ಕಳೆದ ಎರಡು ತಿಂಗಳುಗಳಿಂದ, ಅಫ್ಘಾನಿಸ್ತಾನದ (Afghanistan) ಮೇಲೆ ತಾಲಿಬಾನ್(Taliban) ತನ್ನ ನೆಲೆಯನ್ನು ಬಲಪಡಿಸುತ್ತಾ ಇರುವ ವಿಷಯ ನಿಮಗೆ ಗೊತ್ತೇ ಇದೆ. ಇತ್ತೀಚಿಗೆ, ತಾಲಿಬಾನ್ ಅಫ್ಘಾನಿಸ್ತಾನ ಗೆದ್ದು ಕೊಂಡು, ಅಲ್ಲಿ ತನ್ನ ಸರ್ಕಾರ ನಡೆಸಲು ಸಹ ತಯಾರಿ ನಡೆಸಿದೆ. ಮುಜಾಹಿದ್ದೀನ್,ತಾಲಿಬಾನ್, ಸೋವಿಯತ್  ಒಕ್ಕೂಟ ಮತ್ತು ಅಮೇರಿಕಾಗಳು ಹೇಗೆ ಅಫ್ಘಾನಿಸ್ತಾನವನ್ನು ತಮ್ಮ ಕಾಳಗದ ವೇದಿಕೆಯಾಗಿ ಮಾಡಿಕೊಂಡವು ಎಂಬುದೆಲ್ಲದರ ಬಗ್ಗೆ ನಾವು ಒಂದು ಚುಟುಕು ನೋಟ ಹಾಕೋಣ.

ಈ ತಾಲಿಬಾನಿಗಳು ಯಾರು? ಎಲ್ಲಿಂದ ಬಂದರು?

ಒಸಾಮಾ ಬಿನ್ ಲಾಡೆನ್(Bin Laden) ಗೂ, ತಾಲಿಬಾನ್ ಗೂ ಏನು ಸಂಬಂಧ ?  ಮತ್ತು ಅಮೆರಿಕಾ(America)  ಸೈನ್ಯ ಅಫ್ಘಾನಿಸ್ತಾನಕ್ಕೆ ಏಕೆ ಬಂತು? ಕಳುಹಿಸಿದ ಸೇನೆಯನ್ನ ಮತ್ತೆ ವಾಪಸ ಏಕೆ ಕರೆಸಿಕೊಂಡಿತು? 

ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬೇಕು ಅಲ್ಲವೇ?

ಬನ್ನಿ, ಈ ಭಯಾನಕ ಇತಿಹಾಸದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. 

ಸ್ನೇಹಿತರೇ, ನಾನು ಈ ಕಥೆಯನ್ನ 1979 ರಿಂದ ಆರಂಭಿಸುತ್ತೇನೆ.1979 ರಲ್ಲಿ, ಅಫ್ಘಾನಿಸ್ತಾನದ ಅಧ್ಯಕ್ಷ ಮತ್ತು ಕಮ್ಯುನಿಸ್ಟ್ ನಾಯಕ, ನೂರ್ ಮುಹಮ್ಮದ್ ತಾರಕಿ(nur muhammad taraki) ಯನ್ನು ಹತ್ಯೆಗಯ್ಯಲಾಯಿತು. ಈ ಘಟನೆಯ ನಂತರ, ಸೋವಿಯತ್(Soviet Union) ಒಕ್ಕೂಟವು, ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವ ಬೀರಲು ಪ್ರಾರಂಭಿಸಿತು. ತಾರಕಿಯು ಕಮ್ಯುನಿಸ್ಟ್ (Communist) ನಾಯಕನಾಗಿದ್ದರೂ ಸಹ, ಹಫೀಜುಲ್ಲಾ ಅಮೀನ್ ಎಂಬ ಮತ್ತೊಬ್ಬ ಕಮ್ಯುನಿಸ್ಟ್ ನಾಯಕ ಆತನನ್ನು ಹತ್ಯೆಗೈದ. ಮೊದಲು, ತಾರಕಿಯನ್ನು ಬಂದಿಸಿದ ಹಫೀಜುಲ್ಲಾ ಅಮೀನ್, ನಂತರ ಅವನನ್ನು ಕೊಂದು ಹಾಕಿದ.

ಕಮ್ಯುನಿಸ್ಟ್(Communist) ರ ನಡುವಿನ ಜಗಳ: 

ಇದೆಲ್ಲಾ ಆದಮೇಲೆ, ಅಫ್ಘಾನಿಸ್ತಾನದಲ್ಲಿದ್ದ ಕಮ್ಯುನಿಸ್ಟ್ ಪಕ್ಷ, ಎರಡು ಬಣಗಳಾಗಿ ಒಡೆದುಕೊಂಡಿತ್ತು. ಆ ಎರಡು ಬಣಗಳ ನಡುವೆ ಸಾಕಷ್ಟು ಜಗಳಗಳು ಆಗುತ್ತಲೇ ಇರುತ್ತಿದ್ದವು. ತಾರಕಿ ಎಲ್ಲರೂ ಅಂದುಕೊಂಡಷ್ಟು ಮುಗ್ಧನಾಗಿರಲಿಲ್ಲ. ಆತ ಎಷ್ಟು ಚಾಲಾಕಿನ ಮನುಷ್ಯ ಇದ್ದನೆಂದರೆ, ಹಿಂದೊಮ್ಮೆ ಹಫಿಜುಲ್ಲಾ ಅಮೀನ್ ನನ್ನು ಕೊಲೆ ಮಾಡಲು, ಮತ್ತು  ಬಂಡಾಯ ಹತ್ತಿಕ್ಕಲು ಪ್ರಯತ್ನಿಸಿದ್ದ.  

ಕಮ್ಯುನಿಸ್ಟ್(Communist) ಮತ್ತು ಇಸ್ಲಾಮಿಸ್ಟರುಗಳ (Islamist) ಒಳ-ಜಗಳ ಮತ್ತು ಇರಾನ್ ನ ಕ್ರಾಂತಿ : 

ಕಮ್ಯುನಿಸ್ಟ ಬಣಗಳ ನಡುವೆ ಒಳಜಗಳ ಒಂದೆಡೆಯಾದರೆ , ಅದೇ ಸಮಯದಲ್ಲಿ, ಕಮ್ಯುನಿಸ್ಟರು ಮತ್ತು ಇಸ್ಲಾಮಿಸ್ಟರುಗಳ  ನಡುವೆ ಸಹ ಯುದ್ಧಗಳು ಅದೇ ಸಮಯದಲ್ಲಿ ಆರಂಭವಾಗಿದ್ದವು. ಕಾಕತಾಳಿಯವೆಂಬಂತೆ, ಅದೇ ಸಮಯದಲ್ಲಿ  ಅಫ್ಘಾನಿಸ್ತಾನದ ನೆರೆಯ ರಾಷ್ಟ್ರವಾದ ಇರಾನ್‌ನಲ್ಲಿ, ಒಂದು ಬೃಹತ್ ಕ್ರಾಂತಿ (Revolution) ನಡೆಯಿತು. ಇದನ್ನು 1979 ಇರಾನಿಯನ್ ಕ್ರಾಂತಿ ಎಂದು ಕರೆಯಲಾಗುತ್ತದೆ.  ವಾಸ್ತವವಾಗಿ, ಆ ಸಮಯದಲ್ಲಿ ಇರಾನ್‌ನ ಪರಿಸ್ಥಿತಿ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ಒಂದೇ ತೆರನಾಗಿತ್ತು. ಒಂದು ಕಡೆ ಇಸ್ಲಾಮಿಸ್ಟರು (Islamist) ಇದ್ದರೆ, ಮತ್ತೊಂದೆಡೆ ಎಡಪಂಥೀಯರು (Leftist) ಅಥವಾ ಕಮ್ಯುನಿಸ್ಟರು ಇದ್ದರು. ಇರಾನ್ ರಾಜ ಮೊಹಮ್ಮದ್ ರೆಜಾ, ಆಧುನಿಕತೆ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟವನು. ಅವನು ತನ್ನ ದೇಶಕ್ಕಾಗಿ ಸಾಕಷ್ಟು ಆರ್ಥಿಕ ಅಭಿವೃದ್ಧಿಯನ್ನು ತಂದ.  ಜಾತ್ಯತೀತತೆಗೆ ಹೆಚ್ಚು ಒತ್ತುಕೊಟ್ಟು ಆಡಳಿತ ನಡೆಸುತ್ತಿದ್ದ.

ಆದರೆ ಅವನಿಗೆ ಸಿಂಹಾಸನ ಬಿಟ್ಟು ಇಳಿಯಲು ಮನಸ್ಸಿರಲಿಲ್ಲ. ಈ ಒಂದು ಕೆಟ್ಟ ದುರಾಸೆಯಿಂದಾಗಿ, ಅವನು ತನ್ನ ವಿರೋಧಿಗಳನ್ನು, ಪ್ರತಿಭಟನಾಕಾರರನ್ನು ಕೊಲೆ ಮಾಡಿಸಿದ. ರಾಜ-ವಿರೋಧಿ ಧ್ವನಿಗಳನ್ನು  ಹೊಸಕಿ ಹಾಕಲಾಯಿತು. ಕಡೆಗೊಮ್ಮೆ, ದೇಶದಲ್ಲಿ ರಾಜಕೀಯ ಪಕ್ಷಗಳೇ ಬೇಡ ಎಂದು, ಪಕ್ಷಗಳನ್ನು  ನಿಷೇಧಿಸಿದ. ಸಂಸತ್ತನ್ನು ವಜಾಗೊಳಿಸಿದ.  ಇವೆಲ್ಲಾ ಕಾರಣಗಳಿಂದಾಗಿ, ಬೇಸತ್ತ ಜನತೆ, ಅವನ ವಿರುದ್ಧ ದಂಗೆ ಎದ್ದು, ಕ್ರಾಂತಿ ನಡೆಸಿದರು. ಕ್ರಾಂತಿಯ ಫಲವಾಗಿ, 1979 ರಲ್ಲಿ, ಇಸ್ಲಾಮಿಸ್ಟರು ಇರಾನ್(Iran) ಅನ್ನು ವಶಪಡಿಸಿಕೊಂಡರು.  ಇರಾನ್‌ನಲ್ಲಿ ನಡೆದ ಈ ಘಟನೆಯಿಂದಾಗಿ, ಅಫ್ಘಾನಿಸ್ತಾನದ ಕಮ್ಯೂನಿಸ್ಟ್ ಪಕ್ಷದವನಾಗಿದ್ದ ಹಫೀಜುಲ್ಲಾ ಅಮೀನ್, ಅಫ್ಘಾನಿಸ್ತಾನವನ್ನು ಸಹ ಅದೆ ರೀತಿಯಾಗಿ ಇಸ್ಲಾಮಿಸ್ಟ್ ದೇಶ ಮಾಡಲು, ಕ್ರಾಂತಿ ಮಾಡಿಯಾರು ಎಂದು ಚಿಂತೆಗೆ ಒಳಗಾದ.  ಇದನ್ನು ತಪ್ಪಿಸಬೇಕೆಂದು ನಿರ್ಧಾರ ಕೈಗೊಂಡ ಅಮೀನ್, ಇಸ್ಲಾಂ ಧರ್ಮದ ಅನುಯಾಯಿಗಳನ್ನು ಖುಷಿ ಪಡಿಸಿ, ಸಂತುಷ್ಟರನ್ನಾಗಿ ಇಡಲು ಯೋಜನೆ ರೂಪಿಸತೊಡಗಿದ.  ಇದಕ್ಕಾಗಿಯೇ ಆತ, ಮಸೀದಿಗಳನ್ನು(Mosque) ನಿರ್ಮಿಸಲು ಆರಂಭಿಸಿದನು. ತನ್ನ ಭಾಷಣಗಳಲ್ಲಿ ಅಲ್ಲಾಹುವಿನ(Allah) ಹೆಸರನ್ನು ಸೇರಿಸಲಾರಂಭಿಸಿದ.  ಕುರಾನ್‌ನ ಪ್ರತಿಗಳನ್ನು ಎಲ್ಲರಲ್ಲಿ ವಿತರಿಸಿದ. ತಾನೊಬ್ಬ ಕಮ್ಯುನಿಸ್ಟ್ ಆಗಿದ್ದರೂ ಸಹ  ಇದೆಲ್ಲವನ್ನೂ ಮಾಡಲು ಹಿಂಜರಿಯಲಿಲ್ಲ. ಅವನು ಹೇಗಾದರೂ ಮಾಡಿ, ಇಸ್ಲಾಮಿಸ್ಟರನ್ನು ತನ್ನ ಕಡೆ ಸೇರಿಸಲು ಪ್ರಯತ್ನಿಸುತ್ತಿದ್ದ.  ಆದರೆ ಜನರು ಅವನನ್ನು ಇಷ್ಟಪಡಲಿಲ್ಲ. ಈ ಹಿಂದೆ ಆತ ಅಫ್ಘಾನಿಸ್ತಾನದ ಜನರ ಮೇಲೆ ಅನೇಕ ದೌರ್ಜನ್ಯಗಳನ್ನು ಎಸಗಿದ್ದ. ಅವನನ್ನ ಅಫ್ಘಾನಿಸ್ತಾನದಲ್ಲಿ, ಅರೆ ಮನೋರೋಗಿ ಎಂದು ಕರೆಯುತ್ತಿದ್ದರು. 

ಅಧಿಕಾರದ ದಾಹದಳ್ಳುರಿ: 

ಈ ಎಲ್ಲ ನಾಯಕರು, ಹಫೀಜುಲ್ಲಾ ಅಮೀನ್, ತಾರಕಿ ಮತ್ತು ಮೊಹಮ್ಮದ್ ರೆಜಾ, ಅವರುಗಳು ತಮ್ಮ ಸಿದ್ಧಾಂತವನ್ನು ಜಗತ್ತಿಗೆ ತೋರಿಸಿಕೊಳ್ಳಬಹುದು, ಆದರೆ ಎಲ್ಲರ ಸಿದ್ಧಾಂತದ ಹಿಂದೆ  ದುರಾಸೆಯ ವಿಷಯ ಇದ್ದೆ ಇರುತ್ತದೆ. ಅಧಿಕಾರದಲ್ಲಿ ಇರಬೇಕು ಎಂಬ  ದುರಾಸೆಗಾಗಿ, ಅದು ತಮ್ಮ ಸಿದ್ಧಾಂತಗಳ ವಿರುದ್ಧವಾಗಿದ್ದರೂ ಸಹ, ಎಷ್ಟೇ ನೀಚ ಮಟ್ಟಕ್ಕೆ ಇಳಿಯಲು ಸಹ ತಯಾರಿರುತ್ತಾರೆ.ತಮ್ಮ ಸಿದ್ಧಾಂತಗಳನ್ನು ಅದಕ್ಕೆ ತಕ್ಕಂತೆ ತಿರುಚುತ್ತಾರೆ. ಈ ಮನೋಭಾವ ಇಂದಿನ ರಾಜಕೀಯ ನಾಯಕರಲ್ಲಿಯೂ ಸಹ ಇದೆ. ಅವರು ಸೇರಿದ ರಾಜಕೀಯ ಪಕ್ಷದ ಸಿದ್ಧಾಂತಗಳು ಏನೇ ಇರಲಿ.ತಮ್ಮ ಅಧಿಕಾರದ ದಾಹವನ್ನು ಬಿಡಲು ಅವರು ಒಪ್ಪುವುದಿಲ್ಲ. ಅಧಿಕಾರದಲ್ಲಿ ಉಳಿಯಲು ಸರ್ವಾಧಿಕಾರಿಗಳು ಕೆಲ ನೆಪಗಳನ್ನು ಸಹ ಮಾಡುತ್ತಾರೆ. ಸೋವಿಯತ್ ಒಕ್ಕೂಟದಲ್ಲಿಯೂ ಸಹ ಲೆನಿನ್(Vladmir Lenin) ಅಧಿಕಾರ ಕಳೆದುಕೊಂಡಾಗ, ಸ್ಟಾಲಿನ್ ( (Joseph Stalin) ಅಧಿಕಾರಕ್ಕೆ ಬಂದ. ಕೆಲವು ಮಾಹಿತಿಗಳ ಪ್ರಕಾರ, ಆಮೇಲೆ ಸ್ಟಾಲಿನ್ ನು  ಲೆನಿನ್ ಗೆ ವಿಷಪ್ರಾಷನ ಮಾಡಿಸಿ ಕೊಂದ. ಮೊದ ಮೊದಲು ಅವನಿಗೆ ಸಾಥ್ ನೀಡಿದ್ದ ಲೆನಿನ್, ನಂತರದ ದಿನಗಳಲ್ಲಿ ಬೇರೊಬ್ಬರತ್ತ ಒಲವು ತೋರಿದ್ದಕ್ಕೆ, ಅಧಿಕಾರ್ ಉಳಿಸಿಕೊಳ್ಳಲು ಈ ಸಂಚು ಮಾಡಿದ್ದ. ಇದೊಂದು ಅಧಿಕಾರದ ದಾಹ ಎನ್ನಬಹುದು.

ಇಸ್ಲಾಮಿಸ್ಟರು ಮತ್ತು ಸೋವಿಯತ್ ಒಕ್ಕೂಟದ  ಮಧ್ಯ ಪ್ರವೇಶ:

ಈಗ ಅಫ್ಘಾನಿಸ್ತಾನ ವಿಷಯಕ್ಕೆ ಬರೋನ. ಮುಂದೆ ಏನಾಯಿತು ಎಂದರೆ, ಡಿಸೆಂಬರ್ 1979 ರಲ್ಲಿ, ಇಸ್ಲಾಮಿಸ್ಟರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವಷ್ಟರಲ್ಲಿ, ಸೋವಿಯತ್ ಒಕ್ಕೂಟವು ತನ್ನ ಸೈನ್ಯವನ್ನು ಕಳುಹಿಸುವ ಮೂಲಕ ಮಧ್ಯಪ್ರವೇಶಿಸಿತು.  ನಂತರ ಸೋವಿಯತ್ ಒಕ್ಕೂಟವು ಹಫಿಜುಲ್ಲಾ ಅಮೀನ್ ನನ್ನು ಕೊಂದು ಹಾಕಿತು.  ಅದಕ್ಕೆ ಸೈದ್ಧಾಂತಿಕ ಕಾರಣ ಹಾಗೂ ಭೌಗೋಳಿಕ ರಾಜಕೀಯ ಕಾರಣವೂ ಇತ್ತು.  

ಸೈದ್ಧಾಂತಿಕ ಕಾರಣವೆಂದರೆ,

ಅಫ್ಘಾನಿಸ್ತಾನದಲ್ಲಿ ಕಮ್ಯುನಿಸಂನ ಸಿದ್ಧಾಂತವು ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಮತ್ತು ಹಫಿಜುಲ್ಲಾ ಅಮೀನ್ ಕಮ್ಯುನಿಸಂ ಅನ್ನು ತಪ್ಪಾಗಿ ಪಾಲಿಸುತ್ತಿದ್ದ ಎಂದು.  ಸೋವಿಯತ್ ಒಕ್ಕೂಟವು ನಿಜವಾದ ಕಮ್ಯುನಿಸಂ ಸಿದ್ಧಾಂತಕ್ಕೆ ತನ್ನ ಬೆಂಬಲವನ್ನು ನೀಡಲು ಬಯಸಿ ದಾಳಿ ಮಾಡಿತು.  

ಭೌಗೋಳಿಕ ರಾಜಕೀಯ ಕಾರಣವೆಂದರೆ,

ಸೋವಿಯತ್ ಒಕ್ಕೂಟ (USSR) ಮತ್ತು ಯುಎಸ್ಎ(USA) ನಡುವೆ ಶೀತಲ ಸಮರ (Cold War) ಆಗಲೇ ಏರ್ಪಟ್ಟಿತ್ತು.  ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಲ್ಲಿ ಪ್ರಭಾವವನ್ನು ಬೆಳೆಸಿದರೆ, ಸೋವಿಯತ್ ಒಕ್ಕೂಟಕದ ಪ್ರಭಾವಕ್ಕೆ ಒಳಪಟ್ಟ ದೇಶಗಳ ಸಂಖ್ಯೆ ಜಾಸ್ತಿ ಆಗುತ್ತದೆ ಎಂಬ ನಂಬಿಕೆಯಿಂದ ದಾಳಿ ಮಾಡಿತ್ತು. ಯುಎಸ್ಎ ವಿರುದ್ಧದ ಹೋರಾಟದಲ್ಲಿ ಇದು ಸೋವಿಯತ್ ಒಕ್ಕೂಟಕ್ಕೆ ಒಂದು ದೊಡ್ಡ  ಗೆಲುವು ನೀಡುತ್ತದೆ ಎಂಬುದು ಇದರ ಲೆಕ್ಕಾಚಾರ. 

ಸೋವಿಯತ್ ಒಕ್ಕೂಟ ಬೆಂಬಲಿತ ಸರ್ಕಾರ: 

ಹಫೀಜುಲ್ಲಾ ಅಮೀನ್ ನನ್ನು ಕೊಂದ ನಂತರ, ಬಾಬ್ರಾಕ್ ಕರ್ಮಲ್ ನನ್ನು ಹೊಸ ಸರ್ಕಾರದ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. ಅವನು ಸೌರ್ ಕ್ರಾಂತಿಯ ನಾಯಕ ಕೂಡ ಆಗಿದ್ದ.  ಅಧಿಕಾರಕ್ಕೆ ಬಂದ ನಂತರ,  2,700 ಕ್ಕೂ ಹೆಚ್ಚು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿದರು. ಕೆಂಪು ಕಮ್ಯುನಿಸ್ಟ್ ಧ್ವಜವನ್ನು ಹೊಸದರೊಂದಿಗೆ ಬದಲಾಯಿಸಿದ. ಅಫ್ಘಾನಿಸ್ತಾನಕ್ಕೆ ಹೊಸ ಸಂವಿಧಾನವನ್ನು ತರುವ ಭರವಸೆ ನೀಡಿದ. ಇದರ ಹೊರತಾಗಿ, ಮುಕ್ತ ಚುನಾವಣೆ, ವಾಕ್ ಸ್ವಾತಂತ್ರ್ಯ, ಪ್ರತಿಭಟನೆಗೆ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಭರವಸೆಯನ್ನೂ ಸಹ ನೀಡಲಾಯಿತು.  ಅಂತಿಮವಾಗಿ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆ ಕಾಣುವಂತೆ ತೋರುತ್ತಿತ್ತು. ಈಗ ಅಫ್ಘಾನಿಸ್ತಾನವು ಸರಿಯಾದ ದಿಕ್ಕಿನಲ್ಲಿ ಚಲಿಸಬಹುದು ಎಂದೆಲ್ಲರೂ  ಭಾವಿಸಿದರು. ಆದರೆ ಯುಎಸ್ಎ ಗೆ, ಅಫ್ಘಾನಿಸ್ತಾನದ ಈ ಪ್ರಗತಿ, ಅದೂ ಸೊವಿಯಟ್ ಆಶೀರ್ವಾದದ ಈ  ಪ್ರಗತಿ, ಇಷ್ಟವಾಗಲಿಲ್ಲ. 

ಮುಜಾಹಿದ್ದೀನ್ ಮತ್ತು ಅಮೆರಿಕಾದ ಸೇಡಿನ ಆಟ : 

ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಸ್ಥಾಪಿಸಿರುವ ಸಂಗತಿ ಯುಎಸ್ಎ ಗೆ  ಅರಗಿಸಿಕೊಳ್ಳಲು ಆಗಲಿಲ್ಲ. ಇದಲ್ಲದೆ ವಿಯೆಟ್ನಾಂ ಮತ್ತು ಇಥಿಯೋಪಿಯಾದಂತಹ ದೇಶಗಳಲ್ಲಿಯೂ ಸಹ ಸೋವಿಯತ್ ಒಕ್ಕೂಟವು, ಇದೆ ರೀತಿಯಲ್ಲಿ ಅಮೆರಿಕವನ್ನು ಅವಮಾನಿಸಿತ್ತು.  ಈ ಶೀತಲ ಯುದ್ಧದಲ್ಲಿ ಅಮೆರಿಕ ಸೋವಿಯತ್ ಒಕ್ಕೂಟಕ್ಕಿಂತ ಒಂದು ಹೆಜ್ಜೆ ಕೆಳಗಿತ್ತು.  ಸೋವಿಯತ್ ಒಕ್ಕೂಟದ ವಿರುದ್ಧ ಸೇಡು ತೀರಿಸಿಕೊಳ್ಳಲು ಅಫ್ಘಾನಿಸ್ತಾನವನ್ನು ಒಂದು ಅವಕಾಶವಾಗಿ ಬಳಸಲು ಅಮೆರಿಕ ನಿರ್ಧರಿಸಿತು.  ಅವರು ಸೇಡನ್ನು ತೀರಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯ್ದರು . ಮತ್ತು ಆ ಸಮಯ ಬಂದೆ ಬಿಟ್ಟಿತು. ಅದೇ ಮುಜಾಹಿದ್ದೀನ್. 

ಆಪರೇಷನ್ ಸೈಕ್ಲೋನ್(Operation Cyclone)

ಅಫ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್ ಎಂಬ ವಿರೋಧ ಪಕ್ಷವನ್ನು ಬೆಂಬಲಿಸುವ ಮೂಲಕ, ಅಮೆರಿಕ ಸೇಡು ತೀರಿಸಿಕೊಳ್ಳಲು ತಯಾರಾಗಿತ್ತು. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಂತಹ ದೇಶಗಳು ಈಗಾಗಲೇ ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಸ್ಟ್ ಮುಜಾಹಿದ್ದೀನ್ ಅನ್ನು ಬೆಂಬಲಿಸುವ ಕೆಲಸಗಳನ್ನು ಶುರು ಮಾಡಿದ್ದವು.  ಇದು ಸಾಲದು ಎಂಬಂತೆ ದೊಡ್ಡಣ್ಣ ಅಮೆರಿಕವು ಸಹ  ಅವರೊಂದಿಗೆ ಕೈ ಜೋಡಿಸಿತು.  ಈ ಕೆಲಸ ಮಾಡಲು ಸಿಐಎ (CIA) ತನ್ನ ಅತಿದೊಡ್ಡ ರಹಸ್ಯ ಕಾರ್ಯಾಚರಣೆಯನ್ನು ನಡೆಸಿತು.  ಅದುವೇ  "ಆಪರೇಷನ್ ಸೈಕ್ಲೋನ್(Operation Cyclone)". ಆಗಿನ ಯುಎಸ್ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು $ 500,000 ನಷ್ಟು ರಹಸ್ಯ ಧನ ಸಹಾಯವನ್ನು, ಈ ಮುಜಾಹಿದೀನ್ ಗಳಿಗೆ 3 ನೇ ಜುಲೈ 1979 ನೀಡಲು ಅನುಮೋದನೆ ನೀಡಿದ್ದರು ಎಂದು ಆಗಿನ ಸಿಐಎ ನಿರ್ದೇಶಕ ರಾಬರ್ಟ್ ಗೇಟ್ಸ್ ಒಪ್ಪಿಕೊಂಡಿದ್ದಾರೆ. ರೊನಾಲ್ಡ್ ರೇಗನ್ (Ronald Reagan) ಅಧ್ಯಕ್ಷರಾದ ಮೇಲೂ ಸಹ ಈ ಧನ ಸಹಾಯ ನಡೆಯುತ್ತಲೇ ಇತ್ತು. ರೇಗನ್ ಮುಜಾಹಿದ್ದೀನ್ ಜೊತೆ ಇರುವ ಫೋಟೋಗಳೇ ಇದಕ್ಕೆ ಸಾಕ್ಷಿ.

Ronald Reagan with Mujahideen
ರೇಗನ್ ಮುಜಾಹಿದ್ದೀನ್ ಜೊತೆ ಇರುವ ಫೋಟೋ

ಅಮೆರಿಕದ ಸಿಐಎ, ಪಾಕಿಸ್ತಾನದ ಐಎಸ್‌ಐ, ಬ್ರಿಟಿಷ್ ಸೀಕ್ರೆಟ್ ಏಜೆನ್ಸಿ ಎಂಐ 6 ಮತ್ತು ಸೌದಿ ಅರೇಬಿಯಾ ಇಸ್ಲಾಮಿಸ್ಟ್ ಗಳು  ಮುಜಾಹಿದ್ದೀನ್ ಅನ್ನು ಬೆಂಬಲಿಸುತ್ತಿದ್ದವು. ತಾಲಿಬಾನ್ ಶೀರ್ಷಿಕೆಯಲ್ಲಿ ,ಈ ಮುಜಾಹಿದ್ದೀನ್ ಗಳು ಎಲ್ಲಿಂದ ಬಂದರು? ಅವರು ಯಾರು ? ಎಂದು ನಿಮಗೆ ಅನಿಸಬಹುದು. ತಾಳ್ಮೆಯಿಂದ ಓದಿ. ಮೊದ  ಮೊದಲು, ಅವರು ಪರ್ವತಗಳಲ್ಲಿ ಅಡಗಿ ಕೂತು  ಹೋರಾಡುವ ಗೆರಿಲ್ಲಾ ಹೋರಾಟಗಾರರು ಮಾತ್ರ ಆಗಿದ್ದರು. ಆದರೆ ದೊಡ್ಡ ದೊಡ್ಡ ಏಜೆನ್ಸಿಗಳ ಬೆಂಬಲವನ್ನು ಪಡೆದ ನಂತರ,  ಕೇವಲ ಶಸ್ತ್ರಾಸ್ತ್ರಗಳಲ್ಲದೇ, ಬಂದೂಕುಗಳು ಮಾತ್ರವಲ್ಲದೆ, ವಿಮಾನ ವಿರೋಧಿ ಕ್ಷಿಪಣಿಗಳು(Anti-Aircraft Missile) ಕೂಡ ಅವರ ಬತ್ತಳಿಕೆಗೆ ಬಂದು ಸೇರಿದವು. ಕಾಕತಾಳೀಯವೆಂಬಂತೆ ಆಗ ಸೋವಿಯತ್ ಒಕ್ಕೂಟವು, ತಾನು ಮಾಡಿದ ಹೋರಾಟದ ಪರಿಣಾಮಗಳನ್ನು ಅನುಭವಿಸಲು ಪ್ರಾರಂಭಿಸಿತ್ತು. 

ಅಮೇರಿಕಾ ಆಟದ ಮೊದಲ ಹೆಜ್ಜೆ ಮತ್ತು ಸೋವಿಯತ್ ಒಕ್ಕೂಟ ಸೇನೆಯ ನಿರ್ಗಮನ: 

1988 ರಲ್ಲಿ, ಅಫ್ಘಾನಿಸ್ತಾನದ ಅಧ್ಯಕ್ಷ ಮೊಹಮ್ಮದ್ ನಜೀಬುಲ್ಲಾ, ಪಾಕಿಸ್ತಾನದೊಂದಿಗೆ ಜಿನೀವಾ ಒಪ್ಪಂದಕ್ಕೆ ಸಹಿ ಹಾಕಿದರು.  ಇದು ಮೂಲತಃ ಶಾಂತಿ ಒಪ್ಪಂದವಾಗಿದ್ದು, ಯಾವುದೇ ದೇಶವು ಇತರ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಮೂಲ ವಿಷಯವಾಗಿತ್ತು. ಈ ಶಾಂತಿ ಒಪ್ಪಂದದ ಖಾತರಿಗಾರರಾಗಿ ಸೋವಿಯತ್ ಒಕ್ಕೂಟ ಮತ್ತು ಯುಎಸ್ಎ ಸಹ ಸಹಿ ಹಾಕಿದವು. ಸೋವಿಯತ್ ಒಕ್ಕೂಟ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡರೆ, ಯುಎಸ್ಎ ಮುಜಾಹಿದ್ದೀನ್ ಗೆ ಶಸ್ತ್ರಾಸ್ತ್ರಗಳನ್ನು ನೀಡುವುದನ್ನು ನಿಲ್ಲಿಸುತ್ತದೆ ಎಂದು ಯುಎಸ್ಎ ಭರವಸೆ ನೀಡಿತು. ಅಂತಿಮವಾಗಿ, 9 ವರ್ಷಗಳ ನಂತರ, ಫೆಬ್ರವರಿ 1989 ರಲ್ಲಿ, ಸೋವಿಯತ್ ಯೂನಿಯನ್ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡಿತು. ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನವನ್ನು ತೊರೆಯಲು ಈ ಒಪ್ಪಂದದ ಹೊರತಾಗಿ ಮತ್ತೆ ಹಲವು ಕಾರಣಗಳಿದ್ದವು. ಸೋವಿಯತ್ ಒಕ್ಕೂಟವು ಆಗ ಒಡೆಯಲು ಪ್ರಾರಂಭಿಸಿತ್ತು. ನಂತರ ಸೋವಿಯತ್ ಒಕ್ಕೂಟವು ಅನೇಕ ದೇಶಗಳಾಗಿ ವಿಭಜನೆಯಾಯಿತು. ಅವುಗಳಲ್ಲಿ ರಷ್ಯಾ ಪ್ರಮುಖ ದೇಶವಾಯಿತು. ಅದೊಂದು  ಬೇರೇನೇ ಕಥೆ, ನಾವು ಈಗ  ಅಫ್ಘಾನಿಸ್ತಾನದತ್ತ ಗಮನ ಹರಿಸಬೇಕು. 

ಶಕ್ತಿಯ ವಿಕೇಂದ್ರೀಕರಣ ಎಂಬ ಅಸ್ತ್ರ:  

ಈ ಮುಜಾಹಿದ್ದೀನ್ ಮತ್ತು ಸರ್ಕಾರದ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ನಜೀಬುಲ್ಲಾ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಾನೆ. ತನ್ನ ಕೈಯಲ್ಲಿರುವ ಶಕ್ತಿಯನ್ನು ಕಡಿಮೆ ಮಾಡುಕೊಂಡು, 1987 ರಲ್ಲಿ, ಅಫ್ಘಾನಿಸ್ತಾನಕ್ಕೆ ಹೊಸ ಸಂವಿಧಾನವನ್ನು ತರುತ್ತಾನೆ. ಅಫ್ಘಾನಿಸ್ತಾನವು ಕೇವಲ ಏಕಪಕ್ಷೀಯ ರಾಜ್ಯವಾಗುವುದನ್ನು ನಿಲ್ಲಿಸಿ, ಆಗಿನ ಕಾಲದ ಇತರ ಕಮ್ಯುನಿಸ್ಟ್ ದೇಶಗಳಂತೆ, ಬೇರೆ ಪಕ್ಷಗಳು ಸಹ  ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. 1988 ರಲ್ಲಿ, ಹೊಸ ಸಂಸತ್ ಚುನಾವಣೆಗಳನ್ನು ನಡೆಸಲಾಗುತ್ತದೆ, ಮತ್ತು ನಜೀಬುಲ್ಲಾ ಅವರ ಪಕ್ಷ, ಪಿಡಿಪಿಎ ಚುನಾವಣೆಯಲ್ಲಿ ಗೆಲ್ಲುತ್ತದೆ. ನಜೀಬುಲ್ಲಾ ಮತ್ತೆ ಅಧಿಕಾರಕ್ಕೆ ಬರುವನು.1990 ರಲ್ಲಿ, ಅಫ್ಘಾನಿಸ್ತಾನವನ್ನು ಇಸ್ಲಾಮಿಕ್ ಗಣರಾಜ್ಯವೆಂದು ಘೋಷಿಸಲಾಗಿತ್ತದೆ.  ಕಮ್ಯುನಿಸಂನ ಎಲ್ಲಾ ಉಲ್ಲೇಖಗಳನ್ನು ತೆಗೆದುಹಾಕಲಾಗುತ್ತದೆ. ನಜೀಬುಲ್ಲಾ ದೇಶದ ಧಾರ್ಮಿಕ ಸಂಪ್ರದಾಯವಾದಿ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ. ಹೀಗೆ ಮಾಡುವುದರಿಂದ ದೇಶದಲ್ಲಿ ಶಾಂತಿ ನೆಲೆಸಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು.ಅವನು ಸಹ ಅಫ್ಘಾನಿಸ್ತಾನಕ್ಕೆ ವಿದೇಶಿ ನೆರವು ಪಡೆಯಲು ಪ್ರಯತ್ನಿಸುತ್ತಾನೆ. ಖಾಸಗಿ ಹೂಡಿಕೆಯನ್ನು ಆರಂಭಿಸಲು ಅನುಮತಿ ನೀಡುತ್ತಾನೆ. ಆದರೆ ಇಷ್ಟೆಲ್ಲಾ ಆದಮೇಲೂ ಸಹ, ಅಮೆರಿಕಾ ಮುಜಾಹಿದ್ದೀನ್ ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸಲಿಲ್ಲ. ಅದೇ ರೀತಿ  ಮುಜಾಹಿದ್ದೀನ್ ಗುಂಪು ಸ್ವಲ್ಪವೂ ಹಿಂದೆ ಸರಿಯಲಿಲ್ಲ.

ಚುನಾವಣೆ ಬಹಿಷ್ಕಾರ, ಸೋವಿಯತ್ ಒಕ್ಕೂಟ ವಿಭಜನೆ ಮತ್ತು ತಾಲಿಬಾನ್ ಹುಟ್ಟು: 

ನಜೀಬುಲ್ಲಾ ನಡೆಸಿದ ಚುನಾವಣೆಯನ್ನು ಮುಜಾಹಿದ್ದೀನ್ ಗುಂಪು ಬಹಿಷ್ಕರಿಸಿದರು. ಇಸ್ಲಾಂ ಇನ್ನೂ ಅಪಾಯದಲ್ಲಿದೆ ಎಂದು ಹೇಳುತ್ತಾ, ಅಂತರ್ಯುದ್ಧವನ್ನು  ಮುಂದುವರಿಸುತ್ತಾರೆ.  ಸೋವಿಯತ್ ಒಕ್ಕೂಟವು ವಿದೇಶಿ ನೆರವನ್ನು ನೀಡುವ ಮೂಲಕ ನಜೀಬುಲ್ಲಾಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಆದರೆ ಇದು ಮುಂದೆ ಆಗುವ ಘಟನೆಗಳಿಗೆ ಇವೇನು ಸಾಕಾಗುತ್ತಿರಲಿಲ್ಲ. ಏಕೆಂದರೆ 1991 ರಲ್ಲಿ, ಸೋವಿಯತ್ ಒಕ್ಕೂಟವು ತನ್ನನ್ನು ತಾನೇ ವಿಭಜಿಸಿಕೊಂಡಿತು. 1992 ರಲ್ಲಿ, ಮುಜಾಹಿದ್ದೀನ್, ಆಂತರಿಕ ಯುದ್ಧದಲ್ಲಿ ಗೆದ್ದಿತು.  ಮುಜಾಹಿದ್ದೀನ್ ಇಸ್ಲಾಮಿಸ್ಟ್ ಗುಂಪಾಗಿದ್ದರೂ, ಅದು ವಿವಿಧ ಜನಾಂಗಗಳ ಜನರನ್ನು ಒಳಗೊಂಡಿತ್ತು.  ಮತ್ತು ಮುಜಾಹಿದ್ದೀನ್ ನಲ್ಲಿಯೂ, ಅಧಿಕಾರದ ದುರಾಸೆಯುಳ್ಳ ಅನೇಕ ಜನರಿದ್ದರು.  ಅಧಿಕಾರಕ್ಕಾಗಿ ಮುಜಾಹಿದ್ದೀನ್ ಗುಂಪಿನಲ್ಲಿ ಒಳಜಗಳ ಆರಂಭವಾಗುತ್ತದೆ.  ಅಂತಿಮವಾಗಿ, 1992 ರಲ್ಲಿ, ಒಬ್ಬ ವ್ಯಕ್ತಿಯು ಅಧಿಕಾರಕ್ಕೆ ಬಂದನು.  ಆತ ಇಸ್ಲಾಮಿಕ್ ಸ್ಟೇಟ್ ಆಫ್ ಅಫ್ಘಾನಿಸ್ತಾನದ ಹೊಸ ನಾಯಕನಾಗುತ್ತಾನೆ.  ಅವನ ಹೆಸರು ಬುರ್ಹಾನುದ್ದೀನ್ ರಬ್ಬಾನಿ (Burhanuddin Rabbani). ಇನ್ನೇನು ಎಲ್ಲಾ ಮುಗಿಯಿತು ಅನ್ನುವಷ್ಟರಲ್ಲಿ, ಕೆಲವು ವರ್ಷಗಳಲ್ಲೇ, ಹೊಸ ಸಂಘಟನೆ ಹುಟ್ಟಿಕೊಂಡಿತು. ಅದುವೇ, ತಾಲಿಬಾನ್.  

1996 ರಲ್ಲಿ, ತಾಲಿಬಾನ್ ಈ ಇಸ್ಲಾಮಿಸ್ಟ್ ಮುಜಾಹಿದ್ದೀನ್ ನಾಯಕನನ್ನು ಅಧಿಕಾರದಿಂದ ತೆಗೆದುಹಾಕಿತು.  ತಾಲಿಬಾನ್‌ಗಳು ಎಂದರೆ ಯಾರು?  ಪಾಷ್ಟೋ ಭಾಷೆಯಲ್ಲಿ, 'ತಾಲಿಬಾನ್' ಎಂದರೆ ವಿದ್ಯಾರ್ಥಿ.  ಆರಂಭದಲ್ಲಿ, ಈ ತಾಲಿಬಾನ್ ಗುಂಪಿನ ನಾಯಕ ಮುಲ್ಲಾ ಒಮರ್ ಆಗಿದ್ದ. ಮೊದಲಿಗೆ  50 ವಿದ್ಯಾರ್ಥಿಗಳೊಂದಿಗೆ ಈ ಗುಂಪನ್ನು ಹುಟ್ಟು ಹಾಕಿದ. ಸಮಯ ಕಳೆದಂತೆ, ಸಂಘರ್ಷದ ಸಮಯದಲ್ಲಿ ದೇಶ ಬಿಟ್ಟು ಹೋಗಿದ್ದ ಕೆಲವು ನಿರಾಶ್ರಿತರು, ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಮರಳಿದರು. ಅವರು ನಂತರ ಈ ತಾಲಿಬಾನ್ ಗುಂಪಿನ ಭಾಗವಾದರು. ನೋಡ ನೋಡುತ್ತಲೇ, ಈ ಗುಂಪು ಧಾರ್ಮಿಕ ಉಗ್ರಗಾಮಿಗಳಾಗಿ ವರ್ತಿಸತೊಡಗಿದರು.  ಮುಜಾಹಿದ್ದೀನ್ ಗೆ ಹೋಲಿಸಿದರೆ, ಇವರು ಇನ್ನೂ ಹೆಚ್ಚು ಬಲಪಂಥೀಯ ಜನರಾಗಿದ್ದರು. ಮೊದಲು ಹೇಳಿದಂತೆ, ಪಾಕ್ ನಲ್ಲಿದ್ದ ಆಫ್ಘನ್ ನಿರಾಶ್ರಿತರು, ಪಾಕಿಸ್ತಾನದ ಕೆಲವು ಶಾಲೆಗಳಲ್ಲಿ ಉಗ್ರವಾದವನ್ನು ಕಲಿತಿದ್ದರು. ಆದರೆ ಆಗ ಅದಕ್ಕೆ ಧರ್ಮದ ತಳಕು ಇರಲಿಲ್ಲ.

ತಾಲಿಬಾನ್ ಬೆಳೆದ ರೀತಿ ( The Rise of Talibaan ) : 

ಮೊದಲೇ ಹೇಳಿದಂತೆ, ಮುಜಾಹಿದ್ದೀನ್ ನಲ್ಲಿ ಅನೇಕ ಜನಾಂಗೀಯ ಗುಂಪುಗಳಿದ್ದವು. ತಾಲಿಬಾನ್ ಕೂಡ, ಇಸ್ಲಾಮಿಸ್ಟ್‌ಗಳಂತೆ,  ಪಶ್ತೂನ್ ರಾಷ್ಟ್ರೀಯತೆಯ ಸಿದ್ಧಾಂತವನ್ನು ನಂಬಿದ್ದರು. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ತಾಲಿಬಾನ್‌ಗಳನ್ನು ಬೆಂಬಲಿಸಿದವು. ಕೆಲವು ಕಡೆ ಅಮೆರಿಕವೇ ತಾಲಿಬಾನ್ ಅನ್ನು ಸೃಷ್ಟಿಸಿತು ಎಂದು ಹೇಳಲಾಗಿದೆ. ಹಾಗೆ ನೋಡಿದರೆ, ಹೊರನೋಟಕ್ಕೆ ಇದು ನಿಜವಲ್ಲ. ಆದರೆ ಪ್ರಾಯೋಗಿಕವಾಗಿ ಅಳೆದಾಗ, ಈ ವಾದಕ್ಕೆ ಸ್ವಲ್ಪ ತೂಕ ಕಾಣಿಸುತ್ತದೆ.  ಅಮೇರಿಕಾ ಮೂಲ ಪ್ರಯತ್ನ , ಅಫಘಾನಿಸ್ತಾನಕ್ಕೆ ಪ್ರಜಾಪ್ರಭುತ್ವವನ್ನು ಕೊಡುವ ಯೋಜನೆ ಆಗಿತ್ತು. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಸಹ ಮಾಡಿತ್ತು. ಅವುಗಳಲ್ಲಿ ಮುಜಾಹಿದ್ದೀನ್ ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಒಂದಾಗಿತ್ತು. ಆದರೆ ಈ ಪ್ರಯತ್ನವೇ ಪ್ರಜಾಪ್ರಭುತ್ವವನ್ನು ನಾಶವಾಗುವಂತೆ ಮಾಡಿತು ಅಂತ ಹೇಳಿದರೆ ತಪ್ಪಾಗಲ್ಲ. ಇಂತಹ ಪ್ರಯತ್ನಗಳಿಂದಾಗಿ, ತಾಲಿಬಾನರ ಹುಟ್ಟನ್ನು ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಯಾಯಿತು. ಕೇವಲ ಆಯುಧಗಳು ಮಾತ್ರವಲ್ಲದೇ, ಅಫ್ಘಾನಿಸ್ತಾನದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಲು ಸಹ ಅಮೆರಿಕವು ಲಕ್ಷಾಂತರ ಡಾಲರ್ಗಳನ್ನು ಖರ್ಚು ಮಾಡಿತು. ಈ ಪುಸ್ತಕಗಳು ಹಿಂಸಾತ್ಮಕ ಚಿತ್ರಗಳಿಂದ ತುಂಬಿದ್ದವು. ಹೆಚ್ಚಾಗಿ ಇವುಗಳನ್ನು ಉಗ್ರವಾದ ಸಿದ್ಧಾಂತದ  ಪ್ರಚಾರ ಮಾಡಲು ಬಳಸಲಾಯ್ತು.  ನಂತರ, ಅಮೆರಿಕದ ಧನಸಹಾಯದಿಂದ ಪಡೆದ ಈ ಪುಸ್ತಕಗಳನ್ನು ತಾಲಿಬಾನ್ ಬಳಸಿಕೊಂಡಿತು. ತನ್ನ ಉಗ್ರವಾದವನ್ನು ಇನ್ನೂ  ಹೆಚ್ಚು ಜನರಲ್ಲಿ ತಲುಪಿಸುವಲ್ಲಿ, ಸಫಲವಾಯ್ತು. ಸೆಪ್ಟೆಂಬರ್ 1996 ರ ಹೊತ್ತಿಗೆ, ತಾಲಿಬಾನ್ ಯಶಸ್ವಿಯಾಗಿ ಕಾಬೂಲ್ ಅನ್ನು ವಶಪಡಿಸಿಕೊಂಡು ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ ಅನ್ನು ಸ್ಥಾಪಿಸಿತು. ತಾಲಿಬಾನ್ ಜನಪ್ರಿಯವಾಗಲು ಅಥವಾ ಅಷ್ಟಿತ್ವಕ್ಕೆ ಬರಲು ಹಲವು ಕಾರಣಗಳಿವೆ,

  • ಮುಜಾಹಿದ್ದೀನ್ ನ ಮಿತಿಮೀರಿದ ವರ್ತನೆ ಮತ್ತು 
  • ಸೋವಿಯತ್ ಅನ್ನು ಹೊರಹಾಕಿದ ನಂತರ ಉಂಟಾದ ಅಂತಃಕಲಹದಿಂದ ಬೇಸತ್ತ ಅಫ್ಘಾನಿಸ್ತಾನರು, ತಾಲಿಬಾನರನ್ನು ಮೊದಲು ಸ್ವಾಗತಿಸಿದರು. 
  • ನೈಋತ್ಯ ಅಫ್ಘಾನಿಸ್ತಾನನಲ್ಲಿ ಅವರ ಆಡಳಿತ ಬಲು ಜನಪ್ರಿಯವಾಗಿತ್ತು. ಭ್ರಷ್ಟಾಚಾರ ರಹಿತ ಆಡಳಿತ ಇವರ ಪ್ಲಸ್ ಪಾಯಿಂಟ್ ಆಗಿತ್ತು. 
  • ಕಾನೂನು ಅತಂತ್ರತೆ ಇದ್ದ ಮುಜಾಹಿದ್ದೀನ್ ಆಡಳಿತದಿಂದ ಜನ ರೋಸಿ ಹೋಗಿಯಿದ್ದರು. ತಾಲಿಬಾನ್ ಬಂದರೆ ಉತ್ತಮ ನ್ಯಾಯ ವ್ಯವಸ್ಥೆ ಬರುತ್ತದೆ ಎಂದು ನಂಬಿದ್ದರು.
  • ಮುಖ್ಯವಾಗಿ ತಾಲಿಬಾನಿಗಳು ಜಾನ್ ಜೀವನಕ್ಕೆ ಬೇಕಾದ ಮೂಲಸೌಕರ್ಯವಾದ ರಸ್ತೆ ನಿರ್ಮಾಣಕ್ಕೆ ಉತ್ತೇಜನ ಕೊಡುತ್ತಿದ್ದರು.
  • ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ  ವಾಣಿಜ್ಯಿ ವಹಿವಾಟಿಗೆ ಮುಕ್ತ ವೇದಿಕೆ ನೀಡಿದ್ದರು.

ತಾಲಿಬಾನ್ ನ ನಿಜ ಬಣ್ಣದ  ಅರಿವು: 

ಆರಂಭದಲ್ಲಿ, ಸಾಮಾನ್ಯ ಜನರು ತಾಲಿಬಾನ್‌ಗೆ ಬೆಂಬಲ ನೀಡುತ್ತಿದ್ದರು. ಏಕೆಂದರೆ ಅವರು ಅಂತಿಮವಾಗಿ ದೇಶದಲ್ಲಿ ಇವರ ಮೂಲಕ ಸ್ಥಿರತೆ ಬರಬಹುದೆಂದು ನಿರೀಕ್ಷಿಸಿದ್ದರು.  ಹಲವು ವರ್ಷಗಳಿಂದ ನಡೆಯುತ್ತಿದ್ದ ಹೋರಾಟವು ಕೊನೆಗೊಂಡಿತು. ಆರಂಭದಲ್ಲಿ, ತಾಲಿಬಾನ್‌ಗಳು ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಿಗೆ ಶಾಂತಿಯನ್ನು ತಂದವು. ಆದರೆ ಕಾಲಾನಂತರದಲ್ಲಿ, ತಾಲಿಬಾನ್‌ನ ಸಂಪ್ರದಾಯವಾದಿ ಸಿದ್ಧಾಂತವು ಮುಂಚೂಣಿಗೆ ಬರಲು ಶುರು ಮಾಡಿದವು. ಅದರ ಒಂದು ಸಣ್ಣ ಝಲಕ್ ಅನ್ನು ಸಹ ಸಾಮಾನ್ಯ ಜನರು ಕಾಣಲು ಶುರು ಮಾಡಿದರು.  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಹಳಷ್ಟು ವಿಷಯಗಳ ಮೇಲೆ ನಿಷೇಧ ಹೇರಲು ಶುರುವಿಟ್ಟರು. ನಿಷೇಧಿತ ವಸ್ತುಗಳ ಪಟ್ಟಿ ತುಂಬಾ ಉದ್ದವಾಗಿದ್ದು, ಆ ವಸ್ತುಗಳ ಹೆಸರು ಕೇಳಿದರೆ ನಿಮ್ಮ ಕಿವಿಗಳನ್ನೇ ನೀವು ನಂಬುವುದಿಲ್ಲ. ತಾಲಿಬಾನ್ ಆಳ್ವಿಕೆಯಲ್ಲಿ, ಪುರುಷರು ಗಡ್ಡವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕಾಗಿತ್ತು.  ಮತ್ತು ಮಹಿಳೆಯರು ತಮ್ಮ ದೇಹವನ್ನು ಬುರ್ಖಾದಲ್ಲಿ ಮುಚ್ಚಿಕೊಳ್ಳಬೇಕಾಗಿತ್ತು.  ಪುರುಷ ಸಂಬಂಧಿಯೊಬ್ಬ ಜತೆಗೆ ಇರದೇ ಮಹಿಳೆಯರು ತಮ್ಮ ಮನೆ ಹೊರ ಬರಲು ಸಾಧ್ಯವಿರಲಿಲ್ಲ. ತಾಲಿಬಾನ್ ಪಶ್ತುನ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದರಿಂದ, ಪಶ್ತುನ್ ಅಲ್ಲದ ಜನಾಂಗೀಯರು ಬಲಿಯಾಗಲು ಶುರು ಆದರು.  ಸಾವಿರಾರು ಮುಸ್ಲಿಮರು ಕೊಲ್ಲಲ್ಪಟ್ಟರು.  ಕ್ರಿಶ್ಚಿಯನ್ನರ ವಿರುದ್ಧ ಕಾನೂನು ಕ್ರಮ ಜರುಗಿಸಲ್ಪಟ್ಟಿತು.  ಹಿಂದುಗಳಿಗೆ ಬ್ಯಾಡ್ಜ್ ನೀಡಲಾಯಿತು. ಹೀಗೆ ಮಾಡಿ ಅವರನ್ನು  ಮುಸ್ಲಿಮರಿಂದ ಪ್ರತ್ಯೇಕಿಸಬಹುದು ಎಂಬ ಆಲೋಚನೆ ತಾಲಿಬಾನ್ ದಾಗಿತ್ತು. 

ಅಫ್ಘಾನಿಸ್ತಾನದ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಭಾಗವೆಂದರೆ ಬುದ್ಧನ ಪ್ರತಿಮೆಗಳು.  ಅವುಗಳನ್ನು ತಾಲಿಬಾನ್ ನಾಶಪಡಿಸಿತು. ಮಾಜಿ ಅಧ್ಯಕ್ಷ ನಜೀಬುಲ್ಲಾ ಅವರನ್ನು ಕೂಡ ಕೊಲೆ ಮಾಡಲಾಯ್ತು.  ಪ್ರಪಂಚದಾದ್ಯಂತದ ಜನರು ಮತ್ತು ಸರ್ಕಾರಗಳು ಇವೆಲ್ಲ ಸಂಭವಿಸಿದ ನಂತರ ತಾಲಿಬಾನ್ ಅನ್ನು ಟೀಕಿಸಲು ಶುರು ಮಾಡಿದರು. ಆದರೆ ತಾಲಿಬಾನ್ ಅನ್ನು ಕಾನೂನುಬದ್ಧ ಸರ್ಕಾರವೆಂದು ಮೂರು ದೇಶಗಳು ಸಮರ್ಥಿಸಿಕೊಂಡವು.  ಆ ಮೂರು ದೇಶಗಳೆಂದರೆ: ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ.  

ಮತ್ತೊಂದು ಹುಸಿ ಪ್ರಯತ್ನ ಹಾಗು ಅವಳಿ ಕಟ್ಟಡದ ಮೇಲಿನ ದಾಳಿ : 

1990 ರ ಕೊನೆಯಲ್ಲಿ, ಕೆಲವು ಮುಜಾಹಿದ್ದೀನ್ ಪಡೆಗಳು ತಾಲಿಬಾನ್ ವಿರುದ್ಧ ಹೋರಾಡಲು ಪ್ರಯತ್ನಿಸಿದವು.  ಇವುಗಳನ್ನು ಉತ್ತರ ಮೈತ್ರಿ ಎಂದು ಕರೆಯಲಾಗುತ್ತದೆ.  ಅಹ್ಮದ್ ಶಾ ಮಸೂದ್ ಅವರ ಮುಖ್ಯಸ್ಥರಾಗಿದ್ದರು.  ಆದರೆ 2001 ರಲ್ಲಿ, ಉತ್ತರ ಒಕ್ಕೂಟವು ಈ ಹೋರಾಟವನ್ನು ಕಳೆದುಕೊಳ್ಳುತ್ತದೆ. ಅಹ್ಮದ್ ಶಾ ಮಸೂದ್ ಕೂಡ ಹತನಾಗುತ್ತಾನೆ.  ಇದು ಸಂಭವಿಸಿದ ಕೇವಲ 2 ದಿನಗಳ ನಂತರ, ಅಲ್ ಖೈದಾ ಎಂಬ ಭಯೋತ್ಪಾದಕ ಗುಂಪು 'ಯುಎಸ್ಎ'ನ  WTO ಮೇಲೆ,  9/11 ದಾಳಿ ನಡೆಸಿತು. ಇದು ಜಗತ್ತಿನ ದಿಕ್ಕನ್ನೇ ಬದಲಾಯಿಸಿತು. ಆ ಸಮಯದಲ್ಲಿ ಅಲ್ ಖೈದಾ ನಾಯಕ, ಸೌದಿ ಭಯೋತ್ಪಾದಕ, ಒಸಾಮಾ ಬಿನ್ ಲಾಡೆನ್ (Osama bin Laden) ಆಗಿದ್ದ . ಒಸಾಮಾ ಬಿನ್ ಲಾಡೆನ್ ಗೆ ಆಶ್ರಯ ನೀಡಲು ತಾಲಿಬಾನ್ ಸಹಾಯ ಮಾಡಿತು. ತನ್ನ ದೇಶದಲ್ಲಿ ನೀವು ಸುರಕ್ಷಿತರಾಗಿ ಇರುವಿರಿ ಎಂದು ಆಶ್ವಾಸನೆ ಸಹ ನೀಡಿತು. ಆಗ ಒಸಾಮ ಬಿನ್ ಲಾಡೆನ್ ಅಮೆರಿಕಕ್ಕೆ ಪತ್ರವೊಂದನ್ನು ಬರೆದ, ಅದರಲ್ಲಿ 9/11 ದಾಳಿಗೆ ಕಾರಣಗಳನ್ನು ಉಲ್ಲೇಖಿಸಿದ್ದ. ಸೋಮಾಲಿಯಾ, ಲಿಬಿಯಾ, ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಅಮೆರಿಕ ನಡೆಸುತ್ತಿರುವ ಕಾಳದಂಧೆಗೆ  ಪ್ರತೀಕಾರವಾಗಿ ದಾಳಿ ಮಾಡಲಾಗಿದೆ ಎಂದು ಬರೆದಿದ್ದ. ಆ ದೇಶಗಳಲ್ಲಿನ ಮುಸ್ಲಿಮರ ವಿರುದ್ಧ ಅಮೆರಿಕ ಯುದ್ಧ ಅಪರಾಧಗಳನ್ನು ಮಾಡುತ್ತಿದೆ ಎಂದು ಹೇಳುವ ಮೂಲಕ ದಾಳಿಗೆ  ಒಂದು ಸಮರ್ಥನೆಯನ್ನು ನೀಡಿದ.  ಈ ಪ್ರತೀಕಾರಕ್ಕಾಗಿ ಅವನು 9/11 ದಾಳಿ ಮಾಡಿದ. ಇದು ಅಮೆರಿಕನ್ನರ ರಕ್ತ ಕುಡಿಯುವಂತೆ ಮಾಡಿತು. ತಾನು ಸಹ 9/11 ದಾಳಿಗೆ ಸೇಡು ತೀರಿಸಿಕೊಳ್ಳಲೇ ಬೇಕೆಂದು ಹಠಕ್ಕೆ ನಿಲ್ಲುತ್ತದೆ.

Attack On Twin Towers of WTO, 9/11
WTO, 9/11 ಅವಳಿ ಗೋಪುರಗಳ ಮೇಲೆ ದಾಳಿ

ರಂಗಕ್ಕೆ ಇಳಿದ ಅಮೇರಿಕಾ : 

ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುತ್ತದೆ.  ಭಯೋತ್ಪಾದಕರ ಅಡಗುತಾಣ ಎಂದು ಅನಿಸಿದ ಸ್ಥಳದ ಮೇಲೆಲ್ಲಾ  ಅಮೆರಿಕವು ವಾಯುದಾಳಿ ನಡೆಸುತ್ತದೆ. ವಾಯುದಾಳಿಗಳನ್ನು ಎಂದ ಮೇಲೆ ಅದರ ಅಡ್ಡ ಪರಿಣಾಮಗಳು ಇದ್ದೆ ಇರುತ್ತವೆ. ಇದರಲ್ಲಿ ಕೆಲ ನಾಗರಿಕರು ಕೂಡ ಸಾಯುತ್ತಾರೆ. ಆದರೆ ಮುಜಾಹಿದ್ದೀನ್ ನ ಉತ್ತರ ಒಕ್ಕೂಟದ ಬೆಂಬಲದೊಂದಿಗೆ, ಡಿಸೆಂಬರ್ 2001 ರ ಹೊತ್ತಿಗೆ, USAಯು ತಾಲಿಬಾನ್ ಅನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿತು. ಅಹ್ಮದ್ ಷಾ ಮಸೂದ್ ನ ಸಲಹೆ ಮೇರೆಗೆ, ಹಮೀದ್ ಕರ್ಜಾಯ್ ಅಫ್ಘಾನಿಸ್ತಾನದ ಹಂಗಾಮಿ ಸರ್ಕಾರದ ಹೊಸ ಅಧ್ಯಕ್ಷರಾದರು.  2004 ರಲ್ಲಿ, ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಹೊಸ ಸಂವಿಧಾನವನ್ನು ಅಂಗೀಕರಿಸಲಾಯಿತು.  ಚುನಾವಣೆಗಳು ನಡೆದವು.  ಮತ್ತು 6,000,000 ಕ್ಕಿಂತ ಹೆಚ್ಚು ಆಫ್ಘನ್ನರು ಈ ಚುನಾವಣೆಯಲ್ಲಿ ಮತ ಚಲಾಯಿಸಿದರು. ಕರ್ಜಾಯ್ ಈ ಚುನಾವಣೆಯಲ್ಲಿ ಗೆದ್ದು ಅಫ್ಘಾನಿಸ್ತಾನದ ಹೊಸ ಅಧ್ಯಕ್ಷರಾದರು. 

ಕರ್ಜಾಯ ಭಾರತದೊಂದಿಗೆ ಕೆಲವು ಉತ್ತಮ ಸಂಬಂಧಗಳನ್ನು ಸ್ಥಾಪಿಸುತ್ತಾರೆ. ಈ ಸಮಯದಲ್ಲಿ ಅಫ್ಘಾನಿಸ್ತಾನ ಮತ್ತು ಭಾರತದ ಸಂಬಂಧಗಳು ಸಾಕಷ್ಟು ಪ್ರಬಲವಾಗಿದ್ದವು.  ಮತ್ತೊಂದೆಡೆ, ಯುಎಸ್ಎ, ಪಾಕಿಸ್ತಾನದಲ್ಲಿ ಬಾಂಬ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸುತ್ತದೆ.  ಅಲ್ಲಿನ ತಾಲಿಬಾನ್ ಅಡಗುತಾಣಗಳನ್ನು ಹೊಡೆದು ಹಾಕುತ್ತದೆ.  2011 ರಲ್ಲಿ, ಒಸಾಮಾ ಬಿನ್ ಲಾಡೆನ್ ಅನ್ನು ಯುಎಸ್ ಪಡೆಗಳು ಕೊಂದು ಹಾಕಿದವು.  2015 ರಲ್ಲಿ ತಾಲಿಬಾನ್‌ನ ಮೊದಲ ಮತ್ತು ಮೂಲ ನಾಯಕ ಮುಲ್ಲಾ ಒಮರ್ 2013 ರಲ್ಲಿ ಅನಾರೋಗ್ಯದಿಂದ ಸತ್ತು ಹೋಗುತ್ತಾನೆ. ಈ ಎಲ್ಲಾ ಸಮಯದಲ್ಲಿ, ಶಾಂತಿ ಕಾಪಾಡಲು ಯುಎಸ್ ತನ್ನ ಸೈನ್ಯವನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿತು. ಇದು ತಾಲಿಬಾನ್ ಅನ್ನು ನಿಯಂತ್ರಣದಲ್ಲಿಡಲು ಸಹ ಸಹಕಾರಿಯಾಯಿತು. ಅತೀ  ಮುಖ್ಯವಾಗಿ ಅಫ್ಘಾನಿಸ್ತಾನದಲ್ಲಿ ಹೊಸ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಿರವಾಗಿ ಇಡಲು ಸೈನ್ಯ ಬೇಕಾಗಿತ್ತು. 

ಅಮೆರಿಕಾದ ವಿಫಲ ಪ್ರಯತ್ನ, ಸೇನಾ ವಾಪಸಾತಿಯ ಅಧ್ಯಾಯ :   

ವಿಪರ್ಯಾಸ ಎಂದರೆ, ಇಷ್ಟೆಲ್ಲಾ  ವರ್ಷಗಳ ನಂತರವೂ ತಾಲಿಬಾನ್ ಇನ್ನೂ ನಾಶವಾಗಲಿಲ್ಲ. ಈ ಗುಂಪು ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿತು. ಅಫ್ಘಾನಿಸ್ತಾನ ಮತ್ತು ನೆರೆಯ ರಾಷ್ಟ್ರಗಳ ವಿವಿಧ ಪ್ರದೇಶಗಳಲ್ಲಿ, ತಾಲಿಬಾನ್ ಶೂಟೌಟ್ ಮತ್ತು ಬಾಂಬ್ ದಾಳಿ ನಡೆಸುತ್ತದೆ.  ಇದರಲ್ಲಿ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ.  ಫೆಬ್ರವರಿ 2020 ರಲ್ಲಿ, ಡೊನಾಲ್ಡ್ ಟ್ರಂಪ್ ಯುಎಸ್ಎ ಅಧ್ಯಕ್ಷರಾದ ಮೇಲೆ, ಅವರು ತಾಲಿಬಾನ್ ಜೊತೆ ಶಾಂತಿ ಮಾತುಕತೆಗಳನ್ನು ಆರಂಭಿಸಿದರು. ತಾಲಿಬಾನ್ ಅಲ್ ಖೈದಾದಂತಹ ಭಯೋತ್ಪಾದಕ ಗುಂಪುಗಳೊಂದಿಗಿನ ತನ್ನ ಸಂಬಂಧವನ್ನು ಕಡಿತಗೊಳಿಸಿದರೆ, ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಆಶ್ವಾಸನೆ ನೀಡುತ್ತದೆ. ಮತ್ತು ಅಮೆರಿಕವು ಅಫ್ಘಾನಿಸ್ತಾನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಹ ಹೇಳುತ್ತದೆ. ಇದಕ್ಕೆ ಬಹು ಮುಖ್ಯ ಕಾರಣವೊಂದು ಇತ್ತು. ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಸೇನಾ ನಿಯೋಜನೆ ಮತ್ತು ಸೌಲಭ್ಯಗಳಿಗಾಗಿ, ಆಗಲೇ ಅಮೆರಿಕಾ ಸುಮಾರು $ 2 ಟ್ರಿಲಿಯನ್‌ಗಿಂತ ಹೆಚ್ಚು ಖರ್ಚು ಮಾಡಿತ್ತು. ಅಮೆರಿಕನ್ನರು ಇದನ್ನು ವಿರೋಧಿಸಿದರು.  ತಮ್ಮದಲ್ಲದ ಯುದ್ಧವನ್ನು ಏಕೆ ಮಾಡುತ್ತಿದ್ದೀರಿ ಎಂದು ಅಮೆರಿಕನ್ನರು ತಮ್ಮ ಸರ್ಕಾರವನ್ನು ಪ್ರಶ್ನಿಸಿದರು. 20 ವರ್ಷಗಳ ಕಾಲ ಆ ದೇಶದಲ್ಲಿದ್ದರೂ, ತಮ್ಮ  ಸೈನಿಕರು ಹುತಾತ್ಮರಾದರೂ, ಇದರಿಂದ ನಮಗೆ  ಏನೂ ಉಪಯೋಗವಾಗಲಿಲ್ಲ ಎಂಬುದು ಅವರ ವಾದವಾಗಿತ್ತು.

ದೊಡ್ಡಣ್ಣನ ವಾದ : 

2021 ರಲ್ಲಿ, ತಾಲಿಬಾನ್ ಅತ್ಯಂತ ಶಕ್ತಿಶಾಲಿಯಾಗಿತ್ತು.  85,000 ಕ್ಕೂ ಹೆಚ್ಚು ಹೋರಾಟಗಾರರು ತಾಲಿಬಾನ್ ಗಾಗಿ ಹೋರಾಡುತ್ತಿದ್ದಾರೆ. ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾದ ಮೇಲೆ, ಅವರು ಡೊನಾಲ್ಡ್ ಟ್ರಂಪ್ನ ನೀತಿಯನ್ನು ಮುಂದುವರೆಸಿದರು. ಅಫ್ಘಾನಿಸ್ತಾನದಿಂದ ಅಮೇರಿಕನ್ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರು ಅದೂ ವಿಶೇಷವಾಗಿ 9/11 ರ 20 ನೇ ವಾರ್ಷಿಕೋತ್ಸವದ ಮೊದಲು. ಇದು ನಮ್ಮ ಯುದ್ಧವಲ್ಲ ಎಂಬ ಧೋರಣೆ ತೋರಿ, ಅಮೆರಿಕ ತಮ್ಮ ಸೈನ್ಯವನ್ನು ವಾಪಾಸ್ ಕರೆಸಿಕೊಳ್ಳುತ್ತದೆ.  ಅಫ್ಘಾನಿಸ್ತಾನದಲ್ಲಿ ಉಳಿದುಕೊಳ್ಳುವ ಅಮೆರಿಕದ ಮೂಲ ಉದ್ದೇಶ ಸೇಡು ತೀರಿಸಿಕೊಳ್ಳುವುದಾಗಿದ್ದರೆ, 2011 ರಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ನಂತರವೂ, ಅಮೆರಿಕಾ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಲ್ಲಿ ಇರಲು ಏಕೆ ಅವಕಾಶ ನೀಡಿತು?  ಆಗ ಅವರು ತಮ್ಮ ಸೈನ್ಯವನ್ನು ಏಕೆ ಹಿಂತೆಗೆದುಕೊಳ್ಳಲಿಲ್ಲ? ಎಂಬ ಪ್ರಶ್ನೆಗಳು ಈಗ ಮುಂದೆಲೆಗೆ ಬರುತ್ತಿವೆ. ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿ ಉಳಿಯುವ ಅಮೆರಿಕದ ಉದ್ದೇಶ ಅಫ್ಘಾನಿಸ್ತಾನವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡುವುದು ಮತ್ತು ತಾಲಿಬಾನ್ ಅನ್ನು ಕೊನೆಗೊಳಿಸುವುದಾಗಿದ್ದರೆ, ಆ ಉದ್ದೇಶ ಈಡೇರದೇ ನಾಡು ನೀರಲ್ಲಿ ಕೈ ಚೆಲ್ಲಿ ಏಕೆ ವಾಪಾಸ್ ಆಗುತ್ತಿದೆ? ಎಂದು ಸಹ ಜಗತ್ತು ಈಗ ಬೊಟ್ಟು ಮಾಡಿ ತೋರಿಸುತ್ತಿದೆ. ಈ ವಿಷಯದಲ್ಲಿ ಅಮೆರಿಕ ಅಕ್ಷರಶಃ ವಿಫಲವಾಗಿದೆ. ಏಕೆಂದರೆ, ತಾಲಿಬಾನ್ ಈಗ ಮತ್ತೆ ಅಧಿಕಾರದಲ್ಲಿದೆ ಮತ್ತು ಇದೀಗ ತುಂಬಾ ಪ್ರಬಲವಾಗಿದೆ. 

ಜೋ ಬಿಡೆನ್ ಅವರು ತಾಲಿಬಾನ್ ಅನ್ನು ನಂಬದಿದ್ದರೂ, ಅಫ್ಘಾನಿಸ್ತಾನದ ಸೇನೆಯ ತನ್ನ  300,000 ಸೈನಿಕರನ್ನು ಬಳಸಿ,  85,000 ತಾಲಿಬಾನಿ ಹೋರಾಟಗಾರರನ್ನು ಸುಲಭವಾಗಿ ಎದುರಿಸಬಹುದು ಎಂದು ವಾದ ಮಾಡಿದರು. "ನಾನು ತಾಲಿಬಾನ್ ಅನ್ನು ನಂಬುವುದಿಲ್ಲ. ಆದರೆ ನಾನು ಅಫ್ಘಾನ್ ಸೇನೆಯ ಸಾಮರ್ಥ್ಯವನ್ನು ನಂಬುತ್ತೇನೆ. ಅಫ್ಘಾನ್ ನಲ್ಲಿ 300,000 ಸುಸಜ್ಜಿತ  ಸೈನಿಕರಿದ್ದಾರೆ. ಪ್ರಪಂಚದ ಯಾವುದೇ ಸೇನೆಯಂತೆ, ಅದು ಸುಸಜ್ಜಿತವಾಗಿದೆ. ಅಷ್ಟೇ ಅಲ್ಲ ಅವರ ಬಳಿ ವಾಯುಪಡೆ ಕೂಡ ಇದೆ ." ಎಂದು ಹೇಳಿಕೆ ನೀಡಿದರು. ಆದರೆ ಗ್ರೌಂಡ್ ರಿಯಾಲಿಟಿ ಹಾಗಿಲ್ಲ.  

ಕೆಲವು ತಜ್ಞರು ಭಾರತವೂ ಮಧ್ಯಪ್ರವೇಶಿಸಬೇಕು ಎಂದು ಅಭಿಪ್ರಾಯಪಡುತ್ತಿದ್ದಾರೆ.  ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಯು ಅಫ್ಘಾನ್ ಸೈನ್ಯವನ್ನು ಬೆಂಬಲಿಸಲು ಹೋಗಬೇಕು ಎಂದು ವಾದಿಸುತ್ತಿದ್ದರೆ. ಆದರೆ ಇಲ್ಲಿ ಮತ್ತೆ ಅದೇ ಪ್ರಶ್ನೆ ಉದ್ಭವಿಸುತ್ತದೆ, ಇದು ಭಾರತೀಯರ ಹೋರಾಟವೇ?  ಭಾರತೀಯರು ಅಲ್ಲಿಗೆ ಹೋಗಿ ಹಸ್ತಕ್ಷೇಪ ಮಾಡಬೇಕೇ? ಎಂದು.     ನಿಮ್ಮ ಅಭಿಪ್ರಾಯವೇನು?  ನನಗೆ ತಿಳಿಸಲು ಕೆಳಗೆ ಕಾಮೆಂಟ್ ಮಾಡಿ.

ಮುಂದೇನು : 

ತಾಲಿಬಾನ್ ಆಳ್ವಿಕೆಯು ಭಾರತಕ್ಕೆ ಭಯಂಕರವಾಗಬಹುದು.  ಭಾರತ-ಅಫ್ಘಾನಿಸ್ತಾನ ಸಂಬಂಧಗಳು ಕೊನೆಗೊಳ್ಳುವುದು ಮಾತ್ರವಲ್ಲದೇ, ಭಾರತವು ಅಫ್ಘಾನಿಸ್ತಾನದಲ್ಲಿ ಹೂಡಿಕೆ ಮಾಡಿದ $ 3 ಬಿಲಿಯನ್ ಯೋಜನೆಗಳು ಸಹ ಸ್ಥಗಿತಗೊಳ್ಳುತ್ತವೆ. ಇದಕ್ಕಿಂತ ಹೆಚ್ಚು ಎನ್ನುವಂತೆ, ಭಯೋತ್ಪಾದಕ ದಾಳಿಯ ಬೆದರಿಕೆಯೂ ಉದ್ಭವಿಸಬಹುದು. ನನ್ನ ಅಭಿಪ್ರಾಯದಲ್ಲಿ, ಇದು ವೈವಿಧ್ಯತೆಯಲ್ಲಿ ಏಕತೆಯ ಪಾಠವಾಗಿದೆ.  ನಾವು ನಮ್ಮ ನಡುವೆ ಹೋರಾಡಲು ಬಯಸಿದರೆ, ಏನು ಬೇಕಾದರೂ ಮಾಡಬಹುದು. ಆದರೆ ನಾವು ಜಗತ್ತಿನಲ್ಲಿ ಶಾಂತಿಯುತವಾಗಿ ಬದುಕಲು ಬಯಸಿದರೆ, ನಾವು ನಿಜವಾದ ಅರ್ಥದಲ್ಲಿ ಶಾಂತಿಯನ್ನು ಹೊಂದಲು ಬಯಸಿದರೆ, ನಾವು  ಒಬ್ಬರನ್ನೊಬ್ಬರು ಒಪ್ಪಿಕೊಳ್ಳಲು ಕಲಿಯಬೇಕು. ಸಹಿಷ್ಣುತೆ ಮತ್ತು ಏಕತೆಯನ್ನು ಉತ್ತೇಜಿಸಿಬೇಕಾಗುತ್ತದೆ .  ಈ  ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ.