ಜಾಹಿರಾತು

ಚೀನಾ ತೈವಾನ್ ಉದ್ವಿಗ್ನತೆಯ ಹಿಂದಿನ ಕಾರಣ ಏನು? ಅಮೇರಿಕಾ ಏಕೆ ಮಧ್ಯ ಪ್ರವೇಶಿಸುತ್ತಿದೆ?

ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿಯ ನಂತರ, ತೈವಾನ್ ಮೇಲೆ ಚೀನಾ ಇನ್ನಷ್ಟು ಆಕ್ರೋಶಗೊಂಡಿದೆ. ಇಷ್ಟೇ ಅಲ್ಲಾ ಈ ಒಂದು ಭೇಟಿಯಿಂದಾಗಿ ಮೊದಲೇ ಹದಗೆಟ್ಟಿದ್ದ ಅಮೇರಿಕಾ ಮತ್ತು ಚೀನಾ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿದೆ. 
ವಿಭಜನೆ ಅಂತ ನೋಡಿದಾಗ, ಚೀನಾ ಸರ್ಕಾರವು ತೈವಾನ್ ಅನ್ನು ಒಂದು ಪ್ರತ್ಯೇಕವಾದ ಪ್ರಾಂತ್ಯದಂತೆ ನೋಡಿಕೊಂಡರೂ, ಅಂತಿಮವಾಗಿ ಅದು ತನ್ನ ದೇಶದ ಭಾಗ ಎಂದು ಹೇಳುತ್ತಲೇ ಬಂದಿದೆ. ಆದರೆ ಅನೇಕ ತೈವಾನೀಸ್ ಜನರು ತಮ್ಮ ಸ್ವ-ಆಡಳಿತದ ದ್ವೀಪವನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುತ್ತಾರೆ. ಅವರ ಸ್ವಾತಂತ್ರ್ಯ ಅಧಿಕೃತವಾಗಿ ಇದೆಯೋ ಇಲ್ಲವೋ ಎಂಬುದು ಅವರಿಗೆ ಬೇಕಾಗಿಯೇ ಇಲ್ಲಾ.

ಚೀನಾ ತೈವಾನ್ ಉದ್ವಿಗ್ನತೆಯ ಹಿಂದಿನ ಕಾರಣ
ಚೀನಾ ತೈವಾನ್ ಉದ್ವಿಗ್ನತೆಯ ಹಿಂದಿನ ಕಾರಣ

ಚೀನಾ ಮತ್ತು ತೈವಾನ್ ನಡುವಿನ ಇತಿಹಾಸವೇನು?

ಮೂಲಗಳ ಪ್ರಕಾರ, ತೈವಾನ್‌ನಲ್ಲಿ ಮೊದಲು ಆಸ್ಟ್ರೋನೇಷಿಯನ್ ಬುಡಕಟ್ಟು ಜನರು ವಾಸಮಾಡಲು ಶುರು ಮಾಡಿದರು. ಅವರು ಅಲ್ಲಿಗೆ ಈಗಿನ ದಕ್ಷಿಣ ಚೀನಾದಿಂದ ಬಂದರೆಂದು ಹೇಳುತ್ತಾರೆ.

ಕ್ರಿ.ಶ 239 ರಲ್ಲಿ ಚೀನಾದ ಓರ್ವ ಚಕ್ರವರ್ತಿಯು ಈ ಪ್ರದೇಶವನ್ನು ಅನ್ವೇಷಿಸಲು ಪಡೆಯನ್ನು ಕಳುಹಿಸಿದಾಗ, ಈ ದ್ವೀಪದ ಹೆಸರು ಚೈನೀಸ್ ದಾಖಲೆಗಳಲ್ಲಿ ಮೊದಲು ಕಾಣಿಸಿಕೊಂಡಿತು. ಅದನ್ನೇ ಮುಂದಿಟ್ಟುಕೊಂಡು ಈಗ ಚೀನಾ,ತೈವಾನ್‌ ನಮ್ಮದು ಎಂದು ಹಕ್ಕು ಮಂಡಿಸುತ್ತಿದೆ.

ತೈವಾನ್‌ನಲ್ಲಿ ಡಚ್ ವಸಾಹತು (1624-1661) ಮುಗಿದ ನಂತರ, ತೈವಾನ್ ಅನ್ನು 1683 ರಿಂದ 1895 ರವರೆಗೆ ಚೀನಾದ ಕ್ವಿಂಗ್ ರಾಜವಂಶವು ಆಡಳಿತ ನಡೆಸಿತು.

17 ನೇ ಶತಮಾನದಿಂದ, ಚೀನಾದಲ್ಲಿ ಉಂಟಾದ ಪ್ರಕ್ಷುಬ್ಧತೆಯಿಂದ ಅಥವಾ ಅಲ್ಲಿನ ಕಷ್ಟದಿಂದ ದೂರಾಗಲು, ಗಮನಾರ್ಹ ಸಂಖ್ಯೆಯ ವಲಸಿಗರು ಚೀನಾದಿಂದ ಬರಲು ಪ್ರಾರಂಭಿಸಿದರು. ಅವರಲ್ಲಿ ಹೆಚ್ಚಿನವರು ಫುಜಿಯಾನ್ (ಫುಕಿಯೆನ್) ಪ್ರಾಂತ್ಯದಿಂದ ಹೊಕ್ಲೋ ಚೈನೀಸ್ ಅಥವಾ ಹಕ್ಕಾ ಚೈನೀಸ್ ಆಗಿದ್ದರು ಮತ್ತು ಹೆಚ್ಚಾಗಿ ಗುವಾಂಗ್‌ಡಾಂಗ್‌ನಿಂದ ಬಂದವರು ಆಗಿದ್ದರು. ಈಗ ತೈವಾನ್‌ನಲ್ಲಿ ಅವರ ವಂಶಸ್ಥರದ್ದೇ  ಅತಿದೊಡ್ಡ ಜನಸಂಖ್ಯಾ ಪ್ರಾಬಲ್ಯವಿದೆ.
 
1895 ರಲ್ಲಿ, ಜಪಾನ್ ಮೊದಲ ಸಿನೋ-ಜಪಾನೀಸ್ ಯುದ್ಧವನ್ನು ಗೆದ್ದಿತು. ಸೋಲಿನಿಂದಾಗಿ, ಚೀನಾದ ಕ್ವಿಂಗ್ ಸರ್ಕಾರವು ತೈವಾನ್ ಅನ್ನು ಜಪಾನ್ಗೆ ಬಿಟ್ಟುಕೊಡಬೇಕಾಯಿತು. ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಸೋತ ನಂತರ, ತಾನು ಚೀನಾದಿಂದ ವಶಪಡಿಸಿಕೊಂಡ ಭೂಪ್ರದೇಶದ ನಿಯಂತ್ರಣವನ್ನು ಬಿಟ್ಟುಕೊಟ್ಟಿತು. ಜಯ ಕಂಡ ದೇಶಗಳಲ್ಲಿ ಒಂದಾದ ರಿಪಬ್ಲಿಕ್ ಆಫ್ ಚೀನಾ (ROC) ತನ್ನ ಮಿತ್ರರಾಷ್ಟ್ರಗಳಾದ ಅಮೇರಿಕಾ(US) ಮತ್ತು ಬ್ರಿಟೈನ್ (UK) ಗಳ ಒಪ್ಪಿಗೆಯೊಂದಿಗೆ ತೈವಾನ್ ಅನ್ನು ಆಳಲು ಪ್ರಾರಂಭಿಸಿತು.

ಆದರೆ ಮುಂದಿನ ಕೆಲವು ವರ್ಷಗಳಲ್ಲಿ ಚೀನಾದಲ್ಲಿ ಅಂತರ್ಯುದ್ಧವೊಂದು ಪ್ರಾರಂಭವಾಯಿತು. ಆಗಿನ ನಾಯಕ ಚಿಯಾಂಗ್ ಕೈ-ಶೇಕ್ನ ಸೈನ್ಯವನ್ನು ಮಾವೋ ಝೆಡಾಂಗ್ನ ಕಮ್ಯುನಿಸ್ಟ್ ಸೇನೆಯು ಸೋಲಿಸಿತು.

ಚಿಯಾಂಗ್ ಜತೆ ಅವರ ಕುಮಿಂಟಾಂಗ್ (KMT) ಸರ್ಕಾರದ ಸುಮಾರು 1.5 ಮಿಲಿಯನ್ ಜನ ಬೆಂಬಲಿಗರು 1949 ರಲ್ಲಿ ತೈವಾನ್‌ಗೆ ಓಡಿಹೋದರು.

ಮೇನ್‌ಲ್ಯಾಂಡ್ ಚೈನೀಸ್ ಎಂದು ಕರೆಸಿಕೊಂಡ ಈ ಗುಂಪಿನ ಜನಸಂಖ್ಯೆಯ ಕೇವಲ 14% ರಷ್ಟಿದ್ದರೂ,  ಹಲವು ವರ್ಷಗಳ ಕಾಲ ತೈವಾನ್‌ ಮೇಲೆ ಪ್ರಾಬಲ್ಯ ಹೊಂದಿದ್ದರು. ಚಿಯಾಂಗ್ ಅವರು ಮುಂದಿನ 25 ವರ್ಷಗಳ ಕಾಲ ತೈವಾನ್‌ನಲ್ಲಿಯೇ ಸರ್ಕಾರವನ್ನು ಸ್ಥಾಪಿಸಿದರು.

ಚಿಯಾಂಗ್ ಅವರ ಮಗ, ಚಿಯಾಂಗ್ ಚಿಂಗ್-ಕುವೊ, ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಪ್ರಜಾಪ್ರಭುತ್ವೀಕರಣಕ್ಕೆ ಅವಕಾಶ ನೀಡಿದರು. ಅದಕ್ಕೆ ಮೂಲ ಕಾರಣ ಅಲ್ಲಿನ ನಿರಂಕುಶ ಆಡಳಿತದಿಂದ ಅಸಮಾಧಾನಗೊಂಡ ಸ್ಥಳೀಯ ಜನರ ಪ್ರತಿರೋಧ. ಅವರ ಪ್ರತಿರೋಧ ಮತ್ತು ಬೆಳೆಯುತ್ತಿರುವ ಪ್ರಜಾಪ್ರಭುತ್ವ ಚಳವಳಿಯ ಒತ್ತಡಕ್ಕೆ ಒಳಗಾಗಿ ಚಿಂಗ್-ಕುವೋ ಈ ಅವಕಾಶ ನೀಡಲೇ ಬೇಕಾದ ಪರಿಸ್ಥಿತಿ ಎದುರಾಗಿತ್ತು.

ತೈವಾನ್‌ನ "ಪ್ರಜಾಪ್ರಭುತ್ವದ ಪಿತಾಮಹ" ಎಂದು ಕರೆಯಲ್ಪಡುವ ಅಧ್ಯಕ್ಷ ಲೀ ಟೆಂಗ್-ಹುಯಿ ಅವರು ಅಲ್ಲಿನ ಹಲವು ಸಾಂವಿಧಾನಿಕ ಬದಲಾವಣೆಗಳಿಗೆ ಕಾರಣರಾದರು. ಅದರಿಂದಾಗಿ, ಅಂತಿಮವಾಗಿ 2000ರಲ್ಲಿ ದ್ವೀಪದಲ್ಲಿ ಚುನಾವಣೆ ನಡೆದು, KMTಗೆ ಸೇರದ ಮೊದಲ ಅಧ್ಯಕ್ಷರಾಗಿ ಚೆನ್ ಶೂಯಿ-ಬಿಯಾನ್ ಚುನಾಯಿತಗೊಂಡರು.

ಹಾಗಾದರೆ ತೈವಾನ್ ಅನ್ನು ಯಾರು ಪ್ರತ್ಯೇಕ ರಾಷ್ಟ್ರ ಎಂದು ಬೆಂಬಲಿಸುತ್ತಿದ್ದಾರೆ?

ತೈವಾನ್ ಎಂದರೇನು ಎಂಬುದರ ಕುರಿತು ಅನೇಕ ಭಿನ್ನಾಭಿಪ್ರಾಯ ಮತ್ತು ಗೊಂದಲಗಳಿವೆ.
ಅಲ್ಲಿ ಅದರದ್ದೇ ಆದ ಸಂವಿಧಾನವವಿದೆ. ಪ್ರಜಾಸತ್ತಾತ್ಮಕವಾಗಿ-ಚುನಾಯಿತ ನಾಯಕರು ಸಹ ಇದ್ದಾರೆ. ಹಾಗೆಯೇ ಅಲ್ಲಿ ಅದರದೇ ಆದ ಸಶಸ್ತ್ರ ಪಡೆ ಸಹ ಇದೆ.
ತೈವಾನ್‌ನಲ್ಲಿದ್ದ  ಚಿಯಾಂಗ್‌ನ  ಆರ್‌ಒಸಿ ಸರ್ಕಾರವು ತಾನು ಸಂಪೂರ್ಣ ಚೀನಾವನ್ನು ಪ್ರತಿನಿಧಿಸುವುದಾಗಿಯೂ, ತನ್ನ ಮುಖ್ಯ ಭೂಮಿಯನ್ನು ಮರಳಿ ಆಕ್ರಮಿಸಿಕೊಳ್ಳುವುದೆಂದು ಸಹ ಹೇಳಿಕೊಂಡಿತ್ತು. ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಸಹ ಚೀನಾವನ್ನು ಚಿಯಾಂಗ್‌ನ ಸರ್ಕಾರವೇ ಪ್ರತಿನಿಧಿಸುತ್ತಿತ್ತು. ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಸಹ ಈ ಸರ್ಕಾರವನ್ನು ಚೀನಾದ ಏಕೈಕ ಸರ್ಕಾರವೆಂದು ಗುರುತಿಸಿದ್ದವು.

ಆದರೆ 1970 ರ ಹೊತ್ತಿಗೆ ಕೆಲವು ದೇಶಗಳು ತೈವಾನ್ ಸರ್ಕಾರವನ್ನು ಇನ್ನು ಮುಂದೆ, ಚೀನಾದ ಮುಖ್ಯ ಭೂಭಾಗದಲ್ಲಿ ವಾಸಿಸುವ ನೂರಾರು ಮಿಲಿಯನ್ ಜನರ 'ನಿಜವಾದ ಪ್ರತಿನಿಧಿ' ಎಂದು ಪರಿಗಣಿಸಲಾಗುವುದಿಲ್ಲ ಎಂದು ವಾದಿಸಲು ಪ್ರಾರಂಭಿಸಿದವು.

ನಂತರ 1971 ರಲ್ಲಿ, ಯುನೈಟೆಡ್ ನೇಷನ್ಸ್ (UN) ಚೀನಾದ ರಾಜತಾಂತ್ರಿಕ ಮಾನ್ಯತೆಯನ್ನು ಬೀಜಿಂಗ್‌ಗೆ ಬದಲಾಯಿಸಿತು. ಹಾಗೆಯೇ ಚಿಯಾಂಗ್ ಸರ್ಕಾರವನ್ನು ಬಲವಂತವಾಗಿ ಹೊರಹಾಕಲಾಯಿತು. 1978 ರಲ್ಲಿ, ಚೀನಾ ತನ್ನ ಆರ್ಥಿಕತೆಯನ್ನು ಮುಕ್ತ ವ್ಯಾಪಾರಕ್ಕೆ ತೆರೆಯಿತು.  ವ್ಯಾಪಾರದ ಅವಕಾಶಗಳನ್ನು ಮತ್ತು ಸಂಬಂಧಗಳನ್ನು ಅಭಿವೃದ್ಧಿಪಡಿಸುವುದರ ಅಗತ್ಯವನ್ನು ಗುರುತಿಸಿ, US 1979 ರಲ್ಲಿ ಬೀಜಿಂಗ್‌ನೊಂದಿಗೆ ಔಪಚಾರಿಕವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತು.

ಅಂದಿನಿಂದ ಚಿಯಾಂಗ್ ಅವರ ROC ಸರ್ಕಾರವನ್ನು ರಾಜತಾಂತ್ರಿಕವಾಗಿ ಗುರುತಿಸುವ ದೇಶಗಳ ಸಂಖ್ಯೆಯು ಸುಮಾರು 15 ಕ್ಕೆ ಕುಸಿಯಿತು.

ಈಗ, ಸ್ವತಂತ್ರ ದೇಶದ ಎಲ್ಲಾ ಗುಣ ಲಕ್ಷಣ ಹೊಂದಿದ್ದರೂ ಮತ್ತು ಚೀನಾಕ್ಕಿಂತ ಭಿನ್ನವಾದ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದರೂ, ತೈವಾನ್‌ ಅನ್ನು ಕಾನೂನಾತ್ಮಕವಾಗಿ ಗುರುತಿಸುವುದು ಅಸ್ಪಷ್ಟವಾಗಿಯೇ ಉಳಿದಿದೆ.

ತೈವಾನ್ ಮತ್ತು ಚೀನಾ ನಡುವಿನ ಸಂಬಂಧಗಳು ಹೇಗಿವೆ?

1980 ರ ದಶಕದಲ್ಲಿ ತೈವಾನ್ ಚೀನಾಕ್ಕೆ ಭೇಟಿ ನೀಡುವ ಮತ್ತು ಹೂಡಿಕೆಯ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ, ಸಂಬಂಧಗಳು ಸುಧಾರಿಸಲು ಪ್ರಾರಂಭಿಸಿದವು.  1991 ರಲ್ಲಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗೆ ಇದ್ದ ತನ್ನ ಯುದ್ಧ ಅಂತ್ಯವಾಗಿದೆ ಎಂದು ತೈವಾನ್ ಘೋಷಿಸಿತು.
ಚೀನಾ "ಒಂದು ದೇಶ, ಎರಡು ವ್ಯವಸ್ಥೆ" ಎಂಬ ಆಯ್ಕೆಯನ್ನು ಪ್ರಸ್ತಾಪಿಸಿತು. ಪ್ರಸ್ತಾಪದ ಪ್ರಕಾರ, ತೈವಾನ್ ಇದನ್ನು ಒಪ್ಪಿಕೊಂಡರೆ, ಅದು ಬೀಜಿಂಗ್‌ನ ನಿಯಂತ್ರಣದಲ್ಲಿದ್ದರೂ ಸಹ, ತೈವಾನ್ ತನ್ನದೇ ಆದ ಸ್ವಾಯತ್ತತೆಯಲ್ಲಿ ಆಡಳಿತ ಮಾಡಬಹುದಾಗಿತ್ತು.  ಈ ವ್ಯವಸ್ಥೆಯ ಮೂಲಕ ಚೀನಾ ಚಾಣಾಕ್ಷತೆಯಿಂದ, 1997 ರಲ್ಲಿ ಹಾಂಗ್ ಕಾಂಗ್ ಅನ್ನು ತನ್ನದಾಗಿಸಿಕೊಂಡಿತು.

China, Hong Kong and taipei in Kannada
ಚೀನಾ, ಹಾಂಗ್ ಕಾಂಗ್ ಮತ್ತು ತೈವಾನ್
ನಂತರ 2000 ರಲ್ಲಿ, ತೈವಾನ್ ಜನತೆ ಚೆನ್ ಶುಯಿ-ಬಿಯಾನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.  ಚೆನ್ ಮತ್ತು ಅವರ ಪಕ್ಷವಾದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಡಿಪಿಪಿ), ತಮ್ಮ "ಸ್ವಾತಂತ್ರ್ಯ"ವನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದರು. ಇದು ಚೀನಾಗೆ ಎಚ್ಚರಿಕೆ ಗಂಟೆಯಾಯಿತು.

2004 ರಲ್ಲಿ ಚೆನ್ ಮರು-ಚುನಾಯಿತರಾದ ಒಂದು ವರ್ಷದ ನಂತರ, ಚೀನಾ ಪ್ರತ್ಯೇಕತಾ-ವಿರೋಧಿ ಕಾನೂನನ್ನು ಅಂಗೀಕರಿಸಿತು. ಚೀನಾದಿಂದ "ಬೇರ್ಪಡಲು" ಎಲ್ಲಾದರೂ ತೈವಾನ್‌ ಪ್ರಯತ್ನಿಸಿದರೆ, ಅದರ ವಿರುದ್ಧ ಚೀನಾ "ಶಾಂತಿಯುತವಲ್ಲದ ಮಾರ್ಗಗಳನ್ನು" ಬಳಸಲು ಅನುಮತಿಸುವಂತೆ ಈ ಕಾನೂನನ್ನು ಮಾಡಲಾಗಿತ್ತು.

2008 ರಲ್ಲಿ ಅಧಿಕಾರಕ್ಕೆ ಬಂದ KMTಯ ಮಾ ಯಿಂಗ್-ಜಿಯೋ ಅವರು, ಆರ್ಥಿಕ ಒಪ್ಪಂದಗಳ ಮೂಲಕ ಚೀನಾದೊಂದಿಗೆ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿದರು.

ಎಂಟು ವರ್ಷಗಳ ನಂತರ, 2016 ರಲ್ಲಿ, ತೈವಾನ್‌ನ ಪ್ರಸ್ತುತ ಅಧ್ಯಕ್ಷೆ ತ್ಸೈ ಇಂಗ್-ವೆನ್ ಅವರು ಈಗ ಸ್ವಾತಂತ್ರ್ಯ ಹೋರಾಟದ ಪರ ಇರುವ DPP ಪಕ್ಷವನ್ನು ಈಗ ಮುನ್ನಡೆಸುತ್ತಿದ್ದಾರೆ.

2018ರಲ್ಲಿ ಬೀಜಿಂಗ್ ಬಹಿರಂಗವಾಗಿ ಹಲವು ಅಂತರರಾಷ್ಟ್ರೀಯ ಕಂಪನಿಗಳ ಮೇಲೆ ಒತ್ತಡವನ್ನು ಹೆಚ್ಚಿಸಲು ಪ್ರಾರಂಭ ಮಾಡಿತು.  ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ತೈವಾನ್ ಅನ್ನು ಚೀನಾದ ಭಾಗವೆಂದು ಪಟ್ಟಿ ಮಾಡಲು ವಿಫಲವಾದರೆ, ಚೀನಾದೊಂದಿಗೆ ವ್ಯಾಪಾರ ಮಾಡುವುದನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದರು.

2020ರಲ್ಲಿ ಅಧ್ಯಕ್ಷೆ  ತ್ಸೈ, ದಾಖಲೆಯ 8.2 ಮಿಲಿಯನ್ ಮತಗಳೊಂದಿಗೆ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡರು. ಈ ಬೆಳವಣಿಗೆ ಬೀಜಿಂಗ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಆ ಹೊತ್ತಿಗಾಗಲೇ ಹಾಂಗ್ ಕಾಂಗ್ ಅಲ್ಲಿ ತಿಂಗಳುಗಳ ಕಾಲ ಅಶಾಂತಿ ತುಂಬಿಕೊಂಡಿತ್ತು. ಚೀನಾದ ಬೆಳೆಯುತ್ತಿರುವ ಪ್ರಭಾವದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದರು. ತೈವಾನ್‌ನ ಜನತೆ ಇದನ್ನು ಅತೀ ನಿಕಟವಾಗಿ ಗಮನಿಸುತ್ತಿದ್ದರು.
ಆ ವರ್ಷದ ನಂತರ, ಚೀನಾವು ಹಾಂಗ್ ಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತಂದಿತು.ಅದನ್ನು ಬೀಜಿಂಗ್‌ನ ದಬ್ಬಾಳಿಕೆಯ ಲಕ್ಷಣ ಎಂದು ಕರೆಯಲಾಯಿತು.

ತೈವಾನ್‌ನ ಸ್ವಾತಂತ್ರ್ಯ ಯಾಕೆ ಸಮಸ್ಯೆಯಾಗಿದೆ?

ರಾಜಕೀಯ ಪ್ರಗತಿಯು ನಿಧಾನವಾಗಿದ್ದರೂ, ಬೀಜಿಂಗ್ ಮತ್ತು ತೈಪೆ (ತೈವಾನ್) ನಡುವೆ ಮತ್ತು ಎರಡರ ಆರ್ಥಿಕತೆಗಳ ನಡುವಿನ ಸಂಪರ್ಕಗಳು ಬೆಳೆದಿವೆ. 1991ರಿಂದ ಮೇ 2021 ರ ನಡುವೆ, ಚೀನಾದಲ್ಲಿ ತೈವಾನೀಗಳ ಹೂಡಿಕೆಯು ಒಟ್ಟು $193.5bn (£157.9bn) ಆಗಿತ್ತು ಎಂದು ತೈವಾನೀಸ್ ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ.
ಕೆಲವು ತೈವಾನೀಸ್ ಜನರು ತಮ್ಮ ಆರ್ಥಿಕತೆಯು ಈಗ ಚೀನಾದ ಮೇಲೆ ಅವಲಂಬಿತವಾಗಿದೆ ಎಂದು ಚಿಂತಿತರಾಗಿದ್ದಾರೆ.  ಇನ್ನು ಕೆಲವರು, ಚೀನಾದೊಂದಿಗೆ ಆರ್ಥಿಕ ಸಂಬಂಧ ಚೆನ್ನಾಗಿ ಇದ್ದಷ್ಟು, ಚೀನಾದ ಬಲಪ್ರಯೋಗದಿಂದ ದೂರ ಉಳಿಯಬಹುದು ಎಂದು ಭಾವಿಸುತ್ತಿದ್ದಾರೆ.

2014ರಲ್ಲಿನ ಒಂದು ವಿವಾದಾತ್ಮಕ ವ್ಯಾಪಾರ ಒಪ್ಪಂದವು ತೈವಾನ್ ಅಲ್ಲಿ "ಸೂರ್ಯಕಾಂತಿ ಚಳುವಳಿ"ಯನ್ನು ಹುಟ್ಟುಹಾಕಿತು. ಅಲ್ಲಿನ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ತೈವಾನ್‌ನ ಸಂಸತ್ತನ್ನು ಆಕ್ರಮಿಸಿಕೊಂಡರು. ತೈವಾನ್‌ನ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ವಿರೋಧಿಸಿ ಈ ಚಳುವಳಿ ಪ್ರಾರಂಭವಾಗಿತ್ತು.
ಅಧಿಕೃತವಾಗಿ, ಆಡಳಿತಾರೂಢ DPP ಸರ್ಕಾರ ಇನ್ನೂ ತೈವಾನ್‌ನ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದೆ. ಆದರೆ KMT ಪಕ್ಷ, ಚೀನಾದೊಂದಿಗೆ ಅಂತಿಮವಾಗಿ ಏಕೀಕರಣವನ್ನು ಬೆಂಬಲಿಸುತ್ತದೆ.
ಆದರೆ ಹೆಚ್ಚಿನ ತೈವಾನೀಸ್ ಜನರು ಈ ನಿರ್ಧಾರದ ಬೆಂಬಲದ ವಿಷಯದಲ್ಲಿ  ತಟಸ್ಥರಾಗಿದ್ದಾರೆ.  ಜೂನ್ 2022ರ ಸಮೀಕ್ಷೆಯೊಂದರ ಪ್ರಕಾರ, ತೈವಾನೀಸ್‌ನ ಶೇ.5.2ರಷ್ಟು ಜನ ಮಾತ್ರ ಸಾಧ್ಯವಾದಷ್ಟು ಬೇಗ ಸ್ವಾತಂತ್ರ್ಯ ಸಿಗಲಿ ಎಂದು ಬೆಂಬಲಿಸಿದರೆ, ಶೇ.1.3ರಷ್ಟು ಜನರ ಚೀನಾದ ಮುಖ್ಯ ಭೂಭಾಗದೊಂದಿಗೆ ಏಕೀಕರಣದ ಪರವಾಗಿ ಬೆಂಬಲಿಸಿದ್ದಾರೆ.

ಉಳಿದವರು ಯಥಾಸ್ಥಿತಿ ಕಾಯ್ದುಕೊಳ್ಳುವ ಕಾರ್ಯತಂತ್ರಗಳ ಪರವಾಗಿದ್ದಾರೆ. ಯಾವುದೇ ರೀತಿಯಾಗಿ ಸ್ವಾತಂತ್ರ್ಯ ಅಥವಾ ಏಕೀಕರಣದ ಕಡೆಗೆ ಬಹುಮತವಾಗಿ ಬೆಂಬಲ ನೀಡಿಲ್ಲ. ಇದ್ದ ಹಾಗೆ ನಡೆದುಕೊಂಡು, ಅಳೆದು ತೂಗಿ ಕೊಂಡು ಹೋಗುವ ಪರ ಅವರ ನಿಲುವಿದೆ.

ಚೀನಾ-ತೈವಾನ್ ವಿಭಜನೆಗೂ ಅಮೇರಿಕಾಗೂ ಏನು ಸಂಬಂಧ?

ವಾಷಿಂಗ್ಟನ್‌ನ ದೀರ್ಘಕಾಲದ ನೀತಿಯು "ಕಾರ್ಯತಂತ್ರದ ದ್ವಂದ್ವಾರ್ಥತೆ" ಯಿಂದ ಕೂಡಿದೆ. ಅಕಸ್ಮಾತ್ ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಿದರೆ ತಾನು ಮಿಲಿಟರಿಯೊಂದಿಗೆ ಮಧ್ಯಪ್ರವೇಶಿಸುತ್ತೇನೆ ಎಂದು ಮಾತ್ರ ಹೇಳುತ್ತಿದೆ.
ಅಧಿಕೃತವಾಗಿ, ಇದು "ಒಂದೇ-ಚೀನಾ" ನೀತಿಗೆ ಬದ್ಧವಾಗಿದೆ. ಅಂದರೆ, ಇಲ್ಲಿ ಕೇವಲ ಒಂದೇ ಚೀನಾ ಸರ್ಕಾರ ಇರಬೇಕು, ಅದೂ ಬೀಜಿಂಗ್‌ನಲ್ಲಿ ಮಾತ್ರ. ಚೀನಾದ ತೈಪೆಗಿಂತ ಚೀನಾದ ಬೀಜಿಂಗ್‌ನೊಂದಿಗೆ ಔಪಚಾರಿಕ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದು ಅಮೇರಿಕಾ ಹೇಳಿಕೊಂಡಿದೆ.
ಹಾಗೆಯೆ, ಅಮೇರಿಕಾ ತೈವಾನ್‌ಗೆ ರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ವಾಗ್ದಾನ ಮಾಡಿದೆ. ಮತ್ತು ಚೀನಾದ ಯಾವುದೇ ದಾಳಿಯು "ಗಂಭೀರ ಕಳವಳವನ್ನು" ಉಂಟುಮಾಡುತ್ತದೆ ಎಂದು ಒತ್ತಿಹೇಳಿದೆ.

ಮೇ 2022 ರಲ್ಲಿ, "ಯುಎಸ್ ತೈವಾನ್ ಅನ್ನು ಮಿಲಿಟರಿ ಸಹಾಯದ ಮೂಲಕ ರಕ್ಷಿಸುತ್ತದೆಯೇ?" ಎಂದು ಅಧ್ಯಕ್ಷ ಜೋ ಬಿಡೆನ್ರನ್ನು ಕೇಳಿದಾಗ,  ಅವರು ಸಕಾರಾತ್ಮಕವಾಗಿ ಉತ್ತರ ನೀಡಿದ್ದರು.  ಇದರ ಬೆನ್ನಲ್ಲೇ, ಶ್ವೇತಭವನವು ತೈವಾನ್‌ನ ವಿಷಯದಲ್ಲಿ ತಮ್ಮ ನಿಲುವು ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿ, "ಒಂದೇ-ಚೀನಾ" ನೀತಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.  ತೈವಾನ್‌ಗೆ ಮಿಲಿಟರಿ ಬೆಂಬಲದ ಕುರಿತು ಬಿಡೆನ್ ಅವರ ಹಿಂದಿನ ಹೇಳಿಕೆಗಳಿಗೆ ಈ ಶ್ವೇತಭವನದ ಹೇಳಿಕೆ ವಿರುದ್ಧವಾಗಿದೆ.

ತೈವಾನ್ ಸಮಸ್ಯೆಯು ಯುಎಸ್ ಮತ್ತು ಚೀನಾ ನಡುವಿನ ಸಂಬಂಧವನ್ನು ಹದಗೆಡಿಸಿದೆ.  ಬೀಜಿಂಗ್ ತೈಪೆಗೆ ವಾಷಿಂಗ್ಟನ್‌ನಿಂದ ಸಿಗುವ ಯಾವುದೇ ಬೆಂಬಲವನ್ನು ಖಂಡಿಸುತ್ತಾ ಬಂದಿದೆ. ಬಿಡೆನ್ ಅವರ ಚುನಾವಣೆಯ ನಂತರ, ತೈವಾನ್‌ನ ವಾಯು ರಕ್ಷಣಾ ವಲಯದಲ್ಲಿ ಚೀನಾದ ಮಿಲಿಟರಿ ಜೆಟ್‌ಗಳು ಅನೇಕ ಸಾರಿ ಆಕ್ರಮಣಕಾರಿ ರೀತಿಯಲ್ಲಿ ಹಾರಾಡುವ ಮೂಲಕ ಪ್ರತಿಕ್ರಿಯಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು