Why Cricket became more famous ? and Over the years, how people cornered Hockey in India? 

ನಮಸ್ಕಾರ ಗೆಳೆಯರೆ!  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ( Tokyo Olympics ) ಭಾರತೀಯ ಹಾಕಿ ತಂಡಗಳು ( Indian Hockey Teams) ನೀಡಿದ ಅತ್ಯುತ್ತಮ ಪ್ರದರ್ಶನದ ನಂತರ, ಭಾರತೀಯರಿಗೆ ಈಗ ಹಾಕಿ ( Hockey) ಹುಚ್ಚು ಆವರಿಸಿದೆ. ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಉತ್ತಮ ಪ್ರದರ್ಶನ ನೀಡುವುದರ ಮೂಲಕ ನಮಗೆ ಐತಿಹಾಸಿಕ ಕ್ಷಣಗಳನ್ನು ನೆನೆಯುವಂತೆ ಮಾಡಿದೆ. ಈ ಎಲ್ಲ ಕಾರಣಗಳಿಂದ, ಜನರು ಈಗ ಹಾಕಿ ನೋಡಲು ಹೆಚ್ಚು ಆಸಕ್ತಿ ವಹಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಪೀಳಿಗೆಗೆ ಈಗ ಹೇಳುವ ವಿಷಯ ಕೇಳಿದರೆ ಆಶ್ಚರ್ಯವಾಗಬಹುದು. ಭಾರತ ಹಿಂದೊಮ್ಮೆ  ಈ ಕ್ರೀಯೆಡೆಯಲ್ಲಿ ಸಾಮ್ರಾಟನಾಗಿತ್ತು. ಆಗಿನ ಭಾರತದಲ್ಲಿ, ಹಾಕಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿತ್ತು. ಆದರೆ ಕಾಲ ಬದಲಾದಂತೆ ಜನರ ಒಲವು ಸಹ ಬದಲಾಗುತ್ತ ಬಂತು. ಜನರು ಕ್ರಿಕೆಟ್ ಅನ್ನು ಹೆಚ್ಚು ಇಷ್ಟಪಡಲು ಶುರುಮಾಡಿದರು. ಹಾಕಿ, ಕ್ರಿಕೆಟ್ ಅಬ್ಬರದ ಮುಂದೆ, ಸದ್ದಿಲ್ಲದೇ ಮೂಲೆಗುಂಪಾಯ್ತು. ಹಾಗಾದರೆ, ಹಾಕಿ ಏಕೆ ಜನಮಾನಸದಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು? ಹಾಗೆಯೇ ಕ್ರಿಕೆಟ್ ಅದ್ಹೇಗೆ ತುಂಬಾ ಜನಪ್ರಿಯವಾಯಿತು? ಈಗಲೂ ಸಹ ಭಾರತೀಯರಲ್ಲಿ, ಹಾಕಿಯ ಬಗ್ಗೆ ಮೊದಲಿದ್ದ ಪ್ರೇಮವನ್ನು, ಮತ್ತೆ ತರಬಹುದೇ? ಇದೆಲ್ಲದರ ಉತ್ತರವನ್ನು ಮುಂದಿನ ಸಾಲುಗಳಲ್ಲಿ ಓದಿ.  

ಹಾಕಿ ಪರ್ವ( Year of Hockey): 

 ಸ್ನೇಹಿತರೇ, ನಮ್ಮ ಕಥೆಯನ್ನು 1936 ರಿಂದ ಆರಂಭಿಸೋಣ. ಆಗಿನ ಕಾಲದಲ್ಲಿ  ಅಡಾಲ್ಫ್ ಹಿಟ್ಲರ್( Adolf Hitler ) ಜರ್ಮನಿಯಲ್ಲಿ ಸರ್ವಾಧಿಕಾರಿಯಾಗಿದ್ದ. 1936 ರ ಒಲಿಂಪಿಕ್ ಕ್ರೀಡಾಕೂಟದ ಪ್ರಾಯೋಜಕತ್ವವನ್ನು, ಜರ್ಮನಿಯು ಹೊತ್ತಿತ್ತು. ಅದರ ರಾಜಧಾನಿ ಬರ್ಲಿನ್(Berlin Olympics) ನಲ್ಲಿ ಕೂಟವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಹಾಕಿಯ ಕೊನೆಯ ಪಂದ್ಯ ಆಡಿಸಲಾಗುತಿತ್ತು.  ಭಾರತ ವರ್ಸಸ್ ಜರ್ಮನಿ (India v/s Germany). ಭಾರತದ ಪುರುಷರ ಹಾಕಿ ತಂಡ ಸ್ವಲ್ಪ ಆತಂಕಕ್ಕೊಳಗಾಗಿತ್ತು.  ಏಕೆಂದರೆ ಹಿಂದಿನ ಘಟ್ಟಗಳ ಪಂದ್ಯದಲ್ಲಿ, ಜರ್ಮನಿ ಭಾರತದ ವಿರುದ್ಧ ಜಯ ಗಳಿಸಿತ್ತು. ಆದರೆ ಭಾರತವು ವಿಶೇಷ ಆಟಗಾರನನ್ನು ಹೊಂದಿತ್ತು. ಸ್ವತಃ ಹಾಕಿಯ ಮಾಂತ್ರಿಕರಾದ ಆಟಗಾರ, ಧ್ಯಾನ್ ಚಂದ್ ಅವರು ಭಾರತದ ತಂಡದಲ್ಲಿ ಇದ್ದರು. ಭಾರತ ಅತ್ಯಂತ ವೇಗದ ಆಟ ಆಡಿತು.  ಜರ್ಮನಿ, ತಾನು ಗೆಲ್ಲಲು, ತನ್ನ ಅತ್ಯುತ್ತಮ ಪ್ರಯತ್ನ ಮಾಡಿತು. ಆದರೆ ಜರ್ಮನಿಗೆ ಭಾರತದ ವಿರುದ್ಧ ಕೇವಲ ಒಂದು ಗೋಲನ್ನು ಮಾತ್ರ ಗಳಿಸಲು ಸಾಧ್ಯವಾಯಿತು.  ಮತ್ತೊಂದೆಡೆ, ಭಾರತವು ಜರ್ಮನಿಯ ವಿರುದ್ಧ 8 ಗೋಲುಗಳನ್ನು ಬಾರಿಸಿತು. ಆ ಎಂಟರಲ್ಲಿ , ಮೂರನ್ನು ಧ್ಯಾನ್ ಚಂದ್ ( Dhyan Chand) ಬಾರಿಸಿದ್ದರು.  ಇದು ಬಹಳ ಐತಿಹಾಸಿಕ ಆಟವಾಗಿತ್ತು.  ಧ್ಯಾನ್ ಚಂದ್ ರವರ ಈ ಚಮತ್ಕಾರಿ ಆತ ನೋಡಿ, ಪ್ರಭಾವಿತರಾದ ಅಡಾಲ್ಫ್ ಹಿಟ್ಲರ್, ಧ್ಯಾನ್ ಚಂದ್ ರನ್ನು ಹೇಗಾದರೂ ಮಾಡಿ ತಮ್ಮ ಕಡೆಗೆ ಸೆಳೆಯಬೇಕೆಂದು, ಆಮೀಷ ಒಡ್ಡಿದರು. ಜರ್ಮನ್ ಪೌರತ್ವ ಮತ್ತು ಜರ್ಮನಿಯ ಸೈನ್ಯದಲ್ಲಿ ಕೆಲಸ ನೀಡಲಾಗುವುದು ಎಂದುಆಹ್ವಾನ ಇಟ್ಟರು. ಆದರೆ ಧ್ಯಾನ್ ಚಂದ್ ಒಬ್ಬ ಸರ್ವಾಧಿಕಾರಿಗೆ ತಲೆಬಾಗುವವರಾಗಿರಲಿಲ್ಲ. ಅಡಾಲ್ಫ್ ಹಿಟ್ಲರ್‌ ಹೇಳಲು ಧ್ಯಾನ್ ಚಂದ್ ಹಿಂಜರಿಯಲಿಲ್ಲ "ನನ್ನ ಭಾರತವು ಮಾರಾಟಕ್ಕಿಲ್ಲ!" ಎಂದು ಹಿಟ್ಲರ್‌ ಮುಖಕ್ಕೆ, ಹಿಂಜರಿಯದೆ, ನೇರವಾಗಿ ಹೇಳಿದರು.ಅಂದು ಇವರ ಪ್ರತ್ಯುತ್ತರ ಕೇಳಿ, ಇಡೀ ಕ್ರೀಡಾಂಗಣ ಸ್ತಬ್ಧವಾಯಿತು. ನೆರೆದ ಜನರು, ಹಿಟ್ಲರ್ ಧ್ಯಾನ್ ಚಂದ್ ರ ಮೇಲೆ ಗುಂಡಿನ ದಾಳಿ ಮಾಡಿಯೇ ತೀರುತ್ತಾನೆ ಎಂದು ಹೆದರಿದರು.  ಆದರೆ ಅದೃಷ್ಟವಶಾತ್, ಹಾಗೆ ಆಗಲಿಲ್ಲ.  ಬದಲಿಗೆ, ಧ್ಯಾನ್ ಚಂದ್ ಅವರ ಈ ದಿಟ್ಟ ನುಡಿ ಕೇಳಿ, ಹಿಟ್ಲರ್ ಇನ್ನಷ್ಟು ಪ್ರಭಾವಿತನಾದ. ನಿಜ ಹೇಳಬೇಕೆಂದರೆ, "ಹಾಕಿ ಮಾಂತ್ರಿಕ ( Wizard of Hockey)" ಎಂದು ಬಿರುದು ಕೊಟ್ಟವರು ಬೇರೆ ಯಾರು ಅಲ್ಲಾ, ಅದು ಹಿಟ್ಲರ್ ಆಗಿದ್ದ.  ಎಂತಹ ರೋಚಕ ಕಥೆಯಲ್ಲವೇ? ಈ ಪಂದ್ಯದಲ್ಲಿ, ನಮಗೆ ಸತತ ಮೂರನೇ ಒಲಿಂಪಿಕ್ಸ್ ಚಿನ್ನದ ಪದಕ ಸಿಕ್ಕಿತು. ಬಹುಶಃ ಇನ್ನೂ ಹೆಚ್ಚು ನಂಬಲಾಗದ ಸಂಗತಿಯೆಂದರೆ, ಭಾರತೀಯ ಹಾಕಿ ತಂಡವು, ಇದಾದ ನಂತರ, ಇನ್ನೂ 5 ಚಿನ್ನದ ಪದಕಗಳನ್ನು ಗೆದ್ದಿತು. ಈ ಹಂತದಲ್ಲಿ, ಭಾರತ ಅಕ್ಷರಶಃ ಹಾಕಿಯ ವಿಶ್ವ ಚಾಂಪಿಯನ್ ಆಗಿತ್ತು.  ಧ್ಯಾನ್ ಚಂದ್ ಎಂಬ ಮಾಂತ್ರಿಕನ ಹೆಸರು, ಅವನ ಕಥೆಗಳು, ಶಾಲೆಗಳನ್ನು ತಲುಪಿತು, ದೇಶದ ಮ್ಯೂಲ್ ಮೂಲೆಗೂ ಅವರ ಬಗ್ಗೆ, ಹಾಕಿ ಕ್ರೀಡೆ ಬಗ್ಗೆ ಸುದ್ದಿ ಮುಟ್ಟಿತು. ಮಕ್ಕಳು ಹಾಕಿ ಕೋಲಿಗೆ ಆಕರ್ಷಿತಗೊಂಡರು. ಭಾರತೀಯರಾಗಿ, ಇಂತಹ ಹಾಕಿ ಆಟಗಾರನ ಬಗ್ಗೆ ನಿಜವಾಗಿಯೂ ತುಂಬಾ ಹೆಮ್ಮೆ ಪಡಬೇಕು.

ಹಾಕಿ ಆಟವು, ಒಲಿಂಪಿಕ್ಸ್‌ಗಿಂತ ಹಳೆಯದು ಎಂದು ನಿಮಗೆ ತಿಳಿದಿದೆಯೇ? ಹಾಕಿಯ ಇತಿಹಾಸವನ್ನು ನೋಡಿದರೆ, ಈಗಿನ ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ ದೇಶಗಳಲ್ಲಿ ಇದೇ ರೀತಿಯ ಕ್ರೀಡೆಯನ್ನು, ಆದರೆ ಒರಟು ರೀತಿಯಲ್ಲಿ ಆಡಲಾಗುತ್ತಿತ್ತು. 'ಪಕ್' ಎಂಬ ಒಂದು ಸಣ್ಣ ಡಿಸ್ಕ್ ನ್ನು, ಕೋಲುಗಳನ್ನು ಬಳಸಿ ಹೊಡೆಯಲಾಗುತ್ತಿತ್ತು. ಇಂದಿನ ಐಸ್ ಹಾಕಿಯ ಹಾಗೆ. ಆದರೆ ಆಧುನಿಕ ಫೀಲ್ಡ್ ಹಾಕಿಯನ್ನು, 18 ನೇ ಶತಮಾನದಲ್ಲಿ, ಬ್ರಿಟನ್‌ನಲ್ಲಿ ಆಧುನೀಕರಿಸಲಾಯಿತು. ಬ್ರಿಟಿಷರು ಭಾರತದಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಿದಂತೆ, ಭಾರತದಲ್ಲಿ ಹಾಕಿ ಜನಪ್ರಿಯಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.  ಕಲ್ಕತ್ತಾ ಮತ್ತು ಬಾಂಬೆಯಂತಹ ನಗರಗಳಲ್ಲಿ ಹಾಕಿ ಕ್ಲಬ್‌ಗಳು  ಶುರುವಾಗಲಾರಂಭಿಸಿದವು.  ಬ್ರಿಟಿಷರು ಹಾಕಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದರು. ಅವುಗಲ್ಲಿ ಪ್ರಸಿದ್ಧವೆಂದರೆ  'ಬೈಟನ್ ಕಪ್'. ಈ ಹೊಸ ಆಟಕ್ಕೆ, ಭಾರತೀಯರು ಬೇಗನೆ ಹೊಂದಿಕೊಂಡರು. ನಗರಗಳಲ್ಲಿ ಆಡಲಾಗುತ್ತಿದ್ದ ಈ ಆಟವನ್ನು, ಆರ್ಮಿ ಕಂಟೋನ್ಮೆಂಟ್ ಗಳಲ್ಲೂ ಆಡಲಾರಂಭಿಸಿದರು. ಒಲಿಂಪಿಕ್ಸ್‌ನಲ್ಲಿ ಆಡಿದ್ದ, ಧ್ಯಾನ್ ಚಂದ್ ಮತ್ತು ಅವರ ಸಹೋದರ ರೂಪ್ ಸಿಂಗ್, ಇಬ್ಬರೂ ಸಹ ಮೊದಲು, ಝಾನ್ಸಿ ಆರ್ಮಿ ಕಂಟೋನ್ಮೆಂಟ್‌ನಲ್ಲಿ ಹಾಕಿ ಆಡಲು ಆರಂಭಿಸಿದ್ದರು. ಭಾರತೀಯ ಹಾಕಿ  ಫೆಡರೇಶನ್ (Indian Hockey Federation) ಶೀಘ್ರದಲ್ಲೇ ಸ್ಥಾಪನೆಯಾಯಿತು.  ತದನಂತರ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಶುರು ಮಾಡಿತು.  ಆದರೂ, ಆರಂಭದಲ್ಲಿ, ಕೇವಲ ಪುರುಷರ ಹಾಕಿ ತಂಡವಿತ್ತು. 1928 ರ ನಂತರ, ಭಾರತೀಯ ಹಾಕಿ ತಂಡವು ಆರು ಚಿನ್ನದ ಪದಕಗಳನ್ನು ಗೆದ್ದಿತ್ತು. ಹಾಗೆಯೇ ಸತತ 24 ಪಂದ್ಯಗಳನ್ನು ಸಹ ಗೆದ್ದಿತು.

Indian hockey team 1928 Olympics.jpg
ಭಾರತದ ಹಾಕಿ ತಂಡ 1928ರ  ಒಲಿಂಪಿಕ್ಸ್. 

"7 ಮತ್ತು 15 ನೇ ನಿಮಿಷದಲ್ಲಿ ಎರಡು ಗೋಲುಗಳು, ನಾನು ಸ್ಕೋರ್ ಮಾಡಿದ್ದೆ. ಆ ಸಂತೋಷ ಹೇಳತೀರದು. ಅದನ್ನು ಅನುಭವಿಸಲೇ ಬೇಕು.  ನಾನು ತುಂಬಾ ರೋಮಾಂಚನಗೊಂಡಿದ್ದೆ".  ಇದು 1948 ರ ಒಲಿಂಪಿಕ್ ಫೈನಲ್ ಪಂದ್ಯದಲ್ಲಿ 2 ಗೆಲುವಿನ ಗೋಲುಗಳನ್ನು ಗಳಿಸಿದ, ಬಲಬೀರ್ ಸಿಂಗ್ ಅವರ ಮಾತುಗಳು. ಅದೂ  ಯಾರ ವಿರುದ್ಧ ಎಂದಿರಿ? ಇಂಗ್ಲೆಂಡ್ ವಿರುದ್ಧ.  ಈ ಒಲಿಂಪಿಕ್ಸ್ ಪಂದ್ಯ ಭಾರತಕ್ಕೆ ಬಹಳ ವಿಶೇಷವಾಗಿತ್ತು.  ಏಕೆಂದರೆ ಇದು ಸ್ವತಂತ್ರ ಭಾರತದ, ಮೊದಲ ಒಲಿಂಪಿಕ್ಸ್ ಆಗಿತ್ತು.  1947 ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಹಾಗೆಯೇ, ಅಂತಿಮ ಪಂದ್ಯ ಬ್ರಿಟನ್ ಎದುರಾಳಿಯಾಗಿದ್ದರಿಂದ, ಇದೊಂದು ಪ್ರತಿಷ್ಠೆಯ ವಿಚಾರವೂ ಆಗಿತ್ತು. ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತು. ಆಂಗ್ಲರ ಆಳ್ವಿಕೆಯ, ದಬ್ಬಾಳಿಕೆಯ ವಿರುದ್ಧದ ಯುದ್ಧದಲ್ಲಿ, ಈ ಪಂದ್ಯ ಒಂದು ಮೈಲುಗಲ್ಲಾಗಿ ಉಳಿಯಿತು. 

1948 ರ ಒಲಿಂಪಿಕ್ಸ್ ವಿಜಯದ ನಂತರ, ಹಾಕಿ ದೇಶದಲ್ಲಿ ಇನ್ನಷ್ಟು ಜನಪ್ರಿಯವಾಗತೊಡಗಿತು. ನಾಗರಿಕರ ಭಾವನೆಗಳು ಮತ್ತು ದೇಶಪ್ರೇಮದ  ಸಂಕೇತವೇ ಹಾಕಿ ಎನ್ನುವಷ್ಟು ಜನಜನಿತವಾಯ್ತು. 1970 ಮತ್ತು 1980 ರ ಸುಮಾರಿಗೆ ಭಾರತದ ಮಹಿಳಾ ಹಾಕಿ ತಂಡವು ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿತು.  1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ, ಮಹಿಳಾ ತಂಡ ನಾಲ್ಕನೇ ಸ್ಥಾನದಲ್ಲಿದ್ದರು. ಇಂತಹ ಘಟನೆಗಳ ಕಾಲಾವಧಿಯಲ್ಲಿ, ನೀವು ಯಾರನ್ನೇ ಕೇಳಿದರೂ, ಚಿಕ್ಕ ಮಗುವನ್ನೂ ಸೇರಿಸಿ, ಅವರ ಉತ್ತರ ಒಂದೇ ಆಗಿರುತ್ತಿತ್ತು. "ನನ್ನ ನೆಚ್ಚಿನ ಕ್ರೀಡೆ ಹಾಕಿ" ಎಂದು.  ಆದರೆ ನೀವು ಈಗಿನ ಮಕ್ಕಳಿಗೆ  "ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಯಾವುದು?" ಎಂದು ಕೇಳಿದರೆ, ಅವರು ಕ್ರಿಕೆಟ್ ಎಂದು ಉತ್ತರಿಸುತ್ತಾರೆ. ಇದು ತಪ್ಪು ಅಂತ ಬಿಂಬಿಸುತ್ತಿಲ್ಲ. ಹಾಗಂತ ಇರುವ ಸತ್ಯವನ್ನು ಸುಳ್ಳು ಎಂದು ಹೇಳಲಾಗಲ್ಲ. ಇಂದು, ಕ್ರಿಕೆಟ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ, ಅತ್ಯಂತ ಪ್ರಸಿದ್ಧವಾಗಿದೆ.ಹಾಗೆಂದರೆ, ಹಾಕಿಯ ಜನಪ್ರಿಯತೆಯು ಮಸುಕಾಗಲು ಕ್ರಿಕೆಟ್ ಕಾರಣವಾಯ್ತೆ?. 

ಅವನತಿ ಅಂಚಿನ ಪ್ರಯಾಣ: 

1976 ರಲ್ಲಿ, ವಿಶ್ವ ಹಾಕಿ ( World Hockey) ಎಂಬ ನಿಯತಕಾಲಿಕೆಯಲ್ಲಿ, "ರೋಮ್ ಪತನ ( The Fall of Rome )" ಎಂಬ ಶೀರ್ಷಿಕೆಯೊಂದಿಗೆ, ವಿವರವಾದ ಲೇಖನವೊಂದನ್ನು ಪ್ರಕಟಿಸಿದರು. ಹಾಗಂತ ಕ್ರೀಡಾ ನಿಯತಕಾಲಿಕೆಯಲ್ಲಿ ರೋಮ್ ಬಗ್ಗೆ ಬರೆದಿರಲಿಲ್ಲ. ಅವರು ರೋಮನ್ ನಾಗರೀಕತೆಯನ್ನು ಭಾರತೀಯ ಹಾಕಿಯೊಂದಿಗೆ ಹೋಲಿಸಿ ಲೇಖನವನ್ನು ಬರೆದಿದ್ದರು. ಭಾರತೀಯ ಹಾಕಿಯ ಅವನತಿಗೆ ಕಾರಣವನ್ನು ಅವರು ವಿವರವಾಗಿ ಅದರಲ್ಲಿ ವಿಶ್ಲೇಷಿಸಿದ್ದರು. ರೋಮನ್ ನಾಗರೀಕತೆಯಂತೆಯೇ, ಒಂದು ಕಾಲದಲ್ಲಿ ಅದ್ಭುತ ಮತ್ತು ಸುಪ್ರಸಿದ್ಧವಾಗಿದ್ದ ಭಾರತದ ಹಾಕಿ,  ಕ್ಷೀಣಿಸಲು ಪ್ರಾರಂಭಿಸಿತ್ತು.

ಹಾಗೆ ನೋಡಿದರೆ, ಭಾರತೀಯ ಹಾಕಿಯ ಅವನತಿ, ವಾಸ್ತವವಾಗಿ 1960ರ ದಶಕದಲ್ಲಿಯೇ ಆರಂಭವಾಗಿತ್ತು. ಈ ಸಮಯದಲ್ಲಿ, ಭಾರತೀಯ ಹಾಕಿ ಆಟಗಾರರು, ತಮ್ಮ ಆಡುವ ವಿಧಾನವನ್ನು ಬದಲಾಯಿಸಿದರು. ಇದಕ್ಕೂ ಮೊದಲು, ಭಾರತೀಯ ಹಾಕಿ ಆಟವನ್ನು ಪ್ರಪಂಚಾದ್ಯಂತ ಜನ ಮೆಚ್ಚುತ್ತಿದ್ದರು. ಚೆಂಡನ್ನು ಡ್ರಿಬ್ಲಿಂಗ್ ಮಾಡುವಾಗ ಆಟಗಾರರು ಹೇಗೆ ಕೌಶಲ್ಯದಿಂದ, ಉದುರಾಳಿಗಳನ್ನು ಚೇಸ್ ಮಾಡುವ ರೀತಿ,  ಚೇಸ್ ಮತ್ತು ಡ್ರಿಬ್ಲಿಂಗ್ ನಲ್ಲಿ ಇರುವ ಪರಿಣಿತಿ ಎಲ್ಲೆಲ್ಲೂ ಪ್ರಸಿದ್ಧವಾಗಿತ್ತು.  ಆದರೆ ಈ ಸಮಯದಲ್ಲಿ, ಭಾರತವು ತನ್ನ ತಂತ್ರಗಳನ್ನು ಬದಲಾಯಿಸಿತು. ಹಾಕಿ ಆಟಗಾರರು, ತಮ್ಮ ಶೈಲಿಯನ್ನು ಬಿಟ್ಟು, ಪಾಶ್ಚಿಮಾತ್ಯ ತಂತ್ರಗಳನ್ನು ಬಳಸಲಾರಂಭಿಸಿದರು. ಅವರು ಆಡುತ್ತಿದ್ದ ಈ ಹೊಸ ರೀತಿಯ ಹಾಕಿಯಲ್ಲಿ, ಚೆಂಡನ್ನು ಬೆನ್ನಟ್ಟುವ ಬದಲು, ಆಟಗಾರರನ್ನು ಬೆನ್ನಟ್ಟಲು ಶುರು ಮಾಡಿದರು. ಆದರೆ ಜನಪ್ರಿಯತೆ ಕುಗ್ಗಲು ಇದೊಂದೇ ಕಾರಣವಾಗಿರಲಿಲ್ಲ. 

ಇದಾದ ನಂತರ, ಮತ್ತೊಂದು ಪ್ರಮುಖ ಬದಲಾವಣೆ ಹಾಕಿಯಲ್ಲಿ ಜರುಗಿತು.1975 ರಲ್ಲಿ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಅವರು, ಹಾಕಿ ಆಟದ ಮೈದಾನವನ್ನೇ  ಬದಲಾಯಿಸಲು ಮುಂದಾಯಿತು. ಈ ಮೊದಲು, ಹುಲ್ಲಿನಲ್ಲಿ ಹಾಕಿ ಆಡಲಾಗುತ್ತಿತ್ತು. ಈ ನಿಯಮದಿಂದಾಗಿ, ಆಸ್ಟ್ರೋ ಟರ್ಫ್‌ನಲ್ಲಿ ಹಾಕಿ ಆಡಲು ಶುರು ಮಾಡಿದರು.ಆಸ್ಟ್ರೋ ಟರ್ಫ್‌ ನಲ್ಲಿ ನೈಸರ್ಗಿಕವಾಗಿ ಬೆಳೆದ ಹುಲ್ಲಿನ ಬದಲು, ಕೃತಕ ಹುಲ್ಲಿನ ಮೈದಾನ ಮಾಡಲಾಯಿತು. ಹಲವು ಹಾಕಿ ಪಂದ್ಯಗಳಲ್ಲಿ  ನೀಲಿ ಅಥವಾ ನೇರಳೆ  ರಬ್ಬರ್‌ನಿಂದ ಮಾಡಿದ ಇಂತಹ ಮೈದಾನವನ್ನು ನೀವು ನೋಡಿರಬಹುದು. ಈ ನಿಯಮ ಬದಲಾವಣೆ, ಭಾರತೀಯ ಹಾಕಿ ತಂಡಕ್ಕೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಇಲ್ಲಿಯ ತನಕ ಭಾರತೀಯ ಹಾಕಿ ಆಟಗಾರರು  ಹುಲ್ಲಿನ ಮೈದಾನವನ್ನೇ ನೆಚ್ಚಿಕೊಂಡಿದ್ದರು.ಹುಲ್ಲಿನ ಮೈದಾನದಲ್ಲಿ, ಚೆಂಡನ್ನು ಹುಲ್ಲಿನ ಗರಿಗಳ ನಡುವಿಂದ ತೂರುವ ಮೂಲಕ, ತಮ್ಮ ಕೌಶಲ್ಯಗಳನ್ನು ಭಾರತೀಯರು ಸಿದ್ಧಿಸಿಕೊಂಡಿದ್ದರು. ಆದರೆ, ಆಸ್ಟ್ರೋ ಟರ್ಫ್ ನಲ್ಲಿ ಘರ್ಷಣೆ/ ತಿಕ್ಕಾಟ ಕಡಿಮೆಯಿರುವುದರಿಂದ,ಇವರ ಯಾವ ತಂತ್ರಗಳು ಇಲ್ಲಿ ಉಪಯೋಗವಾಗಲಿಲ್ಲ. ಚೆಂಡಿನ ಜತೆ ಚಾಣಾಕ್ಷತನದಿಂದ ಆಡುವ ಬದಲು, ವೇಗವಾಗಿ ಓಡುವ ಮತ್ತು ಆಟವನ್ನು ಆಡುವ, ದೈಹಿಕ ಶಕ್ತಿಯ ಅವಶ್ಯಕತೆ ಹೆಚ್ಚಾಯ್ತು. ಇದರಲ್ಲಿ ಭಾರತೀಯ ಆಟಗಾರರನ್ನು ಹೋಲಿಸಿದರೆ, ಯುರೋಪಿಯನ್ ಆಟಗಾರರಿಗೆನೆ  ಹೆಚ್ಚು ಅನುಕೂಲವಾಯಿತು. 

ಇದೆಲ್ಲದ್ದಕ್ಕಿಂತ ದೊಡ್ಡ ಸಮಸ್ಯೆ ಎಂದರೆ, ಆಗ ಭಾರತದಲ್ಲಿ ಆಸ್ಟ್ರೋ ಟರ್ಫ್‌ಗಳೆ ಇರಲಿಲ್ಲ. ಈ ಹೊಸ ನಿಯಮಕ್ಕೆ ಒಗ್ಗಿಕೊಳ್ಳಲು, ನಾವು ಮೊದಲು ಮಾಡಬೇಕಾಗಿದ ಕೆಲಸ, ಆಸ್ಟ್ರೋ ಟರ್ಫ್‌ ಮೈದಾನವನ್ನು ಕಟ್ಟಿಕೊಳ್ಳುವುದಾಗಿತ್ತು. ಆದರೆ ಅವುಗಳನ್ನು ತಯಾರಿಕೆ  ಸಾಕಷ್ಟು ದುಬಾರಿಯಾಗಿತ್ತು. ಆದ್ದರಿಂದ ನಾವು ಅನೇಕ ಆಸ್ಟ್ರೋ ಟರ್ಫ್‌ ಮೈದಾನಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಆಟಗಾರರಿಗೆ ಅಭ್ಯಾಸ ಮಾಡಲು ಸಾಕಷ್ಟು ಸ್ಥಳ ಸಿಗಲಿಲ್ಲ.  ಆಟಗಾರರಿಗೆ ಅಭ್ಯಾಸ ಮಾಡಲು ಸಾಧ್ಯವಾಗದ ಕಾರಣ, ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತು.  ಈ ಕಾರಣದಿಂದಾಗಿ, ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಲು ಆಗಲಿಲ್ಲ. ಮೈದಾನದ ಬದಲಾವಣೆ ವಿಚಾರ ಪ್ರಕಟಿಸಿದಾಗ, ಭಾರತೀಯ ಹಾಕಿ ಫೆಡರೇಶನ್ ಸಹ ಮರುಮಾತನಾಡದೆ ನಿಯಮಗಳನ್ನು ಒಪ್ಪಿಕೊಂಡಿತು. ಆಗ ಫೆಡರೇಶನ್‌ನಲ್ಲಿ ಇದ್ದಂತಹ ಆಂತರಿಕ ರಾಜಕೀಯವೇ ಇದಕ್ಕೆ ಕಾರಣವೆಂದುಬಹಳ ಜನ ಹೇಳುತ್ತಾರೆ.  ಮೌಂವಾಗಿ ಒಪ್ಪಿಕೊಂಡ ಈ ನಡೆಯನ್ನು ಈಗಲೂ ಟೀಕಿಸುತ್ತಾರೆ. ಭಾರತೀಯ ಹಾಕಿ ಒಕ್ಕೂಟವು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟಕ್ಕೆ  ಪ್ರತಿರೋಧವನ್ನು ಏಕೆ ತೋರಿಸಲಿಲ್ಲ?  ನಾವು ಮೈದಾನಗಳನ್ನು ಬದಲಿಸುವುದಿಲ್ಲ  ಎಂದು ಆಗಲೇ ಹೇಳಿದಿದ್ದರೆ, ಬಹುಶಃ ಇಂದಿಗೂ ಹಾಕಿಯನ್ನು ಹುಲ್ಲುಗಾವಲುಗಳಲ್ಲಿ ಆಡಲಾಗುತ್ತಿತ್ತು. 

"ಹಾಕಿ ಸಂಸ್ಥೆಯ ಜನ ತುಂಬಾ ಅಹಂಕಾರ ಹೊಂದಿದ್ದಾರೆ.  ಒಕ್ಕೂಟದಲ್ಲಿ ಸಾಕಷ್ಟು ಆಂತರಿಕ ರಾಜಕೀಯವಿದೆ". ಎಂದು ಬಹಿರಂಗವಾಗಿಯೇ ಧನರಾಜ್ ಪಿಳ್ಳೈ ಅವರು ಹೇಳಿಕೆ ಕೊಟ್ಟಿರುವುದನ್ನು ನಾವು ಕೇಳಿದ್ದೇವೆ. ಮೈದಾನದ ಬದಲಾವಣೆ, ಆಟದ ಶೈಲಿಯ ಬದಲಾವಣೆ, ಆಟಗಾರರು ಮತ್ತು ಸಂಸ್ಥೆಯ ನಡುವಿನ ಸಾಕಷ್ಟು ಘರ್ಷಣೆಗಳಿಂದಾಗಿ, 1980, 1990 ಮತ್ತು 2000 ರಲ್ಲಿ ಭಾರತೀಯ ಹಾಕಿ ತಂಡದ ಪ್ರದರ್ಶನ ಕುಸಿಯುತ್ತಲೇ ಹೋಯ್ತು. 

ಕ್ರಿಕೆಟ್ ಪರ್ವ: 

Anindya Dutta celebrates a significant victory in Indian cricket which occurred in that corresponding month in history.
1971ರ ಆಗಸ್ಟ್ ರಲ್ಲಿ, ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದ ಕ್ಷಣ

ಆದರೆ ಮತ್ತೊಂದೆಡೆ, 1970 ಮತ್ತು 1980 ರ ಸಮಯದಲ್ಲಿ, ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆನ್ನು ವೇಗವಾಗಿ ಪಡೆದುಕೊಳ್ಳಲು ಪ್ರಾರಂಭಿಸಿತು. ರಾಮಚಂದ್ರ ಗುಹಾ ಅವರು 1971ರ ವರ್ಷವನ್ನು, ಭಾರತದ ನವ ಪರ್ವ ಎಂದು ಕರೆದರು.  ಈ ವರ್ಷ ಭಾರತ ತಂಡವು ಟೆಸ್ಟ್ ಪಂದ್ಯಕ್ಕಾಗಿ, ಪ್ರವಾಸಕ್ಕೆ ಇಂಗ್ಲೆಂಡಿಗೆ ಹೋಗಿತ್ತು.  ಈ  ಮೊದಲು, ಭಾರತವು ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ.  ಆದರೆ 1971 ರಲ್ಲಿ  ಅದು ಬದಲಾಯಿತು. ಟೆಸ್ಟ್ ಪಂದ್ಯದ ನಾಲ್ಕನೇ ದಿನ, ಭಾರತವು ಈ ಟೆಸ್ಟ್ ಪಂದ್ಯವನ್ನು ಗೆದ್ದಿತು. ಇದರಿಂದಾಗಿ ಭಾರತಕ್ಕೆ ಕ್ರಿಕೆಟ್ ಆಟದಲ್ಲಿ, ಅಂತರಾಷ್ಟ್ರೀಯ ಗೌರವ ಸಿಕ್ಕಿತು. ಹೆಚ್ಚು ಮುಖ್ಯವಾಗಿ, ಈ ಸಮಯದಲ್ಲಿ, ಭಾರತದಲ್ಲಿ ಕ್ರಿಕೆಟ್ ನ ಅಭಿಮಾನಿ ಬಳಗ ಬೆಳೆಯತೊಡಗಿತು.  ಅದಕ್ಕೆ ಒಂದು ಕಾರಣವೆಂದರೆ, ಅನೇಕ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಭಾರತದಲ್ಲಿ ಆಯೋಜಿಸಲಾಗುತ್ತಿತ್ತು.  ಅಂತಾರಾಷ್ಟ್ರೀಯ ತಂಡಗಳು ಭಾರತಕ್ಕೆ ಆಡಲು ಬರುತ್ತಿದ್ದವು. ನೋಡ ನೋಡುತ್ತಲೇ ಅಭಿಮಾನಿಗಳ ಬಳಗ ಬೆಳೆಯುತ್ತಲೇ ಹೋಯಿತು. ನೆರೆಹೊರೆಯವರು ಒಟ್ಟಾಗಿ ಕುಳಿತು  ರೇಡಿಯೋದಲ್ಲಿ ಕ್ರಿಕೆಟ್ ಕೇಳಹತ್ತಿದ್ದರು.ಆಗ ಶುರುವಾದ ಈ ಹವ್ಯಾಸ, ಇಂದಿನವರೆಗೆ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸುವ ಮೂಲಕ ಜೀವಂತವಿದೆ.

1971 ರ ಆ  ಪಂದ್ಯವನ್ನು, ದೇಶಾದ್ಯಂತ 80 ಮಿಲಿಯನ್ ಜನರು ರೇಡಿಯೋದಲ್ಲಿ ಕೇಳಿದರು.  ರೇಡಿಯೋ ಹೊರತುಪಡಿಸಿ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಸಹ ಕ್ರಿಕೆಟ್ ಅನ್ನು ವಿವರವಾದ ರೀತಿಯಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದವು. ಕ್ರಿಕೆಟ್ ಗಾಗಿಯೇ ಹೊಸ ಸಾಪ್ತಾಹಿಕ ನಿಯತಕಾಲಿಕೆಗಳನ್ನು ಪ್ರಕಟಿಸಲಾಯಿತು.  ಸ್ಪೋರ್ಟ್ಸ್ ವೀಕ್, ಸ್ಪೋರ್ಟ್ಸ್ ಸ್ಟಾರ್, ಸ್ಪೋರ್ಟ್ಸ್ ವರ್ಲ್ಡ್, ಹೀಗೆ ಅನೇಕ ನಿಯತಕಾಲಿಕೆಗಳಲ್ಲಿ, ಕ್ರಿಕೆಟ್ ಬಗ್ಗೆ ಇಂಚು ಇಂಚಾಗಿ ಮಾಹಿತಿ ಸಿಗಲು ಶುರುವಾಯ್ತು. ನಮ್ಮ ಕ್ರಿಕೆಟಿಗರು,ಪತ್ರಿಕೆ ಮಾಧ್ಯಮದವರು ಮತ್ತು ನಿಯತಕಾಲಿಕೆಗಳು ಇದರಿಂದ ಪ್ರಸಿದ್ಧರಾದರು.  ಈ ಪ್ರಸಿದ್ಧ ಕ್ರಿಕೆಟಿಗರ ಪ್ರಯಾಣದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿದೆ.  

ಈಗ  ಕ್ರಿಕೆಟಿಗರು ಸೆಲೆಬ್ರಿಟಿಗಳಾಗಿ ಹೋಗಿದ್ದರು. ಅವರವರದೇ ಅಭಿಮಾನಿ ಬಳಗ ಹೊಂದಲು ಶುರು ಮಾಡಿದರು. ಆದರೆ ದುರದೃಷ್ಟವಶಾತ್, ಹಾಕಿಗೆ ಎಂದಿಗೂ ಇಂತಹ ಅವಕಾಶಗಳು ದೊರಕಲಿಲ್ಲ .  ಕ್ರಿಕೆಟಿಗರಿಗೆ ಸಿಕ್ಕ ಮಾಧ್ಯಮ ಪ್ರಚಾರ, ಹಾಕಿ ಆಟಗಾರರಿಗೆ ಸಿಗಲಿಲ್ಲ. ಮಾಧ್ಯಮ ಪ್ರಚಾರದ ಕಾರಣ, ಜನರು ಅವರು ತೋರಿಸಿದ ಕಡೆಗಷ್ಟೇ ಹೆಚ್ಚು ಗಮನ ಹರಿಸುತ್ತಿದ್ದರು.  ಇದೆಲ್ಲರದಿಂದಾಗಿ, ಹಣವು ಕ್ರಿಕೆಟ್  ದಿಕ್ಕಿನಲ್ಲಿ ಹರಿಯಲು ಪ್ರಾರಂಭಿಸಿತು.1983 ರ ವಿಶ್ವಕಪ್ ವಿಜಯದ ನಂತರ, ಭಾರತದಲ್ಲಿ ಹೆಚ್ಚಾಗಲು ಶುರುವಾದ ಕ್ರಿಕೆಟ್ ಜನಪ್ರಿಯತೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. 

ಕೆಲವು ವರ್ಷಗಳ ನಂತರ, ಭಾರತದಲ್ಲಿ ಆರ್ಥಿಕ ಉದಾರೀಕರಣವು ಜರುಗಿತು. ವಿದೇಶಿ ಹೂಡಿಕೆದಾರರು ಈಗ ಭಾರತಕ್ಕೆ ಬರಲು ಸುಲಭವಾಯ್ತು. ಮಾರುಕಟ್ಟೆಗಳು ತೆರೆದವು.  ಕ್ರಿಕೆಟ್ ಗೆ ಬ್ರಾಂಡ್ ಡೀಲ್ ಗಳು ಬರಲಾರಂಭಿಸಿದವು. ದೊಡ್ಡ ದೊಡ್ಡ  ಜಾಹೀರಾತುದಾರರು, ಕ್ರಿಕೆಟ್ ಪಂದ್ಯಾವಳಿಗಳಿಗೆ ಮುಗಿಬಿದ್ದರು. ಹಣದ ಹೊಳೆಯೇ ಹರಿಯಿತು. ಇದರಿಂದಾಗಿ, ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಶಕ್ತಿಶಾಲಿ ಕ್ರಿಕೆಟ್ ಸಂಸ್ಥೆಯಾಗಿ ಹೊರಹೊಮ್ಮಿತು. ವಿಷಯ ಅತ್ಯಂತ ಸರಳವಾಗಿದೆ.  ಜನರು ಹೆಚ್ಚು ಕ್ರಿಕೆಟ್ ನೋಡಲು ಇಷ್ಟಪಟ್ಟರೆ , ಎಲ್ಲಾ ಪ್ರಮುಖ ಜಾಹೀರಾತುದಾರರು, ಬ್ರಾಂಡ್‌ಗಳು ಮತ್ತು ಖಾಸಗಿ ಕಂಪನಿಗಳು,  ಕೇವಲ ಕ್ರಿಕೆಟ್‌ನಲ್ಲಿ ಮಾತ್ರ ಹೂಡಿಕೆ ಮಾಡುತ್ತವೆ. ಜನರಿಗೆ ಈ ಕ್ರಿಕೆಟ್ ಮೇಲೆ ಇಷ್ಟು ಮೋಹ ಏಕೆಂದರೆ, ಭಾರತೀಯ ಕ್ರಿಕೆಟ್ ತಂಡವು ವಿಶ್ವದ ಅತ್ಯುತ್ತಮ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದೆ.  ಭಾರತೀಯ ಕ್ರಿಕೆಟ್ ತಂಡವು ಹೆಚ್ಚಿನ ಪ್ರಚಾರ ಮತ್ತು ಮಾಧ್ಯಮ ಪ್ರಸಾರವನ್ನು ಪಡೆಯುತ್ತದೆ.  

ನಮ್ಮ ದೇಶದ ಜನರ ಗಮನವನ್ನು ಇತರ ಕ್ರೀಡೆಗಳ ಕಡೆಗೂ ತಿರುಗಿಸಬಹುದು. ಆದರೆ ಅಂತಹ ಕ್ರೀಡೆಗಳು ಗಮನಕ್ಕೆ ಬರಬೇಕೆಂದರೆ ಅವು ಪ್ರತಿಯೊಂದು ಪಂದ್ಯವನ್ನು ಗೆಲ್ಲಬೇಕಾಗಿ ಬರುತ್ತದೆ. ಇಲ್ಲದಿದ್ದರೆ, ನಮ್ಮ ಜನಗಳಿಗೆ ಆಸಕ್ತಿಯೇ ಹುಟ್ಟುವುದಿಲ್ಲ. ಈ ಹಾಕಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ.  ಈಗ, ಒಲಿಂಪಿಕ್ಸ್‌ನಲ್ಲಿ, ಭಾರತೀಯ ಹಾಕಿ ತಂಡಗಳ ಪ್ರದರ್ಶನವು ಅತ್ಯುತ್ತಮವಾಗಿದ್ದರಿಂದ, ಜನರು ಹಾಕಿಯ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೋರಿದರು. ಭಾರತಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಒಮ್ಮೆ  ಜನರಿಗೆ ಅನಿಸಿದರೆ, ಅವರು ಆಟ ನೋಡಲು ಮತ್ತು ತಂಡವನ್ನು ಹುರಿದುಂಬಿಸಲು ಸೆಟೆದು ನಿಲ್ಲುತ್ತಾರೆ. ಆದರೆ ಇದೆಲ್ಲರ ಹೊರತಾಗಿ, ದೇಶದಲ್ಲಿ ಮೂಲಭೂತ ಮೂಲಸೌಕರ್ಯಗಳ ಅಗತ್ಯತೆಯಿದೆ. ಸೌಕರ್ಯಗಳಿದ್ದರೆ, ತಾನಾಗಿಯೇ ಕ್ರೀಡಾಪಟುಗಳು ಮುಂದೆ ಬರಲು ಮನಸ್ಸು ಮಾಡುತ್ತಾರೆ. ಇದಕ್ಕೆ ಸರ್ಕಾರದ ಬೆಂಬಲ ಮತ್ತು ಹಣದ ಅಗತ್ಯವಿದೆ. ಇದರಿಂದ ಮೂಲಸೌಕರ್ಯಗಳನ್ನು ನಿರ್ಮಿಸಬಹುದು, ಕ್ರೀಡಾಂಗಣಗಳು ಮತ್ತು ತರಬೇತಿ ಕ್ಷೇತ್ರಗಳನ್ನು ನಿರ್ಮಿಸಬಹುದು. ಹೆಚ್ಚುವರಿಯಾಗಿ, ಮಾಧ್ಯಮ ಪ್ರಸಾರಗಳು  ಮತ್ತು ಚಲನಚಿತ್ರ ಪ್ರಸಾರವೂ ಸಹ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತವೆ.  ಚಲನಚಿತ್ರಗಳಲ್ಲಿ ಕ್ರೀಡೆಯ ಬಗ್ಗೆ ಮಾತನಾಡಿದರೆ ಜನರು ಆಟಗಳನ್ನು ನೋಡಲು ಹೆಚ್ಚು ಪ್ರೇರೇಪಿಗೊಳ್ಳುತ್ತಾರೆ ಮತ್ತು ಆಡಲು ಪ್ರೇರೇಪಿಸುತ್ತಾರೆ. ಇವೆಲ್ಲ ಸಹ ಮಕ್ಕಳ ಮೇಲೂ ಸ್ವಲ್ಪ ಪ್ರಭಾವ ಬೀರುತ್ತವೆ. 


ನವೀನ್ ಪಟ್ನಾಯಕ್ ಎಂಬ ಆಶಾವಾದಿ :

ಸರ್ಕಾರದ ಬೆಂಬಲದ ವಿಷಯ ಎಂದು ಬಂದಾಗ, ಹಾಕಿಯನ್ನು ಉತ್ತೇಜಿಸುವಲ್ಲಿ ಹೆಚ್ಚಿನ ಕ್ರೆಡಿಟ್,  ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಲ್ಲುತ್ತದೆ. ಅವರು ಹಾಕಿಯನ್ನು ಅಧಿಕೃತ ರಾಷ್ಟ್ರೀಯ ಕ್ರೀಡೆಯಾಗಿ ಘೋಷಿಸುವಂತೆ ನಮ್ಮ ಪ್ರಧಾನಿಗೆ ವಿನಂತಿಸಿದ್ದರು.  ಒಂದು ವೇಳೆ ನಿಮಗೆ ಗೊತ್ತಿಲ್ಲದಿದ್ದರೆ, ಇಲ್ಲಿ ಕೇಳಿ. ಹಾಕಿ ಎನ್ನುವುದು ನಮ್ಮ ಭಾರತದ ರಾಷ್ಟ್ರೀಯ ಕ್ರೀಡೆಯಲ್ಲ. ಒಡಿಶಾ, ಛತ್ತೀಸ್‌ಘಡ್ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ, ಹಾಕಿ ಜೀವನಶೈಲಿಯಾಗಿರುವುದರಿಂದ, ಹಾಕಿಕೆ ಮನ್ನಣೆ ಸಿಗಬೇಕೆಂದು ಒಡಿಶಾದ ಮುಖ್ಯಮಂತ್ರಿಗಳು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟರು.

2018 ರಲ್ಲಿ, ಒಡಿಶಾ ಸರ್ಕಾರವು ಭಾರತೀಯ ಹಾಕಿ ತಂಡದ ಪ್ರಾಯೋಜಕರಾಗಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿತು.  ಈ ಕಾರಣದಿಂದಲೇ ಇಂದಿಗೂ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಜರ್ಸಿಗಳಲ್ಲಿ ODISHA ಎಂಬ ಬರಹ ಕಾಣಬಹುದು. ಹೆಚ್ಚುವರಿಯಾಗಿ, ಒಡಿಶಾದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತು ಅನೇಕ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದಾರೆ. ಒಡಿಶಾದ ಸಿಎಂ ಇತ್ತೀಚೆಗೆ ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ್ದಾರೆ.  ಅದನ್ನು ಒಡಿಶಾದಲ್ಲಿ ನಿರ್ಮಿಸಲಾಗುತ್ತಿದೆ.  ಇದಕ್ಕೆ 'ಬಿರ್ಸಾ ಮುಂಡಾ' ಎಂದು ಹೆಸರಿಡಲಾಗುವುದು.  ಹಾಕಿ ವಿಶ್ವಕಪ್ 2023 ಪಂದ್ಯಾವಳಿಗಳನ್ನು ಇಲ್ಲೇ  ಆಯೋಜಿಸಲು ಅನುಕೂಲವಾಗುವಂತೆ,  ಇದನ್ನು ವಿನ್ಯಾಸಗೊಳಿಸಲಾಗುತ್ತಿದೆ.  ಸ್ನೇಹಿತರೇ, ನಾವು ಹಾಕಿಯನ್ನು ಪುನರುಜ್ಜೀವನಗೊಳಿಸಲು ಬಯಸಿದರೆ, ನಿಖರವಾಗಿ ಈ ವಿಷಯಗಳು ಅವಶ್ಯವಾಗಿ ಬೇಕೆನಿಸುತ್ತವೆ. 

  1.  ಸರ್ಕಾರದಿಂದ ಬೆಂಬಲ
  2. ಸಾರ್ವಜನಿಕರಿಂದ ಕೆಲವು ಬೆಂಬಲ ಮತ್ತು 
  3. ಮಾಧ್ಯಮ ಮತ್ತು ಬಾಲಿವುಡ್ ನಿಂದ ಕೆಲವು ಬೆಂಬಲ.
ನಾವು ನಮ್ಮ ದೇಶದಲ್ಲಿ ಈ ಕ್ರೀಡೆಯನ್ನು ಉತ್ತೇಜಿಸಲು ಒಂದು ಅಡಿ ಮುಂದೆ ಬಂದರೆ ಸಾಕು, ಭವಿಷ್ಯದಲ್ಲಿ  ಇತರ ಕ್ರೀಡೆಗಳಿಗೂ ಅರ್ಹವಾದ ಮಾನ್ಯತೆ ಸಿಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ.

ಯಾಕೆಂದರೆ, ನೂರು ಮೀ. ಓಟದಲ್ಲಿ,  ಬೆಳ್ಳಿ ಪದಕಕ್ಕೂ , ಬಂಗಾರದ ಪದಕಕ್ಕೂ  ಇರುವ ಅಂತರ ಕೇವಲ ಒಂದು ಹೆಜ್ಜೆ.

ಮೂಲಗಳು,

FirstPost 

India Times

Times Of India