ಜಾಹಿರಾತು

ಹೇಗೆ ಕೇಂದ್ರೀಕೃತ ಸೌರಶಕ್ತಿ ತಂತ್ರಜ್ಞಾನ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಹಕಾರಿ ಆಗಲಿದೆ ?

ಈಗಿನ ವಯೋಮಾನದವರಿಗೆ ಅತ್ಯಂತ ಜನಜನಿತ ಪದವೆಂದರೆ, ಸೋಲಾರ್ ಅಥವಾ ಸೋಲಾರ್ ಪ್ಯಾನೆಲ್. ಅದರಿಂದ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಬಹುದು ಅಥವಾ ನೀರು ಕಾಯಿಸಬಹುದು ಎಂದು ಚಿಕ್ಕ ಮಕ್ಕಳಿಗೂ ಸಹ ಗೊತ್ತಿದೆ. ಆದರೆ ಗೊತ್ತಿರುವ ಸಂಗತಿ ಬರೆದರೆ ಪ್ರಯೋಜನ ಇಲ್ಲ ಅಲ್ಲವೇ. ಈ ಲೇಖನದಲ್ಲಿ ನಾನು ಕೇಂದ್ರೀಕೃತ ಸೌರಶಕ್ತಿ (CSP) ಅಂದರೆ  Concentrated Solar Power ಬಗ್ಗೆ ವಿವರಿಸುತ್ತೇನೆ. ಮುಂದೆ ಜಗತ್ತಿಗೆ ಸೌರಶಕ್ತಿಯನ್ನು ಹಂಚುವ ಕ್ಷಮತೆ ಇರುವ ಈ ತಂತ್ರಜ್ಞಾನದ ಬಗ್ಗೆ ನೀವೇ ತಿಳಿಯಲೇ ಬೇಕು. 

ದಿನದ ಪ್ರತಿ 10-12 ತಾಸು ಸೂರ್ಯ ಸಾಕಷ್ಟು ಬೆಳಕನ್ನು ಹರಿಸುತ್ತಾನೆ. ಒಂದು ತಿಂಗಳಿಗೆ ಸಾಕಾಗುವಷ್ಟು ವಿದ್ಯುತ್ತ್ ಉತ್ಪಾದಿಸುವ ಶಕ್ತಿ ಆ ಬೆಳಕಲ್ಲಿ ಇದೆ.ಹಾಗಾದ್ರೆ ನಾವ್ಯಾಕೆ ತಡಮಾಡುತ್ತಿದ್ದೇವೆ ಎಂಬುದೇ ದೊಡ್ಡ ಪ್ರಶ್ನೆ?

ಇಲ್ಲಿಯವರೆಗೆ ಪ್ರೋತ್ಸಾಹ ಇರದ ಕಾರಣ ನಾವು ಇಂಧನಗಳನ್ನು ಬಳಸಿ ಬದುಕು ಸಾಗಿಸಿದೆವು. ಆದರೆ ಅದೇ ಸಮಯದಲ್ಲಿ ನಾವು ಮುಂದಿನ ಪೀಳಿಗೆಗೆ ಮಾರಕವಾಗುವಂತಹ ವಾತಾವರಣವನ್ನ ಸಹ ಸೃಷ್ಟಿ ಮಾಡುತ್ತಿದ್ದೇವೆ.

ಆದರೆ ಇನ್ನು ಮುಂದೆ ಅದು ನಿಲ್ಲಲೇಬೇಕು. 

ಸುಸ್ಥಿರ ಶಕ್ತಿಯು ಅಂದರೆ ನೈಸರ್ಗಿಕ ಶಕ್ತಿಯ ಉತ್ಪನ್ನಗಳು ಈಗ ಅಗ್ಗ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತಿವೆ. ಸೌರಶಕ್ತಿ ನಮ್ಮೆಲ್ಲರ ಮೊದಲ ಆದ್ಯತೆಯಾಗಿ ಪರಿಣಮಿಸಿದೆ. ಸೌರಶಕ್ತಿ ಅಂದಕೂಡಲೇ ಫೋಟೋ-ವೋಲ್ಟಾಯಿಕ್ (PV) ಸೋಲಾರ್ ಪ್ಯಾನೆಲ್ ನಿಮಗೆ ನೆನಪಾಗಬಹುದು. ಹೌದು ಅದು ಸಹ ಸೌರವನ್ನು ಕುಯ್ಲು ಮಾಡುವ ಒಂದು ಮಾಧ್ಯಮ. ಆದರೆ ಅದಕ್ಕಿಂತ ದೊಡ್ಡದಾದ ಇನ್ನೊಂದು ಮಾಧ್ಯಮದ ಬಗ್ಗೆ ಹೇಳಬೇಕೆಂಬುದು ಈ ಲೇಖನದ ಆಶಯ.

ಸೌರಶಕ್ತಿ ಇತಿಹಾಸದ ಒಂದು ಸನ್ನಿವೇಶ :

ಸುಮಾರು 2,200 ವರ್ಷಗಳ ಹಿಂದೆ ರೋಮನ್ ಸಾಮ್ರಾಜ್ಯವು, ತನ್ನ ಪಕ್ಕದ ಇಟಲಿ ದೇಶದ ಹತ್ತಿರ ಇದ್ದ ಸಿಸಿಲಿ ದ್ವೀಪವನ್ನು ಗೆಲ್ಲಬೇಕು ಎಂದು ದಾಳಿ ಮಾಡಲು ಹುನ್ನಾರ ಮಾಡಿತು.ಮೆಡಿಟರೇನಿಯನ್ ಸಾಗರದ ಜಲಾನಯನ ಪ್ರದೇಶದ ಮೇಲೆ ಪ್ರಭಾವ ಬೀರುತ್ತಿದ್ದ ಕಾರ್ತೇಜಿನಿಯನ್ನರ ವಿರುದ್ಧದ ಯುದ್ಧವೆಂದೇ ಇದನ್ನು ಬಿಂಬಿಸಲಾಯ್ತು.

ಆಗಿನ ಶ್ರೇಷ್ಠ ಸುಸಜ್ಜಿತ ಸೈನಿಕರನ್ನು ಒಳಗೊಂಡ ರೋಮನ್ ಸೈನ್ಯಕ್ಕೆ ಇದೊಂದು ಚಿಟಿಕೆ ಹೊಡೆದಷ್ಟು ಸುಲಭವಾದ ಕೆಲಸವಾಗಿತ್ತು. ಆದರೆ ಅವರ ಕನಸಲ್ಲೂ ಕಂಡಿರದ ಭಯಾನಕ ಘಟನೆ ಅವರ ಮುಂದಿರುವುದು, ಅವರ ಅರಿವಿಗೆ ಬರಲೇ ಇಲ್ಲ.

ಸಿಸಿಲಿ ದ್ವೀಪದಲ್ಲಿ ಒಬ್ಬ ಮೇಧಾವಿಯಿದ್ದ. ಅವನ ಹೆಸರು "ಆರ್ಕಿಮಿಡಿಸ್". ಆತ ತನ್ನ ಬುದ್ಧಿ ಉಪಯೋಗಿಸಿ, ಬರೀ ಸೂರ್ಯನ ಕಿರಣವನ್ನು ಬಳಸಿ ರೋಮನ್ ಸೈನ್ಯದ ಹುಟ್ಟನ್ನೇ ಅಲುಗಾಡಿಸಿದ. ಇನ್ನೂ ದೂರದಲ್ಲಿ ಸಾಗಿ ಬರುತಿದ್ದ ರೋಮನ್ ಹಡಗುಗಳನ್ನು, ದಪರ್ಣಗಳನ್ನು ಬಳಸಿ, ಕಿರಣಗಳನ್ನು ಅವುಗಳ ಕಡೆಗೆ ನಿರ್ದೇಶಿಸಿ, ಸಂಪೂರ್ಣವಾಗಿ ಸುತ್ತು ಹಾಕಿದ. ಇತಿಹಾಸಕಾರರ ಪ್ರಕಾರ ಇಂಥ ದಾಳಿಗೆ ನಡುಗಿದ ರೋಮನ್ ಸಾಮ್ರಾಜ್ಯ, ಮುಂದೆ ಒಂದು ವರ್ಷಗಳ ವರೆಗೆ ಆ ಕಡೆ ತೆಲೆ ಕೂಡ ಹಾಕಿ ಮಲಗಲಿಲ್ಲವಂತೆ. ನೈಸರ್ಗಿಕವಾಗಿ ಸಿಗುವ ಸೂರ್ಯನ ಕಿರಣ್ ಬಳಸಿ ಆರ್ಕಿಮಿಡಿಸ್ 'ಸಿರಕ್ಯೂಸ್' ಎಂಬ ಪುಟ್ಟ ಪಟ್ಟಣವನ್ನು ದಾಳಿಯಿಂದ ಕಾಪಾಡಿದ ಎಂಬ ಪ್ರತೀತಿ ಇದೆ.

ಈಗಿನ ಪ್ರಪಂಚಕ್ಕೆ ಬರೋಣ....

ಕಥೆಯ ನಿಖರತೆಯು ಪ್ರಶ್ನಾರ್ಹವಾಗಿದ್ದರೂ, ಒಳಗೊಂಡಿರುವ ತಂತ್ರಜ್ಞಾನವು ತುಂಬಾ ನೈಜವಾಗಿದೆ. ವಿಜ್ಞಾನಿಗಳು ಇದನ್ನು ಕೇಂದ್ರೀಕೃತ ಸೌರಶಕ್ತಿ (CSP) ಎಂದು ಕರೆಯುತ್ತಾರೆ.ಈಗಿನ ಆಧುನಿಕ ವಿದ್ಯುತ್ ಸ್ಥಾವರಗಳು, ಈ ತಂತ್ರಜ್ಞಾನವನ್ನು ಕಡಿಮೆ ಬೆಲೆಗೆ ವಿದ್ಯುತ್ ಉತ್ಪಾದಿಸಲು ಬಳಸುತ್ತವೆ.

ಕೇಂದ್ರೀಕೃತ ಸೌರಶಕ್ತಿ (Concentrated Solar Power) ಎಂದರೆ ಸೂರ್ಯನ ಕಿರಣಗಳನ್ನು ಒಂದು ನಿರ್ದಿಷ್ಟ ಬಿಂದು ಅಥವಾ ನಿರ್ದಿಷ್ಟ ರೇಖೆಯ ಮೇಲೆ ಕೇಂದ್ರೀಕರಿಸಿ, ಇದರಿಂದ ಹೊರಬಂದ ಶಾಖದಿಂದ, ಉಗಿಯನ್ನು ತಯಾರಿಸಿ, ಅದರಿಂದ ಟರ್ಬೈನ್ ಅನ್ನು ತಿರುಗಿಸಿ, ಶಕ್ತಿಯನ್ನು ಉತ್ಪಾದಿಸುವುದು.

CSPಯಲ್ಲಿ ಎರಡು ವಿಧ ಇದೆ. ಒಂದು ಬಾಗಿದ ಕನ್ನಡಿಗಳ ಮಾದರಿ. ಇನ್ನೊಂದು ಗೋಪುರದ ಮಾದರಿ. ಈ ಎರಡು ವಿಧಗಳ ನಡುವಿನ ವ್ಯತ್ಯಾಸಗಳು ಏನೆಂದರೆ:

ಮೊದಲನೇ ವಿಧದ ಬಳಕೆಯನ್ನು 1866ರಲ್ಲಿ ಕಾಣಬಹುದು. ನಾನು ಹೇಳಿದ ಆರ್ಕಿಮಿಡಿಸ್ ಕಥೆಗೆ ಮತ್ತು ಈ ವಿಧಕ್ಕೆ ತುಂಬಾ ಹೋಲಿಕೆ ಇದೆ. ಈ ವಿಧದಲ್ಲಿ ಕನ್ನಡಿಗಳನ್ನು ಯು ಆಕಾರದಲ್ಲಿ/ಪ್ಯಾರಾಬೋಲಿಕ್ ಆಕಾರದಲ್ಲಿ ಬಗ್ಗಿಸಿ, ಅದರ ಮೇಲೆ ಬೀಳುವ ಸೂರ್ಯನ ಬೆಳಕನ್ನು ಕೇಂದ್ರ ರೇಖೆಯ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ. ಈ ಕೇಂದ್ರ ರೇಖೆಯಲ್ಲಿ ಉಂಟಾಗುವ ಶಾಖವನ್ನು ಹಿಡಿದಿಡಲು ದ್ರವಗಳಾದ ನೀರು ಅಥವಾ ಎಣ್ಣೆಗಳನ್ನೋ ಹರಿಸುತ್ತಾರೆ. ಇವು ಅಲ್ಲಿನ ಶಾಖವನ್ನು ತಂದು ಉಗಿಯನ್ನು ಉತ್ಪಾದನೆ ಮಾಡುತ್ತವೆ. ಇದರ ಮೊದಲ ದಾಖಲೆಯುತ ಬಳಕೆಯನ್ನು ನಾವು 1912ರಲ್ಲಿ ಈಜಿಪ್ಟ್ ನಲ್ಲಿ ಕಾಣಬಹುದು. ಅಲ್ಲಿನ ರೈತರು ಕೇಂದ್ರೀಕೃತ ಸೌರಶಕ್ತಿ (ಉಗಿ-ಚಾಲಿತ) ಬಳಸಿ ನೀರನ್ನು ಭೂಮಿಗೆ ಉಣಿಸಲು ಬಳಸಿದ್ದರು.

Curved Concentrated Solar Power Panel
ಬಾಗಿದ ಕನ್ನಡಿಯ ಮಾದರಿ. ಮೂಲ

ಎರಡನೇ ವಿಧದಲ್ಲಿ, ಕೇಂದ್ರೀಕೃತ ಸೌರಶಕ್ತಿಯು (CSP) ಗೋಪುರ ಮತ್ತು ನೇರ ಕನ್ನಡಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ.ಗಣಕ ಯಂತ್ರದ ಮುಖಾಂತರ ನಿಯಂತ್ರಸಲ್ಪಡುವ ಈ ಕನ್ನಡಿಗಳು, ಸೂರ್ಯಕಾಂತಿ ಹೂವಿನಂತೆ, ಸೂರ್ಯನ ಚಲನೆಯನ್ನು ಹಿಂಬಾಲಿಸುತ್ತವೆ. ಈ ಕನ್ನಡಿಗಳ ತೋಟದಲ್ಲಿರುವ ಗೋಪುರವೊಂದು ಇರುತ್ತದೆ. ಕನ್ನಡಿಗಳು ಸೂರ್ಯಕಿರಣವನ್ನು ಪ್ರತಿಫಲಿಸಿ, ಗೋಪುರದ ಮೇಲ್ಭಾಗದಲ್ಲಿ ಒಂದು ಸೀಮಿತ ಜಾಗಕ್ಕೆ ಪ್ರತಿಫಲನೆಯನ್ನು ಕೇಂದ್ರೀಕೃತಗೊಳಿಸುತ್ತವೆ. ಮೊದಲ ವಿಧದಂತೆ ಆ ಜಾಗದಲ್ಲಿ ಉಂಟಾದ ಶಾಖವನ್ನು ಸೆರೆಹಿಡಿಯಲು ದ್ರವಗಳನ್ನು ಹರಿಬಿಡಲಾಗುವುದು.

ಗೋಪುರ ಮಾದರಿ. ಮೂಲ

ಎರಡೂ ವಿಧಗಳ ತುಲನೆ:

ಎರಡನೇ ವಿಧ ಮೊದಲನೇ ವಿಧಕ್ಕಿಂತ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಕ್ಕೆ ಹಲವಾರು ಕಾರಣಗಳಿವೆ.

  • ಹೊಂದಿಕೊಳ್ಳುವಿಕೆ: ಸೌರ ಗೋಪುರಗಳಲ್ಲಿ ಕರಗಿದ ಉಪ್ಪನ್ನು, ಶಾಖ ಸ್ವೀಕರಣೆ ಮತ್ತು ವಾಹಕವನ್ನಾಗಿ ಬಳಸಲಾಗುತ್ತದೆ. ಇದು ತೈಲ ಮತ್ತು ನೀರಿಗಿಂತ ಹೆಚ್ಚು ಅನುಕೂಲಗಳನ್ನು ಹೊಂದಿದೆ. ಇದರ ಕಾರ್ಯಾಚರಣೆಯ ವ್ಯಾಪ್ತಿ ವ್ಯಾಪಕವಾಗಿರುವುದರಿಂದ, ಇದನ್ನು ಪ್ರಥಮ ಆದ್ಯತೆಯಾಗಿ ಕಾಣುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದನ್ನು ಬಳಸಿ ನೀವು ಉಗಿಯನ್ನು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ತಯಾರಿಸಬಹುದು.
  • ಹೆಚ್ಚಿನ ದಕ್ಷತೆ: U- ಆಕಾರದ ಕನ್ನಡಿಗಳ ವಿಧದಲ್ಲಿ, ಶಾಖವನ್ನು ಹೀರಲು ಬಹಳಷ್ಟು ಸಣ್ಣ ಗಾತ್ರದ ಪೈಪ್‌ಗಳ ಜಾಲವಿರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಸೌರ ಗೋಪುರಗಳಲ್ಲಿ ದೊಡ್ಡದಾದ ಒಂದೇ ಪೈಪ್ ನ ವ್ಯವಸ್ಥೆ ಇರುತ್ತದೆ. ಇದರಿಂದಾಗಿ ಶಕ್ತಿ ನಷ್ಟ ತುಂಬಾ ಕಡಿಮೆ ಇರುತ್ತದೆ.
  • ಹಣ : U- ಆಕಾರದ ಕನ್ನಡಿಗಳ ವಿಧದಲ್ಲಿ, ಬಾಗಿದ ಕನ್ನಡಿಗಳನ್ನು ಖರೀದಿಸುವುದು ತುಂಬಾ ದುಬಾರಿಯಾಗುತ್ತದೆ. ಅಲ್ಲದೆ, ಗೋಪುರಗಳಲ್ಲಿ ಕೇವಲ ಒಂದೇ ಪೈಪ್ ಅನ್ನು ಬಳಸುವುದರಿಂದ, ಪೈಪ್ ನ ವಿಚಾರದಲ್ಲೂ ಸಹ ಕಡಿಮೆ ವೆಚ್ಚವನ್ನು ನಾವು ಗೋಪುರದ ಮಾದರಿಯಲ್ಲಿ ಕಾಣಬಹುದು.

ಕೇಂದ್ರೀಕೃತ ಸೌರಶಕ್ತಿ ಮತ್ತು ಫೋಟೋ-ವೋಲ್ಟಾಯಿಕ್ ಸೋಲಾರ್ ಪ್ಯಾನೆಲ್ :

ಫೋಟೋ-ವೋಲ್ಟಾಯಿಕ್ ಸೋಲಾರ್ ಪ್ಯಾನೆಲ್, ಸೂರ್ಯನ ಬೆಳಕನ್ನು ತಕ್ಷಣವೇ ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಆದರೆ ಕೇಂದ್ರೀಕೃತ ಸೌರಶಕ್ತಿಯು ಮೊದಲು ಸೂರ್ಯನ ಬೆಳಕನಿಂದ ಶಾಖವನ್ನು ಉತ್ಪಾದಿಸುತ್ತದೆ. ವಿದ್ಯುಚ್ಛಕ್ತಿಗಿಂತ ಶಾಖವನ್ನು ಸಂಗ್ರಹಿಸುವುದು ಸುಲಭ ಮತ್ತು ಅಗ್ಗ. ಉದಾಹರಣೆಗೆ, ಥರ್ಮೋಸ್ ಫ್ಲಾಸ್ಕ್ ಮತ್ತು ಕಾರಿನ ಬ್ಯಾಟರಿ. ಎರಡೂ ಉಪಕರಣಗಳಲ್ಲಿ ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಥರ್ಮೋಸ್ ಫ್ಲಾಸ್ಕ್, ಬ್ಯಾಟರಿಗೆ ಹೋಲಿಸಿದಾಗ,ಕೈಗೆಟುಕುವ ಬೆಲೆಯಲ್ಲಿ ಮತ್ತು ಅತ್ಯಂತ ಬಾಳಿಕೆ ಬರುವಂತಹ ಉಪಕರಣವಾಗಿದೆ.

ಈಗಿನ ಎಲೆಕ್ಟ್ರಿಕ್ ಬ್ಯಾಟರಿಗಳು ತುಂಬಾ ಆಧುನಿಕವಾಗಿವೆ, ಅಗ್ಗವಾಗಿವೆ ಮತ್ತು ಬಾಳಿಕೆ ಬರುತ್ತವೆ ಎಂದು ನೀವು ಹೇಳಬಹುದು (ಟೆಸ್ಲಾಗೆ ಒಂದು ದೊಡ್ಡ ಧನ್ಯವಾದ ಹೇಳಲೇ ಬೇಕು), ನಿಜ, ಆದರೆ ನಮ್ಮ ಕೈಯಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ವೆಚ್ಚ-ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.

ವ್ಯಕ್ತಿಗತವಾಗಿ ನೋಡಿದಾಗ ಫೋಟೋ-ವೋಲ್ಟಾಯಿಕ್ ಸೋಲಾರ್ ಪ್ಯಾನೆಲ್ಗಳು ಉತ್ತಮ ಎಣಿಸಬಹುದು. ಆದರೆ ಇದನ್ನು ಜಗತ್ತಿನ ಬೃಹತ್ ಬೇಡಿಕೆಗೆ ಹೋಲಿಸಿದರೆ, ಕೇಂದ್ರೀಕೃತ ಸೌರಶಕ್ತಿಯೇ ಉತ್ತಮ ಆಯ್ಕೆ ಆಗುತ್ತದೆ.

ಹೆಚ್ಚಿದ ಬಳಕೆ ಮತ್ತು ಬೆಲೆ ಇಳಿಕೆ:

ಕೇಂದ್ರೀಕೃತ ಸೌರಶಕ್ತಿ (CSP) ಮಾದರಿ ಸಾವಿರಾರು ವರ್ಷಗಳಷ್ಟು ಹಳೆಯದಾಗಿರಬಹುದು, ಆದರೆ ಇದು ಕಳೆದ ಎರಡು ದಶಕಗಳಲ್ಲಿ ಮಾತ್ರ ಗಮನ ಸೆಳೆಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಜಾಗತಿಕ CSP ಉತ್ಪಾದನೆಯು 2009 ಮತ್ತು 2020 ರ ನಡುವೆ 15 ಪಟ್ಟು ಬೆಳೆದಿದೆ, ಇದರಲ್ಲಿ ಸ್ಪೇನ್ ಮತ್ತು US ಪ್ರಮುಖ ರಾಷ್ಟ್ರಗಳ ಕೊಡುಗೆ ತುಂಬಾ ಇದೆ.

ಸಾಮಾನ್ಯವಾಗಿ, ಕೇಂದ್ರೀಕೃತ ಸೌರಶಕ್ತಿ ಯೋಜನೆಗಳನ್ನು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. "ಇದರ ಮೇಲಿನ ಅವಲಂಬನೆಯನ್ನು ನಾವು ಹೊಂದಬಹುದೇ?" ಎಂದು ಮೊದಲು ಖಚಿತ ಪಡಿಸಿಕೊಂಡು, ಆಮೇಲೆ ಇದನ್ನ ಜಾರಿಗೆ ತರುವ ಯೋಜನೆಗೆ ಸರ್ಕಾರಗಳು ಕೈ ಹಾಕುತ್ತವೆ.

ದುಬೈನಲ್ಲಿ ನಡೆದ ಕೇಂದ್ರೀಕೃತ ಸೌರಶಕ್ತಿ ಯೋಜನೆಯು, ನಾಲ್ಕು ಹಂತಗಳಲ್ಲಿ ನಡೆದಿತ್ತು. ಈ ಘಟಕ ವಿದ್ಯುತ್ ಅನ್ನು $0.73 ಪ್ರತಿ kWh ಆಗುವಂತೆ ಉತ್ಪಾದಿಸಿತು. ಅಂದಹಾಗೆ ಜಗತ್ತಿನಲ್ಲಿ ಇದುವರೆಗೂ ಸೌರಶಕ್ತಿ ಬಳಸಿ ಇಷ್ಟು ಕಡಿಮೆ ದರದಲ್ಲಿ ವಿದ್ಯುತ್ತನ್ನು ಉತ್ಪಾದಿಸಿಲ್ಲ. ಆದರೆ ಸಧ್ಯಕ್ಕೆ ಕಲ್ಲಿದ್ದಲನ್ನು ಬಳಸಿ ತಯಾರಿಸಿದ ವಿದ್ಯುತ್ತ್ ಇದಕ್ಕಿಂದ ಅರ್ಧ ಕಡಿಮೆ ದರದಲ್ಲಿ ಸಿಗುತ್ತಿದೆ.

ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸೌರ ವಿದ್ಯುತ್ (PV ಮತ್ತು CSP) ಬೆಲೆಗಳ ಪಟ್ಟಿ. ಮೂಲ

ಸವಾಲುಗಳು :

ಕೇಂದ್ರೀಕೃತ ಸೌರಶಕ್ತಿ ಇನ್ನೂ ಪರಿಣಾಮಕಾರಿಯಾಗಿ ಬೆಳೆಯಬೇಕೆಂದರೆ,  ಅಡೆತಡೆಗಳನ್ನು ದಾಟಿ ಬರಬೇಕು. ಅವುಗಳು,

  • ತಾಂತ್ರಿಕ ಸವಾಲುಗಳು: ಈ ಸೌರ ಶಕ್ತಿಯನ್ನು ಪರಿಣಾಮಕಾರಿಯಾಗಿ ಉತ್ಪಾದಿಸುವುದು ಮತ್ತು ಅದನ್ನ ಸಾಗಿಸುವುದು.
  • ಹಣಕಾಸಿನ ಸವಾಲುಗಳು: ಹೂಡಿಕೆದಾರರು ಇನ್ನೂ ಜನಪ್ರಿಯವಾಗಿರದ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಹೋಗುವುದಿಲ್ಲ. ಅದೇ ರೀತಿ ಹೊಸ ಹೂಡಿಕೆಗಳಿಲ್ಲದೆ ತಂತ್ರಜ್ಞಾನವು ಸಹ ಜನಪ್ರಿಯವಾಗುವುದಿಲ್ಲ.
  • ಪರಿಸರದ ಸವಾಲುಗಳು: ಹೆಚ್ಚಿನ ಪ್ರಮಾಣದ ನೀರಿನ ಬಳಕೆ, ಉಷ್ಣ ತೈಲಗಳ ಬಳಕೆ ಮತ್ತು ಕರಗಿದ ಲವಣಗಳ ಬಳಕೆಯಿಂದ ಹಾನಿಕಾರಕ ವಸ್ತುಗಳು ಹುಟ್ಟುತ್ತವೆ. ಇದು ಸೋರಿಕೆ ಅಪಾಯಗಳನ್ನು ಉಂಟುಮಾಡಬಹುದು. 
ಅದೃಷ್ಟವಶಾತ್, ಮೊದಲ ಎರಡು ಅಡೆತಡೆಗಳು ಹೆಚ್ಚಾಗಿ ಪ್ರೋತ್ಸಾಹಕರ ಮೇಲೆ ಅವಲಂಬಿತವಾಗಿದೆ. ಇದನ್ನು ಪ್ರೋತ್ಸಾಹಿಸಲು ನಾವು ಹಲವು ನಿಯಮ ಸಡಲಿಕೆ ಮತ್ತು ಸಬ್ಸಿಡಿಗಳನ್ನು ನೀಡಬಹುದು. ಕೊನೆಯದಾಗಿ,ಮೂರನೇ ಅಡೆತಡೆಗೆ ನಾವು ಸಮುದ್ರದ ನೀರನ್ನು ಬಳಸಬಹುದು ಮತ್ತು ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಬಳಸಬಹುದು.

ಕೊನೆಯ ಮಾತು :

ನೋಡಿ, ಮೊದಮೊದಲು ಇಂತಹ ಒಳ್ಳೆಯ ವಿಚಾರಗಳು ನಮಗೆ ಹುಚ್ಚುತನ ಅನಿಸಬಹುದು. ಆದರೆ ಜಗತ್ತಿನಲ್ಲಿ ಇರುವ ಎಷ್ಟೋ ಒಳ್ಳೆಯ ಉತ್ಪನ್ನಗಳು, ಮೋಡ ಮೊದಲು ಹುಚ್ಚು ವಿಚಾರಗಳೇ ಆಗಿದ್ದವು. ಉದಾಹರಣೆಗೆ ಟಾಟಾ ನ್ಯಾನೋ. ಜನ ಮೊದ ಮೊದಲಿಗೆ ನಕ್ಕರು, ಆದರೆ ಆ ಕಾರು ರೋಡಿಗೆ ಬಂದು ಪ್ರಚಲಿತವಾಯ್ತು. ಟೆಸ್ಲಾ ವಿಚಾರ ಸಹ ಹಾಗೆ. ಎಲೆಕ್ಟ್ರಿಕ್ ಕಾರ್, ಸೈಬರ್ ಟ್ರಕ್ ಎಂಬ ವಿಚಾರಗಳನ್ನ ನೋಡಿ ಜನ ಸಾಧ್ಯವಿಲ್ಲ ಎಂದರು. ಆದರೆ ಪ್ರತಿಭಾನ್ವಿತರ ಪರಿಶ್ರಮ ಮತ್ತು ಬೆನ್ನು ತಟ್ಟುವ ಜನ ಹಿಂದೆ ನಿಂತ ಕಾರಣ, ಈಗ ಆ ಕಂಪನಿ ಜಗತ್ತಿನ ಅತ್ಯಂತ ಪ್ರಸಿದ್ಧ ಕಾರ್ ತಯಾರಕ ಆಗಿದೆ.

ಅದೇ ರೀತಿ, ಈ ಕೇಂದ್ರೀಕೃತ ಸೌರಶಕ್ತಿ ಬಳಕೆ ಸಹ. ಇದೇನು ಹೊಸತಲ್ಲ. ಹಳೆಯದೇ. ಆದರೆ ಅದನ್ನು ಆಧುನಿಕ ಜಗತ್ತಿಗೆ  ಬದಲಾಯಿಸುವ ತಂತ್ರಜ್ಞಾನ, ಪರಿಶ್ರಮ ಮತ್ತು ಬೆಂಬಲ ಸಿಗಬೇಕಿದೆ. ಪ್ರಕೃತಿಯ ವಿಕೋಪ ತಡೆಯಲು, ಪ್ರಕೃತಿಯಲ್ಲಿ ಉಚಿತವಾಗಿ ಸಿಗುವ ಸೌಲಭ್ಯವನ್ನು ನಾವು ಉಪಯೋಗಿಸಿಕೊಳ್ಳುವ ಜಾಣ್ಮೆಯನ್ನು ನಾವು ತೋರಬೇಕಾಗಿದೆ.

ಹೆಚ್ಚುತ್ತಿರುವ ತಾಪಮಾನ, ವೈಪರೀತ್ಯ ಕಂಡು, ಸಾಮಾಜಿಕ ಕಳಕಳಿಗಾಗಿ ಈ ಲೇಖನವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಇಷ್ಟವಾದಲ್ಲಿ ಶೇರ್ ಮಾಡಿ, ಕಾಮೆಂಟ್ ಮಾಡಿ.
ಧನ್ಯವಾದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು