ಜಾಹಿರಾತು

ಬೆಂಗಳೂರಿನಲ್ಲಿ ಮಳೆ ಅಬ್ಬರ ಮತ್ತು ಕಾರಣ, ಅದರ ಹೆಸರಲ್ಲಿ ಬೆಂಗಳೂರಿನ ತೇಜೋವಧೆಗೆ ಯತ್ನ

ಬೆಂಗಳೂರು ನಗರ ತನ್ನ ಮೋಡಿ, ಆಕರ್ಷಕ ಜೀವನ ಶೈಲಿ ಮತ್ತು ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಮೈಲಿಗೊಂದು ಉದ್ಯಾನವನ, ಸಾಲು ಸಾಲು ಮರಗಳು, ಹೊಟ್ಟೆ ತುಂಬಿ ತುಳುಕುವಷ್ಟು ಉಣಬಡಿಸುವ ನಾನಾ ತರಹದ ಹೋಟೆಲ್ಗಳು ಮತ್ತು ಇಲ್ಲಿನ ಹವಾಮಾನ ಎಂಥವರನ್ನು ಸೆಳೆದುಬಿಡುತ್ತದೆ. ಬೇಸಿಗೆ, ಮಳೆ, ಚಳಿಗಾಲಗಳನ್ನು ಒಂದೇ ದಿನದಲ್ಲಿ ಅನುಭವಿಸುವಂತಹ ಊರು ಬೆಂಗಳೂರು. ಸರಾಸರಿ 900 ಮೀ (2,953 ಅಡಿ) ಎತ್ತರದಲ್ಲಿ ಇರುವ ಈ ಭೂಪ್ರದೇಶ, ವರ್ಷವಿಡೀ ಆಹ್ಲಾದಕರ ಮತ್ತು ಸಮನಾದ ಹವಾಮಾನವನ್ನು ಹೊಂದಿದೆ. ಬೆಂಗಳೂರಿನಲ್ಲಿ ಮಳೆ ಸಾಮಾನ್ಯ ಸಂಗತಿ. ಆದರೆ ಇತ್ತೀಚಿಗೆ ಇದರ ಕುರಿತು ಬರುತ್ತಿರುವ ಕೆಲ ಸುದ್ದಿಗಳ ಹೆಸರು ಕೇಳಿದರೆ ಭಯ ಹುಟ್ಟಿಸುತ್ತವೆ.'ಬೆಂಗಳೂರಿನಲ್ಲಿ ಮಳೆ ಅಬ್ಬರ', 'ಬೆಂಗಳೂರಿನಲ್ಲಿ ಮಳೆಯ ಅವಾಂತರ'. ಇವುಗಳೆಲ್ಲಾ ಕೇಳಿ/ನೋಡಿದ ಮೇಲೆ ಬಂದ ಕೋಪ ಅಷ್ಟಿಷ್ಟಲ್ಲ. ಚಿಕ್ಕ ಮೊಡವೆಯಿಂದ ಮುಕ್ತಿಹೊಂದಲು ತಲೆಯನ್ನೇ ಕಿತ್ತು ಹಾಕಲು ಬರುತ್ತದೆಯೇ? ಅದೇ ರೀತಿ, ಪೀಡಿತ ಪ್ರದೇಶಗಳು ಚಿಕ್ಕದಾಗಿದ್ದರೂ, ಇಡೀ ಬೆಂಗಳೂರನ್ನೇ ಪೀಡಿತ ಪ್ರದೇಶ ಎನ್ನಲಾಗುತ್ತದೆಯೇ? ಇಲ್ಲಾ.

ಬೆಂಗಳೂರಿನಲ್ಲಿ ವಾಸ ಮಾಡಿ, ಅಲ್ಲಿನ ಸೊಬಗಿಗೆ ಮರುಳರಾದವರಲ್ಲಿ ನಾನು ಒಬ್ಬ. ಬೆಂಗಳೂರಿನಲ್ಲಿ ಮಳೆ ಎಂಬುದು ಊರಿನ ಒಂದು ಅವಿಭಾಜ್ಯ ಭಾಗ ಇದ್ದಂತೆ. ಆದರೆ ಈ ಪೀಡಿತ ಪ್ರದೇಶಗಳ ವಿಚಾರದಲ್ಲಿ ನನಗೆ ಕಂಡು ಬಂದ ಕೆಲ ಅಂಶಗಳು, ನನಗೆ ಸವಾಲು ಎಸೆದವು. ಅದರ ಬಗ್ಗೆ ಈ ಲೇಖನ ಬರೆಯುತ್ತಿದ್ದೇನೆ.

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲ ಬಡಾವಣೆಗಳು ತೀವ್ರ ಜಲಾವೃತಗೊಂಡಿದೆ. ನಗರದ ಹಲವೆಡೆ ಸಂಚಾರ ದಟ್ಟಣೆ, ಅಲ್ಲಲ್ಲಿ ಮನೆಗಳು ಮತ್ತು ವಾಹನಗಳು ಮಳೆಯಿಂದಾಗಿ ಜಲಾವೃತಗೊಂಡು ಅಪಾರ ಹಾನಿ ಸಹ ಉಂಟು ಮಾಡಿವೆ.ಯಮಲೂರು, ರೇನ್‌ಬೋ ಡ್ರೈವ್‌ ಲೇಔಟ್‌, ಸನ್ನಿ ಬ್ರೂಕ್ಸ್‌ ಲೇಔಟ್‌, ಮಾರತ್ತಹಳ್ಳಿ ಮುಂತಾದ ಕಡೆಗಳಲ್ಲಿ ಕೆಲಸಕ್ಕೆ ಮತ್ತು ಶಾಲೆಗೆ ಹೊರಟ ಜನ ಹಾಗು ಮಕ್ಕಳು, ನೀರನ್ನು ದಾಟಲು ದೋಣಿ, ಟ್ರ್ಯಾಕ್ಟರ್‌ಗಳನ್ನು ಬಳಸುತ್ತಿದ್ದ ದೃಶ್ಯಗಳನ್ನು ನೀವು ಟೀವಿಯಲ್ಲಿ ನೋಡಿರಬಹುದು. ಅಥವಾ ಮೆಟ್ರೋ ಕಾಮಗಾರಿ ಬಳಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದನ್ನು, ಏಕೋಸ್ಪೇಸ್ ಬಳಿ ಹೊಳೆಯಾಗಿ ಹರಿಯುತ್ತಿರುವ ನೀರನ್ನು ಸಹ ನೀವು ಅನೇಕ ಜಾಲತಾಣದಲ್ಲಿ ಕಂಡಿರಬಹುದು.

ಇದೇ ರೀತಿಯ ಘಟನೆ, ಒಂದೆರಡು ವಾರದ ಹಿಂದೆ ರಾಮನಗರದಲ್ಲಿ ಸಹ ಆಗಿತ್ತು. ಅದೇ ರೀತಿ ರಸ್ತೆಗಳು ಸಹ ನದಿಯಾಗಿ ಮಾರ್ಪಟ್ಟು ಅಡಚಣೆ ಆಗಿತ್ತು. ಆದರೆ ಆ ಸುದ್ದಿ ಕೇವಲ ಸ್ಥಳೀಯ ಸುದ್ದಿ ವಾಹಿನಿಗಳು ಒಂದೆರಡು ದಿನ ತೋರಿಸಿ ಸುಮ್ಮನಾದರು. ಆದರೆ, ಕಳೆದ ದಿನದಿಂದ ಬೆಂಗಳೂರು ಮತ್ತು ಮಳೆ ಬಗ್ಗೆ ರಾಷ್ಟ್ರೀಯ ವಾಹಿನಿಗಳು ಬಹಳಷ್ಟು ಆಸಕ್ತಿ ತೋರುತ್ತಿವೆ. ಸರ್ಕಾರದ ಗಮನಕ್ಕೆ ತರುವಂತಹ ಸುದ್ದಿ ಪ್ರಸಾರ ಸರಿ, ಆದರೆ ಅದು ಅವುಗಳಿಗೆ ಬೇಕಾಗಿಲ್ಲ. ತರ್ಕವಿಲ್ಲದ, ಅಸಂಬದ್ಧ ಪ್ರೋಗ್ರಾಮ್ ತೋರಿಸಿದಾಗ ಮನಸ್ಸಿಗೆ ನೋವಾಯ್ತು. ಇಲ್ಲಿಯೇ ತಮ್ಮ ಕಂಪನಿಗಳನ್ನು ಹುಟ್ಟುಹಾಕಿ, ಬೆಳೆದು ನಿಂತ ದೊಡ್ಡ ದೊಡ್ಡ ಹೆಸರುಗಳು, ಈ ಸನ್ನಿವೇಶವನ್ನು ಉಪಯೋಗಿಸಿ, ಅತೀ ಕೆಟ್ಟ ಮಾರ್ಕೆಟಿಂಗ್ ಬುದ್ಧಿ ಉಪಯೋಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ.

ಎಲ್ಲಾ ಸರಿ ಇದ್ದಾಗ ಇರುವೆ ಮುಕ್ಕುರಿದಾಗ ಹಾಗೆ ಬಂದು, ಇಲ್ಲಿನ ಸಂಪನ್ಮೂಲಗಳನೆಲ್ಲಾ ಹಾಳು  ಮಾಡಿ, ಕಡೆಗೆ ಅದೇ ಊರನ್ನೇ ದೂಷಿಸಲು ಹೊರಟಿದ್ದಾರೆ.

ಅಷ್ಟಾಗಿಯೂ, ಇದು ಇಡೀ ಬೆಂಗಳೂರಿಗೆ ಬಂದ ತೊಂದರೆ ಅಲ್ಲಾ. ಕೆಳಗಿನ ಮ್ಯಾಪ್ ಅಲ್ಲಿ ತೋರಿಸಿರುವಂತೆ, ಕೆಲವೇ ಕೆಲವು ಭಾಗಗಳಲ್ಲಿ ಇಂತಹ ತೊಂದರೆ ಉಂಟಾಗಿದೆ. ಹಾಗಂತ ಇಡೀ ಊರನ್ನೇ ಬೇಡವಾದ ರೀತಿಯಲ್ಲಿ ಬಿಂಬಿಸುವುದು ಒಳ್ಳೆಯ ಬೆಳವಣಿಗೆ ಅಲ್ಲಾ.

ಬೆಂಗಳೂರಿನಲ್ಲಿ ಜಲಾವೃತಗೊಂಡ ಬಡಾವಣೆಗಳು
ಬೆಂಗಳೂರಿನಲ್ಲಿ ಪ್ರವಾಹ ಪೀಡಿತ ಬಡಾವಣೆಗಳು

ಇಂತಹ ಪ್ರಸಂಗಗಳನೆಲ್ಲಾ ನೋಡಿ, ಏಕೆ ಹೀಗಾಯ್ತು? ಕಾರಣ ಏನು? ಎಂಬೆಲ್ಲಾ ವಿಚಾರಗಳು ತಲೆಗೆ ಕೆಲಸ ಕೊಡಲು ಶುರು ಮಾಡಿದಾಗ, ಅನೇಕ ಉತ್ತರಗಳು ಸಿಕ್ಕವು. ಹೀಗಾಗಿ ಇವತ್ತಿನ ಬ್ಲಾಗ್ ಅವುಗಳ ಮೇಲೆ ಬರೆಯೋಣವೆಂದೆನಿಸಿತು.

ಶುರು ಆಗುವ ಮೊದಲು, ಕೆಳಗಿನ ಚಿತ್ರವನ್ನು ಒಮ್ಮೆ ಸರಿಯಾಗಿ ಗಮನಿಸಿ. ಮುಂದೆ ನಾ ಹೇಳುವ ಕೆಲವು ಅಂಶಗಳಿಗೆ ಇದು ಒಂದು ಅತ್ಯುತ್ತಮ ಸಾಕ್ಷಿ.

Vegetation Cover in Bangalore over the years
ಸಸ್ಯ ಸಂಪತ್ತು v/s ನಗರೀಕರಣ
ಬೆಂಗಳೂರಿಗೆ ಇಂತಹ ಮಳೆಗಳೇನು ಹೊಸತಲ್ಲ. ಇಲ್ಲಿನ ಉತ್ತಮ ವಾತಾವರಣ, ಪ್ರಕೃತಿ ಸೌಂದರ್ಯ, ಮಂದ ತಾಪಮಾನ ಎಲ್ಲಾ ಬೆಂಗಳೂರಿನ ವೈಶಿಷ್ಟ್ಯಗಳು. ಆದರೆ ಕೆಲವು ಕಾರಣಗಳಿಂದ, ಹಲವರ ನಿರ್ಲಕ್ಷದಿಂದ, ಕೆಲವರ ಅಸಡ್ಡೆಯಿಂದ ನಾವು ಈ ಊರಿನ ಬಗ್ಗೆ ಮಾತನಾಡುವ ಸ್ಥಿತಿಗೆ ಬಂದಿದ್ದೇವೆ.
ಬೆಂಗಳೂರಿನಲ್ಲಿ ಸೋಮವಾರ 13 ಸೆಂ.ಮೀ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ 18 ಸೆಂ.ಮೀನಷ್ಟು ಸಹ ದಾಖಲಾಗಿದೆ. ಮುಂದಿನ ಐದು ದಿನ ವಾತಾವರಣ ಹೀಗೆ ಇರಲಿದೆ ಎಂದು ಸಹ ಹೇಳಲಾಗಿದೆ. ದಕ್ಷಿಣ ಕರ್ನಾಟಕದ ಮೇಲೆ ಉಂಟಾಗಿರುವ  ಕ್ಷಿಪ್ರ ವಲಯ ಅಥವಾ ಶಿಯರ್ ಝೋನ್ ಈ ಅತೀವೃಷ್ಟಿಗೆ ಮುಖ್ಯ ಕಾರಣ. ಒಂದು ಶಿಯರ್ ಝೋನ್ ಎಂಬುದು ಮಾನ್ಸೂನ್ ಅಲ್ಲಿ ಉಂಟಾಗುವ ಹವಾಮಾನದ ಸ್ಥಿತಿಯಾಗಿದ್ದು, ಇದರಿಂದಾಗಿ ಒಂದು ಪ್ರದೇಶದ ಮೇಲೆ ಭಾರೀ ಮಳೆಯನ್ನು ಹೊಂದಿರುವ ಮೋಡಗಳು ಇಕ್ಕಟ್ಟಾಗಿ ನಿಲ್ಲುತ್ತವೆ.

ಕೇವಲ ಈಗಂತ ಅಲ್ಲಾ. ಮೊದಲಿನಿಂದಲೂ ಆ ಸಮಸ್ಯೆ ಇದೆ. ಆದರೆ ಈ ಸಲ ಅದು ಉಲ್ಬಣಿಸಿದೆ. ಕಾರಣಗಳನ್ನು ಹುಡುಕುತ್ತಾ ಹೋದಾಗ, ಸಿಕ್ಕ ಕೆಲವು ಅಂಶಗಳು ಇಂತಿವೆ.

ಮೊದಲನೆಯ ಅಂಶ : ಚರಂಡಿ ವ್ಯವಸ್ಥೆ

ಬೆಂಗಳೂರನ್ನು ಸುತ್ತ ಸುತ್ತುವ ಚರಂಡಿ ನಾಳೆಗಳು ತುಂಬಾ ಹಳೆಯದಾಗಿವೆ, ದುಸ್ಥಿರಗೊಂಡಿವೆ ಅಥವಾ ಕಡಿಮೆ ಸಾಮರ್ಥ್ಯವನ್ನು ಹೊಂದಿವೆ. 5-10 ಸೆಂ.ಮೀ ಮಳೆಯಾಗಿದಕ್ಕೆ ಈ ಹಿಂದೆ ಚರಂಡಿಗಳು ತುಂಬಿ ಹರಿದಿರುವ ಪ್ರಕರಣಗಳು ಈ ಹಿಂದೆ ನಡೆದಿವೆ. ನಗರದ ಕೆಲವೆಡೆ ಇವುಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನಗಳು ಆಗಿವೆ, ಆಗುತ್ತಿವೆ. ಆದರೆ ಕಾಮಗಾರಿ ಹೆಸರಲ್ಲೊ, ಅಥವಾ ಇನ್ಯಾವುದೋ ಕಾರಣಗಳಿಂದ ಇರುವ ಚರಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ, ಅನ್ಯ ವ್ಯವಸ್ಥೆ ಮಾಡದಿರುವುದು ಸಹ ಇಂತಹ ತೊಂದರೆಗಳನ್ನು ಹುಟ್ಟು ಹಾಕುತ್ತದೆ.

ಎರಡನೆಯದು : ಕೆರೆಗಳ ನಡುವೆ ಪರಸ್ಪರ ಸಂಪರ್ಕ ಇಲ್ಲದಿರುವುದು

ಇದು ಒಂದು ದೊಡ್ಡ ಸಮಸ್ಯೆ. ಇದನ್ನು ಸರಿಪಡಿಸುವ ಸಲುವಾಗಿ ಹಲವು ಕೆಲಸ ನಡೆಯುತ್ತಿದ್ದರೂ, ಸಧ್ಯಕ್ಕೆ ಅಥವಾ ಒಮ್ಮೆಲೇ ಪರಿಣಾಮ ಬೀರುವ ಅವಕಾಶಗಳು ಕಡಿಮೆ. ಇದರ ಬಗ್ಗೆ ದೊಡ್ಡ ಲೇಖನವನ್ನೇ ಬರೆಯಬೇಕಾಗುತ್ತದೆ. ಕೆರೆಗಳ ಅತಿಕ್ರಮಣ, ಕಾಲುವೆಗಳ ಅತಿಕ್ರಮಣ, ಕೆರೆಗಳ ಆಸುಪಾಸಿನಲ್ಲಿ ಘನತ್ಯಾಜ್ಯ ವಿಲೇವಾರಿ, ಕಟ್ಟಡ ಸಾಮಗ್ರಿಗಳ ವಿಲೇವಾರಿ ಹೀಗೆ ಅನೇಕ ಕಾರಣಗಳಿಂದ ಕೆರೆಗಳ ನಡುವಿನ ಸಂಪರ್ಕ ಕಡೆದು ಹೋಗಿದೆ. ಇದರಿಂದಾಗಿ ಸಂಗ್ರಹವಾಗುವ ನೀರಿನ ಪ್ರಮಾಣವನ್ನು ಹಂಚಿಕೊಳ್ಳಲು ಕೆರೆಗಳಿಗೆ ದಾರಿಯೇ ಇಲ್ಲಾ.


ಮೂರನೇಯದು : ಡಿ-ನೋಟಿಫೈ, ಪ್ರವಾಹ ಬಯಲು ಮತ್ತು ಜೌಗು ಪ್ರದೇಶಗಳ ಅತಿಕ್ರಮಣ

ಪ್ರವಾಹ ಬಯಲು ಮತ್ತು ಜೌಗು ಪ್ರದೇಶಗಳ ಅತಿಕ್ರಮಣ ಮಾಡಿ, ಕಣಿವೆಯಲ್ಲಿ, ಪ್ರವಾಹ ಬಯಲು ಪ್ರದೇಶದಲ್ಲಿ, ಕೆರೆಗಳಲ್ಲಿ ಅನೇಕ ಕಟ್ಟಡ ನಿರ್ಮಾಣವಾಗಿವೆ. ಕೆರೆಗಳು ಬತ್ತಿದ ಕಾರಣ, ಆ ಜಾಗವನ್ನು ಡಿ-ನೋಟಿಫೈ ಮಾಡಿ ಮಾಡಿದರು. ಕೆರೆಗಳು ಎಂದೂ ಸಾಯಲ್ಲ. ಕನಿಷ್ಠ ಪಕ್ಷ ಅವುಗಳು ಇಂಗು ಗುಂಡಿಗಳಂತೆ ಕೆಲಸ ಮಾಡಿ, ಅಂತರ್ಜಲವನ್ನು ಹೆಚ್ಚಿಸುತ್ತವೆ.

ನಾಲ್ಕನೆಯದು : ಕಿರಿದಾಯದ ಚರಂಡಿ ಹಾಗು ಕಾಂಕ್ರೀಟಿಕರಣ

ಚರಂಡಿಗಳನ್ನು ಅತ್ಯಂತ ಕಿರಿದಾಗಿ ಮಾಡಿ, ಅವುಗಳನ್ನು ಕಾಂಕ್ರೀಟಿನಿಂದ ಕಟ್ಟಿದ್ದು ಸಹ ಒಂದು ಕಾರಣವಾಗಬಹುದು. ಇದರಿಂದಾಗಿ ನೈಸರ್ಗಿಕವಾಗಿ, ಜಲವಿಜ್ಞಾನದಂತೆ ಕಾರ್ಯನಿರ್ವಹಿಸುತ್ತಿದ್ದ ಚರಂಡಿಗಳು ಮಾಯವಾದವು.

ಐದನೆಯದು: ಭೇದ್ಯವಾಗಿದ್ದ ಪ್ರದೇಶಗಳ ಕಬಳಿಕೆ

ಹರಿವ ನೀರನ್ನು ಹಿಂಗುತ್ತಿದ್ದ ವಿಶಾಲ ಜಾಗಗಳು, ಜಾಗ ಪ್ರದೇಶಗಳು ಕಾಲಾನುಕ್ರಮದಂತೆ ಕಡಿಮೆ ಆಗುತ್ತಾ ಹೋಗಿವೆ. ಸಸ್ಯ ಸಂಪತ್ತು ಮನುಷ್ಯನ ಆಸೆಗಳಿಂದಾಗಿ ನಶಿಸುತ್ತಿದೆ.

ಆರನೆಯದು: ಕಾಂಕ್ರೀಟಿಕರಣ ಮತ್ತು ನಗರೀಕರಣ

ಪ್ರಜ್ಞಾಶೂನ್ಯ ನಿರ್ಧಾರ, ಬೇಜವಾಬ್ದಾರಿ, ಅಯೋಜಿತ ನಗರೀಕರಣ ಮತ್ತು ಮೂರ್ಖ ರಾಜಕಾರಣದಿಂದಾಗಿ ಅನೇಕ ನಷ್ಟ ಬೆಂಗಳೂರಿಗೆ ಉಂಟಾಗಿದೆ. ಇಲ್ಲಿತನಕ ಬೆಂಗಳೂರು ಶೇ 78% ರಷ್ಟು ಕಾಂಕ್ರೀಟಿಕರಣವಾಗಿದೆ. ಹಿಂದಿನ ಒಂದು ವರದಿ ಪ್ರಕಾರ ಆ ಸಂಖ್ಯೆ 2020 ರ ವೇಳೆಗೆ 94%ರಷ್ಟು ಆಗಬೇಕಿತ್ತು. ಆದರೆ ಪೀಡೆಯಿಂದಾಗಿ ನಿಜವಾದ ಅಂಕಿ-ಅಂಶಗಳು ದೊರಕಿಲ್ಲ.

ಏಳನೆಯದು: ಪರಿಸರದ ಹಾನಿ

ಕ್ಷಿಪ್ರ ವೇಗದಲ್ಲಿ ಆಗುತ್ತಿರುವ ನಗರೀಕರಣವು ನಗರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಿಗೆ ಕಾರಣವಾಗಿದೆ. ಇದು ಗಂಭೀರ ಸಮಸ್ಯೆ ಆಗಿದ್ದು, ಪರಿಸರ ಅವನತಿಗೆ ಕಾರಣವಾಗಿದೆ. ಹಸಿರುತನ 1973 ರಲ್ಲಿ 68% ರಿಂದ 2020 ರಲ್ಲಿ ಕೇವಲ 3% ಕ್ಕೆ ಕುಸಿದಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

ಹಾಗಾದರೆ ಇದಕ್ಕೆಲ್ಲಾ ಕಾರಣೀಕರ್ತರು ಯಾರು?

ನಾವು...!! ಪ್ರಜೆಗಳು. ಸರ್ಕಾರವಲ್ಲ. ಪ್ರಜೆಗಳು. ಏಕೆಂದರೆ ಪ್ರಜೆಗಳಿಂದಲೇ ಸರ್ಕಾರ. ಹಾಗೆ ಅಂದ ಮಾತ್ರಕ್ಕೆ ಕೇವಲ ಮೂಲ ಬೆಂಗಳೂರಿಗರಲ್ಲ. ಇಲ್ಲಿ ಬಂದು ತಮ್ಮ ಕನಸು ಕಟ್ಟಿಕೊಂಡಿರುವ, ಎಲ್ಲಾ ಜನರಿಗೂ ಇದು ಅನ್ವಯಿಸುತ್ತದೆ.

ಚರಂಡಿಗಳು ತಿಪ್ಪೆಗಳಾಗಿವೆ. ನಾಗರಿಕರು ಚರಂಡಿಗಳಿಗೆ ಕಸವನ್ನು ಎಸೆಯುತ್ತಿದ್ದಾರೆ.
ಚರಂಡಿಗಳ ದಡದಲ್ಲಿ ಅಕ್ರಮ ವಸತಿ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣಗಳು ಸರ್ವತ್ರವಾಗಿದ್ದು, ನೀರು ಹರಿಯಲು ಯಾವುದೇ ಅವಕಾಶವಿಲ್ಲದಿರುವಾಗ, ನೀರು ತನಗೆಲ್ಲಿ ಸಾಧ್ಯವೋ ಅಲ್ಲಿ ಹರಿಯಲು ಶುರು ಮಾಡುತ್ತದೆ.
ಮಹಾಪಾಲಿಕೆಯ ಅಧಿಕಾರಿಗಳ ಸಹಕಾರದಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ನಡೆದಿರುವ ಅತಿಕ್ರಮಣಗಳು ಸಹ ಇದಕ್ಕೆ ಕಾರಣ. ಪಾಲಿಕೆಯ ಆಡಳಿತ ಚರಂಡಿ ಸ್ವಚ್ಛ ಮಾಡುವುದರಲ್ಲಿ ವಿಳಂಬ ಮಾಡಿದ್ದೂ ಸಹ ಒಂದು ಕಾರಣವಾಗಬಹುದು.
ಬೇಕಾಬಿಟ್ಟಿ, ಯೋಜನೆಗಳಿಲ್ಲದೆ ನಗರೀಕರಣ ಮಾಡಿದ್ದೂ ಸಹ ಒಂದು ಕಾರಣ.

ಕೊನೆಯದಾಗಿ, ಬೆಂಗಳೂರು ನಮ್ಮ ರಾಜ್ಯದ ರಾಜಧಾನಿ ಅಷ್ಟೇ ಅಲ್ಲಾ, ದೇಶದ ಐಟಿ ವಲಯದ ದಿಗ್ಗಜ ಸಹ. ಕೆಲ ಕಡೆ ಐಟಿಗಳು ಇಲ್ಲಿಂದ ಕಾಲು ಕೀಳಬೇಕು ಎಂಬೆಲ್ಲಾ ಮಾತುಗಳು ಕೇಳಿ ಬಂದವು. ಮಾನವ ಎಂಥವ ನೋಡಿ, ಕೆಲಸ ಆಗುವ ತನಕ ತೆಪ್ಪಗಿದ್ದವನು, ಎಲ್ಲೋ ಒಂದು ಬಾರಿ ಕಿರಿಕಿರಿ ಆಗಿದ್ದಕ್ಕೆ, ಅನ್ನ ಕೊಟ್ಟ ನೆಲವನ್ನೇ ತಿರಸ್ಕರಿಸಿ ಬಿಡುವಷ್ಟು ಕೀಳು ಮಟ್ಟಕ್ಕೆ ಇಳಿದು ಬಿಡುತ್ತಾನೆ. ಸರಿ ಇಷ್ಟವಿಲ್ಲ ಎಂದು ನೀವು ಬೇರೆಡೆ ಹೋದರೂ, ಅಲ್ಲಿ ಇಂಥದ್ದೇ ಸಮಸ್ಯೆ ಎದುರಾದರೆ, ಅಲ್ಲಿಂದಲೂ ನೀವು ಜಾಗ ಖಾಲಿ ಮಾಡಬೇಕಾದ ಸಂದರ್ಭ ಬಂದೇ ಬರುತ್ತದೆ.
"ಐಟಿ ಬೂಮ್" ಬರುವ ಮುನ್ನ ಬೆಂಗಳೂರು ಚೆನ್ನಾಗಿಯೇ ಇತ್ತು. ಇವಾಗ ಸಹ ಸುಂದರವಾಗಿಯೇ ಇದೆ. ಅದನ್ನು ನೋಡುವ ಕಣ್ಣು ಶುಭ್ರವಾಗಿರಬೇಕು. ಕಾಮಾಲೆ ಕಣ್ಣಿಗೆ ಎಲ್ಲ ಹಳದಿ ಎನ್ನುವಂತೆ, ಬರೀ ದೋಷಗಳನ್ನೇ ಇಟ್ಟುಕೊಂಡು ಅಳೆದು ತೂಗಲು ಹೊರಟರೆ, ನಿಮಗೆ ಕಾಣಿಸುವುದು ಬರೀ ನ್ಯೂನತೆಗಳೇ.

ಇದು ನನ್ನ ಮನೆ, ನನ್ನ ಊರು ಎಂದು ಭಾವಿಸಿದರೆ, ಇಂತಹ ಅಪ್ರಯೋಜಕ ಭಾವನೆಗಳಿಗೆ ಅವಕಾಶಗಳೇ ಇರುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು