ಜಾಹಿರಾತು

ರಷ್ಯಾ ಮತ್ತು ಉಕ್ರೇನ್(Russia & Ukraine). ಈ ಯುದ್ಧದ ಕಾರಣಗಳು ಮತ್ತು ಇವೆರಡರ ನಡುವಿನ ಇತಿಹಾಸ.

ಇಷ್ಟು ದಿನ ಜಗತ್ತೇ ಹೆದರುತ್ತಿದ್ದ ಯುದ್ಧವೊಂದು ಈಗ ಶುರುವಾಗಿದೆ. ಎಷ್ಟೋ ಜನ ಈ ಯುದ್ಧ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಭಯದಲ್ಲಿ ಇದ್ದಾರೆ. ರಷ್ಯಾ (Russia)ಉಕ್ರೇನ್(Ukraine) ದೇಶದ ಮೇಲೆ ಯುದ್ಧ ಸಾರಿ ಆಗಿದೆ. ವ್ಲಾಡಿಮಿರ್ ಪುಟಿನ್ ಈ ಬೆಳಿಗ್ಗೆ ( ಭಾರತೀಯ ಕಾಲಮಾನದಲ್ಲಿ) ಯುದ್ಧ ಸಾರುವುದರ ಬಗ್ಗೆ ಮಾತನಾಡುತ್ತಾ, ರಷ್ಯಾದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಶಕ್ತಿಯನ್ನು ನಾವು ಸಹಿಸುವುದಿಲ್ಲ ಎಂದು ಹೇಳುತ್ತಾ, ಉಕ್ರೇನ್ ದೇಶದ ಸೈನಿಕರಿಗೆ ಶಸ್ತ್ರ ತ್ಯಾಗ ಮಾಡುವಂತೆ ಹೇಳಿದ್ದಾರೆ. ಹಾಗೆ ಪ್ರಮುಖ ನಗರಗಳ ಮೇಲೆ ದಾಳಿ ಶುರುವಾದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಸಹ, ಬೇರೆ ರಾಷ್ಟ್ರಗಳು ಇದರಲ್ಲಿ ಭಾಗಿಯಾಗದೆ, ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಸಹ ಮನವಿ ಮಾಡಿದ್ದಾರೆ.


ಹಾಗೆ ನೋಡಿದರೆ ಈ ಒಂದು ಕಲಹ ಸಂಕೀರ್ಣವಾಗಿದ್ದು, ಜಗತ್ತಿನ ಇತಿಹಾಸದೊಂದಿಗೆ ನಂಟು ಹೊಂದಿದೆ. ಒಂದಾನೊಂದು ಕಾಲದಲ್ಲಿ ಕೀರ್(kier) ಮಾಸ್ಕೋ(moscow) ಗಿಂತ ಬಹಳ ಶಕ್ತಿಶಾಲಿ ಆಗಿತ್ತು. ಹಾಗೆಯೇ, ಒಂದಾನೊಂದು ಕಾಲದಲ್ಲಿ ಅಮೆರಿಕ ಮತ್ತು ಉಕ್ರೇನ್ ಶತ್ರುಗಳು ಸಹ ಆಗಿದ್ದವು. ಈ ಇರುಸು ಮುರುಸು ಕಥೆಯ ಬಗ್ಗೆ ಮತ್ತು ಈ ಇತಿಹಾಸದ ಬಗ್ಗೆ ಸ್ವಲ್ಪ ತಿಳಿಯೋಣ.
Russia and Ukraine War in Kannada
ಪ್ರತಿಯೊಂದು ಜೀವ ಅಮೂಲ್ಯ

ಇತಿಹಾಸ:

9 ನೇ ಶತಮಾನದಲ್ಲಿ ಕಿವೆನ್ ರೂಸ್( kieven rus) ಎಂಬ ರಾಜ್ಯವಿತ್ತು. ಇಲ್ಕಿ ಸ್ಲಾವಿಕ್(slavic) ಜನಾಂಗದ ಜನ ವಾಸ ಮಾಡುತ್ತಿದ್ದರು.ಕೀವ್(kiev or kyiv) ಎಂಬ ಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು, 980 ರಿಂದ 1015 ವರೆಗೆ ಈ ರಾಜ್ಯವನ್ನು ಮಹಾರಾಜ ವೊಲೊಡಿಮಿರ್ ಆಳುತ್ತಿದ್ದ. ರಷ್ಯನ್ ಅಲ್ಲಿ ವೊಲೊಡಿಮಿರ್ ಅನ್ನು ವ್ಲಾಡಿಮಿರ್ ಎಂದು ಕರೆಯುತ್ತಾರೆ. ಉಕ್ರೈನಿಯನ್ ಭಾಷೆಯಲ್ಲಿ ವೊಲೊಡಿಮಿರ್ ಎಂದು ಕರೆಯುತ್ತಾರೆ. ಹಣೆಬರಹ ನೋಡಿ. ಈಗ ಎರಡೂ ದೇಶಗಳಲ್ಲಿ, ರಷ್ಯಾ ಮತ್ತು ಉಕ್ರೇನ್ ಅಲ್ಲಿ ಇದೆ ಹೆಸರಿನ ಪ್ರಧಾನಿಗಳು ಆಳುತ್ತಿದ್ದಾರೆ. 
ರಷ್ಯನ್ಸ್ ಮತ್ತು ಉಕ್ರೈನಿಯನ್ ಗಳು ಒಂದೇ ಜನಾಂಗದ ಜನ. ಅದುವೇ ಸ್ಲಾವಿಕ್ ಜನಾಂಗ. ರಷ್ಯಾ ಮತ್ತು ಉಕ್ರೇನ್ ಸೋವಿಯತ್ ರಿಪಬ್ಲಿಕ್ ನ 15 ದೇಶಗಳಲ್ಲಿನ ಅತ್ಯಂತ ಬಲಿಷ್ಠ ರಾಷ್ಟ್ರಗಳು. 20ನೇ ಶತಮಾನದ ಈ ಸೋವಿಯತ್ ಒಕ್ಕೂಟದ ರಾಷ್ಟ್ರಗಳು, ಒಂದೇ ಆಡಳಿತದಲ್ಲಿ ಇದ್ದವು. ರಷ್ಯಾ ಬಗ್ಗೆ ನಿಮಗೆ ಗೊತ್ತೇ ಇದೆ. ಉಕ್ರೇನ್ ಅಲ್ಲಿ ಆಗ ರಕ್ಷಣಾ ಸಾಮಗ್ರಿಗಳ ಕಾರ್ಖಾನೆ ಇತ್ತು. ಫಲವತ್ತಾದ ಕೃಷಿ ಭೂಮಿ ಇತ್ತು. ಸೋವಿಯತ್ ಕಾಲದಲ್ಲಿ ಉಕ್ರೇನ್ ಅಣುಬಾಂಬುಗಳ ಉಗ್ರಾಣವಾಗಿತ್ತು. ಆಗಿನ ಕಾಲದಲ್ಲಿ ಉಕ್ರೇನ್ ಅಮೆರಿಕಾದ ಪಕ್ಕಾ ಶತ್ರು ಆಗಿತ್ತು.
1991ರಲ್ಲಿ ಸೋವಿಯತ್ ಒಕ್ಕೂಟ ಒಡೆದು ಹೋಗಿ, ಉಕ್ರೇನ್ ಸ್ವತಂತ್ರ ದೇಶವಾಯ್ತು. ಅಪಾರ ಅಣುಬಾಂಬು ದಾಸ್ತಾನು ಹೊಂದಿದ್ದ ಉಕ್ರೇನ್, ಒಪ್ಪಂದದ ಮೇರೆಗೆ ರಷ್ಯಾಗೆ ಎಲ್ಲವನ್ನೂ ಬಿಟ್ಟು ಕೊಟ್ಟಿತು. ಬದಲಿಗೆ, ರಷ್ಯಾ ಜತೆ ಬುಡಪೇಸ್ಟ್ ಒಪ್ಪಂದ ಮಾಡಿಕೊಂಡಿತು. ಅದರ ಪ್ರಕಾರ, ರಷ್ಯಾ ಉಕ್ರೇನ್ ನ ಸಾರ್ವಭೌಮತ್ವವನ್ನು ಗೌರವಿಸುವದರ ಮೂಲಕ, ಅದಕ್ಕೆ ರಕ್ಷಣೆಯ ಅಭಯ ಹಸ್ತ ಸಹ ನೀಡಿತು.

ವಿಕ್ಟರ್ ಯಾನುಕೋವಿಚ್: ಮೊದಲನೆಯ ಅಧ್ಯಾಯ

2013ರಲ್ಲಿ ಉಕ್ರೇನ್ ಪ್ರಧಾನಿಯಾಗಿದ್ದ ವಿಕ್ಟರ್ ಯಾನುಕೋವಿಚ್, ಭ್ರಷ್ಟಾಚಾರಕ್ಕೆ ಕುಖ್ಯಾತಿ ಹೊದ್ದಿದ್ದರು. ಅದಕ್ಕಿಂತ ಹೆಚ್ಚಾಗಿ, ರಷ್ಯಾದ ಬಂಟ ಎಂದು ಇನ್ನೂ ಹೆಸರು ವಾಸಿಯಾಗಿದ್ದರು. ಜಗಜ್ಜಾಹೀರಾಗಿ ರಷ್ಯಾ ಅನ್ನು ಬೆಂಬಲಿಸುತ್ತಿದ್ದ ವಿಕ್ಟರ್, ಯಾವಾಗಲೂ ರಷ್ಯಾ ಪರವಾಗಿ ನಿಲ್ಲುತ್ತಿದ್ದರು. 2013ರಲ್ಲಿ ವಿಕ್ಟರ್ ಉಕ್ರೇನ್ ಅನ್ನು ಯೂರೋಪಿಯನ್ ಒಕ್ಕೂಟಕ್ಕೆ ಸೇರಿಸುವ ಪ್ರಸ್ತಾವವನ್ನು ತಿರಸ್ಕರಿಸಿದರು. ಯೂರೋಪಿಯನ್ ಒಕ್ಕೂಟ ಸೇರಿದ್ದರೆ, ಯೂರೋಪಿನ ಎಲ್ಲಾ ರಾಷ್ಟ್ರಗಳ ಜತೆಗೆ ಒಡತನ ಹುಟ್ಟುತ್ತಿತ್ತು ಹಾಗೂ ಏಳಿಗೆ ಸಹ ಆಗುತ್ತಿತ್ತು. ಆದರೆ ವಿಕ್ಟರ್ ಹಾಗೆ ಮಾಡಲಿಲ್ಲ. ಬದಲಿಗೆ, ವಿಕ್ಟರ್ ರಷ್ಯಾದೊಂದಿಗೆ 15 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡು, ಉಕ್ರೈನಿಯನ್ ರ ಕೆಂಗಣ್ಣಿಗೆ ಗುರಿಯಾದರು. ಅಲ್ಲಿನ ಜನತೆಗೆ, ವಿಕ್ಟರ್ ಒಬ್ಬ ಮಾರಾಟಗಾರನಂತೆ ಕಂಡ. ಉಕ್ರೇನ್ ಅನ್ನು ರಷ್ಯಾಗೆ ಮಾರುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಅರಿತ ಅಲ್ಲಿನ ಜನ, ಧರಣಿಗೆ ಇಳಿದರು. ಅದನ್ನು ಯುರೋ-ಮೈದಾನ ಧರಣಿ ಎಂದು ಕರೆಯಲಾಯಿತು. ಯೂರೋಪ್ ಗೆ ಸಂಭದಿಸಿದ ಧರಣಿ ಆದರಿಂದ ಯುರೋ ಎಂದೂ, ಕಿವ್(kiev or kyiv)ನ ಮೈದಾನ ಎಂಬ ಜಾಗದಲ್ಲಿ ಧರಣಿ ಆದ ಕಾರಣ ಅದನ್ನು ಮೈದಾನ ಎಂದೂ ಇದಕ್ಕೆ ಹೆಸರಿಡಲಾಯಿತು. ಆ ಜಾಗವನ್ನ ಈಗ ಸ್ವಾತಂತ್ರ್ಯದ ಸ್ಕ್ವೇರ್ (Independent Square) ಎಂದು ಕರೆಯುತ್ತಾರೆ. ಜನ ಯುರೋ ಒಪ್ಪಂದವನ್ನು ಒಪ್ಪಿ ಸಹಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡತೊಡಗಿದರು. ಮಾಡದೇ ಇರುವ ಕಾರಣ ವಿಕ್ಟರ್ ಅನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ರಷ್ಯಾ ವಿಕ್ಟರ್ ನ ಬೆಂಬಲಕ್ಕೆ ನಿಂತರೆ, ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರತಿಭಟನಾಕಾರರ ಬೆನ್ನಿಗೆ ನಿಂತವು.
ಫೆಬ್ರುವರಿ 2014 ರಂದು ವಿಕ್ಟರ್ ಸರ್ಕಾರ ಪತನಗೊಂಡಿತು. ವಿಕ್ಟರ್ ದೇಶ ತೊರೆದು, ರಷ್ಯಾದಲ್ಲಿ ಆಶ್ರಯ ಪಡೆದುಕೊಂಡ. ಈ ಘಟನೆ ಉಕ್ರೇನ್ ನ ಕೆಲವೊಂದು ಜನಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ಪೂರ್ವ ಉಕ್ರೇನ್ ಜನಕ್ಕೆ ವಿಕ್ಟರ್ ಸರ್ಕಾರ ಬೇಕಿತ್ತು. ಅಲ್ಲಿ ತುಂಬಾ ಜನ ರಷ್ಯನ್ ಮಾತಾಡುತ್ತಾರೆ ಮತ್ತು ರಷ್ಯಾದ ಪರವಾಗಿದ್ದರು. ಉಕ್ರೇನ್ ಅಲ್ಲಿ ಜನ ಸಂಖ್ಯೆ ಹೋಲಿಸಿ ನೋಡಿದಾಗ, ಈ ಜನ ಅಲ್ಪ ಸಂಖ್ಯಾತರು. ವಿಕ್ಟರ್ ಸರ್ಕಾರ ಬೀಳುವುದು ನಮ್ಮ ಜೀವನಕ್ಕೆ ಕುತ್ತು ಆಗಬಹುದು ಅಥವಾ ನಮ್ಮ ಮೇಲೆ ದಬ್ಬಾಳಿಕೆ ಆಗಬಹುದು ಎಂದು ಜನ ಅರಿತರು.
ಬರೀ ಪೂರ್ವ ಉಕ್ರೇನ್ ಮಾತ್ರವಲ್ಲ, ರಷ್ಯಾ ಕೂಡ ಈ ಪತನದಿಂದ ತುಂಬಾ ಸಿಡಿಮಿಡಿಗೊಂಡಿತ್ತು. ತನ್ನ ಕೈಗೊಂಬೆ ಹೀನಾಯ ಸೋಲು ಕಂಡಿದ್ದು, ಅದಕ್ಕೆ ಸಹಿಸಲು ಆಗಲಿಲ್ಲ. ಈ ಪರಿಸ್ಥಿತಿಯನ್ನು ತಿಳಿಮಾಡಲು, ರಷ್ಯಾ ಕ್ರಿಮಿಯಾ ಅನ್ನು ಸ್ವಾಧೀನಕ್ಕೆ ತಗೆದುಕೊಂಡಿತು.

Countries that became independent after Soviet Union Break Down
ಸೋವಿಯೆತ್ ಒಕ್ಕೂಟ ಮುರಿದ ಮೇಲೆ ಸ್ವತಂತ್ರಗೊಂಡ ರಾಷ್ಟ್ರಗಳು

 ಕ್ರಿಮಿಯಾ: ಎರಡನೆಯ ಅಧ್ಯಾಯ

ಕಪ್ಪು ಸಮುದ್ರ ಅಥವಾ black sea ದಲ್ಲಿ ಪರ್ಯಾಯ ದ್ವೀಪ ಆಗಿರುವ ಭೂಮಿಯೇ ಕ್ರಿಮಿಯಾ. 1954ರಲ್ಲಿ ಸೋವಿಯತ್ ನಾಯಕ ನಿಕಿತಾ ಕ್ರುಶ್ಚೇವ್ ಕ್ರಿಮಿಯಾ ಅನ್ನು ಉಕ್ರೇನ್ ಗೆ ಹಸ್ತಾಂತರ ಮಾಡಿದರು. ಸೋವಿಯತ್ ನಲ್ಲೇ ಇದ್ದರೂ, ಇದರ ಆಡಳಿತ ಉಕ್ರೇನ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಡಳಿತದಲ್ಲಿ ಸೇರಿಸಲಾಯಿತು. ನಿಕಿತಾ ಕ್ರುಶ್ಚೇವ್ ಪ್ರಕಾರ ಈ ಹಸ್ತಾಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಬೆಸುಗೆ ಬಗೆಯುತ್ತದೆ ಎಂದು.
1991ರಲ್ಲಿ ಉಕ್ರೇನ್ ಸ್ವಾತಂತ್ರ್ಯಗೊಂಡ ನಂತರ ಕ್ರಿಮಿಯಾ ಉಕ್ರೇನ್ ಅನ್ನು ಸೇರಿಕೊಂಡಿತು. ಅದಕ್ಕೆ ವಿಶೇಷ ಸ್ವಾಯತ್ತತೆ ಅನ್ನು ನೀಡಲಾಯಿತು. ಅಷ್ಟಲ್ಲದೇ, ಕ್ರಿಮಿಯಾದಲ್ಲಿ ರಷ್ಯನ್ ಮಿಲಿಟರಿಗೆ ನೆಲೆ ನೀಡಲಾಯ್ತು. ರಷ್ಯಾ ಆಗ ಈ ವಿಶೇಷ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಹೋಗುವ ಪ್ರಮಾಣ ಮಾಡಿತ್ತು.

ರಷ್ಯಾದ ಬಹಳ ಜನಕ್ಕೆ ಕ್ರಿಮಿಯಾ ಉಕ್ರೇನ್ ಗೆ ಸೇರಿಸಿದ್ದು ಇಷ್ಟವಾಗಲಿಲ್ಲ. ಅದು ಉಕ್ರೇನ್ ಸೇರಬಾರದಾಗಿತ್ತು ಎಂಬುದು ಅವರ ಅಭಿಪ್ರಾಯ ಆಗಿತ್ತು.
2014ರಲ್ಲಿ, ಯಾವಾಗ ವಿಕ್ಟರ್ ಅನ್ನು ಪದಚ್ಯುತಿಗೊಳಿಸಲಾಯ್ತೋ, ರಷ್ಯಾ ಸೇನೆ ಕ್ರಿಮಿಯಾದಲ್ಲಿನ ಸರ್ಕಾರಿ ಕಟ್ಟಡಗಳನ್ನು ವಶಕ್ಕೆ ಪಡೆಯಲು ಪ್ರಾರಂಭಿಸಿತು. ಇಡೀ ಕ್ರಿಮಿಯಾ ಅನ್ನು ಮಿಲಿಟರಿ ವಶಕ್ಕೆ ತಗೆದುಕೊಂಡಿತು. ಮಾರ್ಚ್ 16, 2014 ರಂದು ಜನಾಭಿಪ್ರಾಯ ಸಂಗ್ರಹಣೆ ಮೂಲಕ, ಕ್ರಿಮಿನ್ನರು ರಷ್ಯಾದ ಭಾಗವಾಗಲು ಮತ ಹಾಕಿದರು. ಪುಟಿನ್ ಪ್ರಕಾರ ಇದು ಕ್ರಿಮಿಯಾದ ವಿಮೋಚನೆ ಆಗಿತ್ತು. ಆದರೆ ಜಗತ್ತಿಗೆ ಇದು ಆಕ್ರಮಣದ ಕಬಳಿಕೆ ಆಗಿತ್ತು.

ಪ್ರತ್ಯೇಕತಾವಾದಿಗಳು: ಮೂರನೆಯ ಅಧ್ಯಾಯ

ಇಷ್ಟು ಆಗಿದ್ದು ಸಾಕು ಎನ್ನುವಷ್ಟರಲ್ಲಿ, ಪೂರ್ವ ಉಕ್ರೇನ್ ಅನ್ನು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ವಶಪಡಿಸಿಕೊಂಡರು. ಆದರೆ ಉಕ್ರೇನ್ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಆದರೆ 17th ಜುಲೈ 2014 ರಲ್ಲಿ 298 ಜನರನ್ನು ಹೊತ್ತು ಹೊರಟಿದ್ದ ಮಲೇಷ್ಯಾನ್ ವಿಮಾನವನ್ನು ಪ್ರತ್ಯೇಕವಾದಿಗಳು ಹೊಡೆದು ಉರುಳಿಸಿದಾಗ, ಉಕ್ರೇನ್ ಸೇನೆ ಇವರನ್ನು ಜಾಲಾಡಿ ಬೆನ್ನು ಹತ್ತಿತು. ಆಗ ಪ್ರತ್ಯೇಕತಾವಾದಿಗಳ ಸಹಾಯಕ್ಕೆ ಬಂದಿದ್ದು ರಷ್ಯನ್ ಸೇನೆ. ರಷ್ಯನ್ ಸೇನೆಯ ಸಹಾಯದಿಂದ ಕಳೆದುಕೊಂಡಿದ್ದ ಪ್ರದೇಶಗಳನ್ನು ಪ್ರತ್ಯೇಕತಾವಾದಿಗಳು ಮತ್ತೆ ವಶಪಡಿಸಿಕೊಂಡರು.
ಈ ಆಂತರಿಕ ಯುದ್ಧದಿಂದಾಗಿ, ರಷ್ಯಾ, ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಮಾತುಕತೆ ಶುರುವಾಯ್ತು. ಈ ಮಾತುಕತೆ ಮಿನ್ಸ್ಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನಿಂತಿತು. 2014ರಲ್ಲಿ ಸಹಿ ಕಂಡ ಈ ಒಪ್ಪಂದದ ಪ್ರಕಾರ, ಎರಡೂ ಕಡೆಯವರು ಕದನ ವಿರಾಮ ಮತ್ತು ಮಿಲಿಟರಿ ವಾಪಸಾತಿಗೆ ಒಪ್ಪಿಕೊಂಡರು. ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ಉಕ್ರೇನ್ ಒಪ್ಪಿಕೊಂಡಿತು. ಎಂಟು ವರ್ಷಗಳು ಕಳೆದರು, ಇನ್ನೂ ಮಿನ್ಸ್ಕ್ ಒಪ್ಪಂದ ಜಾರಿಯಾಗದೆ, ಬರೀ ಹಾಳೆಯಲ್ಲಿ ಉಳಿದುಕೊಂಡಿದೆ.

ರಷ್ಯಾವನ್ನು ಹೊರತುಪಡಿಸಿ, ಉಕ್ರೇನ್ ಅತಿದೊಡ್ಡ ಯುರೋಪಿಯನ್ ದೇಶವಾಗಿದೆ. ಇದು 44 ಮಿಲಿಯನ್ ಜನಸಂಖ್ಯೆ ಮತ್ತು 155 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಜಿಡಿಪಿಯೊಂದಿಗೆ, ಆರು ನೂರು ಸಾವಿರ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ. ತಲಾ ಆದಾಯವು 3,700 ಡಾಲರ್‌ಗಳಿಗಿಂತ ಹೆಚ್ಚಿದೆ.

ಈಗಿನ ಉಕ್ರೇನ್: ನಾಲ್ಕನೆಯ ಅಧ್ಯಾಯ

ಇವತ್ತಿಗೆ ಉಕ್ರೇನ್ ಎರಡು ಭಾಗಗಳಾಗಿ ಒಡೆದುಕೊಂಡಿದೆ. ಪೂರ್ವ ಮತ್ತು ಪಶ್ಚಿಮ ಎಂದು. ಪಶ್ಚಿಮ ಉಕ್ರೇನ್ ತಾನು ಯೂರೋಪಿಯನ್ ಎಂದು ಗುರುತಿಸಿಕೊಳ್ಳಲು ಆಶಿಸಿದರೆ, ಭಾವನಾತ್ಮಕವಾಗಿ, ಭಾಷೆಯಲ್ಲಿ ಹಾಗೂ ಗಡಿಯಲ್ಲೇ ಇರುವ ರಷ್ಯಾ ಅನ್ನು ಪೂರ್ವ ಉಕ್ರೇನ್ ನೆಚ್ಚಿಕೊಂಡಿದೆ. ಪಶ್ಚಿಮ ಉಕ್ರೇನ್ ಮೂಲ ರಷ್ಯನ್ ಜನರು ಇದ್ದಾರೆ. ಆದರೆ ರಷ್ಯಾವನ್ನು ಅವರು ಸ್ವಲ್ಪ ಅನುಮಾನದಿಂದಲೇ ನೋಡುತ್ತಾರೆ. ಆದರೆ ಪೂರ್ವ ಉಕ್ರೇನ್, ಜನ ರಷ್ಯಾ ತಮ್ಮ ಮೂಲ ಹಾಗೂ ನಮ್ಮ ಪರಂಪರೆ ಎಂದು ಕಾಣುತ್ತಾರೆ. 

ಉಕ್ರೇನ್ ಈಗಲೂ ಯುದ್ಧವನ್ನು ಎದುರಿಸುತ್ತಿದೆ. ಅದರ ಪಡೆಗಳು ಪೂರ್ವದಲ್ಲಿನ ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡುತ್ತಿವೆ. ಅಲ್ಲಿನ ಪ್ರತ್ಯೇಕತಾವಾದಿಗಳ ನಾಯಕರು ಕನಿಷ್ಠ ಎರಡು ಪ್ರದೇಶಗಳನ್ನು ಆಳುತ್ತಿದ್ದಾರೆ, ಅವುಗಳೆಂದರೆ ಡೊನೆಟ್ಸ್ಕ್ ಮತ್ತು ಲುವಾನ್ಸ್ಕ್. ಒಟ್ಟಿಗೆ ಅವುಗಳನ್ನು ಡಾನ್ಬಾಸ್ ಪ್ರದೇಶ ಎಂದು ಕರೆಯಲಾಗುತ್ತದೆ.
ರಷ್ಯಾ ಈಗ ಮತ್ತೆ ತನ್ನ ಸೇನೆಯನ್ನು ಈ ಪ್ರದೇಶದ ಗಡಿಗಳಲ್ಲಿ ತನ್ನ ಸೇನೆಯನ್ನು ಕಳುಹಿಸಿದೆ. ಸೇನಾ ಜಮಾವಣೆಗೆ ಈಗ ಇರುವ ಕಾರಣ ಎಂದರೆ, ನ್ಯಾಟೋ.  ನ್ಯಾಟೋ ವಿಸ್ತರಣೆಯನ್ನು ನಿಲ್ಲಿಸಲು ವ್ಲಾಡಿಮಿರ್ ಪುಟಿನ್ ಹೀಗೆಲ್ಲಾ ಏಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಮಗೆ ತುಂಬಾ ಕಾಡಬಹುದು.

ನ್ಯಾಟೋ ಎಂಬುದು North Atlantic Treaty Organization. ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳನ್ನು ಒಳಗೊಂಡ ಈ ಗುಂಪಿಗೆ, ಉಕ್ರೇನ್ ಸಹ ಸೇರಲು ಬಯಸುತ್ತಿದೆ. ಆದರೆ ರಷ್ಯಾಗೆ ಇದು ಸುತರಾಂ ಇಷ್ಟ ಇಲ್ಲ. ಉಕ್ರೇನ್ ಅಷ್ಟೇ ಅಲ್ಲ. ಸೋವಿಯತ್ ಒಕ್ಕೂಟದ ಯಾವುದೇ ರಾಷ್ಟ್ರಗಳು ಇದರ ಭಾಗವಾಗುವುದು ಪುಟಿನ್ ಗೆ ಇಷ್ಟವಿಲ್ಲ. ಕೇವಲ ಅರ್ಧ ಕಥೆ ಅಷ್ಟೇ. ಲೇಖನದಲ್ಲಿ ಮೊದಲೇ ಹೇಳಿದಹಾಗೆ, ಹಿಂದಿನ ಇತಿಹಾಸದ ಪ್ರಭಾವ ಈ ವಿಷಯದ ಮೇಲೆ ತುಂಬಾ ಇದೆ.

ಮೊದಲನೆಯದಾಗಿ, ಇಲ್ಲಿ ದೇಶೀಯ ರಾಜಕೀಯವಿದೆ. ಪುಟಿನ್ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡಾಗ, ರಷ್ಯಾದಲ್ಲಿ ಅವರ ಅನುಮೋದನೆಯ ರೇಟಿಂಗ್ ಗಗನಕ್ಕೇರಿತು.ರಾಷ್ಟ್ರೀಯತೆ ಎಂಬ ವಾದ ಇಟ್ಟುಕೊಂಡು, ರಷ್ಯಾದ ಅಧ್ಯಕ್ಷ ಉಕ್ರೇನ್‌ನ ಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಇನ್ನೂ ಸುಲಭವಾಗಲಿದೆ. ಹಾಗೆಯೇ ರಷ್ಯಾ ಜಗತ್ತಿನ ಸೂಪರ್ ಪವರ್ ಎಂದು ಚಿತ್ರಿಸಲು ಸಹ ಸುಲಭವಾಗಲಿದೆ.

ಮತ್ತೆ ಇತಿಹಾಸಕ್ಕೆ ಹಿಂದಿರುಗೋಣ. ಅನೇಕ ರಷ್ಯನ್ನರು ಉಕ್ರೇನ್‌ನ ಸ್ವಾತಂತ್ರ್ಯವನ್ನು ತಪ್ಪಾಗಿ ನೋಡುತ್ತಾರೆ. ಹಿಂದೊಮ್ಮೆ ರಷ್ಯಾದಿಂದ ಆಳ್ವಿಕೆ ಒಳಪಟ್ಟಿದ್ದಂತೂ ನಿಜ. ಇದಕ್ಕೆ ಸಬೂತು ಎನ್ನುವಂತೆ 1991ಕ್ಕಿಂತ ಮುಂಚಿನ ಘಟನಾವಳಿಗಳನ್ನು ಮುಂದಿಡಬಹುದು. ಈಗ ಅದು ಬೇಡ.

ಅವರವರ ಬೆಂಬಲಕ್ಕೆ: ಐದನೇ ಅಧ್ಯಾಯ

ಆರು ಉಕ್ರೇನಿಯನ್ನರಲ್ಲಿ ಒಬ್ಬರು ರಷ್ಯಾದ ಜನಾಂಗೀಯರಾಗಿದ್ದಾರೆ ಅಥವಾ ರಷ್ಯಾ ಮೂಲದವರಾಗಿದ್ದರೆ. ಮೂವರಲ್ಲಿ ಒಬ್ಬರು ರಷ್ಯನ್ ಭಾಷೆಯನ್ನು ಸ್ಥಳೀಯ/ಆಡು ಭಾಷೆಯಾಗಿ ಬಳಸುತ್ತಾರೆ. ಆದ್ದರಿಂದ ಐತಿಹಾಸಿಕವಾಗಿ ನಾವೆಲ್ಲಾ ಒಂದೇ ಎಂದು ಪುಟಿನ್ ಹೇಳಿದಾಗ, ನಮಗೆಲ್ಲಾ ಸರಿ ಎಂದು ಅನಿಸಿಯೇ ಅನಿಸುತ್ತದೆ.

ಆದರೆ ವಸಾಹತುಶಾಹಿ ಇತಿಹಾಸದ ಆಧಾರದ ಮೇಲೆ, ರಷ್ಯಾ ಉಕ್ರೇನ್ ಮೇಲೆ ಹಕ್ಕು ಸಾಧಿಸುವುದು ತಪ್ಪು. ಹೇಗೆ ಬ್ರಿಟನ್, ಭಾರತ ಅಥವಾ ದಕ್ಷಿಣ ಆಫ್ರಿಕಾ ತನ್ನದು ಎಂದು ಹೇಳಿದರೆ ತಪ್ಪಾಗುತ್ತದೋ. ಹೇಗೆ ಸ್ಪೇನ್, ಫಿಲಿಪೈನ್ಸ್ ತನ್ನದು ಎಂದು ಹೇಳಿಕೊಂಡರೆ ತಪ್ಪಾಗುತ್ತದೋ, ಅದೇ ರೀತಿಯಲ್ಲಿ ಇದು ಸಹ. ಹಿಂದಿನ ಸಾಮ್ರಾಜ್ಯಶಾಹಿ ಆಡಳಿತವನ್ನು, ಈಗಿನ ವಿಸ್ತರಣಾ ನೀತಿಯೊಂದಿಗೆ ಸಮರ್ಥಿಸುವುದು ಸಮಂಜಸವಲ್ಲ.

ಇತಿಹಾಸವು ನಮಗೆ ಇನ್ನೂ ಏನು ಹೇಳುತ್ತದೆ ಎಂದು ನೋಡೋಣ. 1700ರಿಂದ ಮುಂದೆ, ಕ್ಯಾಥರಿನ್ ದಿ ಗ್ರೇಟ್ (ರಷ್ಯಾ ರಾಜ್ಯದ ಹಿಂದಿನ ಕಾಲದ ರಾಣಿ), ಉಕ್ರೇನ್ ಅನ್ನು ಸಂಪೂರ್ಣವಾಗಿ ರಷ್ಯನ್ ರಂತೆ ಮಾಡಲು, ಹೆಚ್ಚಿನ ಸಂಖ್ಯೆಯಲ್ಲಿ ಮೂಲ ರಷ್ಯನ್ ರನ್ನು ಅಲ್ಲಿಗೆ ಹೋಗಿ ವಾಸಿಸುವಂತೆ ಮಾಡಿದಳು. ಅಲ್ಲಿನ ಎಲ್ಲಾ ಶಾಲೆಗಳಲ್ಲಿ ರಷ್ಯನ್ ಭಾಷೆಯಲ್ಲೇ ಪಾಠ ಮಾಡುವಂತೆ ಆದೇಶವನ್ನು ಇತ್ತಲು. 1800ರ ಹೊತ್ತಿನಲ್ಲಿ ಉಕ್ರೈನಿಯನ್ ಭಾಷೆಯನ್ನು ನಿಷೇಧಿಸಲಾಯ್ತು. 1930ರಲ್ಲಿ ಸೋವಿಯತ್ ಮಹಾನಾಯಕ ಜೋಸೆಫ್ ಸ್ಟಾಲಿನ್, ಉಕ್ರೇನ್ ಅಲ್ಲಿ ಕೃತಕ ಬರಗಾಲ ಬರಿಸಿ, ಅಲ್ಲಿನ ಆದಿ ಜನರನ್ನು ಸಾಯುವಂತೆ ಮಾಡಿದ. ತದ ನಂತರ ರಷ್ಯನ್ ಜನರನ್ನು ಅಲ್ಲಿಗೆ ವಲಸೆ ಕಳಿಸಿದ.

ಪೂರ್ವ ಉಕ್ರೇನ್ ಅಲ್ಲಿ ಹೆಚ್ಚಿನ ಮೂಲ ರಷ್ಯನ್ಸ್ ಇರಲು ಒಂದು ಕಾರಣವಿದೆ. ಜನಸಂಖ್ಯೆ ಹೀಗೆಯೇ ಇರಬೇಕು ಎಂದು ವಿನ್ಯಾಸಗೊಳಿಸಲಾಗಿದೆ. ಪೂರ್ವ ಉಕ್ರೇನ್ ಯಾವಾಗಲೂ ರಷ್ಯಾಕ್ಕೆ ಪ್ರಿಯವಾಗಿತ್ತು. ಇದು ಕಲ್ಲಿದ್ದಲು, ಕಬ್ಬಿಣ, ಫಲವತ್ತಾದ ಭೂಮಿಯನ್ನು ಹೊಂದಿದೆ. ರಷ್ಯಾದೊಂದಿಗೆ ಅದರ ಐತಿಹಾಸಿಕ ಸಂಪರ್ಕವನ್ನು ಬಲವಂತದಿಂದ ಬೆಸೆಯಲಾಗಿದೆ. 

ಪುಟಿನ್ "ಹೋಲಿ ರೂಸ್" ಬಗ್ಗೆ ಮಾತನಾಡುತ್ತಾ, ರಷ್ಯನ್ ಮತ್ತು ಉಕ್ರೈನಿಯನ್ ಜನಗಳು ಬೇರೆಯಲ್ಲ, ಇಬ್ಬರೂ ಒಂದೇ ಎಂದು. 70% ಉಕ್ರೇನಿಯನ್ನರು ಈ ಮಾತನ್ನು ತಿರಸ್ಕರಿಸಿದ್ದಾರೆ. 72% ಜನರು ಇಂದು ರಷ್ಯಾವನ್ನು ಪ್ರತಿಕೂಲ ರಾಜ್ಯವೆಂದು ಪರಿಗಣಿಸುತ್ತಾರೆ. 33.33% ಉಕ್ರೇನಿಯನ್ನರು ರಷ್ಯಾದ ವಿರುದ್ಧ ಶಸ್ತ್ರಾಸ್ತ್ರ ಹಿಡಿದು ಯುದ್ಧಕ್ಕೆ ನಿಲ್ಲಲು ಸಿದ್ಧರಾಗಿದ್ದಾರೆ. 21.7% ಜನರು ರಷ್ಯಾದ ವಿರುದ್ಧ ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ. 67% ಉಕ್ರೇನಿಯನ್ನರು ಯೂರೋಪಿಯನ್ ಒಕ್ಕೂಟ (EU) ಸೇರಲು ಬಯಸಿದ್ದಾರೆ. 59% ಜನರು ನ್ಯಾಟೋ (NATO) ಗೆ ಸೇರಲು ಬಯಸುತ್ತಾರೆ.

ಪ್ರಸ್ತುತ ಉಕ್ರೇನಿಯನ್ ಅಧ್ಯಕ್ಷ ಆಗಿರುವ ವೊಲೊಡಿಮಿರ್ ಜಿಲೆನ್ಸ್ಕಿ, 2019ರಲ್ಲಿ ಪ್ರಚಂಡ ವಿಜಯದ ನಂತರ ಅಧಿಕಾರಕ್ಕೆ ಬಂದರು. ಅವರು ರಷ್ಯಾದ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಾರೆ. ಪೂರ್ವ ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು, ಝೆಲೆನ್ಸ್ಕಿ ಬಹಿರಂಗವಾಗಿ ವಿರೋಧಿಸಿದ್ದಾರೆ. 73% ಉಕ್ರೇನಿಯನ್ ಮತದಾರರು ಈ ವ್ಯಕ್ತಿಗೆ ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಇಂದು ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದಿಂದ ಸ್ವತಂತ್ರವಾಗಿ ಉಳಿಯಲು ಬಯಸುತ್ತಿರುವ ಉಕ್ರೇನ್ ದೇಶದ ನಾಡಿಯಾಗಿ ನಿಂತಿದ್ದಾರೆ. 
ಆದರೆ ವ್ಲಾಡಿಮಿರ್ ಪುಟಿನ್ ರಷ್ಯಾದ ಸಾಮ್ರಾಜ್ಯಶಾಹಿಯನ್ನು ಪುನರುಜ್ಜೀವನಗೊಳಿಸಿದ ವ್ಯಕ್ತಿಯಾಗಲು ಬಯಸುತ್ತಾರೆ.

ಇಲ್ಲಿ ಎರಡು ಅಂಶಗಳಿವೆ.

ಒಂದು: 

ಹಳೆತನವನ್ನು ಬಿಟ್ಟು ಕೊಡದೇ ಇರುವುದು. ಅಂದರೆ ತನ್ನ ಅಧಿಪತ್ಯವನ್ನು ಸಧೃಢವಾಗಿ ಇರಿಸುವುದು.

ಎರಡನೆಯದು:

ಪರಕೀಯರ ಪ್ರಭಾವ ಬೀರದಂತೆ ನೋಡಿಕೊಂಡು ತಮ್ಮವರನ್ನು ರಕ್ಷಿಸುವುದು.
ರಷ್ಯಾ ಇವುದರಲ್ಲಿ ಯಾವುದನ್ನು ಮಾಡುತ್ತಿದೆ ಎಂಬುದು ತಿಳಿಯಲು ಆಗುತ್ತಿಲ್ಲ. ಏನೇ ಇರಲಿ, ಯುದ್ಧ ದೊಡ್ಡದಾಗದೆ, ಬೇಗ ಶಾಂತಿ ಹರಡಬೇಕು ಎಂಬುದೇ ನನ್ನ ಆಶಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2ಕಾಮೆಂಟ್‌ಗಳು

  1. ಒಂದು ಪಕ್ಷ ಉಕ್ರೇನ್ ನ್ಯಾಟೋ ಸೇರಿದರೆ ನ್ಯಾಟೋ ರಷ್ಯಾದ ಹಿತ್ತಲಿಗೇ ಬಂದಂತಾಗುತ್ತದೆ. ಇದು ಪುತಿನ್ ಗೆ ಇಷ್ಟವಿಲ್ಲ.

    ಪ್ರತ್ಯುತ್ತರಅಳಿಸಿ