ಜಾಹಿರಾತು

ನಿಮ್ಮ ಸ್ವಂತ ಡೇಟಾ ನಿಮಗೆ ಕುಳಿ ಆಗದಿರಲಿ !!!! ಡೇಟಾ ಗೌಪ್ಯತೆಯ( DATA PRIVACY) ಬಗ್ಗೆ ನಿರ್ಲಕ್ಷ ಬೇಡ :

ಡೇಟಾ ಗೌಪ್ಯತೆ-DATA PRIVACY

ಇಂದಿನ ಆನ್ಲೈನ್ ಜಗತ್ತಿನಲ್ಲಿ, ವಿಶೇಷವಾಗಿ ಭಾರತದಲ್ಲಿ, ಡೇಟಾ ಗೌಪ್ಯತೆ ( DATA PRIVACY) ಎಂಬುದು ಒಂದು ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಜನರು ಇದನ್ನು ತೀರಾ ಕಡೆಗಣನೆ ಮಾಡುತ್ತಿರುವುದು ತುಂಬಾ ಕಳವಳಕಾರಿ ಸಂಗತಿ ಆಗಿದೆ. ಇದೊಂದು ದೊಡ್ಡ ಹಗರಣವಾಗಿ  ಬೇರೂರಿದೆ. ಅನವಶ್ಯಕ  ಕರೆಗಳು ನಿಮ್ಮ ಫೋನಿಗೆ  ಬಂದಾಗ ಇವರಿಗೆ ಹೇಗೆ ನನ್ನ ನಂಬರ್ ಸಿಕ್ಕಿತು ಎಂದು ನಿಮ್ಮನ್ನೇ ನೀವು  ಪ್ರಶ್ನಿಸಿದ್ದು ಉಂಟು. ನಾವು ಮಾಡುವ ಕೆಲವು ತಪ್ಪಿನಿಂದ, ಅಥವಾ ಅರಿವೆಗೆ ಬಾರದೆ ದುರಾಸೆಗೆ ಒಳಗಾಗಿ ನೀಡುವ ಮಾಹಿತಿಯಿಂದ ಇಂಥ ಘಟನೆಗಳು ನಡೆಯುವುದು ಸರ್ವೇಸಾಮಾನ್ಯ.
        2018 ರಲ್ಲಿ, ಆಯುಶಿ ಸಹಾ ಅವರು ಮದುವೆಯಾದ ಐದು ತಿಂಗಳ ನಂತರ  ಛತ್ತೀಸಗಢನಲ್ಲಿ ತನ್ನ ಹೆತ್ತವರನ್ನು ಭೇಟಿ ಮಾಡಲು ಹೋಗಿದ್ದರು. ಆಗ ಒಮ್ಮೆಲೆ ಎಲ್ಲಿಂದಲೋ ಅವಳ ಗಂಡ ಅಲ್ಲಿಗೆ ಬಂದ. ಬಂದವನೇ ಹೆಂಡತಿಗೆ ಏನೋ ಕೇಳಲು ಒತ್ತಾಯಿಸಿದ.  ಅವನು ತನ್ನ ಫೋನ್ ತೆಗೆದುಕೊಂಡು ‘ಪ್ಲೇ’ ಬಟನ್ ಒತ್ತಿ ಹಿಡಿದ. ಆಗ ಅವಳಿಗೆ ಒಂದು ವಿಷಯ ಮನವರಿಕೆ ಆಗತೊಡಗಿತು. ಆಕೆಯ ಪತಿಯು ಅವಳ ಒಪ್ಪಿಗೆಯಿಲ್ಲದೆ ರಹಸ್ಯವಾಗಿ ಫೋನ್ನಿನಲ್ಲಿ ಕೆಲ ವಿಷಯಗಳನ್ನು ರೆಕಾರ್ಡ್ ಮಾಡಿದ್ದಾನೆ  ಎಂದು.

ಅವಳ ಗಂಡ ಕೋಪದಿಂದ ಕಿರುಚಲು ಶುರು ಮಾಡಿದ. ಕಾರಣ ಇಷ್ಟೇ. ಅವನು ರೆಕಾರ್ಡ್ ಮಾಡಿದ್ದ ಆಡಿಯೋದಲ್ಲಿ ಆಯುಶಿ ತನ್ನ ಅತ್ತೆ ಮಾವಂದಿರ ಬಗ್ಗೆ ತನ್ನ ತಾಯಿ ಬಳಿ ಏನೇನೋ ಹೇಳುತ್ತಿದ್ದಳು ಎಂದು. ಅದರ ಜತೆಗೆ ಅವಳು ತನ್ನ ಸ್ನೇಹಿತನೊಬ್ಬನ ಜತೆಗೆ ಮಾತಾಡುತ್ತಿರುವುದನ್ನು ಸಹ ಅವನಿಗೆ ತಿಳಿದಿತ್ತು. ಇಂಥ ವರ್ತನೆ ಇಂದ ಅವರ ಮದುವೆ ಅಂತಿಮವಾಗಿ ಕೊನೆಗೊಂಡಿತು.ತನ್ನ ಖಾಸಗಿ ವಿಷಯಗಳ ಬಗ್ಗೆ ಪತಿ ಹೇಗೆ ತಿಳಿದುಕೊಂಡಿದ್ದಾನೆ ಎಂದು ಆಯುಶಿ ಆಶ್ಚರ್ಯ ಪಟ್ಟಳು. ಆಗ ಅವಳಿಗೆ ಸಿಕ್ಕ ಉತ್ತರ ಅವನು ನಿಶ್ಚಿತಾರ್ಥದ  ಸಮಯದಲ್ಲಿ ಉಡುಗೊರೆ ಅಂತ ನೀಡಿದ ವಿವೋ ಮೊಬೈಲ್ ಫೋನ್.

ಭಾರತದಲ್ಲಿ ವ್ಯಕ್ತಿಗತ ಗೌಪ್ಯತೆಯ (Personal Privacy Breach) ಉಲ್ಲಂಘನೆ ಸಾಮಾನ್ಯವಾಗಿ " ಕದ್ದಾಲಿಕೆ ಅಥವಾ ಗೂಢಚಾರಿಕೆ " ಇಂದ ಆಗುತ್ತದೆ. ನಮಗೆ ತಿಳಿಯದ ಹಾಗೆಯೇ, ನಮ್ಮ ಅರಿವಿಗೆ ಬಾರದೆ, ನಮ್ಮನ್ನು ಯಾರೋ ಒಬ್ಬರು ವೀಕ್ಷಿಸುತ್ತಿರುತ್ತಾರೆ. ನಾನು ಬರೆಯಲು ಬಳಸುತ್ತಿರುವ ಈ ಕಂಪ್ಯೂಟರ್ ಸಹ ಈ ಸಧ್ಯ ಬೇರೆಯವರಿಗೆ ನನ್ನ ಮಾಹಿತಿಗಳನ್ನು ರವಾನಿಸುತ್ತಿರಲೂ ಬಹುದು. ನಮ್ಮ ವಯುಕ್ತಿಕ ಡೇಟಾವನ್ನು ಅಂತಹ ಕಳ್ಳರು ದಿನಸಿ ಅಂಗಡಿಯಲ್ಲಿ ಬಿಕರಿ ಆಗುವ ಸಾಮಾನಿನಂತೆ , ನಮ್ಮ ದಾಖಲೆಗಳನ್ನು ಮಾರುತ್ತಾರೆ.

https://www.komando.com/wp-content/uploads/2017/05/phone-spy.png
Source: KOMANDO.COM
ಈಗಿನ ದಿನಗಳಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯ ಆಗಿವೆ.

ಈಗ ಮತ್ತೆ ಆಯುಶಿ ಸಹಾ ವಿಷಯಕ್ಕೆ ಬರೋಣ.

ಅವಳ ಫೋನ್‌ನಲ್ಲಿ ಸ್ಪೈವೇರ್ ಪ್ರೋಗ್ರಾಂ ಅಥವಾ ಸಾಫ್ಟ್‌ವೇರ್ ಅನ್ನು ಡೌನ್ಲೋಡ್ ಮಾಡಿರುವ ಸಾಧ್ಯತೆಯಿದೆ. ಬಹುಶಃ ಅವಳ ಪತಿಯೇ ಅದನ್ನು ಸ್ವತಃ ಡೌನ್‌ಲೋಡ್ ಮಾಡಿ, ನಂತರ ಉಡುಗೊರೆಯಾಗಿ ನೀಡಿರಬಹುದು ಅಥವಾ ಖಾಸಿಗಿ ಪತ್ತೇದಾರಿಗಳ ಮೂಲಕ ಆ ಡೇಟಾ ಪಡೆದಿರಬಹುದು.ಆದರೆ ಯಾಕೆ ಜನ ಇಂತಹ ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.

ವಾಸ್ತವವಾಗಿ ಇದು ಸಾಮಾನ್ಯ ಅಭ್ಯಾಸವಾಗಿದೆ.

ಡಿಟೆಕ್ಟಿವ್ಸ್ ಮತ್ತು ತನಿಖಾಧಿಕಾರಿಗಳ ಸಂಘದ ಅಧ್ಯಕ್ಷ ಕುನ್ವರ್ ವಿಕ್ರಮ್ ಸಿಂಗ್ ಪ್ರಕಾರ, ಪತ್ತೇದಾರಿಗಳು ಈಗಿನ ದಿನಗಳಲ್ಲಿ ಕನಿಷ್ಠ ವೇತನಕ್ಕೆ ಸಿಗುತ್ತಾರೆ ಮತ್ತು ಬೇಹುಗಾರಿಕೆ ಮಾಡುವಂತಹ ಅಪ್ಲಿಕೇಶನ್ಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ ಎಂದು.

ಈ ಸ್ಪೈವೇರ್(Spyware) ಅಪ್ಲಿಕೇಶನ್‌ಗಳು ಹೊಸತೇನಲ್ಲ. ಅವು ಹಲವಾರು ವರ್ಷಗಳ ಹಿಂದೆ ಜನಪ್ರಿಯವಾಗಿದ್ದವು. ಅವುಗಳನ್ನು ಯಾರು ಪ್ರಸಿದ್ಧ ಮಾಡಿರಬಹುದು ಹೇಳಿ? ಪೋಷಕರು. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಲು, ಅವರು ಯಾರನ್ನು ಭೇಟಿಯಾಗುತ್ತಿದ್ದಾರೆ ಅಥವಾ ಸಂಭಾಷಿಸುತ್ತಿದ್ದಾರೆಂದು ತಿಳಿಯಲು ಇದನ್ನು ಬಳಸಲು ಶುರು ಮಾಡಿದ್ದರು. ಪರಿಣಾಮವಾಗಿ,  ಈ ಅಪ್ಲಿಕೇಶನ್‌ಗಲಳು ಬಹು ಜನಪ್ರಿಯಗೊಂಡವು.

ಅಂತಹ ಅಪ್ಲಿಕೇಶನ್‌ಗಳ ವೈಶಿಷ್ಟತೆಗಳು ಹೇಗಿವೆ ಎಂದರೆ:

ಇದು ಯಾರೊಬ್ಬರ SMS, ಸ್ಥಳ, ಕರೆ ಇತಿಹಾಸ, ಇಂಟರ್ನೆಟ್ ಬಳಕೆ ಮತ್ತು ಫೋಟೋಗಳನ್ನು ಟ್ರ್ಯಾಕ್ ಮಾಡಬಹುದು.ಇದು ಎಲ್ಲ ರೀತಿಯ ಅಪ್ಲಿಕೇಶನ್ಗಳ ಮೂಲ ಕೆಲಸ.  ಈ ಅಪ್ಲಿಕೇಶನ್‌ಗಳ ನವೀಕರಿಸಿದ ಆವೃತ್ತಿಗಳು ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ಸಹ ಟ್ರ್ಯಾಕ್ ಮಾಡಬಹುದು. ಅದು ಫೇಸ್‌ಬುಕ್ ಅಥವಾ ವಾಟ್ಸಾಪ್ ಆಗಿದ್ದರೂ ಪರವಾಗಿಲ್ಲ ಎಲ್ಲವನ್ನು ಟ್ರ್ಯಾಕ್ ಮಾಡುವ ವೈಶಿಷ್ಟತೆ ಅವಕ್ಕಿರುತ್ತದೆ. ಈ ಸೇವೆಗಳಿಗೆ ಎಷ್ಟು ವೆಚ್ಚವಾಗಬಹುದು ಎಂದು ಲೆಕ್ಕ ಹಾಕಿ? ತಿಂಗಳಿಗೆ 1000-2000 ರೂಪಾಯಿ.

ಈ ಚಟುವಟಿಕೆಯನ್ನು ನಿಷೇಧಿಸಬೇಕು ಎಂದು ನಿಮ್ಮಲ್ಲಿ ಹಲವರು ವಾದಿಸಬಹುದು. ಆದರೆ, ಭಾರತದಲ್ಲಿ, ಈ ಅಪ್ಲಿಕೇಶನ್‌ಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಕಾನೂನುಬದ್ಧವಾಗಿದೆ. ಕಾನೂನಿನ ಲೋಪದೋಷಗಳಿಂದಾಗಿ ಅವು ಭಾರತದಲ್ಲಿ ಕಾನೂನುಬದ್ಧವಾಗಿವೆ. ಆಗಸ್ಟ್ 2020 ರಲ್ಲಿ ಗೂಗಲ್ ಅಂತಹ ಅಪ್ಲಿಕೇಶನ್‌ಗಳಿಗೆ ಕಾನೂನನ್ನು ವಿಧಿಸಿದೆ. ಮತ್ತೊಂದೆಡೆ, ನಮ್ಮ ಕಾನೂನು ಇಂತಹ  ಪರಿಸ್ಥಿತಿಯಲ್ಲಿ ಅರ್ಥಹೀನವಾಗಿ ನಿಂತಿದೆ.

ಕಾನೂನಿನ ನಿಯಂತ್ರಣದ ಕೊರತೆಯಿಂದ ಉದ್ಭವಿಸಿದ ಮತ್ತೊಂದು ಸವಾಲು ಎಂದರೆ: ನಮ್ಮ ಡೇಟಾಗಾಳ ಬಳಕೆ. ಈಗ ಅನ್ವರ್ ಹುಸೇನ್ ಎನ್ನುವವರ ಕಥೆಯತ್ತ ನಮ್ಮ ಗಮನವನ್ನು ಹರಿಸೋಣ.ಅನ್ವರ್ ಹುಸೇನ್, ತಮ್ಮ ಮಗನ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಕೂತಿದ್ದರು. ಫಲಿತಾಂಶಗಳನ್ನು ನೋಡುವ ಮೊದಲೇ ಅವರಿಗೆ ಒಂದು ಫೋನ್ ಕರೆ ಬಂತು. ಫೋನ್‌ನಲ್ಲಿದ್ದ ಮಹಿಳೆಗೆ ಹುಸೇನ್‌ನ ಮಗನ ನೋಂದಣಿ ಸಂಖ್ಯೆ ಕೂಡ ತಿಳಿದಿತ್ತು. ಅವನ ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೂ, ಕಳಪೆ ಅಂಕಗಳ ಪರಿಣಾಮ ಪ್ರತಿಷ್ಠಿತ ಕಾಲೇಜು ಸೇರಿಸಲು ಆಗದಿರಬಹುದು ಎಂದು ಹೇಳಿದಳು. ಆದರೆ ಅದಕ್ಕೆಂದು ಬೇರೆ ಉಪಾಯ ಇದೆ, ಹಾಗೆ ಮಾಡಿದರೆ ಸೀಟು ಸಿಗಬಹುದು ಎಂದು ಸಹ ಹೇಳಿದಳು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವಳು ನಮಗೆ ಹಣ ನೀಡಿ, ನಿಮಗೆ ಸೀಟು ನಾನು ಕೊಡಿಸುತ್ತೇನೆ ಎಂದು ಹೇಳಿದ್ದಳು.

ನಿಮ್ಮ ಫಲಿತಾಂಶ ಬರುವ ಮೊದಲೇ ಇಂತಹ ಆಫರ್ ಬರುವ ಸನ್ನಿವೇಶವನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಅನ್ವರ್ ಹುಸೇನ್, ಯಾವುದೇ ಭಾರತೀಯ ಪೋಷಕರು ಇಂತಹ ಪರಿಸ್ಥಿತಿಯಲ್ಲಿ ಮಾಡುತ್ತಿದ್ದ ಕೆಲಸವನ್ನೇ ಅವರೂ ಸಹ ಮಾಡಿದರು. ತನ್ನ ಮಗನನ್ನು ಪ್ರತಿಷ್ಠಿತ ಕಾಲೇಜಿಗೆ ಕಳುಹಿಸಿಯೇ ತೀರಬೇಕೆಂಬುವುದು ಅವರ ಹಠ. ಅದಕ್ಕಾಗಿ ತನ್ನ ಪೂರ್ವಜರ ಭೂಮಿಯನ್ನು ಮಾರಿ, ತಮ್ಮ ಜೀವನ ಉಳಿತಾಯವನ್ನು ಸೇರಿಸಿ ಪ್ರವೇಶಾತಿಯ ಸಿದ್ಧತೆ ಮಾಡಿಕೊಂಡರು , ಅದು ಬರೋಬ್ಬರಿ  ಒಟ್ಟು 2.5 ಲಕ್ಷ ರೂ. ಆದರೆ ಕೊನೆಗೆ ಅವರಿಗೆ ಅದು ಹಗರಣ ಎಂದು ತಿಳಿದು ಹೋಯಿತು.

ನಮ್ಮ ಡೇಟಾವನ್ನು ನಮ್ಮ ವಿರುದ್ಧವೇ ಹೇಗೆ ಬಳಸಬಹುದು ಎಂಬುದನ್ನು ಇದು ತೋರಿಸುತ್ತದೆ.

ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಜನರು ಹೊಸ ವೃತ್ತಿಯನ್ನೇ ಹುಟ್ಟು ಹಾಕಿದರು. ಅದೇ "ಡೇಟಾ ಬ್ರೋಕರ್ / ಡೇಟಾ ಬ್ರೊಕರಿಂಗ್ (Data Brokering) ". ಡೇಟಾ ದಲ್ಲಾಳಿಗಳು ನಿಮಗೆ ಬೇಡಿಕೆಯ ತಕ್ಕ ಹಾಗೆ ನಿಮಗೆ ಬೇಕಾದಂತಹ ಡೇಟಾಗಳನ್ನು ಮಾರಾಟ ಮಾಡುತ್ತಾರೆ.

ಟೈಮ್ಸ್ ಒಫ್ ಇಂಡಿಯಾ ನಡೆಸಿದ ಅಧ್ಯಯನದ ಪ್ರಕಾರ,  ಕಾರು ಮಾಲೀಕರ, ಕಾರ್ಪೊರೇಟ್‌ಗಳ, ಕ್ರೆಡಿಟ್ ಕಾರ್ಡ್ ಹೊಂದಿರುವವರ ಮತ್ತು ವೃತ್ತಿಪರರ ಡೇಟಾಗಳನ್ನೂ ಸಹ ನಾವು ಈ ದಲ್ಲಾಳಿಗಳಿಂದ ಪಡೆಯಬಹುದು. ಮುಂಬೈನ ಅತೀ ಶ್ರೀಮಂತ ವ್ಯಕ್ತಿಗಳ ಡೇಟಾವನ್ನು ಸಹ ನೀವು ಇವರಿಂದ ಪಡೆಯಬಹುದು. ಅಷ್ಟೇ ಅಲ್ಲಾ,  ಈ ಡೇಟಾವು ಪಕ್ಕಾ ಹಾಗೂ ಉತ್ತಮ ಮಟ್ಟದ್ದಾಗಿರುತ್ತದೆ.

ಡೇಟಾದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಎಕನಾಮಿಕ್ಸ್ ಟೈಮ್ಸ್ ತನ್ನದೇ ಆದ ತನಿಖೆಯನ್ನು ನಡೆಸಿತು.ಇತ್ತೀಚಿಗೆ ಈ-ಬೇ ನಲ್ಲಿ ಗ್ಯಾಸ್ ಸ್ಟೌವ್ ಖರೀದಿಸಿದ ಗ್ರಾಹಕನ ಮಾಹತಿಯನ್ನು ಬ್ರೋಕರ್ ಇಂದ ಪಡೆದು ಅವನಿಗೆ ಕರೆ ಮಾಡಿದರು. ಅವರ ಆಶ್ಚರ್ಯಕ್ಕೆ , ಆ ಗ್ರಾಹಕನು ಬ್ರೋಕರ್ಗಳು  ಕೊಟ್ಟ ಮಾಹಿತಿಯಂತೆಯೇ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದ. 

ಭಾರತದ ಮೊಟ್ಟ ಮೊದಲ ಡೇಟಾ ಬ್ರೊಕೇರ್ಗಳೆಂದರೆ ಆ  ದಿನಗಳಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದ  ಅಂಗಡಿಯವರು. ಹತ್ತು ವರ್ಷಗಳ ಹಿಂದೆ ಸಿಮ್ ಕಾರ್ಡ್ ಎಂಬುದು ಅತ್ಯಂತ ಅಗತ್ಯವಾದ ಡೇಟಾ ಪಾಯಿಂಟ್ ಆಗಿತ್ತು. 2011 ರಲ್ಲಿ, ಎನ್‌ಡಿಟಿವಿ ಪ್ರಕಟಿಸಿದ ಲೇಖನದ ಪ್ರಕಾರ, ಪ್ರತಿ ಸಂಖ್ಯೆಗೆ 20 ಪೈಸೆಗಳಂತೆ, ಏರ್‌ಟೆಲ್‌ನ ಪೋಸ್ಟ್‌ಪೇಯ್ಡ್ ಡೇಟಾಬೇಸ್ ಅನ್ನು ಖರೀದಿಸಬಹುದಾಗಿತ್ತು.

ನಿಮ್ಮ ಸ್ವಂತ ಡೇಟಾ, ಡೇಟಾ ಬ್ರೋಕರ್‌ಗಳಿಗೆ  ಹೇಗೆ ಸಿಗುತ್ತದೆ  ಎಂಬುದನ್ನು ಈಗ ನೋಡೋಣ. 

ಮೊದಲನೇಯದಾಗಿ, ನಿಮಗೇ ತಿಳಿಯದಂತೆ ನೀವು ನಿಮ್ಮ ಡೇಟಾ ಅನ್ನು ಅವರಿಗೆ ಹೇಗೆ ನೀಡುತ್ತಿರಿ ಎಂದು ತಿಳಿಯೋಣ.

ಉದಾಹರಣೆಗೆ, ನೀವು ಆನ್‌ಲೈನ್ನಲ್ಲಿ   ಉದ್ಯೋಗ ಅರ್ಜಿಯನ್ನು ಭರ್ತಿ ಮಾಡುತ್ತಿರಿ ಎಂದು ಭಾವಿಸಿ.ನೀವು ಅರ್ಜಿ ತುಂಬಿದ  ಕಂಪನಿಯೇ ಹಣಕ್ಕಾಗಿ ನಿಮ್ಮ ಡೇಟಾವನ್ನು ಮಾರಾಟ ಮಾಡಬಹುದು. ಗ್ರಾಹಕರ ಡೇಟಾಬೇಸ್‌ಗಳನ್ನು ನಿರ್ವಹಿಸುವ ನೌಕರರು ಹೆಚ್ಚಾಗಿ ಇಂತಹ ಡೇಟಾ ಸೋರಿಕೆ ಕೃತ್ಯದ ಹಿಂದೆ ಇರುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.(ಉದಾಹರಣೆಗೆ ಬ್ಯಾಂಕುಗಳು, ಆಸ್ಪತ್ರೆಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು ಮತ್ತು ಕಾರು ವಿತರಕರ ನೌಕರರು). ಅಗಾಧ ಗ್ರಾಹಕರ ಡೇಟಾಬೇಸ್‌ಗಳನ್ನು ಹೊಂದಿರುವ ಕಂಪೆನಿಗಳಲ್ಲಿ ಇಂಥಹ ಕೃತ್ಯಗಳು ಬಹಳ ನಡೆಯುತ್ತವೆ.

ಉದ್ಯೋಗಿಗಳಷ್ಟೇ ಅಲ್ಲದೆ , ಡೇಟಾಬೇಸ್‌ಗಳನ್ನು ನಿರ್ವಹಿಸುವ ಐಟಿ ಕಂಪನಿಗಳು ಕೂಡ ಡೇಟಾವನ್ನು ಸೋರಿಕೆ ಮಾಡಬಹುದು. 2018 ರಲ್ಲಿ, 10 ಮತ್ತು 12 ನೇ ತರಗತಿಗೆ ಸೇರಿದ ಸುಮಾರು 800 ಸಾವಿರ ವಿದ್ಯಾರ್ಥಿಗಳ ಡೇಟಾವನ್ನು ಸೋರಿಕೆ ಮಾಡಿದ್ದಕ್ಕಾಗಿ 3 ಐಟಿ ಸಂಸ್ಥೆಗಳ ಮಾಲೀಕರನ್ನು ಬಂಧಿಸಲಾಗಿದೆ.

ಕೇವಲ ಆನ್ಲೈನ್ ಮಾತ್ರವಲ್ಲದೆ, ಆಫ್‌ಲೈನ್‌ನಲ್ಲೂ ಸೋರಿಕೆ ಆಗಬಹುದು. ಗುರ್‌ಗಾಂವ್‌ನ ಸೈಬರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಅನಿಲ್ ಕುಮಾರ್ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ನೀವು ನೀಡುವ ರೇಟಿಂಗ್/ ಫೀಡ್ಬ್ಯಾಕ್  ಮಾಹಿತಿಯನ್ನು ಸಹ ಮಾರಾಟ ಮಾಡಬಹುದು.

ಸ್ವಾರಸ್ಯಕರ ಸಂಗತಿ ಏನೆಂದರೆ,  ಕಂಪೆನಿಗಳು ನಮ್ಮ ಡೇಟಾವನ್ನು ಮಾರಾಟ ಮಾಡುವುದು ಕಾನೂನುಬಾಹಿರವೇ ಎಂಬುದೇ  ಇನ್ನೂ ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ, ಈಗಿನ ಕಾಲದಲ್ಲಿ ಕಂಪನಿಗಳು ತಮ್ಮ ಗೌಪ್ಯತೆ ನೀತಿಗಳ ಮುಖಾಂತರ ನಮ್ಮ ಡೇಟಾವನ್ನು ಹೇಗೆ ಬಳಸುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತವೆ . ಹಾಗೆ ನಾವು ಅವರ ಸೇವೆಗಳನ್ನು ಬಳಸುವಾಗ ಅವರ ಗೌಪ್ಯತೆ ನೀತಿಗಳನ್ನು ಒಪ್ಪಲೇ ಬೇಕಾಗುತ್ತದೆ.ಅವುಗಳ ಬಗ್ಗೆ  ಸಂಪೂರ್ಣವಾಗಿ ಓದದಿದ್ದರೂ ನಾವು " ಸಮ್ಮತಿಸಿ" ಸೇವೆಯನ್ನು  ಪ್ರಾರಂಭಿಸಿ ಬಿಡುತ್ತೇವೆ. ಅಂದರೆ ಮುಂದೊಂದು ದಿನ ನಿಮ್ಮ ಡೇಟಾ ಸೋರಿಕೆಯಾದಲ್ಲಿ ಆ ಕಂಪನಿಗಳು ಹೊಣೆ ಹೊತ್ತುವುದಿಲ್ಲ. ಕಂಪನಿಗಳ ಈ ಥರದ  ಹತೋಟಿಯಲ್ಲಿ ಇಡಲು ಇದುವರೆಗೂ ಸರಕಾರದ  ನಿಯಮಗಳು ಅನುಷ್ಠಾನಕ್ಕೆ ಬಂದಿಲ್ಲ.

ನಮ್ಮ ಡೇಟಾ ಬ್ರೋಕರ್ ಗಳ  ಬಳಿ ಸೇರಲು ಎರಡನೇ ಮಾರ್ಗ ಎಂದರೆ :  ಕಳಪೆ ಭದ್ರತೆಯಿಂದಾಗಿ.

ಡೇಟಾ ಸೋರಿಕೆಯಿಂದ ನಮ್ಮ ಡೇಟಾವನ್ನು ಪಡೆಯುವುದು  ಎರಡನೇ ಮಾರ್ಗವಾಗಿದೆ. ಸರ್ಕಾರದ ದಾಖಲೆಗಳನ್ನು  ಪಾಸ್‌ವರ್ಡ್‌ ಇಟ್ಟು ರಕ್ಷಿಸದ ಕಾರಣ 2019 ರಲ್ಲಿ ಸುಮಾರು 100 ಸಾವಿರ ಅಧಾರ್ ಸಂಖ್ಯೆಗಳ ಸೋರಿಕೆಯಾಗಿತ್ತು.

Jharkhand’s attendance site leaking worker data (Image: TechCrunch)
Jharkhand’s attendance site leaking worker data (Image: TechCrunch)

ಫೆಬ್ರವರಿ 2020 ರಲ್ಲಿ, ಸುಮಾರು 10 ಲಕ್ಷ ವೈದ್ಯಕೀಯ ದಾಖಲೆಗಳು, ಕ್ಷ-ಕಿರಣಗಳ ಚಿತ್ರಗಳು ಮತ್ತು ಸ್ಕ್ಯಾನ್‌ಗಳುಳ್ಳ  120 ದಶಲಕ್ಷ ವೈದ್ಯಕೀಯ ಚಿತ್ರಗಳು ಸೋರಿಕೆಯಾಗಿದ್ದವು. ಸುಮಾರು 30 ಮಿಲಿಯನ್ ಉದ್ಯೋಗಾಕಾಂಕ್ಷಿಗಳ ವೈಯಕ್ತಿಕ ಡೇಟಾ ಇತ್ತೀಚೆಗೆ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿತ್ತು.


ಜೂನ್ 2020 ರಲ್ಲಿ, ಸುಮಾರು 10 ಲಕ್ಷ ಭಾರತೀಯರ 100 ಜಿಬಿ ಡೇಟಾ ಸೋರಿಕೆಯಾಗಿತ್ತು.ಸೋರಿಕೆಯಾದ ಮಾಹಿತಿಗಳಲ್ಲಿ ಹೆಚ್ಚಿನವು ಅವರ ಗುರುತಿನ ದಾಖಲೆಗಳಾಗಿದ್ದವು. ಯಾರೋ ಒಬ್ಬ ಅನಾಮಧೇಯ ವ್ಯಕ್ತಿ ಅದನ್ನು $4800 ( ಸುಮಾರು 3.57 ಲಕ್ಷ ) ಕೊಟ್ಟು ಡಾರ್ಕ್ ವೆಬ್ನಲ್ಲಿ ಖರೀದಿ ಮಾಡಿದ್ದ.

ಡೇಟಾ ಬ್ರೋಕರಿಂಗ್ ಕಂಪನಿಗಳು ಇಂತಹ ಸೋರಿಕೆಗಳಿಗಾಗಿ ಕಾಯುತ್ತ ಕೂತಿರುತ್ತವೆ. ಯಾಕೆಂದರೆ ಇದು ಅವರಿಗೆ ಲಾಭವನ್ನು ತಂದುಕೊಡುವ ಕುದುರೆ. ಅಂತಹ ಕಂಪನಿಗಳು ಸೋರಿಕೆಯಾದ ಡೇಟಾವನ್ನು ಸಂಗ್ರಹಿ, ಅದನ್ನು ವ್ಯವಸ್ಥಿತ ರೂಪಕ್ಕೆ ಇಳಿಸಿ, ನಂತರ ಅದನ್ನು ಇತರ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ.

ಮೂರನೆಯ ಮಾರ್ಗವೆಂದರೆ : ನಕಲಿ ವೆಬ್‌ಸೈಟ್ ರಚಿಸುವುದು ( Fake Website ).


Fake Site of Flipkart
ಇದನ್ನು ಸಾಮಾನ್ಯವಾಗಿ ಎಲ್ಲರು ಮಾಡಿರುತ್ತೀರಾ. ವಾಟ್ಸಾಪ್ಪ್ ನಲ್ಲಿ ಫಾರ್ವರ್ಡ್ ಇದನ್ನು ನೋಡಿರಬಹುದು. ಫ್ಲಿಪ್‌ಕಾರ್ಟ್, ವಾಟ್ಸ್ ಆಪ್, ಅಮೆಜಾನ್, ಫೇಸ್‌ಬುಕ್ ಮತ್ತು ಕೌನ್ ಬನೇಗಾ ಕ್ರೊರೆಪತಿಯಂತಹ ಜನಪ್ರಿಯ ವೆಬ್‌ಸೈಟ್‌ಗಳ ತದ್ರೂಪಿ ನಕಲಿ ವೆಬ್ಸೈಟ್ ಸೃಷ್ಟಿಸಿ ಜನಗಳ ಡೇಟಾವನ್ನು ಪಡೆಯುವ ಖದೀಮರು ಬಹಳ ಇದ್ದಾರೆ. ಕೆಲವು ನಿಷ್ಕಪಟ ಜನರು ಈ ಹೆಣೆದ ಬಲೆಯನ್ನು ನೋಡಲು ವಿಫಲರಾಗಿಯೋ ಇಲ್ಲ, ದುರಾಸೆಯಿಂದಲೋ ಅವರವರ ವೈಯುಕ್ತಿಕ ಡೇಟಾವನ್ನು ಗೊತ್ತಿಲ್ಲದೇ ಖದೀಮರಿಗೆ ಹಸ್ತಾಂತರಿಸುತ್ತಾರೆ.

ಜನರನ್ನು ದರೋಡೆ ಮಾಡಲು, ವಂಚನೆ ಮಾಡಲು ಈ ವೆಬ್‌ಸೈಟ್‌ಗಳನ್ನು ಬಳಸಲಾಗುತ್ತಿದೆ. ಈ ಡೇಟಾವನ್ನು ಎಲ್ಲಿ ಮತ್ತು ಹೇಗೆ ಬಳಸಲಾಗುತ್ತಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದನ್ನು ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

೧. ಮೊದಲನೆಯದು ಮಾರ್ಕೆಟಿಂಗ್ಗಾಗಿ

ಈ ಡೇಟಾವು ಕೆಲವು ಕಂಪನಿಗಳಿಗೆ ಬಂಗಾರವಿದ್ದಂತೆ. ಅವರ ಉತ್ಪನ್ನಗಳನ್ನು ಉತ್ತೇಜಿಸಲು ಅವರು ಈ ಡೇಟಾದ ಮೂಲಕ ನಿಮ್ಮನ್ನು ಗುರಿಯಾಗಿಸಿಕೊಳ್ಳಬಹುದು.ಕೆಲವು ವಿಮಾ ಯೋಜನೆಗಳನ್ನು ಹೋಲಿಸಿ ನೋಡೋಣ ಎಂದು ವೆಬ್‌ಸೈಟ್‌ಗೆ ಭೇಟಿ ನೀಡಿದ ಮಂಜುನಾಥ ದೇಸಾಯಿ ಎಂಬುವವರಿಗೆ, ಇದ್ದಕ್ಕಿದ್ದಂತೆ, ವಿಮಾ ಕಂಪನಿಗಳಿಂದ ಕರೆಗಳು ಬರಲು ಪ್ರಾರಂಭಿಸಿದವು, ತಮ್ಮ ಕಂಪನಿಯ ಪಾಲಿಸಿಗಳನ್ನು ಖರೀದಿ ಮಾಡುವಂತೆ ಮನವೊಲಿಸಲು ಶುರು ಮಾಡಿದ್ದರು.

೨. ಎರಡನೇಯದು :  ಅನ್ವರ್ ಹುಸೇನ್ ಅವರ ಪ್ರಕರಣದಲ್ಲಿ ಕಂಡನಂತಹ ವಂಚನೆಯ ಪ್ರಕರಣ. ಇದು ಅತ್ಯಂತ ಚಾಲ್ತಿಯಲ್ಲಿರುವ ವಂಚನೆಯಾಗಿದೆ.

ಐಐಎಂನ ಪ್ರಾಧ್ಯಾಪಕ ರಾಹುಲ್ ದೇ ಪ್ರಕಾರ, ಹಗರಣಕಾರರು ನಿಮ್ಮನ್ನು ವಂಚಿಸಲು ಬಳಸುವ ಸಾಮಾನ್ಯ ಹಾಗು ಪ್ರಮುಖ  ವಿಧಾನ ಎಂದರೆ  ನಿಮ್ಮ ಒಟಿಪಿಯನ್ನು ಪಡೆಯುವುದು. ಮೊದಲು ಅಪರಾಧಿಗಳು ನಿಮ್ಮ ಡೇಟಾವನ್ನು ಕಲೆಹಾಕುತ್ತಾರೆ. ನಂತರ ಬ್ಯಾಂಕ್ ಸಿಬ್ಬಂದಿಯಂತೆ ಕರೆ ಮಾಡಿ, ನಂಬಿಕೆ ಹುಟ್ಟಿಸಲು ನಿಮ್ಮ ವೈಯಕ್ತಿಕ ಮಾಹಿತಿಗಳಾದ  ಹೆಸರು, ಫೋನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಹೇಳುತ್ತಾರೆ. ಅದಾದ ನಂತರ ನಿಮ್ಮ ಒಟಿಪಿ ಮತ್ತು ಸಿವಿವಿ ಹಂಚಿಕೊಳ್ಳುವಂತೆ ನಿರ್ದೇಶಿಸುತ್ತಾರೆ. ಇದರಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಯವರು ಕೈವಾಡ ತುಂಬಾ ಹೆಚ್ಚು. ಇಂತಹ ಪ್ರಕರಣದ ಉದಾಹರಣೆಯನ್ನು  ನಾವು ನೆಟ್‌ಫ್ಲಿಕ್ಸ್ ವೆಬ್ ನಾಟಕ "ಜಮಾತ್ರಾ"ದಲ್ಲಿ ಕಾಣಬಹುದು.

ಇನ್ನು ಹೇಗೆ ನಮ್ಮ ಡೇಟಾದ ಬಗ್ಗೆ ತಿಳಿಯೋಣ.

ನಿಮ್ಮ ಡೇಟಾದಿಂದ ಹಲವಾರು ಪ್ರಯೋಜನಗಳಿವೆ.

ಸೋರಿಕೆಯಾದ ಡೇಟಾವನ್ನು ಮುಖ್ಯವಾಗಿ ಎರಡು ವಿಷಯಗಳಿಗೆ ಬಳಸಬಹುದು: ಮಾರ್ಕೆಟಿಂಗ್ಗಾಗಿ ( Marketing)  ಮತ್ತು ವಂಚನೆಗಾಗಿ ( Fraud ) .

ನಾವು ಇಲ್ಲಿ ತನಕ ಅನೇಕ ಡೇಟಾಬೇಸ್‌ಗಳ ಬಗ್ಗೆ ಮಾತನಾಡಿದ್ದೇವೆ. ಹಾಗಿದ್ದರೆ ಅದರಲ್ಲಿ ಯಾವುದಕ್ಕೆ ಹೆಚ್ಚು ಮೌಲ್ಯ ಇರಬಹುದು ಹೇಳಿ? 

ಮಾಜಿ ಡೇಟಾ ಬ್ರೋಕರ್ ಹಿಮಾಂಶು ಭಟ್ ಹೇಳಿಕೆ ಪ್ರಕಾರ, ವಿದ್ಯಾರ್ಥಿಗಳ ಡೇಟಾಬೇಸ್ ಅತ್ಯಂತ ಮೌಲ್ಯಯುತವಾದದ್ದಾಗಿದೆ  ಅವರ ಪ್ರಕಾರ, ವಿದ್ಯಾರ್ಥಿಗಳ ಡೇಟಾಬೇಸ್ ಕಂಪನಿಗಳಿಗೆ ಚಿನ್ನದ ಗಣಿ ( Gold Mine) ಇದ್ದ ಹಾಗೆ.

ಮೊದಲು ನಿಮಗೆ ಹೇಳಿದಂತಹ ಕಥೆ ನೆನಪಿದೆಯೇ? ಹತ್ತನೇ ಹಾಗು ಹನ್ನೆರಡನೇ ಕ್ಲಾಸ್ಸಿನ ವಿದ್ಯಾರ್ಥಿಗಳ ಡೇಟಾ ಸೋರಿಕೆ ಮಾಡಿದ ಮೂವರು ಕಂಪನಿ ಮಾಲೀಕರ ಘಟನೆ ನೆನಪಿದೆಯೇ? ಖಾಸಗಿ ಕಾಲೇಜುಗಳಿಂದ ಹಲವಾರು ದೂರವಾಣಿ ಕರೆಗಳು ಬರುತ್ತಿವೆ ಎಂದು ಅನೇಕ ಪೋಷಕರು ದೂರಿದ ನಂತರ ಈ ಮೂವರನ್ನು ಬಂಧಿಸಲಾಯ್ತು.

ವಿದ್ಯಾರ್ಥಿಗಳ ಡೇಟಾಬೇಸ್ ಭಾರತದಲ್ಲಿ ಅತ್ಯಂತ ಮೌಲ್ಯಯುತವಾಗಿದೆ ಎಂಬುದು ಒಂದು ಕಹಿ ಸತ್ಯ. ಈಗಿನ ಸ್ಪರ್ಧಾತ್ಮಕ ವಾತಾವರಣದಲ್ಲಿ, ಪೋಷಕರು ತಮ್ಮ ಮಕ್ಕಳಿಗೆ ಸಹಾಯ ಮಾಡಲು ಅಥವಾ ಒಳ್ಳೆಯದಾಗಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಅದಕ್ಕಾಗಿಯೇ ಅವರು ಕಾಲೇಜು ಪ್ರವೇಶಾತಿ ವಿಷಯದಲ್ಲಿ ಮತ್ತು ಡೇಟಾ ಬ್ರೋಕರ್ಗಳಿಂದ ಮೋಸಕ್ಕೆ ಒಳಗಾಗುತ್ತಾರೆ. ಅನ್ವರ್ ಹುಸೇನ್ ಅವರ ಪ್ರಕರಣದಲ್ಲಿ ನಾವು ಗಮನಿಸಿದಂತೆ, ಅವರು ತಮ್ಮ ಪೂರ್ವಜರ ಭೂಮಿಯನ್ನು ಮಾರುವುದಲ್ಲದೆ, ತಮ್ಮ ಜೀವನ ಉಳಿತಾಯವನ್ನು ಸಹ ತಮ್ಮ ಮಗನ ಪ್ರವೇಶಾತಿಗೋಸ್ಕರ ಖರ್ಚು ಮಾಡಿದ್ದರು.

ಡೇಟಾಬೇಸ್‌ಗಳನ್ನು ಸಂಗ್ರಹಿಸುವುದು ಸುಲಭ ಎಂದು ಪತ್ರಕರ್ತರು ಹೇಳುತ್ತಾರೆ. 2020ರ  ನೀಟ್‌ ಪರೀಕ್ಷೆಯ ಡೇಟಾಬೇಸ್ ಅನ್ನು ಕೇವಲ $ 20 ಕ್ಕೆ ಮಾರಾಟ ಮಾಡಲಾಗಿತ್ತು. ಈ ಸೋರಿಕೆಯ ಹಿಂದೆ ನೀಟ್ ಸಂಸ್ಥೆಯ ಉದ್ಯೋಗಿಗಳದೇ ಕೈವಾಡ ಇತ್ತೆಂದು ಡೇಟಾ ಬ್ರೋಕರ್ ಒಬ್ಬರು ಹೇಳಿದ್ದಾರೆ.

ಈ ಸಮಸ್ಯೆಗಳು ತುಂಬಾ ಸಂಕೀರ್ಣವಾಗಿವೆ. ಆದರೆ, ಪರಿಹಾರಗಳು ಅಷ್ಟು ಕ್ಲಿಷ್ಟವಾಗಿ ಇಲ್ಲ. ಒಂದು ಸಮೀಕ್ಷೆಯ ಪ್ರಕಾರ,  ಸಮೀಕ್ಷೆಯಲ್ಲಿ ಭಾಗವಹಿಸಿದ 75% ಜನ ಎಂದಿಗೂ ಗೌಪ್ಯತೆ ನೀತಿಗಳನ್ನು ಓದುವ ಗೋಜಿಗೆ ಹೋಗಲಿಲ್ಲ ಎಂಬುದನ್ನು ತೋರಿಸುತ್ತದೆ. ಗೌಪ್ಯತೆ ನೀತಿಗಳು ಅಂದರೆ ಯಾವುವು ಮತ್ತು ಅವುಗಳು ನಮ್ಮ ಡೇಟಾವನ್ನು ಹೇಗೆ ರಕ್ಷಿಸುತ್ತವೆ ಎಂಬುದರ ಬಗ್ಗೆ ನಮ್ಮಲ್ಲಿ ಹಲವರಿಗೆ ತಿಳಿದಿಲ್ಲದಿರಬಹುದು. ಅದಕ್ಕಾಗಿಯೇ ನಮಗೆ ಭಾರತದಲ್ಲಿ ಹೆಚ್ಚಿನ ಜಾಗೃತಿ ಅಭಿಯಾನಗಳು ಆಗಬೇಕಿವೆ. ಎಐಬಿ ನೇತೃತ್ವದ ಜಾಗೃತಿ ಅಭಿಯಾನ ಇದಕ್ಕೆ ಒಂದು  ಉದಾಹರಣೆ.

ಕೆಫೆಗಳು ಮತ್ತು ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಫೋನ್ ಅನ್ನು ನೀವು ಚಾರ್ಜ್ ಮಾಡಿದಾಗಲೆಲ್ಲಾ, ಹ್ಯಾಕರ್‌ಗಳು ನಿಮ್ಮ ಫೋನ್ ಒಳಹೊಕ್ಕು, ಡೇಟಾವನ್ನು ಪಡೆಯಬಹುದು ಎಂಬ ವಿಷಯ ನಿಮಗೆ ಗೊತ್ತಿತ್ತೇ? ಬಹುತೇಕರಿಗೆ ತಿಳಿದಿಲ್ಲದಿರಬಹುದು.

ಈ ಲೇಖನವನ್ನು ಓದುವ ಮೊದಲು, ರೆಸ್ಟೋರೆಂಟ್‌ನಲ್ಲಿ ನೀವು ನೀಡುವ ಫೀಡ್ಬ್ಯಾಕ್ ವಿವರಗಳು ಸಹ ಮಾರಾಟ ಮಾಡಬಹುದು ಎಂಬ ಸಂಗತಿ ಗೊತ್ತಿತ್ತೇ ? ಕೆಲವರಿಗೆ  ಗೊತ್ತಿರಬಹುದು.

ಮುಂದೊಮ್ಮೆ  ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅರ್ಜಿಗಳಲ್ಲಿ ಭರ್ತಿ ಮಾಡುವಾಗ, ಅದು ದುರುಪಯೋಗ ಆಗುವ ಸಾಧ್ಯತೆಗಳು ಇವೆಯೇ? ಎಂದು ಪರಿಶೀಲಿಸಿ.

ಕೊನೆಯಲ್ಲಿ, ಮೊದಲು ನೀವು, ನಿಮ್ಮಲ್ಲಿ ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ತದನಂತರವೇ  ನಮ್ಮ ಸರ್ಕಾರದಿಂದ ಬಲವಾದ ಡೇಟಾ ಸಂರಕ್ಷಣಾ ಮಸೂದೆಯನ್ನು ಕೇಳುವ ಹಕ್ಕು ನಿಮ್ಮ ಬಳಿ ನೈತಿಕವಾಗಿ ಬರುತ್ತದೆ.

ಇಷ್ಟನ್ನು ನಾವು ಮಾಡಿದರೆ, ಆಯುಶಿ ಸಹಾ ಮತ್ತು ಅನ್ವರ್ ಹುಸೇನ್ ಅವರೊಂದಿಗೆ ಆದ ಅನಾಹುತ ಮತ್ತು ವಂಚನೆ ಮತ್ತೇ   ಪುನರಾವರ್ತಿಸುವುದಿಲ್ಲ.

ನೀವು  ನಿಮ್ಮ ಸ್ನೇಹಿತರ ಬಳಿ ಮತ್ತು ಕುಟುಂಬಸ್ಥರೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡಲೇಬೇಕು.ಕನಿಷ್ಠ ಪಕ್ಷ ನೀವು ಈ ಲೇಖನವನ್ನು ಅವರೊಂದಿಗೆ ಹಂಚಿಕೊಳ್ಳಿ.


  ಮೂಲಗಳು 

Rest of the World

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು