ನೋಕಿಯಾ ಯುಗ ಮುಗಿದು ಸ್ಮಾರ್ಟ್ ಫೋನ್ ಯುಗ ಶುರು ಆದಾಗಿನಿಂದ, ಸಾಮಾಜಿಕ ಮಾಧ್ಯಮಗಳ(social media) ಬೆಳವಣಿಗೆ ಹಯ ಲಯದಲ್ಲಿ ಮುನ್ನುಗ್ಗುತ್ತಿದ್ದೆ. ಸಾಮಾಜಿಕ ಮಾಧ್ಯಮಗಳನ್ನು ಅರಿಯದೆ ಇರುವವರು ಬಹಳ ಕಡಿಮೆ. ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯ ವಯಸ್ಕರವರೆಗೆ ಎಲ್ಲರಿಗೂ ಈಗ ಈ ಮಾಧ್ಯಮದ ಬಗ್ಗೆಯೇ ಆಸಕ್ತಿ ಜಾಸ್ತಿ. ಎಷ್ಟೋ ಜನರಿಗೆ ಇದು ಮನರಂಜನೆಯ ತಾಣ ಆದರೆ, ಇನ್ನೂ ಕೆಲವರಿಗೆ ಇದು ವಿಶ್ವ ವಿದ್ಯಾಲಯ. ಸ್ವಲ್ಪ ಜನರಿಗೆ ದ್ವೇಷದಳ್ಳುರಿ ಬಿತ್ತುವ ಅಸ್ತ್ರ ಆದರೆ, ಪ್ರತಿಭಾನ್ವಿತರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುವ ತಾಣ. ಪಟ್ಟಿ ಇಷ್ಟಕ್ಕೆ ಮುಗಿಯದು. ಏನಿದು ಎಲ್ಲಾ ಬರಿ ಹೊಗಳಿಕೆ ಮಾತು ಬರೆದಿದ್ದಾನಲ್ಲ ಎಂದು ಭಾವಿಸಬೇಡಿ. ಸಾಮಾಜಿಕ ಮಾಧ್ಯಮದ ಕರಾಳ ಕಹಿ ಸತ್ಯ ಎಂದರೆ, ಅದು ಇರುವುದೇ ನಿಮ್ಮನ್ನು ಮೂರ್ಖರನ್ನಾಗಿ (makes you fool) ಮಾಡಲು.
ತಂತ್ರಜ್ಞಾನ ನಿಮ್ಮನ್ನ ಎಷ್ಟು ಜೀವಂತ ಹೆಣದಂತೆ ಮಾಡಿದರೆ ಎಂದರೆ, ಪ್ರತಿಯೊಂದು ಸಾಮಾಜಿಕ ಮಾಧ್ಯಮದ ಆದ್ಯ ಗುರಿಯೇ ನಿಮ್ಮ ಬಗ್ಗೆ ನೀವು ಚಿಂತಿಸದಂತೆ ಮಾಡುವುದು.
ಒಮ್ಮೆ ಹಿಂತಿರುಗಿ ನೋಡೋಣ. ಹಿಂದೆ ಮನೆಯಲ್ಲಿ ರೇಷನ್ ಅಥವಾ ದಿನಸಿ ಎಲ್ಲಾದರೂ ಖಾಲಿ ಆದರೆ ಅದನ್ನು ಕೊಂಡುಕೊಳ್ಳಲು ಒಂದು ದೊಡ್ಡ ಯೋಜನೆಯನ್ನೇ ಹಾಕುತ್ತಿದ್ದೆವು. ಎಷ್ಟು ಕೆಜಿ ಬೇಕು, ಯಾವಾಗ ತರಿಸಬೇಕು? ಯಾರಿಂದ ಕೊಂಡುಕೊಳ್ಳಬೇಕು? ಎಂಬೆಲ್ಲ ಯೋಚನೆ ಮಾಡಿದ ನಂತರವೇ ನಾವು ಖರೀದಿ ಮಾಡುತ್ತಿದ್ದೆವು. ಆದರೆ ಈಗ, ಕೇವಲ ಹತ್ತು ನಿಮಿಷದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬೇಕಾದ ಸಾಮಾನುಗಳು ಬಂದು ನಿಲ್ಲುತ್ತವೆ. ಅಲ್ಲಿಗೆ ನಿಮ್ಮ ಯೋಚನಾ ಶಕ್ತಿ ಮತ್ತು ಯೋಜನಾ ಶಕ್ತಿ ಹೋಮಕ್ಕೆ ಸೇರಿ ಆಯ್ತು.
ಸಾಮಾಜಿಕ ಮಾಧ್ಯಮಗಳಿಂದಾಗಿ ಮೂರ್ಖತನ |
ಮೊದಲು ಏನಾದರು ತಿನ್ನಬೇಕು ಅನಿಸಿದರೆ, ಅಥವಾ ಖರೀದಿ ಮಾಡಬೇಕು ಅನಿಸಿದರೆ ಅದಕ್ಕೆ ಸಂಬಂಧಿಸಿದಂತೆ ಅನೇಕ ಹುಡುಕಾಟ ಮಾಡಿ, ಸಂಶೋಧನೆ ಮಾಡಿ, ನಂತರ ಮುಂದುವರಿಯುತ್ತಿದ್ದರು. ಆದರೆ ಈಗ, ಖುದ್ದು ಮಾಧ್ಯಮಗಳೇ ನಿಮ್ಮ ರುಚಿಗೆ ತಕ್ಕಂತಹ ವಿಷಯಗಳನ್ನು ಸ್ವಯಂ-ಶಿಫಾರಸ್ಸು ಮಾಡುತ್ತವೆ. ಅಲ್ಲಿಗೆ ಕುತೂಹಲದ ಮಾರಣ ಹೋಮ ಆಯಿತು.
ಮೊದಲು, ಕನಿಷ್ಠ ಯಾವುದೇ ಅಭಿಪ್ರಾಯಕ್ಕೆ ಬರುವ ಮೊದಲು, ಜನರು ನೈಜ ಸಂಗತಿಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ, ವಿವಿಧ ವೆಬ್‌ಸೈಟ್‌ಗಳಲ್ಲಿ ವಿಷಯಗಳನ್ನು ಹುಡುಕಿ ಅದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರು. ಈಗ, ನಿಮಗಾಗಿ ರೆಡಿಮೇಡ್ ಅಭಿಪ್ರಾಯಗಳು, ತ್ವರಿತವಾಗಿ ಟ್ವಿಟ್ಟರ್ ಅಥವಾ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಿಗುತ್ತವೆ. ನೀವು ಮಾಡಬೇಕಾಗಿರುವುದು ಅತೀ ಕಷ್ಟದ ಕೆಲಸ ಎಂದರೆ ಸಿಹಿಯಾದ ಅಭಿಪ್ರಾಯವನ್ನು ಆರಿಸುವುದು.
ತಂತ್ರಜ್ಞಾನದಿಂದಾಗಿ, ನಮ್ಮ ಇಂದಿನ ಜೀವನವು 2-ನಿಮಿಷದ ನೂಡಲ್‌ನಂತಾಗಿದೆ. ಆದ್ದರಿಂದ, ಇದು ಏಕೆ ಹೀಗಾಗುತ್ತಿದೆ? ಯಾವ ಥರ ಇದು ಕೆಲಸ ಮಾಡುತ್ತದೆ? ಎಂದು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ. ಈ ಲೇಖನದಲ್ಲಿ, ನಾನು ಒಂದು ಸಣ್ಣ ಮಾದರಿ ಅಥವಾ ಮಾನದಂಡವನ್ನು ವಿವರಿಸುತ್ತೇನೆ. ಅದರ ಮೂಲಕ ನೀವು ಒಂದು ಪ್ರಯೋಗವನ್ನು ಮಾಡಿ, ಅದರಲ್ಲಿ ನೀವು ಸಾಮಾಜಿಕ ಮಾಧ್ಯಮಗಳಿಂದ ಎಷ್ಟು ಪ್ರಭಾವಿತರಾಗಿದ್ದೀರಿ? ಎಂಬುದನ್ನು ತಿಳಿದುಕೊಳ್ಳಬಹುದು.
ಏಕೆ ಹೀಗಾಗುತ್ತಿದೆ?
ಮೊದಲನೆಯದಾಗಿ, ಇದು ಏಕೆ ಹೀಗಾಗುತ್ತಿದೆ? ಎಂದು ಅರ್ಥಮಾಡಿಕೊಳ್ಳೋಣ. ನೀವು ಯಾವುದೇ ಸಾಮಾಜಿಕ ಮಾಧ್ಯಮಗಳಿಗೆ ಭೇಟಿ ನೀಡಿ ಅದರ ಮೂಲ ವಿನ್ಯಾಸವನ್ನು ಗಮನಿಸಿದಾಗ, ನಿಮಗೆ ಅರಿವಾಗುವ ಸತ್ಯ ಏನೆಂದರೆ, ಸಾಮಾಜಿಕ ಮಾಧ್ಯಮಗಳು ನಿಮ್ಮ ಹೆಚ್ಚಿನ ಸಮಯವನ್ನು ಕಸಿಯುವ ಪ್ರಯತ್ನ ಮಾಡುತ್ತವೆ.
ನಿಮ್ಮ ಗಮನ ಕೇವಲ ಅದರ ಮೇಲೆ ಕೇಂದ್ರೀಕೃತ ಆಗಿರುವಂತೆ ನೋಡಿಕೊಳ್ಳಲು, ಡೆವಲಪರ್ಸ್ "ಎಕೋ ಚೇಂಬರ್ಸ್" ಅನ್ನು ವಿನ್ಯಾಸ ಮಾಡಿರುತ್ತಾರೆ. ಈ ಎಕೋ ಚೇಂಬರ್ಸ್ಗಳ ಮೂಲ ಕೆಲಸ ಏನೆಂದರೆ ನಿಮ್ಮನ್ನ ಒಂದು ಲೂಪ್ ಅಲ್ಲಿ ಬಂಧಿ ಆಗಿ ಇಡುವುದು. ಲೂಪ್ ಅಲ್ಲಿ ಕೇವಲ ನೀವು ಇಷ್ಟ ಪಡುವ ವಸ್ತುಗಳ/ವಿಚಾರಗಳ ಸಂಬಂಧಪಟ್ಟ ಮಾಹಿತಿಗಳನ್ನು ಮಾತ್ರ ತೋರಿಸುತ್ತಾ, ನಿಮ್ಮ ಏಕ ಪಕ್ಷೀಯ ನಿಲುವನ್ನು, ತೂಕ ಮಾಡದೆ, ಇನ್ನೂ ಜಾಸ್ತಿ ನಂಬುವಂತೆ ಮಾಡುತ್ತದೆ.
ಬಲಗೊಂಡ ನಿಮ್ಮ ಈ ಏಕಪಕ್ಷೀಯ ನಿಲುವು, ಅರ್ಥವಿಲ್ಲದ ಸಾಮಾಜಿಕ ಒಳಜಗಳಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತದೆ. ಯಾವುದೇ ರೀತಿಯಾಗಿ ನಿಮಗೆ ಲಾಭವನ್ನು ಉಂಟು ಮಾಡದ ಈ ಜಗಳಗಳು, ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತವೆಯೇ ವಿನಃ, ನಿಮ್ಮ ಜೀವನಕ್ಕೆ ಮೌಲ್ಯವನ್ನು ದಕ್ಕಿಸಿಕೊಡುವುದಿಲ್ಲ. ನಿಮ್ಮ ಈ ಏಕ ಪಂಥೀಯ ನಿಲುವುಗಳನ್ನು ಬಲಗೊಳಿಸುವ ಕಲೆ ಟ್ವಿಟ್ಟರ್ ನಂತಹ ಅನೇಕ ಸಾಮಾಜಿಕ ಮಾಧ್ಯಮಗಳ ಬಳಿ ಹೇರಳವಾಗಿ ಇದೆ.
ಯೋಚನಾ ಕ್ಷಮತೆ
ಎರಡನೆಯದಾಗಿ ನಮ್ಮ ಯೋಚನಾ ಕ್ಷಮತೆ. ನಮ್ಮ ಸಮಾಜ ಯಾವತ್ತೂ ಹಿರಿಯರ ಮಾತುಗಳನ್ನು ಗೌರವಿಸು ಅಂತಾ ಹೇಳುತ್ತಾ ಬಂದಿದೆ. ಕಾರಣ ಅವರ ಅರ್ಥಗರ್ಭಿತ ಮಾತುಗಳು. ಹೇರಳವಾದ ಜೀವನದ ಅನುಭವಗಳಿಂದ ಬಂದಂತಹ ಆ ಸಲಹೆ/ಸೂಚನೆಗಳು, ಜೀವನದ ಪ್ರಮುಖ ಘಟ್ಟಗಳ ಪೈಕಿ ಒಂದು. ಆದರೆ ಮಾಧ್ಯಮಗಳಿಂದಾಗಿ, ಜನ ಇಂತಹ ಅನುಭವದ ಮಾತುಗಳಿಗೆ ಕಿವಿಕೊಡುವುದಾಗಲಿ, ತಮ್ಮ ತಮ್ಮ ವಿಚಾರಗಳ ಬಗ್ಗೆ ಧೃಢ ನಿರ್ಧಾರ ಕೈಗೊಳ್ಳುವುದರಲ್ಲಾಗಲಿ ಹೆಚ್ಚು ಕಿವಿಗೊಡುತ್ತಿಲ್ಲ.
ತಪ್ಪು ಕೇವಲ ಅದರಷ್ಟದ್ದೇ ಅಲ್ಲ. ನಾವು ಓದಿ ಬೆಳೆದ ಶಿಕ್ಷಣ ವ್ಯವಸ್ಥೆ ಸಹ ನಮ್ಮನ್ನ ಹಾಗೆ ಬೆಳೆಸಿದೆ. ಪಥ್ಯದ ಸಾರ ತಿಳಿಯದೆ, ಕೇವಲ ಕಂಠಪಾಠ ಮಾಡಿ, ಅದನ್ನೇ ಪರೀಕ್ಷೆಯಲ್ಲಿ ವಾಂತಿ ಮಾಡಿ, ಮಾರ್ಕ್ಸು ಪಡೆವುದೊಂದೇ ವಿದ್ಯಾರ್ಜನೆಯ ಮುಖ್ಯ ಉದ್ದೇಶ ಎಂದು ಪಾಲಿಸುತ್ತ ಬಂದೆವು. ಅಚಲ ತೀಕ್ಷ್ಣ ಯೋಚನಾ ಸಾಮರ್ಥ್ಯದ ಮೊದಲ ಕೊಲೆ ಅಲ್ಲೇ ಆಯಿತು. ಇದು ಸಾಲದ್ದು ಎಂಬಂತೆ, ತಂತ್ರಜ್ಞಾನದ ಮೂಲಕ, ಈಗ ಈ ಮಾಧ್ಯಮಗಳು ಕೂಡ ಮನುಜನ ಈ ಯೋಚನಾ ಸಾಮರ್ಥ್ಯವನ್ನು ಗುರಿಯಾಗಿಸಿ, ಅವನು ಏನೇನು ಯೋಚನೆ ಮಾಡದಂತೆ ಮಾಡಿದವು.
ಪ್ರಯೋಗ
ಸಾಮಾಜಿಕ ಮಾಧ್ಯಮಗಳ ಈ ರೀತಿಯ ಏಕಪಕ್ಷೀಯ ವಿಷಯ ತೋರಿಸುವಿಕೆಯ ಒಂದು ಉದಾಹರಣೆಯನ್ನು ನೀವು ಸಹ ಒಂದು ಪ್ರಯೋಗ ಮಾಡುವ ಮೂಲಕ ಗಮನಿಸಬಹುದು. ಇದಕ್ಕೆ ಟ್ವಿಟ್ಟರ್ ಮಾಧ್ಯಮವನ್ನು ಬಳಸೋಣ. ಕಾರಣ ಇಷ್ಟೇ, ಇದರಲ್ಲಿ ಜನಾನು ಜಾಸ್ತಿ, ಹಾಗೂ ಅರ್ಥ ಮಾಡಿಕೊಳ್ಳುವುದು ಸಹ ಸುಲಭ. ಅದರಲ್ಲೂ ರಾಜಕೀಯದಲ್ಲಿ ಆಸಕ್ತಿ ಇದ್ದವರಿಗಂತೂ ಟ್ವಿಟ್ಟರ್ ಅಂತಹ ಸಾಮಾಜಿಕ ಮಾಧ್ಯಮ ಬಹಳ ಅಚ್ಚು ಮೆಚ್ಚು.
ಎರಡು ಟ್ವಿಟ್ಟರ್ ಖಾತೆಗಳನ್ನೂ ಹೊಸದಾಗಿ ಸೃಷ್ಠಿಸಿ. ಮೊದಲನೆಯದನ್ನು, ಉದಾಹರಣೆಗೆ, ಅತ್ಯಂತ ಪ್ರಚಲಿತ ಹತ್ತು ರಾಜಕೀಯದ ಎಡ ಪಂಥೀಯರನ್ನು ಹಿಂಬಾಲಿಸಿ. ಇನ್ನೊಂದನ್ನು ಕೇವಲ ಬಲಪಂಥೀಯರನ್ನು ಹಿಂಬಾಲಿಸಿ. ಸ್ವಲ್ಪ ಸಮಯ ಕಳೆದ ಬಳಿಕ, ನಿಮ್ಮ ಖಾತೆಗಳನ್ನು ತೆರೆದು ನೋಡಿದಾಗ, ಆಯಾ ಖಾತೆಗಳಲ್ಲಿ, ಹಿಂಬಾಲಿಸಲ್ಪಟ್ಟ ವ್ಯಕ್ತಿಗತ ವಿಷಯಗಳನ್ನಷ್ಟೇ ನಿಮಗೆ ತೋರಿಸುತ್ತದೆ. ಅಷ್ಟೇ ಅಲ್ಲ, ನಿಮ್ಮಂತೆಯೇ ಆಸಕ್ತಿ ಹೊಂದಿರುವ ಅನೇಕ ಜನರನ್ನೂ ಸಹ ಅದು ನಿಮಗೆ ತೋರಿಸುತ್ತದೆ.
ಇವೆರಡರ ಮಧ್ಯೆ ಒಂದು ವಿರಾಮ ತಗೆದುಕೊಂಡು ಒಮ್ಮೆ ಯೋಚಿಸಿ. ಇವುಗಳಲ್ಲಿ ನೀವು ಹೊಂದಿದ ಅಭಿಪ್ರಾಯಗಳು ನಿಜವಾಗಿಯೂ ನಿಮ್ಮಲ್ಲಿ ಹುಟ್ಟಿತೇ ಅಥವಾ ಮಾಧ್ಯಮಗಳ ಪ್ರೇರಣೆಯಿಂದ ಹುಟ್ಟಿತೇ? ನೀವು ಟ್ವಿಟ್ಟರ್ ಬಳಸುವಾಗ ಹಾಗೆ ಸುಮ್ಮನೆ ಸ್ಕ್ರಾಲ್ ಮಾಡಿರಬಹುದು. ಆದರೆ ಅದು ತೋರಿಸಿದ ರೆಡಿಮೇಡ್ ವಿಷಯ ವಸ್ತುಗಳು, ನಿಮ್ಮ ಅರಿವಿಗೆ ಬಾರದೆ ನಿಮ್ಮ ಅಭಿಪ್ರಾಯ/ನಿಲುವಿನ ಮೇಲೆ ಅತ್ಯಂತ ಪ್ರಭಾವ ಬೀರುತ್ತವೆ. ಒಂಥರಾ ಆಪ್ತಮಿತ್ರದಲ್ಲಿ ಸೌಂದರ್ಯ ನಾಗವಲ್ಲಿ ಆದ ರೀತಿಯಂತೆ.
ಈ ಒಂದು ಕ್ರಿಯೆಯನ್ನೇ ಎಕೋ ಚೇಂಬರ್ ಎಂದು ಕರೆಯುತ್ತೇವೆ. ಅಂದರೆ ನಿಮ್ಮ ಆಸಕ್ತಿಗಳ ಅನುಸಾರ ನಿಮ್ಮ ಸುತ್ತ ಕೇವಲ ಅದೇ ರೀತಿಯ ವಿಷಯಗಳನ್ನು ಮಾಧ್ಯಮಗಳು, ಎಕೋ ಅಂದರೆ, ಪ್ರತಿಧ್ವನಿಸುತ್ತವೆ. ಈ ರೀತಿಯಾಗಿ ನೀವು ಆ ಎಕೋ ಚೇಂಬರ್ ನ ಒಂದು ಭಾಗವಾಗಿ ಬಿಡುತ್ತೀರಿ.
ನಿಮ್ಮ ಅರಿವಿಗೆ ಬಾರದೆ ನೀವು ಈ ಪರಿಸರದಲ್ಲಿ ನಿಮ್ಮ ಸ್ವಂತ ಚಿಂತನೆಯನ್ನು ಬಲಿಯಾಗುವಂತೆ ಮಾಡಿಕೊಳ್ಳುತ್ತಿದ್ದೀರಿ. ಏಕ ಪಕ್ಷಿಯ ನಿಲುವಿಗೆ ನೀವು ಬಹು ಬೇಗ ಒಲವು ತೋರಲು ಶುರು ಮಾಡುತ್ತೀರಿ. ಕೇವಲ ಹತ್ತು ಇಪ್ಪತ್ತು ಜನರಿಗೆ ಈ ಥರ ಆದರೆ ಏನು ತೊಂದರೆ ಇಲ್ಲ. ಆದರೆ, ಒಂದು ದೇಶ ಅಥವಾ ಕೋಟ್ಯಂತರ ಜನಗಳು ಸಹ ಇದಕ್ಕೆ ಬಲಿ ಆದರೆ, ಇದು ನಿಜವಾಗಿಯೂ ಒಂದು ದುಸ್ವಪ್ನದಂತೆ ನಮ್ಮ ಸಮಾಜವನ್ನು ಕಾಡುವುದಂತೂ ಪಕ್ಕಾ. ಬರೀ ಟ್ವಿಟ್ಟರ್ ಅಂತ ಅಲ್ಲಾ. ಎಲ್ಲಾ ಸಾಮಾಜಿಕ ಮಾಧ್ಯಮಗಳು ಸಹ ಇದೇ ಆಟಗಳನ್ನು ಆಡುತ್ತವೆ.
ಇವುಗಳಿಂದ ನನಗೆ ಏನೂ ತೊಂದರೆಯಾಗುವುದಿಲ್ಲ ಮತ್ತು ನನ್ನ ಮೇಲೆ ಇಷ್ಟರ ಮಟ್ಟಿಗೆ ಪರಿಣಾಮ ಬೀರುವುದಿಲ್ಲ ಎಂದು ನೀವು ಭಾವಿಸಿದ್ದರೆ, ಅದು ತಪ್ಪು. ಇದು ನಿಮ್ಮ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಬಹುದು ಎಂದು ನಾನು ನಿಮಗೆ ಹೇಳುತ್ತೇನೆ.
ತಂತ್ರಜ್ಞಾನ: ವರವೂ ಹೌದು, ಶಾಪವೂ ಹೌದು
ಆದರೆ ಇದಕ್ಕೂ ಮುನ್ನ ಇನ್ನೊಂದು ವಿಷಯ ಹೇಳಬೇಕು. ತಂತ್ರಜ್ಞಾನವು ಎಲ್ಲವನ್ನೂ ಹಾಳುಮಾಡುತ್ತದೆ ಎಂದು ವಾದ ಮಾಡಿದರೆ ಅಪಾರ್ಥವಾಗುತ್ತದೆ. ತಂತ್ರಜ್ಞಾನದ ಹಿಂದಿನ ಏಕೈಕ ಉದ್ದೇಶವೆಂದರೆ, ನಾವು ನಮ್ಮ ಸಮಯವನ್ನು ಅನುಪಯುಕ್ತ ವಿಷಯಗಳ ಮೇಲೆ ಸಮಯ ವ್ಯರ್ಥ ಮಾಡದಂತೆ, ನೋಡಿಕೊಳ್ಳುವುದು.
2022 ರಲ್ಲಿ, ನೀವು ಪ್ರಯಾಣಿಸುವಾಗ ನಕ್ಷೆಯನ್ನು ತೆಗೆದುಕೊಂಡು ಹೋದರೆ, ಜನರಿಗೆ ಅದು ಸ್ವಲ್ಪ ವಿಚಿತ್ರವಾಗಿ ಕಾಣಿಸಬಹುದು. ಏಕೆಂದರೆ, ಗೂಗಲ್ ಮ್ಯಾಪ್ ಅಂತಹ ತಂತ್ರಜ್ಞಾನ, ನಕ್ಷೆಗಳಲ್ಲಿ ಮಾರ್ಗಗಳನ್ನು ಹುಡುಕುವ ಜನರ ಶೈಲಿಯನ್ನು ಸುಲಭಗೊಳಿಸಿದೆ.
ಇತ್ತೀಚಿನ ದಿನಗಳಲ್ಲಿ ನೀವು ಜನರ ಫೋನ್ ಸಂಖ್ಯೆಗಳನ್ನು ಸಹ ನೆನಪಿಟ್ಟುಕೊಳ್ಳುವುದಿಲ್ಲ. ಏಕೆಂದರೆ ನಿಮ್ಮ ಬದಲಿಗೆ ಫೋನ್ ಅವುಗಳನ್ನು ನೆನಪಿಟ್ಟುಕೊಳ್ಳುತ್ತವೆ. ಇವೆಲ್ಲವೂ ತಾಂತ್ರಿಕ ಪ್ರಗತಿಯಾಗಿದ್ದು, ಇವೆಲ್ಲ ನಿಮ್ಮ ಸ್ಮರಣೆಯನ್ನು ಮತ್ತು ಒಳ್ಳೆಯ ಕಾರ್ಯಗಳಲ್ಲಿ ಜಾಸ್ತಿ ಸಮಯವನ್ನು ಕಳೆಯುವಂತೆ ಮಾಡುತ್ತವೆ. ನೀವು ಇದನ್ನು ವಾಸ್ತವಿಕವಾಗಿ ನೋಡಿದರೆ, ನಿಮ್ಮ ಸ್ಮರಣೆಯನ್ನು ಒಳ್ಳೆಯ ಕಾರ್ಯಗಳಲ್ಲಿ ಹೂಡಿಕೆ ಮಾಡಲು ನಿಮಗೆ ಈಗ ಸಾಧ್ಯವಾಗುತ್ತಿದೆಯೇ? ಇಲ್ಲ. ಏಕೆಂದರೆ ಬಹಳ ಸಲ, ನಾವು ಕೆಲವು ಅನುಕೂಲಗಳನ್ನು ಖರೀದಿಸಲು ಶಕ್ತರಾಗಿದ್ದೇವೆ ಆದರೆ ನಮ್ಮ ಮೇಲಿನ ನಿಯಂತ್ರಣವನ್ನು ಅವುಗಳಿಗೆ ಕೊಟ್ಟು, ನಮ್ಮ ನಿಯಂತ್ರಣವನ್ನು ನಾವು ಕಳೆದುಕೊಂಡಿದ್ದೇವೆ. ಸಮಸ್ಯಾತ್ಮಕ ಪರಿಸ್ಥಿತಿಯನ್ನು ಸೃಷ್ಟಿಸಲು ಇದು ಸಾಕು.
ನಾನು ನಿಮಗೆ ಕೆಲವು ಅಂಕಿಅಂಶಗಳನ್ನು ನೀಡುತ್ತೇನೆ.
ವಯಸ್ಕನು ದಿನಕ್ಕೆ 150 ಬಾರಿ ತನ್ನ ಸ್ಮಾರ್ಟ್‌ಫೋನ್ ಅನ್ನು ನೋಡುತ್ತಾನೆ. 20ರ ಹರೆಯದ ವ್ಯಕ್ತಿಯೊಬ್ಬ ತಿಂಗಳಿಗೆ ತನ್ನ ಫೋನ್‌ನಲ್ಲಿ ಸರಾಸರಿ 4000 ಸಂದೇಶಗಳನ್ನು ಸ್ವೀಕರಿಸುತ್ತಾನೆ. ಫೋನ್‌ನಲ್ಲಿ ಕಾಣಿಸಿಕೊಳ್ಳುವ ನೋಟಿಫಿಕೇಶನ್‌ಗಳು ಡ್ರಗ್‌ಗಳಿದ್ದಂತೆ. ಅವುಗಳು ಪ್ರತಿ ನಿಮಿಷದ ಆಧಾರದ ಮೇಲೆ ನಿಮ್ಮ ಸ್ಮಾರ್ಟ್‌ಫೋನ್ ಪರದೆಯ ಮೇಲೆ ಕಾಣತೊಡಗುತ್ತವೆ. ಅದರ ಜತೆಗೆ, ನಿಮ್ಮನ್ನು ಆಕರ್ಷಿಸಿ, ನಿಮ್ಮ ಅಮೂಲ್ಯ ಸಮಯವನ್ನು ಸಹ ಕದಿಯುತ್ತವೆ.
ಇದು ದೀರ್ಘಾವಧಿಯ ಸಮಯದ ಲೆಕ್ಕಕ್ಕೆ ತಗೆದುಕೊಂಡರೆ, ನಿಯಮಿತ ವ್ಯಾಕುಲತೆಯನ್ನು ಸೃಷ್ಟಿಸುತ್ತದೆ. ನೀವು ಇದನ್ನು ಅಜಾಗರೂಕತೆಯಿಂದ ಬಳಸುತ್ತಿದ್ದರೆ, ಅದು ನಿಮ್ಮ ಮನಸ್ಸನ್ನು ವಿನಾಶಕಾರಿ ರೀತಿಯಲ್ಲಿ ಟ್ಯೂನ್ ಮಾಡಲೂಬಹುದು. ನೀವು ಬಹಳಷ್ಟು ಮಾಹಿತಿಯನ್ನು ಕಾಣುತ್ತಿರಬಹುದು, ಆದರೆ ಆ ಎಲ್ಲಾ ಮಾಹಿತಿಯನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಿದೆಯೇ? ನಾವು ಅನೇಕ ವಿಷಯಗಳನ್ನು ನೋಡಲು ಶಕ್ತರಾಗಿದ್ದೇವೆ. ಆದರೆ ನಾವು ಅವುಗಳಲ್ಲಿ ಯಾವುದನ್ನಾದರೂ ಗಮನವಿಟ್ಟು ನೋಡುತ್ತಿದ್ದೇವೆ? ನಾವು ಬಹಳಷ್ಟು ಅನುಭವಗಳನ್ನು ಪಡೆಯುತ್ತಿದ್ದೇವೆ, ಆದರೆ ನೀವು ಆ ಅನುಭವಗಳನ್ನು ಆಳವಾಗಿ ಅನುಭವಿಸುತ್ತಿರುವಿರೇ? ಇದೊಂದು ದೊಡ್ಡ ಪ್ರಶ್ನೆ. ಇವೆಲ್ಲಾ ಪ್ರಶ್ನೆಗಳನ್ನು ಬಹಳ ಕಡಿಮೆ ಜನ ಕೇಳುತ್ತಾರೆ. ಆದರೆ, ಇದರ ಪರಿಣಾಮದ ಪ್ರಮಾಣ ನೋಡಿದರೆ, ಇದೊಂದು ಅತ್ಯಂತ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.
ಎರಡನೆಯ ವಿಷಯವೆಂದರೆ ತಂತ್ರಜ್ಞಾನವು ಅನ್ಯೋನ್ಯತೆಯ ಭ್ರಮಾ ಲೋಕವನ್ನು ಸೃಷ್ಟಿಸುತ್ತದೆ. ಆದರೆ ವಾಸ್ತವದಲ್ಲಿ,ಅಲ್ಲಿ ಆಳವಾದ ಏಕಾಂತತೆಯ ಪರಿಸ್ಥಿತಿ ಇದೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬರೆದರೆ, ನೀವು ಪೋಸ್ಟ್ ಮಾಡಿದ ವಿಷಯಕ್ಕೆ ನಿಮ್ಮ ಅನುಯಾಯಿಗಳು ಪ್ರತಿಕ್ರಿಯಿಸುತ್ತಾರೆ, ಇಷ್ಟಪಡುತ್ತಾರೆ ಅಥವಾ ಸಂದೇಶ ಕಳುಹಿಸುತ್ತಾರೆ. ನಿಯಮಿತವಾಗಿ ನಿಮ್ಮ ಮಾತುಗಳನ್ನು ಕೇಳುವ ಅಥವಾ ನಿಮ್ಮ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಮತ್ತು ಅದನ್ನು ಸ್ವೀಕರಿಸುವ ಬಹಳಷ್ಟು ಜನರಿಂದ ನೀವು ಯಾವಾಗಲೂ ಸುತ್ತುವರೆದಿದ್ದೀರಿ ಎನ್ನುವ ಭಾಸ ಸೃಷ್ಟಿ ಆಗುತ್ತದೆ. ವಾಸ್ತವದಲ್ಲಿ, ನೀವು ಯಾವುದೋ ಒಂದು ಮೂಲೆಯಲ್ಲಿ ಮೊಬೈಲ್/ಲ್ಯಾಪ್ಟಾಪ್ ಮುಂದೆ ಕೂತು, ನಿಮ್ಮನ್ನೇ ನೀವು ಅಪರಿಚಿತರಂತೆ ನೋಡುತ್ತಾ ಕುಳಿತುಕೊಳ್ಳುವ ಪ್ರಸಂಗ ಎದುರಾಗುತ್ತದೆ.
ನೀವು ದೊಡ್ಡ ಪ್ರಮಾಣದಲ್ಲಿ ಗಮನಿಸಿದಾಗ, ತಂತ್ರಜ್ಞಾನವು ನಮ್ಮ ಪ್ರಜಾಪ್ರಭುತ್ವವನ್ನೂ ಸಹ ಬದಲಾಯಿಸುತ್ತಿದೆ. ದತ್ತಾಂಶಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸುತ್ತಾ, ಮತದಾರರ ಮೇಲೆ ಪ್ರಭಾವ ಬೀರುತ್ತಾ, ಎಷ್ಟೋ ಜನ ರಾಜಕಾರಣಿಗಳನ್ನು ಪದತ್ಯಾಗ ಮಾಡುವಂತೆ ಮಾಡಿದೆ."The Social Dilemma" ಮತ್ತು "Brexit" ಎಂಬ ಎರಡು ಚಲನಚಿತ್ರಗಳಲ್ಲಿ ಇದರ ಬಗ್ಗೆ ಸೊಗಸಾಗಿ ತೋರಿಸಿದ್ದಾರೆ.
ತಂತ್ರಜ್ಞಾನ ವರವಾಗಬಲ್ಲದು...!!!
ತಂತ್ರಜ್ಞಾನದ ಯುಗದಲ್ಲಿ, ಒಂದು ವರ್ಷವು 10 ವರ್ಷಗಳಿಗೆ ಸಮಾನವಾಗಿದೆ. ಅಷ್ಟೇ ವೇಗವಾಗಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಹಾಗಾದರೆ, ಇದು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದರ ಕುರಿತು ನಾವು ಸ್ವಲ್ಪ ಯೋಚಿಸಬೇಕಾಗಿದೆ? ಇದಕ್ಕೆ ಪರಿಹಾರವು ಸ್ವಲ್ಪ ಸಂಕೀರ್ಣವಾಗಿದೆ. ಆದರೆ ನೀವು ಅದನ್ನು ದೀರ್ಘಾವಧಿಯಲ್ಲಿ ಕಾರ್ಯಗತಗೊಳಿಸಬಹುದು. ನೀವು ಈ ಲೇಖನವನ್ನು ಎಚ್ಚರಿಕೆಯಿಂದ ಓದಿದ್ದರೆ, ನಾನು ಈಗಾಗಲೇ ಒಂದು ವಿಷಯವನ್ನು ಪ್ರಸ್ತಾಪಿಸಿದ್ದನ್ನು ಓದಿರುವಿರಿ. "ನಾವು ಕೆಲವು ಅನುಕೂಲಗಳನ್ನು ಖರೀದಿಸಲು ಶಕ್ತರಾಗಿದ್ದೇವೆ ಆದರೆ ನಮ್ಮ ಮೇಲಿನ ನಿಯಂತ್ರಣವನ್ನು ಅವುಗಳಿಗೆ ಕೊಟ್ಟು, ನಮ್ಮ ನಿಯಂತ್ರಣವನ್ನು ನಾವು ಕಳೆದುಕೊಂಡಿದ್ದೇವೆ."
ನಾವು ಆ ಹೇಳಿಕೆಯನ್ನ ಸ್ವಲ್ಪ ರಿವರ್ಸ್ ಮಾಡಬೇಕಾಗಿದೆ. ಸ್ವಲ್ಪ ನಿಯಂತ್ರಣವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಅದನ್ನು ನಿಭಾಯಿಸುವಾಗ ನೀವು ಕೆಲವು ಅನಾನುಕೂಲತೆಯನ್ನು ಎದುರಿಸಬೇಕಾಗಬಹುದು. ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಬಗ್ಗೆ ಜಾಗರೂಕರಾಗಿರಿ.
ನೋಡಿ, ನನಗೆ ತಂತ್ರಜ್ಞಾನ ಎಂದರೆ ಇಷ್ಟ. ಅದರಂತೆ ಸಾಮಾಜಿಕ ಮಾಧ್ಯಮಗಳು ಇಷ್ಟ. ನನ್ನ ಪ್ರತಿಯೊಂದು ಲೇಖನವೂ ಸಾಮಾಜಿಕ ಮಾಧ್ಯಮಗಳ ಮುಖಾಂತರವೇ ಪ್ರಸಾರವಾಗುತ್ತದೆ. ನಾನು ನಿಮ್ಮನ್ನು ತಲುಪಲು ಮತ್ತು ನಿಮ್ಮಲ್ಲಿ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು, ಇದುವೇ ಏಕೈಕ ಮಾರ್ಗವಾಗಿದೆ. ಸೋಶಿಯಲ್ ಮೀಡಿಯಾ ಇಲ್ಲವಾಗಿದ್ದರೆ, ಇಂದು ನಾನು ಹೊಂದಿರುವ ಓದುಗರ ಸಂಖ್ಯೆಯಲ್ಲಿ, ಕೇವಲ 10-15% ಓದುಗರನ್ನು ತಲುಪುತ್ತಿದ್ದೆ.
ಆದರೆ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದಿರಬೇಕು. ಎಚ್ಚರವಿರಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಜಾಗೃತರಾಗಿರಬೇಕು. ಯಾವ ವಿಷಯಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತವೆ? ನಿಮ್ಮ ಅಭಿಪ್ರಾಯಗಳೇನು? ನೀವು ನಿರ್ದಿಷ್ಟ ನಿರ್ಧಾರವನ್ನು ಏಕೆ ತೆಗೆದುಕೊಂಡಿದ್ದೀರಿ? ನಿಮ್ಮ ನಿರ್ಧಾರ ಅಥವಾ ಅಭಿಪ್ರಾಯ ಏನೇ ಇರಲಿ, ಒಂದು ಕ್ಷಣ ನಿಂತು ಯೋಚಿಸಿ, ನಾನು ಯಾಕೆ ಹಾಗೆ ಮಾಡಿದೆ? ಇದರ ಬಗ್ಗೆ ನನಗೆ ಏಕೆ ಹೀಗೆ ಅನಿಸಿತು? ಎಂಬ ಪ್ರಶ್ನೆಗಳನ್ನ ನಿಮಗೆ ನೀವೇ ಕೇಳಿಕೊಳ್ಳಿ.
ಇಷ್ಟು ಮಾಡಿದರೆ ಸಾಕು. ಅಲ್ಲಿಂದ ಒಂದು ದೊಡ್ಡ ಪ್ರಕ್ರಿಯೆಯೇ ಶುರು ಆಗುತ್ತದೆ. ಪ್ರತಿ ಸಲ ಗೊಂದಲಕ್ಕೆ ಒಳಗಾದಾಗ ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿ. ವಿಮರ್ಶಿಸಿ. ಇಷ್ಟು ಮಾಡುವುದರಿಂದ ನಿಮ್ಮ ಮುಂದಿನ ಜೀವನ ಸುಖಮಯ ಆಗುವುದರಲ್ಲಿ ಎರಡನೇ ಮಾತಿಲ್ಲ.
ನಿಮಗೆ ನನ್ನ ಲೇಖನ ಮಾಹಿತಿ ಪೂರಕ ಎನಿಸಿತೋ, ಅಥವಾ ಮಹತ್ವ ಪೂರ್ಣ ಎನಿಸಿತೋ ಎಂದು ತಿಳಿಸಿ. ಏನಾದರು ತಪ್ಪುಗಳಿದ್ದರೆ ಅದನ್ನು ಸಹ ಕೆಳಗಿನ ಕಾಮೆಂಟ್ ಅಲ್ಲಿ ತಿಳಿಸಿ.
0ಕಾಮೆಂಟ್‌ಗಳು