ಚಳಿಗಾಲದ ಅಧಿವೇಶನಕ್ಕೆ ರಾಜ್ಯದ ಇಡೀ ಆಡಳಿತ ವರ್ಗವು ವರ್ಷಕ್ಕೆ ಒಮ್ಮೆ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಬರುತ್ತದೆ. Suvarna Vidhana Soudha, Belagavi.
ಬೆಳಗಾವಿಯ ಸುವರ್ಣ ವಿಧಾನ ಸೌಧ, ಕನ್ನಡ ರಾಜ್ಯದ ೫೦ ವರ್ಷಗಳ ಸುವರ್ಣ ಮಹೋತ್ಸವದ ಪ್ರತೀಕ. ರಾಜ್ಯದ ಎರಡನೇ ಶಕ್ತಿ ಕೇಂದ್ರ ಆಗಿರುವ ಇದು, ಆಡಳಿತಗಾರರ ಎರಡನೇ ಮನೆ. ಹಲಗಾ- ಬಸ್ತವಾಡ ಪ್ರದೇಶದಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಎತ್ತರದ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ. ಅಕ್ಟೋಬರ್ ೧೧, ೨೦೧೨ರಲ್ಲಿ, ಆಗಿನ ರಾಷ್ಟ್ರಪತಿಗಳಾದ ದಿ. ಪ್ರಣಬ್ ಮುಖರ್ಜಿ ಇದನ್ನ ಉದ್ಘಾಟಿಸಿದರು. ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಡಳಿತಕ್ಕೆ ಚಾಲನೆ ನೀಡಿದರು.
![]() |
| ಬೆಳಗಾವಿಯ ಸುವರ್ಣ ವಿಧಾನ ಸೌಧ |
ಭಾರತದ ಸ್ವಾತಂತ್ರ ಸಂಗ್ರಾಮದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಅದೇ ರೀತಿ ಬೆಳಗಾವಿ ನಗರದ ಹೆಸರನ್ನು ಈ ಸಂಗ್ರಾಮದ ಇತಿಹಾಸದಲ್ಲಿ ಹೊನ್ನಿನ ಅಕ್ಷರದಲ್ಲಿ ಬರೆಯಲಾಗಿದೆ. ಮಹಾತ್ಮಾ ಗಾಂಧೀ ಅಧ್ಯಕ್ಷತೆ ವಹಿಸಿಕೊಂಡ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದದ್ದು ಇಲ್ಲೇ. ಆದರೆ ನಾನು ಹೇಳ ಬಯಸಿದ್ದು ಅದಲ್ಲ. ಗಾಂಧೀ ಬರುವ ಮುನ್ನ ಭಾರತದ ಸ್ವಾತಂತ್ರದ ಚಳುವಳಿ ಅಷ್ಟೊಂದು ಒಗ್ಗಿಕೊಂಡು ಹೋಗುತ್ತಿರಲಿಲ್ಲ. ಎಲ್ಲರೂ ತಮ್ಮದೇ ಆದ ರೀತಿನಲ್ಲಿ ಹೋರಾಟದಲ್ಲಿ ಇಳಿದಿದ್ದರು. ಏಕತೆ ಇರಲಿಲ್ಲ. ಆದರೆ ಗಾಂಧಿ ಯಾವಾಗ ಬಂದರೋ, ಅಲ್ಲಿಂದ, ಏಕತೆಯಿಂದ ತೀವ್ರ ಹೋರಾಟ ನಡೆಯಿತು.
ಉತ್ತರ ಇಷ್ಟೇ, ನ್ಯೂನತೆಯನ್ನು, ನಿರ್ಲಕ್ಷತೆಯನ್ನು ಕಂಡು ಕೊಂಡು ನಾವು ಆಟ ಆಡಬೇಕು. ಅದನ್ನ ನಮ್ಮ ಬಂಡವಾಳ ಮಾಡಿಕೊಂಡು ಅಖಾಡಕ್ಕೆ ಇಳಿಯುವುದು ಯಾವತ್ತಿಗೂ ಒಂದು ಉತ್ತಮ ಆಯ್ಕೆ ಅಂತ ಹೇಳಬಹುದು.
ಕನ್ನಡ ನಾಡಿಗೆ ನಿರಂತರವಾಗಿ ಮಹಾರಾಷ್ಟ್ರದಿಂದ ಕಿರಿಕಿರಿ ಆಗುತ್ತಲೇ ಇದೆ. ಒಂದು ರೀತಿಯಲ್ಲಿ, ರಣರಂಗದಲ್ಲಿ ಯಾವುದಕ್ಕೋಸ್ಕರ ಹೊರಾಡುವ ಸೈನಿಕನಂತೆ, ಈ ಕಿತ್ತಾಟ ನಡೆಯುತ್ತಲೇ ಇದೆ. ಮೊದಲಿಗೆ ಬೆಳಗಾವಿ ಬೇಡ ಅಂದರು. ಬಳಿಕ ಬೇಕು ಅಂದರು. ಅದಕ್ಕೋಸ್ಕರ ಒತ್ತಡ ಹಾಕಿ ಮಹಾಜನ್ ವರದಿ ಸಹ ತಯಾರು ಮಾಡಿಸಿದರು, ಕಡೆಗೆ ಅದನ್ನು ಸಹ ಒಪ್ಪದೇ ಬಿಟ್ಟರು.
ಬೆಳಗಾವಿ ಅಂತಹ ಗಡಿ ಭಾಗದ ಕಡೆ ಸರ್ಕಾರ ಗಮನ ಹರಿಸುತ್ತಿಲ್ಲ, ಎಂದು MES ಪುಂಡರು ಸರ್ಕಾರವನ್ನ ದೂಷಿಸಲು ಶುರು ಇಟ್ಟರು (ದೂಷಣೆಯ ಹಿಂದಿನ ಮನೋಭಾವ ಕೆಟ್ಟದಾಗಿದ್ದರು, ಅವರ ಮಾತಿನಲ್ಲಿ ಸತ್ಯವಿದೆ). ಅದರ ಜತೆಗೆ ಅವರ ಇತರೆ ಕಿರಿಕಿರಿಗಳು ಸಹ ಜಾಸ್ತಿ ಆದವು. ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡು, ಕುಮಾರಸ್ವಾಮಿ ಸರ್ಕಾರ ಒಂದು ಸ್ಪಷ್ಟ ತೀರ್ಮಾನಕ್ಕೆ ಬಂದರು. ಈ ತೀರ್ಮಾನವನ್ನು ಮುಂದೆ ಗಟ್ಟಿಯಾಗಿ ನಡೆಸಿಕೊಂಡು ಬಂದದ್ದು ಯಡಿಯೂರಪ್ಪ ಸರ್ಕಾರ.
ಎಲ್ಲಿ ನ್ಯೂನತೆ ಇದೆಯೋ ಅಲ್ಲಿ ಸರಿಯಾದ ಬಂಡವಾಳ ಹಾಕಬೇಕೆಂದು, ರಾಜ್ಯದ ಎರಡನೇ ಶಕ್ತಿ ಕೇಂದ್ರವನು ಬೆಳಗಾವಿಯಲ್ಲೇ ಮಾಡಲು ನಿರ್ಧರಿಸಿದರು. ಸಕಲ ಆಡಳಿತವೇ ಅಲ್ಲಿ ಬಂದು ಕೆಲಸ ಮಾಡಿದರೆ, ಈ ಕಿರಿಕಿರಿ ಉಪಶಮನ ಆಗಬಹುದು ಎಂಬ ಲೆಕ್ಕಾಚಾರ. ಕಾಲ ಕಳೆದಂತೆ ಏನೋ ಮಾಡಲು ಹೋಗಿ ಏನೋ ಆದಂತೆ ಆಗಿದೆ ಬಿಡಿ. ಅದು ಬೇರೆ ಮಾತು.
ಮೊದಲೇ ಹೇಳಿದಂತೆ ಒಳ್ಳೆಯ ನಿರ್ಧಾರದಿಂದ ಶುರು ಆಗಿದ್ದ ಈ ಕಾರ್ಯ, ರಾಜಕೀಯ ದ್ವೇಷದಿಂದಲೋ, ಅಥವಾ ಶಕ್ತಿಯನ್ನು ದಕ್ಷಿಣದಿಂದ ಕೊಂಡೊಯ್ಯುವುದು ನಮಗೆ ಅಪಾಯ ತರುವುದೋ ಎಂಬ ಭಯವೋ ಗೊತ್ತಿಲ್ಲ. ಒಟ್ಟಿನಲ್ಲಿ ವರ್ಷದ ಒಂದು ಇಪ್ಪತ್ತು ದಿವಸದ ಕೆಲಸಕ್ಕಷ್ಟೇ ಈ ಸುವರ್ಣ ವಿಧಾನ ಸೌಧ ಸೀಮಿತವಾಗಿದೆ.
ಇದೊಂದು ವಿಪರ್ಯಾಸ. ಆಡಳಿತವನ್ನು ಗಡಿ ಭಾಗಗಳ ವರೆಗೆ ಕೊಂಡೊಯ್ಯುವುದು, ಉತ್ತರ ಕರ್ನಾಟಕದ ಏಳಿಗೆಗೆ ಸಹಾಯ ಮಾಡುವುದು ಇದರ ಉದ್ದೇಶ ಆಗಿದ್ದರೂ, ೯ ವರ್ಷ ಕಳೆದರೂ ಅದಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ವಿನಾ ಕಾರಣ ಸರ್ಕಾರ ಇದಕ್ಕಾಗಿ ಪ್ರತಿ ತಿಂಗಳು ಅರ್ಧ ಕೋಟಿಗಿಂತಲೂ ಹೆಚ್ಚು ಖರ್ಚು ಮಾಡುತ್ತಾರೆ. ಊದುವುದನ್ನು ಬಿಟ್ಟು ಬಾರಿಸುವುದನ್ನು ತಗೆದುಕೊಂಡಂತೆ ಆಯ್ತು.
ಈ ಎಲ್ಲ ನಿರ್ಲಕ್ಷಗಳು, ಈ ಕಟ್ಟಡ ಮೂಲ ಆಶಯಕ್ಕೆ ಕೊಳ್ಳಿ ಇಡುವಂತಾಗಿವೆ. ಉತ್ತರ ಕರ್ನಾಟಕ, ಪ್ರತ್ಯೇಕ ರಾಜ್ಯ ಎಂಬ ಕೂಗು ಈಗ ಕೇಳಿಬರುತ್ತಿದೆ. ಹಿಂದೊಮ್ಮೆ ಈ ಸುವರ್ಣ ವಿಧಾನ ಸೌಧದ ಮುಂದೆಯೇ, ಉತ್ತರ ಕರ್ನಾಟಕ ರಾಜ್ಯದ ಧ್ವಜ ಹಾರಿಸಲು ಸಹ ಗುಂಪೊಂದು ಪ್ರಯತ್ನ ಮಾಡಿತ್ತು. MES ಪುಂಡರ ವರ್ತನೆ ಸಹ ಅತೀ ಆಗುತ್ತಿದೆ. ಅದಕ್ಕಿಂದ ಇನ್ನೂ ಖೇದದ ವಿಚಾರವೆಂದರೆ, ಓರ್ವ ತಾಯಿಯ ಆಸ್ತಿಯಾದ ಕುಂಕುಮ-ಅರಿಶಿಣ ಬಣ್ಣದ ಧ್ವಜವನ್ನ, ತಾಯಿಯ ಪ್ರೀತಿಯ ಪುತ್ರನಂತಿದ್ದ ಶಿವಾಜಿ ಅವರ ಹೆಸರು ಹೇಳಿಕೊಂಡು ಸುಟ್ಟು ವಿಕೃತಿ ಮೆರೆದಿದ್ದಾರೆ. ಒಬ್ಬ ಮಹಾನ್ ಹೋರಾಟಗಾರನ ಹೆಸರಿಗೆ ಈ ಥರದ ಕಪ್ಪು ಚುಕ್ಕೆ ತರುವುದು ಸಹ ತಪ್ಪು.
ದಶಕ ತುಂಬುವುದರ ಒಳಗೆ, ಈ ಸುವರ್ಣ ವಿಧಾನ ಸೌಧದಲ್ಲಿ ನಿಜಾವದ ಆಡಳಿತ ಶುರು ಆಗಲಿ ಎಂಬುವುದು, ನಮ್ಮೆಲ್ಲ ಉತ್ತರ ಕರ್ನಾಟಕದ ಕನ್ನಡಿಗರ ಆಶಯ.



0ಕಾಮೆಂಟ್‌ಗಳು