ಜಾಹಿರಾತು

ಭಾರತದ ಏಕತೆಗೆ ಪೂರಕವಾದ ಪ್ರಮುಖ ಏಳು ಅಂಶಗಳು

ಭಾರತವು ವಿವಿಧ ರೀತಿಯ ವೈವಿಧ್ಯಗಳನ್ನು ಹೊಂದಿರುವ ವಿಶಾಲ ದೇಶವಾಗಿದೆ. ಸಮಾಜವು ಜಾತಿ, ಧರ್ಮ, ಭಾಷೆ, ಜನಾಂಗ ಇತ್ಯಾದಿಗಳಿಂದ ವಿಭಜಿಸಲ್ಪಟ್ಟಿದ್ದರೂ, ಈ ಎಲ್ಲಾ ವೈವಿಧ್ಯಗಳೊಂದಿಗೆ ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ಏಕೆಂದರೆ ಭಾರತದಲ್ಲಿ ಮೂಲಭೂತವಾಗಿ ಏಕತೆ ಎಂಬುದು, ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಿದೆ. ಏಕೀಕೃತ ಭಾರತ ಹೊಸ ಪರಿಕಲ್ಪನೆಯಲ್ಲ. ಭಾರತ ಮೊದಲಿನಿಂದಲೂ ಆ ರೀತಿ ಬೆಳೆದು ಬಂದಿದೆ. ಭಾರತದ ಏಕತೆ ಎಂಬ ಪರಿಕಲ್ಪನೆಯು ಅನೇಕ ದಾರ್ಶನಿಕರನ್ನು ಕೂಡ ಆಕರ್ಷಿಸಿತ್ತು.

India is an example for Unity Kannada
ಭಾರತ ಏಕತೆಯ ಪ್ರತೀಕ

ಭಾರತದ ಏಕತೆಗೆ ಕಾರಣವಾಗಿರುವ ಅನೇಕ ಅಂಶಗಳಿವೆ. ಅವುಗಳಲ್ಲಿ ಕೆಳಗಿನವು ಬಹು ಪ್ರಮುಖವಾದದ್ದು.

ಭೌಗೋಳಿಕ ಏಕತೆ:

ಭಾರತವು ತನ್ನದೇ ಆದ ಸ್ಥಿರವಾದ ನೈಸರ್ಗಿಕ ಗಡಿಯನ್ನು ಹೊಂದಿದೆ, ಇದರಿಂದಾಗಿ ವಿವಿಧ ಸಮುದಾಯಗಳು ಈ ಚೌಕಟ್ಟಿನೊಳಗೆ ಒಟ್ಟಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಒಂದು ಕಡೆ ದೊಡ್ಡ ಹಿಮಾಲಯ ಶ್ರೇಣಿಯಿಂದ ಮತ್ತೊಂದು ಕಡೆ ಆಳವಾದ ಸಮುದ್ರಗಳಿಂದ ಭಾರತ ಸುತ್ತುವರಿದಿದೆ. ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದ ಕನ್ಯಾ ಕುಮಾರಿಯವರೆಗೆ ವಿಸ್ತರಿಸುವ ಈ ವಿಶಾಲವಾದ ಭೂಮಿಯನ್ನು, ನಾವು ಅಖಂಡ ಭಾರತ ಎಂದು ಹೆಮ್ಮೆಯಿಂದ ಕರೆಯುತ್ತೇವೆ.

Himalaya to Sea India Dindima Kannada
ಹಿಮಾಲಯ ಶ್ರೇಣಿಯಿಂದ ಸಮುದ್ರ

ಧಾರ್ಮಿಕ ಏಕತೆ:

ಧಾರ್ಮಿಕ ಏಕತೆಯನ್ನು ಮೂರು ಹಂತಗಳಾಗಿ ವಿಂಗಡಿಸಬಹುದು:

ಮೊದಲನೆಯದಾಗಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ವಿವಿಧ ಧಾರ್ಮಿಕ ಗುಂಪುಗಳ ನಡುವಿನ ಏಕತೆ. ಈ ಎಲ್ಲಾ ಧರ್ಮಗಳು ಉಪಕಾರ, ಪ್ರಾಮಾಣಿಕತೆ, ಅದೃಶ್ಯ ಶಕ್ತಿಯಲ್ಲಿ ನಂಬಿಕೆ, ಜೀವನ ಮೌಲ್ಯ ಮುಂತಾದ ಕೆಲವು ಸಾಮಾನ್ಯ ತತ್ವಗಳನ್ನು ಹೊಂದಿವೆ.

ಎರಡನೆಯದಾಗಿ, ಹಿಂದೂ ಧರ್ಮದ ವಿವಿಧ ಪಂಗಡಗಳ ನಡುವಿನ ಏಕತೆ. ಇದು ಸಾಮಾನ್ಯ ನಂಬಿಕೆಯ ವ್ಯವಸ್ಥೆಯನ್ನು ಆಧರಿಸಿದೆ. ಎಲ್ಲರೂ ಆತ್ಮದ ಅಮರತ್ವ, ಪ್ರಪಂಚದ ತಾತ್ಕಾಲಿಕ ಸ್ವಭಾವ, ಕರ್ಮದ ಸಿದ್ಧಾಂತ ಇತ್ಯಾದಿಗಳಲ್ಲಿ ನಂಬುತ್ತಾರೆ.

ಮೂರನೆಯದಾಗಿ, ಭಾರತದಾದ್ಯಂತ ಪಸರಿಸಿಕೊಂಡಿರುವ ಹಿಂದೂಗಳ ನಡುವಿನ ಒಗ್ಗಟ್ಟು. ಪ್ರತಿಯೊಬ್ಬ ಹಿಂದೂ ತಮ್ಮ ಆಚಾರ-ವಿಚಾರ, ಪದ್ಧತಿ, ಜಾತಿಗಳಲ್ಲಿನ ಭಿನ್ನಾಭಿಪ್ರಾಯಗಳನ್ನು, ಬದಿಗಿರಿಸಿ ಕೆಲವು ಧಾರ್ಮಿಕ ಅಂಶಗಳನ್ನು ಸಾರ್ವತ್ರಿಕ ಆಚರಣೆಗಳನ್ನಾಗಿ ಒಪ್ಪಿಕೊಂಡಿದ್ದಾರೆ. ಮಹಾಭಾರತ, ರಾಮಾಯಣ, ಭಗವದ್ಗೀತೆಯಂತಹ ಕೆಲವು ಮಹಾಕಾವ್ಯಗಳನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.

ಬದರಿನಾಥ, ದ್ವಾರಕಾ, ರಾಮೇಶ್ವರ, ಪುರಿ ಮುಂತಾದ ದೇಶಾದ್ಯಂತ ಹರಡಿರುವ ಪೂಜಾಸ್ಥಳಗಳಲ್ಲಿ ಈ ಏಕತೆಯ ಜ್ವಲಂತ ಉದಾಹರಣೆಯನ್ನು ನಾವು ಕಾಣಬಹುದು. ಈ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಂಡಾಗ, ದೇಶವನ್ನು ಸುತ್ತಿದಾಗ, ದೇಶದ ಬಗ್ಗೆ ಗೌರವ, ಅಭಿಮಾನ ಮೂಡುತ್ತದೆ. ಇದು ಏಕತೆಯ ವೈಶಿಷ್ಟ್ಯತೆ.

All Religions in India Dindima Kannada
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಏಕತೆ

ಸಾಂಸ್ಕೃತಿಕ ಏಕತೆ:

ಭಾರತೀಯ ಸಂಸ್ಕೃತಿ ಮೂಲಭೂತ ಸಿದ್ಧಾಂತವೇ ಏಕತೆ. ಸಾಹಿತ್ಯ, ತತ್ವಶಾಸ್ತ್ರ, ಸಂಪ್ರದಾಯ ಮತ್ತು ಪದ್ಧತಿಗಳ ತಳಹದಿಯೇ ಭಾರತೀಯತೆ ಆಗಿದೆ. ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ಜಾತಿ, ಮತ ಭೇದವಿಲ್ಲದೆ, ಧರ್ಮದ ಪರಿಗಣನೆಯಿಲ್ಲದೆ, ದೇಶದಾದ್ಯಂತ ಆಚರಿಸಲಾಗುತ್ತದೆ. ಅಂತೆಯೇ, ಜಾತಿ ಮತ್ತು ಅವಿಭಕ್ತ ಕುಟುಂಬದಂತಹ ಸಾಮಾಜಿಕ ಸಂಸ್ಥೆಗಳು ಭಾರತದಾದ್ಯಂತ ಕಂಡುಬರುತ್ತವೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಲ್ಲೂ ಸಹ ಇವೆಲ್ಲ ಕಂಡುಬರುತ್ತದೆ.

Cultural Unity In India Dindima Kannada
ಸಾಂಸ್ಕೃತಿಕ ಏಕತೆ

ಭಾಷಾ ಏಕತೆ:

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಭಾಷೆಗಳು ಕಂಡುಬರುತ್ತವೆ. ಸಂಸ್ಕೃತವು ಎಲ್ಲ ಭಾಷೆಗಳಿಗೆ ಕೊಂಡಿ ಇದ್ದಂತೆ. ಅಂತೆ ದ್ರಾವಿಡ ಭಾಷೆ ಕೂಡ. ಉತ್ತರ ಮತ್ತು ದಕ್ಷಿಣದ ಜನರು ಸಂಸ್ಕೃತವನ್ನು ತಮ್ಮ ಭಾಷೆಯನ್ನು ದೇವಭಾಷೆ ಎಂದು ಪರಿಗಣಿಸುತ್ತಾರೆ. ಏಕೆಂದರೆ ಪ್ರಾಚೀನ ಸಾಹಿತ್ಯ, ಪುರಾಣ ಮತ್ತು ತತ್ವಶಾಸ್ತ್ರಗಳನ್ನೆಲ್ಲಾ ಹೆಚ್ಚಾಗಿ ಸಂಸ್ಕೃತ ಭಾಷೆಯಲ್ಲಿ ದಾಖಲಿಸಲಾಗಿದೆ.

ರಾಜಕೀಯ ಏಕತೆ:

ಹಿಂದೆ (ರಾಜರ ಆಳ್ವಿಕೆ ಕಾಲದಲ್ಲಿ) ಭಾರತವು ಹಲವಾರು ರಾಜ್ಯಗಳಾಗಿ ವಿಭಜನೆಯಾಗಿತ್ತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಭಾರತವನ್ನು ಬ್ರಿಟಿಷರ ಹಿಡಿತದಿಂದ ಮುಕ್ತಗೊಳಿಸಲು, ರಾಜಕೀಯ ಏಕೀಕರಣದ ಪರಿಕಲ್ಪನೆಯು ಹೊರಹೊಮ್ಮಿತು. ಸ್ವಾತಂತ್ರ್ಯದ ನಂತರ ಭಾರತವು ತನ್ನ ಎಲ್ಲಾ ಹಂತಗಳಲ್ಲಿ, ರಾಜಕೀಯ ಏಕೀಕರಣವನ್ನು ಬೇಡುವ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

Citizens Are the Rulers+ democratic+ Dindima Kannada
ರಾಜಕೀಯ ಏಕತೆ: ಮತದಾರನೇ ಪ್ರಭು 

ಜನಾಂಗೀಯ ಏಕತೆ:

ಭಾರತವು ಮೊದಲಿನಿಂದಲೂ ಆರ್ಯರು, ಶಾಕ್‌ಗಳು, ಹೂಣರು ಮುಂತಾದ ವಿವಿಧ ಜನಾಂಗಗಳಿಂದ ಆಕ್ರಮಿಸಲ್ಪಟ್ಟಿತು. ಆದರೆ ಕಾಲಾನಂತರದಲ್ಲಿ ಅವರು ಸ್ಥಳೀಯ ಜನಸಂಖ್ಯೆ ಮತ್ತು ಸಂಸ್ಕೃತಿಯೊಂದಿಗೆ ಸಂಪೂರ್ಣವಾಗಿ ವಿಲೀನಗೊಂಡರು.  ತಮ್ಮ ಮೂಲ ಸ್ವಭಾವದ ಎಲ್ಲಾ ಕುರುಹುಗಳನ್ನು ಕಳೆದುಕೊಂಡರು. ಇಂದು ಅವರು ಪ್ರತ್ಯೇಕಿಸಲಾರದಷ್ಟು ಬೆರೆತುಕೊಂಡಿದ್ದಾರೆ. ಅವರು ಸಂಪೂರ್ಣವಾಗಿ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ವಿಲೀನಗೊಂಡಿದ್ದಾರೆ.

ಭಾವನಾತ್ಮಕ ಏಕತೆ:

ಅಂತಿಮವಾಗಿ, ರಾಷ್ಟ್ರದ ಎಲ್ಲ ಸದಸ್ಯರನ್ನು ಬಂಧಿಸುವ ಭಾವನಾತ್ಮಕ ಬಂಧ ಭಾರತದಲ್ಲಿದೆ.ಭಾರತ ವರ್ಷ ಎಂಬ ಪದವು ಎಲ್ಲಾ ಭಾರತೀಯರನ್ನು ಬಂಧಿಸುತ್ತದೆ ಮತ್ತು ಭಾವನಾತ್ಮಕವಾಗಿ ಅವರು ಪರಸ್ಪರ ಹತ್ತಿರವಾಗುತ್ತಾರೆ. ವಿದೇಶಿಯರಿಂದ ಭಾರತವನ್ನು ರಕ್ಷಿಸಲು ಅವರು ತಮ್ಮ ಪ್ರಾಣವನ್ನೂ ತ್ಯಾಗ ಮಾಡಬಹುದು.

ಜ್ವಲಂತ ಉದಾಹರಣೆ ಕಾರ್ಗಿಲ್ ಯುದ್ಧ. ಈ ಎಲ್ಲಾ ಸಂಗತಿಗಳಿಂದ ಭಾರತವು ವಿವಿಧತೆಯಲ್ಲಿ ಏಕತೆಗೆ ಉತ್ತಮ ಉದಾಹರಣೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲಾ ಏಕತೆಯ ಕ್ಷೇತ್ರಗಳು ವಿವಿಧತೆಗಳಲ್ಲಿ ಏಕತೆಯನ್ನು ಸ್ಥಾಪಿಸಲು ಜಾತಿ, ಪಂಥ, ಸಾಮಾಜಿಕ ಪದ್ಧತಿ ಮತ್ತು ಧಾರ್ಮಿಕ ಗುಂಪುಗಳ ಗಡಿಗಳನ್ನು ದಾಟುತ್ತವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು