ಕೋವಿಡ್-19 ನಿಂದ ಭಾರತ ದೇಶದಲ್ಲಿ ಬಡತನ ಹೆಚ್ಚಾಗಿರುವಾಗ, ಅದೇ ದೇಶದಿಂದ ಮತ್ತೆ ಹೊಸದಾಗಿ 40 ಬಿಲಿಯನೇರ್‌ಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ನೀವು ನಂಬುತ್ತೀರಾ? ಸುಳ್ಳು ಎಂದು ನೀವು ಅಂದು ಕೊಂಡರು ಸಹ, ಅದರ ಸತ್ಯಾಂಶ ಆಕ್ಸ್‌ಫ್ಯಾಮ್ ದಾವೋಸ್ ವರದಿಯಲ್ಲಿ ಬಯಲಾಗಿದೆ.
ಕೋವಿಡ್-19 ಬಂದಾಗಿನಿಂದ ನಮ್ಮ ದೇಶ ಹೇಗೆ ತತ್ತರಿಸಿದೆ ಅಂತ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ತಿಳಿದಿರುವ ವಿಚಾರವನ್ನು ಪುನಃ ಪುನಃ ಹೇಳುವುದು ಸಹ ನನಗೆ ಇಷ್ಟ ಇಲ್ಲ. ಆದರೆ, ನಾನು ಹೇಳಲು ಹೋಗುತ್ತಾ ಇರುವ ವಿಚಾರ ಮಾತ್ರ ನಿಮ್ಮನ್ನು ಬೆರಗು ಮಾಡುತ್ತದೆ.
2022 ರ ಜಾಗತಿಕ ಆಕ್ಸ್‌ಫ್ಯಾಮ್ ದಾವೋಸ್ ವರದಿಯ ಪ್ರಕಾರ, ದೇಶದ ಕೋವಿಡ್-19 ನಂತಹ ಕಠಿಣ ಪರಿಸ್ಥಿತಿ ಅನುಭವಿಸುತ್ತಿದ್ದರೂ ಕೂಡ, ಅದರಲ್ಲಿ ಚಿನ್ನ ಅಗೆದವರು ಎಷ್ಟೋ ಜನ ಇದ್ದಾರೆ. ವರದಿ ಹೇಳುವಂತೆ, ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿನ ಶ್ರೀಮಂತರು, ತಮ್ಮ ಸಂಪತ್ತನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ. ಅದರ ಮುಂದುವರಿದ ವರದಿಯಲ್ಲಿ, ಇಂತಹ ಕಷ್ಟದ ಸಮಯದಲ್ಲಿ ಸರ್ಕಾರ ತನ್ನ ನಿಯಮಾವಳಿಗಳನ್ನು ಸರಿಪಡಿಸಿ, ಒಂದೇ ಕಡೆ ಕಾಲು ಮುರಿದ ಬಿದ್ದ ಲಕ್ಷ್ಮೀ ಅನ್ನು, ಬೇರೆಯವರಿಗೂ ಸಿಗುವಂತೆ ಮಾಡಬೇಕು ಎಂದು ಸಲಹೆ ಸಹ ನೀಡಿದೆ.
ಆಕ್ಸ್‌ಫ್ಯಾಮ್ ಮತ್ತು ಭಾರತ :
ಬ್ರಿಟಿಷ್ ಸ್ಥಾಪಿತ ಒಕ್ಕೂಟವಾಗಿರುವ ಆಕ್ಸ್‌ಫ್ಯಾಮ್, ತನ್ನ ಕೆಳಗೆ 21 ಸ್ವತಂತ್ರ ದತ್ತಿ ಸಂಸ್ಥೆಗಳನ್ನು ಹೊಂದಿದೆ. 1942 ರಲ್ಲಿ ಸ್ಥಾಪನೆಯಾದ ಆಕ್ಸ್‌ಫ್ಯಾಮ್, ಜಾಗತಿಕ ಬಡತನದ ನಿರ್ಮೂಲನೆ ಮೇಲೆ ತನ್ನ ಕೆಲಸವನ್ನು ಕೇಂದ್ರೀಕರಿಸಿದೆ. 1951 ರಲ್ಲಿ ಬಿಹಾರದಲ್ಲಿ ಉಂಟಾದ ಭೀಕರ ಕ್ಷಾಮದ ವಿರುದ್ಧ ಹೋರಾಡುವ ಮೂಲಕ ಆಕ್ಸ್‌ಫ್ಯಾಮ್ ಭಾರತದಲ್ಲಿ ಕೆಲಸ ಮಾಡಲು ಶುರು ಮಾಡಿತು. ಆ ಸಮಯದಲ್ಲಿ ಬಿಹಾರವು ಭಾರತದ ಅತ್ಯಂತ ಬಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿತ್ತು. ಜಗತ್ತಿನಾದ್ಯಂತ ಬಡತನ ವಿರುದ್ಧ ದನಿ ಎತ್ತುವ ಈ ಸಂಸ್ಥೆ, ವಾರ್ಷಿಕ ವರದಿಗಳ ಮೂಲಕ ಜಗತ್ತಿಗೆ ಸೂಚ್ಯಂಕಗಳನ್ನು ನೀಡುತ್ತದೆ.
Copyrights with Oxfarm |
ಕಳೆದ ವರ್ಷ ಭಾರತವು, ಸುಮಾರು 40 ಬಿಲಿಯನೇರ್‌ಗಳನ್ನು, ಆಗಲೇ ಇದ್ದ 142 ಬಿಲಿಯನೇರ್‌ಗಳ ಪಟ್ಟಿಗೆ ಸೇರಿಸಿದೆ. ಇಡೀ ಭಾರತದಲ್ಲಿ ಆಸ್ಪತ್ರೆಗಾಗಿ, ಹೆಣ ಸುಡಲು ಜಾಗಕ್ಕಾಗಿ ಹಾಹಾಕಾರ ಇದ್ದಂತಹ ಎರಡನೇ ಕೋವಿಡ್-19 ಅಲೆಯಲ್ಲಿ, ಇವರುಗಳು $720 ಶತಕೋಟಿ ಸಂಪತ್ತನ್ನು ಗಳಿಸಿದ್ದಾರೆ ಎಂದು ಆ ವರದಿಯಲ್ಲಿ ಪ್ರಕಟ ಮಾಡಲಾಗಿದೆ. ಸ್ವಾಮಿ, ಇದು ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಇರುವ, ನಲವತ್ತು ಪ್ರತಿಶತ ಬಡವರ ಸಂಪತ್ತಿಗಿಂತಲೂ ಅತಿ ಹೆಚ್ಚಾಗಿರುವ ಸಂಪಾದನೆ. ಈ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಭಾರತದಲ್ಲಿ ಅಸಮಾನತೆಯ ಕರಾಳ ಸತ್ಯವನ್ನು ಅದು ಬಯಲಿಗೆ ಎಳೆದಿದೆ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸ್ಟಾಕ್ ಅನ್ನು ಹಿಡಿದು ಕ್ರಿಪ್ಟೋ ವರೆಗೂ, ದಿನಸಿಯಿಂದ ಹಿಡಿದು ಪೆಟ್ರೋಲ್/ಇಂಧನಗಳ ವರೆಗೂ ಎಲ್ಲದರ ಬೆಲೆ ಗಗನಕ್ಕೆ ಏರಿತು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಇದನ್ನೇ ಅವಕಾಶವಾಗಿ ಬಳಸಿಕೊಂಡ ವಿಶ್ವದ 500 ಶ್ರೀಮಂತರು ಕಳೆದ ವರ್ಷ ತಮ್ಮ ನಿವ್ವಳ ಮೌಲ್ಯವನ್ನು $1 ಟ್ರಿಲಿಯನ್‌ಗಿಂತಲೂ ಹೆಚ್ಚಿನ ಬೆಲೆಗೆ ವೃದ್ಧಿ ಕಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ, ಭಾರತದ ನಗರ ಪ್ರದೇಶದ ನಿರುದ್ಯೋಗವು ಶೇಕಡಾ 15 ರಷ್ಟು ಏರಿದೆ. ಆಹಾರದ ಕೊರತೆಯನ್ನಂತು ಕೇಳಲೇ ಬೇಡಿ. ಆದರೆ ಫ್ರಾನ್ಸ್, ಸ್ವೀಡನ್, ಸ್ವಿಟ್ಜರ್ಲೆಂಡ್ ದೇಶದ ಒಟ್ಟು ಶ್ರೀಮಂತರಿಗಿಂತಲೂ ಹೆಚ್ಚು ಶ್ರೀಮಂತರನ್ನು ಭಾರತ ಈ ಸಮಯದಲ್ಲಿ ವಿಶ್ವಕ್ಕೆ ನೀಡಿದೆ.
2016 ರಲ್ಲಾದ ಸಂಪತ್ತಿನ ಮೇಲಿನ ತೆರಿಗೆ ರದ್ದು, ಕಾರ್ಪೊರೇಟ್ ಲೆವಿಗಳಲ್ಲಾದ ಕಡಿತಗಳು ಮತ್ತು ಪರೋಕ್ಷ ತೆರಿಗೆಯ ಹೆಚ್ಚಳ,ಹೀಗೆ ಇರುವ ಅನೇಕ ರಾಜ ನೀತಿಗಳು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡಲು ಸಹಾಯ ಮಾಡಿತೇ ಹೊರತು, ಬಡವರನ್ನು ಬಡವರನ್ನಾಗೇ ಉಳಿಸಿತು.ನಿಮಗೆ ಆಶ್ಚರ್ಯ ತರಿಸುವ ಇನ್ನೊಂದು ಸಂಗತಿ ಏನೆಂದರೆ, ಭಾರತದೇಶದ ರಾಷ್ಟ್ರೀಯ ಕನಿಷ್ಠ ವೇತನವೂ ದಿನಕ್ಕೆ ರೂ 178 ($ 2.4). ಇದರ ಬಗೆಗಿನ ಅಂಕಿ-ಅಂಶಗಳು,ಭಾರತದ 2020ರ, ಜಾಗತಿಕ ವರದಿಯಲ್ಲಿ ಕಾಣಬಹುದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಖಾಸಗೀಕರಣ, ಮತ್ತು ಸ್ಥಳೀಯ ಆಡಳಿತಗಳಿಗೆ ಸಮರ್ಪಕವಾದ ಅನುದಾನ ದೊರೆಯದ ಹಿನ್ನೆಲೆಯಲ್ಲಿ, ಭಾರತದಲ್ಲಿ ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಾಗಿದೆ. ವಿಶ್ವದ ಅಪೌಷ್ಟಿಕ ಜನಸಂಖ್ಯೆಯ ಕಾಲು ಭಾಗದಷ್ಟು ಜನರನ್ನು ಹೊಂದಿರುವ ಭಾರತದಲ್ಲಿ ಈ ಥರದ ಬೆಳವಣಿಗೆಗಳುಹಿತಕರವಲ್ಲ ಎಂದು ವಿಶ್ವ ಆಹಾರ ಕಾರ್ಯಕ್ರಮವನ್ನು ಉಲ್ಲೇಖಿಸಿ ಆಕ್ಸ್‌ಫ್ಯಾಮ್ ಹೇಳಿದೆ.
"ದುರದೃಷ್ಟವಶಾತ್, ಭಾರತ ಸರ್ಕಾರದ ತೆರಿಗೆ ನೀತಿಯು ಶ್ರೀಮಂತರ ಪರವಾಗಿ ನಿಲ್ಲುವುದಷ್ಟೇ ಅಲ್ಲದೆ, ಭಾರತದ ರಾಜ್ಯಗಳಿಗೆ ಸಿಗಬೇಕಾದ ಪ್ರಮುಖ ಹಣಕಾಸಿನ ಸಂಪನ್ಮೂಲಗಳಿಂದ ವಂಚಿತಗೊಳಿಸಿದೆ. ಕೋವಿಡ್ -19 ಸಮಯದ ಬಿಕ್ಕಟ್ಟಿನ ಸಂದರ್ಭದಲ್ಲಿ, ಎರಡೂ ಸಹ ಸಮಾಜ ಅಭಿವೃದ್ಧಿಗೆ ಹಾನಿಕಾರಕವಾಗಿದೆ " ಎಂದು ಆಕ್ಸ್‌ಫ್ಯಾಮ್ ವರದಿ ಹೇಳಿದೆ.
ಆಕ್ಸ್‌ಫ್ಯಾಮ್ ತನ್ನ ವರದಿಯಲ್ಲಿ ಸರ್ಕಾರಕ್ಕೆ ಒಂದು ಶಿಫಾರಸನ್ನು ಉಲ್ಲೇಖಿಸಿದೆ. ಭಾರತದ ಜನಸಂಖ್ಯೆಯಲ್ಲಿ ಇರುವ ಶೇಕಡಾ 10 ರಷ್ಟು ಶ್ರೀಮಂತರ ಮೇಲೆ, ಶೇಕಡಾ 1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಬೇಕು. ಅದರಲ್ಲಿ ಬಂಡ ಹಣವನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂದು. ಭಾರತದಲ್ಲಿನ 10 ಶ್ರೀಮಂತ ಬಿಲಿಯನೇರ್‌ಗಳ ಬಳಿ ಎಷ್ಟು ದುಡ್ಡಿದೆ ಎಂದರೆ, ಮುಂದಿನ 25 ವರ್ಷಗಳಿಗೂ ಹೆಚ್ಚು ಕಾಲ, ಇವರು ನಿಷ್ಚಿಂತೆಯಿಂದ ಈ ಆದೇಶವನ್ನು ಪಾಲಿಸಬಹುದು.
ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ 84 ಪ್ರತಿಶತ ಕುಟುಂಬಗಳು ತಮ್ಮ ಆದಾಯದಲ್ಲಿ ಕುಸಿತವನ್ನು ಅನುಭವಿಸಿವೆ. ಇದರೊಂದಿಗೆ,ಉಪ-ಸಹಾರನ್ ಆಫ್ರಿಕಾದಂತೆ ಭಾರತವು ಸಹ ಬಡತನದಲ್ಲಿ ಹೆಚ್ಚಿನ ಹೆಚ್ಚಳವನ್ನು ಕಂಡಿದೆ. 2020 ರಲ್ಲಿ, ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿ ಬಡವರ ಸಂಖ್ಯೆ 134 ಮಿಲಿಯನ್‌ಗೆ ದ್ವಿಗುಣಗೊಂಡಿದೆ. ಇದು ಪ್ಯೂ ಸಂಶೋಧನೆಯ ಅಂದಾಜಿಗಿಂತ ಹೆಚ್ಚಿನ ಸಂಖ್ಯೆ ಆಗಿದೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ. ದೈನಂದಿನ ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಮತ್ತು ನಿರುದ್ಯೋಗಿಗಳು ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಅಪರಾಧ ಡೇಟಾವನ್ನು ಉಲ್ಲೇಖಿಸಿ, ಆಕ್ಸ್‌ಫ್ಯಾಮ್ ವರದಿ ಮಾಡಿದೆ.
ಪಂಡೋರಾ ಪೇಪರ್ಸ್ ಸೋರಿಕೆ ಬಗ್ಗೆ ನೀವು ಕೇಳಿರಬಹುದು. ತೆರಿಗೆ ವಂಚನೆಗಾಗಿ ಜಾಗತಿಕವಾಗಿ ರಚಿಸಲಾದ 29,000 ಕಡಲಾಚೆಯ ಕಂಪನಿಗಳ ಮತ್ತು ಖಾಸಗಿ ಟ್ರಸ್ಟ್‌ಗಳ 11.9 ಮಿಲಿಯನ್ ದಾಖಲೆಗಳಲ್ಲಿ, 380 ಕ್ಕೂ ಹೆಚ್ಚು ಭಾರತೀಯರು 200 ಶತಕೋಟಿ ರೂಪಾಯಿ ಮೌಲ್ಯದ ಅಘೋಷಿತ ವಿದೇಶಿ ಮತ್ತು ಸ್ವದೇಶಿ ಆಸ್ತಿಯನ್ನು ಹೊಂದಿದ್ದಾರೆ ಎಂದು ಹೈಲೈಟ್ ಮಾಡಲಾಗಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಕಳೆದ ವರ್ಷ ಅತೀ ಹೆಚ್ಚು ಸಂಪತ್ತು ಗೌತಮ್ ಅದಾನಿ ಗಳಿಸಿದ್ದಾರೆ. ಮತ್ತು ಅವರ ಈ ಆಸ್ತಿ ಏರಿಕೆ ಕಳೆದ ವರ್ಷದ ವಿಶ್ವದ ಐದನೇ ದೊಡ್ಡದಾದ ಗಳಿಕೆ ಆಗಿದೆ. ಅವರು ಕಳೆದ ವರ್ಷ ತಮ್ಮ ಸಂಪತ್ತಿಗೆ $42.7 ಶತಕೋಟಿಯನ್ನು ಸೇರಿಸುವುದರ ಮೂಲಕ, ಈಗ ಸುಮಾರು $90 ಬಿಲಿಯನ್ ಗಳ ಒಡೆಯನಾಗಿದ್ದಾರೆ. 2021 ರಲ್ಲಿ ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯವು $ 13.3 ಶತಕೋಟಿಗಳಷ್ಟು ಏರಿಕೆ ಕಂಡು, ಈಗ ಅವರು $ 97 ಶತಕೋಟಿ ಮೌಲ್ಯವನ್ನು ಹೊಂದಿದ್ದಾರೆ.
ಮೂಲಗಳು,
0ಕಾಮೆಂಟ್‌ಗಳು