ಕೇವಲ 25 ಲಕ್ಷದಷ್ಟು ಜನಸಂಖ್ಯೆ ಇರುವ ಈ ರಾಜ್ಯಭಾರತದಲ್ಲಿ ಅನೇಕ ಕ್ರೀಡಾ ದಿಗ್ಗಜರನ್ನು,  ಒಲಿಂಪಿಯನ್‌ಗಳನ್ನು ನೀಡಿದೆ ಎಂದರೆಅದು ಒಂದು ಹುಬ್ಬೇರಿಸುವಂತಹ ಸಾಧನೆಯಲ್ಲವೇ?

How does Manipur produce so many Olympians? ಮಣಿಪುರ ರಾಜ್ಯವು, ದೇಶದ ಒಲಿಂಪಿಯನ್‌ಗಳನ್ನು ಹೇಗೆ ಸಿದ್ಧಗೊಳಿಸುತ್ತದೆ ?

ಮೇರಿ ಕೋಮ್, ಕುಂಜರಾಣಿ ದೇವಿ, ಸರಿತಾ ದೇವಿ, ಸಂಜಿತಾ ಚಾನು, ದೇವೇಂದ್ರೋ ಸಿಂಗ್, ಡಿಂಕೊ ಸಿಂಗ್, ಮೀರಾಬಾಯಿ ಚಾನು, ಕಲ್ಪನಾ ದೇವಿ, ಬೋಯಿಥಂಗ್  ಹೀಗೆ ಹೆಸರಿಸುತ್ತಾ  ಹೋದರೆ, ಪಟ್ಟಿಯೇ ಮುಗಿಯುವುದಿಲ್ಲ.  ಈ ಕ್ರೀಡಾಪಟುಗಳ ನಡುವೆ ಇರುವ ಸಾಮ್ಯತೆಯೇನೆಂದರೆ, ಎಲ್ಲರೂ ಸಹ ಈಶಾನ್ಯ ಭಾರತದ ಮಣಿಪುರ ರಾಜ್ಯದವರು. ಈಶಾನ್ಯದ ಮಣಿಪುರ ರಾಜ್ಯವು, ದೇಶದ ಒಲಿಂಪಿಯನ್‌ಗಳನ್ನು ಹೇಗೆ ಸಿದ್ಧಗೊಳಿಸುತ್ತದೆ ? ಅದರ ಹಿಂದಿನ ಕಥೆ ಏನು? ಎಂಬುದನ್ನ ತಿಳಿಯೋಣ. 

manipur+athletes+india+olympics
Athletes from Manipur State, India

 ಇದರ ಹಿಂದೆ ಮೂರು ಕಾರಣಗಳಿವೆ.

ಮೊದಲನೆಯದೆಂದರೆ, ಮಣಿಪುರದಲ್ಲಿ ಗಟ್ಟಿಯಾಗಿ ನೆಲೆನಿಂತಿರುವ ಕ್ರೀಡಾ ಸಂಸ್ಕೃತಿ.

2017 ರಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಭಾರತೀಯ ಅಂಡರ್ -17 ತಂಡದ ನಾಯಕತ್ವ ವಹಿಸಿದ್ದ ಅಮರ್ಜಿತ್ ಸಿಂಗ್ ಕಿಯಾಮ್ ಪ್ರಕಾರ, "ಮಣಿಪುರದಲ್ಲಿ ಪ್ರತಿಯೊಬ್ಬರೂ ಪ್ರತಿಯೊಂದೂ ಕ್ರೀಡೆಯನ್ನು ಇಷ್ಟಪಡುತ್ತಾರೆ, ಅದು ಫುಟ್ಬಾಲೇ ಆಗಿರಲಿ, ಹಾಕಿಯೇ ಆಗಿರಲಿ, ಬಾಕ್ಸಿಂಗ್ ಆಗಿರಲಿ ಅಥವಾ ಕುಸ್ತಿಯೇ ಆಗಿರಲಿ." ಎಂದು ಹೇಳಿದ್ದಾರೆ.

ರಾಷ್ಟ್ರೀಯ ಫುಟ್ಬಾಲ್ ಆಟಗಾರ ಗೌರಮಂಗಿ ಸಿಂಗ್ ಹೇಳುತ್ತಾರೆ, "ಮಣಿಪುರದಲ್ಲಿ ಯಾವುದೇ ಮಾಲ್‌ಗಳು ಅಥವಾ ಮಲ್ಟಿಪ್ಲೆಕ್ಸ್‌ಗಳಿಲ್ಲ. ಆದ್ದರಿಂದ ಜನ ಕ್ರೀಡೆಯನ್ನೇ ಮನರಂಜನಾ ವಸ್ತುವಾಗಿ ತಗೆದುಕೊಂಡಿದ್ದಾರೆ." ಅವರ ಹೇಳಿಕೆಗೆ ಸಾಕ್ಷಿಯಂತೆ, 2017 ರಲ್ಲಿ ಇಂಫಾಲ್‌ನಲ್ಲಿ ನಡೆದ ಸ್ನೇಹ ಪಂದ್ಯವೊಂದಕ್ಕೆ , 20,000 ಜನರು ವೀಕ್ಷಕರಾಗಿ ಬಂದಿದ್ದರು. ಅಚ್ಚರಿಯ ಮಾತೆಂದರೆ, ಇಂಫಾಲ್‌ನಲ್ಲಿ ಇರುವ ಜನಸಂಖ್ಯೆಯು ಕೇವಲ 2.5 ಲಕ್ಷ.

ಮಣಿಪುರದಲ್ಲಿ ಇಂತಹ ಕ್ರೀಡಾ ಸಂಸ್ಕೃತಿಗೆ, ಹಲವು ಕ್ಲಬ್‌ಗಳು ಸಹ ಕಾರಣವಾಗಿವೆ.

NEROCA ಫುಟ್ಬಾಲ್ ಕ್ಲಬ್ ನ CEO ನೊಬಾ ತಂಗ್ಜಮ್, "ಇಲ್ಲಿನ ಸ್ಥಳೀಯ ಕ್ಲಬ್ ಗಳು ನೀಡುವಂತಹ ಪ್ರೋತ್ಸಾಹ, ದೇಶದ ಬೇರೆ ಯಾವುದೇ ಕ್ಲಬ್ಗಳಲ್ಲಿ ತಾನು ನೋಡಿಲ್ಲ" ಎಂದು ಹೇಳುತ್ತಾರೆ. ಹಾಗೆಂದು ಮಣಿಪುರದಲ್ಲಿನ ಕ್ಲಬ್‌ಗಳನ್ನು ಯಾವುದೇ ವೃತ್ತಿಪರರಿಂದ ನಡೆಸಲಾಗುತ್ತಿಲ್ಲ. ಬದಲಾಗಿ ಸ್ವಯಂಸೇವಕರು ನಡೆಸುತ್ತಿದ್ದಾರೆ. ಈ ಸ್ವಯಂಸೇವೆ ಪದ್ಧತಿ, ಮಣಿಪುರದ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. 2014 ರಲ್ಲಿ ಮಣಿಪುರದ ಕ್ರೀಡಾ ಮತ್ತು ಯುವ ವ್ಯವಹಾರಗಳ ಆಯುಕ್ತರಾಗಿದ್ದ ಆರ್‌ಕೆ ನಿಮಾಯ್ ಸಿಂಗ್, " ಈ ಸ್ವಯೋಸೇವಾ ಭಾವನೆಯನ್ನು ನಾವು, ಲಾಲಪ್‌ ಎಂಬ ಮಣಿಪುರಿ ಸಂಪ್ರದಾಯಲ್ಲಿ ನಾವು ಕಾಣಬಹುದು." ಎಂದು ಹೇಳುತ್ತಾರೆ. 

ಅದರ ಹಿಂದಿನ ಕಥೆ ಹೀಗಿದೆ ,

 ಮಣಿಪುರ ರಾಜಪ್ರಭುತ್ವದಲ್ಲಿದ್ದಾಗ, ಲಾಲಪ್ ಎಂಬುದು ಒಂದು ಮಣಿಪುರಿ ಸಂಪ್ರದಾಯವಾಗಿತ್ತು. ಅದರ ಪ್ರಕಾರ 17 ರಿಂದ 60 ರ ವಯಸ್ಸಿನ ನಡುವಿನ ಪ್ರತಿ ಪುರುಷನು, ವರ್ಷಕ್ಕೆ ಒಂದು ನಿರ್ದಿಷ್ಟ ದಿನಗಳವರೆಗೆ ಸ್ವಯಂಪ್ರೇರಣೆಯಿಂದ, ರಾಜ್ಯಕ್ಕಾಗಿ ಕೆಲಸ ಮಾಡಲು ಮುಂದೆ ಬರಬೇಕಿತ್ತು.  ಕಾಲಾಂತರದ ಮೇಲೆ, ಈ ಸಂಪ್ರದಾಯವು  ಶೋಷಣೆಯ ಸಾಧನವೂ ಆಯಿತು.

ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ, ಮಣಿಪುರಿ ಮಹಿಳೆಯರು ಬ್ರಿಟಿಷರು ಪರಿಚಯಿಸಿದ ಬಲವಂತದ ಕಾರ್ಮಿಕ ವ್ಯವಸ್ಥೆಯ ವಿರುದ್ಧ ನುಪಿ ಲ್ಯಾನ್ ಎಂಬ ಪ್ರತಿಭಟನಾ ಚಳುವಳಿಗಳನ್ನು ಆರಂಭಿಸಿದರು. ಸ್ವಾತಂತ್ರ್ಯದ ನಂತರ, ಈ ಶೋಷಣೆ ಕೊನೆಗೊಂಡಿತು. ಆದರೆ ಸ್ವಯಂಸೇವೆಯ ಮನೋಭಾವ ಜನರ ಮನದಲ್ಲಿ ಹಾಗೆಯೇ ಉಳಿಯಿತು.

Meeting for the first Nupi Lan. Photo taken from Manipur State Archives
ಮೊದಲ ನೂಪಿ ಲ್ಯಾನ್‌ ಸಭೆ
ಪತ್ರಕರ್ತ ದೀಪಂಜನ್ ಸಿನ್ಹಾರು ಹೇಳುವ ಪ್ರಕಾರ, ಅಲ್ಲಿನ ಸಮುದಾಯಗಳೇ ನಿಧಿಗಳನ್ನು ಸಂಗ್ರಹಿಸಿ, ಅವರೇ ಈ ಕ್ಲಬ್ ಗಳನ್ನೂ ನೋಡಿಕೊಳ್ಳುತ್ತಾರೆ. ಯುವಕರಿಗೆ ತರಬೇತಿ ನೀಡುವುದರ ಮೂಲಕ, ಸಲಕರಣೆಗಳನ್ನು ದಾನ ಮಾಡುವುದರ ಮೂಲಕ ಅಥವಾ ತರಬೇತಿ ಪಡೆಯುವವರ ಊಟಕ್ಕೆ ಸಹಾಯಧನ ನೀಡುವುದರ ಮೂಲಕ, ಅನೇಕ ಮಾಜಿ ಕ್ರೀಡಾಪಟುಗಳು ಸಹ ಕ್ಲಬ್‌ಗಳನ್ನು ಬೆಳೆಸುತ್ತಿದ್ದಾರೆ.

ಇಂಫಾಲ್‌ನ ಸಮಾಜ ಸುಧಾರಕರ ಕ್ಲಬ್‌ನ ಸದಸ್ಯರಾದ ಚಿಂಗ್ಲೆಂಬಾ ರಾನ್ ಹೇಳುವಂತೆ, “ಎರಡು ವರ್ಷಗಳ ಹಿಂದೆ, ಅವರ ಪ್ರದೇಶದ ಒಬ್ಬ ಟೇಕ್ವಾಂಡೋ ಆಟಗಾರನಿಗೆ, ಮುಂಬೈನಲ್ಲಿ ರಾಷ್ಟ್ರೀಯ ಮಟ್ಟದ ಕೂಟದಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ಅವನಿಗೆ ಅಲ್ಲಿ ಹೋಗುವಷ್ಟು ಸೌಕರ್ಯಗಳು ಇರಲಿಲ್ಲ. ಇದನ್ನು ಮನಗಂಡ ಅವರ ಸಮುದಾಯದ  ಜನ, ಎಲ್ಲರೂ ಚಂದಾ ಎತ್ತಿ, ಅವನಿಗೆ ಅನುಕೂಲ ಮಾಡಿಕೊಟ್ಟರು.” ಇಂಥಹ ವ್ಯವಸ್ಥೆಯು, ಮಣಿಪುರದಲ್ಲಿ ಕ್ರೀಡೆಗೆಂದೇ, ಒಂದು ಆದರ್ಶ ವ್ಯವಸ್ಥೆಯನ್ನೇ ಹುಟ್ಟು ಹಾಕಿದೆ.

ಚಿಂಗ್ಲೆಂಬಾ ಹೇಳುತ್ತಾರೆ, “ನಮ್ಮ ಕ್ಲಬ್‌ನ ಒಬ್ಬ ಫುಟ್ಬಾಲ್ ಆಟಗಾರ ಧರ್ಮಚಂದ್ರ, ಈಗ 'ಮುಂಬೈ ಎಫ್‌ಸಿ' ಪರ ಆಡುತ್ತಾರೆ. ಅವನು ಇಂಫಾಲದಲ್ಲಿದ್ದಾಗಲೆಲ್ಲ, ಅವನು ಕ್ಲಬ್ ಗೆ ಬಂದು ತರಬೇತಿಯನ್ನು ಕೊಡುತ್ತಾನೆ. ಇದಕ್ಕಾಗಿಯೇ ಅವನು ಕೆಲ ಸಮಯವನ್ನು ಮೀಸಲು ಇಟ್ಟಿರುತ್ತಾನೆ.” 

 ಎರಡನೇ ಕಾರಣವೆಂದರೆ

ಮಣಿಪುರದ ಕ್ರೀಡಾಪಟುಗಳ ದೇಹದ ರಚನೆಯು, ವಿಶೇಷವಾಗಿ ಬಾಕ್ಸಿಂಗ್, ವೇಟ್ ಲಿಫ್ಟಿಂಗ್ ಮತ್ತು ಫುಟ್‌ಬಾಲ್‌ಗೆ ಬೇಕಾಗುವ ದೇಹ ರಚನೆಗೆ ಹೋಲುತ್ತವೆ.

ಭಾರತದ ಮಹಿಳಾ ಫುಟ್ಬಾಲ್ ಆಟಗಾರ್ತಿ ಡ್ಯಾಂಗ್ಮೇ ಗ್ರೇಸ್, "ಮಣಿಪುರದ ಕ್ರೀಡಾಪಟುವಿನ ದೇಹದ ರಚನೆಯು ಇತರ ಆಟಗಾರರಿಗಿಂತ ಭಿನ್ನವಾಗಿದೆ" ಎಂದು ಹೇಳುತ್ತಾರೆ. ದೇಹದ ರಚನೆಯ ಪ್ರಮುಖ ಅಂಶವೆಂದರೆ ಕಡಿಮೆ ಗುರುತ್ವಾಕರ್ಷಣಾ ಕೇಂದ್ರ. ಲಿಯೋನೆಲ್ ಮೆಸ್ಸಿ ಇದಕ್ಕೆ ಅತ್ತ್ಯುತ್ತಮ ಉದಾಹರಣೆ.

ಈ ಕಡಿಮೆ ಗುರುತ್ವಾಕರ್ಷಣಾ ಕೇಂದ್ರವು ವಿಶೇಷವಾಗಿ ವೇಟ್ ಲಿಫ್ಟಿಂಗ್ (ಕಡಿಮೆ ತೂಕದ ವಿಭಾಗಗಳಲ್ಲಿ) ಹೆಚ್ಚು ಸಹಾಯಕವಾಗುತ್ತದೆ. ಅದಕ್ಕಾಗಿಯೇ ಅನೇಕ ಮಣಿಪುರಿ ಮಹಿಳೆಯರು ಭಾರೀ ತೂಕವನ್ನು ಪರಿಣಾಮಕಾರಿಯಾಗಿ ಎತ್ತ ಬಲ್ಲರು.ಟೋಕಿಯೊ 2020 ರಲ್ಲಿ, 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಫಿಲಿಪಿನೋ ಹಿಡಿಲಿನ್ ಡಯಾಜ್ ಅವರ ಎತ್ತರ  4 ಅಡಿ 11 ಇಂಚು ಇದೆ. ಮೀರಾಬಾಯಿ ಚಾನು ಕೂಡ ಅದೇ ಎತ್ತರವನ್ನು ಹೊಂದಿದ್ದಾರೆ. ಈ ಕಡಿಮೆ ಗುರುತ್ವಾಕರ್ಷಣಾ ಕೇಂದ್ರದ ಆಟವನ್ನು ಇಟ್ಟುಕೊಂಡೇ ವೇಟ್ ಲಿಫ್ಟಿಂಗ್ನಲ್ಲಿ ಚೀನಾದ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಮಾಜಿ ಚಾಂಪಿಯನ್ ಮತ್ತು ತರಬೇತುದಾರರು ಆದ, ಅನಿತಾ ಚಾನು, “ ವೇಟ್ ಲಿಫ್ಟಿಂಗ್‌ಗೆ ಬೇಕಾದ ದೇಹ ರಚನೆಯನ್ನು ಮಣಿಪುರಿಗಳು ಹೊಂದಿದ್ದಾರೆ. ಸಣ್ಣಗಿದ್ದರೂ, ಅಗಾಧ ಸ್ನಾಯುವಿನ ಶಕ್ತಿಯನ್ನು ಹೊಂದಿರುತ್ತಾರೆ". ಎಂದು ಹೇಳುತ್ತಾರೆ.

 ಈ ಅಂಶಗಳ ಹೊರತಾಗಿಯೂ, ಒಲಿಂಪಿಕ್ಸ್‌ನಲ್ಲಿ ಯಶಸ್ವಿಯಾಗುವುದು ಅಷ್ಟು ಸುಲಭವಲ್ಲ.

ಮೇರಿ ಕೋಮ್ ಮತ್ತು ಡಿಂಕೊ ಸಿಂಗ್ ಅವರಿಗೆ ತರಬೇತಿ ನೀಡಿರುವ ಎಲ್ ಐಬೊಮ್ಚಾ ಸಿಂಗ್, ಸ್ಪರ್ಧಾಳುಗಳಿಗೆ  ಪ್ರಾಯೋಜಕತ್ವಗಳನ್ನು ಕೊಡಿಸುವುದು ಇನ್ನೂ ಕಷ್ಟಕರ ಎಂದು ಹೇಳುತ್ತಾರೆ. ಇದಕ್ಕಾಗಿಯೇ ಆಟಗಾರರು ರಾಜ್ಯವನ್ನು ತೊರೆದು, ವೃತ್ತಿಪರ ಲೀಗ್ ಅಥವಾ ಸೇನೆ, ಪೊಲೀಸ್ ಪಡೆ ಅಥವಾ ರೈಲ್ವೇಯಂತಹ ಸಂಸ್ಥೆಗಳನ್ನು ಸೇರಿಕೊಂಡು, ಸ್ಥಿರವಾದ ಆದಾಯವನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. 

 ರಾಜಕೀಯವೂ ಸಹ ಸವಾಲನ್ನು ಸೃಷ್ಟಿಸುತ್ತದೆ.

2017 ರಲ್ಲಿ, ಯುನೈಟೆಡ್ ನಾಗಾ ಕೌನ್ಸಿಲ್ನ ದಿಗ್ಬಂಧನದಿಂದಾಗಿ, ಮೊಟ್ಟೆಗಳ ಪೂರೈಕೆಗೆ ಅಡಚಣೆಯಾಯ್ತು. ಇದರಿಂದಾಗಿ ಕೆಲವು ಫುಟ್ಬಾಲ್ ಆಟಗಾರರು, ತಮ್ಮ ಆಹಾರಕ್ಕೆ ಬೇಕಾದ ಪ್ರೋಟೀನ್ ಅವಶ್ಯಕತೆಗಳನ್ನು ಅಂದು  ಪೂರೈಸಲು ಸಾಧ್ಯವಾಗಲಿಲ್ಲ. ಇಂತಹ ದಂಗೆಗಳಿಂದಾಗಿ, ಅನೇಕ ವಿದೇಶಿ ಆಟಗಾರರು ಕೂಡ ಮಣಿಪುರದಲ್ಲಿ ಆಡಲು ಹೆದರುತ್ತಾರೆ. ವಿದೇಶಿಯರು ಇಂತಹ ಸುದ್ದಿಗಳನ್ನು ಓದಿ, ಇಲ್ಲಿಗೆ ಬರಲು ಹೆದರುತ್ತಾರೆ ಎಂದು ನೊಬಾ ತಂಗ್ಜಮ್ ಹೇಳುತ್ತಾರೆ.

 ಮಣಿಪುರದ ಕ್ರೀಡಾ ಮತ್ತು ಯುವ ವ್ಯವಹಾರಗಳ ಮಾಜಿ ಆಯುಕ್ತ ಆರ್‌ಕೆ ನಿಮಾಯ್ ಸಿಂಗ್ ಒಂದು ಕಡೆ ಹೇಳುವಂತೆ "ಮಣಿಪುರದಲ್ಲಿ ಕ್ರೀಡಾ ಸಂಸ್ಕೃತಿ ಎಷ್ಟು ಪ್ರಬಲವಾಗಿದೆಯೆಂದರೆ, ದಂಗೆಕೋರರು ಕೂಡ ಕ್ರೀಡಾ ಆಟದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.ಒಂದು ವೇಳೆ ಮಾಡಿದರೂ, ಅಂಜದೆ ಜನ ಬಂದು ತಮ್ಮ ತಮ್ಮ ಅಭ್ಯಾಸದಲ್ಲಿಈ ತೊಡಗಿಕೊಳ್ಳುತ್ತಾರೆ. "

ಈ ಸವಾಲುಗಳ ಹೊರತಾಗಿಯೂ, ಮಣಿಪುರದ ಅನೇಕ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಮಾಡುತ್ತಿದ್ದಾರೆ. ಮುಂದೆ ಸಹ ಮಾಡಲಿದ್ದಾರೆ. ಒಲಿಂಪಿಕ್ಸ್‌ನ ಮೈದಾನದಲ್ಲಿ  ರಾಷ್ಟ್ರಗೀತೆ ಹಾಡಿ, ಜಗತ್ತಿನ ಮುಂದೆ ತಲೆ ಎತ್ತುವಂತೆ ಮಾಡಿದ್ದಾರೆ.

Sources

Postallow.com

Milaap.org