ಜಾಹಿರಾತು

ಭಾರತದ ಮೇಲೆ ಒತ್ತಡ ಹೇರುವುದು ಸರಿಯೇ ? ರಷ್ಯಾನಾ ? ಪಾಶ್ಚಿಮಾತ್ಯ ದೇಶಗಳಾ?

ರಷ್ಯಾ-ಉಕ್ರೇನ್ ಯುದ್ಧ 3 ನೇ ವಾರಕ್ಕೆ ಕಾಲಿಟ್ಟಿದೆ. ಪರಿಸ್ಥಿತಿ ತಿಳಿಯಾಗುವುದು ಬಿಡಿ, ಇನ್ನಷ್ಟು ಬಿಗಡಾಯಸುತ್ತಿದೆ. ಸಾವು ನೋವು, ಪುಟ್ಟ ಕಂದಮ್ಮಗಳ ಆಕ್ರಂದನ, ಒಮ್ಮತಕ್ಕೆ ಬಾರದ ಸರ್ಕಾರಗಳು, ಸುಂದರ ಪಟ್ಟಣಗಳು ಸ್ಮಶಾನ ಆಗಿರುವುದು, ಹೀಗೆ ಅನೇಕ ವಿಷಯಗಳು ಮನುಕುಲದ ಮನಕುಲುಕುವಂತೆ ಮಾಡಿವೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಎರಡು ದೇಶಗಳ ನಡುವೆ ಉಂಟಾದ ಮನಸ್ತಾಪ, ಈಗ ವಿಶ್ವವನ್ನೇ ಎರಡು ಹೋಳು ಮಾಡಿ ಹಾಕಿದೆ. ಮತ್ತೊಂದು ಶೀತಲ ಸಮರ ಯುಗಕ್ಕೆ ನಾಂದಿ ಹಾಡುವಂತಹ ಲಕ್ಷಣಗಳು ಎದ್ದು ಕಾಣುತ್ತಿವೆ. ಯುದ್ಧ ಭಾರತದಲ್ಲಿ ಇರದಿದ್ದರೂ ಸಹ, ಅದರ ಮೇಲೆ ನಿರಂತವಾಗಿ ಹೇರುತ್ತಿರುವ ಒತ್ತಡಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಈಗಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಂದೊಂದು ದಿನ ಇಂತಹ ಸ್ಥಿತಿ ಬರುವ ಸನ್ನಿವೇಶ ಎದುರಾದೀತು. ಅಮೆರಿಕಾ ತನ್ನ ರಕ್ಷಣಾ ನಿಧಿಯನ್ನು ಜಾಸ್ತಿ ಮಾಡುವಂತೆ ಹೊಸ ಬಿಲ್ ಅನ್ನು ಜಾರಿ ಮಾಡಿದೆ, ಜರ್ಮನಿ ಅಣು ಬೆಂಬಲಿತ ಹೊಸ F-35A ಯುದ್ಧ ವಿಮಾನ ಖರೀದಿ ಮಾಡಲು ಮುಂದಾಗಿದೆ, ಸ್ಲೋವಾಕಿಯ ತನ್ನ ದೇಶದಲ್ಲಿ ಇಬ್ಬರನ್ನು, ರಷ್ಯಾದ ಬೇಹುಗಾರರು ಎಂದು ಗುರುತಿಸಿ ಶಿಕ್ಷೆ ನೀಡುತ್ತಿದೆ, ಐರೋಪ್ಯ ರಾಷ್ಟ್ರಗಳು ಹೆಚ್ಚಿನ ತೈಲ ಬೇಕು ಎಂದು ಸೌದಿ ರಾಷ್ಟ್ರಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಎಲ್ಲ ಕಡೆ ಮುಸುಕಿನ ಗುದ್ದಾಟಗಳೇ ನಡೆಯುತ್ತಿವೆ. ಶೀತಲ ಸಮರದ ಎಲ್ಲ ಆಯಾಮಗಳ ಮುನ್ನೋಟ ಇಲ್ಲಿ ಸಿಗುತ್ತಿದೆ.
Pressuring India is Right? Dindima Kannada Article

ಹೋಳಾದ ಪ್ರಪಂಚ:

ಇಲ್ಲಿ ಸ್ಪಷ್ಟವಾಗಿ ಎರಡು ಪಕ್ಷಗಳಿವೆ. ಒಂದು ಅಮೆರಿಕ ಬೆಂಬಲಿತ ನ್ಯಾಟೋ ಪಡೆಯ ಸಮೂಹ ಶಕ್ತಿ. ಇವರೆಲ್ಲ ಸೇರಿ ಯುದ್ಧವನ್ನು ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ಯುದ್ಧ ಎಂದೇ ಬಣ್ಣಿಸಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡುವಂತೆ ವೆನಿಜುವೆಲಾ ಮತ್ತು ಚೀನಾದಂತಹ ಸರ್ವಾಧಿಕಾರದ ರಾಷ್ಟ್ರಗಳ ಬೆಂಬಲ ಸಹ ಇಂಬು ನೀಡುತ್ತಿದೆ ಎಂದು ಆಪಾದಿಸುತ್ತಾ ಬಂದಿದ್ದಾವೆ. ಇದಲ್ಲದೆ ಬೇರೆ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಆಸ್ಟ್ರೇಲಿಯಾ ಅಂತಹ ದೇಶಗಳು ಸಹ ಅಮೆರಿಕ ಬೆಂಬಲಿತ ಗುಂಪಿಗೆ ತಮ್ಮ ಸಮ್ಮತಿಯನ್ನು ನೀಡುತ್ತಿವೆ.
ಮತ್ತೊಂದೆಡೆ ರಷ್ಯಾ ಬೆಂಬಲಿತ ರಾಷ್ಟ್ರಗಳಾದ ಬೆಲಾರುಸ್, ಆರ್ಮೇನಿಯ, ಮಧ್ಯ ಏಶಿಯಾ ಗಣರಾಜ್ಯಗಳು ರಷ್ಯಾವನ್ನು ಬೆಂಬಲಿಸುತ್ತಾ ತಮ್ಮದೇ ಆದ ಒಂದು ಗುಂಪನ್ನು ರಚಿಸಿವೆ. ಈ ಕಡೆಗೆ ಸಿರಿಯಾ ಮತ್ತು ಉತ್ತರ ಕೊರಿಯಾ ದೇಶಗಳು ಈ ಎಲ್ಲಾ ಪರಿಸ್ಥಿತಿಗೆ ನ್ಯಾಟೋದ ವಿಸ್ತರಣಾವಾದ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಮಾಡುತ್ತಿರುವ ಕೆಲಸಗಳ ಪರಿಣಾಮ ಎಂದು ಹೇಳುತ್ತಾ ಬಂದಿವೆ.
ಇಲ್ಲಿತನಕ ಹೇಳಿದ ಎಲ್ಲಾ ದೇಶಗಳು, ತಮಗೆ ಇಷ್ಟವಾಗುವಂತಹ ಪಕ್ಷಗಳನ್ನು ಈಗಾಗಲೇ ಸೇರಿ ಆಗಿದೆ. ಹಾಗಾದರೆ ಇನ್ನು ಉಳಿದ ರಾಷ್ಟ್ರಗಳ ಕಥೆ ಏನು? ಈ ರಾಷ್ಟ್ರಗಳು ಯಾವುದೇ ಪಕ್ಷವನ್ನು ಬಯಸುತ್ತಿಲ್ಲ. ಆದರೂ ಇವುಗಳ ಮೇಲೆ ಯಾವುದಾದರೂ ಒಂದು ಪಕ್ಷ ಸೇರುವಂತೆ ಅಪಾರವಾಗಿ ಒತ್ತಡವನ್ನು ಹೇರಲಾಗುತ್ತಿದೆ. ಅಂತಹ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು ಮತ್ತು ಈ ವಿಷಯದಲ್ಲಿ ತಟಸ್ಥ ನೀತಿಯನ್ನು ಹೊಂದಿದೆ. ಕೇವಲ ಭಾರತವಷ್ಟೇ ಅಲ್ಲ, ಪಾಕಿಸ್ತಾನ, ಶ್ರೀಲಂಕಾ, ಸೌದಿ ಅರೇಬಿಯಾ ಹೀಗೆ ಅನೇಕ ದೇಶಗಳು ಸಹ ತಟಸ್ಥ ಮನೋಭಾವ ಹೊಂದಿವೆ.

ಉಭಯ ಸಂಕಟ :

ಈ ಒಂದು ಪರಿಸ್ಥಿತಿ ಭಾರತವನ್ನು ಎಂತಹ ಉಭಯ ಸಂಕಟಕ್ಕೆ ನೂಕಿದೆ ಎಂದರೆ, ಈಕಡೆ ವ್ಯಾಪಾರದಲ್ಲಿ ಪಾಲುದಾರ ಆಗಿರುವ ಅಮೆರಿಕವನ್ನು ಬಿಡುವಂತಿಲ್ಲ, ಆಕಡೆ ರಕ್ಷಣಾ ಸಾಮಗ್ರಿಗಳಲ್ಲಿ ಸಹಾಯ ಮಾಡುತ್ತಿರುವ ರಷ್ಯಾವನ್ನು ಸಹ ಬಿಡುವಂತಿಲ್ಲ. ಭಾರತಕ್ಕೆ ಇವೆರಡರ ಸಂಬಂಧವು ತುಂಬಾ ಮುಖ್ಯವಾಗಿದೆ.
ಚೀನಾ ದಬ್ಬಾಳಿಕೆಯನ್ನು ಮೆಟ್ಟಿನಿಲ್ಲಲು ಮಾಡಿದ ಒಕ್ಕೂಟದ ದೇಶವಾದ ಅಮೆರಿಕ ಒಂದು ಕಡೆಯಾದರೆ, ಮೊದಲಿನಿಂದಲೂ ಭಾರತದ ಆಪ್ತಮಿತ್ರನಾಗಿ, ಭಾರತದ ಬೆನ್ನಿಗೆ ನಿಂತ ರಷ್ಯಾ ಇನ್ನೊಂದು ಕಡೆ. ಭಾರತ ಯಾವುದೇ ತೆರನಾಗಿ ಯಾವುದೇ ರಾಷ್ಟ್ರದ ಪರ ನಿಲ್ಲುತ್ತಿಲ್ಲ ಎಂದು ಅಮೆರಿಕಾಗೆ ಭಾರತದ ಪರಿಸ್ಥಿತಿ ಅರ್ಥವಾಗಿದೆ.
India's take on russia and US
ಭಾರತದ ಉಭಯ ಸಂಕಟ
ಪರಿಸ್ಥಿತಿಯ ಆಧಾರದ ಮೇಲೆ, ಯುದ್ಧ ಶುರುವಾಗಿ ಎರಡು ದಿನ ಕಳೆದ ನಂತರ, ಅಮೆರಿಕಾದ ವಿದೇಶಾಂಗ ಸಚಿವಾಲಯವು ಈ ರೀತಿ ಹೇಳಿತು " ಭಾರತ ಮತ್ತು ರಷ್ಯಾದ ನಡುವಿನ ಸಂಬಂಧ ವಿಶಿಷ್ಟವಾಗಿದ್ದು, ಅದು ಅಮೆರಿಕ ಮತ್ತು ರಷ್ಯಾದ ನಡುವಿನ ಸಂಬಂಧದಂತೆ ಅಲ್ಲ. ಅವರ ಆ ಸಂಬಂಧದ ಬಗ್ಗೆ ನಮಗೆ ಆಕ್ಷೇಪವಿಲ್ಲ" ಎಂದು.

ವ್ಯತ್ಯಾಸದ ಮಾತುಗಳು :

ಈ ಹೇಳಿಕೆ ನಾಲ್ಕು ವಾರಗಳ ಹಿಂದಿನದು. ಆಗಿನ ಮಾತಿನ ಲಯಕ್ಕೂ ಈಗಿನ ಮಾತಿನ ಲಯಕ್ಕೂ ತುಂಬಾ ವ್ಯತ್ಯಾಸವಿದೆ. ಅಮೆರಿಕಾದ ಜನಪ್ರತಿನಿಧಿಗಳು ಈಗ ಹೊಸ ವರಸೆಯನ್ನು ತೋರುತ್ತಿದ್ದಾರೆ. ಇಲ್ಲಿ ತನಕ ಸುಮ್ಮನೆ ಇದ್ದ ಅಲ್ಲಿನ ರಾಜಕಾರಣಿಗಳು ಈಗ ಭಾರತಕ್ಕೆ "ಹೇಗೆ ಒಳ್ಳೆಯ ಸ್ನೇಹಿತರನ್ನು ಆರಿಸಬೇಕು" ಎಂಬ ಪಾಠವನ್ನು ಹೇಳುತ್ತಿದ್ದಾರೆ. ನಿಮ್ಮ ಆಯ್ಕೆಗಳು, ನಿಮ್ಮನ್ನು ಮುಂದೆ ಇತಿಹಾಸದಲ್ಲಿ ನೆನಪಿರುವಂತೆ ಮಾಡುತ್ತವೆ ಎಂಬ ಭವಿಷ್ಯವಾಣಿಯನ್ನು ಸಹ ಹೇಳುತ್ತಿದ್ದಾರೆ.

ಭಾರತದ ಪ್ರತ್ರಿಕ್ರಿಯೆ :

ಈ ರೀತಿಯಾಗಿ ಭಾರತ ಈಗ ಅತೀವ ಒತ್ತಡದಲ್ಲಿ ಇದೆ. ಹೊರಜಗತ್ತಿಗೆ ರಷ್ಯಾವನ್ನು ಬೆಂಬಲಿಸುವುದು ಎಂದರೆ, ಅವರ ಆಕ್ರಮಣವನ್ನು ಬೆಂಬಲಿಸಿದಂತೆ ಲೆಕ್ಕ. ಇಲ್ಲಿಯತನಕ ಭಾರತ ಯಾವುದೇ ರೀತಿಯಾದಂತಹ ಬೆಂಬಲ ಅಥವಾ ಹೇರಿಕೆಯನ್ನು ಹೇರಿಲ್ಲ. ಅದೇ ರೀತಿಯಾಗಿ ಯಾರ ಪರವಾಗಿಯೂ ನಿಂತಿಲ್ಲ. ಒಟ್ಟು ಮೂರು ಸಲ. ಮೂರು ಸಲ ಯುನೈಟೆಡ್ ನೇಶನ್ಸ್ ಅಧಿವೇಶನದಲ್ಲಿ, ಯಾವುದೇ ರೀತಿಯ ಮತ ಹಾಕುವುದರಿಂದ ದೂರ ಉಳಿದಿದೆ. ಒಮ್ಮೆ ಯುನೈಟೆಡ್ ನೇಶನ್ಸ್ ಸೆಕ್ಯೂರಿಟಿ ಕೌನ್ಸಿಲ್ ನಲ್ಲಿ, ಇನ್ನೊಮ್ಮೆ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬಲಿ ಅಲ್ಲಿ, ಮೂರನೆಯದಾಗಿ ಯುನೈಟೆಡ್ ನೇಶನ್ ಹ್ಯೂಮನ್ ರೈಟ್ಸ್ ಅಲ್ಲಿ. 
ಈ ಎಲ್ಲ ಸಭೆಗಳಲ್ಲಿ ಭಾರತ ಹೇಳಿದ್ದು ಇಷ್ಟೇ. ಕೂಡಲೇ ಕದನವಿರಾಮ ಘೋಷಿಸಬೇಕು ಎಂದು. ಅಷ್ಟೇ ಅಲ್ಲದೆ ಶಾಂತತೆಯಿಂದ ಉಭಯ ದೇಶಗಳು, ರಾಜತಾಂತ್ರಿಕತೆ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ತನ್ನ ಅಭಿಪ್ರಾಯವನ್ನು ನೀಡಿತು.

ಮೊದಲೇ ಹೇಳಿದ ಹಾಗೆ ಈ ನಡೆ ಬರೀ ಭಾರತದ್ದು ಆಗಿಲ್ಲ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಕೂಡ ಇದೇ ರೀತಿಯಾಗಿ ಮತ ಹಾಕುವುದರಿಂದ ದೂರ ಉಳಿದವು. ಆದರೆ ಅದೇನೋ ಗೊತ್ತಿಲ್ಲ. ಭಾರತ ಈ ರೀತಿಯಾಗಿ ದೂರ ಉಳಿದಿದ್ದು ಮಾತ್ರ ಪಾಶ್ಚಿಮಾತ್ಯ ದೇಶಗಳಿಗೆ ಕರಗಿಸಿಕೊಳ್ಳಲು ಆಗುತ್ತಿಲ್ಲ. ಈ ನಡೆಯನ್ನು ಪಾಶ್ಚಿಮಾತ್ಯ ದೇಶಗಳು ಭಾರತ ಆಕ್ರಮಣ ದೇಶದ ಪರವಾಗಿ ನಿಲ್ಲುತ್ತಿದೆ, ಪ್ರಜಾಪ್ರಭುತ್ವದ ವಿರುದ್ಧ ನಡೆಯುತ್ತಿದೆ ಎಂದು ಹೇಳಿಕೆ ನೀಡಲು ಶುರು ಮಾಡಿದವು. ಇದಕ್ಕೆ ಭಾರತವು ತನ್ನ ಹೇಳಿಕೆಯನ್ನು ನೀಡಿತು. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಯ ಪರಿಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು. ತನ್ನ ಮೊದಲ ಆದ್ಯತೆ ಯುದ್ಧ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡ ತನ್ನ 20,000 ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ಸು ಕರೆದುಕೊಂಡು ಬರುವುದು ಎಂದು, ಏಕಾಏಕಿ ಯುದ್ಧ ಶುರುವಾಗಿದ್ದರಿಂದ ಈ ಕಾರ್ಯ ಇನ್ನೂ ಜಟಿಲವಾಗಿದೆ ಎಂದು, ಪ್ರಜೆಗಳ ಸುರಕ್ಷತೆಯ ಖಾತ್ರಿ ಎರಡು ದೇಶಗಳಿಂದ ಬೇಕಾಗಿರುವುದರಿಂದ, ತಾನು ತಟಸ್ಥವಾಗಿ ನಿಲ್ಲಲು ನಿರ್ಧರಿಸಿದೆ ಎಂದು ಹೇಳಿತು. ಆಪರೇಷನ್ ಗಂಗಾ ಯಶಸ್ಸು ಕಾಣಲು ಪ್ರಮುಖ ಕಾರಣ ಏನೆಂದರೆ, ಭಾರತ ಎರಡು ದೇಶಗಳ ಪ್ರತಿನಿಧಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದು. ಅದರಲ್ಲೂ ರಷ್ಯಾ ಜೊತೆ ಸರಿಯಾದ ರಾಯಭಾರ ಮಾಡಿದ್ದು.

ಕೆಲವರು ರಷ್ಯಾ ಯುದ್ಧವನ್ನು ಮಾಡುವ ಮುಂಚೆಯೇ ಭಾರತಕ್ಕೆ ಇದರ ಬಗ್ಗೆ ಮಾಹಿತಿ ನೀಡಿದ್ದರೆ, ಸಲೀಸಾಗಿ ತನ್ನ ಪ್ರಜೆಗಳನ್ನು ಭಾರತ ಹಿಂದೆ ತೆಗೆದುಕೊಳ್ಳಬಹುದಾಗಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಅದು ರಾಜತಾಂತ್ರಿಕತೆ. ನೀವು ಯಾರ ಮೇಲೂ ಸಹ ಅವಲಂಬಿತವಾಗಿ ಇರಬಾರದು, ಇರಕೂಡದು.
ಪ್ರಜೆಗಳ ರಕ್ಷಣೆ ಮೊದಲ ಆದ್ಯತೆ ಆಗಿತ್ತು. ಭಾರತದ ಎರಡನೇ ಆದ್ಯತೆಯು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಭದ್ರಪಡಿಸುವುದಾಗಿತ್ತು. ಭಾರತದ ಒಟ್ಟು ರಕ್ಷಣಾ ಆಮದಿನಲ್ಲಿ ಶೇ. 60 ರಷ್ಟು ಪಾಲನ್ನು ರಷ್ಯಾ ಹೊಂದಿದೆ. ಈ ದ್ವಿಪಕ್ಷೀಯ ವ್ಯಾಪಾರ 8.1 ಬಿಲಿಯನ್ ಡಾಲರ್ ಅಷ್ಟು ದೊಡ್ಡದಾದ ಹೂಡಿಕೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯುಎನ್‌ನಲ್ಲಿ ಭಾರತಕ್ಕೆ ರಷ್ಯಾ ನೀಡಿದ ಬೆಂಬಲ ಯಾವುದಕ್ಕೂ ಸಾಟಿಯಿಲ್ಲ. ಮಾಸ್ಕೋ ಯಾವಾಗಲೂ ಭಾರತೀಯ ಹಿತಾಸಕ್ತಿಗಳನ್ನು  ಕಾಪಾಡಿಕೊಂಡು ಬಂದಿದೆ. ಕಮ್ಮಿ ಕಮ್ಮಿ ಅಂದರೂ ಮೂರು ವಿಶಿಷ್ಟ ಸಂದರ್ಭಗಳು ಇದಕ್ಕೆ ಸಾಕ್ಷಿ. ರಷ್ಯಾ ತನ್ನ ವಿಟೋ ಶಕ್ತಿಯನ್ನೋ, ಅಥವಾ ಭಾರತದ ವಿರುದ್ಧದ ಕೈಗೊಂಡ ನಿರ್ಧಾರಗಳನ್ನು ನಿಲ್ಲಿಸುವ ಸಹಮತವನ್ನೋ, ಭಾರತಕ್ಕೆ ತುಂಬಾ ಅಗತ್ಯವಿದ್ದಾಗ ಬಳಸಿದೆ.

ರಷ್ಯಾ ಬೆನ್ನಿಗೆ ನಿಂತ ಕೆಲ ಸಂದರ್ಭಗಳು:

1957 ರಲ್ಲಿ ಕಾಶ್ಮೀರದಲ್ಲಿ ಯುಎನ್ ಸೈನ್ಯವನ್ನು ನಿಯೋಜಿಸುವ ಪ್ರಸ್ತಾಪವನ್ನು ರಷ್ಯಾ ನಿರ್ಬಂಧಿಸಿತು
1961 ರಲ್ಲಿ ಗೋವಾದಿಂದ ಭಾರತ ತನ್ನ ಸೇನೆ ಹಿಂದೆಗೆದುಕೊಳ್ಳುವಂತೆ ಕೇಳುವ ನಿರ್ಣಯದ ವಿರುದ್ಧ ರಷ್ಯಾ ಮತ ಹಾಕಿತು.
1962 ರಲ್ಲಿ ಪಾಕಿಸ್ತಾನವು ಎತ್ತಿ ಕಟ್ಟಿದ ಕಾಶ್ಮೀರದ ನಿರ್ಣಯವನ್ನು ಅದು ನಿರ್ಬಂಧಿಸಿತು.

ಈ ಎಲ್ಲಾ ಸಂದರ್ಭಗಳಲ್ಲಿ, ಇತಿಹಾಸದ ತಪ್ಪು ಭಾಗದಲ್ಲಿ ಯಾರು ಇದ್ದರೆಂದು ಊಹಿಸಿ ನೋಡೋಣ? ಅಮೆರಿಕಾ. ಭಾರತದ ವಿರುದ್ಧದ ಈ ಎಲ್ಲಾ ನಿರ್ಣಯಗಳನ್ನು ಅಮೆರಿಕ ಆಗ ಬೆಂಬಲಿಸಿತ್ತು. ನಮಗೆಲ್ಲ ತಿಳಿದಿರುವಂತೆ, ಲೆಕ್ಕಾಚಾರಗಳು ಈಗ ಸ್ವಲ್ಪ ಬದಲಾಗಿವೆ. ಮೊದಲಿನ ಹಾಗಿಲ್ಲ ನಿಜ. ಕಳೆದ 60 ವರ್ಷಗಳಲ್ಲಿ ಭಾರತ ಕಂಡ ಅತ್ಯಂತ ಯುಎಸ್ ಸ್ನೇಹಿ ಸರ್ಕಾರ ಇಂದು ಅಮೆರಿಕಾದಲ್ಲಿ ಇದೆ. ಆದರೆ ಇತಿಹಾಸವನ್ನು ಮರೆಯಬಾರದು. ಹಾಗೆ ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳ ಹಿಂದಿನ ಕಾರ್ಯಗಳನ್ನು ಸಹ ನಾವು ಮರೆಯುವಂತಿಲ್ಲ.
ಭಾರತದ ಸುತ್ತ ಕಾಕ ದೃಷ್ಟಿ ಬಿಡುವ ದೇಶಗಳೇ ತುಂಬಿರುವಾಗ, ಭಾರತ ಮೊದಲು ತನ್ನ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಬೇಕು. ಭಾರತದ ಪಶ್ಚಿಮಕ್ಕೆ ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನ ದೇಶವಿದೆ, ಪೂರ್ವಕ್ಕೆ ವಿಸ್ತರಣಾವಾದಿ ಚೀನಾ ದೇಶವಿದೆ. ಎರಡೂ ಸಹ ಪರಮಾಣು-ಶಸ್ತ್ರಸಜ್ಜಿತ ನೆರೆಹೊರೆಯವರು.

ಭಾರತದ ನಡೆ ಮತ್ತು ಅದಕ್ಕೆ ತಕ್ಕ ಪರಿಣಾಮಗಳು:

ಒಂದು ವೇಳೆ ಭಾರತವು ಅಮೆರಿಕಾದ ಜೊತೆಯಲ್ಲಿ ನಿಂತರೆ, ಕ್ರಮೇಣ ರಷ್ಯಾ ಚೀನಾದ ತೆಕ್ಕೆಗೆ ಜಾರುತ್ತದೆ. ಇದಕ್ಕಿಂತ ಮತ್ತಷ್ಟು ಅವಘಡ ಇನ್ನೇನು ಬೇಕು? ಚೀನಾದ ಪರಿಸ್ಥಿತಿ ಇದಕ್ಕಿಂತ ಕಠಿಣವಾಗಿದೆ. ಅಮೆರಿಕಾ ರಷ್ಯಾವನ್ನು ದೂರವಿಡುವಂತೆ ಚೀನಾಗೆ ಬೆದರಿಕೆ ಹಾಕುತ್ತಿದೆ. ಈ ಕಡೆ ರಷ್ಯಾ, ಅಮೆರಿಕವನ್ನು ಮೂಲೆಗುಂಪು ಮಾಡು ಎಂದು ಕೇಳಿಕೊಳ್ಳುತ್ತಿದೆ. ಭಾರತ ಇಂತಹ ಪರಿಸ್ಥಿತಿಯಿಂದ ಸ್ವಲ್ಪ ದೂರವಿದೆ. 
ಇದಲ್ಲದೆ ಯುದ್ಧದಿಂದಾಗಿ ಆರ್ಥಿಕ ಮುಗ್ಗಟ್ಟು ಸಹ ಆಗುತ್ತಿದೆ. ಯುದ್ಧದಿಂದಾಗಿ ಬಜೆಟ್ ಮೇಲೆ ಪರಿಣಾಮ ಆಗುತ್ತಿದೆ. ಕಚ್ಚಾ ತೈಲ ಬೆಲೆಗಳು ಏರಿಕೆ ಕಂಡಿವೆ. ರಷ್ಯಾ ಭಾರತಕ್ಕೆ ಅಗ್ಗದ ತೈಲವನ್ನು ನೀಡುವ ಪ್ರಸ್ತಾಪ ಇಟ್ಟಿದೆ. ಭಾರತ ಒಪ್ಪಿ, ಖರೀದಿಸಲು ಮುಂದಾಗಿದೆ. ಇದು ಪಾಶ್ಚಿಮಾತ್ಯ ದೇಶಗಳ ನಿದ್ದೆಗೆಡಿಸಿದೆ. ಪಾಶ್ಚಿಮಾತ್ಯ ತಜ್ಞರು ಪ್ರಕಾರ, ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದರೆ, ಅದೂ ಕೂಡ ಶೀಘ್ರದಲ್ಲೇ ನಿರ್ಬಂಧನೆಗಳಿಗೆ ಒಳಗಾಗಬಹುದು.

ಸತ್ಯ ಸಂಗತಿ. ರಷ್ಯಾದ ತೈಲವನ್ನು ಇನ್ನೂ ನಿರ್ಬಂಧನೆಗೆ ಒಳಪಡಿಸಲಾಗಿಲ್ಲ. ಯುರೋಪ್ ಇನ್ನೂ ರಷ್ಯಾದ ತೈಲ ಮತ್ತು ಅನಿಲವನ್ನು ಖರೀದಿಸುತ್ತಿದೆ. ನ್ಯಾಟೋ ದೇಶಗಳು ರಷ್ಯಾದಿಂದ ಶಕ್ತಿಯನ್ನು ಖರೀದಿಸುತ್ತಿವೆ. ರಷ್ಯಾದಿಂದ ಇವೆಲ್ಲ ಖರೀದಿ ಮಾಡುವುದು ಐರೋಪ್ಯ ರಾಷ್ಟ್ರಗಳಿಗೆ ತೊಂದರೆ ಇಲ್ಲ, ಆದರೆ ನಮಗೆ ಅದನ್ನು ಹೊಂದುವ ಅಧಿಕಾರವಿಲ್ಲವೇ? ಇದು ಪಾಶ್ಚಿಮಾತ್ಯ ದೇಶಗಳ ಬೂಟಾಟಿಕೆಯ ಆಟ ತೋರಿಸುತ್ತದೆ.

ಹೋಗಲಿ ಬಿಡಿ. ವಾಪಸ್ಸು ಇತಿಹಾಸಕ್ಕೆ ಬರೋಣ. ಅಮೆರಿಕಾದ ದೊಡ್ಡ ದೊಡ್ಡ ದಾಖಲೆಯನ್ನ ನಾವು ಗಮನಿಸಲೇ ಬೇಕು.

ಹಿಂದೆ-ಮುಂದೆ:

1971 ರಲ್ಲಿ, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತವು ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಹೋದಾಗ, ಪಾಶ್ಚಿಮಾತ್ಯ ದೇಶಗಳು ಬಹಿರಂಗವಾಗಿ ಪಾಕಿಸ್ತಾನದ ಪರವಾಗಿ ನಿಂತವು.ಯು.ಎಸ್ ಮತ್ತು ಯುಕೆ, ಹಿಂದೂ ಮಹಾಸಾಗರಕ್ಕೆ ಯುದ್ಧನೌಕೆಗಳನ್ನು ಕಳುಹಿಸಿದವು. ಆಗ ಭಾರತದ ಸಹಾಯಕ್ಕೆ ಬಂದದ್ದು ಮಾಸ್ಕೋ/ ರಷ್ಯಾ. ರಷ್ಯಾದ ನೌಕಾಪಡೆಯ ಒಂದು ಫ್ಲೀಟ್ ಹಿಂದೂ ಮಹಾಸಾಗರವನ್ನು ತಲುಪಿ, ಅಮೇರಿಕನ್ ಮತ್ತು ಬ್ರಿಟಿಷ್ ಯುದ್ಧನೌಕೆಗಳನ್ನು ಸುತ್ತುವರೆದು, ಭಾರತದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸದಂತೆ ತಡೆಯಿತು.
ಭಾರತ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿದಾಗ, ಪಾಶ್ಚಿಮಾತ್ಯ ದೇಶಗಳು ಸಿಟ್ಟಾದವು. ಭಾರತವನ್ನು ದೂಷಿಸಲು ನಿಂತರು. ಇದಕ್ಕೆ ವ್ಯತಿರಿಕ್ತವಾಗಿ, ಮಾಸ್ಕೋ ಈ ಪರೀಕ್ಷೆಯ ಶಾಂತಿಯುತ ಸ್ವರೂಪವನ್ನು ಎತ್ತಿ ತೋರಿಸಿ, ಭಾರತವನ್ನು ಬೆಂಬಲಿಸಿತು.

ಭಾರತದ ಭದ್ರತಾ ಕಾಳಜಿಗಳನ್ನು ಪದೇ ಪದೇ ದುರ್ಬಲ ಎಂದು ನೋಡುತ್ತಿದ್ದ ಅದೇ ಪಾಶ್ಚಿಮಾತ್ಯ ದೇಶಗಳು, ಈಗ ಯುರೋಪಿಯನ್ ಭದ್ರತೆಗಾಗಿ ಭಾರತ ಏನು ಮಾಡುತ್ತಿದೆ ? ಎಂದು ಭಾರತವನ್ನು ಕೇಳುತ್ತಿವೆ. ಕಳೆದ ತಿಂಗಳು ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು.

ಇಲ್ಲಿ ಸಂದೇಹಪಡದಿರುವುದು ಸ್ವಲ್ಪ ಕಷ್ಟ. ಎರಡು ವರ್ಷಗಳ ಹಿಂದೆ ಚೀನಾದ ಸೈನಿಕರು ಸಾಂಕ್ರಾಮಿಕ ರೋಗದ ಮಧ್ಯದಲ್ಲಿ ಭಾರತದ ಮೇಲೆ ದಾಳಿ ಮಾಡಿದಾಗ, ಭಾರತದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಾಶ್ಚಿಮಾತ್ಯ ದೇಶಗಳು ಏನು ಮಾಡಿದವು? ಅವೆಲ್ಲ ಮುಖ ತಿರುವಿ ಬಿಟ್ಟವು. ಯಾವುದೇ ನಿರ್ಣಯಗಳನ್ನಾಗಲಿ, ಯಾವುದೇ ನಿರ್ಬಂಧಳನ್ನಾಗಲಿ, ಯಾವುದೇ ರೀತಿಯ ನೆರವುಗಳನ್ನಾಗಲಿ ನೀಡಲಿಲ್ಲ. ಅದೂ ಬಿಡಿ, ಖಂಡನೆಯನ್ನು ಸಹ ಮಾಡಲಿಲ್ಲ. ಆದರೆ ಮಾಸ್ಕೋ ಒಂದು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ವಾಸ್ತವವಾಗಿ, ಇದು ಬೀಜಿಂಗ್ ಮತ್ತು ಹೊಸ ದೆಹಲಿ ನಡುವಿನ ಉದ್ವಿಗ್ನತೆಯನ್ನು ಕಡಿಮೆಗೊಳಿಸಿತು.ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸಲು ರಷ್ಯಾ ರಕ್ಷಣಾ ಸಾಮಗ್ರಿಗಳು ಭಾರತಕ್ಕೆ ನೆರವಾದವು.

ಭಾರತವು ವಿಶ್ವಾಸಾರ್ಹವಲ್ಲದ ಪಾಲುದಾರನನ್ನು ಮೆಚ್ಚಿಸಲು ವಿಶ್ವಾಸಾರ್ಹ ಮಿತ್ರ ರಾಷ್ಟ್ರ ಮತ್ತು ಪಾಲುದಾರನನ್ನು ಹೊರಹಾಕಬೇಕೆ? ಒಂದು ಕ್ಷಣ ಭಾರತವು ರಷ್ಯಾವನ್ನು ಖಂಡಿಸಲು ಒಪ್ಪುತ್ತದೆ ಎಂದು ಭಾವಿಸೋಣ, ಅದು ಯಾವ ವ್ಯತ್ಯಾಸವನ್ನು ತರುತ್ತದೆ ಹೇಳಿ ?

ಯುರೋಪ್ ರಷ್ಯಾವನ್ನು ಖಂಡಿಸುತ್ತಿದೆ. ಯುದ್ಧ ನಿಂತಿದೆಯೇ? ಅಮೆರಿಕವು ರಷ್ಯಾಕ್ಕೆ ಬೆದರಿಕೆ ಹಾಕುತ್ತಿದೆ. ಯುದ್ಧ ನಿಂತಿದೆಯೇ? ರಷ್ಯಾ ವಿರುದ್ಧ ಮತ ಹಾಕುವುದರಿಂದ ಯುದ್ಧ ನಿಲ್ಲುವುದಿಲ್ಲ.ಮಧ್ಯಸ್ಥಿಕೆ ಮತ್ತು ಮಾತುಕತೆಗಳಷ್ಟೇ ಯುದ್ಧವನ್ನು ನಿಲ್ಲಿಸಬಹುದು. 
ಇದಕ್ಕೆ ಇತಿಹಾಸವೇ ಮತ್ತೆ ಸಾಕ್ಷಿ. 1960 ರ ದಶಕದಲ್ಲಿ, ಶೀತಲ ಸಮರವು ಉತ್ತುಂಗದಲ್ಲಿದ್ದಾಗ, ಭಾರತ ನೇತೃತ್ವದ ಅಲಿಪ್ತ ಮತ್ತು ತಟಸ್ಥ ನಡೆಯಿಂದಾಗಿ ಬೆದರಿಕೆಗಳನ್ನು ತಗ್ಗಿಸಲು ಸಹಾಯವಾಯ್ತು. ಅಲಿಪ್ತ ರಾಷ್ಟ್ರಗಳೇ ಆಗ ಅಂತಹ ಶಕ್ತಿಗಳನ್ನು ತಡೆದವು.

ಇಂದು ಭಾರತವು ರಷ್ಯಾ ಮತ್ತು ಅಮೆರಿಕಾ ಎರಡರ ಕಾರ್ಯತಂತ್ರದ ಪಾಲುದಾರವಾಗಿದೆ.ಇಂದಿನ ರಷ್ಯಾ ಸೋವಿಯತ್ ಶಕ್ತಿಯಲ್ಲ. ಒಮ್ಮೆ ದೊಡ್ಡ ಶಕ್ತಿಯಾಗಿತ್ತು. ಈಗ ಅದು ಉಕ್ರೇನ್‌ನಲ್ಲಿ ಸ್ಪಷ್ಟವಾಗಿ ಆಕ್ರಮಣಕಾರಿ ದೇಶವಾಗಿ ನಿಂತಿದೆ. ಇಂದಿನ ಅಮೆರಿಕಾ ಹಿಮ್ಮೆಟ್ಟುತ್ತಿರುವ ಸೂಪರ್ ಪವರ್ ಆಗಿದೆ. ಅಮೆರಿಕಾ ಯುದ್ಧಗಳನ್ನು ಮತ್ತು ಸ್ಥಾನಮಾನವನ್ನು ಕಳೆದುಕೊಂಡಿದೆ. ನಮ್ಮ ಪ್ರಪಂಚವು ಬದಲಾಗುತ್ತಿದೆ. ವಿಶ್ವ ಕ್ರಮವು ಬದಲಾಗುತ್ತಿದೆ.

ಭಾರತವು ಹೊಸ ಮೈತ್ರಿಗಳನ್ನು ನಿರ್ಮಿಸಲು, ಇತಿಹಾಸದ ಕಹಿ ಕ್ಷಣಗಳನ್ನು ಮರೆತು ಪ್ರಯತ್ನ ಮಾಡುತ್ತಿದೆ. ಆದರೆ ಆ ಮೈತ್ರಿಗಳಿಗೆ, ಮೈತ್ರಿಗಳಿಗಾಗಿ ಭಾರತವನ್ನು ಒತ್ತೆಯಾಳಾಗಿ ಇಡಲು ಸಾಧ್ಯವಿಲ್ಲ. ಇದೊಂದು ಕಠಿಣ ತೂಗುಗತ್ತಿಯ ಅಂಚಿನ ಆಟವಾಗಿದೆ. ಆದರೆ ತನ್ನದೇ ಆದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ, ಭಾರತದ ಆದ್ಯತೆಗಳು ಎಲ್ಲಿವೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ.

ಈ ಯುದ್ಧ ಭಾರತದಲ್ಲ. 
( ಇಲ್ಲಿ ಯಾವುದೇ ರೀತಿಯಾಗಿ ಯುದ್ಧವನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಮತ್ತು ಈ ಲೇಖನ ಈಗಿನ ಆಗುಹೋಗುಗಳ ಮೇಲೆ ವಿಷಯಾಧಾರಿತವಾಗಿದೆ. ಯುದ್ಧ ಮನುಕುಲ ನಾಶದ ಅಸ್ತ್ರ. ಯುದ್ಧ ನಿಲ್ಲಬೇಕು )

ಲೇಖನಕ್ಕೆ ಆಧಾರಗಳು,

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು