ಜಾಹಿರಾತು

ನಿಮ್ಮ ಆಧಾರ್ ಮತ್ತು ಫಿಂಗರ್‌ಪ್ರಿಂಟ್‌ ಹೇಗೆ ಹ್ಯಾಕ್ ಆಗಬಹುದು ಮತ್ತು ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು?

ಇಲ್ಲಿಯವರೆಗೆ ನಾವು ನಮ್ಮ ಫಿಂಗರ್‌ಪ್ರಿಂಟ್‌ಗಳನ್ನು ಕ್ಲೋನ್ ಮಾಡಲು ಅಥವಾ ಮರುನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬ ಊಹೆಯಲ್ಲಿದ್ದೆವು. ಇತ್ತೀಚೆಗೆ ಸೈಬರ್ ಅಪರಾಧಿಗಳು ಬೇರೆಯವರ ಗುರುತುಗಳನ್ನು ಬಳಸಿಕೊಂಡು ಜನರನ್ನು ವಂಚಿಸಿದ ಅನೇಕ ಪ್ರಕರಣಗಳು ದಾಖಲಾಗಿವೆ. ಆಧಾರ್ ನಮ್ಮ ಗುರುತಿನ ಡೇಟಾ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಈ ಮಾಹಿತಿಗೆ ಕನ್ನ ಹಾಕಿದರೆ, ಒಬ್ಬ ವ್ಯಕ್ತಿಗೆ ಸಂಬಂಧಿಸಿದ ದಾಖಲೆ ಅಥವಾ ಡೇಟಾವನ್ನು ಕದಿಯಬಹುದು. ಹೌದು. ನಿಮ್ಮ ಆಧಾರ್ ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಸಹ ಹ್ಯಾಕ್ ಮಾಡಬಹುದು.

 ತಂತ್ರಜ್ಞಾನದ ಪ್ರಗತಿ ಮತ್ತು ವಸ್ತುಗಳು ಸುಲಭವಾಗಿ ಸಿಗುತ್ತಿರುವುದರಿಂದ, ಇಂತಹ ಕಳ್ಳತನಗಳು ಸಾಮಾನ್ಯವಾಗುತ್ತಿವೆ. ಇಂತಹ ವಂಚನೆಗಳಲ್ಲಿ ಫಿಂಗರ್ ಪ್ರಿಂಟ್ ಕದ್ದು ಕ್ಲೋನಿಂಗ್ ಮಾಡುವುದು ಕೂಡ ಒಂದು. ನಿಮ್ಮ ಫಿಂಗರ್ ಪ್ರಿಂಟ್/ ಬೆರಳಚ್ಚು ನಕಲು ಆಗಬಹುದು ಮತ್ತು ನಿಮ್ಮ ಖಾತೆಯಲ್ಲಿನ ಹಣ "೦" ಸಹ ಆಗಬಹುದು.

ಹ್ಯಾಕಿಂಗ್‌ನಿಂದ ಪಾರಾಗುವುದು ಹೇಗೆ?

ಕೆಲ ಉದಾಹರಣೆಗಳು:

ಸೈಬರ್ ವಂಚಕರು ಮೇ 5 ರಂದು, ಎಪಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ವೆಬ್‌ಸೈಟ್ ಐಜಿಆರ್‌ಎಸ್‌ನಿಂದ 149 ಗ್ರಾಹಕರ ದಾಖಲೆ ಕದ್ದು, ಆ ಗ್ರಾಹಕರ ಫಿಂಗರ್ ಪ್ರಿಂಟ್/ ಬೆರಳಚ್ಚು ಕ್ಲೋನ ಮಾಡಿ, ಒಟ್ಟು 14.64 ಲಕ್ಷ ರೂ ಕದ್ದಿದ್ದಾರೆ.  ಪೊಲೀಸರು ಅವರಿಂದ 2,500 ಕ್ಲೋನ್ ಮಾಡಿದ ಫಿಂಗರ್‌ಪ್ರಿಂಟ್‌ಗಳನ್ನು, 3.4 ಲಕ್ಷ ನಗದು, 121 ಸಿಮ್ ಕಾರ್ಡ್‌, 20 ಮೊಬೈಲ್‌ಗಳು, 13 ಡೆಬಿಟ್ ಕಾರ್ಡ್‌, ಒಂದು ಪ್ಯಾನ್ ಕಾರ್ಡ್, ಎರಡು ಆಧಾರ್ ಕಾರ್ಡ್‌, ನಾಲ್ಕು ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳು, ಡೌನ್‌ಲೋಡ್ ಮಾಡಿದ ಭೂ ದಾಖಲೆಗಳನ್ನು ಒಳಗೊಂಡ ಮೂರು ಪೆನ್-ಡ್ರೈವ್‌ಗಳು, ಒಂದು ಲ್ಯಾಪ್‌ಟಾಪ್ ಮತ್ತು ಇತರೆ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಂದ

ಮತ್ತೊಂದು ಕಡೆ, ಚಂಡೀಗಢನಲ್ಲಿ ಮೇ 12ರಂದು ವಂಚಕರು ಹರಿಯಾಣ ಸರ್ಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸೇಲ್ ಡೀಡ್‌ಗಳಿಂದ ಹೆಬ್ಬೆರಳಿನ ಗುರುತುಗಳನ್ನು ಕ್ಲೋನಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣವನ್ನು ಎಗರಿಸಿ ಪೊಲೀಸರ ಅತಿಥಿಯಾಗಿದ್ದಾರೆ.

ಆಧಾರ ಬೆಂಬಲಿತ ಪಾವತಿ ವ್ಯವಸ್ಥೆ or AEPS:

ಆಧಾರ ಸರಿಪಡಿಸುವಾಗ ಅಥವಾ ಬ್ಯಾಂಕ್ ಖಾತೆ ತೆರೆಯುವಾಗ e-KYC ಮಾಡುವ ಸಮಯದಲ್ಲಿ ನೀವು ನಿಮ್ಮ ಬೆರಳಚ್ಚು ನೀಡಿ, ಅದು ನೀವೇ ಎಂದು ದೃಢೀಕರಿಸುತ್ತೀರಿ ಅಲ್ಲವೇ? ಇದೆಲ್ಲಾ ಸಾಧ್ಯವಾಗುವುದು NPCI ( ಭಾರತೀಯ ರಾಷ್ಟ್ರೀಯ ಪಾವತಿ ನಿಗಮ)ನ ಒಂದು ವೈಶಿಷ್ಟ್ಯದಿಂದ. ಆ ವೈಶಿಷ್ಟ್ಯತೆಯ ಹೆಸರೇ ಆಧಾರ ಬೆಂಬಲಿತ ಪಾವತಿ ವ್ಯವಸ್ಥೆ ಅಥವಾ Aadhaar Enabled Payment System (AEPS). ಈ ಒಂದು ವೈಶಿಷ್ಟ್ಯತೆಯ ಮೂಲಕ ನೀವು ಈ ಕೆಳಗಿನ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ.

AEPS ನಿಂದ ನೀಡಲಾಗುವ ಬ್ಯಾಂಕಿಂಗ್ ಸೇವೆಗಳು

  • ನಗದು ಠೇವಣಿ
  • ಹಣ ತೆಗೆಯುವದು
  • ಬ್ಯಾಲೆನ್ಸ್ ವಿಚಾರಣೆ
  • ಮಿನಿ ಸ್ಟೇಟ್ಮೆಂಟ್
  • ಒಂದು ಆಧಾರ್ ದಿಂದ ಮತ್ತೊಂದು ಆಧಾರ್‌ಗೆ ಹಣ ವರ್ಗಾವಣೆ
  • ದೃಢೀಕರಣ
  • ಭೀಮ್ ಆಧಾರ್ ಪೇ
AEPS ನೀಡುವ ಇತರ ಸೇವೆಗಳು:
  • e-KYC
  • ಅತ್ಯುತ್ತಮ ಬೆರಳಚ್ಚು ಪತ್ತೆ
  • ಡೆಮೊ ದೃಢೀಕರಣ
  • ಟೋಕನೈಸೇಶನ್
  • ಆಧಾರ್ ಸೀಡಿಂಗ್ ವ್ಯವಸ್ಥೆ
ಒಂದು ವೇಳೆ ನಿಮ್ಮ ಖಾತೆ ಆಧಾರದೊಂದಿಗೆ ಲಿಂಕ್ ಆಗಿದ್ದರೆ ಮೇಲಿನ ಎಲ್ಲಾ ಸೌಕರ್ಯಗಳನ್ನು ನೀವು ಆಧಾರ ಬಳಸಿ ಪಡೆಯಬಹುದು. ಸರಳ ಉದಾಹರಣೆ ಎಂದರೆ, ಗೂಗಲ್ ಪೇ, ಫೋನ್ ಪೇ ಹಾಗೂ ಇತರೆ UPI ಆಧಾರಿತ ಆಪ್ ಗಳು.
ಒಂದು ಪಕ್ಷ ಬೇರೆಯವರ ಬಳಿ ನಿಮ್ಮ ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿ ಮತ್ತು ಫಿಂಗರ್ ಪ್ರಿಂಟ್ ಇದ್ದರೆ, ನಿಮ್ಮ ಖಾತೆಯಲ್ಲಿನ ಮೊತ್ತವನ್ನು ಅವರು ಸಲೀಸಾಗಿ ಸೊನ್ನೆ ಮಾಡಬಹುದು. ಇಂತಹ ಅನೇಕ ಘಟನೆಗಳು ಸಹ ನಡೆದಿವೆ.

ಖದೀಮರ ಕೈಚಳಕ:

ಬ್ಯಾಂಕ್ ಇಂದ ಹಿಡಿದು ಆಧಾರ್ ಅಂತಹ ಮಾಹಿತಿಗಳನ್ನ ಕಲೆಹಾಕುವುದು ಈಗ ಹಳೆತಾಗಿದೆ. ಈಗ ನಮ್ಮ ಬೆರಳಚ್ಚನ್ನು ಸಹ ಕಾಪಿ ಮಾಡುವ ಲೆವೆಲ್ ವರೆಗೂ ಜನ ಕೆಲಸಕ್ಕೆ ಇಳಿದಿದ್ದಾರೆ. ಮೊದಲೇ ಹೇಳಿದಂತೆ, ಜನ ಕಾಪಿ ಮಾಡಲು ಅನೇಕ ಮಾರ್ಗ ಹುಡುಕಿಕೊಂಡಿದ್ದಾರೆ.  ಎಪಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಸ್ ಅಲ್ಲಿ, ವಂಚಕರು ಪಾಲಿಮರ್ ಶೀಟ್ ಅನ್ನು ಬಳಸಿ ಬೆಣ್ಣೆ ಕಾಗದದ ಮೇಲೆ ಫಿಂಗರ್‌ಪ್ರಿಂಟ್‌ಗಳನ್ನು ಕ್ಲೋನ್ ಮಾಡಿ, ರಾಸಾಯನಿಕದೊಂದಿಗೆ ನಿರ್ದಿಷ್ಟ ತಾಪಮಾನಕ್ಕೆ ಬಿಸಿ ಮಾಡಿ ಕ್ಲೋನ ಪಡೆದರು. ಯುಟ್ಯೂಬ್ ಮೂಲಕ ಕ್ಲೋನಿಂಗ್ ಮತ್ತು ಹ್ಯಾಕಿಂಗ್ ಕಲಿತ ಇವರು, ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಿಂದ ಫಿಂಗರ್‌ಪ್ರಿಂಟ್‌ಗಳನ್ನು ತಯಾರಿಸಲು ಉಪಕರಣಗಳನ್ನು, ಬಯೋಮೆಟ್ರಿಕ್ ಯಂತ್ರ, ರಬ್ಬರ್ ಥಂಬ್ ಇಂಪ್ರೆಷನ್ ಪ್ರಿಂಟರ್, ಜೆಲಾಟಿನ್, ಟೆಂಪರೇಚರ್ ಮಾಡ್ಯುಲೇಟರ್ ಮತ್ತು ಇತರ ರಾಸಾಯನಿಕಗಳನ್ನು ಖರೀದಿಸಿ ಅದರ ಮೂಲಕ ಅವರು ಕ್ಲೋನ್ ಮಾಡುತ್ತಿದ್ದರು.

ಹಾಗಾದರೆ ಇಂತಹ ಪರಿಸ್ಥಿತಿ ಬರಬಾರದು ಎಂದರೆ ಏನು ಮಾಡಬೇಕು?. 

ಭದ್ರತೆಯನ್ನು ಬಲಪಡಿಸಲು ಮತ್ತು ಆಧಾರ್ ಕಾರ್ಡ್ ಹೊಂದಿರುವವರಿಗೆ ನಿಯಂತ್ರಣವನ್ನು ಒದಗಿಸುವ ಪ್ರಯತ್ನದಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) 12 ಅಂಕಿಗಳ ಗುರುತಿನ ಕಾರ್ಡ್ ಅನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಬೆಂಬಲವನ್ನು ಒದಗಿಸಿದೆ. 
ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಿದ ನಂತರ, ಬಯೋಮೆಟ್ರಿಕ್ ವಿಧಾನ (ಫಿಂಗರ್‌ಪ್ರಿಂಟ್/ಐರಿಸ್) ಬಳಸಿಕೊಂಡು ಯಾವುದೇ ದೃಢೀಕರಣ ಸೇವೆಗಳನ್ನು ಆಹ್ವಾನಿಸಲು UID ಅನ್ನು ಬಳಸಿದರೆ, ನಿರ್ದಿಷ್ಟ ದೋಷ ಕೋಡ್ '330' ಬಯೋಮೆಟ್ರಿಕ್ಸ್ ಲಾಕ್ ಆಗಿರುವುದನ್ನು ಸೂಚಿಸುತ್ತದೆ.
ದೃಢೀಕರಣಕ್ಕಾಗಿ ಬಳಸಿದ ನಿವಾಸಿಗಳ ಆಧಾರ್‌ನಲ್ಲಿರುವ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಡೇಟಾವನ್ನು ಲಾಕ್ ಮಾಡಬಹುದು.

ಒಮ್ಮೆ ನಿವಾಸಿಗಳು ಬಯೋಮೆಟ್ರಿಕ್ ಲಾಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರೆ, ಆಧಾರ್ ಹೊಂದಿರುವವರು ಆಯ್ಕೆ ಮಾಡುವವರೆಗೆ ಅವರ ಬಯೋಮೆಟ್ರಿಕ್ಸ್ ಲಾಕ್ ಆಗಿರುತ್ತದೆ: ಎಲ್ಲಿಯವರೆಗೆ ಎಂದರೆ,
  • ಅದನ್ನು ಅನ್ಲಾಕ್ ಮಾಡುವ ವರೆಗೆ ( ತಾತ್ಕಾಲಿಕವಾಗಿ)  ಅಥವಾ,
  • ಲಾಕ್ ಸಿಸ್ಟಮ್ ಅನ್ನು ಪೂರ್ಣ ಹಿಂಪಡೆಯುವ ವರೆಗೆ. 

ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಮತ್ತು ಅನ್ಲಾಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ
  1.  UIDAI ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ.
  2. ನನ್ನ ಆಧಾರ್‌ಗೆ ಹೋಗಿ ಮತ್ತು ಆಧಾರ್ ಸೇವೆಗಳನ್ನು ಆಯ್ಕೆಮಾಡಿ.
  3. ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ.
  4. "ಲಾಕ್ ಸಕ್ರಿಯಗೊಳಿಸಿ" ಆಯ್ಕೆಮಾಡಿ.
  5. ಮುಂದಿನ ವೆಬ್‌ಪುಟದಲ್ಲಿ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
  6. ಕ್ಯಾಪ್ಚಾ ಕೋಡ್‌ನಲ್ಲಿ ಪಂಚ್ ಮಾಡಿ
  7. Send OTP ಅನ್ನು ಕ್ಲಿಕ್ ಮಾಡಿ. ಅದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲ್ಪಡುತ್ತದೆ.
  8. ಬಯೋಮೆಟ್ರಿಕ್ ಡೇಟಾವನ್ನು ಲಾಕ್/ಅನ್ಲಾಕ್ ಮಾಡುವ ಆಯ್ಕೆಯನ್ನು ಆರಿಸಿ
ಆದಾಗ್ಯೂ, ಈ ಸೇವೆಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಅತ್ಯಗತ್ಯ ಎಂಬುದನ್ನು ನೀವು ಗಮನಿಸಬೇಕು. ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೋಂದಾಯಿಸದಿದ್ದರೆ, ನೀವು ಹತ್ತಿರದ ನೋಂದಣಿ ಕೇಂದ್ರ/ಮೊಬೈಲ್ ಅಪ್‌ಡೇಟ್ ಎಂಡ್ ಪಾಯಿಂಟ್‌ಗೆ ಭೇಟಿ ನೀಡಬಹುದು ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನವೀಕರಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು