ಮಹಾರಾಣಾ ಪ್ರತಾಪ್ ಸಿಂಹ - ಪುಸ್ತಕದ ಹೊರಗಿನ ಕಥೆ
ಇವತ್ತಿನ ಈ ಲೇಖನ, ನಾವು ಓದುತ್ತಿರುವ ಭಾರತೀಯ ಇತಿಹಾಸದ ಒಂದು ಕರಾಳ ಕಹಿ ಸತ್ಯವನ್ನು ತೆರೆದಿಡುತ್ತದೆ. ಒಬ್ಬರನ್ನು ಹೊಗಳಲು ಹೋಗಿ, ಇನ್ನೊಬ್ಬರನ್ನು ತುಳಿದಂತಹ ಸತ್ಯದ ಬಗ್ಗೆ ಲೇಖನವಿದು. ಒಬ್ಬರ ವಿಜೃಂಭನೆಯ ವರ್ಣನೆ, ಇನ್ನೊಬ್ಬರನ್ನ ಮುಚ್ಚಿ ಹಾಕಿದ ಕಹಿ ಸತ್ಯವಿದು. ಆ ಸತ್ಯದ ಹೆಸರೇ " ಮಹಾರಾಣಾ ಪ್ರತಾಪ್ ಸಿಂಹ".
![]() |
| ಮಹಾರಾಣಾ ಪ್ರತಾಪ್ ಸಿಂಹ |
ಮೇವಾರದ ರಾಜ್ಯದ ಮೋಹ ಮತ್ತು ರಾಜ್ಯ ಭಕ್ತಿ:
ಮಹಾರಾಣಾ ಪ್ರತಾಪ ಸಿಂಹ ಮತ್ತು ಜಲಾಲ್-ಉದ್-ದಿನ್ ಮುಹಮ್ಮದ್ ಅಕ್ಬರ್ ಎಂಬ ಹೆಸರುಗಳು ಇತಿಹಾಸದ ಒಂದು ನಾಣ್ಯದ ಎರಡು ದೊಡ್ಡ ಮುಖಗಳು. ಈಗ, ಕಥೆಯನ್ನು ನೀವು ಅರ್ಥಮಾಡಿಕೊಳ್ಳಲು, ಮೊದಲು 16 ನೇ ಶತಮಾನದ ಭಾರತದ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಬೇಕು. ಆ ಕಾಲದಲ್ಲಿ ಭಾರತದ ಉದ್ದಗಲಕ್ಕೂ ಅಕ್ಬರ್ ನ ಆಡಳಿತವಿತ್ತು. ಒಂದು ರೀತಿಯಲ್ಲಿ ಈಗಿನ ಭಾರತವನ್ನು ಆಳುವಷ್ಟು ವಿಶಾಲ ಸಾಮ್ರಾಜ್ಯವನ್ನು ಆತ ಹೊಂದಿದ್ದ. ಮತ್ತು ಆತನ ಈ ಬೃಹತ್ ಸಾಮ್ರಾಜ್ಯದ ನಡುವೆ, ಒಂದು ಪುಟ್ಟ ರಾಜ್ಯವಿತ್ತು. ಅದುವೇ ರಾಜಸ್ಥಾನದ ಮೇವಾರದ ರಾಜ್ಯ.
![]() |
| ಆಗಿನ ರಾಜಸ್ಥಾನದ ಮೇವಾರದ ರಾಜ್ಯ |
ಅಕ್ಬರ್ ನ ಆಳ್ವಿಕೆಯ ಗತ್ತೇ ವಿಭಿನ್ನವಾಗಿತ್ತು. ಸುಖಾ ಸುಮ್ಮನೆ ದಂಡೆತ್ತಿ ಹೋಗುವ ನೀತಿಯನ್ನು ಪಾಲಿಸುತ್ತಿರಲಿಲ್ಲ. ಆಗಿನ ಕಾಲದ ರಾಜರು ಹಿಂದೂ ಮುಂದು ನೋಡದೆ, ಕೊನೆ ಪಕ್ಷ ಲೂಟಿ ಮಾಡುವುದರ ಸಲುವಾಗಿಯಾದರು ಯುದ್ಧ ಮಾಡುವ ಹುನ್ನಾರ ಮಾಡುತ್ತಿದ್ದರು. ಆದರೆ ಅಕ್ಬರ್ ಹಾಗಲ್ಲ. ಅವನು ಮೊದಲು ಮಾತುಕತೆಗೆ ಇಳಿಯುತ್ತಿದ್ದ. ತನ್ನ ಪರಮಾಧಿಕಾರವನ್ನು ಒಪ್ಪುವಂತೆ ಬೇರೆ ರಾಜರಿಗೆ ಒತ್ತಡ ಹೇರುತ್ತಿದ್ದ. ಒಪ್ಪದಿದ್ದರೆ ಆಮೀಷ ಒಡ್ಡುತ್ತಿದ್ದ.
ಈ ಎಲ್ಲದರ ಮಧ್ಯೆ ಒಂದೊಳ್ಳೆ ಮಾರ್ಗವನ್ನು ಸಹ ಕಂಡುಕೊಂಡಿದ್ದ. ಚಾಣಾಕ್ಷತೆಯಿಂದ ವ್ಯಾಪಾರ ಮತ್ತು ಮಾತುಕತೆಗಳಿಗೆ ಅಷ್ಟೇ ಸೀಮಿತವಾಗದೆ, ಸಂಬಂಧಗಳನ್ನು ಗಟ್ಟಿ ಮಾಡಲೆಂದು ಮದುವೆಗಳನ್ನು ಸಹ ಮಾಡಿಕೊಂಡು ನೆರೆಯ ರಾಜರುಗಳನ್ನ ನೆಂಟರನ್ನಾಗಿಮಾಡಿಕೊಂಡ. ಅವನ ಪ್ರಕಾರ ಜೀವ ಹಾನಿ ಮತ್ತು ಧನ ಹಾನಿ ಎರಡು ಒಳ್ಳೆಯ ಉಪಾಯವಾಗಿರಲಿಲ್ಲ. ಮತ್ತು ಯುದ್ಧದ ಮಾತು ಬಂದಾಗ, ಈ ಎರಡಕ್ಕೂ ಕುತ್ತು ಉಂಟಾಗುತ್ತಿತ್ತು. ಆದ್ದರಿಂದ ಮೊದಲು ಮಾತುಕತೆ, ಸಂಬಂಧಗಳಿಗೆ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದ.
ಪ್ರತಾಪ್ ಮೇಲಿನ ಪ್ರಭಾವ :
ಆದರೆ ಮೇವಾರ್ ಎಂಬ ರಾಜ್ಯ ಮಾತ್ರ ಅವನ ಯಾವುದೇ ಪ್ರಯತ್ನಗಳಿಗೆ ಬಗ್ಗುವಂತೆ ಕಾಣಲಿಲ್ಲ. ಅದರಿಂದಾಗಿ 1568 ರಲ್ಲಿ, ಅಕ್ಬರ್ ಚಿತ್ತೋರನ್ನು ಆಕ್ರಮಿಸಲು ನಿರ್ಧರಿಸಿದನು. ಆಗ ಆ ರಾಜ್ಯಕ್ಕೆ ಮಹಾರಾಣಾ ಪ್ರತಾಪನ ತಂದೆ ರಾಣಾ ಉದಯ್ ಸಿಂಗ್ II ರಾಜರಾಗಿದ್ದರು. ಚಿತ್ತೋರ ಅವರ ಆಡಳಿತ ರಾಜಧಾನಿಯಾಗಿತ್ತು. ಈ ಆಕ್ರಮಣ, ಮಾರಣಹೋಮಕ್ಕೆ ಕಾರಣವಾಯ್ತು. 40,000 ಜನ ಅಸುನೀಗಿದರು. ಅಷ್ಟು ಜನರಲ್ಲಿ ಎಷ್ಟೋ ಜನ ಮುಗ್ಧರು ಮಡಿದರು. ಮಹಿಳೆಯರು ಜೌಹರ್ ಸ್ವೀಕರಿಸಿ ಅಗ್ನಿಗೆ ಆಹುತಿಯಾದರು.
ಈ ಘಟನೆ ಒಬ್ಬ ಚಿಕ್ಕ ಯುವಕನ ಮೇಲೆ ಬಹಳ ಪ್ರಭಾವ ಬೀರಿತು. ಬಹುಶಃ ದಾಳಿಕೋರರ ಮೇಲಿನ ಅವನ ದ್ವೇಷ, ಆಗಲೇ ಶುರುವಾಯ್ತು ಎಂದು ಕಾಣುತ್ತದೆ. ಬೆಳೆಯುವ ಸಿರಿಯನ್ನ ಮೊಳಕೆಯಲ್ಲಿ ನೋಡು ಎನ್ನುವಂತೆ, ಆಗ ನಡೆದ ಘಟನೆಗಳು ಯುವ ರಾಜಕುಮಾರನ ದೃಷ್ಟಿಕೋನವನ್ನೇ ಬದಲಾಯಿಸಿದವು. ಮುಗ್ಧ ಜನರ ಮರಣ, ಏನೂ ಮಾಡದ ಮಹಿಳೆಯರು ಜೀವ ತ್ಯಾಗ ಮಾಡುವುದು, ನಮ್ಮ ನೆಲೆದಲ್ಲಿ ನಮಗೆ ಬಾಳಲು ಬಿಡದ ಆಕ್ರಮಣಕಾರರ ಕ್ರೌರ್ಯಕ್ಕೆ ಉತ್ತರ ಕೊಡಲು ಪಣತೊಟ್ಟ ಆ ಯುವ ರಾಜನೇ "ಮಹಾ ರಾಣಾ ಪ್ರತಾಪ ಸಿಂಹ"
ಇಷ್ಟು ದೊಡ್ಡ ನಷ್ಟದಿಂದಾಗಿ, ರಾಣಾ ಉದಯ್ ಸಿಂಗ್ II ಹಿಂದೆ ಸರಿದು, ಉದಯಪುರಕ್ಕೆ ವಲಸೆ ಹೋದ. ಈ ವಲಸೆಯ ನಂತರ, ಅವರ ರಾಜಧಾನಿಯನ್ನು ಮೇವಾರಕ್ಕೆ ಸ್ಥಳಾಂತರಗೊಳಿಸಿದರು.ಕೆಲ ವರ್ಷಗಳ ಬಳಿಕ ಉದಯ್ ಸಿಂಗ್ ರ ಮರಣವಾಯ್ತು. ಪ್ರತಾಪ್ ಗದ್ದುಗೆಯನ್ನು ಏರಿದ.
![]() |
| ಮಹಾರಾಣಾ ಪ್ರತಾಪ್ ಸಿಂಹ |
ಮೇವಾರಕ್ಕಾಗಿ ಹಪಹಪಿಸುವಿಕೆ:
ಇದನ್ನೆಲ್ಲಾ ನೋಡಿದಾಗ ಮೇವಾರ ಎಷ್ಟು ಮುಖ್ಯವಾಗಿತ್ತು ಮತ್ತು ಮೊಘಲ್ ಚಕ್ರವರ್ತಿ ಮೇವಾರ್ ಹಿಂದೆ ಏಕೆ ಬಿದ್ದಿದ್ದ ಎಂಬುದು ಗೊತ್ತಾಗುತ್ತದೆ.
ಸತತ 8 ರಾಜತಾಂತ್ರಿಕ ಕಾರ್ಯಾಚರಣೆಗಳ ವಿಫಲತೆಯ ನಂತರ ಅಕ್ಬರ್ ನಿಗೂ ಸಾಕಾಗಿ ಹೋಯಿತು. ಕೊನೆಗೆ ಆತ ಮೇವಾರದ ಮೇಲೆ ದಾಳಿ ಮಾಡಲು ನಿರ್ಧರಿಸಿದ. ಈ ದಾಳಿ ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರತಿಷ್ಠಿತ ಯುದ್ಧಕ್ಕೆ ಕಾರಣವಾಯಿತು. ಅದುವೇ ಹಲ್ದಿಘಾಟಿಯ ಕದನ.
Click here to read in English
ಹಲ್ದಿಘಾಟಿಯ ಕದನ ಮತ್ತು ಪರಿಣಾಮಗಳು:
ಯುದ್ಧ ಅಂದಮೇಲೆ ಮೊದಲು ಬಲಾಬಲಗಳ ಬಗ್ಗೆ ತಿಳಿಯಲೇ ಬೇಕು. ಒಂದು ಕಡೆ ಮಹಾರಾಣಾ ಪ್ರತಾಪಸಿಂಹ 20,000 ಸೈನಿಕರನ್ನು ಹೊಂದಿದ್ದ. ಮತ್ತೊಂದೆಡೆ, ಚಕ್ರವರ್ತಿ ಅಕ್ಬರ್ ಈ ಯುದ್ಧಕ್ಕಾಗಿ 80,000 ಸೈನಿಕರನ್ನು ಕಳುಹಿಸಿದ್ದ. ಅಕ್ಬರ್ ದಂಡಿನ ಬಳಿ ಪ್ರತಾಪನಿಗಿಂತ ಮೂರು ಪಟ್ಟು ಹೆಚ್ಚು ಯುದ್ಧದ ಆನೆಗಳಿದ್ದವು ಮತ್ತು ಹೆಚ್ಚಿನ ಸಂಖ್ಯೆಯ ಕುದುರೆಗಳಿದ್ದವು. ಅಕ್ಬರ್ ತನ್ನ ಸೈನ್ಯದ ಒಂದು ತುಕುಡಿಯನ್ನು ಬಳಸಿದ್ದರೆ, ಮಹಾರಾಣಾ ಪ್ರತಾಪನು ತನ್ನ ಸಂಪೂರ್ಣ ಸೈನ್ಯವನ್ನು ಇದಕ್ಕೆಂದು ಬಳಸಿದ್ದ.
ಮಹಾರಾಣಾ ಪ್ರತಾಪನ ಸೈನ್ಯವು ಕತ್ತಿ, ಬಿಲ್ಲು ಮತ್ತು ಬಾಣಗಳೊಂದಿಗೆ ಹೋರಾಡುತ್ತಿರುವಾಗ, ಮೊಘಲ್ ಸೈನ್ಯವು ಬಂದೂಕುಗಳೊಂದಿಗೆ ಯುದ್ಧಕ್ಕೆ ಇಳಿದಿತ್ತು, ಆ ಸಮಯದಲ್ಲಿ ಅದೊಂದು ದೊಡ್ಡ ಅನುಕೂಲವೇ ಆಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ, ಮಹಾರಾಣಾ ಪ್ರತಾಪನ ಸ್ವಂತ ಸಹೋದರರೇ ಅಕ್ಬರ್‌ನೊಂದಿಗೆ ಕೈಜೋಡಿಸಿದ್ದರು. ಮೇವಾರ್ ಸಿಂಹಾಸನ ಅವರಿಗೆ ದಕ್ಕಲಿಲ್ಲ ಎಂಬ ಒಂದು ಕಾರಣಕ್ಕೆ ಇಂತಹ ನೀಚ ಬುದ್ಧಿಗೆ ಇಳಿದಿದ್ದರು.
ಇವೆಲ್ಲವನ್ನ ಯಾರಾದರೂ ನಿಮಗೆ ಕಾಗದದಲ್ಲಿ ಬರೆದು ಕೊಟ್ಟಿದ್ದರೆ, ನೀವು ಮಹಾರಾಣಾ ಪ್ರತಾಪ ಅಕ್ಬರ ಸೈನ್ಯದ ಮುಂದೆ ಸೋಲುತ್ತಾನೆ ಎಂದು ಹೇಳೇ ಹೇಳುತ್ತೀರಿ. ಆದರೆ ಹಲ್ದಿಘಾಟಿಯಲ್ಲಿ ಆಗಿದ್ದು ಬೇರೆಯೇ. ಅಕ್ಬರ್ ಎದುರಿಸಿದ ಅತ್ಯಂತ ಕಠಿಣ ಯುದ್ಧಗಳಲ್ಲಿ ಇದು ಕೂಡ ಒಂದಾಗಿದೆ. ಮತ್ತು ಅಕ್ಬರ್ ಗೆ ಈ ಹಲ್ದಿಘಾಟಿಯ ಕದನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
4 ಪಟ್ಟು ಹೆಚ್ಚು ಸೈನಿಕರು, 3 ಪಟ್ಟು ಹೆಚ್ಚು ಯುದ್ಧದ ಆನೆಗಳು ಮತ್ತು ಶತ್ರುವಿನ ಸ್ವಂತ ಸಹೋದರರೇ ಬಳಿ ಇರಬೇಕಾದರೆ ಅಕ್ಬರ್ ಗೆ ಈ ಯುದ್ಧ ಹೇಗೆ ಗೆಲ್ಲಲಾಗಲಿಲ್ಲ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬೇಕು ಅಲ್ಲವೇ? ಅಲ್ಲಿ ಅಡ್ಡಿ ಬಂದಿದ್ದು ಸಂಖ್ಯೆಗಳು ಅಲ್ಲ, ಪ್ರತಾಪ್ ಎಂಬ ಹೆಸರಿನ ಚತುರನ ಚಾಣಾಕ್ಷತೆ. ಅವನ ಆ ಬುದ್ಧಿವಂತಿಕೆಯಿಂದ, ಅಂತಹ ಬೃಹತ್ ಸೈನ್ಯದ ವಿರುದ್ಧ ತನ್ನ ಭೂಮಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದನು.
ಮಹಾರಾಣಾ ಪ್ರತಾಪಗೆ ಈ ಯುದ್ಧ ಅನೀರೀಕ್ಷಿತವಾಗಿರಲಿಲ್ಲ. ಆತ ಇದನ್ನು ಮೊದಲೇ ನಿರೀಕ್ಷಿಸಿದ್ದ. ಅಕ್ಬರ್ ರಾಜತಾಂತ್ರಿಕರನ್ನು ಕಳುಹಿಸುತ್ತಿದ್ದ ವೇಳೆಗೆ ತನ್ನ ಬುದ್ಧಿಯನ್ನು ಬಳಸಿ, ಮುಂದೆ ಯುದ್ಧ ನಡಿದೆ ನಡಿಯುತ್ತೆ ಎಂದು ಊಹಿಸಿ, ಆಗಲೇ ತನ್ನ ಕಾರ್ಯತಂತ್ರವನ್ನು ರೂಪಿಸಲು ತೊಡಗಿದ್ದ. ಒಂದು ರೀತಿಯಲ್ಲಿ ಆಯೋಜಿಸಿದ್ದ.
ಅಕ್ಬರ್ ದಾಳಿ ಮಾಡಬೇಕೆಂದರೆ ಅವನು ಹಲ್ದಿಘಾಟಿ ಮೂಲಕವೇ ಬರಬೇಕಿತ್ತು. ಇದನ್ನು ಮೊದಲು ಗುರುತಿಸಿಕೊಂಡ ಪ್ರತಾಪ್, ಈ ಜಾಗದಿಂದ ಪ್ರಯೋಜನ ಹೇಗೆ ಪಡೆಯಬೇಕೆಂದು ಲೆಕ್ಕ ಹಾಕಿದ. ಹಲ್ಡಿಘಾಟಿ ಒಂದು ಸಾಮಾನ್ಯ ಭೂಪ್ರದೇಶವಾಗಿರಲಿಲ್ಲ. ಹಲ್ದಿಘಾಟಿಯ ವಿಶೇಷತೆಯೆಂದರೆ ಅದರ ಎರಡೂ ಬದಿಗಳಲ್ಲಿ ಪರ್ವತಗಳಿದ್ದವು. ಮತ್ತು ಓಡಾಡಲು ಒಂದು ಸಣ್ಣ ಮಾರ್ಗವಿತ್ತು. ಇಕ್ಕಟ್ಟಿನ ಜಾಗವಾದ ಕಾರಣ, ಇದರಲ್ಲಿ ಸೀಮಿತ ಸಂಖ್ಯೆಯ ಜನರು ಮಾತ್ರ ಪ್ರಯಾಣಿಸಬಹುದಾಗಿತ್ತು. ಇಲ್ಲಿ ಎಂತಹದೇ ದೊಡ್ಡ ಗಾತ್ರದ ಸೈನ್ಯವೇ ಬರಲಿ, ಅವರು ಕಣಿವೆಯ ಮೂಲಕ ಹಾದುಹೋಗಲು ಬಯಸಿದರೆ, ತಮ್ಮ ಸೇನಾ ರಚನೆಯನ್ನು ಮುರಿದು, ಸಾಗಬೇಕಾಗುತ್ತಿತ್ತು. ಮತ್ತು ಅವರು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸೈನಿಕರನ್ನು ದಾಟಲು ಪ್ರಯತ್ನಿಸಿದರೆ, ಕಾಲ್ತುಳಿತದಿಂದ ಸಾವು ಉಂಟಾಗುವ ಸಾಧ್ಯತೆ ಇತ್ತು. ನೀವು ಆಂಗ್ಲ ಭಾಷೆಯ "300" ಚಲನಚಿತ್ರವನ್ನು ನೋಡಿದ್ದರೆ, ಈ ಯುದ್ಧ ತಂತ್ರ ನಿಮಗೆ ಚೆನ್ನಾಗಿ ಅರ್ಥವಾಗುತ್ತದೆ.
ಎರಡನೆಯದಾಗಿ, ಯುವರಾಜನಾಗಿದ್ದಾಗ ಕಲಿತ ಪಾಠ. ಹಿಂದೆ ಚಿತ್ತೋರ್ ಮೇಲೆ ಆಕ್ರಮಣ ಮಾಡಿದ ಮೊಗಲರ ಬಳಿ ಫಿರಂಗಿಗಳು ಇದ್ದವು. ಇದರದ ಬಳಕೆಯ ಪರಿಣಾಮ ಪ್ರತಾಪ್ ಅದಾಗಲೇ ತಿಳಿದುಕೊಂಡಿದ್ದ. ಕೇವಲ ಮನುಷ್ಯರನ್ನು ಅಷ್ಟೇ ಅಲ್ಲ ದಪ್ಪ ದಪ್ಪ ಗೋಡೆಗಳನ್ನೇ ಇವು ಕೊಂದು ಹಾಕುತ್ತಿದ್ದವು. ಇದೇ ಮೊಘಲರ ಪ್ರಬಲ ಶಕ್ತಿ ಆಗಿತ್ತು. ಹಾಗು ಈ ಪ್ರಬಲ ದಾಳಿಯನ್ನು ಕಟ್ಟಿಹಾಕಲು ಪ್ರತಾಪ್ ಬಳಿ ಯೋಜನೆಯೂ ಸಹ ಇತ್ತು. ಹಳ್ದಿಘಾಟಿಯ ಕಿರುದಾರಿ. ಇದರಿಂದಾಗಿ ಮೊಘಲರ ಸೈನ್ಯ ಅವುಗಳನ್ನು ರಣರಂಗಕ್ಕೆ ತರಲು ಆಗಲಿಲ್ಲ.
ಮತ್ತು ಮೂರನೆಯದಾಗಿ, ಈ ಯುದ್ಧವನ್ನು ಗೆಲ್ಲಲು ಅವಶ್ಯವಿರುವುದು ಸೇನೆ ಮತ್ತು ಆಯುಧ ಅಲ್ಲಾ, ಬದಲಿಗೆ ಯುದ್ಧ ನಡೆಯುವ ಭೂಪ್ರದೇಶದ ಜ್ಞಾನ ಎಂದು ಪ್ರತಾಪ್ ಅರಿತುಕೊಂಡಿದ್ದ. ಆದ್ದರಿಂದ ಅವನು ಗೆರಿಲ್ಲಾ ಯುದ್ಧದಲ್ಲಿ ಪರಿಣಿತರಾಗಿದ್ದ ಭಿಲ್ ಸಮುದಾಯದವರ ಬಳಿ ಸಹಕಾರ ಕೇಳಿದ. ಆದಿವಾಸಿಗಳಾಗಿದ್ದ ಅವರಿಗೆ, ಹಲ್ದಿಘಾಟಿಯ ಭೂಪ್ರದೇಶಗಳು ಎಲ್ಲರಿಗಿಂತ ಚೆನ್ನಾಗಿ ತಿಳಿದಿದ್ದವು. ಅದರ ಜತೆಗೆ ಅವರು ಬಿಲ್ಲುಗಾರಿಕೆಯಲ್ಲಿ ಪರಿಣಿತಿ ಹೊಂದಿದ್ದರು. ಪರ್ವತದ ತುದಿಯಿಂದ ಗುಪ್ತಚರ ಘಟಕವಾಗಿ ಕಾರ್ಯ ನಿರ್ವಹಿಸಿ, ಯುದ್ಧದ ಆಗುಹೋಗುಗಳ ಬಗ್ಗೆ ಮಹಾರಾಣಾ ಪ್ರತಾಪನಿಗೆ ತಿಳಿಸುತ್ತಾ, ಅವನಿಗೆ ನೆರವಾದರು.
1576 ರ ಜೂನ್ 18 ರ ಬೇಸಿಗೆಯ ಬೆಳಿಗ್ಗೆ, ಹಲ್ದಿಘಾಟಿಯ ಭೂಪ್ರದೇಶದಲ್ಲಿ ಎರಡು ಸೇನೆಗಳು ಮುಖಾಮುಖಿಯಾಗಿ, ಕದನ ಪ್ರಾರಂಭವಾಯಿತು. ಮಹಾರಾಣಾ ಪ್ರತಾಪ ಮತ್ತು ಮೊಘಲರ ಪ್ರತಿನಿಧಿಯಾಗಿ ಮೊಘಲ್ ಸೇನೆಯ ಸೇನಾಧಿಪತಿ - ಮಾನ್ ಸಿಂಗ್ ಮುಖಾಮುಖಿಯಾದರು. ಮಾನ್ ಸಿಂಗ್ ಗಜಾರೂಢಿಯಾದರೆ, ಮಹಾರಾಣಾ ಪ್ರತಾಪ ತನ್ನ ಕೆಚ್ಚೆದೆಯ ಕುದುರೆ ಚೇತಕ್ ಮೇಲೆ ಕೂತಿದ್ದ.
ನೋಡನೋಡುತ್ತಿದ್ದಂತೆ, ಶರವೇಗದಲ್ಲಿ ಪ್ರತಾಪ್ ಮಾನ್ ಸಿಂಗ್ ಬಳಿ ಬಂದ. ಚೇತಕ್ ತೀವ್ರವೇಗದಲ್ಲಿ ಬಂದು ಮಾನ್ ಸಿಂಗ್ ಕುಳಿತಿದ್ದ ಆನೆಯ ಸೊಂಡಿಲಿನ ಮೇಲೆ ಕಾಲು ಇಟ್ಟಿತು. ಪ್ರತಾಪ್ ಬಲವಾಗಿ ತನ್ನ ಕಾಲುಗಳನ್ನು ಆನೆಯ ಸೊಂಡಿಲಿನ ಮೇಲೆ ಊರಿ, ಆನೆ ಅಲ್ಲಾಡುವಂತೆ ಬಲವಾಗಿ ತಳ್ಳಿದ. ಈ ದಾಳಿಯಿಂದಾಗಿ ಮಾನ್ ಸಿಂಗ್ ನೆಲಕ್ಕೆ ಬಿದ್ದನು. ಆದರೆ ಚೇತಕ್ ತೀವ್ರವಾಗಿ ಗಾಯಗೊಂಡಿತ್ತು. ಆನೆಯ ಸೊಂಡಲಿನಲ್ಲಿದ್ದ ಕತ್ತಿ, ಅದರ ಕಾಲುಗಳನ್ನು ಸಾವರಿಸಿತ್ತು. ಕಾಲುಗಳಲ್ಲಿ ತೀವ್ರವಾಗಿ ರಕ್ತಸ್ರಾವವಾಗತೊಡಗಿತು. ಇಂತಹ ತೀವ್ರವಾದ ಗಾಯದ ನಂತರ, ಯಾವುದೇ ಕುದುರೆಗಳು ಚಲಿಸುವುದಿಲ್ಲ. ಇದನ್ನು ಗಮನಿಸಿದ ಮೊಘಲ್ ಸೈನಿಕರು, ಮಹಾರಾಣಾ ಪ್ರತಾಪನನ್ನು ಕೊಲ್ಲಲು ಇದೇ ಸೂಕ್ತ ಅವಕಾಶ ಎಂದು ಅವರು ಭಾವಿಸಿ, ಇವರೆಡೆಗೆ ನುಗ್ಗಿ ಬಂದರು. ಆದರೆ ಈ ಮಹಾನ್ ಕುದುರೆಗೆ ಏನಾಯಿತು ಎಂದು ದೇವರಿಗೆ ಗೊತ್ತು. ಆ ನರಕ ಯಾತನೆಯ ಗಾಯವಿದ್ದರೂ ಸಹ, ಚೇತಕ್ ತನಗೆ ಸಾಧ್ಯವಾದಷ್ಟು ವೇಗವಾಗಿ ಓಡಲು ಆರಂಭಿಸಿತು.
ಚೇತಕ್ ಮೊಘಲ್ ಪಡೆಗಳಿಂದ ಸುಮಾರು 5 ಕಿಮೀ ದೂರದಷ್ಟು, ಮಹಾರಾಣಾ ಪ್ರತಾಪನನ್ನು ಕುಳ್ಳಿರಿಸಿಕೊಂಡು ಓಡಿದ. ಪ್ರತಾಪ್ ಅವರ ಖಾಲಿ ತೂಕವೇ 110 ಕಿಲೋಗ್ರಾಂಗಳಿಗಿಂತ ಹೆಚ್ಚಿತ್ತು. ಅವನ ಆಯುಧಗಳನ್ನು ಸೇರಿಸಿದರೆ, ಅವನ ತೂಕ ಸುಮಾರು 470 ಕೆಜಿ ಇದ್ದಿತ್ತು. ತೀವ್ರಗಾಯಗೊಂಡಿದ್ದ ಕುದುರೆಯೊಂದು 470 ಕೆಜಿಯ ಅಸಾಮಿಯನ್ನು, ಅತೀ ವೇಗದಲ್ಲಿ, 5 ಕಿಮೀ ದೂರದಷ್ಟು ಕರೆದುಕೊಂಡು ಬಂದಿತ್ತು. ಅದೂ 21 ಅಡಿ ಅಗಲದ ನದಿಯೊಂದರ ಮೇಲೆ ಹಾರಿ!!!. ಕಣ್ಣು ಬಿಡುವಷ್ಟರಲ್ಲಿ ನಡೆದ ಈ ಘಟನೆ ಕಂಡು, ಮೊಘಲರು ಕೂಡ ಆಶ್ಚರ್ಯಚಕಿತರಾದರು. ಆದರೆ ಪ್ರತಾಪ್ ಇಳಿದ ಕೂಡಲೇ ಕುದುರೆ ಕುಸಿದು ಬಿತ್ತು, ಅಸುನೀಗಿತು. ಪ್ರತಾಪನ ಕಣ್ಣಲ್ಲಿ ಕಣ್ಣೀರು ಉರುಳಿತು.ಆತನಿಗೆ ಚೇತಕ್ ಕೇವಲ ಕುದುರೆಯಾಗಿರಲಿಲ್ಲ, ಅವನು ಒಬ್ಬ ಒಡನಾಡಿಯಾಗಿದ್ದ. ಅದೇ ರೀತಿ ಪ್ರತಾಪನ ಯುದ್ಧದ ಆನೆ, ರಾಮ್ ಪ್ರಸಾದ್ ಮೊಘಲರಿಂದ ಸೆರೆಹಿಡಿಯಲ್ಪಟ್ಟನು.ಸೆರೆಯಾದ ಬಳಿಕ ತಿನ್ನಲು ಅಥವಾ ಕುಡಿಯಲು ನಿರಾಕರಿಸಿದನು, ಅಂತಿಮವಾಗಿ, ಹಸಿವಿನಿಂದ ಮರಣ ಹೊಂದಿದನು. ಮಹಾರಾಣಾ ಪ್ರತಾಪಸಿಂಹನ ಮೇಲೆ ಪ್ರಾಣಿಗಳಿಗಿದ್ದ ಪ್ರೀತಿ ಮತ್ತು ನಿಷ್ಠೆ ಅಂತಹದ್ದು.
![]() |
| ಮಹಾರಾಣಾ ಪ್ರತಾಪ ಹಾಗೂ ಚೇತಕ್ |
ಏತನ್ಮಧ್ಯೆ, ಮೊಘಲ್ ಪಡೆಗಳು ಕಣಿವೆಗಳ ಮೂಲಕ ದಾಳಿ ಆರಂಭಿಸಿದ್ದವು. ಮಹಾರಾಣಾ ಪ್ರತಾಪನ ಸೇನೆಗೆ ಈ ದಾಳಿಯನ್ನು ಇನ್ನು ವಿರೋಧಿಸಲು ಸಾಧ್ಯವಾಗಲಿಲ್ಲ. ಹಲ್ದಿಘಾಟಿಯ ರಕ್ತ ಚೆಲ್ಲಿದ ಯುದ್ಧಭೂಮಿಯಲ್ಲಿ, ಕತ್ತಲು ಆವರಿಸಿಕೊಂಡಂತೆ, ಉಳಿದಿದ್ದ ಮೇವಾರ್ ಸೈನಿಕರು ಕಾಡುಗಳು ಮತ್ತು ಬೆಟ್ಟಗಳಿಗೆ ಹಿಮ್ಮೆಟ್ಟಬೇಕಾಯಿತು. ಅಂತಿಮವಾಗಿ, ಹಲ್ದಿಘಾಟಿಯ ಕದನವು ನಿರ್ಣಾಯಕ ಅಂತ್ಯಕ್ಕೆ ಬಂದು ನಿಂತಿತ್ತು.
ಯುದ್ಧದಲ್ಲಿ ಯಾವುದೇ ರೀತಿಯ ಶರಣಾಗತಿ ಮತ್ತು ಸೆರೆ ಇರದ ಕಾರಣ, ಇಲ್ಲಿ ಮೊಘಲರು ಗೆಲ್ಲಲೂ ಇಲ್ಲ ಅಥವಾ ರಜಪೂತರು ಸೋಲಲೂ ಇಲ್ಲ. ಆದರೆ ಕದನದಲ್ಲಿ ತುಂಬಾ ರಕ್ತಪಾತವಾಯಿತು ಎಂದು ಹೇಳಲಾಗುತ್ತದೆ. ರಕ್ತದಿಂದಾಗಿ ಹಳದೀಘಾಟಿಯ ಹಳದಿ ಮಣ್ಣು ಕೆಂಪಾಯಿತು. ಇಂದಿಗೂ ಜನರು ಅಲ್ಲಲ್ಲಿ ಭೂಮಿಯನ್ನು ಅಗೆದಾಗ ಆಗಿನ ಕಾಲದ ಕತ್ತಿಗಳು ಮತ್ತು ಈಟಿಗಳನ್ನು ಸಿಗುತ್ತಿವೆ.
ಪಠ್ಯಪುಸ್ತಕಗಳ ನಂತರದ ಕಥೆ:
ಈಗಿನ ಹೆಚ್ಚಿನ ಇತಿಹಾಸದ ಪಠ್ಯಪುಸ್ತಕಗಳು ಈ ಕಥೆಯೊಂದಿಗೆ, ಪ್ರತಾಪ್ ಕಥೆಯನ್ನು ಮುಗಿಸಿಬಿಡುತ್ತವೆ. ಇದಾದ ಮೇಲೆ ದುರ್ಬಿನ್ ಹಿಡಿದು ಹುಡುಕಿದರೂ ಒಂದು ಪದ ಸಿಗಲ್ಲ. ಮುಗಿಸಿದರೂ ಪರವಾಗಿಲ್ಲ, ಆದರೆ ಪ್ರತಾಪ್ ತನ್ನ ಮುಂದಿನ ಜೀವನ ಮೊಘಲರಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಕಳೆದನು ಎಂದು ಹುಸಿ ಮಾಹಿತಿಯೊಂದನ್ನು ಹೇಳಿ ಸುಮ್ಮನಾಗುತ್ತಾರೆ. ಆದರೆ ಸತ್ಯವೇ ಬೇರೆಯಾಗಿದೆ.
ಅವನು ಅಡಗುದಾಣದಲ್ಲಿ ಆಶ್ರಯ ತಗೆದುಕೊಂಡ ಮೇಲೆ ಮತ್ತೆ ಒಂದು ಸೈನ್ಯವನ್ನು ಬೆಳೆಸಿದನು. ತನ್ನ ಮಂತ್ರಿಗಳಲ್ಲಿ ಒಬ್ಬರಾದ ಭಾಮಶಾರಿಂದ ಹಣವನ್ನು ತೆಗೆಸಿ, ಈ ಸೈನ್ಯವನ್ನು ಕಟ್ಟಿದ. ಮುಂದೆ ಅಕ್ಬರ್ ನು, ಮಹಾರಾಣಾ ಪ್ರತಾಪಸಿಂಹನ ವಿರುದ್ಧ ಅನೇಕ ಪ್ರಚಾರಗಳನ್ನು ಆರಂಭಿಸಿದನು. ವಾಸ್ತವವಾಗಿ, ಅಕ್ಬರ್ ಸ್ವತಃ ಮಹಾರಾಣಾ ಪ್ರತಾಪನನ್ನು ಹಿಡಿಯಲು ಮತ್ತೆ ಮೇವಾರಕ್ಕೆ ಬಂದನು. ಆದರೆ ಅವನು ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಸಿ, ಚಳ್ಳೆ ಹಣ್ಣು ತಿನ್ನಿಸಿದ.
ಕರ್ನಲ್ ಜೇಮ್ಸ್ ಟಾಡ್ ಎಂಬ ಹೆಸರಿನ ಬ್ರಿಟಿಷ್ ಇತಿಹಾಸಕಾರ ಮತ್ತೊಂದು ಭೀಕರ ಯುದ್ಧದ ಘಟನೆಯನ್ನು ದಾಖಲಿಸಿದ್ದಾನೆ. ಇದನ್ನು ಡಿವೇರ್ ಕದನ ಎಂದು ಕರೆಯಲಾಯ್ತು. ಈ ಯುದ್ಧಕ್ಕೆ ಚಕ್ರವರ್ತಿ ಅಕ್ಬರ್ ನು ತನ್ನ ಸೈನ್ಯದ 36,000 ಸೈನಿಕರನ್ನು ಕಳುಹಿಸಿದನು. ಆದರೆ ಈ ಸಲ, ಮಹಾರಾಣಾ ಪ್ರತಾಪನ ಸೈನ್ಯ ಮೊಘಲ್ ಸೈನ್ಯವನ್ನು ಸೋಲಿಸಿ ವಿಜಯಶಾಲಿಯಾಯ್ತು. ಅಂತಿಮವಾಗಿ ಪ್ರತಾಪ್ ಮೇವಾರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿಕೊಂಡನು. ಇದಾದ ನಂತರ ಮೊಘಲರಿಗೆ ಪ್ರತಾಪನನ್ನು ಸೋಲಿಸಲು ಸಾಧ್ಯವೇ ಆಗಲಿಲ್ಲ.
ಏತನ್ಮಧ್ಯೆ, ಪ್ರತಾಪ್ ಮೇವಾರ ಅನ್ನು ಮತ್ತೆ ಶ್ರೀಮಂತಗೊಳಿಸಿದ. ಪ್ರತಾಪನ ಗುರುತಿನ ನಾಣ್ಯಗಳನ್ನು ಚಾಲ್ತಿಗೆ ತರಲಾಯ್ತು. ಕೃಷಿ ಆವಿಷ್ಕಾರಗಳನ್ನು ಮಾಡಲಾಯ್ತು. ಹೀಗೆ ಪ್ರತಾಪ್ ಸುದೀರ್ಘ 20 ವರ್ಷಗಳ ಕಾಲ ರಾಜನಾಗಿ ಆಳಿದ.1597 ರಲ್ಲಿ ಬೇಟೆಯಾಡುವಾಗ, ನಡೆದ ಅವಘಡದಲ್ಲಿ, ಪ್ರತಾಪ್ ಮರಣ ಹೊಂದಿದರು. ತನ್ನ ಕೊನೆ ಉಸಿರು ಇರುವವರೆಗೆ ಮೊಘಲರ ಆಳ್ವಿಕೆಯ ವಿರುದ್ಧ ಪ್ರತಿರೋಧಕನಾಗಿ ಮೆರೆದ. ಮೊಘಲ್ ಮತ್ತು ರಜಪೂತರ ನಡುವಿನ ಸುದೀರ್ಘ ಹೋರಾಟ ಕೊನೆಗೆ ಅಂತ್ಯ ಕಂಡಿತು.
ಪ್ರತಾಪರ ಮರಣ ವಾರ್ತೆಯನ್ನು ದರ್ಬಾರಿನಲ್ಲಿ ದೂತರ ಮೂಲಕ ಕೇಳಿದ ಅಕ್ಬರ್, ದೀರ್ಘ ಉಸಿರನ್ನು ತಗೆದುಕೊಂಡ. ಆತನ ಕಣ್ಣಲ್ಲಿ ನೀರು ಒಡೆದಿತ್ತು. ಪ್ರತಾಪ್ ತನ್ನ ಪರಮ ಪ್ರತಿಸ್ಪರ್ಧಿಯಾಗಿದ್ದರೂ, ಅಕ್ಬರ್ ಪ್ರತಾಪನನ್ನ ಬಹಳ ಮೆಚ್ಚಿಕೊಂಡಿದ್ದ. ಅಕ್ಬರ್ ಕಂಡ ಶ್ರೇಷ್ಠ ಯೋಧರಲ್ಲಿ ಮಹಾರಾಣಾ ಪ್ರತಾಪ ಅಗ್ರನಾಗಿದ್ದ. ಭಾರತೀಯ ಇತಿಹಾಸದಲ್ಲಿ ಇಬ್ಬರು ಶ್ರೇಷ್ಠ ಯೋಧರ ನಡುವಿನ ಪೈಪೋಟಿಯ ಕಥೆ ಹೀಗೆ ಅಂತ್ಯ ಕಂಡಿತು.
ಸಾರ:
ಈ ಕಥೆಯಿಂದ ನಾವು ಕಲಿಯಬೇಕಾದ 3 ಪ್ರಮುಖ ಪಾಠಗಳಿವೆ.
- ನಾವು ಮೊದಲ ಪಾಠ ಕಲಿಯಬೇಕಾದದ್ದು ಅಕ್ಬರ್‌ನಿಂದ. ಅದೇನೆಂದರೆ, ಯುದ್ಧಗಳಿಗಿಂತ ಬೇರೆ ಮಾರ್ಗಗಳಿಗೆ ಪ್ರಾಶಸ್ತ್ಯ ಕೊಡುವುದು. ಅವನು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಂಡಿದ್ದ.
- ಎರಡನೆಯ ಪಾಠವು ಮಹಾರಾಣಾ ಪ್ರತಾಪಸಿಂಹರ ಮೇಲೆ ಆಧಾರಿತವಾಗಿದೆ. ದೂರದೃಷ್ಟಿಕೋನ ಅಥವಾ ಭವಿಷ್ಯದ ಬಗ್ಗೆ ಪೂರ್ವ ಯೋಜನೆ ಮಾಡುವುದು. ಈ ಮೌಲ್ಯವು ಯಾವುದೇ ಸ್ಪರ್ಧೆಯಲ್ಲಿ ನಮಗೆ ತುಂಬಾ ಹೆಚ್ಚಿನ ಪ್ರಯೋಜನವನ್ನು ಕೊಡುತ್ತದೆ. ಸ್ಪರ್ಧೆಯು ಎಷ್ಟೇ ಪ್ರಬಲವಾಗಿದ್ದರೂ, ಪೂರ್ವಯೋಜನೆ ಅದನ್ನು ನೀರು ಕುಡಿದಷ್ಟು ಸುಲಭ ಮಾಡಿ ಬಿಡುತ್ತದೆ.
- ಮೂರನೆಯದು ಮತ್ತು ಅತೀ ಮುಖ್ಯವಾದುದು. "ನೆವರ್ ಗಿವ್ ಅಪ್ (ಎಂದಿಗೂ ಬಿಟ್ಟುಕೊಡುವುದಿಲ್ಲ)"- ಎಂಬ ಮಾತುಗಳನ್ನು, ದೊಡ್ಡ ದೊಡ್ಡ ಭಾಷಣಕಾರರ ಮಾತುಗಳಲ್ಲಿ ಕೇಳುತ್ತಿರುತ್ತೇವೆ-. ಆದರೆ ಈ ಇಬ್ಬರ ವಿಷಯದಲ್ಲಿ ಗಮನ ನೀಡಿದರೆ ಒಂದು ಮಾತ್ರ ತೋರುತ್ತದೆ. ತನ್ನನ್ನು ತಾನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿ, ಇಬ್ಬರಲ್ಲಿ ಯಾರೂ ಸಹ ವೀರ ಮರಣ ಹೊಂದಲಿಲ್ಲ. ಬದಲಿಗೆ, ಇಬ್ಬರೂ ತಮ್ಮ ತಮ್ಮ ಯುದ್ಧಗಳನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಂಡರು. ಮತ್ತು ಇಬ್ಬರೂ ತಮ್ಮ ಪಾಲಿನ ಗೆಲುವನ್ನು ಸಹ ಪಡೆದುಕೊಂಡರು. ಈ ಸಮಯದಲ್ಲಿ ಭಾವಾವೇಶಕ್ಕೆ ಒಳಗಾಗದೆ, ಎಲ್ಲಿ ಹಿಮ್ಮೆಟ್ಟಬೇಕು/ ಹಿಂದೆ ಸರಿಯಬೇಕು/ ಗಿವ್ ಅಪ್ ಮಾಡಬೇಕು ಎಂಬುದನ್ನು ಸರಿಯಾಗಿ ಕಂಡುಕೊಂಡಿದ್ದರು. ಹಿಮ್ಮೆಟ್ಟುವುದು ತಪ್ಪಲ್ಲ. ಕೆಲವೊಮ್ಮೆ ಹಿಂದೆ ಸರಿದು, ಒಳ್ಳೆ ಯೋಜನೆಯನ್ನು ಸಿದ್ಧ ಪಡಿಸಿ, ಮತ್ತೆ ತಪ್ಪುಗಳನ್ನು ಮರುಕಳಿಸದಂತೆ ಜಾಗೃತೆ ವಹಿಸಿ ಮುನ್ನುಗ್ಗುವುದೇ ಸರಿಯಾದ ಮಾರ್ಗ.
ಅನಿಸಿಕೆ :
ಕೊನೆಯಲ್ಲಿ ಹೇಳುವುದು ಇಷ್ಟೇ. ಅಕ್ಬರ್ ಕೆಟ್ಟವನೋ ಒಳ್ಳೆಯವನೋ ಗೊತ್ತಿಲ್ಲ. ಆದರೆ ಅವನ ಸರಿ ಸಮಾನವಾಗಿ ರಣವೀಳ್ಯ ನೀಡಿ, ಎದೆ ತಟ್ಟಿ ನಿಂತು, ಆಳಿದ ಮಹಾರಾಣಾ ಪ್ರತಾಪ್ ಅವರನ್ನು ಕಡೆಗಣಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಇವರ ಇಬ್ಬರ ಇತಿಹಾಸದ ಪುಟಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕು ಎನ್ನುವುದೇ ಈ ಲೇಖನದ ಆಶಯ.
ಈ ಲೇಖನ ಇಷ್ಟವಾದಲ್ಲಿ, ಲೈಕ್ ಶೇರ್ ಮತ್ತು ಕಾಮೆಂಟ್ ಮಾಡಿ.
ಧನ್ಯವಾದಗಳು.
ಜೈ ಕರ್ನಾಟಕ । ಜೈ ಕನ್ನಡ । ಜೈ ಹಿಂದ್






0ಕಾಮೆಂಟ್‌ಗಳು