ಜಾಹಿರಾತು

ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ: ಕರಿಮೆಣಸಿನ ರಾಣಿಯ ಕಥೆ

ಭಾರತದ ಇತಿಹಾಸ ಕೇವಲ ರಾಜರಿಗಷ್ಟೇ ಸೀಮಿತವಾಗಿಲ್ಲ. ವಿದೇಶಿ ಆಕ್ರಮಣಕಾರಿಗಳಿಗೆ ಕೆಲ ಭಾರತೀಯ ನಾರಿಯರು ಸಹ ಸಿಂಹಸ್ವಪ್ನವಾಗಿದ್ದರು. ಅಂತಹವರಲ್ಲಿ ಬಹಳಷ್ಟು ಜನ ಈಗಿನ ಕಾಲದ ಕರ್ನಾಟಕ ರಾಜ್ಯದ ಕೆಲ ಪ್ರಾಂತ್ಯದ ರಾಣಿಯರಾಗಿದ್ದರು. ಪುರುಷರಷ್ಟೇ ಗಟ್ಟಿತನ, ಚಾಣಾಕ್ಷತೆ, ಆಡಳಿತ ಮತ್ತು ಸನ್ನಡತೆ ಇಂದ ತಮ್ಮ ಪ್ರಜೆಗಳನ್ನು ಆಳಿದ ರಾಣಿಯರು, ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರಲ್ಲಿ "ರಾಣಿ ಚೆನ್ನಭೈರಾದೇವಿ( Queen Chennabhairadevi )" ಸಹ ಒಬ್ಬರು. ತನ್ನ ಬುದ್ಧಿವಂತಿಕೆ, ವ್ಯಾಪಾರದಲ್ಲಿನ ಪರಿಣಿತಿ ಮೂಲಕ ಐರೋಪ್ಯ ಸಾಮ್ರಾಜ್ಯಗಳಲ್ಲಿ "ರೈನಾ-ಡಾ-ಪಿಮೆಂಟಾ" ಅಥವಾ "ಕರಿಮೆಣಸಿನ ರಾಣಿ" ಎಂದೇ ಖ್ಯಾತಿ ಹೊಂದಿದ್ದಳು. ಅವಳ ಪರಾಕ್ರಮ, ಆಡಳಿತ ಶೈಲಿ ನೋಡಿ ಪೋರ್ಚುಗೀಸರು ಅವಳಿಗೆ ಕೊಟ್ಟ ಬಿರುದು ಇದಾಗಿತ್ತು. 

“ಕರ್ನಾಟಕದ ಕರಾವಳಿ ಭಾಗ ಎಂದೆಂದಿಗೂ ಮರೆಯದ ಹೆಸರು,

ಛಲ ಮತ್ತು ಚಾಣಾಕ್ಷತೆಯೇ ಅವಳ ಆಡಳಿತದ ಉಸಿರು

ರಾಜತಾಂತ್ರಿಕತೆ ಮತ್ತು ತಂತ್ರಗಳು ಅವಳಿಗೆ ಖ್ಯಾತಿ ತಂದಿತು,

ಅವಳು ಆಳಿದ ಸಾಮ್ರಾಜ್ಯ ಅಮರವಾಗಿ ಉಳಿಯಿತು"

Queen+Chennabhairadevi
ರಾಣಿ ಚೆನ್ನಭೈರಾದೇವಿ

ರಾಣಿ ಚೆನ್ನಭೈರಾದೇವಿಯು ಗೇರುಸೊಪ್ಪ ಎಂದು ಕರೆಯಲ್ಪಡುವ ಸಾಳುವ ರಾಜವಂಶದ ನಗಿರೆ ಪ್ರಾಂತ್ಯಕ್ಕೆ ಸೇರಿದವಳು. ಗೇರುಸೊಪ್ಪಿನ ಇಮ್ಮಡಿ ದೇವರಾಯನ ಹೆಂಡತಿ ಆದ ಚೆನ್ನಾದೇವಿಯ ಪ್ರೀತಿಯ ತಂಗಿ ಈ ಚೆನ್ನಭೈರಾದೇವಿ . ಪೋರ್ಚುಗೀಸರ ವಿರುದ್ಧ ಹೋರಾಡುವಾಗ ದೇವರಾಯ ಮರಣಹೊಂದಿದನು. ಪೋರ್ಚುಗೀಸ್ ನಾಯಕ ಅಲ್ಫೊನ್ಸೋ ಡಿಸೋಜಾ ಭಟ್ಕಳದ ಮೇಲೆ ದಾಳಿ ಮಾಡಿ, ಚೆನ್ನಾದೇವಿಯನ್ನು ಸೋಲಿಸಿ, ರಾಜಧಾನಿಯಾದ ಭಟ್ಕಳವನ್ನು ಸುಟ್ಟುಹಾಕಿದನು. ಚೆನ್ನಾದೇವಿಯು (ಅಕ್ಕ) ಮೊಹಮ್ಮದೀಯರ ನಾನ್ ಕಾರ್ಟೇಜ್ ಹಡಗುಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಮತ್ತು ಅವರ ಒಪ್ಪಂದದ ಪ್ರಕಾರ ಕಪ್ಪವನ್ನು ನೀಡದಿದ್ದಕ್ಕೆ ಇಂತಹ ಘೋರ ಕೆಲಸಕ್ಕೆ ಪೋರ್ಚುಗೀಸರು ಕೈ ಹಾಕಿದ್ದರು. ಇದೆ ಘಳಿಗೆಯಲ್ಲಿ ಚೆನ್ನಭೈರಾದೇವಿ ರಾಣಿಯಾಗಿ ತನ್ನ ಆಳ್ವಿಕೆಯನ್ನು ಈ ಪ್ರಾಂತ್ಯದಲ್ಲಿ ಶುರು ಮಾಡಿದಳು.

“ಉತ್ತರ ಕನ್ನಡದ ಶರಾವತಿ ನದಿಯ ದಡದಲ್ಲಿರುವ ಗೇರುಸೊಪ್ಪ ವಿಜಯನಗರ ರಾಜರ ನಿಯಂತ್ರಣದಲ್ಲಿತ್ತು. ವಿಕೇಂದ್ರೀಕೃತ ವಿಜಯನಗರ ಸಾಮ್ರಾಜ್ಯದಲ್ಲಿ, ವಿವಿಧ ಪ್ರದೇಶಗಳನ್ನು ಮಹಾಮಂಡಲೇಶ್ವರರು ಎಂದು ಕರೆಯಲ್ಪಡುವ ರಾಜ ಮನೆತನಗಳು ಆಳುತ್ತಿದ್ದವು. ಆಕೆಯ ರಾಜ್ಯವು ಗೋವಾದ ದಕ್ಷಿಣದಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲಬಾರ್‌ವರೆಗೂ  ವಿಸ್ತರಿಸಿತ್ತು ಎಂದು ಶಾಸನಗಳು ಹೇಳುತ್ತವೆ. ಈ ಪ್ರದೇಶವು ಭಟ್ಕಳ, ಹೊನ್ನಾವರ, ಮಿರ್ಜಾನ್, ಅಂಕೋಲಾ ಮತ್ತು ಬೈಂದೂರು ಮುಂತಾದ ಹೆಸರುವಾಸಿ ವ್ಯಾಪಾರಿ ಬಂದರುಗಳಿಗೆ ಮಾತ್ರವಲ್ಲದೆ ಕಾಳುಮೆಣಸಿಗೂ ಹೆಸರುವಾಸಿಯಾಗಿತ್ತು.

ಗೇರುಸೊಪ್ಪೆ ಮಲೆನಾಡಿನ ದಟ್ಟ ಅರಣ್ಯ ಪ್ರದೇಶದ ಮಡಿಲಲ್ಲಿ ಇರುವ ಸಮೃದ್ಧ ಸಾಮ್ರಾಜ್ಯವಾಗಿತ್ತು. ಇದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೆಲೆಕೊಟ್ಟು, ಅಂದಿನ ವಿಶ್ವದ ಶ್ರೀಮಂತ ವಿಜಯನಗರ ಸಾಮ್ರಾಜ್ಯದ ಖ್ಯಾತಿಗೆ ಸದ್ದಿಲ್ಲದೆ ಕೊಡುಗೆ ನೀಡಿದೆ. ಇದು ಕಾಡಿನಲ್ಲಿ ಶಾಂತವಾಗಿರುವ ಪ್ರದೇಶವಾಗಿದೆ, ಆದರೆ ಅತ್ಯಂತ ಸುಂದರವಾದ ಕಲ್ಲಿನ ಕೆತ್ತನೆಗಳು ಮತ್ತು ಶ್ರೀಮಂತ ಇತಿಹಾಸವನ್ನು ಒಳಗೊಂಡಿರುವ ರತ್ನವಾಗಿದೆ.

ಕ್ಯಾಪ್ಟನ್ ಅಲ್ಫೊನ್ಸೊ ಪೋರ್ಚುಗಲ್ ರಾಜನಿಗೆ ಬರೆದ ಪತ್ರದಲ್ಲಿ "ಬಟಿಕಳ (ಭಟ್ಕಳ) ಮತ್ತು ಗೋವಾದ ನಡುವೆ ಓನೋರ್ (ಕಾನೂರ್), ಮಾರ್ಜೆನ್ (ಮಿರ್ಜಾನ್) ಮತ್ತು ಅಂಕೋಲಾ ಎಂಬ ಸ್ಥಳಗಳಿವೆ. ಅವರು ವಾರ್ಷಿಕವಾಗಿ 5000 ಕ್ರುಜಾಡೋಸ್ (ಹದಿನೈದನೇ ಶತಮಾನದ ಪೋರ್ಚುಗೀಸ್ ಪಟ್ಟು ನಾಣ್ಯ) ಮೆಣಸು ರಫ್ತು ಮಾಡುತ್ತಾರೆ ಎಂದು ನಾನು ಕೇಳಿದ್ದೇನೆ. ಈ ಸ್ಥಳಗಳು ಗೇರುಸೊಪ್ಪೆಯ (ಚೆನ್ನಭೈರಾದೇವಿ) ರಾಣಿಯ ಆಳ್ವಿಕೆಗೆ ಒಳಪಟ್ಟಿವೆ. ಈ ಮೆಣಸುಗಳು ಕರಿಮೆಣಸುಗಿಂತ ದಪ್ಪ, ಭಾರ, ಮಸಾಲೆಯುಕ್ತವಾಗಿವೆ. ಈ ಸ್ಥಳಗಳನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು."

ಈ ದುರಾಸೆಯಿಂದ, ಪೋರ್ಚುಗೀಸರು ಗೇರುಸೊಪ್ಪೆಯ ಮೇಲೆ ಯುದ್ಧ ಮಾಡಿದರು. ಒಂದಲ್ಲ ಎರಡು ಬಾರಿ, 1559 ರಲ್ಲಿ ಮತ್ತು ಇನ್ನೊಮ್ಮೆ1570 ರಲ್ಲಿ. ರಾಣಿ ತನ್ನ ಅದ್ಭುತ ರಣತಂತ್ರಗಳ ಮೂಲಕ ಮತ್ತು ಕೆಚ್ಚೆದೆಯ ಹೋರಾಟದ ಮೂಲಕ ಎರಡೂ ಯುದ್ಧಗಳನ್ನು ಗೆದ್ದಳು. ಕಾಲಾನಂತರ ಅವಳು ರಾಜತಾಂತ್ರಿಕತೆಯನ್ನು ಬಳಸಿಕೊಂಡು ಪೋರ್ಚುಗೀಸರೊಂದಿಗೆ ವ್ಯವಹರಿಸಿದಳು. ಅವಳು ಅದ್ಭುತ ಚಿಂತಕಿಯಾಗಿದ್ದಳು. 1571 ರಲ್ಲಿ ಸಂಯುಕ್ತ ಸೈನ್ಯದ ಸೇನಾಧಿಪತಿ ಸ್ಥಾನ ಸಹ ತುಂಬಿ ಅದರ ಹೆಗ್ಗಳಿಕೆಗೆ ಅವಳು ಪಾತ್ರಳಾಗಿದ್ದಾಳೆ. ಈ ಸಂಯುಕ್ತ ಸೈನ್ಯದಲ್ಲಿ ಗುಜರಾತ್‌ನ ಸುಲ್ತಾನರು, ಬೀದರ್‌ನ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳು ಮತ್ತು ಕೇರಳದ ಜಮೋರಿನ್ ಆಡಳಿತಗಾರರು ಸೇರಿದಂತೆ ಅನೇಕ ರಾಜರು ಸೇರಿದ್ದರು.

ವಿಜಯನಗರ ಸಾಮ್ರಾಜ್ಯದ ಪ್ರಾಂತೀಯಗಳನ್ನು ಮಹಾಮಂಡಳ ಎಂದು ಕರೆಯುತ್ತಿದ್ದರು. ಗೇರುಸೊಪ್ಪೆ ಪ್ರಾಂತ್ಯ ವಿಜಯನಗರದ ಮುಖ್ಯ ಆಡಳಿತದಲ್ಲಿದ್ದ ಕಾರಣ, ಅದನ್ನು ಆಳುತ್ತಿದ್ದ ರಾಣಿ ಚೆನ್ನಭೈರಾದೇವಿಯನ್ನು ಮಹಾಮಂಡಲೇಶ್ವರಿ ಎಂದು ಕರೆಯಲಾಗುತ್ತಿತ್ತು. ಜನ ಪ್ರೀತಿಯಿಂದ "ಅವ್ವರಸಿ" ಎಂದು ಸಹ ಕರೆಯುತ್ತಿದ್ದರು. ಜೈನ ಧರ್ಮಕ್ಕೆ ಸೇರಿದ ಅವಳು, 1552 ರಿಂದ 1606 ರವರೆಗೆ ಆಳ್ವಿಕೆ ನಡೆಸಿದರು. ಭಾರತದಲ್ಲೇ ಅಧಿಕವಾಗಿ, ದೀರ್ಘಕಾಲ ಆಳಿದ ಮೊದಲ ಮಹಿಳಾ ಆಡಳಿತಗಾರ್ತಿ ಎಂಬ ಹೆಗ್ಗಳಿಕೆ ಸಹ ಅವ್ವರಸಿಗಿತ್ತು. ಅಘನಾಶಿನಿ ನದಿಯ ದಡದಲ್ಲಿರುವ ಅತ್ಯಂತ ಪ್ರಸಿದ್ಧವಾದ ಮಿರ್ಜಾನ್ ಕೋಟೆಯನ್ನು ಅವಳು ನಿರ್ಮಿಸಿದಳು. ಮೆಣಸು ವ್ಯಾಪಾರವನ್ನು ನಿಯಂತ್ರಿಸಲು ಅವಳು ಈ ಕೋಟೆಯನ್ನು ಮುಖ್ಯ ಕೇಂದ್ರವಾಗಿ ಬಳಸಿದಳು. ಮೆಣಸಿನಕಾಯಿ, ಶುಂಠಿ, ದಾಲ್ಚಿನ್ನಿ, ಜಾಯಿಕಾಯಿ ಮತ್ತು ಶ್ರೀಗಂಧವನ್ನು ಯುರೋಪಿಗೆ ಆಕೆಯ ಆಳ್ವಿಕೆಯಲ್ಲಿ ರಫ್ತು ಮಾಡಲಾಯಿತು. ಹೊನ್ನಾವರ ಮತ್ತು ಭಟ್ಕಳ ನಗರಗಳು ಪ್ರಾಂತ್ಯದ ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟವು.  ಇದರಿಂದಾಗಿ ವ್ಯಾಪಾರ ಸಬಲೀಕರಣಗೊಂಡಿತು. ಈ ಕೇಂದ್ರಗಳ ಮೂಲಕ ಅರೇಬಿಯನ್ ಕುದುರೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪಶ್ಚಿಮದಿಂದ ಆಮದು ಮಾಡಿಕೊಳ್ಳಲಾಯಿತು.

Mirjaan+Fort
ಮಿರ್ಜಾನ್ ಕೋಟೆ

ಕಾನೂರು ಕೋಟೆ ಮತ್ತು ಚತುರ್ಮುಖ ಬಸದಿಯನ್ನು ನಿರ್ಮಿಸಿದ ಹೆಗ್ಗಳಿಕೆ ಅವ್ವರಸಿಯದು. ಪೋರ್ಚುಗೀಸರು ಒತ್ತಾಯದ ಮೂಲಕ ಜನರನ್ನು ಮತಾಂತರ ಮಾಡುತ್ತಿರುವಾಗ, ಅದರಿಂದ ಪಾರಾಗಲು ಓಡಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೂ ರಾಜಾಶ್ರಯ ನೀಡಿದಳು. ಅವಳು ಅನೇಕ ಶೈವ ಮತ್ತು ವೈಷ್ಣವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಸಹ ಸಹಾಯ ಮಾಡಿದಳು. ಅವಳು ಹಲವಾರು ಬಸದಿಗಳನ್ನು ನಿರ್ಮಿಸಿದಳು. ಸ್ವಾದಿ ದಿಗಂಬರ ಜೈನಮಠದ ಸುಪ್ರಸಿದ್ಧ ಅಭಿನವ ಭಟ್ಟಾಕಳಂಕ, “ಕರ್ನಾಟಕ ಶಬ್ದಾನುಶಾಸನ” ಎಂಬ ವ್ಯಾಕರಣ ಗ್ರಂಥದ ಕರ್ತೃ ರಾಣಿ ಚೆನ್ನಭೈರಾದೇವಿಯ ಆಶ್ರಯದಲ್ಲಿದ್ದರು. ರಾಣಿ ಎಷ್ಟು ಪ್ರಸಿದ್ಧಳಾಗಿದ್ದಳು ಎಂದರೆ ಪೋರ್ಚುಗೀಸರು ಒಮ್ಮೆ ಹೀಗೆ ಹೇಳಿದ್ದರಂತೆ “ನಾವು ಅವಳೊಂದಿಗೆ ಅತ್ಯಂತ ಎಚ್ಚರಿಕೆಯಿಂದ ಮತ್ತು ರಾಜತಾಂತ್ರಿಕವಾಗಿ ವ್ಯವಹರಿಸಬೇಕು. ಅವಳನ್ನು ನಮ್ಮ ಕಡೆಗೆ ಇರಬೇಕು ಎಂದರೆ ನಾವು ಅವಳೊಂದಿಗೆ  ಸೌಜನ್ಯವಾಗಿ, ಸಭ್ಯವಾಗಿ ಮತ್ತು ರಾಜತಾಂತ್ರಿಕವಾಗಿ ವ್ಯವಹರಿಸಬೇಕು." ಎಂದು.

Chaturmukha+Basadi
ಚತುರ್ಮುಖ ಬಸದಿ

ದುರದೃಷ್ಟವಶಾತ್, ರಾಣಿ ತನ್ನ ಸ್ವಂತ ದೇಶದ ಜನರಿಂದ ಸೋಲಿಸಲ್ಪಟ್ಟಳು. ಕೆಳದಿ ಮತ್ತು ಬಿಳಗಿ ಮುಖ್ಯಸ್ಥರು ತಮ್ಮ ವೈವಾಹಿಕ ಮೈತ್ರಿಯೊಂದಿಗೆ ಬಲವಾದ ಮೈತ್ರಿ ಮಾಡಿಕೊಂಡು, ಗೇರುಸೊಪ್ಪೆಯ ಮೇಲೆ ದಾಳಿ ಮಾಡಿ ರಾಣಿಯನ್ನು ಸೋಲಿಸಿದರು. ರಾಣಿಯನ್ನು ವರ್ಷಗಳ ಕಾಲ ಕೆಳದಿ ಜೈಲಿನಲ್ಲಿ ಇರಿಸಲಾಗಿತ್ತು ಮತ್ತು ಅವ್ವರಸಿ ಅಲ್ಲಿಯೇ ಕೊನೆಯುಸಿರೆಳೆದರು.

ಅವರು ಪೋರ್ಚುಗೀಸರಿಂದ 'ಮೆಣಸಿನ ರಾಣಿ' ಎಂಬ ಬಿರುದನ್ನು ಪಡೆದರು. ಅವಳಿಗೆ ಸಮರ್ಪಿತವಾದ ಪ್ರಸಿದ್ಧ ಕಂಚಿನ ಪ್ರತಿಮೆಯೂ ಇದೆ.

broze+statue+of+Chennabhairadevi+by+Portugese
ರಾಣಿಯ ಕಂಚಿನ ಪ್ರತಿಮೆ

ಅವಳು ಓರ್ವ ವೀರ ಯೋಧ, ಮಹಾನ್ ರಾಜತಾಂತ್ರಿಕ, ಮತ್ತು ಹೆಚ್ಚು ಕಾಲ ಆಳಿದ ಭಾರತೀಯ ರಾಣಿ. ಆಕೆ ದಕ್ಷಿಣ ಭಾರತದ ಹೆಮ್ಮೆಯಾಗಿದ್ದಳು. ಈ ಪ್ರದೇಶಗಳಲ್ಲಿನ ಜನರು ಈಗಲೂ ಈ ರಾಣಿಯ ಆಳ್ವಿಕೆ ಮತ್ತು ಆಕೆಯ ಕೊಡುಗೆಗಳನ್ನು ಆಚರಿಸುತ್ತಾರೆ. ಇದು ರಾಣಿ ಚೆನ್ನಭೈರಾದೇವಿ-ಕರಿಮೆಣಸಿನ ರಾಣಿಯ ಕಥೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು

  1. ನಿಜವಾಗಲು ಅದ್ಭುತ ರಾಣಿಯ ಕಥೆ
    ಆದರೆ ಇನ್ನೂ ಸ್ವಲ್ಪ ಆಕೆಯ ಜೈನ ಪರಂಪರೆಯ ಇತಿಹಾಸ ಈಮಟ್ಟಿಗೆ ಬೆಳೆಯಲು ನೀಡಿದ ಕೊಡುಗೆಗಳ ಬಗ್ಗೆ ತಿಳಿಸುವುದಿತ್ತು.
    ಈಕೆಯ ಕಾಲದಲ್ಲಿದ್ದ ಮಹಾನ್ ಕವಿಗಳ ಬಗ್ಗೆ ಸ್ವಲ್ಪ ಹೇಳುವುದಿತ್ತು.
    ಕನ್ನಡ ಭಾಷೆಗೆ ಈಕೆ ಕೊಟ್ಟ ಪ್ರಾತಿನಿಧ್ಯ ಹಾಗೂ ಕೊಡುಗೆಗಳ ಬಗ್ಗೆ ಸ್ವಲ್ಪ ಹೇಳುವುದಿತ್ತು.

    ಪ್ರತ್ಯುತ್ತರಅಳಿಸಿ