ದಶಕಗಳಿಂದ ಶಸ್ತ್ರಾಸ್ತ್ರ ಮಾರಾಟವು ಅಮೆರಿಕಾ ವಿದೇಶಾಂಗ ನೀತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಅವರ ಬಳಿ ಬಂದು ಬೇಡಿಕೊಂಡ ಬಹುತೇಕ ರಾಷ್ಟ್ರಗಳಿಗೆ ಅಮೆರಿಕಾ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಪೂರೈಸಿದೆ.ಕೆಲವೊಂದು ಸಂದರ್ಭದಲ್ಲಿ ಅಮೆರಿಕಾದ ಕಾಂಗ್ರೆಸ್ ಅಥವಾ ತನ್ನ ಪ್ರಜೆಗಳ ಗಮನಕ್ಕೆ ತರಲಾರದೆ, ಕದ್ದು ಮುಚ್ಚಿ ಸಹ ಅಮೆರಿಕಾ ಮಾರಾಟ ಮಾಡಿದ ನಿದರ್ಶನಗಳಿವೆ. ಯುದ್ಧ ಎಂದರೆ ಬೇಕಾಗಿರುವ ಪ್ರಮುಖ ಸಾಮಗ್ರಿ ಎಂದರೆ, ಶಸ್ತ್ರಾಸ್ತ್ರ. ಈ ಶಸ್ತ್ರಾಸ್ತಗಳನ್ನೇ ಇಟ್ಟುಕೊಂಡು, ಅಮೆರಿಕಾ ಯುದ್ಧಗಳಿಂದ ಹೇಗೆ ಲಾಭ ಪಡೆಯುತ್ತಿದೆ ಎಂದು ನಾವು ತಿಳಿದಿರಬೇಕಾದ ಸಂಗತಿಯೇ ಹೌದು.ಇಲ್ಲಿ ಇಬ್ಬರು ಮುಖ್ಯ ವೇದಿಕೆ ಇದೆ. ಒಂದು ಅಮೆರಿಕಾ ಇನ್ನೊಂದು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಗುಂಪು. ಇವೆರಡರ ಬಗ್ಗೆ ಅಳೆದು ತೂಗಿ, ಈ ಲೇಖನ ಬರೆಯಲಾಗಿದೆ.
ಪರಂಪರೆಯ ಇತಿಹಾಸ:
ಈ ಪ್ರವೃತ್ತಿಯು 1970 ರ ದಶಕದಲ್ಲಿ, ಯುಎಸ್ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರ ಉತ್ತುಂಗದಲ್ಲಿದ್ದಾಗ ಪ್ರಾರಂಭವಾಯಿತು. ಅಮೆರಿಕಾದ ಆಗಿನ ಅಧ್ಯಕ್ಷ ನಿಕ್ಸನ್ ಅವರ ಆಡಳಿತವು ಸೋವಿಯತ್ ವಿಸ್ತರಣೆಯನ್ನು ಎದುರಿಸಲು ಶಸ್ತ್ರಾಸ್ತ್ರಗಳನ್ನು ಮಾರಲು ಮತ್ತು ಸಾಗಿಸಲು ಪ್ರಾರಂಭಿಸಿತು. ಈ ರಣನೀತಿಯನ್ನು ನಿಕ್ಸನ್ ಸಿದ್ಧಾಂತ ಎಂದೇ ಈಗಲೂ ಕರೆಯಲಾಗುತ್ತದೆ. ಅಮೇರಿಕನ್ ಬೂಟುಗಳ ಬದಲಾಗಿ, ಅಮೇರಿಕನ್ ಶಸ್ತ್ರಾಸ್ತ್ರಗಳನ್ನು ನೀಡಿ, ಯುದ್ಧ ಭೂಮಿಗೆ ಸೈನ್ಯವನ್ನು ಕಳುಹಿಸುವ ಬದಲು, ಮಿತ್ರರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದು ಇದರ ಮುಖ್ಯ ಗುರಿಯಾಗಿತ್ತು. ಇದು ಆಗಿನ ಶಸ್ತ್ರಾಸ್ತ್ರ ಮಾರಾಟದಲ್ಲಿ ಹತ್ತು ಪಟ್ಟು ವಿಸ್ತರಣೆಗೆ ಕಾರಣವಾಯಿತು. ಇಥಿಯೋಪಿಯಾ, ಲಾವೋಸ್, ಕಾಂಬೋಡಿಯಾ, ದಕ್ಷಿಣ ವಿಯೆಟ್ನಾಂ ಮತ್ತು ಇರಾನ್‌ನಂತಹ ದೇಶಗಳಿಗೆ ಅಮೆರಿಕ ಶಸ್ತ್ರಾಸ್ತ್ರಗಳನ್ನು ರವಾನಿಸಿತು. ಯುನೈಟೆಡ್ ಸ್ಟೇಟ್ಸ್(ಅಮೆರಿಕಾ) 1970 ರ ದಶಕದಲ್ಲಿ ಇರಾನ್‌ನ ಶಾಗೆ ಶತಕೋಟಿ ಡಾಲರ್‌ಗಳ ವ್ಯಾಪಾರದೊಂದಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿತು. ಇದರಲ್ಲಿ ಸರಕು ವಿಮಾನಗಳಿಂದ ಹಿಡಿದು ಸೂಪರ್ಸಾನಿಕ್ ಇಂಟರ್ಸೆಪ್ಟರ್‌ಗಳು, ಫ್ಯಾಂಟಮ್ ಬಾಂಬರ್‌ಗಳು ಮತ್ತು ಕ್ಷಿಪಣಿಗಳವರೆಗೆ ಎಲ್ಲವನ್ನೂ ಒಳಗೊಂಡಿತ್ತು.
![]() |
ಅಮೆರಿಕಾಗೆ ಯುದ್ಧಗಳಿಂದ ಲಾಭ |
ಇರಾನ್‌ನಿಂದ ಆಮದು ಆಗುವ ತೈಲವನ್ನು ರಕ್ಷಿಸುವುದು ಮತ್ತು ಪರ್ಷಿಯನ್ ಗಲ್ಫ್‌ನಲ್ಲಿ ಸೋವಿಯತ್ ಪ್ರಭಾವವನ್ನು ತಡೆಯುವ ಭರವಸೆಯಲ್ಲಿ ಅಮೆರಿಕ ಈ ದೊಡ್ಡ ಮೂಲಕ ರಣರಂಗಕ್ಕೆ ಇಳಿಯಲು ಶುರು ಮಾಡಿತು. ಇರಾನ್ ಒಟ್ಟು 15 ಶತಕೋಟಿ ಡಾಲರ್‌ಗಳಷ್ಟು ಅತ್ಯಾಧುನಿಕ ಯು.ಎಸ್ ಶಸ್ತ್ರಾಸ್ತ್ರಗಳನ್ನು ಖರೀದಿಸಿತು. ಇದೆಲ್ಲಾ ಸುಮಾರು ಅರ್ಧ ಶತಮಾನದ ಹಿಂದಿನ ಮಾತು. ಆದರೆ 1979 ರಲ್ಲಿ ಅಮೆರಿಕಾ ತೀವ್ರ ಹೊಡೆತವನ್ನು ಅನುಭವಿಸಿತು. ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆಯಿತು. ಈ ಕ್ರಾಂತಿಯಿಂದಾಗಿ, ಇರಾನ್ ರಾಜಪ್ರಭುತ್ವದಿಂದ ಇಸ್ಲಾಮಿಕ್ ಗಣರಾಜ್ಯವಾಯ್ತು. ಅಮೆರಿಕಾದ ಮಿತ್ರ ಸೂರ್ಯ ಮುಳುಗಿ ಏಳುವುದರಲ್ಲಿ ಈಗ ವೈರಿಯಾಗಿದ್ದ. ಚುಕ್ಕಾಣಿ ಹಿಡಿದ ಹೊಸ ಆಡಳಿತವು, ಈ ಎಲ್ಲಾ ಅಮೇರಿಕನ್ ಶಸ್ತ್ರಾಸ್ತ್ರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಅವುಗಳನ್ನು ಯುಎಸ್ ವಿರುದ್ಧವೇ ಬಳಸಲು ಪ್ರಾರಂಭಿಸಿತು.
ಪನಾಮದಲ್ಲಿಯೂ ಸಹ ಇದೇ ರೀತಿಯ ಘಟನೆ ಸಂಭವಿಸಿತು. 20 ನೇ ಶತಮಾನದ ಬಹುಪಾಲು, ಪನಾಮವು ಅಮೆರಿಕಾದ ಮಿತ್ರರಾಷ್ಟ್ರವಾಗಿತ್ತು, ಶತಕೋಟಿ ಮಿಲಿಟರಿ ಸಹಾಯವನ್ನು ಅಮೆರಿಕಾದಿಂದ ಪಡೆದು,ಅಮೆರಿಕಾದ ಮಿಲಿಟರಿಯ ಪ್ರಮುಖ ನೆಲೆಯನ್ನು ಸಹ ತನ್ನ ನೆಲದಲ್ಲಿ ಹೊಂದಿತ್ತು. 1989 ರಲ್ಲಿ ಜನರಲ್ ಮ್ಯಾನುಯೆಲ್ ನೊರಿಗಾ, ಪನಾಮದಲ್ಲಿ ಅಧಿಕಾರಕ್ಕೆ ಬಂದಾದ ಮೇಲೆ ಅಮೆರಿಕನ್ನರಿಗೆ ಬೆದರಿಕೆಗಳು ಬರಲು ಶುರುವಾದವು. ಈ ನಡೆ ಅಮೆರಿಕಾಕ್ಕೆ, ಪನಾಮಾ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿತು. ಈಗ ಅಮೆರಿಕನ್ ಮಿಲಿಟರಿ ಮುಂದೆ ಇದ್ದಿದ್ದ ದೊಡ್ಡ ಸಮಸ್ಯೆ ಏನೆಂದರೆ, ತಮ್ಮ ಶಸ್ತ್ರಾಸ್ತ್ರಗಳ ವಿರುದ್ಧವೇ ಈಗ ಅವರು ಹೋರಾಡಬೇಕಿತ್ತು.
ವಿವೇಚನಾರಹಿತ ಶಸ್ತ್ರಾಸ್ತ್ರ ಮಾರಾಟದ ಪರಿಣಾಮ ತಿಳಿದಿದ್ದರೂ ಸಹ, ಅಮೆರಿಕಾ 1980 ರ ದಶಕದಲ್ಲಿ ಶಸ್ತ್ರಾಸ್ತ್ರ ಮಾರಾಟ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇರಾಕ್ ದೇಶಕ್ಕೂ ಸಹ ಶಸ್ತ್ರಾಸ್ತ್ರ ಮಾರಲು ಅಮೆರಿಕಾ ಮುಂದಾಯ್ತು. ಕಾರಣ: ಇರಾನ್ ಮೇಲೆ ಒಂದು ಕಣ್ಣಿಡಲು. ಆದರೆ, ಇರಾಕ್ ಉಲ್ಟಾ ಹೊಡೆಯಿತು. ಅಮೆರಿಕಾದ್ದೇ ಶಸ್ತ್ರಗಳನ್ನು ಉಪಯೋಗಿಸಿ, ಇರಾಕ್ ಕುವೈತ್ ಅನ್ನು ಸ್ವಾಧೀನಪಡಿಸಿಕೊಂಡಿತು.
ಅದೇ ಸಮಯದಲ್ಲಿ, ಅಮೇರಿಕಾ ಸೊಮಾಲಿಯಾಗೆ ಕ್ಷಿಪಣಿ ಮತ್ತು ಟ್ಯಾಂಕ್‌ಗಳನ್ನು ಮಾರಾಟ ಮಾಡುವ ಮೂಲಕ, ಅಲ್ಲಿನ ಮಿಲಿಟರಿಯಲ್ಲಿ ಹಸ್ತಕ್ಷೇಪ ಮಾಡಲು ಶುರು ಮಾಡಿತು. 1992 ರಲ್ಲಿ, ಅಫ್ಘಾನಿಸ್ತಾನದಲ್ಲಿ, ಸೋವಿಯತ್ ಪಡೆಗಳ ವಿರುದ್ಧ ಹೋರಾಡಲು ಯುಎಸ್ ಮುಜಾಹಿದ್ದೀನ್‌ಗಳನ್ನು ಶಸ್ತ್ರಸಜ್ಜಿತಗೊಳಿಸಿತು. 2001 ರಲ್ಲಿ ಅಮೆರಿಕಾ ತಾಲಿಬಾನ್ ವಿರುದ್ಧ ಹೋರಾಡಲು ಅಫ್ಘಾನಿಸ್ತಾನವನ್ನು ಆಕ್ರಮಿಸಿತು. ತಾಲಿಬಾನ್ ಯಾರು? ಇದು ಅಮೆರಿಕದ ಬೆಂಬಲಿಗರಾದ ಮುಜಾಹಿದ್ದೀನ್‌ನ ಮರಿ ಸಂಘಟನೆ ಆಗಿತ್ತು. ಅಷ್ಟೇ ಅಲ್ಲಾ ಅಲ್-ಖೈದಾದ 9/11 ದಾಳಿಯಲ್ಲಿ ಸಹ ತಾಲಿಬಾನ್ ಭಾಗಿಯಾಗಿತ್ತು. 9/11 ಅಂತಹ ದುರ್ಘಟನೆ ನಡೆದ ಮೇಲೂ ಸಹ ಅಮೆರಿಕದ ಚಟ ಬದಲಾಗಲಿಲ್ಲ. ವಾಸ್ತವವಾಗಿ ಯು.ಎಸ್ ತನ್ನ ಚಟವನ್ನು ಇನ್ನೂ ಜಾಸ್ತಿ ಮಾಡುತ್ತಲೇ ಹೋಯಿತು. ಶಾಂತಿ ಮತ್ತು ಸ್ಥಿರತೆಯನ್ನು ತರುವ ಹೆಸರಿನಲ್ಲಿ, ಎಲ್ಲರಿಗೂ ಶಸ್ತ್ರಾಸ್ತ್ರಗಳನ್ನು ಮಾರಿತು.
![]() |
ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳು Source : SIPRI |
ಅಂಕಿ-ಸಂಖ್ಯೆಗಳ ಕಡೆಗೆ ಸ್ವಲ್ಪ ಗಮನ ಹರಿಸೋಣ.
2001 ರಿಂದ, ಯು.ಎಸ್ ಪ್ರಪಂಚದಾದ್ಯಂತ 167 ದೇಶಗಳಿಗೆ, ಸುಮಾರು 200 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದೆ. ಅಮೆರಿಕಾದ ಈ ವ್ಯಾಪಾರಕ್ಕಿರುವ ಗ್ರಾಹಕರಲ್ಲಿ ಬಹುತೇಕರು ಸರ್ವಾಧಿಕಾರಿಗಳೇ. ಮಾನವ ಹಕ್ಕುಗಳ ಉಲ್ಲಂಘನೆಯ ಸುದೀರ್ಘ ದಾಖಲೆ ಹೊಂದಿರುವ, ಪ್ರಜಾಪ್ರಭುತ್ವದ ವಿರುದ್ಧ ಕಾರುವ ಜನಗಳೇ ಪ್ರಮುಖ ಗ್ರಾಹಕರು. ಎಣಿಸುತ್ತಾ ಹೋದರೆ, ಬರೀ ಇಂತಹ ಉದಾಹರಣೆಗಳೇ ಸಿಗುತ್ತವೆ.
ಅಮೆರಿಕಾ ತನ್ನನ್ನು ತಾನು ಶಾಂತಿ ಮತ್ತು ಪ್ರಜಾಪ್ರಭುತ್ವದ ರಕ್ಷಕ ಎಂದು ಹೇಳಿ ಜಗತ್ತನ್ನು ನಂಬಿಸುತ್ತಿರಬಹುದು, ಆದರೆ ಸತ್ಯ ತದ್ವಿರುದ್ಧವಾಗಿದೆ. ಎಲ್ಲಿ ಕಡಿಮೆ ಸಂಘರ್ಷ ಮತ್ತು ಅಪಾಯ ಇದೆಯೋ, ಆ ರಾಷ್ಟ್ರಗಳಿಗಿಂತ, ಹೆಚ್ಚು ಯುದ್ಧ ಪೀಡಿತ ಮತ್ತು ಅಪಾಯದಲ್ಲಿರುವ ರಾಷ್ಟ್ರಗಳಿಗೆ, ಅಮೆರಿಕಾ ಹೆಚ್ಚಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದೆ.
ಈ ದೇಶಗಳು ಯಾವುವು ?
ಇರಾಕ್, ಲಿಬಿಯಾ, ಯೆಮೆನ್, ಸುಡಾನ್ ಮತ್ತು ಕಾಂಗೋ ಗಣರಾಜ್ಯಗಳು ಈ ಭೂಮಿಯ ಅತ್ಯಂತ ಅಸ್ಥಿರ ದೇಶಗಳಾಗಿವೆ. ಇವರೆಲ್ಲರ ಬಳಿ ಅಮೇರಿಕನ್ ಶಸ್ತ್ರಾಸ್ತ್ರಗಳಿವೆ. ನಂತರ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ. ಪ್ರಸ್ತುತ ಯೆಮೆನ್, ಟ್ಯುನಿಷಿಯಾ ಮತ್ತು ಸಿರಿಯಾದಲ್ಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಇಕ್ಕಟ್ಟಿನಲ್ಲಿವೆ. ಮಾನವ ಹಕ್ಕುಗಳ ಉಲ್ಲಂಘನೆಯ ದಾಖಲೆಯನ್ನು ಹೊಂದಿರುವ ದೇಶ ಮತ್ತು ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆ ಹೊಂದಿರುವಂತಹ ಈ ದೇಶ, ಅಮೆರಿಕಾದ ಅತ್ಯಮೂಲ್ಯ ಗ್ರಾಹಕವಾಗಿದೆ. ಇವೆಲ್ಲಾ ಬೆಟ್ಟು ಮಾಡಿ ತೋರಿಸುವ ಒಂದೇ ಒಂದು ಸಾಮಾನ್ಯ ಸಂಗತಿ ಏನಿರಬಹುದು? ಎಂದು ಒಮ್ಮೆ ಯೋಚಿಸಿ.
ಅಮೆರಿಕಾ ಸ್ಥಿರತೆಗಿಂತ ಹೆಚ್ಚಾಗಿ ಸಂಘರ್ಷಗಳನ್ನು ಉತ್ತೇಜಿಸುತ್ತದೆ ಎಂದು ನಾವು ಇಲ್ಲಿ ಕಂಡುಕೊಳ್ಳಬಹುದು. ಯುದ್ಧದ ದಳ್ಳುರಿಯಲ್ಲಿ ತನ್ನ ಶಸ್ತ್ರಾಸ್ತ್ರಗಳ ತುಪ್ಪ ಸುರಿದು, ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಅಮೆರಿಕಾದ ಆಡಳಿತದಲ್ಲಿ ಯಾರೇ ಇರಲಿ, ಎಲ್ಲರೂ ಸಹ ಇದಕ್ಕೆ ಒಲವು ತೋರುವ ಅಧಿಕಾರಿಗಳಾಗಿದ್ದಾರೆ. ಈ ಹಿಂದೆ ಡೊನಾಲ್ಡ್ ಟ್ರಂಪ್, ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ವ್ಯಾಪಾರ ಪತ್ರಗಳಿಗೆ ಸಹಿ ಹಾಕಿ, ಅಮೆರಿಕದ ರಕ್ಷಣಾ ಕಂಪನಿಗಳಿಗೆ ಮತ್ತು ಗುತ್ತಿಗೆದಾರರಿಗೆ ನೂರಾರು ಶತಕೋಟಿ ಡಾಲರ್‌ಗಳ ವ್ಯಾಪಾರವನ್ನೇ ತಂದು ಕೊಟ್ಟಿದ್ದಾರೆ.
ಅಧ್ಯಕ್ಷರ ಕುತಂತ್ರತೆ:
2017 ರಲ್ಲಿ, ಟ್ರಂಪ್ ಅವರು ಬರೀ ಸೌದಿ ಅರೇಬಿಯಾ ಜತೆ 110 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಮಾಡಿಕೊಂಡದಷ್ಟೇ ಅಲ್ಲದೇ, ಜೊತೆಗೆ 42 ಇತರ ದೇಶಗಳಿಗೆ 84 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ 157 ಮಾರಾಟಗಳನ್ನು ಮಾಡಿದರು. ಅಮೇರಿಕಾದ ಸೈನ್ಯವನ್ನು ಯುದ್ಧಕ್ಕೆ ಕಳುಹಿಸುವುದರ ಅವರು ವಿರೋಧ ತೋರಿದ್ದಿರಬಹುದು, ಆದರೆ ಅವರು ಯಾವತ್ತೂ ಅಮೆರಿಕಾದ ಯುದ್ಧ ಸಂಪನ್ಮೂಲಗಳಿಂದ ಬರುವ ಆದಾಯವನ್ನು ಎಂದಿಗೂ ನಿಲ್ಲಿಸಲಿಲ್ಲ.
ಎಲ್ಲಾ ಯು.ಎಸ್ ಅಧ್ಯಕ್ಷರು ಶಸ್ತ್ರಾಸ್ತ್ರ ಮಾರಾಟದಿಂದ ಸಂಪತ್ತನ್ನೇ ಸೃಷ್ಟಿಸಿದರು. ರಿಚರ್ಡ್ ನಿಕ್ಸನ್‌ನಿಂದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್‌ವರೆಗೆ, ರೊನಾಲ್ಡ್ ರೇಗನ್‌ನಿಂದ ಬಿಲ್ ಕ್ಲಿಂಟನ್‌ವರೆಗೆ, ಜಾರ್ಜ್ ಬುಷ್‌ನಿಂದ ಬರಾಕ್ ಒಬಾಮಾವರೆಗೆ ಮತ್ತು ಈಗ ಜೋ ಬಿಡನ್ ಸಹ ಅದನ್ನೇ ಮಾಡುತ್ತಿದ್ದಾರೆ. ರಕ್ಷಣಾ ಮಾರಾಟವನ್ನು ಅನುಮೋದಿಸುವಾಗ, ಅದರಿಂದಾಗುವ ಆರ್ಥಿಕ ಪ್ರಯೋಜನಗಳು ಅತ್ಯಂತ ದೊಡ್ಡ ಪರಿಗಣನೆಯಾಗಿವೆ ಎಂದು ಅವರೆಲ್ಲರೂ ತಮ್ಮ ಆಡಳಿತ ನೀತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ವ್ಯವಹಾರದ ಬಗ್ಗೆ ಅಲ್ಲಾ. ಈ ಮೂಲಕ ತಮ್ಮ ಪ್ರಭಾವವನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಶಸ್ತ್ರಾಸ್ತ್ರ ಮಾರಾಟವು ಯು.ಎಸ್‌ಗೆ ಕಾರ್ಯತಂತ್ರದ ಲಾಭವನ್ನು ತರುತ್ತದೆ. ಇದರ ಬಗ್ಗೆ ವಿವರವಾಗಿ ನೋಡೋಣ.
ಮೊದಲನೆಯದು,ಪ್ರಾದೇಶಿಕ ಸಮತೋಲನವನ್ನು ತಮ್ಮ ದೇಶದ (ಅಮೆರಿಕಾದ) ಹಿತಾಸಕ್ತಿಗಳ ಪರವಾಗಿ ಬದಲಾಯಿಸುತ್ತಾರೆ.
ಎರಡನೇಯದಾಗಿ,ಅವರು ಅಮೇರಿಕನ್ ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳ ಮೇಲೆ ಯುಎಸ್ ಪ್ರಭಾವ ಮತ್ತು ಹತೋಟಿಯನ್ನು ಬೀರಲು ಸಹಾಯ ಮಾಡುತ್ತಾರೆ.
ಮೂರನೇಯದಾಗಿ, ತಮ್ಮ ಪ್ರಾಬಲ್ಯವನ್ನು ಗೌಪ್ಯವಾಗಿ ಕಾಪಾಡಿಕೊಳ್ಳಲು, ಸಾಗರೋತ್ತರ ಮಿಲಿಟರಿ ನೆಲೆಗಳಲ್ಲಿ ಅಮೆರಿಕಾದ ಪ್ರಬಲ ಹಿಡಿತಕ್ಕೆ ಅನುವು ಮಾಡಿಕೊಡುತ್ತಾರೆ.
ನಾಲ್ಕನೆಯದಾಗಿ, ತನ್ನ ಗ್ರಾಹಕ ದೇಶಗಳ ಮೇಲೆ ಬಲ ಪ್ರಯೋಗ ಮಾಡಿ, ತಮ್ಮ ನಿಲುವಿನ ಪರವಾಗಿ ಯುನೈಟೆಡ್ ನೇಷನ್ಸ್ ಅಲ್ಲಿ ಮತ ಹಾಕುವಂತೆ ನೋಡಿಕೊಳ್ಳುತ್ತಾರೆ.
ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದ 33 ಪ್ರತಿಶತದಷ್ಟು ಪಾಲನ್ನು ಯು.ಎಸ್ ಹೊಂದಿದೆ, ನಂತರದಲ್ಲಿ ರಷ್ಯಾ (23%), ನಂತರ ಚೀನಾ, ಫ್ರಾನ್ಸ್ ಮತ್ತು ಜರ್ಮನಿ.
ಅಮೆರಿಕಾದ ಗ್ರಾಹಕ ರಾಷ್ಟ್ರಗಳು ಈ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುತ್ತಾರೆ?
ಹೆಚ್ಚಾಗಿ ರಾಷ್ಟ್ರಗಳು ತಮ್ಮ ವಿರೋಧಿಗಳ ವಿರುದ್ಧ ಉಪಯೋಗಿಸಿದರೇ, ಇನ್ನೂ ಕೆಲವು ರಾಷ್ಟ್ರಗಳು ತಮ್ಮ ಸ್ವಂತ ಜನರ ವಿರುದ್ಧ ಸಹ ಉಪಯೋಗಿಸಲು ಬಳಸುತ್ತವೆ.
ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಹೇಗೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪರಿಣಾಮ ಬೆಳೆದು ನಿಂತಿವೆ ಎಂದು, ಮಾನವೀಯ ಉಲ್ಲಂಘನೆ & ದೌರ್ಜನ್ಯಗಳು, ಸಂಘಟಿತ ಅಪರಾಧಗಳು, ಹಿಂಸಾಚಾರದ ಕೃತ್ಯಗಳಿಗೆ ಹೇಗೆ ಕಾರಣವಾಯಿತು ಎಂಬುದನ್ನು ಸಾಬೀತುಪಡಿಸಲು ಸ್ಪಷ್ಟವಾದ ಪುರಾವೆಗಳಿವೆ. ತಾಲಿಬಾನ್‌ಗೆ ಅಮೆರಿಕಾ ನೀಡಿದ ಶಸ್ತ್ರಾಸ್ತ್ರಗಳ ಕೊಡುಗೆಯು ಸಾಗರದಲ್ಲಿನ ಒಂದು ಹನಿ ಅಷ್ಟೇ. ಪದೇ ಪದೇ ಯುಎಸ್ ಅಸ್ತ್ರಗಳು ರಾಷ್ಟ್ರೇತರ ಕೈಗಳಿಗೆ ಸಿಕ್ಕು, ಹೇಗೆ ದಂಗೆ ಎದ್ದಿದೆ ಎಂದು ಹೇಳುವುದೇ ಬೇಕಾಗಿಲ್ಲ.
2014 ರಲ್ಲಿ ಸಿರಿಯಾದ ಗಡಿ ಪಟ್ಟಣವಾದ ಕೊಬಾನಿಯಲ್ಲಿ ಯುಎಸ್ ವಾಯು ಸೇನೆ ಶಸ್ತ್ರಾಸ್ತ್ರ ಮತ್ತು ಸರಬರಾಜುಗಳನ್ನು ಇಳಿಬಿಟ್ಟಿತ್ತು.ಆ ಆಯುಧಗಳು ಕುರ್ದಿಷ್ ಹೋರಾಟಗಾರರಿಗೆಂದು ಮೀಸಲಾಗಿದ್ದವು.ಆದರೆ ಕೊನೆಗೆ ಅವು ಇಸ್ಲಾಮಿಕ್ ಸ್ಟೇಟ್(ISIS) ಕೈಯಲ್ಲಿ ಕೊನೆಗೊಂಡವು. ವಾಷಿಂಗ್ಟನ್‌ಗೆ ಉಡುಗೊರೆ ಕಳುಹಿಸಿದ್ದಕ್ಕೆ ಧನ್ಯವಾದ ಎಂದು ಹೇಳುವ ವೀಡಿಯೊವನ್ನು ಐಸಿಸ್ ಬಿಡುಗಡೆ ಸಹ ಮಾಡಿತ್ತು.
2019 ರಲ್ಲಿ, ಸೌದಿ ಅರೇಬಿಯಾ ಮತ್ತು ಯುಎಇಗೆ ಯುಎಸ್ ಒದಗಿಸಿದ ಶಸ್ತ್ರಾಸ್ತ್ರಗಳು ಅಲ್-ಖೈದಾ ಮತ್ತು ಅಫ್ಘಾನಿಸ್ತಾನದ ವಿವಿಧ ಭಯೋತ್ಪಾದಕ ಸಂಘಟನೆಗಳ ಕೈಯಲ್ಲಿ ಕೊನೆಗೊಂಡಿವೆ ಎಂದು ಒಂದು ತನಿಖೆ ಬಹಿರಂಗಪಡಿಸಿತು. ಅದೇ ವರ್ಷ ಮತ್ತೊಂದು ತನಿಖೆಯು, ಅಮೇರಿಕನ್ ನಿರ್ಮಿತ ಶಸ್ತ್ರಾಸ್ತ್ರಗಳು, ಯೆಮೆನ್‌ನಲ್ಲಿನ ಪ್ರತಿಸ್ಪರ್ಧಿ ಮಿಲಿಷಿಯಾ ಗುಂಪುಗಳ ಕೈಗೆ ಸೇರಿದವು ಎಂದು ಬಹಿರಂಗಪಡಿಸಿತು. ಈ ಗುಂಪುಗಳು ಯೆಮೆನ್‌ನಲ್ಲಿ ಅಧಿಕಾರದಲ್ಲಿದ್ದ ಯುಎಸ್ ಬೆಂಬಲಿತ ಸರ್ಕಾರದ ವಿರುದ್ಧ, ಯುಎಸ್ ಸರಬರಾಜು ಮಾಡಿದ ಶಸ್ತ್ರಾಸ್ತ್ರಗಳನ್ನು ಬಳಸಿದ್ದವು.
ಪಟ್ಟಿ ಹೇಳುತ್ತಾ ಹೋದರೆ ತುಂಬಾ ದೊಡ್ಡದಿದೆ. ಆದರೆ ಅದರ ಸಾರಾಂಶ ಅತೀ ಚಿಕ್ಕದಾಗಿದೆ. ನೀವು ರಾಕ್ಷಸ ಆಡಳಿತವನ್ನು ಮತ್ತು ರಾಷ್ಟ್ರ ವಿರೋಧಿ ಸೇನೆಯನ್ನು ಸಜ್ಜುಗೊಳಿಸಿದಾಗ, ನಿಮ್ಮ ಶಸ್ತ್ರಾಸ್ತ್ರ ಹೊಂದಿದವರು ಈ ಜಗತ್ತಿಗೆ ಬೆದರಿಕೆಯಾಗಲ್ಲ, ಅದನ್ನು ಪೂರೈಸಿದ ನೀವುಗಳು ಪ್ರಪಂಚದ ಅತೀ ದೊಡ್ಡ ಬೆದರಿಕೆ ಆಗ್ತೀರಿ. ಮಾನವ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ, ಯುನೈಟೆಡ್ ಸ್ಟೇಟ್ಸ್ (ಅಮೆರಿಕಾ) ಬೇರೆಯವರಿಗೆ ಮಾನವ ಹಕ್ಕುಗಳನ್ನು ಮೌಲ್ಯದ ಪಾಠ ನೀಡುವ ಹಕ್ಕು ಅವರಿಗಿಲ್ಲ. ಪ್ರಾದೇಶಿಕ ಭದ್ರತೆ ಕಾಪಾಡುವ ಹೊಣೆ ಹೊತ್ತು, ಪ್ರಾದೇಶಿಕ ಸಂಘರ್ಷಗಳಿಗೆ ಉತ್ತೇಜನ ನೀಡುವುದು ತಪ್ಪು. ಯುನೈಟೆಡ್ ಸ್ಟೇಟ್ಸ್(ಅಮೆರಿಕಾ) ಖಂಡಿತವಾಗಿಯೂ ತನ್ನನ್ನು ತಾನು ಶಾಂತಿ, ಸ್ಥಿರತೆ ಮತ್ತು ಪ್ರಜಾಪ್ರಭುತ್ವದ ದೂತ ಎಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಕಾರಣ ಅದುವೇ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿಯಾಗಿದೆ.
ವಿಶ್ವ ಶಾಂತಿ ಎಂಬುದು ಯುಎಸ್ ರಕ್ಷಣಾ ಉದ್ಯಮಕ್ಕೆ ಸರಿಹೊಂದುವ ಪದವಲ್ಲ.
ಈ ಲೇಖನ ನನ್ನ ಸಂಶೋಧನೆಯ (research)ನ ಒಂದು ಭಾಗವಾಗಿದೆ. ಇಂತಹ ಕ್ಲಿಷ್ಟ ಹಾಗೂ ವಿವಾದಿತ ವಿಷಯದ ಬಗ್ಗೆ ಬರೆಯುವಾಗ, ತುಂಬಾ ಜಾಗರೂಕತೆಯಿಂದ ಹಾಗೂ ಮುತುವರ್ಜಿಯಿಂದ ಮತ್ತು ಹಲವಾರು ಲೇಖನಗಳ ಅಧ್ಯಯನದ ನಂತರ ಬರೆಯಲಾಗಿದೆ. ಇದು ಕೇವಲ ಮಾಹಿತಿ ನೀಡುವ ಲೇಖನವಾಗಿದ್ದು, ಯಾವುದೇ ರೀತಿಯ ವಿವಾದ/ವೈಮನಸ್ಸು ಉಂಟು ಮಾಡುವ ಉದ್ದೇಶ ಹೊಂದಿಲ್ಲ. ನಾನು ಓದಿದ ಲೇಖನಗಳ ಪಟ್ಟಿಯನ್ನು ಬ್ಲಾಗ್ ನ ಕೊನೆಯಲ್ಲಿ ಕೊಡಲಾಗಿದೆ. ಲೇಖನವನ್ನು ವೀಕ್ಷಕರ ವಿವೇಚನೆಗೆ ಬಿಡಲಾಗಿದೆ.
ಮೂಲ ಹಾಗು ಆಧಾರಗಳು:
Other Hyper Linked Documents mentioned in Article.
0ಕಾಮೆಂಟ್‌ಗಳು