ಜಾಹಿರಾತು

ಈಗಿನ ಆರ್ಥಿಕ ಹಿಂಜರಿತ, ಹಣದುಬ್ಬರ: ಅದರ ಆಳ, ಲಾಭ ಹಾಗೂ ಪರಿಣಾಮಗಳು

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ವಿಶ್ವಾದ್ಯಂತ ಆರ್ಥಿಕ ಕುಸಿತ/ ಹಿಂಜರಿತ ಉಂಟಾಗಬಹುದು ಎಂದು ಊಹಿಸಿದ ಕೆಲವೇ ದಿನಗಳ ನಂತರ, ಜುಲೈ 28 ರಂದು ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು, ಅಮೇರಿಕಾ (US) ಸಹ ಆರ್ಥಿಕ ಕುಸಿತಕ್ಕೆ/ ಹಿಂಜರಿತಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳನ್ನು ಎತ್ತಿ ಹಿಡಿದಿವೆ. ಇದಕ್ಕೆ ಪೂರಕವೆಂಬಂತೆ, ಅಮೇರಿಕಾದ ಆರ್ಥಿಕತೆಯು ಸತತವಾಗಿ ಎರಡನೇ ತ್ರೈಮಾಸಿಕದಲ್ಲಿ ಕುಂಠಿತಗೊಂಡಿದೆ. ಅನೇಕ ತಜ್ಞರ ಪ್ರಕಾರ ಯುಕೆ, ಜಪಾನ್, ಕೆನಡಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದಂತಹ ಅನೇಕ ದೇಶಗಳು ಸಹ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಮತ್ತೆ ಭಾರತ? ಭಾರತವೂ ಸಹ ಈ ಹಿಂಜರಿತ/ಕುಸಿತದಿಂದಾಗಿ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕುಸಿತ ಎಂದ ಮಾತ್ರಕ್ಕೆ ಅದು ಕೇವಲ ಕೆಟ್ಟ ಪರಿಣಾಮ ಆಗಿರಬೇಕು ಅಂತ ನಿಯಮವೇನೂ ಇಲ್ಲಾ. ಇದರ ಬಗ್ಗೆ ವಿಸ್ತಾರವಾಗಿ ಮುಂದೆ ತಿಳಿಯೋಣ.

ಜಗತ್ತಿನ ಯಾವುದೇ ಮೂಲೆಗೆ ಹೋದರು, ಒಂದು ದೇಶದ ಆರ್ಥಿಕ  ಹಿಂಜರಿತ/ಕುಸಿತ ಎಲ್ಲೆಡೆ ಪರಿಣಾಮ ಬೀರಿಯೇ ಬೀರುತ್ತದೆ. ಕೆಲವೊಂದು ಸಾಮಗ್ರಿಗಳ ದರ ಗಗನಕ್ಕೇರುತ್ತವೆ. ಅತೀ ಸ್ಪಷ್ಟ ಉದಾಹರಣೆ ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ. ಅದರಿಂದಾಗಿ ಅಡುಗೆ ಎಣ್ಣೆ, ಇಂಧನಗಳ ಬೆಲೆ ೪೦-೫೦% ರಷ್ಟು ಏರಿತು. ಹೊಡೆದಾಟ ಬೇರೆಡೆ ಆಗಿದ್ದರೂ ಸಹ, ಅದರ ಪರಿಣಾಮಗಳನ್ನು ನಾವು ಒಂದಾನೊಂದು ರೀತಿಯಲ್ಲಿ ಅನುಭವಿಸಲೇ ಬೇಕಾಗುತ್ತದೆ. ಈ ಬೆಲೆಯೇರಿಕೆಯನ್ನೇ ನಾವು "ಹಣದುಬ್ಬರ" ಎಂದು ಕರೆಯುತ್ತೇವೆ.

Current Recession, Inflation: Its Depth, Benefits and Consequences on India
ಈಗಿನ ಆರ್ಥಿಕ ಹಿಂಜರಿತ, ಹಣದುಬ್ಬರ: ಅದರ ಆಳ, ಲಾಭ ಹಾಗೂ ಪರಿಣಾಮಗಳು
ಹಣದುಬ್ಬರ ಎಂದರೆ ಏನು?

ಈ ಸಮಯಕ್ಕೆ, ನೀವು ಹತ್ತು ರೂಪಾಯಿ ಕೊಟ್ಟು ಹತ್ತು ಬಿಸ್ಕತ್ ಖರೀದಿ ಮಾಡಿದರೆ, ಮುಂದಿನ ಎರಡು ವರ್ಷಗಳಲ್ಲಿ ಒಂದೇ ಅದೇ ತರಹದ ವಾತಾವರಣವಿರುವುದಿಲ್ಲ. ಅದೇ ಹತ್ತು ರುಪಾಯಿಗೆ, ಮುಂದೆ ನೀವು ಎಂಟು ಬಿಸ್ಕತ್ ಖರೀದಿ ಮಾಡಬೇಕಾಗುತ್ತದೆ. ಬೆಲೆ ಒಂದೇ, ಆದರೆ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಇದರರ್ಥ ನಿಮ್ಮ ಹಣದ ಮೌಲ್ಯವು ಕ್ಷೀಣಿಸುತ್ತಿದೆ ಎಂದು.

ಹಣದುಬ್ಬರದಲ್ಲಿ ಸಹ ಮೂರು ವಿಧಗಳಿವೆ.

  • ಮೊದಲನೆಯದಾಗಿ, ಸರ್ಕಾರವು ಮಾರುಕಟ್ಟೆಯಲ್ಲಿ, ತನ್ನ ಚಲಾವಣೆಗೋಸ್ಕರ ಕರೆನ್ಸಿಯನ್ನು ಕುರುಡಾಗಿ ಮುದ್ರಿಸಿದಾಗ, ಅದು ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತದೆ.
  • ಎರಡನೆಯದಾಗಿ, ಕಚ್ಚಾ ವಸ್ತುಗಳ ಆಭಾವವಾದಾಗ ಅಥವಾ ದುಬಾರಿಯಾದಾಗ, ಅದು ಅಂತಿಮವಾಗಿ ಅಂತಿಮ ಉತ್ಪನ್ನದ ಬೆಲೆಯನ್ನು ಹೆಚ್ಚಿಸುತ್ತದೆ.
  • ಮೂರನೆಯದಾಗಿ, ಇದು ತುಂಬಾ ನೈಜ ಸ್ವಭಾವದ್ದಾಗಿದೆ. ಕಾಲ ಕಳೆದಂತೆ, ಜನರ ವೇತನ ಶ್ರೇಣಿಯನ್ನು ಹೆಚ್ಚಾಗುತ್ತದೆ. ಇದರಿಂದಾಗಿ ಜನ ಹಲವಾರು ವಸ್ತುಗಳನ್ನು ಖರೀದಿಸಲು, ವೆಚ್ಚ ಮಾಡಲು ಮುಂದಾಗುತ್ತಾರೆ. ಇದರಿಂದ ವಿವಿಧ ಉತ್ಪನ್ನಗಳ ಬೆಲೆಯೂ ಹೆಚ್ಚಾಗುತ್ತದೆ.

ಹಣದುಬ್ಬರ ಎನ್ನುವುದು ಯಾವುದೇ ಜಿಡಿಪಿ(GDP)ಯ ಒಂದು ಅವಿಭಾಜ್ಯ ಅಂಗವಾಗಿದೆ. ಅದು ಕಣ್ಮರೆಯಾಗಲು ಸಾಧ್ಯವಿಲ್ಲ. ಜಿಡಿಪಿ ಎರ್ರಾಬಿರ್ರಿ ಹೆಚ್ಚಾಗಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಅದು ನಡೆಯುವುದಿಲ್ಲ. ಅದಕ್ಕೆ ತನ್ನದೇ ಆದ ಒಂದು ವ್ಯಾಪಾರ ಚಕ್ರವಿದೆ.

ಕೆಲವು ಹಂತದಲ್ಲಿ, ಜಿಡಿಪಿ ಹೆಚ್ಚಾಗುತ್ತದೆ. ಆಗ ಹಣದುಬ್ಬರ ಶುರುವಾಗುತ್ತದೆ. ಸಂಪನ್ಮೂಲಗಳ ಕೊರತೆಯಿದ್ದರೆ ಆರ್ಥಿಕ ಹಿಂಜರಿತ/ಕುಸಿತ ಉಂಟಾಗುತ್ತದೆ. ನಂತರ ಇಳಿತ ಬರುತ್ತದೆ. ನಂತರ ಆರ್ಥಿಕ ಚೇತರಿಕೆ ಕಂಡು ಬರುತ್ತದೆ. ಅದಾದಮೇಲೆ ಬೆಳವಣಿಗೆಯನ್ನು ಮತ್ತೊಮ್ಮೆ ಕಾಣಬಹುದು. ಈ ರೀತಿಯಾಗಿ, ಚಕ್ರವು ತಿರುಗುತ್ತಾ ಸಾಗುತ್ತದೆ. ಈ ಚಕ್ರದಲ್ಲಿ ಹಣದುಬ್ಬರವು ಅನಿಯಂತ್ರಿತವಾದಾಗ, ಮುಂಬರುವ ಅವಧಿಯಲ್ಲಿ ಹಿಂಜರಿತವನ್ನು ನಾವು ಕಾಣಬಹುದು.

GDP Cycle in Kannada
ಆರ್ಥಿಕತೆಯ ಚಕ್ರ

ಹಣದುಬ್ಬರಕ್ಕೆ ಹೋಲಿಸಿದರೆ ಆರ್ಥಿಕ ಹಿಂಜರಿತವು ತುಂಬಾ ಅಪಾಯಕಾರಿಯಾಗಿದೆ. ಅದಕ್ಕೆ ಎರಡು ವಿವರಣೆಗಳೂ ಇವೆ.

  • ಮೊದಲನೆಯದು ತಾಂತ್ರಿಕ ಹಿಂಜರಿತ. ಇದರರ್ಥ, ಯಾವುದೇ ದೇಶ ತನ್ನ ಸತತ ತ್ರೈಮಾಸಿಕದಲ್ಲಿ, GDP ವಿಚಾರದಲ್ಲಿ ಋಣಾತ್ಮಕ ಬೆಳವಣಿಗೆಯನ್ನು ಎದುರಿಸಿದರೆ, ಆ ದೇಶವು ತಾಂತ್ರಿಕ ಹಿಂಜರಿತವನ್ನು ಪ್ರವೇಶಿಸಿದೆ ಎಂದರ್ಥ. ಇದನ್ನು ಇದೀಗ ಅಮೆರಿಕಾದಲ್ಲಿ ಅಂತಹ ಸನ್ನಿವೇಶವನ್ನು ಗಮನಿಸಬಹುದು.
  • ಎರಡನೆಯ ವಿವರಣೆಯು ಶಾಶ್ವತವಲ್ಲ. ಆದರೆ ಕೆಲವು ಕುರುಹುಗಳನ್ನು ನಾವು ಗಮನಿಸಬಹುದು. ಉತ್ಪನ್ನಗಳ ಬೆಲೆಗಳು ಹೆಚ್ಚಾದರೆ ಮತ್ತು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲು ಪ್ರಾರಂಭಿಸಿದರೆ, ನಿರುದ್ಯೋಗ ಹೆಚ್ಚಾಗುತ್ತದೆ. ಇದರರ್ಥ ಮುಂದೆ ಆರ್ಥಿಕ ಹಿಂಜರಿತವು ಕಾದಿದೆ ಎಂದರ್ಥ. ಇದನ್ನು ಜಗತ್ತಿನಾದ್ಯಂತ ನಾವು ಗಮನಿಸಬಹುದು.

ಮುಂಬರುವ (ಅಥವಾ ಬಂದರೆ) ಆರ್ಥಿಕ ಹಿಂಜರಿತಕ್ಕೆ ನಾವು ಹೇಗೆ ಸಿದ್ಧರಾಗಬೇಕು?

  • ಒಬ್ಬರು ಮಾಡಬೇಕಾದ ಮೊದಲ ವಿಷಯವೆಂದರೆ ನಿಮ್ಮ ಹಣವನ್ನು ಸಾಧ್ಯವಾದಷ್ಟು ಹೆಚ್ಚು ಉಳಿಸುವುದು. ಆರ್ಥಿಕ ಹಿಂಜರಿತ ಬಂದರೆ ಮತ್ತು ನೀವು ನಿರುದ್ಯೋಗಿಗಳಾದರೆ, ಮುಂಬರುವ 5-6 ತಿಂಗಳುಗಳವರೆಗೆ ಬದುಕಲು ನಿಮ್ಮ ಉಳಿತಾಯ ಸಹಾಯ ಮಾಡುತ್ತದೆ.
  • ಎರಡನೆಯ ವಿಷಯ, ನೀವು ಐಫೋನ್, ಮ್ಯಾಕ್‌ಬುಕ್ ಅಥವಾ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ತಕ್ಷಣ ನಿಲ್ಲಿಸಿ. ಯಾವುದೇ ದೊಡ್ಡ ಖರೀದಿಯಲ್ಲಿ ತೊಡಗಬೇಡಿ. ಕಾದು ನೋಡಿ. ಹಿಂಜರಿತ ಬರದಿದ್ದರೆ, ಆ ಖರೀದಿಯಲ್ಲಿ ತೊಡಗಿ.
  • ಮೂರನೆಯದಾಗಿ, ಇಂದು ಮಾರುಕಟ್ಟೆಗಳು ಕುಸಿಯುತ್ತಿವೆ. ದೀರ್ಘಾವಧಿಗೆ ಪ್ರಯೋಜನಕಾರಿಯಾಗಬಹುದಾದ ವಿಷಯಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದ್ದರೆ, ತಕ್ಷಣವೇ ಪ್ರಾರಂಭಿಸಿ. ಏಕೆಂದರೆ ನಿಮ್ಮ ದೀರ್ಘಾವಧಿಯ ಯೋಜನೆಯೊಂದಿಗೆ ನೀವು ಉಳಿಸುವ ಹಣವು ಮುಂಬರುವ ಭವಿಷ್ಯದಲ್ಲಿ ನಿಮಗೆ ದೊಡ್ಡ ಲಾಭವನ್ನು ಗಳಿಸಬಹುದು
  • ನಾಲ್ಕನೇ ಮತ್ತು ಪ್ರಮುಖ ಅಂಶವೆಂದರೆ ಯಾವುದೇ ಸಾಲವನ್ನು ತೆಗೆದುಕೊಳ್ಳಬೇಡಿ. ಈಗಾಗಲೇ ತೆಗೆದುಕೊಂಡಿದ್ದರೆ, ಸಾಧ್ಯವಾದಷ್ಟು ಬೇಗ ಅದನ್ನು ತೀರಿಸಲು ಪ್ರಯತ್ನಿಸಿ. ಏಕೆಂದರೆ ಸರ್ಕಾರವು ಹಣದುಬ್ಬರವನ್ನು ನಿಯಂತ್ರಿಸುವಾಗ, ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಲ ದುಬಾರಿಯಾಗಬಹುದು.
  • ಐದನೇ ಅಂಶವೆಂದರೆ, ನಿಮ್ಮ ಈಗಿನ ಕೆಲಸದ ಜೊತೆಗೆ ಯಾವುದೇ ಸೈಡ್ ಹಸ್ಲ್ ಅನ್ನು ಪ್ರಾರಂಭಿಸಲು ಪ್ರಯತ್ನಿಸಿ. ಏಕೆಂದರೆ ಒಂದು ವೇಳೆ ನೀವು ನಿಮ್ಮ ಕೆಲಸವನ್ನು ಕಳೆದುಕೊಂಡರೆ, ನಿಮ್ಮನ್ನು ಮುಂದಕ್ಕೆ ಸಾಗಿಸಲು ನೀವು ಕನಿಷ್ಟ ಪಕ್ಷ ಆದಾಯದ ಮೂಲ ಹೊಂದಿರುತ್ತೀರಿ.
  • ಆರನೇ ಪಾಯಿಂಟ್. ನೀವು ಇಲ್ಲಿಯವರೆಗೆ ಯಾವುದೇ ವಿಮೆಯನ್ನು ಖರೀದಿಸಿಲ್ಲದಿದ್ದರೆ, ಯಾವುದೇ ಆರೋಗ್ಯ ವಿಮೆ, ಜೀವ ವಿಮೆ ಅಥವಾ ಅವಧಿ ವಿಮೆಯನ್ನು ಖರೀದಿಸಲು ಪ್ರಯತ್ನಿಸಿ. ಏಕೆಂದರೆ ಭಾರತದಲ್ಲಿ ವೈದ್ಯಕೀಯ ಬಿಲ್‌ಗಳು ತುಂಬಾ ದುಬಾರಿ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಇಡೀ ಕುಟುಂಬದ ಆರ್ಥಿಕ ಸ್ಥಿತಿ ಕೆಲವೇ ಸಮಯದಲ್ಲಿ ಅಧೋಗತಿಗೆ ತಲುಪುತ್ತದೆ.

ಈಗ, ಆರ್ಥಿಕ ಹಿಂಜರಿತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. 

ಮುಂಬರುವ ಆರ್ಥಿಕ ಹಿಂಜರಿತದ ಕಾರಣಗಳು ಮತ್ತು ಪರಿಣಾಮಗಳು ಯಾವುವು? 

ಕಾರಣಗಳು ತುಂಬಾ ಸರಳವಾಗಿದೆ. ಕಳೆದ ಎರಡು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸಿ. ಈಗ ಚೀನಾವನ್ನು ಗಮನಿಸಿ.

ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲು, ಚೀನಾ ಮತ್ತು ಯುಎಸ್ ವ್ಯಾಪಾರ ಯುದ್ಧದಲ್ಲಿ ತೊಡಗಿದ್ದವು. ಇದರಿಂದಾಗಿ ಅಮೆರಿಕದಲ್ಲಿ ಚೀನಾದ ಉತ್ಪನ್ನಗಳು ದುಬಾರಿಯಾದವು. ಚೀನಾದೊಂದಿಗೆ ಯಾವುದೇ ಕೆಲಸ-ಸಂಬಂಧ ಇಟ್ಟುಕೂಳ್ಳದಂತೆ ಅಮೇರಿಕಾ ತನ್ನ ಮಿತ್ರರಾಷ್ಟ್ರಗಳಿಗೆ  ಹೇಳಿತು. ಈ ಕಾರಣದಿಂದಾಗಿ ಅನೇಕ ಉತ್ಪನ್ನಗಳು ತುಂಬಾ ದುಬಾರಿಯಾದವು.

ಕೋವಿಡ್ -19 ಸಾಂಕ್ರಾಮಿಕ ರೋಗ ಬಂದಾಗ, ಜಾಗತಿಕ ಪೂರೈಕೆ ಸರಪಳಿಗಳ ಕೇಂದ್ರವೆಂದು ಪರಿಗಣಿಸಲ್ಪಟ್ಟ ಚೀನಾದ ಮಾರುಕಟ್ಟೆಯ ಮೇಲೆ ಕೆಟ್ಟ ಬಲವಾದ ಪೆಟ್ಟು ಬಿತ್ತು.ಇದರಿಂದಾಗಿ ಜಾಗತಿಕ ಪೂರೈಕೆ ಸರಪಳಿ ನಾಶವಾಯಿತು. ಅದೇ ರೀತಿ, ಇಂದಿಗೂ ಅರೆವಾಹಕಗಳ(ಸೆಮಿ-ಕಂಡಕ್ಟರ್) ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹಲವಾರು ಉತ್ಪನ್ನಗಳ ಬೆಲೆಗಳು ಸಹ ಹೆಚ್ಚಾಗಿವೆ.

ಇನ್ನೇನು ಕೋವಿಡ್ -19 ಸಾಂಕ್ರಾಮಿಕ ರೋಗ ಮುಗಿಯಿತು ಎನ್ನುವಷ್ಟರಲ್ಲಿ, ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭಿಸಿದವು. ಇದರಿಂದ ಖಾದ್ಯ ಉತ್ಪನ್ನಗಳ ಬೆಲೆ ಗಗನಕ್ಕೇರಿತು. ಗೋಧಿ ಮತ್ತು ಸೂರ್ಯಕಾಂತಿ ಎಣ್ಣೆಯ ಪೂರೈಕೆಗಾಗಿ ಇಡೀ ಪ್ರಪಂಚವು ಈ ಎರಡು ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ.

ಇದಲ್ಲದೇ ರಸಗೊಬ್ಬರ ಪೂರೈಕೆಯೂ ಈ ಎರಡು ದೇಶಗಳ ಮೇಲೆ ಅವಲಂಬಿತವಾಗಿದೆ. ಆಹಾರ ಅಷ್ಟೇ ಅಲ್ಲದೆ ಬೆಳೆ ಬೆಳೆಯಲು ಬೇಕಾದ ಅತ್ಯಂತ ಮುಖ್ಯ ಕಚ್ಚಾ ವಸ್ತುವಿನ ಬೆಲೆ ಸಹ ಏರಿತು. ಆಹಾರದ ಬೆಲೆಗಳು ಆಕಾಶ ಮುಟ್ಟಿದವು. ಇಂಧನ ಮತ್ತು ನೈಸರ್ಗಿಕ ಅನಿಲದ ಬೆಲೆಯೂ ಹೆಚ್ಚಾಯಿತು.

ನಾವು ಇಂಧನ ಬೆಲೆಯನ್ನು ಲಘುವಾಗಿ ತಗೆದುಕೊಳ್ಳಬಾರದು. ಭೂಮಿ ಮೇಲೆ ಯಾವುದೇ ವಸ್ತುವನ್ನು ಒಂದು ಕಡೆಯಿಂದ ಇನ್ನೊಂದೆಡೆ ಒಯ್ಯಬೇಕೆಂದರೆ, ಅದಕ್ಕೆ ಇಂಧನ ಬೇಕೇ ಬೇಕು ಬೇಕು. ಇಂಧನ ಬೆಲೆಯಲ್ಲಿ ಹೆಚ್ಚಳ ವಸ್ತುಗಳ ಬೆಲೆ ಸಹ ಹೆಚ್ಚಳವಾಗುತ್ತದೆ.

ಇದಲ್ಲದೆ, ಯುಎಸ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ಕರೆನ್ಸಿ ನೋಟುಗಳನ್ನು ಮುದ್ರಿಸಿರುವ ಬಗ್ಗೆಯೂ ನೀವು ಕೇಳಿರಬಹುದು. ಅವುಗಳನ್ನು ಸಾರ್ವಜನಿಕರಲ್ಲಿ ವಿತರಿಸಿದ್ದರಿಂದ ಹಣದ ಮೌಲ್ಯವು ಸಹ ಕೆಳಗಿಳಿಯಿತು ಮತ್ತು ವಿವಿಧ ಉತ್ಪನ್ನಗಳ ಬೆಲೆ ಏರಿತು. ಇದರಿಂದಾಗಿ ಹಣದುಬ್ಬರ ಶುರುವಾಯ್ತು.

ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಇನ್ನು ಹಣದುಬ್ಬರ ಏರುತ್ತಲೇ ಇದೆ. ಅಮೇರಿಕಾದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್‌ ತಕ್ಷಣವೇ ಬಡ್ಡಿದರಗಳನ್ನು ಪರಿಷ್ಕರಿಸಿತು. ಇನ್ನೂ ಪರಿಷ್ಕರಿಸುತ್ತಲೇ ಇದೆ. ಆದರೆ ಹಣದುಬ್ಬರದ ನಿಯಂತ್ರಣದ ವಿಷಯ ಬಂದಾಗ ಎಲ್ಲರೂ  ಭಯಪಡುವ ಮೊದಲ ವಿಷಯ ಎಂದರೆ "ಜಿಡಿಪಿ".

ಜಿಡಿಪಿ ಕೆಲವೊಮ್ಮೆ ನಕಾರಾತ್ಮಕ ಬೆಳವಣಿಗೆಯನ್ನು ಎದುರಿಸುತ್ತದೆ. ಆದರೆ ಅಮೇರಿಕಾದಲ್ಲಿ ಸತತವಾಗಿ ಎರಡು ತ್ರೈಮಾಸಿಕಗಳು ಋಣಾತ್ಮಕ ಬೆಳವಣಿಗೆಯ ದರವನ್ನು ಎದುರಿಸುತ್ತಿದೆ ಎಂದರೆ ಅದು ಈಗಾಗಲೇ ಆರ್ಥಿಕ ಹಿಂಜರಿತದಲ್ಲಿದೆ ಎಂದರ್ಥ. ದೊಡ್ಡನ ಜ್ವರ ಮನೆಗೆಲ್ಲಾ ಹರಡದೇ ಇರುವುದೇ? ಈ ಆರ್ಥಿಕ ಹಿಂಜರಿತದ ಪರಿಣಾಮ ಇಡೀ ಭೂಖಂಡದ  ಮೇಲೆ ಬೀರಲಿದೆ.

ಈಗ ಜಾಗತಿಕ ಆರ್ಥಿಕ ಹಿಂಜರಿತವು ಭಾರತದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಹೆಚ್ಚು ಪರಿಣಾಮ ಇರುವುದಿಲ್ಲ ಎಂದು ಅನೇಕ ತಜ್ಞರು ಹೇಳುತ್ತಿದ್ದಾರೆ. ಏಕೆಂದರೆ ಮೊದಲು ಇಂಧನ ಬೆಲೆಯನ್ನು ನೋಡಬೇಕು. ಹೆಚ್ಚುತ್ತಿರುವ ಇಂಧನ ದರಗಳು ಆರ್ಥಿಕ ಹಿಂಜರಿತಕ್ಕೆ ಬಹುಮುಖ್ಯ ಕಾರಣವಾದವು.  

ಇವೆಲ್ಲದರ ಮಧ್ಯೆ ಭಾರತ ಹೇಗೆ ಲಾಭ ಪಡೆದುಕೊಳ್ಳಬಹುದು ಎಂದು ತಿಳಿಯೋಣ.

ಇಂಧನ

ಜಾಗತಿಕವಾಗಿ ತೈಲ ದರಗಳು ಕಡಿಮೆಯಾದರೆ  ನಮಗೆ ಸಹ ಆಂತರಿಕವಾಗಿ ದರಗಳು ಕಡಿಮೆ ಆಗುತ್ತವೆ. ಅಗ್ಗದ ಇಂಧನ ಬೆಲೆ ಭಾರತಕ್ಕೆ ಲಾಭವಾಗಲಿದೆ.ನಾವು ಮುಖ್ಯವಾಗಿ ಇಂಧನವನ್ನು ಆಮದು ಮಾಡಿಕೊಳ್ಳುವುದರಿಂದ ಅದು ನಮ್ಮ ವಿದೇಶೀ ವಿನಿಮಯ ಮೀಸಲುಗಳನ್ನು ಕಡಿಮೆ ಮಾಡುತ್ತದೆ. ಇಂಧನವು ಅಗ್ಗವಾದಾಗ, ನಮ್ಮ ವಿದೇಶೀ ವಿನಿಮಯ ಮೀಸಲು ಉಳಿಸಲಾಗುತ್ತದೆ. ಮತ್ತು ಆಂತರಿಕವಾಗಿ ಇಂಧನ ಬೆಲೆಗಳು ಕಡಿಮೆಯಾದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗುತ್ತವೆ. ಇದು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ವಿವಿಧ ಉತ್ಪನ್ನಗಳು ಸಹ ಅಗ್ಗವಾಗುತ್ತವೆ. ಉಳಿತಾಯ 

ಸಧ್ಯದ ಮಾರುಕಟ್ಟೆ ಸ್ಥಿತಿ

ನಾವು ಆಂತರಿಕವಾಗಿ ಗಮನಿಸಿದರೆ, ಗ್ರಾಹಕ ಮತ್ತು ಮಾರುಕಟ್ಟೆಯ ಭಾವನೆಗಳು ಭಾರತದಲ್ಲಿ ಬೆಳವಣಿಗೆಯನ್ನು ಕಾಣುತ್ತಿವೆ. ಪ್ರಸ್ತುತ, ಕಳೆದ 2-3 ತಿಂಗಳುಗಳಿಂದ ಆಟೋ ವಲಯ ಮತ್ತು ಸೇವಾ ವಲಯದಲ್ಲಿ ಉದ್ಯೋಗಗಳು ಹೆಚ್ಚುತ್ತಿವೆ. IMF ನಿಂದ ಲಭ್ಯವಾದ ಡೇಟಾದಲ್ಲಿ ಇದನ್ನು ಹೇಳಲಾಗಿದೆ. IMF 2023 ರವರೆಗೆ ಪ್ರತಿಯೊಂದು ದೇಶದ ಬೆಳವಣಿಗೆಯ ಬಗ್ಗೆ ಸಂಪೂರ್ಣ ಚಾರ್ಟ್ ಅನ್ನು ಬಿಡುಗಡೆ ಮಾಡಿದೆ. ಭಾರತದ ಬೆಳವಣಿಗೆಯ ದರವು ಸಾಕಷ್ಟು ಕಡಿಮೆಯಿದ್ದರೂ,  ಭಾರತವು ವೇಗವಾಗಿ ಬೆಳೆಯುತ್ತಿರುವ ಜಿಡಿಪಿ ಎಂದು ಅವರು ಉಲ್ಲೇಖಿಸಿದ್ದಾರೆ.

ಆದರೆ ಈ ಆರ್ಥಿಕ ಹಿಂಜರಿಕೆ ಸಹ ಭಾರತ ದೇಶದ ಮೇಲೆ ಹಲವು ಪರಿಣಾಮ ಬೀರಬಹುದು.

ರಫ್ತು:

ಮೊದಲನೆಯದು ರಫ್ತು. ಭಾರತವು US ಅಥವಾ ಇತರ ಹಲವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸರಕು ಮತ್ತು ಸೇವೆಗಳನ್ನು ರಫ್ತು ಮಾಡುತ್ತದೆ. ಈ ದೇಶಗಳು ಆರ್ಥಿಕ ಹಿಂಜರಿಕೆ ಒಳಗಾದಾಗ,  ಆ ದೇಶಗಳು ಭಾರತದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬಹುದು. ಇದು ನಮ್ಮ ರಫ್ತಿನ  ಮೇಲೆ ಪರಿಣಾಮ ಬೀರುತ್ತದೆ.

ಐಟಿ ವಲಯ:

ನಮ್ಮ ಐಟಿ ವಲಯವು ಗಂಭೀರ ಪರಿಣಾಮಗಳನ್ನು ಎದುರಿಸಬಹುದು. ಈ ವಲಯದಲ್ಲಿ ನಡೆಯುವ ವ್ಯವಹಾರಗಳು ಅಭಿವೃದ್ಧಿ ಹೊಂದಿದ ದೇಶಗಳಿಗೆ ಒದಗಿಸಲಾದ ಸೇವೆಗಳ ಮೇಲೆ ಸಂಪೂರ್ಣವಾಗಿ ಆಧರಿಸಿದೆ. ಆ ದೇಶಗಳಲ್ಲಿ ಆರ್ಥಿಕ ಹಿಂಜರಿತ ಕಂಡುಬಂದರೆ, ಅವರು ನಮ್ಮ ಸೇವೆಗಳನ್ನು ನಿರಾಕರಿಸುವ ಸಾಧ್ಯತೆಗಳಿವೆ. ಇದು ಭಾರತದಲ್ಲಿ ನಿರುದ್ಯೋಗಕ್ಕೆ ಕಾರಣವಾಗಬಹುದು.

ಸ್ಟಾರ್ಟ್-ಅಪ್‌ಗಳು:

ಮೂರನೆಯದಾಗಿ, ಸ್ಟಾರ್ಟ್‌ಅಪ್‌ಗಳು ಕಷ್ಟ ಎದುರಿಸಬೇಕಾಗುತ್ತದೆ. ಇತ್ತೀಚೆಗೆ, ಅನೇಕ ಎಡ್ ಟೆಕ್ ಮತ್ತು ಫುಡ್ ಡೆಲಿವರಿ ಸ್ಟಾರ್ಟ್‌ಅಪ್‌ಗಳು ಸಾಕಷ್ಟು ಹೂಡಿಕೆಗಳನ್ನು ಸಿಗದ ಅನೇಕ ಜನರನ್ನು ವಜಾಗೊಳಿಸಿರುವುದನ್ನು ನೀವು ಗಮನಿಸಿರಬಹುದು. ಈಗಿರುವ  ಆರ್ಥಿಕ ಹಿಂಜರಿತದ ಭಯದಿಂದಾಗಿ ಅನೇಕ ಸಂಸ್ಥೆಗಳು ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿವೆ.

ಈ ಕಾರಣದಿಂದಾಗಿ, ಭಾರತೀಯ ಸ್ಟಾರ್ಟ್‌ಅಪ್‌ಗಳು ಲಾಭದಾಯಕತೆಯತ್ತ ಗಮನಹರಿಸುತ್ತಿವೆ. ಅದಕ್ಕಾಗಿಯೇ ಅವರು ತಮ್ಮ ಮಾರ್ಕೆಟಿಂಗ್ ವೆಚ್ಚವನ್ನು ಕಡಿಮೆ ಮಾಡಿ, ಅನೇಕ ಜನರನ್ನು ಕೆಲಸದಿಂದ ತಗೆದುಹಾಕುತ್ತಿದ್ದಾರೆ.

Effect of recession on India
ಆರ್ಥಿಕ ಹಿಂಜರಿಕೆ & ಭಾರತದ ಮೇಲೆ ಪರಿಣಾಮಗಳು

ಕೊನೆಗೆ ಒಂದು ಮಾತು...

ಇಲ್ಲಿ ತನಕ ನಮಗೆ ಸ್ಪಷ್ಟವಾಗಿ ಅರ್ಥವಾಗಿದ್ದು ಏನೆಂದರೆ, ಜಾಗತಿಕ ಆರ್ಥಿಕ ಹಿಂಜರಿತವು ಭಾರತದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಾದರೆ ಪ್ರಪಂಚದಾದ್ಯಂತ ಏನಾಗುತ್ತದೆ?

ಇಡೀ ಪ್ರಪಂಚದ ಬೆಳವಣಿಗೆಯ ದರವು ಕಡಿಮೆಯಾಗಬಹುದು, ಆದರೆ ಅತೀಯಾಗಿ ಕಡಿಮೆ ಆಗುವುದಿಲ್ಲ ಎಂದು IMF ಹೇಳಿಕೆ ನೀಡಿದೆ. ಇದು ಅಷ್ಟೊಂದು ಆಳವಿಲ್ಲದ ಹಿಂಜರಿತವಲ್ಲ. ಏಕೆಂದರೆ ಈ ಹಿಂಜರಿತವು 2008 ರ ಆರ್ಥಿಕ ಹಿಂಜರಿತಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. 2008 ರ ಆರ್ಥಿಕ ಹಿಂಜರಿತವು ಅನೇಕ ದೊಡ್ಡ ಕಂಪನಿಗಳು ದಿವಾಳಿಯಾದ ಕಾರಣ ಸಾಲದಿಂದಾಗಿ ಆರ್ಥಿಕ ಹಿಂಜರಿತ ಉಂಟಾಗಿತ್ತು.

ಆದರೆ ಇಂದು ನಾವು ಮಾತನಾಡುತ್ತಿರುವ ಆರ್ಥಿಕ ಹಿಂಜರಿತವು ಹೆಚ್ಚುವರಿ ದ್ರವೀಕರಣದಿಂದ ಉಂಟಾಗಿದೆ. ಇದರರ್ಥ ಅನೇಕ ಸರ್ಕಾರಗಳು ಹೆಚ್ಚಿನ ಕರೆನ್ಸಿ ನೋಟುಗಳನ್ನು ಮುದ್ರಿಸುವ ಮೂಲಕ ಹಣದುಬ್ಬರವನ್ನು ಹೆಚ್ಚಿಸಿವೆ. ಇದನ್ನು ನಿಯಂತ್ರಿಸಲು, ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಗಳನ್ನು ಪರಿಷ್ಕರಿಸುತ್ತಿವೆ. ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಆರ್ಥಿಕ ಹಿಂಜರಿತ ಬರಲಿದೆ. ಹಿಂದಿನ ತರಹದ ಹಿಂಜರಿತವಾಗಿಲ್ಲದಿದ್ದರೂ ಸಹ ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರೇ ಬೀರುತ್ತದೆ.

ಆದ್ದರಿಂದ, ಅದನ್ನು ಎದುರಿಸಲು ನಾವು ಸಿದ್ಧರಾಗಲೇಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು