Evergrande Loan Crisis- ಎವರಗ್ರಾಂಡೆ ಸಾಲದ ಬಿಕ್ಕಟ್ಟು 

ನಿಮಗೆ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದರೆ, "ಎವರಗ್ರಾಂಡೆ" ಎಂಬ ಕಂಪನಿ ಬಗ್ಗೆ ಕೇಳಿರಲೇಬೇಕು. ಎವರಗ್ರಾಂಡೆ ಚೀನಾದ ಅತಿ ದೊಡ್ಡ  ಕಂಪನಿ. ಚೀನಾದ(China) ರಿಯಲ್ ಎಸ್ಟೇಟ್ ಉದ್ಯಮದ ಸಿಂಹಪಾಲು ಈ ಕಂಪನಿ ಒಂದರಲ್ಲೇ ಇದೆ. ಮನೆ ನಿರ್ಮಾಣ, ಕಚೇರಿ ಕಟ್ಟಡಗಳ ನಿರ್ಮಾಣ ಮತ್ತು ಇನ್ನಿತರ ಕಾಮಗಾರಿಗಳು ಇದರ ಮುಖ್ಯ ಕೆಲಸಗಳು.

ಈ ಕಂಪನಿಯು ಎಷ್ಟರ ಮಟ್ಟಿಗೆ ದೊಡ್ಡದು ಇದೆ ಎಂದು ತಿಳಿಸಿಕೊಡಲು ಸಣ್ಣ ಪ್ರಯತ್ನ ಮಾಡುತ್ತೇನೆ. ಅಷ್ಟಾಗಿಯೂ ಇದು ಚೈನೀಸ್ ಕಂಪನಿ ಆಗಿರುವುದರಿಂದ, ಚೀನಾ ಹೊರಡಿಸಿದ ದಾಖಲೆಗಳಷ್ಟೇ ಇಲ್ಲಿ ಉಲ್ಲೇಖ ಮಾಡಲು ಸಾಧ್ಯ. ಆಡಳಿತ ನಿಯಂತ್ರಿತ ಮಾಧ್ಯಮಗಳು ಇರುವುದರಿಂದ ಅಲ್ಲಿ ನಡೆಯುತ್ತಿರುವ ನೈಜ ಹಾಗು ಸಧ್ಯದ ಅಸಲಿ ವಿಷಯಗಳನ್ನು ಇಲ್ಲಿ ಹೇಳಲು ಆಗುವುದಿಲ್ಲ.

ಎವರ್‌ಗ್ರಾಂಡೆ ರಿಯಲ್ ಎಸ್ಟೇಟ್ ಗ್ರೂಪ್

1996 ರಲ್ಲಿ ಚೀನಾದಲ್ಲಿ ಈ ಕಂಪನಿ ಸ್ಥಾಪಿತವಾಯಿತು. ಕ್ಸು ಜಿಯಾನ್ ಇದರ ಸಂಸ್ಥಾಪಕರು. ಎವರ್‌ಗ್ರಾಂಡೆ ಗ್ರೂಪ್ ಅಥವಾ ಎವರ್‌ಗ್ರಾಂಡೆ ರಿಯಲ್ ಎಸ್ಟೇಟ್ ಗ್ರೂಪ್ (ಹಿಂದೆ ಹೆಂಗ್ಡಾ ಗ್ರೂಪ್ ಎಂದು ಕರೆಯಲಾಗುತಿತ್ತು) ಮಾರಾಟದಲ್ಲಿ ಚೀನಾದಲ್ಲಿ ಎರಡನೇ ಅತಿದೊಡ್ಡ ಆಸ್ತಿ ಡೆವಲಪರ್ ಆಗಿದೆ ಮತ್ತು ಫಾರ್ಚೂನ್ ಗ್ಲೋಬಲ್ ಪಟ್ಟಿಯಲ್ಲಿ ಮೊದಲ 500 ರಲ್ಲಿ 122 ನೇ ಸ್ಥಾನ ಹೊಂದಿದೆ. ಕೇಮನ್ ದ್ವೀಪದಲ್ಲಿ ಕಚೇರಿ ಇದ್ದು, ಇದರ ಪ್ರಧಾನ ಕಚೇರಿ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿದೆ.

ಇದೊಂದು ಖಾಸಗಿ ಕಂಪನಿ. ಮೇಲಿನ ವರ್ಗ ಹಾಗು ಮಾಧ್ಯಮ ವರ್ಗದ ಜನರಿಗೆ ಅಪಾರ್ಟ್ಮೆಂಟ್ ಗಳಿಗೆ ಮಾರಾಟ ಮಾಡುತ್ತದೆ. 2018 ರಲ್ಲಿ, ಇದು ವಿಶ್ವದ ಅತ್ಯಮೂಲ್ಯ ರಿಯಲ್ ಎಸ್ಟೇಟ್ ಕಂಪನಿಯಾಗಿ  ಹೆಸರಿಸಲ್ಪಟಿತ್ತು. ಈ ಕಂಪನಿಯು ಎರಡು ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಿಗಳನ್ನು ಹೊಂದಿದೆ. ಮತ್ತು ಸುಮಾರು 3.8 ಮಿಲಿಯನ್ ಉದ್ಯೋಗಿಗಳು ಈ ಕಂಪನಿಗೆ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. ಸಂಖ್ಯೆಗಳನ್ನು ಕೇಳಿ ಆಶ್ಚರ್ಯ ಆಗುತ್ತಿರಬಹುದು ಅಲ್ಲವೇ? ಈ ಕಂಪನಿಯು ನಿರ್ಮಾಣ ಮತ್ತು ಇತರ ಸಂಬಂಧಿತ ಕೆಲಸಗಳಿಗೆ ಸಂಬಂಧಿಸಿದಂತೆ, ಚೀನಾದಲ್ಲಿ ಪ್ರತಿವರ್ಷ 38 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಪ್ರಸ್ತುತ, ಸುಮಾರು 280 ನಗರಗಳಲ್ಲಿ, ಈ ಕಂಪನಿಯ ಬಳಿ 1300 ಪ್ರಾಜೆಕ್ಟ್ ಗಳಿವೆ. ಈ ಕಂಪನಿಯ ಬೆಲೆ 350 ಬಿಲಿಯನ್ ಡಾಲರ್. ಈಗ ನಿಮಗೆ ಅದರ ವಿಶಾಲತೆ ಬಗ್ಗೆ ಒಂದು ಸಣ್ಣ ಅರಿವು ಸಿಕ್ಕಿರಬಹುದು. 

ಈಗ ವಿಷಯಕ್ಕೆ ಬರೋಣ. ನಾನು ಹೇಳ ಹೊರಟಿರೋ ವಿಷಯ ಈ ಮೇಲಿನ ಬಗ್ಗೆ ಇಂಬು ಕೊಡುವುದಕ್ಕೆ ಅಲ್ಲ. ಆದರೆ ಇಷ್ಟು ವಿಶಾಲವಾಗಿ ಆವರಿಸಿಕೊಂಡಿರುವ ಕಂಪನಿಯೊಂದು ಪತನದ  ಅಂಚಿನಲ್ಲಿರುವ ಕಥೆಯನ್ನು ಸಾದರ ಪಡಿಸುವುದು ಈ ಲೇಖನದ ಉದ್ದೇಶ. 2017 ರಲ್ಲಿ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಈ ಸಂಸ್ಥಾಪಕ, ಈಗ ಈ ಮಟ್ಟಿನ ಸ್ಥಿತಿಗೆ ಹೇಗೆ ತಲುಪಿದ? ಇಂತಹ ವಿಶಾಲವಾದ ಕಂಪನಿ, ಈಗೇಕೆ ಪತನದ ಅಂಚಿಗಿದೆ? ಎಂಬ ಪ್ರಶ್ನೆಗಳೇ  ಈ ಲೇಖನದ ಆಧಾರ.

ಸಧ್ಯದ ಪರಿಸ್ಥಿತಿ ಸರಿಯಿಲ್ಲ. ಬರೀ ಎವರಗ್ರಾಂಡೆಗಷ್ಟೇ ಅಲ್ಲ, ಚೀನಾಗೂ ಸಹ ನೆಟ್ಟಗಿಲ್ಲ. ಎವರಗ್ರಾಂಡೆ ಈಗ ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಸಾಲದ ಹೊರೆಯನ್ನು ತಾಳಲಾರದೆ ನಷ್ಟ ಹೊಂದಿ, ಪತನದದತ್ತ ಸಾಗುತ್ತಿದೆ. ಬಹುಶಃ ಅಲಿಬಾಬಾ ಕಂಪನಿಯ ನಂತರ ಕೇಳುತ್ತಿರುವ ಇನ್ನೊಂದು ಆಘಾತಕಾರಿ ಸುದ್ದಿ ಎಂದರೆ ಇದೆ.

ಸಾಲದ ಹೊರೆಯಿಂದಾಗಿ ಆಗುವ ಸಂಕಷ್ಟದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. 2021 ರ ಆರಂಭದಿಂದ ಈ ಕಂಪನಿಯ ಶೇರ್ ಮೌಲ್ಯ ಸುಮಾರು 85%ರಷ್ಟು ಇಳಿಮುಖವಾಗಿದೆ. ಈ ಕಂಪನಿಯ ಬಾಂಡ್ಗಳು ಸಹ ಅಷ್ಟೇ ಸಾಲಗಳನ್ನು ಹೊಂದಿವೆ. ಕಳೆದ ಗುರುವಾರಕ್ಕೆ ಸಾಲದ ಒಂದು ಕಂತನ್ನು ಕಂಪನಿ ಕಟ್ಟಬೇಕಿದೆ. ಅಕಸ್ಮಾತ ತಪ್ಪಿದ್ದಲ್ಲಿ ಇನ್ನಷ್ಟು ಹೊರೆ, ಸಂಕಷ್ಟ ತಂದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

Chinese flags are seen near the logo of the China Evergrande Group on the Evergrande Center in Shanghai, China, September 24, 2021
Credits : Reuters

ರಿಯಲ್ ಎಸ್ಟೇಟ್ ಎಂಬ ಉದ್ಯಮದ ಒಳನೋಟ:

ನಾನು ಮೊದಲೇ ಹೇಳಿದ ಹಾಗೆ, ಇದೊಂದು ರಿಯಲ್ ಎಸ್ಟೇಟ್ ಉದ್ಯಮ. ಸಾಲವೇ ಈ ಉದ್ಯಮದ ಪ್ರಧಾನ ಹಣದ  ವಹಿವಾಟು. ಸಾಲ ತಗೆದುಕೊಂಡು ಮೊದಲು ನಿರ್ಮಾಣ ಕಾರ್ಯ ಶುರು ಮಾಡುತ್ತಾರೆ, ನಂತರ ಕಟ್ಟಡಗಳನ್ನು ಮಾರಾಟ ಮಾಡಿ, ಸಾಲ ತೀರಿಸಿ, ಲಾಭವನ್ನು ಸಹ ಗಳಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಚೀನಾ ತನ್ನ ಆಡಳಿತಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿತು. ಇಲ್ಲೇ ಶುರು ಆಯ್ತು ಎವರಗ್ರಾಂಡೆಯ ಪತನದ ಹಾದಿ.ಈ ಬದಲಾವಣೆಗಳಿಂದ ಹಿಂದಿನ ವರ್ಷದಲ್ಲಿ ಕಂಪೇನುಗೆ ಅತೀ  ದೊಡ್ಡ ಹೊಡೆತ ಬಿತ್ತು. ಹೇಗೆ? ಮತ್ತು ಏಕೆ? ಎಂದು ಮುಂದೆ ವಿವರಿಸಲಾಗಿದೆ.

ಮೊದಲನೆಯದಾಗಿ, ಸಾಲದ ಸುಳಿ ಬಗ್ಗೆ ನೋಡೋಣ. ಎವರಗ್ರಾಂಡೆ ಈಗ 310 ಬಿಲಿಯನ್ ಡಾಲರ್ ಸಾಲದಲ್ಲಿ ಸಿಲುಕಿದೆ. ಸರಿಸುಮಾರು 120 ಕ್ಕೂ ಹೆಚ್ಚು ಚೀನೀ ಬ್ಯಾಂಕುಗಳು ಮತ್ತು ಇತರ ಖಾಸಗಿ ಸಂಸ್ಥೆಗಳು ಇದಕ್ಕೆ ಸಾಲವನ್ನು ನೀಡಿವೆ. ಸಾಲ ನೀಡುವ ಯಾವುದೇ ಕಂಪನಿಗಳನ್ನು ಸಹ ಇದು ತಿರಸ್ಕರಿಸದೆ, ಎಲ್ಲರ ಬಳಿ ಸಾಲವನ್ನು ಪಡೆದಿದೆ. ಒಮ್ಮೆ ಊಹಿಸಿಕೊಳ್ಳಿ , ಅಕಸ್ಮಾತ ಈ ಕಂಪನಿ ಬಿದ್ದರೆ, ಎಷ್ಟು ಜನರನ್ನು ತನ್ನ ಜತೆಗೆ ಕರೆದುಕೊಂಡು ಬೀಳುತ್ತದೆ ಎಂದು. 120 ಕ್ಕೂ ಹೆಚ್ಚು  ಬ್ಯಾಂಕುಗಳು ಎಂದರೆ, ಅದರ ಖಾತೆದಾರರು, ಷೇರ್ ಹೊಂದಿದವರು, ಅಷ್ಟೇ ಯಾಕೆ ಇಡೀ ಸರ್ಕಾರವನ್ನೇ ಜತೆಗೆ ತಗೆದುಕೊಂಡು ಬೀಳುವಷ್ಟು ಹಿರಿದಾದ ಸಾಲವನ್ನು ಮಾಡಿದೆ. ಅರ್ಥವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುವ ಘಟನೆ ನಡೆಯುವುದಷ್ಟೇ ಬಾಕಿ ಇದೆ.

ಎರಡನೆಯದಾಗಿ, ಸಾಮಾನ್ಯ ಜನತೆ. ರಿಯಲ್ ಎಸ್ಟೇಟ್ ಮೂಲ ದಂಧೆ ನಿಮಗೆ ಗೊತ್ತೇ ಇದೆ. ಅಪಾರ್ಟ್ಮೆಂಟ್ ಒಂದನ್ನು ಮಾರುವ ಮುಂಚೆ ಅಲ್ಲಿ "ಪ್ರಿ-ಬುಕಿಂಗ್" ಇರುತ್ತದೆ. ಮನೆಯನ್ನು ಮುಂಗಡ ಕಾಯ್ದಿರಿಸಲು ಎಷ್ಟೋ ಜನ ಮುಂಗಡ ಹಣ ನೀಡಿರುತ್ತಾರೆ. ಸಾಮಾನ್ಯವಾಗಿ ಕಂಪನಿಗಳು ಈ ಹಣವನ್ನು ಸಹ ನಿರ್ಮಾಣ ಕಾರ್ಯದಲ್ಲಿ ಹೂಡಿಕೆ ಮಾಡುತ್ತವೆ. ಈ ರೀತಿಯಾಗಿ ಸುಮಾರು 1.5 ಮಿಲಿಯನ್ ಮನೆಗಳಿಗಾಗಿ ಅದು ಮುಂಗಡ ಹಣ ಪಾವತಿಸಿಕೊಂಡಿದೆ, ಆದರೆ ಅದರ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಈ ಕಂಪನಿ ಎಲ್ಲಾದರೂ ನೆಲಕಚ್ಚಿದರೆ, ಈ ಮನೆಗಳು ಸಹ ನೀರಿನಲ್ಲಿ ಹೋಮ ಮಾಡಿದಂತೆ ಮುಳುಗಿ ಬಿಡುತ್ತವೆ. ಇದರ ವ್ಯತಿರಿಕ್ತ ಪರಿಣಾಮ  1.5 ಮಿಲಿಯನ್ ಕುಟುಂಬಗಳ ಮೇಲೆ ಆಗುತ್ತದೆ. ಇದರಿಂದಾಗಿ, ಉದ್ಯೋಗ, ಆರ್ಥಿಕತೆ ಮತ್ತು  ಮಾರುಕಟ್ಟೆಗಳ  ಮೇಲೆ ಸಹ ಪ್ರಭಾವ ಬೀರುತ್ತದೆ.

ಇದೆಲ್ಲಾ ಸರಿ. ಈ ಸಮಸ್ಯೆ ಒಮ್ಮೆಲೇ ಹೇಗೆ ಉದ್ಭವವಾಯಿತು? ಒಮ್ಮಿಂದೊಮ್ಮೆಲೆ ಇದು ಹೇಗೆ ಪ್ರಾರಂಭವಾಯ್ತು? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಇದು ತತಕ್ಷಣ ನಡೆಯುವಂತಹ ಘಟನೆಯಲ್ಲ. ಹಿಂದಿನ ಕಾರ್ಯವಿಧಾನಗಳಿಂದಾಗಿ, ಅದರ ಫಲವನ್ನು ಚೀನಾ ಈಗ ಅನುಭವಿಸುತ್ತಿದೆ.

ಸಮಸ್ಯೆಯ ಶುರುವಾತು :

ಆಗಸ್ಟ್ 2020 ರಲ್ಲಿ, ಚೀನಾ ಸರ್ಕಾರ ಹೊಸ ನೀತಿಯೊಂದನ್ನು ಚಾಲ್ತಿಗೆ ತಂದಿತು. ಚೀನಾದಲ್ಲಿ ಸಾಲದ ಹೊರೆಯು ಹೇರಳವಾಗಿದೆ ಎಂದು ಅಧ್ಯಯನ ನಡೆಸಿ, ಇದರಿಂದ ಚೀನಾದ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಆಲೋಚಿಸಿ ಈ ಹೊಸ ಕಾನೂನನ್ನು ಜಾರಿಗೆ ತಂದಿತು. ಇದರಲ್ಲಿ ಆಶ್ಚರ್ಯವೇನಿಲ್ಲ. ಚೀನಾದ ಆರ್ಥಿಕತೆಯು ಮಾಧ್ಯಮ ವರ್ಗದ ಜನರ ಆದಾಯದ ದೇಶವಾಗಿದೆ. ಅವರ ದೇಶದಲ್ಲಿ ಸಾಲದ ಹೊರೆ ಎಷ್ಟು ಹೆಚ್ಚಾಗಿತ್ತು ಎಂದರೆ, ಒಮೆಲ್ಲೆ ತರೆಗೆಲೆ ಉದಿರಿದ ಹಾಗೆ ಅದರ ಆರ್ಥಿಕತೆಯು ಸಹ ಬೀಳುವ ಸಂಕಷ್ಟದಲ್ಲಿತ್ತು. ಇದನ್ನೆಲ್ಲಾ ಸರಿಪಡಿಸುವ ಉದ್ದೇಶದಿಂದ, ಚೀನಾ ಈ ಹೊಸ ನಿಯಮಗಳನ್ನೇನೋ ಮಾಡಿತು, ಆದರೆ ಎವರಗ್ರಾಂಡೆ ಮೇಲೆ ಅದರ ಪರಿಣಾಮ ಚೂರಿಯಂತೆ ಇರಿಯಿತು. ಇದಾದ ಮೇಲೆಯೇ ಎವರಗ್ರಾಂಡೆಯ ಒಂದೊಂದು ಸಮಸ್ಯೆಗಳು ಮುನ್ನೆಲೆಗೆ ಒಂದೊಂದಾಗಿ ಬರತೊಡಗಿದವು. ಈಗ ಅದು ದೊಡ್ಡ ಜ್ವಾಲಾಮುಖಿಯಂತೆ ಈಗಲೋ ಆಗಲೋ ಸಿಡಿಯುವಂತಹ ಸ್ಥಿತಿಯಲ್ಲಿ ನಿಂತಿದೆ.

2018 ರಿಂದ ಚೀನಾ ತನ್ನ ದೇಶಗದಲ್ಲಿ ಸಾಲಗಳನ್ನು ನಿಯಂತ್ರಿಸಲು ಆರಂಭಿಸಿತು. ಆದರೆ ಇಲ್ಲಿ ತಮಾಷೆಯ ವಿಷಯ ಏನೆಂದರೆ, ಅವರ ಕಾರ್ಪೊರೇಟ್, ಸರ್ಕಾರ ಮತ್ತು ಗೃಹದ ಸಾಲವು ಅವರ ಆರ್ಥಿಕತೆಯ (ಒಟ್ಟು ಉತ್ಪಾದನೆಯಲ್ಲಿ ) 270% ಆಗಿತ್ತು. ಕಳೆದ ವರ್ಷ 270% ರಿಂದ 300%ಕ್ಕೆ ಬದಲಾಗಿದೆ. ಇಂತಹ ಸಾಲದ ಕಿರಿಕಿರಿಯನ್ನು ತಾಳಲಾರದೆ ಚೀನಾ ಅನಿವಾರ್ಯವಾಗಿ ಈ ನಿಯಮ ಹಾಗು ಬದಲಾವಣೆಗಳನ್ನು ಜಾರಿಗೆ ತಂದಿತು. ಇದು ಎವರಗ್ರಾಂಡೆಯ ಮೌಲ್ಯ ಕುಸಿಯಲು ಪ್ರಮುಖ ಕಾರಣವಾಯ್ತು.

ಕಾರ್ಯ ವೈಖರಿ:

ಈ ಕಂಪನಿಯು ಕಾರ್ಯ ವೈಖರಿ ಹೇಗೆ? ಈ ಕಂಪನಿಯು ಹೇಗೆ ಕಾರ್ಯನಿರ್ವಹಿಸುತ್ತದೆ? ಯಾವ ಆಧಾರದಲ್ಲಿ ಮತ್ತು ಯಾವ ರೂಪದಲ್ಲಿ ಹಣದ  ವ್ಯವಹಾರ ಮಾಡುತ್ತದೆ? ಎಂದು ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ. ಇವುಗಳ ಬಗ್ಗೆ ನಿಮಗೆ ಇನ್ನೂ  ಹೆಚ್ಚಿನ ಮಾಹಿತಿಗಳು ಬೇಕೆಂದಲ್ಲಿ ಯುಟ್ಯೂಬ್ ಗಳಂತಹ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ಉಪಲಬ್ಧವಿದೆ.

ಚೀನಾದಲ್ಲಿ ನೀವು ಇತರ ದೇಶಗಳಲ್ಲಿ ಜಾಮೀನು ಖರೀದಿಸುವಂತೆ, ನೀವು ಜಾಮೀನು ಖರೀದಿಸಲು ಆಗುವುದಿಲ್ಲ. ಬದಲಿಗೆ ಅವುಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಬಹುದು. ಸರ್ಕಾರ ಗುತ್ತಿಗೆ ಆಧಾರದಲ್ಲಿ ನಾಗರಿಕರಿಗೆ ಹಾಗು ಸಂಸ್ಥೆಗಳಿಗೆ ವಿತರಿಸುವ ಹಕ್ಕನ್ನು ಹೊಂದಿದೆ. ಎವರಗ್ರಾಂಡೆಯಂತಹ ದೊಡ್ಡ ದೊಡ್ಡ ಕಂಪನಿಗಳು, ಸರ್ಕಾರದಿಂದ ಭೂಮಿಯನ್ನು ಸಾಮಾನ್ಯವಾಗಿ 70 ವರ್ಷಗಳವರೆಗೆ ಗುತ್ತಿಗೆಗೆ ಖರೀದಿಸುತ್ತವೆ. ಆದರೆ ಇವನ್ನು ಖರೀದಿಸಲು ಮತ್ತು ಅಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲು ಅವರಿಗೆ ಹಣದ ಅಗತ್ಯ ಇರುತ್ತದೆ. ಆ ಸಮಯದಲ್ಲಿ ಅಷ್ಟು ದೊಡ್ಡ ಹಣ ಅವರ ಬಳಿ ಇರದೇ ಇರುವುದರಿಂದ (ಇದ್ದರೂ ಬಳಸಲು ಅವರು ಬಯಸುವುದಿಲ್ಲ) , ಬೇರೆಯವರಿಂದ ಹಣವನ್ನು ಎರವಲು ಪಡೆಯುವುದು ಸಮಂಜಸ ಎನಿಸುತ್ತದೆ. ಈಗಾಗಲೇ ಖರೀದಿ ಮಾಡಿದಂತಹ ಜಮೀನನನ್ನೋ  ಅಥವಾ ಕಟ್ಟಿದ ಕಟ್ಟಡಗಳನ್ನೂ ಒತ್ತೆಯಾಗಿ ಇಟ್ಟು  ಸಹ ಅವರು ಹಣವನ್ನು ಸಾಲವಾಗಿ ಪಡೆಯುತ್ತಾರೆ .

ಸಾಮಾನ್ಯವಾಗಿ ಇಂತಹ ದೊಡ್ಡ ಕಂಪನಿ ಒಂದು, ಇಷ್ಟು ದೊಡ್ಡ ಆಫರ್ ತಗೆದು ಕೊಂಡು ಬ್ಯಾಂಕ್ ಬಳಿ ಹೋದಾಗ, ಕಂಪನಿಯ ವರ್ಚಸ್ಸು ನೋಡಿ, ಹಣ ಮರು ಪಾವತಿಸುತ್ತದೆ ಎಂದು ಭಾವಿಸಿ ಕಣ್ಣು ಮುಚ್ಚಿ ಸಾಲ ನೀಡುತ್ತಾರೆ. ಇಷ್ಟು ದೊಡ್ಡ ಕಂಪನಿ ವಿಫಲವಾಗುವ ಅಥವಾ ನಷ್ಟ ಹೊಂದುವ ಅವಕಾಶಗಳು ತುಂಬಾ ವಿರಳ ಎಂದು ಕೇಳಿದಾಗಲೆಲ್ಲ ಹಣ ಸಂದಾಯ ಮಾಡುತ್ತದೆ.

ಮುಂಗಡ  ಬುಕಿಂಗ್ ಮುಖಾಂತರ ಸಹ ಹಣವನ್ನು ಕ್ರೂಢೀಕರಿಸಿಕೊಳ್ಳುತ್ತದೆ. ಗ್ರಾಹಕರಿಗೆ ಮನೆಯನ್ನು ಕಟ್ಟಿ ಕೊಡುವ ನೆಪದಲ್ಲಿ ಮುಂಗಡ ಹಣ ಪಾವತಿಸಿಕೊಂಡು ಮುಂದಿನ ನಾಲ್ಕು ವರ್ಷಗಳಲ್ಲಿ ಕಟ್ಟಿ ಕೊಡುವೆವು ಎಂದು ಹೇಳಿ, ಆ ಮನೆಯನ್ನು ಅವರಿಗೆ ಖಾತ್ರಿ ಪಡಿಸುತ್ತದೆ. ಈ ರೀತಿಯಾಗಿ, ಎರಡು ತೆರನಾಗಿ ಹಣವನ್ನು ವಸೂಲಿ ಮಾಡಿದ ಈ ಕಂಪನಿಯು ಈಗ ಹಣ ಹಿಂತುರುಗಿಸಲು ಆಗದೆ ಇರುವ ಸ್ಥಿತಿ ತಲುಪಿದೆ. ಸಾಲದ ಹೊರೆಯನ್ನು ಕಮ್ಮಿ ಮಾಡಲೆಂದು ಹೊಸ ಉಪಾಯವನ್ನು ಸಹ ಮಾಡುತ್ತಿದೆ. ಮುಂಗಡ ಪಾವತಿಯ ಮೇಲೆ ರಿಯಾಯಿತಿ ಕೊಡಲು ಸಹ ಶುರು ಮಾಡಿಕೊಂಡಿದೆ. ಹಣಕ್ಕಾಗಿ ಈ ಮಟ್ಟಿಗೆ ಆ ಕಂಪನಿ ಹಪಹಪಿಸುತ್ತಿದೆ. 

ಚೀನಾದ ಲೆಹ್ಮನ್ ಚಳುವಳಿ ಎಂಬ ಬಿರುದು :

ಒಟ್ಟಾರೆಯಾಗಿ ಈ ಸಾಲದ ಚಕ್ರದಿಂದ ಮತ್ತು ಸರ್ಕಾರ ವಿಧಿಸಿದ ನಿರ್ಬಂಧಗಳಿಂದಾಗಿ, ಈ ಕಂಪನಿಯ ಸಮಸ್ಯೆಗಳು ಹೆಚ್ಚಾದವು. ಅವರು ಮಾಡುತ್ತಿದ್ದ ಹಿಂದಿನ ಕೆಲಸಗಳೇ ಈಗ ಅವರ ದಾರಿಗೆ ಮುಳ್ಳಾಗಲು ಶುರು ಆದವು. ಇಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದ ಈ ಕಂಪನಿಗೆ ಒಂದು ಹೊಸ ಬಿರುದನ್ನೇ ಕೊಟ್ಟರು. "ಚೀನಾದ ಲೆಹ್ಮನ್ ಚಳುವಳಿ" ಎಂದು. ಲೆಹ್ಮನ್ ಬ್ರದರ್ಸ್ ಎಂಬುದು ಯೂಸ್ ನ ರಿಯಲ್ ಎಸ್ಟೇಟ್ ಕಂಪನಿಯ ಹೆಸರು. 2008 ರ ಬಿಕ್ಕಟ್ಟಿನ ಸಮಯದಲ್ಲಿ, ಈ ಕಂಪನಿ ಸಹ ಬಿಕ್ಕಟ್ಟಿಗೆ ಸಿಕ್ಕಿತು. ಅಲ್ಲಿನ ಸರ್ಕಾರ ಮತ್ತು ಕಂಪನಿಯ ನಡುವೆ ಜಟಾಪಟಿಗಳೇ ನಡೆದವು. ಎವರಗ್ರಾಂಡೆಯ ಸಧ್ಯದ ಸ್ಥಿತಿಗತಿ ಒಂದೇ ಆಗಿರುವದರಿಂದ ಇದನ್ನು ಚೀನಾದ ಲೆಹ್ಮನ್ ಚಳುವಳಿ ಎಂದು ಕರೆಯತೊಡಗಿದ್ದಾರೆ.

2008 ರ ಬಿಕ್ಕಟ್ಟಿನ ಬಿಸಿ ಅಮೇರಿಕಾದಿಂದ ಯುರೋಪ್ ಗೂ ಹರಡಿತು. ಎರಡೂ  ಕಡೆಯಲ್ಲಿ ಲೆಹ್ಮನ್ ಮಾರುಕಟ್ಟೆ ಹೊಂದಿದ್ದರಿಂದ, ಅದರ ತಾಪ ಎಲ್ಲೆಡೆಯೂ ಕಾಣುವಂತಾಯ್ತು. ಚೀನಾ ಸಹ ಸಣ್ಣ ದೇಶವೇನಲ್ಲ. ಮುಂದೆ ಹಲವು ದೇಶಗಳ ಮಾರುಕಟ್ಟೆಗೆ ಬಿಸಿ ತಟ್ಟುವುದಂತು ಶತಸಿದ್ಧ.

ಚೀನಾದಲ್ಲಿನ ಈ ರಿಯಲ್ ಎಸ್ಟೇಟ್ ಉದ್ಯಮ ಏಕೆ ಈ ರೀತಿ ದೊಡ್ಡ ಪರಿಣಾಮ ಎದುರಿಸುತ್ತಿದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಅದಕ್ಕೆ ಕಾರಣ ಗಗನಮುಖಿಯಾಗಿರುವ ಅಲ್ಲಿನ ರಿಯಲ್ ಎಸ್ಟೇಟ್ ಬೆಲೆಗಳು. ಅಲ್ಲಿ ಚಿನ್ನದ ಬೆಲೆಯಂತೆ ಜಮೀನಿನ ಬೆಲೆಗಳು  ಹೆಚ್ಚಾಗಿವೆ.ಇದರ ಹಿಂದಿನ ಕಾರಣವೆಂದರೆ, ಚೀನಾದಲ್ಲಿ  ಜನಸಾಮಾನ್ಯರಿಗೆ ಹೂಡಿಕೆ ಮಾಡಲು ಇರುವ ಒಂದೇ ಆಯ್ಕೆ ಎಂದರೆ ಅದು ರಿಯಲ್ ಎಸ್ಟೇಟ್ ಮಾತ್ರ. ಈಗ ಹೂಡಿಕೆ ಮಾಡಿದರೆ ಐದಾರು ವರ್ಷಗಳಲ್ಲಿ ಚೆನ್ನಾಗಿ ಗಳಿಸಬಹುದು ಎಂಬ ಯೋಚನೆಯೊಂದಿಗೆ ಅಲ್ಲಿನ ಜನ ಇಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮತ್ತು ಅವರ ಪ್ರಕಾರ ಚೀನಾದಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಕ್ಷೇತ್ರವಾಗಿದೆ.

ಪರಿಣಾಮಗಳ ಉದಾಹರಣೆಗಳು :

ಒಮ್ಮೆ ಊಹಿಸಿಕೊಳ್ಳಿ. ಈ ಕಂಪನಿ ಬಿದ್ದರೆ ಏನೆಲ್ಲಾ ಆಗಬಹುದು ಎಂದು. ವಿಶ್ವದ ದೊಡ್ಡ ಆರ್ಥಿಕತೆ ಕುಸಿಯುತ್ತದೆ. ಎಷ್ಟೋ ಜನರ ಹೂಡಿಕೆ ಹಣ ಮಂಗಾ ಮಾಯಾ ಆಗಬಹುದು. ನಿರ್ಮಾಣ ಅವಲಂಬಿತ ದೇಶಿಯ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಕುಸಿಯಬಹಹುದು. ಭಾರತಕ್ಕೂ ಸಹ ಇದರ ಬಿಸಿ ತಟ್ಟೆ ತಟ್ಟುತ್ತದೆ. ಚೀನಾ ಭಾರತದಿಂದ ಕಬ್ಬಿಣ ಆಮದು ಮಾಡಿಕೊಳ್ಳುತ್ತದೆ, ಮುಖ್ಯವಾಗಿ ರಿಯಲ್ ಎಸ್ಟೇಟ್ ಗಾಗಿ. ಮೊದಲೇ ವಿವರಿಸಿದಂತೆ ಕಂಪನಿ ಅವಲಂಬಿತ ಉದ್ಯೋಗಗಳು ಖುಲಾಸೆ ಆಗ ಬಹುದು. ಎಷ್ಟೋ ಜನರ ಬದುಕು ಬೀದಿಗೆ ಬರುತ್ತದೆ. ಹೇಳ ಹೋದರೆ ಪಟ್ಟಿ ಮುಗಿಯುವುದೇ ಇಲ್ಲ. 

ನನ್ನ ಅಭಿಪ್ರಾಯ :

ಆದರೆ ಇವೆಲ್ಲ ಭವಿಷ್ಯತ್ ಕಾಲದ ಮಾತುಗಳು. ಆಗಬಹುದು ಅಥವಾ ಆಗದೆ ಇರಬಹುದು. ಮುಂದೆ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ನಾವು ಕೇವಲ ಊಹಿಸಬಹುದೇ ಹೊರತು ನಿರ್ಣಯಿಸಲಿಕ್ಕೆ ಸಾಧ್ಯವಿಲ್ಲ. ಮತ್ತು ಇಲ್ಲಿರುವ ಒಂದು ವಿಶೇಷತೆ  ಏನೆಂದರೆ ಇದಾಗುತ್ತಿರುವುದು ಚೀನಾದಲ್ಲಿ. ಚೀನಾದ ತನ್ನ ದೇಶದೊಳಗೆ, ಯಾವಾಗಾದರೂ, ಏನನ್ನಾದರೂ ಮಾಡಬಹುದು. ಅದರ ನಡೆ ಮತ್ತು ತಂತ್ರಗಳನ್ನು ಊಹಿಸುವುದು ಮತ್ತು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ ಮೊದಲೇ ಹೇಳಿದಂತೆ ಇವೆಲ್ಲ ಚೀನಾ ನಿಯಂತ್ರಿತ ಮಾಧ್ಯಮದ ವರದಿಗಳಾಗಿವೆ. ಇದರ ಒಳಗೆ ಎಷ್ಟು ಹುರುಳಿದೆ ಎನ್ನುವುದು ದೇವರೇ ಬಲ್ಲ. ಚೀನಾ ವಿಶ್ವದ ಮುಂದೆ ಕೇವಲ ಸಿಹಿ ಸತ್ಯವನ್ನು ಮಾತ್ರ ಮುಂದಿಡುತ್ತಿದೆ. ಒಳಗಿನ ಕಹಿಯ ಆಳ ಹೊರಗಿನವರು ಯಾರು ಅರಿಯರು.

Disclaimer: ಈ ಲೇಖನ ಹಲವು ಮೂಲಗಳ ಮುಖಾಂತರ ಓದಿಕೊಂಡು, ಮೇಳೈಸಿ ಬರೆದ ಬರವಣಿಗೆ ಆಗಿದ್ದು, ಇದು ಕೇವಲ ನನ್ನ ವಿಚಾರಗಳನ್ನು ನಿಮ್ಮ ಮುಂದೆ ಇಡುವ ವಸ್ತುವಾಗಿದೆ. ಲೇಖನದ ಆಧಾರವಾಗಿ ತೀರ್ಮಾನಗಳನ್ನು ಕಂಡು ಕೊಳ್ಳುವುದು ಅಥವಾ ಇದರಲ್ಲಿರುವ ವಿಷಯ ಬಳಸಿ ಕೃತ್ಯಗಳನ್ನು ಎಸಗುವುದು ನಿಮ್ಮ ಸ್ವಂತ ವಿವೇಚನೆಗೆ ಬಿಟ್ಟಿದ್ದು. ಇದಕ್ಕೆ ಲೇಖಕರು ಹೊಣೆಯಾಗಿರುವುದಿಲ್ಲ.