಇದು ಶಾಂತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಭಾವಿಸಿದ್ದರು.  ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಶಿಕ್ಷೆಯನ್ನು ಮುಂದೂಡುವಂತೆ ಕೇಳಿದರು.  ನಿಖರವಾದ ದಿನಾಂಕಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವಾಗಿದ್ದರೂ, ಯಾವುದೇ ಇತರ ಹಿಂಸಾತ್ಮಕ ಅಪರಾಧದ ಸಂದರ್ಭದಲ್ಲಿ, ಸಮಾನ ಬಲದಿಂದ ಮಾಡಲಾಗದ ಯಾವುದೇ ಪ್ರಕರಣವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವುದರಲ್ಲಿ ನಾನು ತೃಪ್ತಿ ಹೊಂದಿದ್ದೇನೆ.(3)"

1928 ರ ಪ್ರಬಂಧದಲ್ಲಿ ಭಗತ್ ಸಿಂಗ್ ಅವರು ಸುಭಾಸ್ ಚಂದ್ರ ಬೋಸ್ ಅವರನ್ನು ಬಂಡಾಯಗಾರ ಮತ್ತು ಜವಾಹರಲಾಲ್ ನೆಹರು ಅವರನ್ನು ಕ್ರಾಂತಿಕಾರಿ ಎಂದು ಕರೆದರು.  ಏಕೆ?

ಸುಭಾಸ್ ಚಂದ್ರ ಬೋಸ್ ಯುವ ಕ್ರಾಂತಿಕಾರಿಗಳೊಂದಿಗೆ ಭಾವನಾತ್ಮಕವಾಗಿ ಹೆಚ್ಚು ಅಂಟಿಕೊಂಡಿದ್ದರು. ಭಗತ್ ಸಿಂಗ್ ಅವರಿಗೆ, ನೆಹರೂರವರ ಬಳಿ ಇರುವ ಸಮಾಜವಾದದ ಬಗ್ಗೆ ಅವರ ತರ್ಕಬದ್ಧ ವಿಚಾರಗಳಿಗೆ ಆಕರ್ಷಿತರಾಗಿದ್ದರಿಂದ, ಅದಕ್ಕೆ ಆದ್ಯತೆ ಕೊಟ್ಟರು. ಸುಭಾಸ್ ಬೋಸ್ ಕೂಡ ಸಮಾಜವಾದಿಯಾಗಿದ್ದರು, ಆದರೆ ಭಗತ್ ಸಿಂಗ್ ಅವರ ಪ್ರಕಾರ, ಅವರು ಹೆಚ್ಚು ಭಾವನಾತ್ಮಕರಾಗಿದ್ದರು ಮತ್ತು ನೆಹರೂ ಹೆಚ್ಚು ವಿಚಾರವಾದಿ ಮತ್ತು ವಾಸ್ತವವಾದಿಯಾಗಿದ್ದರು.  ಅದಕ್ಕಾಗಿಯೇ ಅವರು ಬೋಸ್ ಅವರನ್ನು ಬಂಡಾಯಗಾರ ಮತ್ತು ನೆಹರೂ ಅವರನ್ನು ಕ್ರಾಂತಿಕಾರಿ ಎಂದು ಭಾವಿಸಿದ್ದರು.  ಅವರು ಇಬ್ಬರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಮತ್ತು ವೈಯಕ್ತಿಕ ಮಟ್ಟದಲ್ಲಿ ಸುಭಾಸ್ ಬೋಸ್ ಅವರೊಂದಿಗೆ ಹೆಚ್ಚು ಒಡನಾಟ ಇತ್ತು.  ಆದರೆ ಯುವಕರು ನೆಹರೂ ಅವರ ತರ್ಕಬದ್ಧ ಚಿಂತನೆಯನ್ನು ಅನುಸರಿಸಬೇಕೆಂದು ಅವರು ಬಯಸಿದ್ದರು.

ಸಾಮಾಜಿಕ ಅಸಮಾನತೆಗಳ ಬಗ್ಗೆ ಭಗತ್ ಸಿಂಗ್ ಧೋರಣೆ ಏನಿತ್ತು?  ಅವರನ್ನು ಜಾತಿ ವಿರೋಧಿ ಹೋರಾಟಗಾರನಾಗಿ ಕಾಣಬಹುದೇ?

ಭಗತ್ ಸಿಂಗ್ ಅವರು ‘ಅಸ್ಪೃಶ್ಯತೆಯ ಸಮಸ್ಯೆ’ ಎಂಬ ಪ್ರಬಂಧದಲ್ಲಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿ ಅವರು ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಅತ್ಯಂತ ಬಲವಾದ ಪದಗಳನ್ನು ಬಳಸಿ ಪ್ರಬಂಧ ಬರೆದಿದ್ದಾರೆ.  ನೌಜವಾನ್ ಭಾರತ್ ಸಭಾ ವೇದಿಕೆಯಿಂದ, ಸಿಂಗ್ ಮತ್ತು ಅವರ ಒಡನಾಡಿಗಳು, ಎಲ್ಲಾ ಧರ್ಮ ಮತ್ತು ಸಮುದಾಯಗಳಿಗೆ, ಲಾಂಗರ್ ಅನ್ನು ಆಯೋಜಿಸುತ್ತಿದ್ದರು. ಮರಣದಂಡನೆಗೆ ಮುನ್ನ ತನ್ನ ಕೊನೆಯ ಆಹಾರವನ್ನು ಬೋಘಾ ಎಂಬ ದಲಿತ ಕೈದಿಯಿಂದ ಬೇಯಿಸಲು ಭಗತ್ ಸಿಂಗ್ ಕೇಳಿಕೊಂಡರು.  ಬ್ರಿಟಿಷ್ ವಸಾಹತುಶಾಹಿಗಳನ್ನು ಹೊರಹಾಕಿದ ನಂತರ ಸಮಾಜವಾದವನ್ನು ನಿರ್ಮಿಸುವುದು ಅವರ ಗುರಿಯಾಗಿತ್ತು.  ಜನಸಾಮಾನ್ಯರು ಒಂದೇ ರೀತಿಯ ಶೋಷಣೆಯ ವ್ಯವಸ್ಥೆಯಲ್ಲಿ ಬದುಕಬೇಕಾಗುತ್ತದೆ ಎಂದರೆ, ಆಡಳಿತಗಾರ ಲಾರ್ಡ್ ಇರ್ವಿನ್ ಇದ್ದರೇನು? ಅಥವಾ ಸರ್ ತೇಜ್ ಬಹದ್ದೂರ್ ಸಪ್ರು ಇದ್ದರೇನು? ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಹೇಳಿದರು.

References:

1. Yashpal, Simhavalokan, (Allahabad: Lokabharati, 2005), pp. 404-405.
2. CWMG, Vol. XLV, p. 349.
3.CWMG, Vol. XLV, pp. 196-197.
4.Gandhi 1915-1948: A Detailed Chronology, Ibid.
5.National Archives of India (N.A.I.), Home Political File, 33/1 & KW, 1931.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು