ಜಾಹಿರಾತು

ವಿಜಯ ಮಲ್ಯ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ಎಂಬ ಆಗಸದ ಅರಮನೆ: ಏಕೆ ಅವನತಿ ಕಂಡಿತು?

ವಿಜಯ ಮಲ್ಯ ಮತ್ತು ಕಿಂಗ್‌ಫಿಶರ್ ಎನ್ನುವುದು ಒಂದು ನಾಣ್ಯದ ಎರಡು ಮುಖ ಇದ್ದ ಹಾಗೆ. ಕಿಂಗ್‌ಫಿಶರ್ ನ ಮುಖ ವಿಜಯ ಮಲ್ಯ ಆಗಿದ್ದರೆ, ಕಿಂಗ್‌ಫಿಶರ್ ಸಹ ಅಷ್ಟೇ ಕೀರ್ತಿಯನ್ನ ವಿಜಯ ಮಲ್ಯ ಅವರಿಗೆ ತಂದು ಕೊಟ್ಟಿತು. ಕೇವಲ ದೇಶಿಯ ಮಾರುಕಟ್ಟೆಗೆ ಸೀಮಿತವಾಗದೆ, ಅಂತಾರಾಷ್ಟ್ರೀಯ ಹೆಸರಾಗಿ ಬೆಳೆದು ನಿಂತ ಈ ಎರಡು ಹೆಸರುಗಳು, ಈಗ ಸದ್ದಿಲ್ಲದೇ ಮಕಾಡೆ ಮಲಗಿವೆ. ಆ ಎರಡು ಹೆಸರು ಏಕೆ ಅವನತಿ ಕಂಡವು? ಕಾರಣ ಅನೇಕ ಇರಬಹುದು? ಪರ ಹಾಗೂ ವಿರೋಧವೂ ಇರಬಹುದು? ಆದರೆ ಇವೆರಡು ಸೇರಿ ಕಟ್ಟಿದ ಆ ಸಾಮ್ರಾಜ್ಯ, ಅದೂ ಅಂಥ ಕಷ್ಟದ ದಿನಗಳಲ್ಲಿ, ನಿಜವಾಗಿಯೂ ಪ್ರಶಂಶನೀಯ. ಅದರ ಬಗ್ಗೆ ಇನ್ನಷ್ಟು ಮಾಹಿತಿ ನೋಡೋಣ.

ಯುವ ವಿಜಯ ಮಲ್ಯನ ಮೇಲಿನ ಜವಾಬ್ದಾರಿ :

1983ರಲ್ಲಿ ವಿಜಯ ಮಲ್ಯ ಅವರ ಅಪ್ಪ, ವಿಠ್ಠಲ ಮಲ್ಯ ತೀರಿಹೋದ ಮೇಲೆ, ಯುಬಿ (United Breweries)ನ ಹೊಣೆ ವಿಜಯ ಮಲ್ಯ ಅವರ ಮೇಲೆ ಬಿತ್ತು. ಕೇವಲ ಇಪ್ಪತೆಂಟು ವರ್ಷದ ವಿಜಯ, ಮುಂದೆ ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗಿದ್ದೆ ಒಂದು ವಿಸ್ಮಯಕಾರಿ ಸಂಗತಿ. ಆತ ಅಖಾಡಕ್ಕೆ ಇಳಿದ ಮೇಲೆ ತಗೆದುಕೊಂಡ ಪ್ರತಿ ಹೆಜ್ಜೆಯು, ಕಂಪನಿಯ ಹೆಸರಿಗೆ ಹೊಸ ಆಯಾಮವನ್ನೇ ನೀಡಿತು. ತನ್ನ ಮಾಲೀಕತ್ವದಲ್ಲಿ ಇದ್ದ ಕಾರಿನ ಬ್ಯಾಟರಿ ಉತ್ಪಾದನಾ ಘಟಕವನ್ನು ನಿಲ್ಲಿಸಲಾಯಿತು. ಆಗಿನ ದೊಡ್ಡ ಬಿಸಿನೆಸ್ ವಾರ್ ಎಂದೇ ಕರೆಯಲ್ಪಟ್ಟ, ಶಾ ವ್ಯಾಲೇಸ್ ಎಂಬ ಅಗ್ರ ಮದ್ಯ ತಯಾರಕ ಕಂಪನಿಯ ಖರೀದಿ, ಇದಕ್ಕೋಸ್ಕರ ಮನು ಚಾಬ್ರಿಯಾ ಜತೆ ವಾಗ್ವಾದಕ್ಕೆ ಇಳಿದಿದ್ದು ಸಹ ಗಮನಿಸಬೇಕಾದ ಸಂಗತಿ. ಇವತ್ತಿನ ದಿನದಲ್ಲಿ ದೇಶಿಯ ಬಿಯರ್ ಮಾರ್ಕೆಟ್ ಅಲ್ಲಿ ಕಿಂಗ್‌ಫಿಶರ್ ( United Breweries ), ಸುಮಾರು ಅರ್ಧದಷ್ಟು ಸಿಂಹಪಾಲು ಹೊಂದದೆ. ವಿಜಯ ಮಲ್ಯ ಎಂಬ ಬ್ರಾಂಡ್ ಜತೆಗೆ, ಅವರ ಘೋಷ ವಾಕ್ಯವೂ ಸಹ ಬಹು ಪ್ರಚಲಿತಕ್ಕೆ ಬಂತು. King of Good Times.

ಕಿಂಗ್‌ಫಿಶರ್ ಏರ್‌ಲೈನ್ಸ್ ಜನನ :

ಈಗಿನ ಜಮಾನವೇ ಇರಲಿ, ಅಥವಾ ಹಿಂದಿನ ಜಮಾನವೇ ಇರಲಿ, ಕೋಟ್ಯಧಿಪತಿಯಾಗಲು ಇದ್ದಂತಹ ಉತ್ತಮ ಆಯ್ಕೆ ಎಂದರೆ ವಿಮಾನಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡವುದು. ಬ್ರ್ಯಾಂಡ್ ಆಗಿದ್ದ ವಿಜಯ ಮಲ್ಯ ಇದರಲ್ಲೂ ಹೂಡಿಕೆ ಹಾಕಿ, 2003 ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ಅನ್ನು ಸ್ಥಾಪಿಸಿದರು. ಆದರೆ 2006 ರಲ್ಲಿ ಲಿಸ್ಟಿಂಗ್ ( listing ) ಆಗುವ ವರೆಗೆ, ಯಾವುದೇ ಒಂದು ವರ್ಷದಲ್ಲಿ ಲಾಭವನ್ನು ಈ ಕಂಪನಿ ಕಾಣಲೇ ಇಲ್ಲ. ದಿವಾಳಿ ಆಗುವಾಗ ಈ ಕಂಪನಿಯು ಸುಮಾರು 8,200 ಕೋಟಿ ರೂಪಾಯಿ ಅಷ್ಟು ನಷ್ಟದಲ್ಲಿ ಮುಳುಗಿತ್ತು. ಇಂಧನ, ವೇತನ ಮತ್ತು ವಿಮಾನ ನಿಲ್ದಾಣದ ಶುಲ್ಕ ಸಹ ಕಟ್ಟಲಿಕ್ಕೆ ಆಗದೆ ಹೋಯಿತು. ಇದು ವಿಜಯ ಮಲ್ಯರನ್ನು ಎಂತಹ ಸ್ಥಿತಿಗೆ ತಲುಪಿಸಿತು ಎಂದರೆ, ಕಡೆಗೊಂದು ದಿನ ಮಲ್ಯ ಬೇಲ್‌ಔಟ್‌ಗಾಗಿ ಸರ್ಕಾರವನ್ನು ಸಹ ಸಂಪರ್ಕಿಸಿದರು.

ಈ ಎಲ್ಲ ಬೆಳವಣಿಗೆಗೆ ಕಾರಣ ಸರ್ಕಾರ ಎಂದು ಕಂಪನಿ ದೂಷಿಸಲು ಶುರು ಮಾಡಿತು. ಇಂಧನ ಬೆಲೆ ಏರಿಕೆ, ಲಾಭವಿಲ್ಲದ ಮಾರ್ಗಗಳಲ್ಲಿ ಸೇವೆ ಸಲ್ಲಿಸುವಂತೆ ಒತ್ತಡ ಹೇರಿಕೆ, ಹೀಗೆ ಅನೇಕಾನೇಕ ವಿಷಯಗಳನ್ನು ಎತ್ತಿ ಹಿಡಿದು ಸರ್ಕಾರವನ್ನು ದೂಷಿಸಿತು. ಯುಬಿಯ ಮೇಲಾಡಳಿತ ಕೊಟ್ಟಿದ್ದ ಒಂದು ಬಿರುಸಿನ ಹೇಳಿಕೆ ಹೇಗಿತ್ತೆಂದರೆ, " ಈಗಿನ ರಾಜಕಾರಣಿಗಳಿಗೆ ದೇಶದ ಸಾರಿಗೆಯನ್ನು ಉತ್ಕೃಷ್ಟಗೊಳಿಸಬೇಕೆಂಬ ಆಸೆ ಇದೆಯೇ ಇಲ್ಲವೇ? ಅಥವಾ ದೇಶದ ಸಾರಿಗೆಯನ್ನು ಪುನಃ ಎತ್ತಿನ ಬಂಡೆ ಕಾಲಕ್ಕೆ ಕರೆದುಕೊಂಡು ಹೋಗುವ ಯೋಜನೆ ಏನಾದರೂ ಇದೆಯೇ ?" ಎಂದು.

ಮಾರುಕಟ್ಟೆ ವಿಶ್ಲೇಷಕರು ಮತ್ತು ವೆರಿಟಾಸ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ವರದಿ:

ಆದರೆ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಮಲ್ಯ ಅವರ ವ್ಯಾಪಾರ ಯೋಜನೆಗಳು ಮತ್ತು ಕಾರ್ಯನಿರ್ವಹಣೆಯ ಶೈಲಿಯಲ್ಲಿನ ಕೆಲ ದೋಷಗಳು ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಅನ್ನು ಸಂಕಟಕ್ಕೆ ನೂಕುವಂತೆ ಮಾಡಿದವು ಎಂದು ನಂಬುತ್ತಾರೆ. ಏರ್‌ಲೈನ್ಸ್‌ನ ಮೇಲೆ ತಯಾರಿಸಿದ ವಿವಾದಾತ್ಮಕ ವರದಿಯಲ್ಲಿ, ವೆರಿಟಾಸ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ವಿಶ್ಲೇಷಕರು, ಮಲ್ಯ ಅವರು ವಿಮಾನಯಾನ ವ್ಯವಹಾರಕ್ಕೆ ಎಂದಿಗೂ ಇಳಿಯಬಾರದಾಗಿತ್ತು ಎಂದು ಗಂಭೀರ ಹೇಳಿಕೆಯನ್ನು ಪ್ರಕಟಿಸಿದರು. " ಭಾರತದ ಬಿಯರ್ ಮತ್ತು ಮದ್ಯದ ರಾಜರುಗಳಾಗಿರುವ ಅಹಂಕಾರದಿಂದ, ಏರ್‌ಲೈನ್ಸ್‌ ಉದ್ದಿಮೆಗಿಳಿದು, ಮದ್ಯ ಉದ್ಯಮವನ್ನೂ ಸಹ ಬಲಿಪಶುವಾನ್ನಾಗಿ ಮಾಡಿದರು. ಈ ಒಂದು ತಪ್ಪು ನಿರ್ಧಾರ, ಯುಬಿ ಷೇರುದಾರರಿಗೆ ಕಬ್ಬಿಣದ ಕಡಲೆ ಆಗಿ ಪರಿಣಮಿಸಿತು." ಎಂದು ಕಠೋರವಾಗಿ ಸಂಶೋಧನಾ ಕಂಪನಿಯ ಇಬ್ಬರು ವಿಶ್ಲೇಷಕರು ಟೀಕಿಸಿದರು. ಏರ್‌ಲೈನ್‌ನಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡು, ಯುಬಿ ಗ್ರೂಪ್ನ ಮ್ಯಾನೇಜ್‌ಮೆಂಟ್ ಈ ವರದಿಯನ್ನು ತೀವ್ರವಾಗಿ ವಿರೋಧಿಸಿತು.

ನಿಜವಾದ ಸಮಸ್ಯೆ, ಮಿತಿ ಮೀರಿದ ಸ್ವಾಧೀನ ಪ್ರಕ್ರಿಯೆ ಆಗಿತ್ತು. ಈ ಒಂದು ಗುಣದಿಂದ ಮಲ್ಯ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟರು. ಮುಖ್ಯ ಕಾರಣ, ಇದರಲ್ಲಿ ಇದ್ದ ಗ್ಲಾಮರ್. ತನ್ನ ಬಳಿ ಈಗಾಗಲೇ ಇದ್ದ ವಿಹಾರ ನೌಕೆಗಳಲ್ಲಿ, ಖಾಸಗಿ ದ್ವೀಪಗಳಲ್ಲಿ, ಗ್ಲಾಮರ್ ಇರದ ಕಾರಣ, ಈ ಉದ್ಯಮಕ್ಕೆ ಇಳಿಯಲು ಅವರಿಗೆ ಮತ್ತ್ಯಾವ ಪ್ರೇರಣೆ ಬೇಕಿರಲಿಲ್ಲ. ಈ ಹುಚ್ಚು ನಡವಳಿಕೆ, ಯುಬಿ ಕಂಪನಿಯ ಮುಂದಿನ ಹೂಡಿಕೆಗಳ ಮೊದಲ ಮೆಟ್ಟಿಲಾಯಿತು.

ವಿಜಯ ಮಲ್ಯ ಖರೀದಿಯ ಆಟಗಳು:

ಸ್ಕಾಟಿಷ್ ಬಲ್ಕ್ ಮದ್ಯ ತಯಾರಕ ವೈಟ್ & ಮ್ಯಾಕೆಯನ್ನು ಸ್ವಾಧೀನಪಡಿಸಿಕೊಂಡ ಕಥೆಯಂತೂ ರೋಚಕವಾಗಿದೆ. ಇದನ್ನು ಬಹಿರಂಗವಾಗಿ ಜಗತ್ತಿಗೆ ತೋರಪಡಿಸಲು, ಮಲ್ಯ ಅವರು ಲಂಡನ್‌ನಲ್ಲಿ ದೊಡ್ಡ ಪತ್ರಿಕಾಗೋಷ್ಠಿಯನ್ನೇ ನಡೆಸಿದರು. ಏಷ್ಯನ್ ಏಜ್ ಅಂತಹ ಪತ್ರಿಕೆಗಳನ್ನು, ಫ್ಯಾಶನ್ ಮತ್ತು ಚಲನಚಿತ್ರ ನಿಯತಕಾಲಿಕೆ ಸಂಸ್ಥೆಗಳನ್ನು ಸಹ ಖರೀದಿ ಮಾಡಿದರು. ಇದೆಲ್ಲದರ ಮಧ್ಯೆ, ಒಂದು ಟಿವಿ ಸಮೂಹ ಸಂಸ್ಥೆಯನ್ನು ಸಹ ಕೊಂಡು, ಕೊನೆಗೆ ಮಾರಿದರು.ವಿಶಾಲವಾಗಿ ವಿಸ್ತಾರವಾಗಿ ಹರಡುತ್ತಿದ್ದ ಈ ಸಾಮ್ರಾಜ್ಯಕ್ಕೆ, ಒಂದು ಫುಟ್ಬಾಲ್ ತಂಡ ಸಹ ಬಂದು ಸೇರಿತು. ತಡ ನಂತರ ಒಂದು ಕ್ರಿಕೆಟ್ ತಂಡ ಸಹ ಹುಟ್ಟಿಕೊಂಡಿತು. ಅದುವೇ "ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers)". ಐಪಿಎಲ್ ಕೂಟದ ಎಲ್ಲ ಕ್ರೀಡಾ ತಂಡಗಳ ಪ್ರಾಯೋಜಕತ್ವವನ್ನು ಸಹ ಈ ಕಂಪನಿ ಹೊಂದಿತ್ತು.

ರಾಜಕೀಯ ಎಂದರೆ ಅಸಹ್ಯ ಎನ್ನುತ್ತಿದ್ದ ಈ ಆಸಾಮಿ, ಒಂದು ಪಕ್ಷವನ್ನು ಅನುಮೋದಿಸುತ್ತ, ಬೆಂಬಲಿಸುತ್ತಾ, ರಾಜ್ಯ ಸಭಾ ಸದಸ್ಯ ಸಹ ಆದ. ಈ ಖರೀದಿ ಪ್ರಕ್ರಿಯೆ ಅಲ್ಲಿಗೆ ನಿಲ್ಲಲಿಲ್ಲ. ಫಾರ್ಮುಲಾ ಒನ್ ರೇಸಿಂಗ್ ಈವೆಂಟ್‌ಗಳಲ್ಲಿ ನಿಯಮಿತವಾಗಿ ಸ್ಪರ್ಧಿಸುವ ರೇಸಿಂಗ್ ತಂಡವೊಂದನ್ನು (ಫೋರ್ಸ್ ಇಂಡಿಯಾ) ಸಹ ಈತ ಹೊಂದಿದ್ದ. ತನ್ನ ಬ್ರಾಂಡ್ ಆದ ಕಿಂಗ್‌ಫಿಶರ್ ಹೆಸರಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ. ತನ್ನ ಪ್ರಸಿದ್ಧ ಗೋವಾದ ಅರಮನೆಯ ಬಂಗಲೆಯಲ್ಲಿ ಹೊಸ ವರ್ಷದ ಪಾರ್ಟಿಗಳನ್ನು ನಡೆಸಿದ. ಆದರೆ ಇವೆಲ್ಲ ಖರೀದಿ ಮತ್ತು ಸ್ವಾಧೀನಗಳಲ್ಲಿ, ಅತ್ಯಂತ ಹೆಸರುವಾಸಿ ಕಿಂಗ್‌ಫಿಶರ್ ಏರ್‌ಲೈನ್ಸ್ ಮಾತ್ರ. ಉದ್ಯಮ ಲೋಕದ ಗ್ಲಾಮರ್ ಡ್ಯಾಡಿ ಎಂದೇ ಪ್ರಸಿದ್ಧವಾದ ಮಲ್ಯ, ಪ್ರಯಾಣಿಕರಿಗೆ ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಸೇವೆಯನ್ನು ನೀಡುವ ಭರವಸೆಯನ್ನು ನೀಡಿದ. ಈಗಾಗಲೇ ಆ ಕ್ಷೇತ್ರದಲ್ಲಿ ಜೆಟ್ ಏರ್ವೇಸ್ ತನ್ನ ಕಾರ್ಯ ಕ್ಷಮತೆಗೆ ಹೆಸರು ವಾಸಿ ಆಗಿದ್ದರೆ, ಏರ್ ಡೆಕ್ಕನ್ ಅತೀ ಕಡಿಮೆ ಬೆಲೆಯ ವಾಯುಯಾನ ಸಂಸ್ಥೆ ಆಗಿ ಕಾರ್ಯ ಪ್ರಾರಂಭಿಸಿತ್ತು.

ಕಿಂಗ್‌ಫಿಶರ್ ಏರ್‌ಲೈನ್ಸ್ ವೈಶಿಷ್ಟ್ಯ:

ಹೇಳಿದಂತೆ ಮಾಡಿದ ಮಲ್ಯ, ಗ್ಲಾಮರ್ ಅನ್ನು ದೇಶಕ್ಕೆ ತಂದೆ ಬಿಟ್ಟರು. ಅಂತರಾಷ್ಟ್ರೀಯ ಏರ್‌ಲೈನ್ಸ್ ಕಂಪೆನಿಗಳಲ್ಲಿ ದೊರಕುವ ಸೌಲಭ್ಯಗಳಾದ ಟಿವಿ ಸೇವೆಯಂತಹ ಸೇವೆಗಳನ್ನು ಮುಂದೆ ಇಟ್ಟರು. ತಮ್ಮ ಪ್ರಯಾಣದಲ್ಲಿ ಎಲ್ಲಾದರೂ ಕಿರಿಕಿರಿ ಉಂಟಾದಲ್ಲಿ, ನೇರವಾಗಿ ತನಗೆ ತಿಳಿಸುವಾತೆ ಸಹ ಆ ಟಿವಿಗಳಲ್ಲಿ ಜಾಹಿರಾತು ಹಾಕಿದ. ಅವನೇ ಖುದ್ದಾಗಿ ಗಗನ ಸಖಿಯರನ್ನು ಗುರುತಿಸಿ, ಆಯ್ಕೆ ಮಾಡಿದ. ಪ್ರಯಾಣಿಕರಿಗೆ ಕಾಣಿಕೆಗಳನ್ನು ಸಹ ನೀಡಲಾಯಿತು. ಇವರ ಈ ಗ್ಲಾಮರ್ ಸೇವೆ ಮೆಚ್ಚಿ, ಕಾರ್ಪೊರೇಟ್ ವಲಯವು ಎಲ್ಲಾ ಉನ್ನತ ಅಧಿಕಾರಿಗಳು ಕಿಂಗ್‌ಫಿಶರ್ ಏರ್‌ಲೈನ್ಸ್ ನಲ್ಲೆ ಹರಡುವಂತೆ ಆದ್ಯತೆ ಕೊಟ್ಟವು.

Vijaya Mallya, Kingfisher Airlines and United Breweries
ವಿಜಯ ಮಲ್ಯ, ಕಿಂಗ್‌ಫಿಶರ್ ಏರ್‌ಲೈನ್ಸ್‌ & ಯುಬಿ

ಕಿಂಗ್‌ಫಿಶರ್ ಏರ್‌ಲೈನ್ಸ್‌ ಮಾಡಿದ ಮೂರು ಪ್ರಮುಖ ತಪ್ಪುಗಳು :

ಮೊದಲ ತಪ್ಪು:

ಇಷ್ಟೆಲ್ಲಾ ಒಳ್ಳೆಯ ದಿನಗಳು ನಡೆಯುತ್ತಿರಬೇಕಾದರೆ, ಮಲ್ಯ ಮೊದಲ ತಪ್ಪು ಮಾಡಿದರು. ಡೆಕ್ಕನ್ ಏವಿಯೇಷನ್ ​​ನ ಕ್ಯಾಪ್ಟನ್ ಜಿ.ಆರ್. ತಮ್ಮ ಏರ್‌ಲೈನ್ಸ್ ಏರ್ ಡೆಕ್ಕನ್‌ ಮಾರಾಟಕ್ಕೆ ಇಟ್ಟರು. ಖರೀದಿದಾರರಿಗೆ ಹುಡುಕಾಡಿ, ಅನಿಲ್ ಅಂಬಾನಿಯೊಂದಿಗೆ ಒಪ್ಪಂದ ಮಾಡಿಕೊಂಡಿರು. ಕೊನೆಯ ಕ್ಧಾನದಲ್ಲಿ ಆದ ವಿಳಂಬಗಳಿಂದಾಗಿ ಈ ಒಪ್ಪಂದ ರದ್ದಾಯಿತು.

ತನ್ನ ಗ್ಲಾಮರ್ ಮಾಡೆಲ್ ಅನ್ನು ಪಠಿಸುತ್ತಿದ್ದ ಮಲ್ಯ, ಅದು ಇರದ ಯಾವುದೇ ಉದ್ದಿಮೆ ಅಥವಾ ಸಂಸ್ಥೆಗಳ ಕಡೆಗೆ ತಲೆ ಹಾಕುತ್ತಿರಲಿಲ್ಲ. ಆದರೆ ಏರ್ ಡೆಕ್ಕನ್‌ ವಿಷಯದಲ್ಲಿ ತದ್ವಿರುದ್ಧವಾಗಿ ನಡೆದುಕೊಂಡರು. ಒಪ್ಪಂದ ರದ್ದಾಗಿದ್ದನ್ನು ಕೇಳಿ, ತಕ್ಷಣವೇ ಬಿಡ್‌ಗೆ ಮುಂದಾದರು, ಇದನ್ನು ಪಕ್ಕಿ ಮಾಡಲು, ಹಿಂದಿನ ಅಂಬಾನಿಯವರಿಗಿಂತ ಹೆಚ್ಚಿನ ಹಣವನ್ನು ನೀಡಿದರು. ಆರಂಭದಲ್ಲಿ ಇದು ಉತ್ತಮ ವ್ಯವಹಾರ ಎಂದು ಕಂಡಿತು. ಮಲ್ಯ ಅವರು ಏರ್ ಡೆಕ್ಕನ್‌ನ ಬೃಹತ್ ಮಾರುಕಟ್ಟೆ ಪಾಲಿನ ಜತೆಗೆ ಹಲವಾರು ವಿಮಾನಗಳನ್ನು ಸಹ ಪಡೆದರು. ತತಕ್ಷಣವೇ ಅವರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಸಹ ಮಾಡಿದರು. ಒಪ್ಪಂದದ ಜತೆ ಬಂದ ಇನ್ನೊಂದು ಲಾಭ ಎಂದರೆ, ಏರ್ ಡೆಕ್ಕನ್ ಸಂಸ್ಥೆ ಐದು ವರ್ಷಗಳಿಂದ ಈ ವ್ಯವಹಾರದಲ್ಲಿ ಇದ್ದದ್ದು ಮತ್ತು ಹಾರಾಟ ನಡೆಸಲು ಅವರ ಬಳಿ ಇದ್ದ ಪರವಾನಿಗೆ ಕಿಂಗ್‌ಫಿಶರ್ ಏರ್‌ಲೈನ್ಸ್‌ ಗೆ ವರವಾಯ್ತು. ಇದರ ಜತೆಗೆ ಬಂಡ ಮತ್ತೊಂದು ಸಂಗತಿ ಎಂದರೆ, ಈಗಾಗ್ಲೇ ಏರ್ ಡೆಕ್ಕನ್ ಸಂಸ್ಥೆ ಜತೆ ಬಂದ ನಷ್ಟ.

ಇದೊಂದು ಹಿಮ್ಮುಖ ವಿಲೀನ ಪ್ರಕ್ರಿಯೆ ಆದ ಕಾರಣ, ಕಿಂಗ್‌ಫಿಶರ್ ಏರ್‌ಲೈನ್ಸ್‌ ಈಗ ಏರ್ ಡೆಕ್ಕನ್ ಆಗಿ ಪರಿವರ್ತಿತಗೊಂಡಿತು. ಸೆಬಿ(SEBI) ಯಿಂದ ಅಗತ್ಯ ಅನುಮೋದನೆಗಳೊಂದಿಗೆ ಸಂಪೂರ್ಣ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಲ್ಯ ಶೀಘ್ರವಾಗಿ ಏರ್‌ಲೈನ್‌ನ ಹೆಸರನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಎಂದು 2008 ರಲ್ಲಿ ಬದಲಾಯಿಸಿದರು. ಏರ್ ಡೆಕ್ಕನ್ ಫ್ಲೀಟ್ ಅನ್ನು ಕಿಂಗ್‌ಫಿಶರ್ ರೆಡ್ ಎಂದು ಬದಲಾಯಿಸಲಾಯ್ತು. ಈಗ ಕಿಂಗ್‌ಫಿಶರನಲ್ಲಿ ಬಿಸಿನೆಸ್ ಕ್ಲಾಸ್ ಜತೆಗೆ ಎಕಾನಮಿ ಕ್ಲಾಸ್ ಕೂಡ ಶುರುವಾಯ್ತು. ಅಂತಾರಾಷ್ಟ್ರೀಯ ಹಾಗೂ ಮೆಟ್ರೋ ನಗರ ಅಷ್ಟೇ ಅಲ್ಲದೆ, ಟೈರ್-II ನಗರಗಳಿಗೂ ಸಹ ತನ್ನ ಸೇವೆ ಪ್ರಾರಂಭಿಸಿತು. ಈಗ ಕಿಂಗ್‌ಫಿಶರ್ ಏರ್‌ಲೈನ್ಸ್‌ ಸುವ್ಯವಸ್ಥಿತ ಕಂಪನಿ ಆಗಿ ಮಾರ್ಪಾಡು ಆಗಿತ್ತು. ಹೆಚ್ಚಿಗೆ ಇಲ್ಲ ಮತ್ತು ಕಡಿಮೆ ಸಹ ಅಲ್ಲ.

ಆದರೆ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಮಲ್ಯ ಮನಸಿಗೆ ಬಂದ ಹಾಗೆ ಎಲ್ಲಾ ರೀತಿಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಒಂದಕ್ಕೊಂದು ಲಿಂಕ್ ಇಲ್ಲದ ಉದ್ಯಮಗಳು, ನಂತರ ವೃಣವಾಗಿ ಕಾಡಲು ಆರಂಭಿಸದವು. ಬರಿ ವಿಮಾನದ ಕಡೆ ಗಮನ ಕೊಟ್ಟಿದ್ದರೆ, ಮಲ್ಯ ವಿಜಯಶಾಲಿ ಆಗಬಹುದಿತ್ತು. ಆದರೆ ಮಲ್ಯ ಅದಕ್ಕೆ ವಿರುದ್ಧವಾದುದನ್ನೇ ಮಾಡಿದರು.

ಎರಡನೇ ತಪ್ಪು :

ಸಾಮಾನ್ಯವಾಗಿ, ವೈವಿಧ್ಯಮಯ ಉದ್ಯಮ ಹಾಗು ವ್ಯವಹಾರಗಳಲ್ಲಿ, ನುರಿತ ಸಿಇಒಗಳನ್ನು ನೇಮಿಸಿ, ಅವರ ಮೂಲಕ ಉದ್ಯಮ ನಡೆಸುವುದು ಒಳ್ಳೆಯ ತಂತ್ರ. ಈಗಾಗಲೇ ಎದ್ದು ನಿಂತಿದ್ದ ಮದ್ಯದ ಉದ್ಯಮದಲ್ಲಿ ಸಾಕಷ್ಟು ಪರಿಣಿತರು ಇದ್ದ ಕಾರಣ, ಅದಕ್ಕೆ ಕಡಿಮೆ ಒತ್ತು ನೀಡಿ, ತನ್ನ ಅವಶ್ಯಕೆತೆ ಎಲ್ಲಿ ನಿಜವಾಗಿ ಬೇಕಿದೆ ಎಂಬುದನ್ನು ಅರಿಯಲು ಮಲ್ಯ ನೋಡಲಿಲ್ಲ. ಅದರಲ್ಲೂ ವಿಮಾನಯಾನ ಅಂತಹ ವ್ಯವಹಾರದಲ್ಲಿ ಇನ್ನು ಜಾಸ್ತಿಯೇ ಹಿಡಿತ ಬೇಕು. ಇಲ್ಲೇ ಮಲ್ಯ ಅವರು ಎರಡನೇ ತಪ್ಪನ್ನು ಮಾಡಿದರು.

ಕಿಂಗ್‌ಫಿಶರ್ ಏರ್‌ಲೈನ್ಸ್‌ ಬಳಿ ಎಲ್ಲವೂ ಇತ್ತು. ಅವಿಭಜಿತ ಗ್ರಾಹಕರು, ಬ್ರ್ಯಾಂಡ್, ವಿಶಾಲವಾದ ಕಾರ್ಯ ಕ್ಷೇತ್ರ, ಎಲ್ಲಾ ಇತ್ತು. ಆದರೆ ಅದಕ್ಕೆ ಗಟ್ಟಿಯಾಗಿ ನೆಲೆನಿಂತು ಮುನ್ನಡೆಸುವ ಮಾಲಕನೇ ಇರಲಿಲ್ಲ. ಅದಕ್ಕಾಗಿಯೇ ದುಡಿಯುವ ಮಾಲೀಕ ಇರದ ಕಾರಣ ಅದೊಂದು ಅಸಂಘಟಿತ ಕಂಪನಯ್ ಆಗಿ ಕಾರ್ಯ ಪ್ರಾರಂಭಿಸಿತು. ಮಲ್ಯರವರ ಸಹ ಪಾಲುದಾರ ಆಗಿದ್ದ ಒಬ್ಬರು ಹೇಳುವಂತೆ " ಮಲ್ಯ ಒಂದು ರೀತಿಯಲ್ಲಿ ರಜೆಯಲ್ಲಿರುವ ಮಾಲೀಕನಂತೆ ಇದ್ದರು" ಎಂದು ಹೇಳಿದ್ದಾರೆ. ಮಲ್ಯ ಅವರು ಎಲ್ಲೆಡೆ ಕಾಣಿಸಿಕೊಂಡರೂ, ವಿಮಾನಯಾನವನ್ನು ನಡೆಸಲು ಅಗತ್ಯಕ್ಕಿಂತ ಹೆಚ್ಚಿನ ಆಸಕ್ತಿಯನ್ನು ತೆಗೆದುಕೊಂಡರೂ ಸಹ ಅದು ಸಾಕಷ್ಟು ಉತ್ತಮವಾಗಿರಲಿಲ್ಲ. ಅವರ ವ್ಯಾಪಾರದ ಮಾದರಿ ಬಿರುಕುಗೊಳ್ಳಲು ಶುರು ಮಾಡಿತು. ಇದರಿಂದಾಗಿ, ನಷ್ಟಗಳು ವೃದ್ಧಿಸಲು ಶುರು ಆದವು. "ಎರಡು ಬ್ರಾಂಡ್‌ಗಳು ಒಂದೇ ರೀತಿ ಮತ್ತು ಹೆಸರಿನಲ್ಲಿ ಗುರುತಿಸಿಕೊಂಡರೆ, ಪ್ರಯಾಣಿಕರು ಅಗ್ಗದ ಬೆಲೆಯ ಬ್ರ್ಯಾಂಡ್ ಆರಿಸಿಕೊಳ್ಳುತ್ತಾರೆ" ಎಂದು ಗುರುತಿಸಲು ಇಷ್ಟಪಡದ ಮಾಜಿ ಪಾಲುದಾರ ಒಬ್ಬರು ಹೇಳಿದ್ದಾರೆ. ಉದ್ಯಮದಲ್ಲಿರುವ ವಿಶ್ಲೇಷಕರು ಹೇಳುವ ಪ್ರಕಾರ, ಈ ವಿಮಾನಯಾನವು ಮೊದಲು ತನ್ನ ದೇಶೀಯ ಕಾರ್ಯಾಚರಣೆಗಳನ್ನು ಕ್ರೋಢೀಕರಿಸಬೇಕಿತ್ತು. ನಂತರ ಅಂತರರಾಷ್ಟ್ರೀಯ ಮಾರ್ಗಗಳನ್ನು ಪರಿಚಯಿಸಬೇಕಾಗಿತ್ತು. ಏಕೆಂದರೆ ವಿದೇಶಿ ಮಾರ್ಗಗಳಲ್ಲಿ ಸ್ಪರ್ಧೆಯು ದೊಡ್ಡದಾಗಿದೆ. ಮತ್ತು ಅದನ್ನು ನಡೆಸಲು ಜೇಬು ತುಂಬಾ ಹಣ ಇರುವವರಿಗೆ ಮಾತ್ರ ಸಾಧ್ಯ ಎಂದು ಹೇಳಿತು.

ಮೂರನೇ ತಪ್ಪು:

ನಷ್ಟದ ಹಾಡಿಗೆ ಇಳಿದ ಈ ಕಂಪನಿ, ಆಗ 6,000 ಕೋಟಿ ರೂಪಾಯಿ ಸಾಲಕ್ಕೆ ಸಿಲುಕಿತು. ಮಲ್ಯ ಅವರು ವಿಧಿಯಿಲ್ಲದೇ  ಬ್ಯಾಂಕ್ ಮೂಲಕ ಸಾಲ ಪಡೆದರು. ಆದರೆ ಸಾಲದಿಂದಾಗಿ ಬ್ಯಾಂಕ್ ಗಳ ಎಕ್ಷಪೋಸರ್ ( ಸಾಲಗಾರ ದುಡ್ಡನ್ನು ಪಾವತಿ ಮಾಡದೆ ಇದ್ದಲ್ಲಿ, ಸಾಲ ಕೊಟ್ಟವರ ಮೇಲೆ ಆಗುವ ನಷ್ಟ) 7,000 ಕೋಟಿ ರೂ.ಗಳಷ್ಟು ಆಯಿತು. ಅದರಲ್ಲಿ ಬಹು ಪಾಲು ರೂ. 4,000 ಕೋಟಿ ಅವಧಿ ಸಾಲದ ರೂಪದಲ್ಲಿ ಇದೆ. ಈ ಸಾಲ ನೀಡಿದವರ ಒಕ್ಕೂಟದಲ್ಲಿ ದಿಗ್ಗಜ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿಡಿದು ಹಲವಾರು ಇತರ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳನ್ನು ಸಹ ಒಳಗೊಂಡಿದೆ. ಅರಬ್ ದೇಶಗಳಲ್ಲಿ ಆದ ಬಿಕ್ಕಟ್ಟಿನ ಕಾರಣದಿಂದಾಗಿ, 1,000 ಕೋಟಿ ರೂ. ಜಾಗತಿಕ ಠೇವಣಿ ರಸೀದಿ ಮುಖಾಂತರ ಸಿಗದ ಕಾರಣ, ಸಾಲದಾತರು ತಮ್ಮ ಸಾಲದ ಭಾಗವನ್ನು ಮಾರುಕಟ್ಟೆಯ ಬೆಲೆಗೆ ಪ್ರೀಮಿಯಂ ಈಕ್ವಿಟಿ ಆಗಿ ಪರಿವರ್ತಿಸಿದರು. ಇದರಿಂದಾಗಿ ಬ್ಯಾಂಕ್ ಗಳು ಈಗ, ಈ ಕಂಪನಿಯಲ್ಲಿ ಶೇಕಡಾ 23 ರಷ್ಟು ಪಾಲನ್ನು ಹೊಂದಿವೆ. ಕಿಂಗ್‌ಫಿಶರ್‌ನ ಈ ಸಾಲಗಳು, UB ಸಮೂಹಕ್ಕೆ ಅಗಾಧವಾದ ವೆಚ್ಚವನ್ನು ತಂದುಕೊಟ್ಟಿತು.

ಆಗಿನ ಕಾಲದಲ್ಲಿ ಉಂಟಾದ ತೈಲ ಬೆಲೆ ಏರಿಕೆ ಮತ್ತು ಡಾಲರ್ ಮುಂದೆ ರೂಪಾಯಿಯ ಕುಸಿತ ಸಹ ಈ ಕಂಪನಿಯನ್ನು ಎದ್ದು ನಿಲ್ಲದಂತೆ ಮಾಡಿತು. ಇವೆರಡರ ಕಾರಣದಿಂದ ಇವರ ಸೇವೆಯ ಬೆಲೆಗಳು ಅಗಾಧವಾಗಿ ಬೆಳೆದವು. ಇದರಿಂದಾಗಿ ಕಿಂಗ್‌ಫಿಶರ್ ಏರ್‌ಲೈನ್ಸ್‌, ದಿವಾಳಿ ಆಗುವ ಮುಂಚೆ, ತನ್ನ ಎಷ್ಟೋ ಮಾರ್ಗಗಳ ಸೇವೆಯನ್ನು ಬಂದ್ ಮಾಡಬೇಕಾಯ್ತು. ಪ್ರಮುಖವಾಗಿ ಇದು ಟೈರ್-II ನಗರಗಳಿಗೆ ಸೇವೆ ನೀಡುತ್ತಿದ್ದ ಕಿಂಗ್‌ಫಿಶರ್ ರೆಡ್ ಅನ್ನು ಮುಚ್ಚಲಾಯಿತು. ವಿಶ್ಲೇಷಕರು ಹೇಳುವಂತೆ ಇದೊಂದು ಅತ್ಯಂತ ದುಬಾರಿ ತಪ್ಪಾಗಿತ್ತು. " ಭಾರತೀಯ ಪ್ರಯಾಣಿಕರು ಅತ್ಯಂತ ಬೆಲೆಗೆ, ಉತ್ಕೃಷ್ಟ ಸೇವೆ ಬಯಸುತ್ತಾರೆ. ಈ ಮನೋಬಲ ವಿಮಾನಯಾನವನ್ನು ಆಳವಾದ ಅವ್ಯವಸ್ಥೆಗೆ ತಳ್ಳುವುದಕ್ಕೆ ಕಾರಣವಾಗಬಹುದು." ಎಂದು ಆ ಸಮಯದಲ್ಲಿ ಹೇಳಿದರು. ಅಕಸ್ಮಾತ, ದೇಶಿಯ ಸೇವೆಗಳಿಗೆ ಪ್ರಾಮುಖ್ಯತೆ ನೀಡಿ, ಅದನ್ನು ಮುಚ್ಚದೆಯೇ ಇದ್ದಿದ್ದರೆ, ಕಂಪನಿ ಉಳಿಯುತ್ತಿತ್ತು ಏನೋ?

ಕಟ್ಟ ಕಡೆಯ ಮಾತು :

'king of good times'( ಸುಕ್ಷಣಗಳ ರಾಜ ) ಎಂದೇ ಪ್ರಸಿದ್ಧವಾದ ಕಿಂಗ್‌ಫಿಶರ್ ಬ್ರ್ಯಾಂಡ್, ಕಡೆಗೆ ತನ್ನ ಕೆಟ್ಟ ಕ್ಷಣಗಳನ್ನು ಅನುಭವಿಸಬೇಕಾಯ್ತು. ಒಂದೇ ಒಂದು ಉದ್ಯಮಕ್ಕೆ ಸೀಮೀತವಾಗದೆ, ಬೇರೆ ಉದ್ಯಮದಲ್ಲಿ ಕೈ ಹಾಕಿದರೂ ಅದರ ಕಡೆ ಗಮನ ಕೊಡದೆ, ಮಾರುಕಟ್ಟೆಯಲ್ಲಿನ ಆಗುಹೋಗುಗಳನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಮತ್ತು ತನ್ನದೇ ಶೈಲಿಯಲ್ಲಿ ಮುನ್ನುಗ್ಗುವೆ ಎಂಬ ಅಹಂಕಾರದಿಂದಾಗಿ, ಭಾರತದ ಏಳಿಗೆ ದಿಕ್ಕನ್ನೇ ಬದಲಾಯಿಸಬೇಕಿದ್ದ ಕಂಪನಿಯೊಂದು ನೆಲಕಚ್ಚಿಕೊಂಡಿತು.

ಸ್ಕಾಚ್ ಐಸ್ ಮೇಲೆ ಸುರಿಯಬಹುದು, ಹಾಗಂತ ವಿಮಾನವನ್ನು ಐಸ್ ಮೇಲೆ ಇರಿಸಲಿಕ್ಕೆ ಆಗಲ್ಲ. ಈ ಎರಡು ಉದ್ಯಮಗಳನ್ನು ಬೇರೆ ಆಗಿಯೇ ತೂಗಬೇಕಿತ್ತು. ಅವುಗಳ ಅವಶ್ಯಕತೆ ತಕ್ಕಂತೆ ಪ್ರಾಶಸ್ತ್ಯ ಕೊಟ್ಟು ಬೆಳೆಸಬೇಕಿತ್ತು.


ಲೇಖನ ಇಷ್ಟವಾದಲ್ಲಿ, ದಯವಿಟ್ಟು ಡಿಂಡಿಮ ಕನ್ನಡ ಬ್ಲಾಗ್ ಅನ್ನು ಅನುಸರಿಸಿ. ನಿಮ್ಮ ಅನಿಸಿಕೆಗಳನ್ನ ತಿಳಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು